ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಶ್ರೀಮಂತರ ಸಮಾಜ ಸೇವೆಯ ಅಚ್ಚರಿ

ಅನಾದಿ ಕಾಲದಿಂದಲೂ ದಾನ ಧರ್ಮ ಪರಂಪರೆ ಇರುವ ಭಾರತಕ್ಕೆ ಅಮೆರಿಕದ ದಾನಿಗಳಿಂದ ಪ್ರೇರಣೆ
Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಗುರುಚರಣ್‍ ದಾಸ್‍

ನನ್ನ ಜೀವನದ ಮೇಲೆ 1960ರ ದಶಕದ ಎರಡು ಘಟನೆಗಳು ಗಾಢವಾದ ಪ್ರಭಾವ ಬೀರಿದ್ದವು. 17 ವರ್ಷದವನಾಗಿದ್ದಾಗ, ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣಕ್ಕೆ ನನಗೆ ಶಿಷ್ಯವೇತನ ದೊರೆಯಿತು. ಅಮೆರಿಕದ ಅಜ್ಞಾತ ಕುಟುಂಬವೊಂದು ಶಿಷ್ಯವೇತನದ ಹಣ ನೀಡಿದ್ದರಿಂದಾಗಿ ಮಾತ್ರ ನಾನು ಅಮೆರಿಕಕ್ಕೆ ಹೋಗುವುದು ಸಾಧ್ಯವಾಯಿತು. ಆ ಕುಟುಂಬ ಯಾವುದೆಂದು ನನಗೆ ಗೊತ್ತಿಲ್ಲ, ಮುಂದೆ ಗೊತ್ತಾಗುವುದೂ ಇಲ್ಲ. ಭಾರತವನ್ನು ‘ದರಿದ್ರ ದೇಶ’ ಎಂದು ಪತ್ರಿಕೆಗಳು ಕರೆಯುತ್ತಿದ್ದವು. ಹಾಗಾಗಿ ವಿದೇಶದಲ್ಲಿ ಕಲಿಯುತ್ತಿದ್ದಾಗ ನನಗೆ ಬಹಳ ನಾಚಿಕೆ ಅನಿಸುತ್ತಿತ್ತು. ಭಾರತದ ಜನರನ್ನು ಹಸಿವಿನಿಂದ ರಕ್ಷಿಸುವುದಕ್ಕಾಗಿ ಧಾನ್ಯ ತುಂಬಿದ ಅಮೆರಿಕದ ಹಡಗುಗಳು ಪ್ರತಿ ಹತ್ತು ನಿಮಿಷಕ್ಕೆ ಒಂದರಂತೆ ಭಾರತದ ಬಂದರುಗಳಿಗೆ ಬರುತ್ತಿದ್ದವು. 

ಆದರೆ, ಶೀಘ್ರದಲ್ಲಿಯೇ ಪರಿಸ್ಥಿತಿ ನಂಬಲಾಗದ ರೀತಿಯಲ್ಲಿ ಬದಲಾಯಿತು. ಮೆಕ್ಸಿಕೊದ ಪ್ರಯೋಗಾಲಯವೊಂದರಲ್ಲಿ ಮಾಂತ್ರಿಕವಾದ ಹೈಬ್ರಿಡ್‍ ಗೋಧಿ ತಳಿ ಕಂಡುಹಿಡಿಯಲು ಅಮೆರಿಕದ ವಿಜ್ಞಾನಿ ನಾರ್ಮನ್‍ ಬೋರ್ಲಾಗ್‍ ನೆರವಾದರು. ರಾಕ್‍ಫೆಲ್ಲರ್ ಫೌಂಡೇಷನ್‍ ಈ ಸಂಶೋಧನೆಗೆ ಅನುದಾನ ನೀಡಿತ್ತು. ಭಾರತದಲ್ಲಿ ‘ಹಸಿರು ಕ್ರಾಂತಿ’ಗೆ ಈ ಆವಿಷ್ಕಾರ ನೆರವಾಯಿತು. ಹಲವು ಧಾನ್ಯಗಳನ್ನು ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ಭಾರತಕ್ಕೆ ಇದರಿಂದ ಸಾಧ್ಯವಾಯಿತು. ಲಾಲ್‍ ಬಹದೂರ್ ಶಾಸ್ತ್ರಿ ಅವರ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದ ಸಿ. ಸುಬ್ರಮಣ್ಯಂ ಅವರಿಗೂ ಈ ಕ್ರಾಂತಿಯ ಕೀರ್ತಿಯಲ್ಲಿ ಪಾಲು ಸಲ್ಲಬೇಕು. ಈ ಮಾಂತ್ರಿಕ ತಳಿಯ ಬಿತ್ತನೆ ಬೀಜಗಳನ್ನು ತಕ್ಷಣವೇ ಅವರು ತರಿಸಿಕೊಂಡರು. ಎರಡು ವಿಮಾನ ತುಂಬಾ ಬಂದ ಬಿತ್ತನೆ ಬೀಜಗಳನ್ನು ಪಂಜಾಬ್‍ನಲ್ಲಿ ಅವರು ಬಿತ್ತನೆ ಮಾಡಿಸಿದರು.

ಅಮೆರಿಕದಲ್ಲಿರುವ ಖಾಸಗಿ ವಲಯದ ಸಮಾಜ ಸೇವೆಯ ಶ್ರೇಷ್ಠ ಪರಂಪರೆ ಈ ಎರಡು ಘಟನೆಗಳನ್ನು ಒಂದಾಗಿಸುವ ತಂತು. ವೈಯಕ್ತಿಕ ಮಟ್ಟದಲ್ಲಿ, ಅಜ್ಞಾತ ಕುಟುಂಬವೊಂದು ನೀಡಿದ ದೇಣಿಗೆಯು ಜಗತ್ತಿನ ಅತ್ಯುತ್ತಮ ಶಿಕ್ಷಣ ಪಡೆಯಲು ನನಗೆ ಸಾಧ್ಯವಾಗುವಂತೆ ಮಾಡಿತು. ರಾಷ್ಟ್ರ ಮಟ್ಟದಲ್ಲಿ ನೋಡುವುದಾದರೆ, ರಾಕ್‍ಫೆಲ್ಲರ್ ಕುಟುಂಬದ ಸಮಾಜ ಸೇವೆಯಿಂದಾದ ವೈಜ್ಞಾನಿಕ ಆವಿಷ್ಕಾರ ಭಾರತಕ್ಕೆ ಸಮೃದ್ಧಿ ತಂದಿತು. ಭಾರತದಲ್ಲಿಯೂ ಇಂತಹುದೇ ಬೆಳವಣಿಗೆಗಳು ನಡೆಯುತ್ತಿವೆ ಎಂಬುದನ್ನು ಹೇಳುವುದು ಹಳೆಯ ಎರಡು ಘಟನೆಗಳನ್ನು ನೆನಪು ಮಾಡಿಕೊಂಡದ್ದರ ಹಿಂದಿನ ಉದ್ದೇಶ. ಸದ್ದಿಲ್ಲದ, ಸಮಾಜ ಸೇವಾ ಕ್ರಾಂತಿಯೊಂದು ಭಾರತದಲ್ಲಿ ರೂಪುಗೊಳ್ಳುತ್ತಿದೆ.

ಕಳೆದ ಐದು ವರ್ಷಗಳಲ್ಲಿ, ವಿದೇಶಿ ದೇಣಿಗೆ ಅಥವಾ ಉದ್ಯಮ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್‍) ಅಡಿಯಲ್ಲಿ ಉದ್ಯಮ ಸಂಸ್ಥೆಗಳು ನೀಡುವ ದೇಣಿಗೆ ಅಥವಾ ಕಲ್ಯಾಣ ಕಾರ್ಯಕ್ರಮಗಳಿಗೆ ಸರ್ಕಾರ ನೀಡುವ ಅನುದಾನಕ್ಕಿಂತ ಜನರು ವೈಯಕ್ತಿಕವಾಗಿ ನೀಡುವ ದೇಣಿಗೆ ಹೆಚ್ಚಿನ ವೇಗದಲ್ಲಿ ಬೆಳೆದಿದೆ ಎಂದು ‘ಬೈನ್‍–ದಾಸ್ರಾ ಭಾರತ ಸಮಾಜ ಸೇವೆ ವರದಿ 2017’ ಹೇಳಿದೆ. ಈ ದೇಣಿಗೆಯು ಆರು ಪಟ್ಟು ಬೆಳೆದಿದೆ. 2011ರಲ್ಲಿ ₹6,000 ಕೋಟಿಯಷ್ಟಿದ್ದ ಈ ಮೊತ್ತ 2016ರಲ್ಲಿ ₹36 ಸಾವಿರ ಕೋಟಿಗೆ ಏರಿದೆ. ಈ ಪ್ರವೃತ್ತಿ ಹೀಗೆಯೇ ಮುಂದುವರಿದರೆ ಖಾಸಗಿ ಕ್ಷೇತ್ರದ ಸಮಾಜ ಸೇವೆಯು ಶಿಕ್ಷಣ, ಆರೋಗ್ಯ ಮತ್ತು ಬಡತನ ನಿರ್ಮೂಲನೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಇದು ಆಶ್ಚರ್ಯಕರ ಸುದ್ದಿ, ಜತೆಗೆ ಹಲವು ಮಿಥ್ಯೆಗಳನ್ನೂ ಇದು ಒಡೆದು ಹಾಕುತ್ತದೆ. ಭಾರತದ ಶ್ರೀಮಂತ ವ್ಯಾಪಾರಿಗಳು ಸಮಾಜ ಸೇವೆ ಮಾಡುವುದಿಲ್ಲ ಮತ್ತು ಅವರು ಹಣ ಕೊಡುವುದೇ ಇದ್ದರೆ ಅದು ದೇವರನ್ನು ಒಲಿಸಿಕೊಳ್ಳುವುದಕ್ಕಾಗಿ ದೇವಸ್ಥಾನಕ್ಕೆ ಎಂಬುದು ಅಂತಹ ಒಂದು ಮಿಥ್ಯೆ. ಭಾರತೀಯರಲ್ಲಿ ಸಂಪತ್ತು ಸಂಗ್ರಹವಾಗತೊಡಗಿದ್ದೇ ಇತ್ತೀಚಿನ ವಿದ್ಯಮಾನ ಎಂಬುದನ್ನು ನಾವು ನೆನಪಿನಲ್ಲಿ ಇರಿಸಿಕೊಳ್ಳಬೇಕು- 1991ರಲ್ಲಿ, ಶೇ 97ರಷ್ಟು ತೆರಿಗೆಯ ‘ಲೈಸೆನ್ಸ್ ರಾಜ್‍’ ತೊಲಗಿದ ಬಳಿಕವೇ ಜನರಲ್ಲಿ ಹಣ ಶೇಖರವಾಗತೊಡಗಿತು. ಎರಡನೆಯದಾಗಿ, ಕುಟುಂಬದಲ್ಲಿ ಸಂಪತ್ತು ಸಂಗ್ರಹವಾಗತೊಡಗಿ ಕೆಲವು ತಲೆಮಾರುಗಳ ಬಳಿಕವೇ ಸಮಾಜ ಸೇವೆ ಆರಂಭವಾಗುತ್ತದೆ ಎಂಬುದು ಎರಡನೇ ಮಿಥ್ಯೆ. ಹಣ ಗಳಿಸುವ ಮೊದಲ ತಲೆಮಾರು ಅದನ್ನು ಆಡಂಬರ ಪ್ರದರ್ಶನಕ್ಕೆ ಬಳಸಿಕೊಳ್ಳುತ್ತದೆ. ಲಕ್ಷ್ಮಿ ಮಿತ್ತಲ್‍ ಇತ್ತೀಚೆಗೆ ಫ್ರಾನ್ಸ್‌ನಲ್ಲಿ ತಮ್ಮ ಮಗಳ ಮದುವೆಯನ್ನು ವೈಭವೋಪೇತವಾಗಿ ಮಾಡಿದ್ದು ಇದಕ್ಕೆ ಒಂದು ಉದಾಹರಣೆ. ಎರಡನೇ ತಲೆಮಾರಿಗೆ ಹಣ ಬೇಕಾಗಿರುವುದಿಲ್ಲ, ಬದಲಿಗೆ ಅವರು ಅಧಿಕಾರದ ಹಿಂದೆ ಹೋಗುತ್ತಾರೆ. ಕೆನಡಿ ಕುಟುಂಬ ಮತ್ತು ರಾಕ್‍ಫೆಲ್ಲರ್ ಕುಟುಂಬ ರಾಜಕಾರಣಕ್ಕೆ ಯಾಕೆ ಬಂದಿತು ಎಂಬುದನ್ನು ಈ ಅಂಶ ಸಮರ್ಥಿಸುತ್ತದೆ. ಹಣ ಮತ್ತು ಅಧಿಕಾರದ ಕುಟುಂಬದಲ್ಲಿ ಹುಟ್ಟುವ ಮೂರನೇ ತಲೆಮಾರು ಗೌರವ ಗಳಿಸುವುದರ ಹಿಂದೆ ಬೀಳುತ್ತದೆ. ಹಾಗಾಗಿ ಅವರು ಸಮಾಜಸೇವೆ ಮತ್ತು ಕಲೆಗೆ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ.

ಜರ್ಮನಿಯ ನೊಬೆಲ್‍ ಪ್ರಶಸ್ತಿ ಪುರಸ್ಕೃತ ಲೇಖಕ ಥಾಮಸ್‍ ಮನ್‍ ಇದನ್ನು ತನ್ನ ಕಾದಂಬರಿ 'ಬಡನ್‍ಬ್ರೂಕ್ಸ್‌ 'ನಲ್ಲಿ ಚಿತ್ರಿಸುತ್ತಾನೆ. ಉದ್ಯಮಿಗಳ ಕುಟುಂಬದ ಕತೆ ಹೇಳುವ ಇದು ನನ್ನ ನೆಚ್ಚಿನ ಕಾದಂಬರಿ. ಇದು ಮೂರು ತಲೆಮಾರುಗಳ ಕತೆ. ಮೊದಲ ತಲೆಮಾರಿನ ಕೊಳಕನಾದ ಆದರೆ ಚತುರನಾದ ವ್ಯಕ್ತಿ ಭಾರಿ ಹಣ ಗಳಿಸುತ್ತಾನೆ. ಆತನ ಮಗ ಸೆನೆಟರ್ ಆಗುತ್ತಾನೆ. ಆದರೆ ಆತನ ಮೊಮ್ಮಗ, ದೈಹಿಕವಾಗಿ ದುರ್ಬಲನಾದ, ಸೌಂದರ್ಯೋಪಾಸಕ ವ್ಯಕ್ತಿ ತನ್ನ ಜೀವನವನ್ನು ಸಂಗೀತಕ್ಕೆ ಮುಡಿಪಾಗಿಡುತ್ತಾನೆ. ಆದರೆ, ಯಾವುದೇ ನಿಯಮ ಅಥವಾ ಪರಂಪರೆಯಲ್ಲಿಯೂ ಅದನ್ನು ಮೀರಿದ್ದು ನಡೆಯುತ್ತಲೇ ಇರುತ್ತದೆ. ಅಮೆರಿಕದಲ್ಲಿ ನಿಸರ್ಗವನ್ನು ಕೊಳ್ಳೆ ಹೊಡೆದ 19ನೇ ಶತಮಾನದ ಕೊನೆ ಮತ್ತು 20ನೇ ಶತಮಾನದ ಶುರುವಿನ ಯುಗದಲ್ಲಿ ಉಕ್ಕು ಉದ್ಯಮದ ಅನಭಿಷಿಕ್ತ ದೊರೆಯಾಗಿದ್ದ ಆ್ಯಂಡ್ರೂ ಕಾರ್ನೆಗಿ ತಮ್ಮ ಸಂಪತ್ತಿನ ಶೇಕಡ 90ರಷ್ಟನ್ನು ಅಮೆರಿಕದ ನಗರಗಳಲ್ಲಿ ಸಾರ್ವಜನಿಕ ಗ್ರಂಥಾಲಯ ನಿರ್ಮಾಣಕ್ಕಾಗಿ ದಾನ ಮಾಡಿದರು. ‘ಶ್ರೀಮಂತನಾಗಿ ಸಾಯುವ ವ್ಯಕ್ತಿ ಕಳಂಕ ಹೊತ್ತುಕೊಂಡಿರುತ್ತಾನೆ’ ಎಂಬುದು ಕಾರ್ನೆಗಿಯ ಬಹಳ ಪ್ರಸಿದ್ಧ ಮಾತು.

ಈಗ ಪರಿಸ್ಥಿತಿ ಬದಲಾಗಿದೆ. ಈಗಿನ ಉದ್ಯಮಿಗಳು ತಮ್ಮ ಜೀವಿತಾವಧಿಯಲ್ಲಿಯೇ ಸಾಕಷ್ಟು ದೇಣಿಗೆ ನೀಡುತ್ತಿದ್ದಾರೆ. ಈಗಿನ ಜ್ಞಾನ ಆಧರಿತ ಅರ್ಥವ್ಯವಸ್ಥೆಯಲ್ಲಿ ಹಣ ಗಳಿಸುವುದು ಬಹಳ ತ್ವರಿತವಾಗಿ ನಡೆಯುತ್ತದೆ. ಹಾಗಾಗಿ ಸಮಾಜಕ್ಕಾಗಿ ನೀಡುವ ದೇಣಿಗೆಯನ್ನೂ ಬೇಗನೆ ನೀಡಲಾಗುತ್ತದೆ. ಚಕ್‍ ಫೀನಿಯಿಂದ ಪ್ರೇರಿತರಾದ ಬಿಲ್‍ ಗೇಟ್ಸ್‌, ಮೂರು ತಲೆಮಾರಿನ ಸರಪಣಿಯನ್ನು ಮುರಿದು ತಮ್ಮ ಜೀವಿತಾವಧಿಯಲ್ಲಿಯೇ ತಮ್ಮ ಹಣವನ್ನು ಸಮಾಜ ಸೇವೆಗಾಗಿ ದಾನ ಮಾಡಿದರು. ಅವರನ್ನು ವಾರನ್‍ ಬಫೆಟ್‍ ಅನುಸರಿಸಿದರು. ಶ್ರೀಮಂತ ಯುವಜನರಿಗೆ ಇವರು ಈಗ ಮಾದರಿಯಾಗಿದ್ದಾರೆ. ಸಂಗ್ರಹಿಸಿದ ಸಂಪತ್ತಿನ ಅರ್ಧದಷ್ಟನ್ನು ಜೀವಿತಾವಧಿಯಲ್ಲಿಯೇ ದಾನ ಮಾಡುವ ತಮ್ಮ ‘ದಾನ ವಾಗ್ದಾನ’ (ಗಿವಿಂಗ್‍ ಪ್ಲೆಜ್‍) ಮೂಲಕ ಯುವ ಉದ್ಯಮಿಗಳಿಗೆ ಸ್ಫೂರ್ತಿಯಾಗಿದ್ದಾರೆ.

ಅಜೀಂ ಪ್ರೇಮ್‍ಜಿ, ನಿಲೇಕಣಿ ಕುಟುಂಬ, ಶಿವ ನಾಡಾರ್, ಸುನಿಲ್‍ ಮಿತ್ತಲ್‍, ಅಶಿಷ್‍ ಧವನ್‍ ಮತ್ತು ಇತರ ಹಲವರಿಗೆ ಇವರು ಪ್ರೇರಣೆಯಾಗಿದ್ದಾರೆ. ಚೆಕ್‍ ಬರೆದು ಹಣ ಕೊಡುವ ಕೆಲಸವನ್ನಷ್ಟೇ ಇವರು ಮಾಡುತ್ತಿಲ್ಲ, ಬದಲಿಗೆ ಉದ್ಯಮಕ್ಕೆ ತಂದ ಅದೇ ಉತ್ಸಾಹವನ್ನು ಸಮಾಜ ಸೇವೆಗೂ ತುಂಬುತ್ತಿದ್ದಾರೆ. ಧವನ್‍ ಅವರು ಸಮಾನ ಮನಸ್ಕರ ಜತೆ ಸೇರಿಕೊಂಡು ಜಾಗತಿಕ ಗುಣಮಟ್ಟದ ಕಲಾ ವಿಶ್ವವಿದ್ಯಾಲಯ ‘ಅಶೋಕಾ’ವನ್ನು ಸ್ಥಾಪಿಸಿದ್ದಾರೆ. ಅಶೋಕಾದಲ್ಲಿ ಪ್ರವೇಶ ದೊರೆತರೆ ನಿಮ್ಮ ಶಿಕ್ಷಣ ವೆಚ್ಚಕ್ಕಾಗಿ ಅಜ್ಞಾತ ದಾನಿಯೊಬ್ಬರಿಂದ ಶಿಷ್ಯವೇತನ ಖಾತರಿ. ನಾಡಾರ್ ಕುಟುಂಬ ಜಾಗತಿಕ ಮಟ್ಟದ ವಸ್ತು ಸಂಗ್ರಹಾಲಯವೊಂದನ್ನು ರೂಪಿಸುತ್ತಿದೆ.

ಭಾರತದ ಎಡಪಂಥೀಯರು ಹಬ್ಬಿಸಿದ ಮತ್ತೊಂದು ಮಿಥ್ಯೆಯನ್ನು ಬೈನ್‍ ವರದಿ ಬಯಲಾಗಿಸಿದೆ. ಭಾರತದ ಉದ್ಯಮಿಗಳು ಹೃದಯಹೀನ ಜಿಪುಣರು ಎಂಬುದಾಗಿತ್ತು ಈ ಮಿಥ್ಯೆ. ಪಂಚತಂತ್ರದ ಆರಂಭದಲ್ಲಿಯೇ ಇರುವ ಸುಂದರವಾದ ಕತೆ ಭಾರತದಲ್ಲಿ ಅನಾದಿ ಕಾಲದಿಂದಲೂ ದಾನದ ಪದ್ಧತಿ ಇತ್ತು ಎಂಬುದನ್ನು ಹೇಳುತ್ತದೆ. ಜೀವನದಲ್ಲಿ ಯಶಸ್ಸು ದಕ್ಕಬೇಕಾದರೆ ನಾಲ್ಕು ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕು ಎಂದು ಹಿರಿಯ ವ್ಯಾಪಾರಿಯು ಕಿರಿಯ ವ್ಯಾಪಾರಿಗೆ ಹೇಳುತ್ತಾನೆ. ಮೊದಲನೆಯದು, ಹಣ ಮಾಡುವ ಕೌಶಲವಾದರೆ ಎರಡನೆಯದು ಅದನ್ನು ಸಂರಕ್ಷಿಸುವ ಕಲೆ. ಸಂರಕ್ಷಿಸುವುದು ಎಂದರೆ ನೆಲಹಾಸಿನಡಿಯಲ್ಲಿ ಹೂತಿಡುವುದಲ್ಲ, ಬದಲಿಗೆ ಆ ಹಣದಿಂದ ಲಾಭ ಗಳಿಸುವುದು. ಮೂರನೆಯದಾಗಿ ಹಣ ಖರ್ಚು ಮಾಡಲು ಗೊತ್ತಿರಬೇಕು. ಖರ್ಚು ಮಾಡುವುದೆಂದರೆ ದುಂದು ವೆಚ್ಚವೂ ಅಲ್ಲ, ಜಿಪುಣತನವೂ ಅಲ್ಲ. ಕೊನೆಯದಾಗಿ, ದಾನ ಮಾಡುವ ಕೌಶಲ ರೂಢಿಸಿಕೊಳ್ಳಬೇಕು. ದಾನ ಮಾಡುವುದು ಒಂದು ಕಲೆ.

ದೊಡ್ಡ ದೊಡ್ಡ ಶ್ರೀಮಂತರಿಗೆ ಅವರದ್ದೇ ಆದ ಸಮಸ್ಯೆಗಳು ಇರುತ್ತವೆ. ತಮಗೆ ಆಸಕ್ತಿದಾಯಕ ಅನಿಸಿದ್ದನ್ನು ಕಲಿಯಲು ಬೇಕಾದಷ್ಟು ಹಣವನ್ನು ಮಕ್ಕಳಿಗೆ ಕೊಡಲು ಅವರು ಬಯಸುತ್ತಾರೆ. ಆದರೆ ಮಕ್ಕಳು ಏನೂ ಮಾಡದೆ ಸುಮ್ಮನೆ ಇರುವಷ್ಟು ಹಣ ನೀಡಲು ಬಯಸುವುದಿಲ್ಲ. ವಂಶಪಾರಂಪರ್ಯವಾಗಿ ದೊಡ್ಡ ಮೊತ್ತದ ಹಣ ಬಂದರೆ, ಅದರ ಜತೆಗೆ ಸೋಮಾರಿತನ ಮತ್ತು ವ್ಯರ್ಥ ಜೀವನದ ಶಾಪವೂ ಇರುತ್ತದೆ. ಹಾಗಾಗಿಯೇ, ಕೆಲಸ ಮಾಡುವುದರ ಮಹತ್ವವನ್ನು ಮಕ್ಕಳು ಕಲಿತುಕೊಳ್ಳಬೇಕು; ಹಾಗೆಯೇ ಸ್ವತಂತ್ರವಾಗಿ ಜೀವನ ರೂಪಿಸಿಕೊಳ್ಳುವ ಅತ್ಯದ್ಭುತ ಭಾವನೆ ಅವರಿಗೆ ದೊರೆಯದಿರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಶ್ರೀಮಂತರು ಸಮತೋಲನ ಸಾಧಿಸುತ್ತಾರೆ. ‘ಕೆಲಸ ಮಾಡುವುದು, ಉಳಿತಾಯ ಮಾಡುವುದು ಮತ್ತು ಕೊಡುವುದನ್ನು ನನಗೆ ಮೊದಲಿನಿಂದಲೇ ಕಲಿಸಿದ್ದರು’ ಎಂದು ಅಮೆರಿಕದ ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಜಾನ್‍ ಡಿ. ರಾಕ್‍ಫೆಲ್ಲರ್ ಹೇಳಿದ್ದರು.

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತವು 130ರಷ್ಟು ಕೆಳಗಿನ ಸ್ಥಾನದಲ್ಲಿದೆ. ಹಾಗಾಗಿ, ಬಡವರ ಜೀವನವನ್ನು ಸುಧಾರಿಸಲು ಶ್ರೀಮಂತರು ಮಾಡಬಹುದಾದ ಕೆಲಸ ಬಹಳಷ್ಟಿದೆ. ಸರ್ಕಾರದ ಪಾತ್ರಕ್ಕೆ ಇವರು ಬದಲಿ ಆಗುವುದು ಸಾಧ‍್ಯವಿಲ್ಲ. ಆದರೆ, ಅತ್ಯುತ್ತಮ ಸ್ವಯಂ ಸೇವಾ ಸಂಸ್ಥೆಗಳಿಗೆ (ಎನ್‍ಜಿಒ) ಬುದ್ಧಿವಂತಿಕೆಯಿಂದ ಹಣ ನೀಡಿ, ಈ ಎನ್‍ಜಿಒಗಳು ಹಣವನ್ನು ಪರಿಣಾಮಕಾರಿಯಾಗಿ ಬಳಸುತ್ತವೆ ಎಂಬುದನ್ನು ಖಚಿತಪಡಿಸಿಕೊಂಡರೆ ಬಹಳ ದೊಡ್ಡ ವ್ಯತ್ಯಾಸವನ್ನು ತರುವುದಕ್ಕೆ ಸಾಧ್ಯ ಇದೆ.

ಉದ್ಯಮ ಸಾಮಾಜಿಕ ಹೊಣೆಗಾರಿಕೆ ಕಾನೂನಿನ (ಉದ್ಯಮ ಸಂಸ್ಥೆಗಳು ನಿರ್ದಿಷ್ಟ ಮೊತ್ತವನ್ನು ಸಮಾಜ ಸೇವೆಗೆ ನೀಡಲೇಬೇಕು ಎಂಬ ನಿಯಮ) ಮೂಲಕ ಹಲವು ಕಂಪನಿಗಳು ಮೌಲಿಕ ಕೆಲಸ ಮಾಡುತ್ತಿವೆ. ಸಮಾಜ ಸೇವಾ ಕೆಲಸಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವುದು ಸಾಧ್ಯವಾಗುವಂತೆ ಎನ್‍ಜಿಒ ಸಿಬ್ಬಂದಿಯ ಕೌಶಲ ಅಭಿವೃದ್ಧಿಗೆ ಸ್ವಲ್ಪ ಸಮಯ ಕೊಡಿ ಎಂದು ತಮ್ಮ ಉದ್ಯೋಗಿಗಳನ್ನು ವಿನಂತಿಸುವ ಕೆಲವು ಕಂಪನಿಗಳೂ ಇವೆ. ಇದು ಬಹಳ ಉತ್ತಮವಾದ ಕೆಲಸವೇ ಆಗಿದೆ. ಸಮಾಜ ಸೇವೆ, ದಾನ ಧರ್ಮ, ದೇಣಿಗೆ ಎಂಬ ಯಾವ ಹೆಸರಿನಲ್ಲಾದರೂ ಕರೆಯಿರಿ, ಅಮೆರಿಕದ ನಿಜಕ್ಕೂ ಅತ್ಯದ್ಭುತ ಪರಂಪರೆಯಿಂದ ಭಾರತೀಯರು ಇನ್ನೂ ಸಾಕಷ್ಟು ಕಲಿಯುವುದಕ್ಕೆ ಅವಕಾಶ ಇದೆ.

ಲೇಖಕ: ಪ್ರಾಕ್ಟರ್ ಅಂಡ್ ಗ್ಯಾಂಬಲ್ ಇಂಡಿಯಾದ ಸಿಇಒ ಆಗಿದ್ದವರು. ‘ಇಂಡಿಯಾ ಅನ್‌ಬೌಂಡ್’ ಸೇರಿದಂತೆ ಹಲವು ಪುಸ್ತಕಗಳ ಲೇಖಕ ಹಾಗೂ ಅಂಕಣಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT