ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ: 3 ಹೊಸ ಮುಖಗಳಿಗೆ ಅವಕಾಶ

ಹಾಸನ, ಬೇಲೂರು, ಸಕಲೇಶಪುರ ಕ್ಷೇತ್ರಕ್ಕೆ ಘೋಷಣೆ ಇಲ್ಲ
Last Updated 21 ಏಪ್ರಿಲ್ 2018, 8:45 IST
ಅಕ್ಷರ ಗಾತ್ರ

ಹಾಸನ: ಬಿಜೆಪಿ ಬಿಡುಗಡೆ ಮಾಡಿದ ಮೂರನೇ ಪಟ್ಟಿಯಲ್ಲಿ ಜಿಲ್ಲೆಯ ಹೊಳೆನರಸೀಪುರ, ಅರಸೀಕೆರೆ, ಶ್ರವಣಬೆಳಗೊಳ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ. ಉಳಿದಂತೆ ಬೇಲೂರು, ಸಕಲೇಶಪುರ ಹಾಗೂ ಹಾಸನ ಕ್ಷೇತ್ರಗಳಿಗೆ ಹೆಸರು ಪ್ರಕಟಿಸದ ಕಾರಣ ಗೊಂದಲ ಮುಂದುವರಿದಿದೆ.

ಹೊಳೆನರಸೀಪುರಕ್ಕೆ ಯುವ ಮುಖಂಡ ಎಂ.ಎನ್‌.ರಾಜುಗೌಡ, ಶ್ರವಣಬೆಳಗೊಳಕ್ಕೆ ಬಿಜಪಿ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಶಿವನಂಜೇಗೌಡ ಹಾಗೂ ಅರಸೀಕೆರೆ ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ ಅವರ ಪುತ್ರ ಡಾ.ಅರುಣ್‌ ಸೋಮಣ್ಣ ಅವರನ್ನು ಕಣಕ್ಕಿಳಿಸಲಾಗುತ್ತಿದೆ. ಈ ಬಾರಿ ಮೂವರು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.

ಅರಸೀಕೆರೆ ಕ್ಷೇತ್ರದಲ್ಲಿ ಸ್ಥಳೀಯರ ವಿರೋಧದ ನಡುವೆಯೂ ಹೊರಗಿನವ ರಾದ ಸೋಮಣ್ಣ ಅವರ ಪುತ್ರ ಡಾ. ಅರುಣ್‌ಗೆ ಮಣೆ ಹಾಕಲಾಗಿದೆ. ಮಾಜಿ ಶಾಸಕರಾದ ಎ.ಎಸ್‌.ಬಸವರಾಜ್‌, ಕೆ.ಪಿ.ಪ್ರಭುಕುಮಾರ್‌ ಸೇರಿದಂತೆ ಹಲವರು ಅರುಣ್ ಸ್ಪರ್ಧೆಗೆ ಅಪಸ್ವರ ತೆಗೆದು, ಸ್ಥಳೀಯರಿಗೆ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿದರು.

ತಿಂಗಳ ಹಿಂದೆ ಪುತ್ರ ಡಾ.ಅರುಣ್‌ ರೊಂದಿಗೆ ಸೋಮಣ್ಣ ಕ್ಷೇತ್ರಕ್ಕೆ ಆಗಮಿಸಿ, ಬಿ.ಎಸ್‌.ಯಡಿಯೂರಪ್ಪ ಅವರ ಸೂಚನೆಯಂತೆ ಪುತ್ರನನ್ನು ಕಣಕ್ಕಿಳಿಸುತ್ತಿರುವುದಾಗಿ ಹೇಳಿ, ಪ್ರಚಾರ ನಡೆಸಿ ಸಂಚಲನ ಊಂಟು ಮಾಡಿದ್ದರು.

ಇವರೊಂದಿಗೆ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಜಿವಿಟಿ ಬಸವರಾಜು, ಮಾಜಿ ಶಾಸಕ ಕೆ.ಪಿ.ಪ್ರಭುಕುಮಾರ್‌ ಅವರ ಪುತ್ರ ವಿಜಯಪ್ರಭು, ಮುಖಂಡ ರಾಜ್‌ಕುಮಾರ್‌ ಅವರು ಪ್ರಬಲ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು.

ಜೆಡಿಎಸ್‌ –ಕಾಂಗ್ರೆಸ್‌ ಜಿದ್ದಾಜಿದ್ದಿಗೆ ಸೀಮಿತವಾಗಿದ್ದ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಿವನಂಜೇಗೌಡ ಅವರಿಗೆ ಟಿಕೆಟ್‌ ದೊರಕಿದೆ. ಕಾಂಗ್ರೆಸ್‌ನಲ್ಲಿ ಎಚ್‌.ಸಿ.ಶ್ರೀಕಂಠಯ್ಯ ಅವರ ಅನುಯಾಯಿಯಾಗಿದ್ದ ಅವರು ಈಗ ಅಸ್ತಿತ್ವಕ್ಕಾಗಿ ಇತ್ತೀಚೆಗೆ ಬಿಜೆಪಿ ಸೇರಿ ಸಂಘಟನೆಯಲ್ಲಿ ತೊಡಗಿದ್ದರು.

ಜೆಡಿಎಸ್‌ ಶಕ್ತಿ ಕೇಂದ್ರ ಹೊಳೆನರ ಸೀಪುರ ಕ್ಷೇತ್ರಕ್ಕೆ ಮಾರಗೊಡನಹಳ್ಳಿಯ ಎಂ.ಎನ್‌.ರಾಜುಗೌಡರಿಗೆ ಟಿಕೆಟ್‌ ನೀಡಲಾಗಿದೆ. 20 ವರ್ಷದಿಂದ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, ಎರಡು ಬಾರಿ ಮಂಡಲ ಅಧ್ಯಕ್ಷ, ಜಿಲ್ಲಾ ಕಾರ್ಯದರ್ಶಿ, ಕಾರ್ಯಕಾರಿಣಿ ಸದಸ್ಯರಾಗಿದ್ದರು. ಎರಡು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಎರಡು ವರ್ಷದ ಹಿಂದೆ ಪಕ್ಷ ಸೇರಿ ಮಂಡಲದ ಅಧ್ಯಕ್ಷ ರಾಗಿದ್ದ ಕಮ್ಮರಗಿ ರವಿ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದರು.ತೀವ್ರ ಪೈಪೋಟಿ ಇರುವ ಹಾಸನ, ಬೇಲೂರು ಮತ್ತು ಸಕಲೇಶಪುರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ.

ಹಾಸನ ಕ್ಷೇತ್ರದಲ್ಲಿ ಎಂಜಿನಿಯರ್ ಪದವೀಧರ ಪ್ರೀತಂ ಜೆ. ಗೌಡ ಅವರು ರಾಜಕೀಯವಾಗಿ ಗುರುತಿಸಿಕೊಳ್ಳಲು ಸಂಪನ್ಮೂಲ ವ್ಯಯಿಸಿದ್ದಾರೆ.
ಕ್ಷೇತ್ರದಾದ್ಯಂತ ದೇವಸ್ಥಾನಗಳ ಜೀರ್ಣೋದ್ದಾರ, ಹಬ್ಬ, ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯ, ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ಉಚಿತ ಕುಡಿಯುವ ನೀರು ಪೂರೈಕೆ, ನಗರಸಭೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವ ಆಟೊ ಟಿಪ್ಪರ್‌ಗಳ ಸೇವೆ ಒದಗಿಸಿದ್ದಾರೆ.

ಬೇಲೂರು ತಾಲ್ಲೂಕಿನವರಾದರೂ ಹಾಸನ ಕ್ಷೇತ್ರದಲ್ಲಿ ಸಂಘಟನೆಯಲ್ಲಿ ತೊಡಗಿಕೊಂಡು, ಶಾಸಕ ಸಿ.ಟಿ.ರವಿ ಅವರ ಹಿಂಬಾಲಕರಾಗಿ ಗುರುತಿಸಿಕೊಂಡಿ ದ್ದಾರೆ. ಇವರ ಜತೆ ಮಾಜಿ ಶಾಸಕ ಬಿ.ವಿ.ಕರೀಗೌಡ, ಮುಖಂಡರಾದ ಅಗಿಲೆ ಯೋಗೀಶ್‌, ಕಟ್ಟಾಯ ಅಶೋಕ್‌ ಅವರು ಟಿಕೆಟ್‌ಗಾಗಿ ಪ್ರಬಲ ಸ್ಪರ್ಧೆ ಯೊಡ್ಡಿದ್ದಾರೆ.

ಬೇಲೂರು ಕ್ಷೇತ್ರ ದಿಂದ ಎಚ್‌.ಕೆ.ಸುರೇಶ್‌, ಕೊರಟಗೆರೆ ಪ್ರಕಾಶ್‌, ಲಕ್ಷ್ಮಣ ಪ್ರಬಲ ಆಕಾಂಕ್ಷಿಗಳು. 2008ರ ಚುನಾವಣೆಯಲ್ಲಿ ಸುರೇಶ್‌ ಸ್ಪರ್ಧಿಸಿ ಸೋಲು ಕಂಡಿದ್ದರು. ನಂತರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಸೋಲುಂಡು ರಾಜಕೀಯದಿಂದ ಹಿಂದೆ ಸರಿದಿದ್ದರು.
ಆಪ್ತರ ಸಲಹೆಯಂತೆ ಬೇಲೂರು ಕ್ಷೇತ್ರದತ್ತ ಗಮನ ಹರಿಸಿದ್ದರು. ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಸುರೇಶ್‌ಗೆ, ಅದೇ ಸಮುದಾಯದ ಕೊರಟಿಗೆರೆ ಪ್ರಕಾಶ್‌ ಸ್ಪರ್ಧೆಯೊಡಿದ್ದಾರೆ.

ಸಕಲೇಶಪುರ ಕ್ಷೇತ್ರಕ್ಕೆ ನಾರ್ವೆ ಸೋಮಶೇಖರ್‌ ಅಭ್ಯರ್ಥಿ ಎಂದು ಬಿ.ಎಸ್‌.ಯಡಿಯೂರಪ್ಪ ಅವರು ಎರಡು ತಿಂಗಳ ಹಿಂದೆ ಘೋಷಿಸಿದ್ದರು. ಆದರೆ ಅಧಿಕೃತವಾಗಿ ಬಿ. ಫಾರಂ ಸಿಕ್ಕಿಲ್ಲ. ಹಾಗಾಗಿ ಸೋಮಶೇಖರ್‌ ಎರಡು ತಿಂಗಳಿನಿಂದಲೇ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇವರೊಂದಿಗೆ ಡಾ.ನಾರಾಯಣ ಸ್ವಾಮಿ, ಸಿಮೆಂಟ್‌ ಮಂಜು, ಮುರುಳಿ ಮೋಹನ್ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ.

ಜೆಡಿಎಸ್‌–ಕಾಂಗ್ರೆಸ್‌ಗೆ ಪೈಪೋಟಿ

‘ಸಂಘ ಪರಿವಾರದ ಹಿನ್ನಲೆ ಹೊಂದಿರುವುದರ ಜತೆಗೆ ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ. ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ವರಿಷ್ಠರಿಗೆ ಮನವಿ ಮಾಡಲಾಗಿತ್ತು. ಬೂತ್‌ ಮಟ್ಟದಲ್ಲಿ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕ ಇದೆ. 317 ಬೂತ್‌ಗಳಲ್ಲಿ ಸಮಿತಿ ರಚಿಸಲಾಗಿದೆ. ಕಾಂಗ್ರೆಸ್‌, ಜೆಡಿಎಸ್‌ಗೆ ಪೈಪೋಟಿ ನೀಡುತ್ತೇನೆ’ ಎಂದು ರಾಜುಗೌಡ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT