ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರಿಫೆರಲ್‌ ವರ್ತುಲ ರಸ್ತೆಗೆ ಮರುಜೀವ

ವಿವಿಧ ಹಂತಗಳಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲು ಬಿಡಿಎ ನಿರ್ಧಾರ
Last Updated 12 ಮಾರ್ಚ್ 2018, 19:46 IST
ಅಕ್ಷರ ಗಾತ್ರ

ಬೆಂಗಳೂರು: ನನೆಗುದಿಗೆ ಬಿದ್ದಿದ್ದ ಪೆರಿಫೆರಲ್‌ ವರ್ತುಲ ರಸ್ತೆ ಯೋಜನೆಗೆ (ಪಿಆರ್‌ಆರ್‌) ಮರುಜೀವ ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂದಾಗಿದೆ. ಭೂಸ್ವಾಧೀನದ ತೊಡಕಿನಿಂದಾಗಿ ಹಿನ್ನಡೆ ಅನುಭವಿಸಿದ್ದ ಈ ಯೋಜನೆಯನ್ನು ಹಂತಹಂತವಾಗಿ ಅನುಷ್ಠಾನಗೊಳಿಸಲು ಪ್ರಾಧಿಕಾರ ಚಿಂತನೆ ನಡೆಸಿದೆ.

ತುಮಕೂರು ರಸ್ತೆಯಲ್ಲಿರುವ ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸ್‌ (ನೈಸ್‌) ರಸ್ತೆಯ ಟೋಲ್‌ ಜಂಕ್ಷನ್‌ನಿಂದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದವರೆಗಿನ 18 ಕಿ.ಮೀ ಉದ್ದದ ರಸ್ತೆಯನ್ನು ಮೊದಲ ಹಂತದಲ್ಲಿ ಕೈಗೆತ್ತಿಕೊಳ್ಳಲು ಬಿಡಿಎ ಚಿಂತನೆ ನಡೆಸಿದೆ.

ಈ ಯೋಜನೆಯ ಕಾಮಗಾರಿ ವೆಚ್ಚವನ್ನು ಭರಿಸಲು ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ಆಸಕ್ತಿ ತೋರಿದೆ. ಆದರೆ, ಭೂಸ್ವಾಧೀನ ವೆಚ್ಚವನ್ನು ಭರಿಸಲು ಯಾರೂ ಮುಂದಾಗುತ್ತಿಲ್ಲ. ಕೇಂದ್ರ ಭೂಸಾರಿಗೆ ಇಲಾಖೆಯೂ ಇದಕ್ಕೆ ಹೂಡಿಕೆ ಮಾಡಲು ನಿರಾಕರಿಸಿದೆ.

‘ಭೂಸ್ವಾಧೀನಕ್ಕೆ ಬೇಕಾದ ಮೊತ್ತವನ್ನು ಹೊಂದಿಸಲು ಸಾಧ್ಯವಾಗುತ್ತಿಲ್ಲ. ಈ ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸಿದರೆ, ಇದಕ್ಕೆ ಸಾಲ ಪಡೆಯುವುದು ಸುಲಭವಾಗಲಿದೆ. ಹಾಗಾಗಿ ಮೊದಲು 18 ಕಿ.ಮೀ ರಸ್ತೆಯನ್ನು ಮಾತ್ರ ಕೈಗೆತ್ತಿಕೊಳ್ಳುವ ಸಾಧ್ಯತೆ ಬಗ್ಗೆ ಚರ್ಚಿಸುತ್ತಿದ್ದೇವೆ. ಇದಿಷ್ಟನ್ನೇ ಅನುಷ್ಠಾನಗೊಳಿಸುವುದಾದರೆ ₹3,310 ಕೋಟಿ ಸಾಕಾಗುತ್ತದೆ. ಇದರಲ್ಲಿ ಭೂಸ್ವಾಧೀನಕ್ಕೆ ತಗಲುವ ₹2,000 ಕೋಟಿಯೂ ಸೇರಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

‘ತಡೆರಹಿತ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಈ ರಸ್ತೆಯಲ್ಲಿ ಸಾಗುವ ವಾಹನಗಳಿಗೆ ಶುಲ್ಕ ವಿಧಿಸಲಿದ್ದೇವೆ. ಇದು ನೈಸ್‌ ರಸ್ತೆಯಷ್ಟು ದುಬಾರಿಯಾಗಿರುವು
ದಿಲ್ಲ. ಭಾರತೀಯ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಹೆದ್ದಾರಿಗಳ ಟೋಲ್‌ನಷ್ಟೇ ಮೊತ್ತವನ್ನು ನಿಗದಿಪಡಿಸುವ ಚಿಂತನೆ ಇದೆ’ ಎಂದು ಅವರು ಹೇಳಿದರು.

ಹೊಸ ಭೂಸ್ವಾಧೀನ ಕಾಯ್ದೆ ಜಾರಿಯಾದ ಬಳಿಕ ರೈತರಿಗೆ ಅವರ ಜಮೀನಿನ ಮೌಲ್ಯದ ನಾಲ್ಕು ಪಟ್ಟು ಹೆಚ್ಚು ಮೊತ್ತವನ್ನು ಪರಿಹಾರವಾಗಿ ನೀಡಬೇಕಾಗಿತ್ತು.

ಇದು ಹೊರೆಯಾಗುವ ಕಾರಣ ಅವರಿಗೆ ನಗದು ರೂಪದಲ್ಲಿ ಪರಿಹಾರ ನೀಡುವ ಬದಲು ಅಭಿವೃದ್ಧಿಪಡಿಸಿದ ಜಾಗವನ್ನು ಬಿಟ್ಟುಕೊಡಲು ಬಿಡಿಎ ಪ್ರಸ್ತಾವ ಸಿದ್ಧ ಪಡಿಸಿತ್ತು. ಈ ಸಲುವಾಗಿ ಆರಂಭಿಕ ಯೋಜನೆಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿತ್ತು.

100 ಮೀಟರ್‌ ಅಗಲದ ರಸ್ತೆ ನಿರ್ಮಿಸುವ ಬದಲು 75 ಮೀಟರ್‌ ಅಗಲದಲ್ಲಿ ರಸ್ತೆ ನಿರ್ಮಿಸಲು ನಿರ್ಧರಿಸಿತ್ತು. ಇನ್ನುಳಿದ 25 ಮೀಟರ್‌ ಅಗಲದ ಜಾಗವನ್ನು ಅಭಿವೃದ್ಧಿ
ಪಡಿಸಿ, ಭೂಮಿ ನೀಡಿದ ರೈತರಿಗೆ ಅದನ್ನು ಹಂಚಿಕೆ ಮಾಡುವ ಪ್ರಸ್ತಾವಕ್ಕೆ ಸಚಿವ ಸಂಪುಟ 2016ರ ಜೂನ್‌ನಲ್ಲಿ ತಾತ್ವಿಕ ಒಪ್ಪಿಗೆ ನೀಡಿತ್ತು. ಆದರೆ, ಇದಕ್ಕೆ ರೈತರಿಂದ ವಿರೋಧ ವ್ಯಕ್ತವಾಗಿದ್ದರಿಂದ ಯೋಜನೆ ಮತ್ತೆ ನನೆಗುದಿಗೆ ಬಿದ್ದಿತ್ತು.

100 ಮೀಟರ್‌ ಅಗಲದ ಪಿಆರ್‌ ಆರ್‌ ನಿರ್ಮಾಣಕ್ಕೆ 2006ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಆರಂಭದಲ್ಲಿ ಇದರ ಅಂದಾಜು ವೆಚ್ಚ ₹500 ಕೋಟಿ ಇತ್ತು. 2013ರಲ್ಲಿ ಇದು₹5,000 ಕೋಟಿಗೆ ಹೆಚ್ಚಿತ್ತು. ಪರಿಷ್ಕೃತ ಅಂದಾಜಿನ ಪ್ರಕಾರ ಈ ಯೋಜನೆಗೆ ₹11,950 ಕೋಟಿ ಬೇಕಾಗುತ್ತದೆ.

‘ರಸ್ತೆ ನಿರ್ಮಾಣಕ್ಕೆ ತಗಲುವ ₹3,850 ಕೋಟಿ ಮೊತ್ತವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಲು ಜೈಕಾ ಸಿದ್ಧವಿದೆ. ಆದರೆ, ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದ ಕಾರಣ ನಾವು ಕಂತುಗಳಲ್ಲಿ ಹಣ ಬಿಡುಗಡೆ ಮಾಡುವಂತೆ ಕೋರಲಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪಿಆರ್‌ಆರ್‌ ಸಂಧಿಸುವ ಪ್ರಮುಖ ರಸ್ತೆಗಳು

ತುಮಕೂರು ರಸ್ತೆ, ಬಳ್ಳಾರಿ ರಸ್ತೆ,  ಹಳೆ ಮದ್ರಾಸ್‌ ರಸ್ತೆ,  ಹೊಸೂರು ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಹೆಣ್ಣೂರು ರಸ್ತೆ, ಹೆಸರಘಟ್ಟ ರಸ್ತೆ, ಹೊಸಕೋಟೆ– ಆನೇಕಲ್‌ ರಸ್ತೆ, ವೈಟ್‌ಫೀಲ್ಡ್‌ ರಸ್ತೆ, ಸರ್ಜಾಪುರ ರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT