ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗರ್‌ ಹುಕುಂ ಸಾಗುವಳಿಯಲ್ಲಿ ಅಕ್ರಮ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್‌ ಆರೋಪ
Last Updated 17 ಮಾರ್ಚ್ 2018, 7:01 IST
ಅಕ್ಷರ ಗಾತ್ರ

ಕೋಲಾರ: ‘ಕ್ಷೇತ್ರದ ಶಾಸಕ ವರ್ತೂರು ಪ್ರಕಾಶ್‌ ಹಾಗೂ ಅವರ ಪರಮಾಪ್ತ ಬೆಗ್ಲಿ ಸೂರ್ಯಪ್ರಕಾಶ್‌ ಜಿಲ್ಲೆಯ ಇತಿಹಾಸದಲ್ಲೇ ಕಂಡರಿಯದ ಭಾರಿ ಅಕ್ರಮ ನಡೆಸಿದ್ದು, ಜಿಲ್ಲಾಡಳಿತವು ಈ ಬಗ್ಗೆ ಉನ್ನತ ತನಿಖೆಗೆ ಆದೇಶಿಸಬೇಕು’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಅನಿಲ್‌ಕುಮಾರ್ ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಶಾಸಕರು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಮೀನುಗಳನ್ನು ಬಗರ್‌ ಹುಕುಂ ಸಮಿತಿ ಮೂಲಕ ಅನರ್ಹರಿಗೆ ಮಂಜೂರು ಮಾಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರಿಗೆ ಕೋಟ್ಯಂತರ ರೂಪಾಯಿ ಸಂದಾಯವಾಗಿದೆ’ ಎಂದು ಆರೋಪಿಸಿದರು.

‘ಶಾಸಕರು ತಾಲ್ಲೂಕು ಕಚೇರಿ, ಕಂದಾಯ ಹಾಗೂ ಭೂದಾಖಲೆಗಳ ಇಲಾಖೆ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಎಸಗಿದ್ದಾರೆ. ಇದರಲ್ಲಿ ಹಿಂದಿನ ತಹಶೀಲ್ದಾರ್‌ ವಿಜಯಣ್ಣ ಅವರ ಪಾತ್ರವಿದೆ. ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳಕ್ಕೆ ಜಮೀನು ಮೀಸಲಿಡಬೇಕೆಂಬ ನಿಯಮವಿದೆ. ವಿಜಯಣ್ಣ ಆ ನಿಯಮ ಉಲ್ಲಂಘಿಸಿದ್ದಾರೆ’ ಎಂದು ದೂರಿದರು.

‘ಬಗರ್‌ ಹುಕುಂ ಸಾಗುವಳಿ ಚೀಟಿಗೆ ಅರ್ಜಿ ಸಲ್ಲಿಸಿದ್ದವರ ಬದಲಿಗೆ ಅನರ್ಹರಿಗೆ ಜಮೀನು ಮಂಜೂರು ಮಾಡಲಾಗಿದೆ. 4.38 ಎಕರೆಗೂ ಹೆಚ್ಚು ಜಮೀನು ಹೊಂದಿರುವವರಿಗೆ ಹೊಸದಾಗಿ ಸರ್ಕಾರಿ ಭೂಮಿ ಕೊಡಬಾರದೆಂಬ ನಿಯಮವನ್ನು ಗಾಳಿಗೆ ತೂರಲಾಗಿದೆ. ಕಡತ ಲಭ್ಯವಿಲ್ಲವೆಂಬ ಕಾರಣ ನೀಡಿ ನಕಲಿ ದಾಖಲೆಪತ್ರ ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದೆ’ ಎಂದು ಹೇಳಿದರು.

‘ನಿಯಮದ ಪ್ರಕಾರ ಬಗರ್‌ ಹುಕುಂ ಸಮಿತಿಗೆ ಶಾಸಕರು ಅಧ್ಯಕ್ಷರಾಗಿರಬೇಕು. ಆದರೆ, ವರ್ತೂರು ಪ್ರಕಾಶ್‌ ಸಮಿತಿಗೆ ತನ್ನ ಬೆಂಬಲಿಗ ಬೆಗ್ಲಿ ಪ್ರಕಾಶ್‌ರನ್ನು ನಿಯೋಜಿಸಿ ಅಕ್ರಮ ಎಸಗಿದ್ದಾರೆ. ವೇಮಗಲ್, ನರಸಾಪುರ, ವಕ್ಕಲೇರಿ ಹೋಬಳಿ ವ್ಯಾಪ್ತಿಯಲ್ಲಿ ಅಕ್ರಮ ನಡೆದಿದೆ. ಇದಕ್ಕೆ ಸಂಬಂಧಪಟ್ಟ ದಾಖಲೆಪತ್ರಗಳನ್ನು ಬಿಡುಗಡೆ ಮಾಡುತ್ತೇವೆ’ ಎಂದರು.

ಬಹಿರಂಗಪಡಿಸಲಿ: ‘ಬೆಂಗಳೂರಿನ ವರ್ತೂರಿನಲ್ಲಿದ್ದ ತಂದೆಗೆ ಸೇರಿದ 5 ನಿವೇಶನ ಮಾರಿ ಕೋಲಾರದಲ್ಲಿ ಜಮೀನು ಖರೀದಿಸಿದ್ದೇನೆ ಎಂದು ಶಾಸಕರು ಹೇಳುತ್ತಿದ್ದಾರೆ. ಅದು ನಿಜವಾಗಿದ್ದರೆ ದಾಖಲೆಪತ್ರ ಬಹಿರಂಗಪಡಿಸಲಿ. ಆಗ ಬಹಿರಂಗವಾಗಿ ಅವರ ಕ್ಷಮೆ ಯಾಚಿಸುತ್ತೇನೆ’ ಎಂದು ಸವಾಲು ಹಾಕಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ ಶಂಕರ್, ಪಕ್ಷದ ಮುಖಂಡರಾದ ಸುರೇಶ್, ಮುನಿವೆಂಕಟಪ್ಪ, ಅತಾವುಲ್ಲಾ,  ಮಂಜುನಾಥ್, ವೈ.ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT