ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಪುಸ್ತಕ ದಿನ ಹಾಗೂ ಪುಸ್ತಕ ಸಂಸ್ಕೃತಿ

Last Updated 20 ಏಪ್ರಿಲ್ 2018, 5:41 IST
ಅಕ್ಷರ ಗಾತ್ರ

ಕೆ. ಜಿ. ವೆಂಕಟೇಶ್

ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿರುವ ಕೇಂದ್ರಗ್ರಂಥಾಲಯದಲ್ಲಿ 2012ರ ಏಪ್ರಿಲ್ 23ರಂದು ‘ವಿಶ್ವ ಪುಸ್ತಕ ದಿನ’ ಆಚರಿಸಿದ ಸಂದರ್ಭದ ಒಂದು ನೆನಪು. ಆ ದಿನದ ಕಾರ್ಯಕ್ರಮ ಒಂದು ರೀತಿಯಲ್ಲಿ ವಿಶಿಷ್ಟವಾಗಿತ್ತು. ಪುಸ್ತಕಗಳನ್ನು ಪ್ರೀತಿಸುವ ಆನೇಕ ಮನಸ್ಸುಗಳು ಅಲ್ಲಿ ಸೇರಿದ್ದವು. ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಮುಖ್ಯ ಅತಿಥಿಯಾಗಿದ್ದರು. ಕವಿ ಸಿದ್ಧಲಿಂಗಯ್ಯ ಉಪಸ್ಥಿತರಿದ್ದರು.

ಓದಿನ ಹವ್ಯಾಸ ಇಟ್ಟುಕೊಂಡಿದ್ದ ವೆಂಕಟಾಚಲಯ್ಯ, ತಾವು ವಿದ್ಯಾರ್ಥಿ ದೆಸೆಯಿಂದ ಕೇಂದ್ರ ಗ್ರಂಥಾಲಯದ ಜೊತೆ ಇಟ್ಟುಕೊಂಡಿದ್ದ ಸಂಬಂಧವನ್ನು ಆ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡರು. ವಿದ್ಯಾರ್ಥಿಯಾಗಿದ್ದಾಗ ಪುಸ್ತಕಗಳನ್ನು ಓದುವುದಕ್ಕಾಗಿಯೇ ಸೈಕಲ್ ಮೇಲೆ ಗ್ರಂಥಾಲಯಕ್ಕೆ ಬರುತ್ತಿದ್ದುದು, ಕಬ್ಬನ್ ಪಾರ್ಕ್‌ನಲ್ಲಿ ಸೈಕಲ್‌ ನಿಲ್ಲಿಸಿ ಪ್ರಶಾಂತ ವಾತಾವರಣದಲ್ಲಿ ಧ್ಯಾನ ಮಾಡುವ ಸ್ಥಿತಿಯಲ್ಲಿ ಅಧ್ಯಯನ ಮಾಡುತ್ತಿದ್ದುದು... ಹೀಗೆ ಹಲವು ಪ್ರಸಂಗಗಳನ್ನು ಹೇಳಿಕೊಂಡರು. ಜೊತೆಗೆ, ‘ಈಗ ಬೆಂಗಳೂರಿನ ವಾತಾವರಣ ಬದಲಾಗಿದೆ. ಈಗಿನ ಪೀಳಿಗೆಯವರು ಈ ಗ್ರಂಥಾಲಯಕ್ಕೆ ಬರಬೇಕಾದರೆ ಸಾಹಸ ಪಡಬೇಕು. ನಾನು ಈ ಕಾರ್ಯಕ್ರಮಕ್ಕೆ ಬರಬೇಕಾದರೆ ಮನೆಯಿಂದ ಎರಡು ಗಂಟೆಗೂ ಹೆಚ್ಚು ಪ್ರಯಾಣ ಮಾಡಬೇಕಾಯಿತು. ನನಗೆ ಈಗಲೂ ಈ ಗ್ರಂಥಾಲಯಕ್ಕೆ ಬರಬೇಕೆಂಬ ಇಚ್ಛೆ ಇದೆ, ಆದರೆ ವಯಸ್ಸಿನ ಮಿತಿಗಳು, ವಿಪರೀತವಾದ ವಾಹನ ದಟ್ಟಣೆಯು ನನ್ನ ಇಚ್ಛೆಗೆ ಪೂರಕವಾಗಿಲ್ಲ’ ಎಂದು ಬೇಸರವನ್ನೂ ವ್ಯಕ್ತಪಡಿಸಿದ್ದರು.

ವೆಂಕಟಾಚಲಯ್ಯ ಅವರ ಮಾತುಗಳು ಒಂದು ವಿಚಾರವನ್ನು ಸ್ಪಷ್ಟಪಡಿಸಿದ್ದವು. ಅದೆಂದರೆ ಪುಸ್ತಕಗಳು ಸಾಕಷ್ಟಿವೆ, ಓದುವ ಆಸಕ್ತಿ ಉಳ್ಳವರೂ ಇದ್ದಾರೆ. ಆದರೆ ಎರಡನ್ನೂ ಬೆಸೆಯುವುದು ಇಂದು ಕಷ್ಟವಾಗುತ್ತಿದೆ. ನಮ್ಮ ಹಳ್ಳಿಗಾಡಿನ ಅನೇಕ ಓದುಗರು ಇಂದಿಗೂ ಪುಸ್ತಕಗಳಿಂದ ವಂಚಿತರಾಗಿದ್ದಾರೆ.

‘ತಂತ್ರಜ್ಞಾನವು ಅನೇಕ ಸಾಧ್ಯತೆಗಳನ್ನು ತೆರೆದಿದೆ, ಈಗ ಅಂತರ್ಜಾಲದ ಮೂಲಕ ಬೇಕಾದ ಮಾಹಿತಿಯನ್ನು ಪಡೆಯಬಹುದು’ ಎಂದು ಈಗಿನ ಪೀಳಿಗೆಯವರು ಹೇಳಬಹುದು. ಆದರೆ ತಮಗೆ ಬೇಕಾದ ಪುಸ್ತಕಗಳನ್ನು ಎದೆಗವಚಿಕೊಂಡು ಓದಿದರೆ ಆಗುವ ಅನನ್ಯ ಅನುಭವವನ್ನು ಅಂತರ್ಜಾಲದಿಂದ ಪಡೆಯಲಾಗದು ಎಂಬುದು ನನ್ನಂಥವರ ಅನಿಸಿಕೆ.

ಪುಸ್ತಕ ಸಂಸ್ಕೃತಿಯನ್ನು ಬೆಳೆಸುವಂಥ ಸಾರ್ವಜನಿಕ ಗ್ರಂಥಾಲಯಗಳಿಗೆ ನಮ್ಮ ತಲೆಮಾರಿನ ಅನೇಕ ಸಹೃದಯ ಓದುಗರು ಭೇಟಿ ನೀಡಿ ಅಧ್ಯಯನ ನಡೆಸುತ್ತಿದ್ದರು. ಈಗಲೂ ಅಂಥವರು ಇದ್ದಾರೆ. ನ್ಯಾಯಮೂರ್ತಿ ಎನ್.ಡಿ. ವೆಂಕಟೇಶ, ಸಾಹಿತಿಗಳಾದ ಜಿ.ಎಸ್. ಶಿವರುದ್ರಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪಿ.ಲಂಕೇಶ್ ಮುಂತಾದವರು ಆಗಾಗ ಗ್ರಂಥಾಲಯಗಳಿಗೆ ಭೇಟಿ ನೀಡುತ್ತಿದ್ದುದನ್ನು, ಗ್ರಂಥಪಾಲಕನಾಗಿ ಅನೇಕ ವರ್ಷಗಳ ಅನುಭವ ಇರುವ ನಾನು ಕಂಡಿದ್ದೇನೆ.

ಪುಸ್ತಕ ಸಂಸ್ಕೃತಿಯನ್ನು ಈ ದೇಶದಲ್ಲಿ ಬೆಳೆಸಲು ಭಾರತ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಸಮಾಜ ಸುಧಾರಕ ರಾಜಾರಾಮ್ ಮೋಹನ ರಾಯ್ ಜನ್ಮ ಶತಾಬ್ದಿಯ ನೆನಪಿಗಾಗಿ ‘ಮಿಲಿಯನ್‌ ಬುಕ್ಸ್‌ ಟು ರೀಡರ್‌’ ಎಂಬ ಯೋಜನೆಯೊಂದಿಗೆ ದೇಶದ ಎಲ್ಲಾ ಗ್ರಾಮಗಳಿಗೆ ಟ್ರಂಕುಗಳಲ್ಲಿ ಭಾರತದ ಪ್ರಾಂತೀಯ ಭಾಷೆ ಮತ್ತು ಇತರ ಭಾಷೆಯ ಪುಸ್ತಕಗಳು, ಪುಸ್ತಕ ಕಿಟ್‌ಗಳನ್ನೂ ಸರಬರಾಜು ಮಾಡುವ ಯೋಜನೆಯನ್ನು ಜಾರಿಗೆ ತರಲಾಗಿದೆ. ಅದು ಇಂದೂ ಚಾಲ್ತಿಯಲ್ಲಿದೆ.

ಭಾರತದ ಅನೇಕ ರಾಜ್ಯಗಳು (ಕರ್ನಾಟಕವೂ ಸೇರಿ) ಗ್ರಂಥಾಲಯ ಕಾಯ್ದೆಗಳನ್ನು ಜಾರಿಗೆ ತಂದು ಗ್ರಾಮೀಣ ಜನರಲ್ಲಿ ಪುಸ್ತಕ ಪ್ರೀತಿ ಮೂಡಿಸಲು ಪ್ರಯತ್ನಿಸಿವೆ. ಕರ್ನಾಟಕದಲ್ಲಿ ಜಿಲ್ಲಾ ಪಂಚಾಯಿತಿ ವ್ಯವಸ್ಥೆಯ ಅನುಷ್ಠಾನದ ನಂತರ ‘ಗ್ರಾಮೀಣ ಗ್ರಂಥಾಲಯ’ಗಳನ್ನು ಸ್ಥಾಪಿಸಲಾಗಿದೆ. ಆದರೆ ಈ ಗ್ರಂಥಾಲಯಗಳನ್ನು ಸ್ಥಾಪಿಸುವಾಗ ಇದ್ದ ಬದ್ಧತೆ ಈಗ ಕಾಣುತ್ತಿಲ್ಲ. ಇಂಥ ಅನೇಕ ಗ್ರಾಮೀಣ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡಗಳಿಲ್ಲ. ಇವುಗಳಿಗೆ ಪತ್ರಿಕೆಗಳ ಖರೀದಿಗಾಗಿ ತಿಂಗಳಿಗೆ ₹ 400 ಮಾತ್ರ ನೀಡಲಾಗುತ್ತಿದೆ. ಪುಸ್ತಕ ಸಂಸ್ಕೃತಿಯನ್ನು ಪೋಷಿಸುವಲ್ಲಿ ಗ್ರಂಥಪಾಲಕರ ಜವಾಬ್ದಾರಿ ಹೆಚ್ಚು ಇದೆ. ಆ ದೃಷ್ಟಿಯಿಂದ ಗ್ರಾಮೀಣ ಗ್ರಂಥಾಲಯಗಳ ಮೇಲ್ವಿಚಾರಕರಿಗೆ ಸೌಲಭ್ಯಗಳನ್ನು ಒದಗಿಸುವುದು ಸಹ ಅಗತ್ಯವಾಗಿದೆ.

ಇಂದು ಎಲ್ಲ ಭಾಷೆಗಳಲ್ಲೂ ಉತ್ತಮ ಗುಣಮಟ್ಟದ ಗ್ರಂಥಗಳು ಪ್ರಕಟವಾಗುತ್ತಿವೆ. ಕನ್ನಡದ ಪ್ರಕಾಶಕರು ಅತ್ಯುತ್ತಮ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಪ್ರತಿವರ್ಷ ಒಂದು ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗುತ್ತವೆ.

ಹೀಗೆ ಪ್ರಕಟಿಸಿದ ಪುಸ್ತಕಗಳು ಓದುಗರ ಕೈ ಸೇರುವ ದಾರಿಗಳು ಎರಡೇ. ಮೊದಲನೆಯದು, ಓದುಗರು ಪುಸ್ತಕಗಳನ್ನು ಕೊಂಡುಕೊಳ್ಳುವುದು. ಇದು ಸ್ವಂತ ಆಸಕ್ತಿಯ ವಿಚಾರ. ಎರಡನೆಯದು ಅನಿವಾರ್ಯ. ಈ ವರ್ಗದಲ್ಲಿ ವಿದ್ಯಾರ್ಥಿಗಳು, ಬರಹಗಾರರು ಹಾಗೂ ಅನೇಕ ಬಗೆಯ ಆಸಕ್ತಿದಾಯಕ ವೃತ್ತಿಗಳವರು ಬರುತ್ತಾರೆ. ಗ್ರಂಥಾಲಯಗಳ ಪಾಲು ಕನಿಷ್ಠ ಎಂಬಂತಾಗಿದೆ.

ಪ್ರಸಿದ್ಧ ನಾಟಕಕಾರ ಷೇಕ್ಸ್‌ಪಿಯರ್‌ನ ಜನ್ಮದಿನದ ಅಂಗವಾಗಿ ಪ್ರತಿವರ್ಷ ಏ. 23ರಂದು ವಿಶ್ವ ಮಟ್ಟದಲ್ಲಿ ‘ಪುಸ್ತಕ ದಿನ’ವನ್ನು ಆಚರಿಸಲಾಗುತ್ತಿದೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಇದನ್ನು ರಾಷ್ಟ್ರೀಯ ಹಬ್ಬದ ರೀತಿಯಲ್ಲಿ ಆಚರಿಸುತ್ತವೆ. ಶಾಲಾ ಮಕ್ಕಳಿಗೆ ಅನೇಕ ಚಟುವಟಿಕೆಗಳನ್ನು ಏರ್ಪಡಿಸಿ ಬಹುಮಾನದ ರೂಪದಲ್ಲಿ ಉಚಿತವಾಗಿ ಪುಸ್ತಕಗಳ ಟೋಕನ್‍ಗಳನ್ನು ಹಂಚಲಾಗುತ್ತದೆ. ಮಕ್ಕಳು ಸಮೀಪದ ಪುಸ್ತಕ ಅಂಗಡಿಗಳಿಗೆ ಹೋಗಿ, ಟೋಕನ್‌ಗಳನ್ನು ಕೊಟ್ಟು ತಮ್ಮ ಆಸಕ್ತಿಯ ಪುಸ್ತಕಗಳನ್ನು ಖರೀದಿಸುತ್ತಾರೆ. ಇಂಥ ಕಾರ್ಯಕ್ರಮಗಳನ್ನು ನಮ್ಮ ದೇಶದಲ್ಲಿ ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿ ಜಾರಿಗೆ ತಂದರೆ ಉಪಯುಕ್ತವಾದೀತು. ಹಾಗೆಯೇ ನಮ್ಮ ಸರ್ಕಾರದಿಂದ ಅನುದಾನ ಪಡೆಯುವ ಅಕಾಡೆಮಿಗಳು, ವಿಶ್ವವಿದ್ಯಾಲಯಗಳು ಪ್ರಕಟಿಸುವ ಪುಸ್ತಕಗಳನ್ನು ಈ ರೀತಿಯಾಗಿ ಓದುಗರಿಗೆ ತಲುಪಿಸಬಹುದು. ಆ ಮೂಲಕ ಮಕ್ಕಳಲ್ಲಿ ಪುಸ್ತಕ ಪ್ರೀತಿಯನ್ನು ಬೆಳೆಸಬಹುದು.

ಮಕ್ಕಳಿಂದ ಹಿಡಿದು ನಮ್ಮಂಥ ಇಳಿ ವಯಸ್ಸಿನವರಿಗೂ ಒಳ್ಳೆಯ ಪುಸ್ತಕಗಳು ಸಂಗಾತಿಗಳಾಗಬೇಕಾಗಿರುವುದು ಇಂದಿನ ಅಗತ್ಯ. ಈ ಬಾರಿಯ ‘ವಿಶ್ವ ಪುಸ್ತಕ ದಿನ’ ನಮ್ಮೆಲ್ಲರಲ್ಲೂ ಪುಸ್ತಕ ಪ್ರೀತಿಯನ್ನು ಉದ್ದೀಪಿಸುವ ದಿನವಾಗಲಿ ಎಂದು ಆಶಿಸೋಣ.

ಲೇಖಕ: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿವೃತ್ತ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT