ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಕ್ಕುರುಳಿದ ಮರ, ವಿದ್ಯುತ್‌ ಕಂಬಗಳು

ನಗರದಲ್ಲಿ ಬಿರುಗಾಳಿ ಸಹಿತ ಬಿರುಸಿನ ಮಳೆ : ವಿವಿಧ ಕಡೆಗಳಲ್ಲಿ ನಾಲ್ಕು ಕಾರುಗಳು ಜಖಂ
Last Updated 24 ಏಪ್ರಿಲ್ 2018, 19:14 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಂಗಳವಾರ ಬಿರುಗಾಳಿ ಸಹಿತ ಬಿರುಸಿನ ಮಳೆ ಸುರಿಯಿತು. ಹಲವೆಡೆ ಮರಗಳು ಹಾಗೂ ವಿದ್ಯುತ್‌ ಕಂಬಗಳು ನೆಲಕ್ಕುರುಳಿದ್ದವು.

ನಗರದ ಪಶ್ಚಿಮ ಭಾಗದಲ್ಲಿರುವ ಮಲ್ಲೇಶ್ವರ, ರಾಜಾಜಿನಗರ, ಬಸವೇಶ್ವರ ನಗರ, ಗಾಯತ್ರಿನಗರ, ಸಹಕಾರ ನಗರ, ಜೆ.ಪಿ.ಪಾರ್ಕ್, ಮಹಾಲಕ್ಷ್ಮಿ ಲೇಔಟ್, ವಿಜಯನಗರ, ಸಂಜಯನಗರ, ಯಶವಂತಪುರ, ಗೊರಗುಂಟೆಪಾಳ್ಯ, ಜಾಲಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯು ಜೋರಾಗಿತ್ತು. ಅದರ ಜತೆಗೆ ಬಿರುಗಾಳಿಯ ಆರ್ಭಟ ಹೆಚ್ಚಾಗಿತ್ತು.

ಈ ಭಾಗದಲ್ಲಿ ಮಧ್ಯಾಹ್ನದಿಂದಲೇ ಮೋಡಕವಿದ ವಾತಾವರಣವಿತ್ತು. ಮಧ್ಯಾಹ್ನ 3 ಗಂಟೆಗೆ ಜೋರಾದ ಗಾಳಿ ಬೀಸಿತು. ಅದೇ ವೇಳೆ ಬಸವೇಶ್ವರ ನಗರದಲ್ಲಿ ವಿದ್ಯುತ್‌ ಕಂಬವೊಂದು ಕಾರಿನ ಮೇಲೆ ಉರುಳಿಬಿದ್ದಿತ್ತು. ಅದೇ ಸ್ಥಳದ ಸಮೀಪದಲ್ಲೇ ಮತ್ತೊಂದು ಮರ ಕಾರೊಂದರ ಮೇಲೆ ಬಿದ್ದಿತ್ತು.

ರಾಜಾಜಿನಗರದ ರಾಜ್‍ಕುಮಾರ್ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆಯೇ ಮರ ಹಾಗೂ ವಿದ್ಯುತ್‌ ಕಂಬ ಏಕಕಾಲಕ್ಕೆ ಬಿದ್ದಿದ್ದವು.  ಅದೃಷ್ಟವಶಾತ್ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ರಾಮಯ್ಯ ಕಾಲೇಜು ಮುಂಭಾಗ ಓಲಾ ಕ್ಯಾಬ್‌ ಹಾಗೂ ದ್ವಿಚಕ್ರ ವಾಹನದ ಮೇಲೆ ಮರವೊಂದು ಬಿದ್ದಿತ್ತು. ಕ್ಯಾಬ್‌ನಲ್ಲಿದ್ದ ಚಾಲಕನನ್ನು ಸ್ಥಳೀಯರು ರಕ್ಷಿಸಿದರು.


ರಾಜ್‌ಕುಮಾರ್‌ ರಸ್ತೆಯಲ್ಲಿ ಕಾರಿನ ಮೇಲೆ ವಿದ್ಯುತ್‌ ಕಂಬ ಬಿದ್ದಿರುವುದು

ಬಸವೇಶ್ವರ ನಗರದಲ್ಲಿ ಮನೆಯೊಂದರ ಮೇಲೆ ಮರದ ಕೊಂಬೆಗಳು ಬಿದ್ದಿದ್ದವು. ಮನೆಯ ಛಾವಣಿ ಜಖಂ ಆಗಿದೆ. ಮಳೆ ನೀರು ಮನೆಯೊಳಗೆ ಹೋಗಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಕಮಲಾನಗರದಲ್ಲಿ ಸುಮಾರು 10 ಮನೆಗಳ ಹಂಚುಗಳು ಹಾರಿಹೋಗಿದ್ದವು.

ರಸ್ತೆ ಮಧ್ಯೆಯೇ ಮರ ಬಿದ್ದಿದ್ದರಿಂದ ಹಾಗೂ ನೀರು ಹರಿದಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಮಲ್ಲೇಶ್ವರದ ಮುಖ್ಯರಸ್ತೆ, ಭಾರತೀಯ ವಿಜ್ಞಾನ ಸಂಸ್ಥೆ, ಸರ್ಕಲ್ ಮಾರಮ್ಮ ದೇವಸ್ಥಾನ ಎದುರಿನ ರಸ್ತೆ ಹಾಗೂ ರಾಜಾಜಿನಗರದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿ ವಾಹನಗಳ ದಟ್ಟಣೆ ಉಂಟಾಯಿತು. ಮೇಖ್ರಿ ಸರ್ಕಲ್‌ ಹಾಗೂ ಪ್ರೌಢಶಿಕ್ಷಣ ಮಂಡಳಿ ಎದುರಿನ ರಸ್ತೆಯಲ್ಲಿ ಮರದ ಕೊಂಬೆಗಳು ಬಿದ್ದು ವಾಹನಗಳ ಓಡಾಟಕ್ಕೆ ಅಡ್ಡಿಯಾಗಿತ್ತು.

ಸಂಚಾರ ಪೊಲೀಸರ, ಮಾರ್ಗ ಬದಲಾವಣೆ ಮಾಡಿ ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟರು. ಸ್ಥಳಕ್ಕೆ ಬಂದ ಬಿಬಿಎಂಪಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿ ಮರಗಳನ್ನು ತೆರವುಗೊಳಿಸಿದರು.

ಮೆಜೆಸ್ಟಿಕ್, ಎಂ.ಜಿ.ರಸ್ತೆ, ರಿಚ್ಮಂಡ್‌ ಟೌನ್, ಶಾಂತಿನಗರ, ಬಸವನಗುಡಿ, ಜಯನಗರ, ಜೆ.ಪಿ. ನಗರ, ಬನಶಂಕರಿ, ಮಲ್ಲೇಶ್ವರ, ಹೆಬ್ಬಾಳ, ಶಿವಾಜಿನಗರ, ಹಲಸೂರು, ಇಂದಿರಾನಗರ, ಹನುಮಂತನಗರ, ಕೆಂಗೇರಿ, ಮಡಿವಾಳ, ಕೋರಮಂಗಲ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಯಿತು. ಅಲ್ಲೆಲ್ಲ ಹಾನಿಯಾದ ಬಗ್ಗೆ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಯಾವುದೇ ದೂರುಗಳು ಬಂದಿಲ್ಲ.

ಯಶವಂತಪುರ ಬಸ್ ನಿಲ್ದಾಣದಲ್ಲಿ ನೀರು ತುಂಬಿಕೊಂಡಿತ್ತು. ಅದರಲ್ಲೇ ಬಸ್‌ಗಳು ಹಾಗೂ ಪ್ರಯಾಣಿಕರು ಓಡಾಡಿದರು.


ರಾಜಾಜಿನಗರ 4ನೇ ಹಂತದ 2ನೇ ಮುಖ್ಯ ರಸ್ತೆಯಲ್ಲಿ ಉರುಳಿಬಿದ್ದಿದ್ದ ಮರವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ತೆರವುಗೊಳಿಸಿದರು

80 ದೂರುಗಳು ದಾಖಲು: ‘ಮಧ್ಯಾಹ್ನ 3 ಗಂಟೆಯಿಂದ 4 ಗಂಟೆಯವರೆಗೆ ಬಿರುಗಾಳಿ ಹೆಚ್ಚಿತ್ತು. ಅದೇ ವೇಳೆ 80 ಕಡೆಗಳಲ್ಲಿ ಮರ ಹಾಗೂ ಮರದ ಕೊಂಬೆಗಳು ಉರುಳಿಬಿದ್ದ ಬಗ್ಗೆ ದೂರುಗಳು ಬಂದಿದ್ದವು’ ಎಂದು ಬಿಬಿಎಂಪಿ ನಿಯಂತ್ರಣಾ ಕೊಠಡಿ ಅಧಿಕಾರಿಯೊಬ್ಬರು ತಿಳಿಸಿದರು.

‘ಪಶ್ಚಿಮ ಭಾಗದ ಪ್ರದೇಶಗಳಿಂದ 60 ಮಂದಿ ಕರೆ ಮಾಡಿದ್ದರು. ಅಲ್ಲೆಲ್ಲ ಮಳೆಗಿಂತ ಬಿರುಗಾಳಿ ಹೆಚ್ಚಿತ್ತು. ಮರಗಳು ಉರುಳಿಬಿದ್ದಿದ್ದರಿಂದ ಮೂರು ಕಾರುಗಳು ಜಖಂಗೊಂಡಿವೆ’ ಎಂದರು.
**
‘ದಿಕ್ಕಾ ಪಾಲಾಗಿ ಓಡಿದ ಜನ’
‘ಬಿರುಗಾಳಿಯನ್ನು ಕಂಡು ಗಾಬರಿಯಾಯಿತು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನ, ದಿಕ್ಕಾಪಾಲಾಗಿ ಓಡಿ ಹೋಗಿ ಅಂಗಡಿ ಹಾಗೂ ಮನೆಗಳ ಒಳಗೆ ಸೇರಿಕೊಂಡರು’ ಎಂದು ಬಸವೇಶ್ವರ ನಗರ ನಿವಾಸಿ ಕೆಂಪೇಗೌಡ ತಿಳಿಸಿದರು.

‘ಇದೇ ಮೊದಲ ಬಾರಿಗೆ ನಮ್ಮ ನಗರದಲ್ಲಿ ಇಂಥ ದೊಡ್ಡ ಬಿರುಗಾಳಿ ಕಂಡೆ. ಚಲಿಸುತ್ತಿದ್ದ ವಾಹನಗಳನ್ನೆಲ್ಲ ಚಾಲಕರು ಸುರಕ್ಷಿತ ಸ್ಥಳಗಳಲ್ಲಿ ನಿಲ್ಲಿಸಿದ್ದರು. ಕೆಲವು ಆಟೊಗಳು ಗಾಳಿಯಲ್ಲಿ ತೇಲಿದ ಅನುಭವ ಆಯಿತು’ ಎಂದರು.


ಎಂ.ಎಸ್.ರಾಮಯ್ಯ ಕಾಲೇಜು ಬಳಿ ಉರುಳಿ ಬಿದ್ದಿದ್ದ ಮರದಡಿ ಇದ್ದ ಓಲಾ ಕ್ಯಾಬ್‌
**
‘ಪೂರ್ವ ಮುಂಗಾರು ಆರಂಭ’
‘ಪೂರ್ವ ಮುಂಗಾರು ಆರಂಭವಾಗಿರುವುದರಿಂದ ಮೇನಲ್ಲಿ ಗುಡುಗು, ಗಾಳಿ ಸಹಿತ ಮಳೆ ಆಗುತ್ತಿದೆ. ಮೋಡಗಳ ಸಾಲು ನಿರ್ಮಾಣವಾಗಿರುವ ಪ್ರದೇಶದಲ್ಲಿ ಹೆಚ್ಚು ಮಳೆ ಆಗುತ್ತಿದೆ. ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಸ್ವಲ್ಪ ಹೆಚ್ಚು ಮಳೆಯಾಗುತ್ತಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ವಿಜ್ಞಾನಿ ಗವಾಸ್ಕರ್ ಮಾಹಿತಿ ನೀಡಿದ್ದಾರೆ.
**
ಸಿಡಿಲು ಬಡಿದು 6 ಕುರಿಗಳ ಸಾವು
ಹೊಸಕೋಟೆ: ತಾಲ್ಲೂಕಿನ ಹೆತ್ತಕ್ಕಿ ಗ್ರಾಮದ ಬಳಿ ಸಿಡಿಲು ಬಡಿದು 6 ಕುರಿಗಳು ಸತ್ತಿದ್ದು, ಸುಮಾರು  20 ಕುರಿಗಳು ಪ್ರಜ್ಞೆ ತಪ್ಪಿವೆ.

ಕವಿತಾ ಎಂಬುವವರು ಕರಿಗಳನ್ನು ಸಂಜೆ ಮನೆಗೆ ಕರೆದುಕೊಂಡು ಬರುತ್ತಿದ್ದಾಗ ಮಳೆ ಸುರಿದಿದ್ದರಿಂದ ಮರದ ಕೆಳಗೆ ಆಶ್ರಯ ಪಡೆದಿದ್ದಾರೆ. ಆಗ ಸಿಡಿಲು ಬಡೆದಿದೆ. ಹೊಸಕೋಟೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ವ್ಯಾಪಕ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT