ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 27 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಜಯೇಶ್.ಎನ್. ಬೆಂಗಳೂರು
ನನ್ನ ವಯಸ್ಸು 20.. ಸೇಂಟ್ ಜೋಸೆಫ್ ಕಾಲೇಜ್‌ ಆಫ್ ಕಾಮರ್ಸ್‌ನಲ್ಲಿ ಎರಡನೇ ವರ್ಷದ ಬಿಬಿಎ ಓದುತ್ತಿದ್ದೇನೆ. ನಾನು ಕ್ರಿಕೆಟ್ ಆಟಗಾರ. ಇದಕ್ಕೆ ನನ್ನ ಪ್ರಥಮ ಆದ್ಯತೆ. ಕಳೆದ ವರ್ಷ Karnataka U-19 Captain ಆಗಿ ಆಟ ಆಡಿದ್ದೆ. ನಾನು   ನಿಮ್ಮ ಪ್ರಶ್ನೋತ್ತರ ತಪ್ಪದೇ ಓದುತ್ತೇನೆ. ನನ್ನ ತಂದೆ ನನ್ನ ಮುಂದಿನ ಭವಿಷ್ಯಕ್ಕಾಗಿ, ನಗದು ₹ 2 ಲಕ್ಷ ಹಾಗೂ ತಿಂಗಳಿಗೆ ₹ 10,000 ಕೊಡಲು ಮುಂದೆ ಬಂದಿದ್ದಾರೆ. ಭದ್ರತೆ ಹಾಗೂ ಉತ್ತಮ ವರಮಾನದ ದೃಷ್ಟಿಯಿಂದ ನನಗೆ ಉತ್ತಮ ಆರ್ಥಿಕ ಪ್ಲ್ಯಾನ್ ನಿಮ್ಮಿಂದ ಬಯಸುತ್ತೇನೆ. ಸೂಕ್ತ ಮಾರ್ಗದರ್ಶನ ನೀಡಿರಿ.

ಉತ್ತರ: ನೀವು ಕ್ರಿಕೆಟ್ ಪಟು ಹಾಗೂ ಪ್ರಜಾವಾಣಿ ಪ್ರೇಮಿ ಎಂದು ತಿಳಿದು ಸಂತೋಷವಾಯಿತು. ನಿಮ್ಮ ಕ್ರಿಕೆಟ್ ಜೊತೆ ಬಿಬಿಎಗೆ ಕೂಡಾ ಆದ್ಯತೆ ಕೊಡಿ. ಇನ್ನು ನಿಮ್ಮ ಹೂಡಿಕೆ ವಿಚಾರ. ನಿಮ್ಮ ತಂದೆಯವರು ಆರಿಸಿಕೊಂಡ ಕರ್ನಾಟಕ ಬ್ಯಾಂಕ್, ರಾಜ್ಯದ–ರಾಷ್ಟ್ರದ ಹೆಮ್ಮೆಯ ಬ್ಯಾಂಕ್ ಆಗಿದೆ. ದೇಶದಾದ್ಯಂತ ಪ್ರಸರಿಸಿದ ಈ ಬ್ಯಾಂಕಿನ ಒಟ್ಟು ವಹಿವಾಟು ₹ 1 ಲಕ್ಷ ಕೋಟಿ ದಾಟಿದೆ. ಎಲ್ಲಕ್ಕೂ ಮುಖ್ಯವಾಗಿ ಇಲ್ಲಿ ನಗು ಮುಖದ ಸೇವೆ ಗ್ರಾಹಕರಿಗೆ ದೊರೆಯುತ್ತದೆ. ಭದ್ರತೆ ಖಚಿತ ವರಮಾನದ ದೃಷ್ಟಿಯಿಂದ ಎರಡು ಮಾತಿಲ್ಲ.

ನಿಮ್ಮ ತಂದೆಯವರು ನಿಮಗೆ ಕೊಡುವ ₹ 2 ಲಕ್ಷ, ಈ ಬ್ಯಾಂಕಿನ ‘ಅಭ್ಯುದಯ ಕ್ಯಾಷ್ ಸರ್ಟಿಫಿಕೇಟಿನಲ್ಲಿ’ 10 ವರ್ಷಗಳ ಅವಧಿಗೆ ತೊಡಗಿಸಿ. ಬಡ್ಡಿ ಮೇಲೆ ಬಡ್ಡಿ ಸೇರಿ ಚಕ್ರಬಡ್ಡಿಯಲ್ಲಿ ನಿಮ್ಮ ಹಣ ಬೆಳೆಯುತ್ತದೆ. ಇದೊಂದು ‘Money Plant’ ಇದ್ದ ಹಾಗೆ. ಇದೇ ರೀತಿ ನಿಮ್ಮ ತಂದೆಯವರು ಪ್ರತೀ ತಿಂಗಳೂ ನೀಡುವ ₹ 10,000 ಇದೇ ಬ್ಯಾಂಕಿನ ಆರ್.ಡಿ. ಠೇವಣಿಯಲ್ಲಿ 10 ವರ್ಷಗಳ ಅವಧಿಗೆ ಇರಿಸಿ.

ಕರ್ನಾಟಕ ಸಾಧಕರ ತೌರೂರು ಕೂಡಾ. ನೀವು ಅತಿ ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡುತ್ತಿದ್ದು ನಿಮಗೆ ಶುಭವಾಗಲಿ.
**

ಬಿ.ವಿ. ಗಡ್‌, ಧಾರವಾಡ
ನಾನು ಸಣ್ಣ ಪ್ರಮಾಣದ ಉದ್ಯೋಗ ಮಾಡುತ್ತಿದ್ದು ವಾರ್ಷಿಕ ₹ 75,000 ಗಳಿಸುತ್ತೇನೆ. ನಾನು ಷೇರುಪೇಟೆಯಲ್ಲಿ ಹಣ ಹೂಡಿದ್ದು ಅದರಲ್ಲಿ Short-Term ಲಾಭವೆಂದು ₹ 15,000 ಗಳಿಸಿದ್ದೇನೆ. ಇದರ ತೆರಿಗೆ ಸಲ್ಲಿಸಬೇಕೆ ಅಥವಾ ವಾರ್ಷಿಕ ಆದಾಯ ತೆರಿಗೆಯಲ್ಲಿ ಸೇರಿಸಿ. I.T. Return ತುಂಬಬೇಕೆ?

ಉತ್ತರ: ನಿಮ್ಮ ವಾರ್ಷಿಕ ಆದಾಯ, ಉದ್ಯೋಗ ಹಾಗೂ ಷೇರು ಮಾರುಕಟ್ಟೆಯಲ್ಲಿ ಬಂದಿರುವ ಲಾಭ ಪರಿಗಣಿಸುವಾಗ, ಇಂತಹ ಆದಾಯ ₹ 2.50 ಲಕ್ಷ ತಲಪುವ ತನಕ, ನಿಮಗೆ ಆದಾಯ ತೆರಿಗೆ ಬರುವುದಿಲ್ಲ. ಹಾಗೂ I.T. Return ತುಂಬುವ ಅಗತ್ಯವೂ ಇಲ್ಲ. ನೀವು ತೆರಿಗೆ ಹಾಗೂ I.T. Return ವಿಚಾರಗಳಲ್ಲಿ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಿಶ್ಚಿಂತೆಯಿಂದ ಇರಿ. ಪ್ರಜಾವಾಣಿ ಮೂಲಕ ನಾನು ಜನಸಾಮಾನ್ಯರ ಆರ್ಥಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದು ಒಂದು ಅಳಿಲಸೇವೆ ಮಾತ್ರ. ನೀವು ನನ್ನ ಮೇಲೆ ಇಟ್ಟಿರುವ ಅಭಿಮಾನಕ್ಕೆ ಅಭಿನಂದಿಸುತ್ತೇನೆ.
**

ಕೆ.ಎ. ರಾಮಚಂದ್ರ, ಕೆಂಗೇರಿ
ನಾನು ರಾಜ್ಯ ಸರ್ಕಾರದ ನಿವೃತ್ತ ನೌಕರ. ನನಗೆ ತಿಂಗಳಿಗೆ ₹ 26,500 ಪಿಂಚಣಿ ಬರುತ್ತದೆ. ತಿಂಗಳಿಗೆ ₹ 5,000 ಆರ್‌.ಡಿ. ಮಾಡುತ್ತೇನೆ. ನನ್ನ ಹಾಗೂ ನನ್ನ ಹೆಂಡತಿ ಹೆಸರಿನಲ್ಲಿ, ತಲಾ ₹ 4500ರಂತೆ ವಾರ್ಷಿಕವಾಗಿ, ಯುನೈಟೆಡ್‌ ಇಂಡಿಯಾ ಇನ್ಶುರನ್ಸ್‌ ಕಂಪನಿಯಲ್ಲಿ, ಆರೋಗ್ಯ ವಿಮೆ ಸಲುವಾಗಿ ಪ್ರೀಮಿಯಂ ಹಣ ತುಂಬುತ್ತೇನೆ. ನಾನು ತೆರಿಗೆಗೆ ಒಳಗಾಗುತ್ತೇನೆಯೇ, ತೆರಿಗೆ ಉಳಿಸಲು ಮಾರ್ಗಗಳಿದ್ದರೆ ತಿಳಿಸಿರಿ. ನನಗೆ ಬೇರಾವ ಆದಾಯ ಇರುವುದಿಲ್ಲ.

ಉತ್ತರ: ನಿಮ್ಮ ವಾರ್ಷಿಕ ಪಿಂಚಣಿ ವರಮಾನ ₹ 3.18 ಲಕ್ಷ. ಆರೋಗ್ಯ ವಿಮೆ ಹಾಗೂ ಸೆಕ್ಷನ್‌ 87 ಅಡಿಯಲ್ಲಿ ದೊರೆಯುವ ತೆರಿಗೆಯಲ್ಲಿ ವಿನಾಯ್ತಿ ಪರಿಗಣಿಸುವಾಗ, ನೀವು ತೆರಿಗೆಗೆ ಒಳಗಾಗುವುದಿಲ್ಲ. ಮುಂದೆ ನಿಮ್ಮ ವಾರ್ಷಿಕ ಒಟ್ಟು ಆದಾಯ (Gross Income) ದೊಡ್ಡ ಮೊತ್ತ ದಾಟಿದಾಗ, ಅಂತಹ ಮೊತ್ತಕ್ಕೆ ಅನುಸಾರವಾಗಿ, 5 ವರ್ಷಗಳ ತೆರಿಗೆ ಉಳಿಸುವ ಬ್ಯಾಂಕ್‌ ಠೇವಣಿ ಮಾಡಿರಿ. ಇದೇ ವೇಳೆ ನಿಮ್ಮೊಡನೆ ನಿವೃತ್ತಿಯಿಂದ ಬಂದ ಹಣ ಹಾಗೂ ಇದುವರೆಗೆ ಮಾಡಿರುವ ಉಳಿತಾಯ, ಬ್ಯಾಂಕಿನಲ್ಲಿ ಠೇವಣಿ ಇರಿಸಿರಬೇಕು. ಈ ವಿಚಾರ ಪ್ರಶ್ನೆಯಲ್ಲಿ ತಿಳಿಸಿಲ್ಲ.

ಬ್ಯಾಂಕ್‌ ಠೇವಣಿ ಬಡ್ಡಿ ಆದಾಯ ನಿಮ್ಮ ಪಿಂಚಣಿ ಆದಾಯ ಇವೆರಡೂ ಸೇರಿ ವಾರ್ಷಿಕವಾಗಿ ₹ 3 ಲಕ್ಷ ದಾಟಿದಲ್ಲಿ ಅಂತಹ ಮೊತ್ತಕ್ಕೆ ತೆರಿಗೆ ಬರುತ್ತದೆ. ಇಲ್ಲಿ ವಿವರಿಸಿದಂತೆ ತೆರಿಗೆ ಉಳಿಸುವ ಬ್ಯಾಂಕ್‌ ಠೇವಣಿ ಇರಿಸಿ ತೆರಿಗೆ ವಿನಾಯ್ತಿ ಪಡೆಯಬಹುದು.

ಇನ್ನು ಆರೋಗ್ಯ ವಿಮೆ ವಿಚಾರ. ನೀವು ನಿಮ್ಮ ಹಾಗೂ ನಿಮ್ಮ ಹೆಂಡತಿ ಹೆಸರಿನಲ್ಲಿ ತಲಾ ₹ 4500 ಪ್ರೀಮಿಯಂ ಕಟ್ಟುವ ಬದಲಾಗಿ, ಸಿಂಡಿಕೇಟ್‌ ಬ್ಯಾಂಕಿನ ಸಿಂಡ್‌ ಆರೋಗ್ಯ ವಿಮೆ ಮಾಡಿಸಿರಿ. ₹ 5 ಲಕ್ಷ Floater Policy ಮಾಡಿರಿ. ನಿಮ್ಮಿಬ್ಬರಿಂದ ವಾರ್ಷಿಕ ₹ 7,423 ಪ್ರೀಮಿಯಂ ಹಣ ಕಟ್ಟಬೇಕಾಗುತ್ತದೆ. ಈ ಪಾಲಿಸಿ ಇಬ್ಬರಿಗೂ ಅನ್ವಯಿಸುತ್ತದೆ. ನನ್ನ  ಪ್ರಕಾರ ಬೇರೆ ಕಡೆ ನೀವು ₹ 9000 ಪ್ರೀಮಿಯಂ ತುಂಬಿದರೂ, ನಿಮಗೆ ₹ 5 ಲಕ್ಷ ಆರೋಗ್ಯ ವಿಮೆ ದೊರೆತಿರಲಿಕ್ಕಿಲ್ಲ.
**

ಚಂದ್ರಶೇಖರ್‌, ಬೆಂಗಳೂರು
ನಾನು ನಿವೃತ್ತ ಶಿಕ್ಷಕ, ಪಿಂಚಣಿ ಇಲ್ಲ. ನಿವೃತ್ತಿಯಿಂದ ಬಂದ ಹಣ ₹ 18 ಲಕ್ಷ ಸಾಲಕ್ಕೆ ಸರಿಹೋಯಿತು. ನನ್ನ ಜೀವನೋಪಾಯಕ್ಕೆ ಒಂದು ಸ್ವಂತ ಉದ್ಯೋಗ ತಿಳಿಸಿರಿ. ಆರೋಗ್ಯ ವಿಮೆ ಎಲ್ಲಿ ಮಾಡಿಸಲಿ ತಿಳಿಸಿರಿ
.

ಉತ್ತರ: ನೀವು ಜೆರಾಕ್ಸ್‌ ಮಷಿನ್‌ ₹ 50,000ದ ಹಾಗೆ (Second hand) ಕೊಂಡುಕೊಳ್ಳಿ ಮತ್ತು ಇದರೊಂದಿಗೆ ಸ್ಟೇಷನರಿ ವಸ್ತುಗಳ ವ್ಯಾಪಾರ ಮಾಡಿರಿ. ಇದರಲ್ಲಿ
ಶೇ 30 ರಷ್ಟು ಲಾಭವಿದೆ. ನೀವೇ ಸ್ವಂತ ಮಾಡಿರಿ. ಬೇರೆಯವರನ್ನಿಟ್ಟು ಸಂಬಳ ಕೊಟ್ಟರೆ ನಿಮಗೆ ಅನುಕೂಲವಾಗುವುದಿಲ್ಲ. ನೀವು ಸಿಂಡಿಕೇಟ್‌ ಬ್ಯಾಂಕಿನಿಂದ ಸಿಂಡ್‌ ಆರೋಗ್ಯ ವಿಮೆ ₹ 2 ಲಕ್ಷ ಮಾಡಿಸಿರಿ (Floater Policy) ನಿಮಗೆ ನಿಮ್ಮ ಹೆಂಡತಿಗೆ ಒಟ್ಟು ಸೇರಿ ಒಂದು ಪಾಲಿಸಿಗೆ ವಾರ್ಷಿಕವಾಗಿ ₹ 3,539 ಕಟ್ಟಬೇಕಾಗುತ್ತದೆ.
**
ಸುಧಾ, ಚಾಮರಾಜನಗರ
ಯಾರೋ ಏಜಂಟರ ಮಾತು ಕೇಳಿ  (PAEL India Ltd. Delhi) ಕಂಪೆನಿಗೆ ತಿಂಗಳಿಗೆ ₹ 1100 ದಂತೆ ಒಂದು ವರ್ಷ ಕಟ್ಟಿದೆವು. ಈಗ 6 ವರ್ಷವಾಗಿದೆ. ನಮಗೆ ಯಾವುದೇ ಹಣ ವಾಪಸು ಬರಲಿಲ್ಲ. ನಮಗೆ ಮೋಸವಾಗಿದೆ. ಸರಿಯಾದ ಮಾಹಿತಿ ನೀಡಬೇಕಾಗಿ ಪ್ರಾರ್ಥಿಸುತ್ತೇನೆ.

ಉತ್ತರ: ಕೆಲವರು ಕಮಿಷನ್‌ ಆಸೆಯಿಂದ  ಅಭದ್ರವಾದ ಸಂಸ್ಥೆಯಲ್ಲಿ ಹಣ ಇರಿಸಲು ಮಾರ್ಗದರ್ಶನ ಮಾಡುತ್ತಾರೆ. ಜನ ಸಾಮಾನ್ಯರು ಹಾಗೂ ಕಂಟಕ ಎದುರಿಸಲು ಅಸಮರ್ಥರಾದವರು, ಬ್ಯಾಂಕ್‌–ಅಂಚೆ ಕಚೇರಿ ಠೇವಣಿ ಹೊರತುಪಡಿಸಿ ಬೇರಾವ ಅಭದ್ರವಾದ ಸಂಸ್ಥೆಗಳಲ್ಲಿ ಹಣ ಎಂದಿಗೂ ಹೂಡಬಾರದು. ಎಲ್ಲಕ್ಕೂ ಮುಖ್ಯವಾಗಿ ಏಜೆಂಟರ ಒತ್ತಾಯಕ್ಕೆ ಮರುಳಾದರೆ, ಅಸಲು ಕಳೆದುಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ನೀವು ಈ ವಿಚಾರದಲ್ಲಿ ಅಸಹಾಯಕರು. ಹಣ ಪಡೆಯಲು ಕೋರ್ಟು, ಕಚೇರಿ ಏರುವುದಕ್ಕಿಂತ ಸುಮ್ಮನಿರುವುದೇ ಲೇಸು, ನಿಮ್ಮ ಪ್ರಶ್ನೆಯಿಂದ ನಮ್ಮ ಓದುಗರು ಎಚ್ಚರ ವಹಿಸಲಿ ಎಂದು ಆಶಿಸುತ್ತೇನೆ.
**

ನಟರಾಜ, ಮದ್ದೂರು
ನಾನು ಕೇಂದ್ರ ಸರ್ಕಾರದ ನೌಕರ. ನನ್ನ ಹೆಂಡತಿ ರಾಜ್ಯ ಸರ್ಕಾರದ ನೌಕರಳು. ವಯಸ್ಸು ಕ್ರಮವಾಗಿ 35 ಹಾಗೂ 34. ನನ್ನ ಸಂಬಳ ₹ 37,000 ಇದರಲ್ಲಿ ಎನ್‌ಪಿಎಸ್‌ ₹ 3311, ಎಲ್‌ಐಸಿ ₹ 1069, ಬ್ಯಾಂಕ್‌ ಸಾಲ ₹ 4625, ಪಿಎಲ್‌ಐ ₹ 6253, ಇತರೆ ₹ 200 ಕಡಿತಗೊಂಡು ₹ 21,542 ಕೈಗೆ ಬರುತ್ತದೆ. ನನ್ನ ಹೆಂಡತಿ ತಿಂಗಳ ಸಂಬಳ ₹ 32,283. ಇದರಲ್ಲಿ ಎನ್‌ಪಿಎಸ್‌ ₹ 3008, ಕೆಜಿಐಡಿ ₹ 3030, ಎಲ್‌ಐಸಿ ₹ 1069, ಪಿಎಲ್‌ಐ ₹ 2700 ಇತರೆ ₹ 238 ಕಡಿತಗೊಂಡು ₹ 22,278 ಕೈಗೆ ಸಿಗುತ್ತದೆ. ನಮ್ಮ ತಿಂಗಳ ಒಟ್ಟು ಖರ್ಚು ₹ 18,000. ₹ 26,000 ತನಕ ತಿಂಗಳಿಗೆ ಉಳಿಸಬಹುದು. ನಮಗೆ 3 ತಿಂಗಳ ಗಂಡುಮಗು ಇದೆ. ಮಗುವಿನ ಭವಿಷ್ಯಕ್ಕೆ ಹೇಗೆ ಉಳಿಸಬೇಕು ಮತ್ತು ನಾವು ಒಂದು ಮನೆಯನ್ನು ₹ 40 ಲಕ್ಷ ಕೊಟ್ಟು ಕೊಂಡುಕೊಳ್ಳಬೇಕು ಅಂತ ಆಲೋಚಿಸಿದ್ದೇವೆ. ಆದಾಯ ತೆರಿಗೆ ಉಳಿಸಲು ಹಾಗೂ ಪಿಪಿಎಫ್‌ ಖಾತೆ ಬಗ್ಗೆ ವಿವರಣೆ ನೀಡಿರಿ.

ಉತ್ತರ: ನೀವು ₹ 40 ಲಕ್ಷದ ಮನೆ ಕೊಂಡುಕೊಳ್ಳಲು ಬ್ಯಾಂಕ್‌ ಸಾಲ ಪಡೆಯುವ ಅವಶ್ಯವಿದ್ದು, ಈ ಸಾಲಕ್ಕೆ ತಿಂಗಳ ಕಂತು (EMI) ₹ 40,000 ಕಟ್ಟ ಬೇಕಾಗುತ್ತದೆ. 20 ವರ್ಷಗಳ ಅವಧಿ ಸಾಲ ತೀರಿಸಲು ದೊರೆಯುತ್ತದೆ. ನಿಮ್ಮ ಇಬ್ಬರ ತಿಂಗಳ ಉಳಿತಾಯದಿಂದ ಗರಿಷ್ಠ ₹ 25 ಲಕ್ಷ ಸಾಲ ದೊರೆಯಬಹುದು. ಸದ್ಯಕ್ಕೆ ಈ ವಿಚಾರ ಮುಂದೂಡಿರಿ. ಸಾಧ್ಯವಾದರೆ ₹ 15 ಲಕ್ಷದ ಹಾಗೆ ಮದ್ದೂರಿನಲ್ಲಿ  ಬ್ಯಾಂಕ್‌ ಸಾಲದಿಂದ ನಿವೇಶನ ಮಾಡಿಕೊಳ್ಳಿ.

ಅಲ್ಲಿ ತನಕ ನಿಮ್ಮ ಈಗಿನ ಉಳಿತಾಯ ಹಾಗೆಯೇ ಮುಂದುವರಿಸಿರಿ. ನಿಮ್ಮ ಚಿಕ್ಕ ಕಂದನ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಹೊಸ ಚಿಲ್ಡ್ರನ್ಸ್‌ ಮನೀ ಬ್ಯಾಕ್‌ ಪ್ಲ್ಯಾನ್‌ ಎಲ್‌ಐಸಿಯಲ್ಲಿ ಕನಿಷ್ಠ ₹ 5 ಲಕ್ಷ ವಿಮೆ ಮಾಡಿರಿ.

ಆದಾಯ ತೆರಿಗೆ ಉಳಿಸಲು ಪಿಪಿಎಫ್‌ ಒಂದು ಉತ್ತಮವಾದ ಹೂಡಿಕೆ. ಅವಧಿ 15 ವರ್ಷಗಳು. ಕನಿಷ್ಠ ₹ 500 ಹಾಗೂ ಗರಿಷ್ಠ ₹ 1.50 ಲಕ್ಷ ವಾರ್ಷಿಕವಾಗಿ ತುಂಬಬಹುದು. ಇಲ್ಲಿ ಬರುವ ಬಡ್ಡಿ ವರಮಾನ ಆದಾಯ ತೆರಿಗೆಯಿಂದ ವಿನಾಯ್ರಿ ಪಡೆದಿದೆ. ₹ 3000 ಆರ್‌.ಡಿ. ವಾರ್ಷಿಕವಾಗಿ ಮಾಡಿ, ವರ್ಷಾಂತ್ಯಕ್ಕೆ ಬಂಗಾರದ ನಾಣ್ಯ ಕೊಂಡುಕೊಳ್ಳಿ. ಈ ಪ್ರಕ್ರಿಯೆ ಮಗುವಿನ ಮದುವೆ ತನಕವೂ ನಿಲ್ಲಿಸಬೇಡಿ. ನಿವೇಶನ ಕೊಳ್ಳುವ ತನಕ ಕನಿಷ್ಠ ₹ 15000 ಆರ್‌.ಡಿ. ಮಾಡಿರಿ. ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.
**
ವಿಶ್ವನಾಥ, ಬೆಂಗಳೂರು
ನಾನು 2002 ರಲ್ಲಿ ₹ 32,000 ಕೊಟ್ಟು ಮೈಸೂರಿನಲ್ಲಿ ಒಂದು ಸಣ್ಣ ನಿವೇಶನ ಖರೀದಿಸಿದ್ದೆ. 2017 ಜೂನ್‌ನಲ್ಲಿ ₹ 9 ಲಕ್ಷಕ್ಕೆ ಮಾರಾಟ ಮಾಡಿದ್ದೇನೆ. ಹಣ ಆರ್‌ಟಿಜಿಎಸ್‌ ಮುಖಾಂತರ ನಮ್ಮ ಬ್ಯಾಂಕ್‌ ಖಾತೆಗೆ ಜಮಾ ಆಗಿದೆ. ಇದರಿಂದ ಬೇರೆ ನಿವೇಶನ ಕೊಳ್ಳಬೇಕೆಂದಿದ್ದೇನೆ. ಎಷ್ಟು ತಿಂಗಳೊಳಗೆ ಖರೀದಿಸಬೇಕು ತಿಳಿಸಿರಿ. ಕೊಳ್ಳಲಾಗದಿರುವಲ್ಲಿ ಎಷ್ಟು ತೆರಿಗೆ ಬರಬಹುದು? ಮಗನಿಗೆ ಈ ಹಣ ಕೊಟ್ಟರೆ ತೆರಿಗೆ ಬರುತ್ತಿದೆಯೇ, ದಯಮಾಡಿ ತಿಳಿಸಿರಿ.

ಉತ್ತರ: ಸೆಕ್ಷನ್‌ 54–54ಎಫ್‌ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಆಧಾರದ ಮೇಲೆ, ಒಂದು ನಿವೇಶನ ಮಾರಾಟ ಮಾಡಿ ಬಂದಿರುವ ಸಂಪೂರ್ಣ ಹಣ ಬಳಸಿ ಎರಡು ವರ್ಷಗಳ ಒಳಗೆ ಇನ್ನೊಂದು ವಾಸದ ಮನೆ ಕೊಂಡರೆ ಅಥವಾ ನಿವೇಶನ ಕೊಂಡು ಮೂರು ವರ್ಷಗಳೊಳಗೆ ಅಲ್ಲಿ ಮನೆ ಕಟ್ಟಿಸಿದರೆ ತೆರಿಗೆ ವಿನಾಯ್ತಿ ಪಡೆಯಬಹುದು. ಬರೇ ನಿವೇಶನ ಕೊಂಡರೆ ತೆರಿಗೆ ವಿನಾಯತಿ ಬರುವುದಿಲ್ಲ.

ಇದೇ ವೇಳೆ NHAI-REC ಬಾಂಡ್‌ನಲ್ಲಿ ಮೂರು ವರ್ಷ ತೊಡಗಿಸಿ ತೆರಿಗೆ ವಿನಾಯ್ತಿ ಪಡೆಯಲೂಬಹುದು. ತೆರಿಗೆ ಕೊಡುವುದಾದಲ್ಲಿ, ಕೊಂಡ ಬೆಲೆ, 2002–2017ರ ತನಕ Cost of Inflation Index, ಲೆಕ್ಕ ಹಾಕಿ ಕಳೆದು ಉಳಿದ ಹಣಕ್ಕೆ ಶೇ 20 ರಂತೆ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ತುಂಬಬೇಕಾಗುತ್ತದೆ. ನೀವು ಮಗನಿಗೆ ಈ ಹಣ ಕೊಟ್ಟರೆ, ನಿಮಗೂ ಮಗನಿಗೂ ಆದಾಯ ತೆರಿಗೆ ಇರುವುದಿಲ್ಲ ಆದರೆ, ಇಲ್ಲಿ ವಿವರಿಸಿದಂತೆ ಶೇ 20ರಷ್ಟು ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ತುಂಬಲೇ ಬೇಕಾಗುತ್ತದೆ.

ಎಸ್. ಗುಂಡುರಾವ್, ಬೆಂಗಳೂರು
ನಾನು ನಿವೃತ್ತ ಉಪನ್ಯಾಸಕ. ಜನನ 5–5–1937. ನನ್ನ ಪಿಂಚಣಿ ಮಾಸಿಕ ಆದಾಯ ₹ 26,624. ನನ್ನ ಹೂಡಿಕೆ ಕೆನರಾ ಬ್ಯಾಂಕ್‌ನಲ್ಲಿ 60 ತಿಂಗಳ ಠೇವಣಿಯಾಗಿ ₹ 4 ಲಕ್ಷ ಇದೆ. 3 ತಿಂಗಳಿಗೊಮ್ಮೆ ₹ 722 ಬಡ್ಡಿ ಬರುತ್ತದೆ. ಅದೇ ಕೆನರಾ ಬ್ಯಾಂಕಿನಲ್ಲಿ ₹ 1.20 ಲಕ್ಷ ಪಿಪಿಎಫ್. ಕೆನರಾ ಬ್ಯಾಂಕ್ ಇನ್ನೊಂದು ಶಾಖೆಯಲ್ಲಿ ₹ 37,000 ಉಳಿತಾಯ ಖಾತೆಯಲ್ಲಿ ಇರಿಸಿರುವೆ. ತಾ. 14–3–2016 ರಂದು ಎಸ್‌ಬಿಐ ನಲ್ಲಿ ₹ 5 ಲಕ್ಷ ಠೇವಣಿ ಇರಿಸಿರುವೆ. ಇದರಿಂದ ಮೂರು ತಿಂಗಳಿಗೊಮ್ಮೆ ₹ 8,906 ಬಡ್ಡಿ ಬರುತ್ತದೆ. ಇದೇ ಬ್ಯಾಂಕಿನಲ್ಲಿ ₹ 50,000 ಮ್ಯೂಚುವಲ್ ಫಂಡ್‌ನಲ್ಲಿ ತೊಡಗಿಸಿರುವೆ. ನಾನು ಆದಾಯ ತೆರಿಗೆ ತುಂಬ ಬೇಕೇ ಹಾಗೂ Return ತುಂಬಬೇಕೇ ತಿಳಿಸಿರಿ.

ಉತ್ತರ: ನಿಮ್ಮ ವಾರ್ಷಿಕ ಪಿಂಚಣಿ ಆದಾಯ ₹ 3,19,488. ನಿಮ್ಮ ಉಳಿತಾಯದಲ್ಲಿ ಪಿಪಿಎಫ್ ಹಾಗೂ ಮ್ಯೂಚುವಲ್ ಫಂಡ್‌ನಿಂದ ಬರುವ ವರಮಾನಕ್ಕೆ ಕ್ರಮವಾಗಿ ಆದಾಯ ತೆರಿಗೆ ಸೆಕ್ಷನ್ 19 (35) ಹಾಗೂ 10 (11) ಆಧಾರದ ಮೇಲೆ ತೆರಿಗೆ ವಿನಾಯಿತಿ ಇದೆ.

ಉಳಿತಾಯ ಖಾತೆಯಲ್ಲಿ ಬರುವ ಬಡ್ಡಿ ಕೂಡಾ ಸೆಕ್ಷನ್ 80ಟಿಟಿಎ ಆಧಾರದ ಮೇಲೆ ಗರಿಷ್ಠ  ₹ 10,000 ಬಡ್ಡಿ ವರಮಾನಕ್ಕೆ ತೆರಿಗೆ ವಿನಾಯ್ತಿ ಇದೆ. ಕೆನರಾ ಹಾಗೂ ಎಸ್.ಬಿ.ಐ.ನಲ್ಲಿ ಒಟ್ಟು ಹೂಡಿರುವ ಠೇವಣಿ ₹ 9 ಲಕ್ಷಕ್ಕೆ ಬಡ್ಡಿ ಬಂದರೂ, ನೀವು ಈ ಆರ್ಥಿಕ ವರ್ಷದಿಂದ, ವಾರ್ಷಿಕ ಆದಾಯ ₹ 5 ಲಕ್ಷದೊಳಗಿರುವುದರಿಂದ ನಿಮಗೆ ಆದಾಯ ತೆರಿಗೆ ಬರುವುದಿಲ್ಲ. Return ತುಂಬುವ ಅವಶ್ಯಕತೆಯೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT