ಬೆಂಗಳೂರು: ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ, ಆಕೆಯ ತಂದೆ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆಯ ತಾಯಿ ನೀಡಿದ್ದ ದೂರಿನನ್ವಯ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಂಡಿದ್ದೇವೆ. ಆರೋಪಿಯು ಸದ್ಯ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಬಾಲಕಿಯ ತಂದೆ– ತಾಯಿ, 2006ರಲ್ಲಿ ಮದುವೆ ಆಗಿದ್ದಾರೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸ್ವೀಡನ್ ದೇಶದಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯ ನಡುವೆ ವೈಮನಸ್ಸು ಉಂಟಾಗಿತ್ತು. ವಿಚ್ಛೇದನ ಕೋರಿ ಅವರಿಬ್ಬರು ಸ್ವೀಡನ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ವಿಚ್ಛೇದನ ಮಂಜೂರು ಮಾಡಿತ್ತು.
ಹಿರಿಯ ಮಗಳು ತಂದೆಯೊಂದಿಗೆ ಹಾಗೂ ಕಿರಿಯ ಮಗಳು ತಾಯಿಯೊಂದಿಗೆ ಇರುವಂತೆ ಸೂಚಿಸಿದ್ದ ನ್ಯಾಯಾಲಯ, ಅಗತ್ಯವಿದ್ದಾಗ ಪರಸ್ಪರ ಮಕ್ಕಳನ್ನು ನೋಡುವ ಅವಕಾಶ ಕಲ್ಪಿಸಿತ್ತು ಎಂದು ಪೊಲೀಸರು ಹೇಳಿದರು.
ವಿಚ್ಛೇದನ ಬಳಿಕ 2016ರಲ್ಲಿ ದಂಪತಿಯು ಭಾರತಕ್ಕೆ ಮರಳಿದ್ದರು. ತಾಯಿಯು ಮಗಳ ಜತೆಯಲ್ಲಿ ತಮ್ಮೂರಾದ ಬಿಹಾರಕ್ಕೆ ಹೋಗಿ ವಾಸವಿದ್ದರು. ತಂದೆಯು ಹಿರಿಯ ಮಗಳ ಜತೆಯಲ್ಲಿ ಬೆಂಗಳೂರಿನ ಕೆಂಗೇರಿಯಲ್ಲಿ ನೆಲೆಸಿದ್ದರು.
ಹಿರಿಯ ಮಗಳನ್ನು ಭೇಟಿಯಾಗಲೆಂದು ತಾಯಿಯು ಕೋರಮಂಗಲದ ಓಯಾಸಿಸ್ ಮಾಲ್ಗೆ ಏ. 17ರಂದು ಬಂದಿದ್ದರು. ತಂದೆಯೇ ಮಗಳನ್ನು ಕರೆದುಕೊಂಡು ಮಾಲ್ಗೆ ಹೋಗಿದ್ದರು.
ತಾಯಿ ಬಳಿ ಹೋಗಿದ್ದ ಬಾಲಕಿ, ‘ಸ್ನಾನ ಮಾಡಿಸುವಾಗ ಹಾಗೂ ಮಲಗಿಸುವಾಗ ತಂದೆಯು ನನ್ನ ಗುಪ್ತಾಂಗವನ್ನು ಮುಟ್ಟುತ್ತಾರೆ. ಇದರಿಂದ ತುಂಬಾ ನೋವಾಗುತ್ತದೆ. ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗು. ನಾನು ನಿನ್ನ ಜತೆಯೇ ಇರುತ್ತೇನೆ’ ಎಂದಿದ್ದಳು. ಬಾಲಕಿಯನ್ನು ಸಮಾಧಾನಪಡಿಸಿದ್ದ ತಾಯಿ, ನ್ಯಾಯಾಲಯದ ಆದೇಶವಿದ್ದಿದ್ದರಿಂದ ಆಕೆಯನ್ನು ತಂದೆ ಜತೆಯೇ ಕಳುಹಿಸಿದ್ದರು. ನಂತರ, ಬಿಹಾರಕ್ಕೆ ವಾಪಸ್ ಹೋಗಿದ್ದರು.
ಕೆಲ ದಿನಗಳ ನಂತರ ಮಗಳನ್ನು ನೋಡಲೆಂದು ಪತಿಯ ಮೊಬೈಲ್ಗೆ ಕರೆ ಮಾಡಿದ್ದರು. ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಗಾಬರಿಗೊಂಡ ತಾಯಿ, ಠಾಣೆಗೆ ದೂರು ನೀಡಿದ್ದರು. ಗಂಭೀರವಲ್ಲದ ಪ್ರಕರಣ (ಎನ್ಸಿಆರ್) ದಾಖಲಿಸಿಕೊಂಡಿದ್ದೆವು. ಅದನ್ನು ಪರಿಶೀಲಿಸಿದ್ದ ನ್ಯಾಯಾಲಯ, ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಚಿಸಿತ್ತು ಎಂದು ಪೊಲೀಸರು ವಿವರಿಸಿದರು.
‘ಆರೋಪಿಯು ಮಗಳನ್ನು ಕರೆದುಕೊಂಡು ನಗರ ಬಿಟ್ಟು ಬೇರೆ ಊರಿಗೆ ಹೋಗಿರುವ ಮಾಹಿತಿ ಇದೆ. ಆತನಿರುವ ಸ್ಥಳವನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.