ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗೆ ಗೊಬ್ಬರವಾಗಿ ಹೊಂಗೆ ಹೂ ಬಳಕೆ

ಸಾಂಪ್ರದಾಯಿಕ ಕೃಷಿ ವಿಧಾನವನ್ನು ಬಿಟ್ಟು ಕೊಡದ ರೈತರು
Last Updated 20 ಏಪ್ರಿಲ್ 2018, 8:58 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಹೊಂಗೆ ಮರಗಳು ಹೂಬಿಟ್ಟು ಕಂಗೊಳಿಸುತ್ತಿವೆ. ಹೊಂಗೆ ಹೂವನ್ನು ತೋಟದ ಬೆಳೆಗಳಿಗೆ ಮೇಲು ಗೊಬ್ಬರವಾಗಿ ನೀಡುವ ಸಾಂಪ್ರದಾಯಿಕ ಕೃಷಿ ವಿಧಾನ ಹೆಚ್ಚಿದೆ.

ಕೃಷಿ ಕ್ಷೇತ್ರಕ್ಕೆ ಹೊಂಗೆ ಮರದ ಕೊಡುಗೆ ಅಪಾರ. ಸುರುಗು, ಹೂವು, ಹಸಿರೆಲೆ, ಬೀಜ, ಹೊಟ್ಟು ಹೀಗೆ ಎಲ್ಲವೂ ಗೊಬ್ಬರವಾಗಿ ಬಳಸಲಾಗುತ್ತದೆ. ಆದ್ದರಿಂದಲೆ ಹಿರಿಯರು ಹೊಂಗೆ ತೋಪುಗಳನ್ನು ಬೆಳೆಸುತ್ತಿದ್ದರು. ಗ್ರಾಮದ ಪ್ರತಿ ಕೃಷಿಕ ಕುಟುಂಬಕ್ಕೂ ಒಂದು ಅಥವಾ ಒಂದಕ್ಕಿಂತ ಹೆಚ್ಚು ಸಂಖ್ಯೆಯ ಹೊಂಗೆ ತೋಪುಗಳು ಇರುತ್ತಿದ್ದವು.

ಬೇಸಿಗೆಯಲ್ಲಿ ಪುರುಷರು ಹೊಂಗೆ ಮರಗಳ ಕೆಳಗೆ ಬೆಳೆದ ಮುಳ್ಳಿನ ಗಿಡಗಳನ್ನು ಕತ್ತರಿಸಿ ಹೊರಗೆ ಹಾಕಿದರೆ, ಮಹಿಳೆಯರು ಬಂದರಿ ಪೊರಕೆ ಹಿಡಿದು ಉದುರಿದ ತರಗೆಲೆ ಗುಡಿಸಿ ರಾಶಿ ಮಾಡುತ್ತಿದ್ದರು. ಮತ್ತೆ ಹೂವನ್ನು ಗುಡಿಸಿ ತಿಪ್ಪೆಗೆ ಸಾಗಿಸುತ್ತಿದ್ದರು. ಬದನೆ, ಮೆಣಸಿನಕಾಯಿ, ಹಗಲ ಮುಂತಾದ ಗಿಡಗಳ ಪಾತಿಯಲ್ಲಿ ಹೂವನ್ನು ಹರಡಿ ನೀರು ಹಾಕುತ್ತಿದ್ದರು. ಬೆಳೆಯನ್ನು ಹುಲುಸಾಗಿ ಬೆಳೆಯುತ್ತಿತ್ತು. ವ್ಯಾಪಕವಾಗಿ ಅಲ್ಲದಿದ್ದರೂ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಈ ಕೃಷಿ ವಿಧಾನ ಇನ್ನೂ ಜೀವಂತವಾಗಿದೆ.

ಹೊಂಗಿ ಹೂವು ಉದುರುವ ಕಾಲದಲ್ಲಿ ಬೆಳಿಗ್ಗೆ ಹೂವಿಗೆ ಕಾವಲು ಹೋಗುತ್ತಿದ್ದುದೂ ಉಂಟು. ಇನ್ನೂ ಬೆಳಗಾಗುವ ಮೊದಲೇ ಹೊಂಗೆ ಹೂವು ಕದಿಯಲು ಮುಂದಾಗಿ ಸಿಕ್ಕಿಬಿದ್ದು, ಬರಲು ಪೊರಕೆ ಏಟು ತಿಂದಿರುವ ಉದಾಹರಣೆಗಳೂ ಇವೆ. ಇದು ಕೃಷಿಕರು ಹೊಂಗೆ ಹೂವಿಗೆ ನೀಡುತ್ತಿದ್ದ ಮಹತ್ವವನ್ನು ತಿಳಿಸುತ್ತದೆ. ಹಾಗೆಯೇ ಹೂವಿನ ಫಲವತ್ತತೆಯ ಅರಿವಾಗುತ್ತದೆ. ಬೆಳೆಯೂ ಸಮೃದ್ಧವಾಗಿ ಇರುತ್ತದೆ.

ಹೊಂಗೆ ಸೊಪ್ಪನ್ನು ಕತ್ತರಿಸಿ ಕೆಸರು ಗದ್ದೆಯಲ್ಲಿ ತುಳಿದು ಭತ್ತ ಬಿತ್ತುತ್ತಿದ್ದರು. ಪೈರು ನಾಟಿ ಮಾಡುತ್ತಿದ್ದರು. ಆಗ ಇಂದಿನಂತೆ ರಾಸಾಯನಿಕ ಗೊಬ್ಬರ ಬಳಸುತ್ತಿರಲಿಲ್ಲ. ತಿಪ್ಪೆಗೊಬ್ಬರಕ್ಕೆ ಹೆಚ್ಚಿನ ಆದ್ಯತೆ ಇತ್ತು. ರೈತ ಕುಟುಂಬಗಳ ಸದಸ್ಯರು ಹಿರಿಯರು ಕಿರಿಯರೆನ್ನದೆ ಬೆಳಿಗ್ಗೆ ಬಯಲಿಗೆ ಹೋಗಿ ಹೊಂಗೆ ಸುರುಗು, ಸಗಣಿ ಅಥವಾ ಸೊಪ್ಪು ಸದೆ ತಂದು ತಿಪ್ಪೆಗೆ ಹಾಕುತ್ತಿದ್ದರು. ತಿಪ್ಪೆ ಬೆಳೆದಷ್ಟೂ ಕೃಷಿ ಉತ್ಪನ್ನ ಹೆಚ್ಚುತ್ತದೆ ಎಂಬ ನಂಬಿಕೆ ಕೃಷಿಕರಲ್ಲಿತ್ತು.

ಯೂರಿಯಾ ರಸಗೊಬ್ಬರದಿಂದ ಭೂಮಿ ಬರಡಾಗುತ್ತದೆ ಎಂದು ಹೆಚ್ಚಿನ ರೈತರು ಬಳಸಲು ಮುಂದಾಗಲಿಲ್ಲ. ತಿಪ್ಪೆ ಗೊಬ್ಬರ ಬಳಕೆ ಕಡಿಮೆಯಾಗಲಿಲ್ಲ. ಆದರೆ ಕೆಲವರು ಯೂರಿಯಾ ಬಳಸಿ ಅಧಿಕ ಇಳುವರಿ ಪಡೆದ ಪರಿ ಕಂಡ ರೈತರು ನಿಧಾನವಾಗಿ ಯೂರಿಯಾಗೆ ಶರಣರಾದರು.

ಆಮೇಲೆ ಹಲವು ಬಗೆಯ ರಾಸಾಯನಿಕ ಗೊಬ್ಬರಗಳು ಹಾಗೂ ಸಸ್ಯವರ್ಧಕ ಟಾನಿಕ್‌ಗಳು ಮಾರುಕಟ್ಟೆಗೆ ಬಂದವು. ಅವುಗಳ ಭರಾಟೆಯಲ್ಲಿ ತಿಪ್ಪೆಗೊಬ್ಬರ ಮಹತ್ವ ಕಳೆದುಕೊಂಡಿತು. ಮೂಟೆ ಗೊಬ್ಬರ ಹೊಲ, ಗದ್ದೆ, ತೋಟಗಳ ಶಕ್ತಿಯ ಸಾಧನವಾಯಿತು. ಉತ್ತಮ ಫಲಿತಾಂಶವೂ ಪಡೆಯಲು ಸಾಧ್ಯವಾಯಿತು.

ರೈತರು ಗೊಬ್ಬರದ ಮುಖ್ಯ ಮೂಲವಾಗಿದ್ದ ಹೊಂಗೆ ತೋಪುಗಳನ್ನು ಇಟ್ಟಿಗೆ ಸುಡಲು ಹಾಗೂ ಉರುವಲಿಗಾಗಿ ಮಾರಿದರು. ಆ ಜಮೀನಲ್ಲಿ ಮಾವು ಬೆಳೆಯತೊಡಗಿದರು. ನೀರಿನ ಆಸರೆ ಇದ್ದವರು ಟೊಮೆಟೊ ಬೆಳೆಯಲು ಬಳಸಿಕೊಂಡರು. ಹೊಂಗೆ ಮರದ ಉಪಯೋಗ ಕೇವಲ ಗೊಬ್ಬರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಕೃಷಿ ಚಟುವಟಿಕೆ ಕೈಗೊಳ್ಳಲು ಅಗತ್ಯವಾದ ನೇಗಿಲು, ನೇಗಿಲಿಗೆ ಮೇಡಿ, ಕಳೆ ತೆಗೆಯಲು ಬೇಕಾದ ವರಾರಿ ಕೋಲು ಮುಂತಾದ ಉಪಕರಣಗಳನ್ನು ಹೊಂಗೆ ಮರದ ಕೊಂಬೆಗಳಿಂದ ತಯಾರಿಸುತ್ತಿದ್ದರು. ಇಷ್ಟೆಲ್ಲಾ ಪ್ರಯೋಜನಕಾರಿಯಾಗಿದ್ದ ಹೊಂಗೆ ಕೊಡಲಿಗೆ ಆಹುತಿಯಾದದ್ದು ಬೇಸರದ ಸಂಗತಿ.

ಇಷ್ಟಾದರೂ ಗ್ರಾಮೀಣ ಪ್ರದೇಶದಲ್ಲಿ ಹೊಂಗೆ ಮರಗಳು ಇನ್ನೂ ಜೀವಂತವಾಗಿವೆ. ಕೆಲವರಾದರೂ ಅದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂಬುದು ಸಂತೋಷಕರ ಸಂಗತಿಯಾಗಿದೆ.

ಆರ್‌.ಚೌಡರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT