ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಎಚ್ಚರಿಕೆ

ಮಹದಾಯಿ ಧರಣಿ 975ನೇ ದಿನಕ್ಕೆ: ಫಸಲ್‌ ಭೀಮಾ ಮೊತ್ತ ಬಿಡುಗಡೆಗೆ ಆಗ್ರಹ
Last Updated 17 ಮಾರ್ಚ್ 2018, 9:53 IST
ಅಕ್ಷರ ಗಾತ್ರ

ನರಗುಂದ:‘ರಾಜ್ಯದ ಹಲವು ಜಿಲ್ಲೆಗಳಲ್ಲಿ ಫಸಲ್‌ ಬಿಮಾ ಯೋಜನೆಯ ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ. ಆದರೆ, ಗದಗ ಜಿಲ್ಲೆಯ ರೈತರಿಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ. ಒಂದು ವಾರದೊಳಗೆ ಹಣ ಬಿಡುಗಡೆಯಾಗದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು’ ಎಂದು ಮಹದಾಯಿ ಹೋರಾಟ ಸಮಿತಿ ಕೋಶಾಧ್ಯಕ್ಷ ಎಸ್‌.ಬಿ.ಜೋಗಣ್ಣವರ ಎಚ್ಚರಿಸಿದರು.

ಅವರು ಪಟ್ಟಣದಲ್ಲಿ ನಡೆಯುತ್ತಿರು ವ ಮಹದಾಯಿ ಧರಣಿಯ 975ನೇ ದಿನವಾದ ಶುಕ್ರವಾರ ಮಾತನಾಡಿದರು.

‘ಸರ್ಕಾರ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ನೀತಿ ಅನುಸರಿಸುತ್ತಿದೆ. ಈಗಾಗಲೇ ವಿಮಾ ಮೊತ್ತ ಬಿಡುಗಡೆ ಮಾಡುವಂತೆ ಹಲವು ಬಾರಿ ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಮಾಡಿದ ತಪ್ಪಿಗೆ ರೈತರು ಶಿಕ್ಷೆ ಅನುಭವಿಸುವಂತಾಗಿದೆ. ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇನ್ನೂ ವಿಳಂಬ ಮಾಡಿದರೆ, ಸರ್ಕಾರ ರೈತರ ಆಕ್ರೋಶ ಎದುರಿಸಬೇಕಾಗುತ್ತದೆ’ ಎಂದರು.

‘ಹಿಂಗಾರು ಬೆಳೆಗಳಾದ ಜೋಳ ಹಾಗೂ ತೊಗರಿ ಖರೀದಿಗೆ ಪಟ್ಟಣದಲ್ಲಿ ಮತ್ತು ತಾಲ್ಲೂಕಿನ ಪ್ರಮುಖ ಸ್ಥಳಗಳಲ್ಲಿ ಬೆಂಬಲ ಬೆಲೆ ಯೋಜನೆಯಡಿ, ಖರೀದಿ ಕೇಂದ್ರಗಳನ್ನು ಆರಂಭಿಸಬೇಕು’ ಎಂದು ಜೋಗಣ್ಣವರ ಒತ್ತಾಯಿಸಿದರು.
ಯಾದಗಿರಿಯ ಯುವ ರೈತ ಮುಖಂಡ ಬಸವರಾಜ ಗೌಡರ ಮಾತನಾಡಿದರು.‘ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಲೇ ಮಹದಾಯಿ ವಿಳಂಬವಾಗಿದೆ. ಜನಪ್ರತಿನಿಧಿಗಳು ಇದಕ್ಕೆ ಪ್ರಯತ್ನಿಸುತ್ತಿಲ್ಲ. ಬರುವ ಚುನಾವಣೆಯಲ್ಲಿ ಅವರ ಬಂಡವಾಳ ಬಯಲಾಗಬೇಕು. ರೈತರು ತಕ್ಕ ಪಾಠ ಕಲಿಸೇಕು. ಈಗಲೂ ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಇತ್ಯರ್ಥಪಡಿಸಲು ಅವಕಾಶ ಇದೆ. ನಮ್ಮ ಶಾಸಕರು, ಸಂಸದರು ಪ್ರಯತ್ನಿಸಬೇಕು’ ಎಂದರು.

ಧರಣಿಯಲ್ಲಿ ವೀರಣ್ಣ ಸೊಪ್ಪಿನ, ಚಂದ್ರಗೌಡ ಪಾಟೀಲ, ವೆಂಕಪ್ಪ ಹುಜರತ್ತಿ, ಮೃತ್ಯುಂಜಯ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT