ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಕಲು ಸೂತ್ರಗಳ ಸಡಿಲ ಹೆಣಿಗೆ

Last Updated 6 ಏಪ್ರಿಲ್ 2018, 10:08 IST
ಅಕ್ಷರ ಗಾತ್ರ

ಸಿನಿಮಾ: ಹುಚ್ಚ 2
ನಿರ್ಮಾಪಕ: ಎ.ಎಂ. ಉಮೇಶ ರೆಡ್ಡಿ
ನಿರ್ದೇಶನ: ಎನ್‌. ಓಂ ಪ್ರಕಾಶ್‌ ರಾವ್‌
ತಾರಾಗಣ: ಕೃಷ್ಣ, ಮಾಳವಿಕಾ, ಶ್ರಾವ್ಯಾ, ಸಾಯಿಕುಮಾರ್‌, ಅವಿನಾಶ್‌

ಕೊಲೆಯೊಂದರ ಸಾಕ್ಷಿಯಾಗಿ ‘ಬಟನ್‌’ ಒದಗಿಬರುವ ಸನ್ನಿವೇಶಗಳು ಕ್ಲೀಷೆ ಎನ್ನುವಷ್ಟರ ಮಟ್ಟಿಗೆ ಹಲವು ಸಿನಿಮಾಗಳಲ್ಲಿ ಬಂದುಹೋಗಿದೆ. ನಾಯಕನ ಪೆದ್ದುತನಕ್ಕೇ ಮರುಳಾಗಿ ನಾಯಕಿ ಹಿಂದೆ ಬೀಳುವುದು, ನಾಯಕಿಯ ತಂದೆ ಅದಕ್ಕೆ ಅಡ್ಡಿಯಾಗುವುದು, ನಾಯಕನ ತಾಯಿಭಕ್ತಿ, ಕ್ಲೈಮ್ಯಾಕ್ಸ್‌ನಲ್ಲಿ ನಾಯಕ ಸೇಡು ತೀರಿಸಿಕೊಂಡ ಮೇಲೆ ಜಾಗಕ್ಕೆ ಬಂದು ತಲುಪುವ ಪೊಲೀಸರು... ಇವೆಲ್ಲವೂ ಇಂಥ ಕ್ಲೀಷೆಗಳೇ. ಆದರೆ ಇಂದಿಗೂ ಕಮರ್ಷಿಯಲ್‌ ಉದ್ದೇಶವಿಟ್ಟುಕೊಂಡ ಸಿನಿಮಾಗಳಲ್ಲಿ ಅವುಗಳನ್ನು ಗೆಲ್ಲುವ ಸೂತ್ರಗಳು ಎಂದೇ ಪರಿಗಣಿಸಲಾಗುತ್ತದೆ.

ಓಂ ಪ್ರಕಾಶ್‌ ರಾವ್‌ ಅವರ ನಿರ್ದೇಶನದ ‘ಹುಚ್ಚ 2’ ಸಿನಿಮಾ ಕೂಡ ಇಂಥ ಸಿದ್ಧ ಸೂತ್ರಗಳಿಂದಲೇ ಕಟ್ಟಲ್ಪಟ್ಟಿದೆ. ಆದರೆ ಆ ಸೂತ್ರಗಳನ್ನೂ ಬಿಗಿಯಾಗಿ, ಸಮರ್ಥವಾಗಿ ಹೆಣೆಯಲು ನಿರ್ದೇಶಕರಿಗೆ ಸಾಧ್ಯವಾಗಿಲ್ಲ. ಕಥೆ, ನಿರೂಪಣಾ ತಂತ್ರ, ಪಾತ್ರಗಳು ಯಾವುದರಲ್ಲಿಯೂ ಹೊಸತನವನ್ನು ನಿರೀಕ್ಷಿಸುವಂತಿಲ್ಲ.

ತಮ್ಮ ಜಾಯಮಾನಕ್ಕೆ ಹೊಂದಬಲ್ಲ ತಮಿಳಿನ ‘ರಾಮ್‌’ ಸಿನಿಮಾವನ್ನು ನಿರ್ದೇಶಕರು ಕನ್ನಡದಲ್ಲಿ ರೀಮೇಕ್‌ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮತ್ತಷ್ಟು ಕಮರ್ಷಿಯಲ್‌ ಅಂಶಗಳನ್ನು ಸೇರಿಸಲೂ ಯತ್ನಿಸಿದ್ದಾರೆ. ಅವುಗಳಿಂದ ಚಿತ್ರಕ್ಕೆ ಹೆಚ್ಚಿನ ಲಾಭವೇನೂ ಆದಂತಿಲ್ಲ.

ಅತ್ತ ಬುದ್ಧಿಮಾಂದ್ಯನೂ ಅಲ್ಲದ, ಇತ್ತ ಸಹಜಬುದ್ಧಿಯವನೂ ಅಲ್ಲದ ಹುಡುಗ ರಾಮ್‌, ತಾಯಿಯನ್ನೇ ಕೊಂದ ಆರೋಪದ ಮೇಲೆ ಬಂಧಿತನಾಗುತ್ತಾನೆ. ಆ ಕೊಲೆಯ ತನಿಖೆಯ  ಮೂಲಕ ರಾಮ್‌ನ ಬದುಕಿನ ಕಥೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ.

2001ರಲ್ಲಿ ಬಿಡುಗಡೆಯಾದ ಓಂ ಪ್ರಕಾಶ್ ರಾವ್‌ ಅವರ ‘ಹುಚ್ಚ’ ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ಸು ಗಳಿಸಿತ್ತು. ಆ ಪ್ರಭಾವಳಿಯ ಪ್ರಯೋಜನ ಪಡೆದುಕೊಳ್ಳುವುದರ ಹೊರತಾದ ಯಾವ ಸಂಬಂಧವೂ ‘ಹುಚ್ಚ 2’ ಸಿನಿಮಾದಲ್ಲಿ ಕಾಣುವುದಿಲ್ಲ.

ನಾಯಕನ ಪಾತ್ರಪೋಷಣೆಯೇ ದುರ್ಬಲವಾಗಿದೆ. ತನಿಖೆಯ ಸಂದರ್ಭದಲ್ಲಿ ಜೈಲಿನೊಳಗಿಂದಲೇ ಪೊಲೀಸರಿಗೆ ಮಹತ್ವದ ಸುಳಿವನ್ನು ಕೊಡಬಲ್ಲಷ್ಟು ಚಾಣಾಕ್ಷನಾದ ಅವನು ಕೆಲವೊಮ್ಮೆ ನಡೆಯಲ್ಲೂ ನುಡಿಯಲ್ಲೂ ತೀರಾ ಪೆದ್ದು ಪೆದ್ದಾಗಿ ಆಡುವುದು ಅಸಹಜವಾಗಿದೆ. ಈ ಪಾತ್ರದಲ್ಲಿ ಕೃಷ್ಣ, ಸಂಭಾಷಣೆಗಿಂತ ಹೆಚ್ಚಾಗಿ ಮೈಕಟ್ಟು, ನೋಟದಿಂದಲೇ ತೂಗಿಸಿಕೊಂಡು ಹೋಗಿದ್ದಾರೆ.

ಮೊದಲರ್ಧದಲ್ಲಿ ಗಂಭೀರವಾಗಿಯೇ ಸಾಗುವ ಕಥೆಗೆ ದ್ವಿತೀಯಾರ್ಧದಲ್ಲಿ ಹಾಸ್ಯದ ಒಗ್ಗರಣೆ ಹಾಕಲು ತಾವೇ ಒಂದು ಪಾತ್ರದಲ್ಲಿ ನಟಿಸಿದ್ದಾರೆ ಓಂ ಪ್ರಕಾಶ್ ರಾವ್‌. ಹಲವು ಕಡೆಗಳಲ್ಲಿ ಅವರ ಕೀರಲು ಧ್ವನಿ ಕಿರಿಕಿರಿ ಹುಟ್ಟಿಸಿದರೂ, ತೆರೆಯ ಮೇಲೆ ಇದ್ದಷ್ಟೂ ಹೊತ್ತು ನಗುವುಕ್ಕಿಸುತ್ತಾರೆ. ಮಾಳವಿಕಾ ಅಮ್ಮನ ಪಾತ್ರದಲ್ಲಿ ಇಷ್ಟವಾಗುತ್ತಾರೆ. ಪೊಲೀಸ್ ಅಧಿಕಾರಿಗಳಾಗಿ ಅವಿನಾಶ್‌ ಮತ್ತು ಸಾಯಿಕುಮಾರ್ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಇನ್ನು ಸಂಗೀತದ ವಿಷಯಕ್ಕೆ ಬಂದರೆ ಓಂ ಪ್ರಕಾಶ್‌ ರಾವ್‌ ಕಮರ್ಷಿಯಲ್‌ ಪ್ರಭೆಯಲ್ಲಿ ಅನೂಪ್‌ ಸೀಳಿನ್‌ ಪ್ರತಿಭೆ ಕೊಂಚ ಮಂಕಾದಂತಿದೆ. ‘ಲಾಲಿ ಲಾಲಿ..’ ಹಾಡೊಂದನ್ನು ಬಿಟ್ಟರೆ ಉಳಿದ ಯಾವ ಹಾಡುಗಳೂ ನೆನಪಿನಲ್ಲುಳಿಯುವುದಿಲ್ಲ. ಹಿನ್ನೆಲೆ ಸಂಗೀತದಲ್ಲಿಯೂ ಅಂಥ ವಿಶೇಷವೇನಿಲ್ಲ. ಛಾಯಾಗ್ರಹಣ ಹಲವು ದೃಶ್ಯಗಳಲ್ಲಿ ಬೆಳಕಿಗಿಂತ ನೆರಳನ್ನೇ ಹೆಚ್ಚು ನೆಚ್ಚಿಕೊಂಡಿದೆ.

ಒಟ್ಟಾರೆ ಅವೇ ಹಳೆಯ ಸವಕಲು ಸೂತ್ರಗಳಲ್ಲಿಯೇ ಸುತ್ತುವ ಈ ಎರಡನೇ ‘ಹುಚ್ಚ’ನನ್ನು ನಿರ್ದೇಶಕರ ಖಯಾಲಿಯಾಗಿಯಷ್ಟೇ ನೋಡಬಹುದು. ನೋಡದಿದ್ದರೂ ಮಹತ್ವವಾದದ್ದೇನೂ ಕಳೆದುಕೊಳ್ಳುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT