ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳು ತಾವೂ ಕಲಿತರು, ನನ್ನನ್ನೂ ಬೆಳೆಸಿದರು

ಖ್ಯಾತ ಹಿಂದೂಸ್ತಾನಿ ಗಾಯಕ ಗಣಪತಿ ಭಟ್‌ ಹಾಸಣಗಿ
Last Updated 21 ಏಪ್ರಿಲ್ 2018, 20:10 IST
ಅಕ್ಷರ ಗಾತ್ರ

ಬೆಂಗಳೂರು: ‘ಗುರುಶಿಷ್ಯ ಪರಂಪರೆಯ ಮೂಲಕ ಸಂಗೀತವನ್ನು ಕಲಿತವರು ನಿಜವಾದ ಕಲಾವಿದರಾಗುತ್ತಾರೆ. ಈ ವಿಷಯದಲ್ಲಿ ನಮ್ಮ ಪೀಳಿಗೆ ಸಮೃದ್ಧವಾಗಿದೆ’ ಎಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದ ಗಣಪತಿ ಭಟ್‌ ಹಾಸಣಗಿ ಅಭಿಪ್ರಾಯಪಟ್ಟರು.

ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಧ್ಯಯನ ಅಧ್ಯಾಪನದಿಂದ ಕಲಿಯುವುದು ಸಾಕಷ್ಟಿದೆ. ವಿದ್ಯಾರ್ಥಿಗಳಿಗೆ ಕಲಿಸುವುದು ಎಂದರೆ ನಾವು ಸಾಧನೆ ಮಾಡಿದಂತೆ. ನನ್ನ ವಿದ್ಯಾರ್ಥಿಗಳು ತಾವೂ ಕಲಿತರು, ನನ್ನನ್ನೂ ಬೆಳೆಸಿದರು’ ಎಂದರು.

ತಮ್ಮ ಸಂಗೀತ ಬದುಕಿನ ಪ್ರಮುಖ ಘಟ್ಟಗಳನ್ನು ಕಲಾರಸಿಕರೊಂದಿಗೆ ಅವರು ಹಂಚಿಕೊಂಡಿದ್ದು ಹೀಗೆ.

‘ಉತ್ತರ ಕನ್ನಡ ಜಿಲ್ಲೆಯ ಅಡಕೆ ತೋಟ ಹೊಂದಿದ್ದ ಅವಿಭಕ್ತ ಕುಟುಂಬದಲ್ಲಿ ಅಪ್ಪ ಅಮ್ಮನಿಗೆ ಹತ್ತನೇ ಮಗನಾಗಿ ಹುಟ್ಟಿದೆ. ಹಾಸಣಗಿ ನಾನು ದತ್ತು ಮಗುವಾಗಿ ಸೇರಿಕೊಂಡ ಮನೆ. ಹೀಗಾಗಿ ಹೆಗಡೆ ಇದ್ದವ ಗಣಪತಿ ಭಟ್‌ನಾಗಿ ಬದಲಾದೆ. ಶಾಲಾ ದಿನಗಳಲ್ಲಿ ನನ್ನೊಳಗಿನ ಗಾಯಕನನ್ನು ಗುರುತಿಸಿ ಗಾಯನ ಪ್ರೀತಿ ಬೆಳೆಸಿದವರು ನನ್ನ ಶಾಲಾ ಶಿಕ್ಷಕರು’ ಎಂದು ನೆನಪಿಸಿಕೊಂಡರು.

‘ಹತ್ತನೇ ತರಗತಿ ಮುಗಿಸಿ ಸಂಗೀತ ಕಲಿಯುವ ಆಸೆಯಿಂದ ಧಾರವಾಡ ಸೇರಿಕೊಂಡೆ. ಅಲ್ಲಿ ಅಬ್ದುಲ್‌ ಕರೀಂ ಖಾನ್‌ ಅವರನ್ನು ಕಂಡು ನಾನು ಸಿತಾರ್‌ ವಾದಕನಾಗಬೇಕು ಎಂಬ ಆಸೆ ಉಕ್ಕಿತು. ಸಿತಾರ್‌ ತರಗತಿಗೇ ಸೇರಿಕೊಂಡೆನಾದರೂ ಆರೇ ತಿಂಗಳಲ್ಲಿ ಇದು ನನ್ನ ಕ್ಷೇತ್ರವಲ್ಲ ಎನಿಸಿಬಿಟ್ಟಿತು’ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

‘ಮುಂದೆ ಬಸವರಾಜ ರಾಜಗುರು ಅವರ ಶಿಷ್ಯನಾಗುವ ಸುಯೋಗ ಒದಗಿತು. ಸಂಗೀತದ ಮೊದಲ ಹಂತದಿಂದ ಪಾಠ ಹೇಳಿಸಿಕೊಂಡ ಶಿಷ್ಯ ನಾನೊಬ್ಬನೇ ಎಂಬ ಹೆಮ್ಮೆ ಇದೆ. ವರ್ಷಗಟ್ಟಲೆ ಬೆಳಿಗ್ಗೆ ಭೈರವ ಸಂಜೆ ಯಮನ್‌ ರಾಗವನ್ನೇ ನನಗೆ ಕಲಿಸುತ್ತಿದ್ದರು. ಶಿಷ್ಯರನ್ನು ಅವರು ಪಕ್ವಗೊಳಿಸುವ ರೀತಿಯೇ ಹಾಗಿತ್ತು’ ಎಂದು ಗುರುವಿನೊಂದಿಗಿನ ಒಡನಾಟವನ್ನು ಹಂಚಿಕೊಂಡರು.

‘ಅವಕಾಶಗಳು ನನ್ನನ್ನು ಹುಡುಕಿಕೊಂಡು ಬರಬೇಕು, ನಾನು ಅವಕಾಶವನ್ನು ಹುಡುಕಿಕೊಂಡು ಹೋಗಬಾರದು ಎನ್ನುವ ಸ್ವಾಭಿಮಾನಿ ನಾನು. ಜೀವನದುದ್ದಕ್ಕೂ ನನ್ನ ಬದುಕು ಹೀಗೇ ಸಾಗಿದೆ. ಶುದ್ಧಾಂಗ ಪ್ರೀತಿಯಿಂದ ಸಂಗೀತ ಕಲಿತಿರುವುದರಿಂದ ದೊರೆತ ಅವಕಾಶಗಳೆಲ್ಲಾ ನನಗೆ ಯಶಸ್ಸನ್ನೇ ತಂದುಕೊಟ್ಟವು’ ಎಂದರು.

‘ಸಾವಿರಾರು ನಾಟ್ಯ ಸಂಗೀತಗಳಿವೆ. ಆದರೆ, ನಾವು ಕನ್ನಡದವರು ಇದನ್ನು ಉಳಿಸಿಕೊಂಡಿಲ್ಲ. ಮಹಾರಾಷ್ಟ್ರದಲ್ಲಿ ಹಳೆ ಪರಂಪರೆಯನ್ನು ಉಳಿಸಿಕೊಂಡಿರುವ ಅವರು ಇಂದಿಗೂ ಸಂಗೀತ ನಾಟಕಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ’ ಎಂದರು.

ಪ್ರೇಕ್ಷಕರ ಅಪೇಕ್ಷೆ ಮೇರೆಗೆ ನಾಟ್ಯ ಸಂಗೀತ ’ಕರ ಹಾ ಕರಿ ಧರಿಲಾ ಶುಭಾಂಗಿ’, ‘ಎತ್ತಣ ಮಾಮರ’, ‘ಕಂಡೆ ನಾ ಗೋವಿಂದ’ ಹಾಡುಗಳನ್ನು ಹಾಡಿ ರಂಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT