ಸೂಕ್ಷ್ಮ– ಸಮರ್ಥ ತಂತ್ರಜ್ಞಾನ

ಮನದ ಮಾತಿಗೆ ತಂತ್ರಜ್ಞಾನದ ಧ್ವನಿ

ಮನದಲ್ಲಿನ ಆಲೋಚನೆಗಳನ್ನು ಗ್ರಹಿಸಿ ಜಗತ್ತಿನ ಎದುರು ತೆರೆದಿಡುವ ತಂತ್ರಜ್ಞಾನದ ಅಭಿವೃದ್ಧಿ ಕೆಲಸ ಈಗ ಇನ್ನಷ್ಟು ಚುರುಕಾಗಿ ನಡೆಯುತ್ತಿದೆ...

ಸ್ಟೀಫನ್‌ ಹಾಕಿಂಗ್‌

ಸಾಹಸಸಿಂಹ ವಿಷ್ಣುವರ್ಧನ್ ಅವರ ‘ಆಪ್ತಮಿತ್ರ’ ಸಿನಿಮಾದಲ್ಲಿ ಅವರದ್ದು ಮನಃ ಶಾಸ್ತ್ರಜ್ಞನ ಪಾತ್ರ. ತನ್ನ ಎದುರಿಗೆ ಬರುವ ಎಲ್ಲರನ್ನೂ ಅವರ ಕಣ್ಣೋಟ, ಮುಖಭಾವದಿಂದಲೇ ಅಂದಾಜಿಸಿ ಮನಸಿನ ಎಣಿಕೆ, ಮಾತುಗಳನ್ನು ಯಥಾವತ್ತಾಗಿ ತೆರೆದಿಡುತ್ತಾರೆ. ತುಟಿ ಬಿಚ್ಚದೆಯೇ ನಮ್ಮ ಆಲೋಚನೆಗಳನ್ನು ಮತ್ತೊಬ್ಬರು ಬಿಡಿಸಿ ಹೇಳುವುದೆಂದರೆ...! ಇತ್ತೀಚೆಗೆ ಅಂತಿಮ ಪಯಣ ಬೆಳೆಸಿದ ವಿಜ್ಞಾನಿ ಸ್ಟೀಫನ್ ಹಾಕಿಂಗ್, ಒಂದೂ ಮಾತನಾಡದೆಯೇ ಹತ್ತಾರು ವರ್ಷ ಮಹತ್ತರ ಸಂಶೋಧನೆ ನಡೆಸಿದರು. ಅವರ ಆಲೋಚನೆಗಳನ್ನು ಗ್ರಹಿಸಿಕೊಂಡು ಜಗತ್ತಿನ ಮುಂದಿಡುತ್ತಿದ್ದುದು ಅವರ ಎದುರಿನ ಪುಟ್ಟ ಕಂಪ್ಯೂಟರ್. ಸಿನಿಮಾದಲ್ಲಿ ಮನಃಶಾಸ್ತ್ರಜ್ಞ ಬೆಳೆಸಿಕೊಂಡಿದ್ದ ಗ್ರಹಣಶಕ್ತಿಯಂತೆಯೇ ಹಲವು ಉಪಕರಣಗಳಿಗೆ ವಿಜ್ಞಾನಿಗಳು ಮನಸಿನ ಮಾತುಗಳನ್ನು ಕೇಳಿಸಿಕೊಳ್ಳುವುದನ್ನು ಕಲಿಸಿದ್ದಾರೆ.

ಬೇರೆ ಯಾರಿಗೂ ತಿಳಿಯದಂತೆ ಎದುರಿನ ಕಂಪ್ಯೂಟರ್‌ನೊಂದಿಗೆ ಗುಟ್ಟಾಗಿ ಮಾತುಕತೆ ನಡೆಸಬಹುದು. ಅದೇ ಹಾದಿಯಲ್ಲಿ, ಒಂದೂ ಶಬ್ದ ನುಡಿಯದೆ ಆದೇಶ ನೀಡಬಹುದಾದ ‘ಆಲ್ಟರ್‍ಈಗೊ’ ಹೆಸರಿನ ಧರಿಸುವ ಉಪಕರಣವನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಧರಿಸಿರುವ ವ್ಯಕ್ತಿ ಮೆದುಳಿನಲ್ಲಿ ಯೋಚಿಸುವ ಪದ ಅಥವಾ ಸಾಲುಗಳನ್ನು ಮುಖ ಮತ್ತು ದವಡೆಯ ನರ-ಸ್ನಾಯು ಸಂಕೇತಗಳ ಮೂಲಕ ಗ್ರಹಿಸುತ್ತದೆ. ಇದೇ ಸಂಕೇತವನ್ನು ಕಂಪ್ಯೂಟರ್‍ಗೆ ರವಾನಿಸಿ ಸಂವಹನ ಸಾಧ್ಯವಾಗಿಸುತ್ತದೆ.

ಮೆಸ್ಸಾಚ್ಯುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಭಾರತೀಯದ ಮೂಲದ ಸಂಶೋಧಕ ಅರ್ನವ್ ಕಪೂರ್ ಮತ್ತವರ ತಂಡ ಆಲ್ಟರ್‍ಈಗೊ ಅಭಿವೃದ್ಧಿ ಪಡಿಸಿದ್ದಾರೆ. ಇಂಟೆಲಿಜೆನ್ಸ್-ಅಗ್ಮೆಂಟೇಷನ್ (ಐಎ) ಉಪಕರಣ ಎಂದು ಇದನ್ನು ವಿವರಿಸಿದ್ದಾರೆ. ಅನೇಕ ವೇದಿಕೆ ಕಾರ್ಯಕ್ರಮಗಳಲ್ಲಿ ಬಳಸುವ ಹೆಡ್‍ಸೆಟ್ ರೀತಿ ಕಾಣುವ ಈ ಉಪಕರಣ ಕಿವಿಯಿಂದ ದವಡೆಯವರೆಗೂ ಚಾಚಿರುತ್ತದೆ. ಇದರಲ್ಲಿನ ನಾಲ್ಕು ಎಲೆಕ್ಟ್ರೋಡ್‍ಗಳು ಗಲ್ಲದ ಚರ್ಮಕ್ಕೆ ತಾಗಿರುತ್ತವೆ. ತಲೆಯಲ್ಲಿ ಯಾವುದೇ ಪದವನ್ನು ಯೋಚಿಸಿದಾಗ ನರಗಳ ಮೂಲಕ ಸ್ನಾಯುಗಳಲ್ಲಿ ಉಂಟಾಗುವ ವ್ಯತ್ಯಾಸವನ್ನು ಈ ಸೂಕ್ಷ್ಮ ಉಪಕರಣ ಗ್ರಹಿಸಿಕೊಳ್ಳುತ್ತದೆ. ಉದಾಹರಣೆಗೆ: ಎಲ್ಲೋ ಹೊರಗೆ ನಡೆದು ಸಾಗುತ್ತಿರುವಾಗ ಸಮಯ ತಿಳಿದುಕೊಳ್ಳಬೇಕು ಅನಿಸಿದರೆ, ಮಿದುಳಿನಲ್ಲಿ ಅದನ್ನು ಹೇಳಿಕೊಂಡರೆ ಸಾಕು.

ಉಪಕರಣದಿಂದ ಕಂಪ್ಯೂಟರ್‌ಗೆ ಆದೇಶ ರವಾನೆಯಾಗಿ ಅಲ್ಲಿಂದ ಮರಳುವ ಸಂದೇಶ (ಸಮಯ) ನಿಮ್ಮ ಕಿವಿಯಲ್ಲಿ ಉಸುರುತ್ತದೆ. ನಿಶ್ಶಬ್ದವಾಗಿ ನಡೆದು ಹೋಗುವ ಈ ಸಂವಹನ ಪ್ರಸ್ತುತ ಶೇ 92ರಷ್ಟು ನಿಖರತೆ ಹೊಂದಿದೆ. ನಿಖರತೆಯ ಪ್ರಮಾಣವನ್ನು ಶೇ 100ರಷ್ಟು ಮಾಡಲು ಸಂಶೋಧಕರ ಪ್ರಯತ್ನ ಮುಂದುವರಿದಿದೆ.

ಇದರಿಂದಾಗಿ ಮನುಷ್ಯ ಮತ್ತು ಮೆಶಿನ್ ನಡುವಿನ ಸಂವಹನ ಮತ್ತೊಂದು ಆಯಾಮ ಪಡೆದುಕೊಳ್ಳಲಿದೆ.

ಕೃತಕ ಬುದ್ಧಿಮತ್ತೆ ಸಹಾಯಕ ತಂತ್ರಜ್ಞಾನಗಳಾದ ಅಮೆಜಾನ್‍ನ ‘ಅಲೆಕ್ಸಾ, ಗೂಗಲ್‍ನ ‘ಅಸಿಸ್ಟಂಟ್’ ಹಾಗೂ ಆ್ಯಪಲ್‍ನ ‘ಸಿರಿ’ ಜತೆಗೆ ನಿಶ್ಶಬ್ದವಾಗಿ ಸಂಪರ್ಕ ಸಾಧಿಸಿ ಅಗತ್ಯ ಸಹಾಯ ಪಡೆದುಕೊಳ್ಳಬಹುದು. ದೈಹಿಕ ನ್ಯೂನತೆ ಇರುವ ವ್ಯಕ್ತಿ ಅಥವಾ ಹೊರಗಿನ ಸದ್ದು ಅಧಿಕವಿರುವ ಕಡೆ ಸಂವಹನ ಪರಿಣಾಮಕಾರಿ ನಡೆಯಲು ಆಲ್ಟರ್‍ಈಗೊ ಸಹಕಾರಿಯಾಗಬಹುದಾಗಿದೆ.

ಆಲೋಚನೆಗಳನ್ನು ಪರದೆಯ ಮೇಲೆ ತಂದ ಎಸಿಎಟಿ

ಸ್ಟೀಫನ್ ಹಾಕಿಂಗ್ ತಮ್ಮ ಸಂಶೋಧನಾ ಪ್ರಬಂಧ ಮಂಡಿಸಿದ ನಂತರ ಕೆಲವೇ ವರ್ಷಗಳಲ್ಲಿ ನರ-ಸ್ನಾಯು ಪಾರ್ಶ್ವವಾಯುಗೆ ಒಳಗಾಗಿ ದೇಹದ ಒಂದೊಂದೇ ಭಾಗ ಸ್ವಾಧೀನ ಕಳೆದುಕೊಳ್ಳುತ್ತಾ ಸಾಗಿತ್ತು. ಮುಂದಿನ ಕೆಲ ದಿನಗಳಲ್ಲಿ ಮಾತಿನ ಅಸ್ಪಷ್ಟ ಉಚ್ಚಾರಣೆಯೂ ನಿಂತಿತು. ಈ ನಡುವೆ ಛಲ ಬಿಡದೆ ಸಂಶೋಧನಾ ಕಾರ್ಯಗಳನ್ನು ಮುಂದುವರಿಸಿದ್ದ ಅವರಿಗೆ ಇಂಟೆಲ್ ರೂಪಿಸಿಕೊಟ್ಟ ಅಸಿಸ್ಟಿವ್ ಕಾಂಟೆಕ್ಸ್ಟ್-ಅವೇರ್ ಟೂಲ್‍ಕಿಟ್ (ಎಸಿಎಟಿ) ಬದುಕಿನ ಕೊನೆಯವರೆಗೂ ಸಹಾಯಕನಂತಿತ್ತು.

1997ರಿಂದಲೇ ಎಸಿಎಟಿ ವ್ಯವಸ್ಥೆಯನ್ನು ಒಳಗೊಂಡ ಕಂಪ್ಯೂಟರ್ ಅನ್ನು ಹಾಕಿಂಗ್ ಬಳಸುತ್ತಿದ್ದರು. ಅವರ ಆಲೋಚನೆಯನ್ನು ಪರದೆ ಮೇಲೆ ತಂದು ದಾಖಲಿಸುತ್ತಿದ್ದದ್ದು ಇದೇ ತಂತ್ರಜ್ಞಾನ. ಗಾಲಿ ಕುರ್ಚಿಯ ಒಂದು ಭಾಗದಲ್ಲಿ ಅಳವಡಿಸಲಾಗಿದ್ದ ಟ್ಯಾಬ್ಲೆಟ್ ಕಂಪ್ಯೂಟರ್ ಬ್ಯಾಟರಿ ಸಹಾಯದಿಂದ ಕಾರ್ಯಾಚರಿಸುತ್ತಿತ್ತು. ಗಲ್ಲ ಅಲುಗಿಸಿದರೆ ಸಾಕು ಕಂಪ್ಯೂಟರ್ ಪರದೆ ಮೇಲಿನ ಕರ್ಸರ್ ಚಲಿಸುತ್ತ ಅಕ್ಷರಗಳನ್ನು ಆಯ್ಕೆ ಮಾಡುತ್ತಿತ್ತು. ಗಲ್ಲದ ಚಲನೆಯನ್ನು ಗ್ರಹಿಸಿ ಎಸಿಎಟಿ ವ್ಯವಸ್ಥೆಗೆ ಸಂದೇಶ ನೀಡಲು ಹಾಕಿಂಗ್ ಅವರ ಕನ್ನಡಕಕ್ಕೆ ವಿಶೇಷವಾದ ಇನ್‍ಫ್ರಾರೆಡ್ ಸ್ವಿಚ್ ಅಳವಡಿಸಲಾಗಿತ್ತು.

ಇಂಟೆಲ್ ಎಸಿಎಟಿ ವ್ಯವಸ್ಥೆಯಲ್ಲಿ ಪದಗಳನ್ನು ಊಹಿಸುವ ಹಾಗೂ ಹಾಕಿಂಗ್ ಅವರ ಪುಸ್ತಕಗಳಲ್ಲಿ ಮತ್ತು ಭಾಷಣಗಳಲ್ಲಿ ಬಳಸಿರುವ ಸಾಲುಗಳನ್ನು ಸಂಗ್ರಹಿಸಿ ಕಂಪ್ಯೂಟರ್‌ಗೆ ಮೆಶಿನ್ ಲರ್ನಿಂಗ್ ರೀತಿಯಲ್ಲಿ ಕಲಿಸಲಾಗಿತ್ತು. ಹೀಗಾಗಿ ಹಾಕಿಂಗ್ ಯೋಚನೆಗಳಲ್ಲಿ ಮೂಡಿ ಗಲ್ಲದ ಮೂಲಕ ಟೈಪಿಸಲು ಹೊರಟ ಪದಗಳನ್ನು ಕಂಪ್ಯೂಟರ್ ಬಹುಬೇಗ ಅರ್ಥೈಸಿಕೊಂಡು ಪರದೆ ಮೇಲೆ ತರುತ್ತಿತ್ತು. ಹೀಗೆ ಸಿದ್ಧಗೊಂಡ ಸಾಲುಗಳನ್ನು ಅವರು ಧ್ವನಿ ಹೊರಡಿಸುವ ಸ್ಪೀಚ್ ಸಿಂಥಸೈಸಎರ್‌ಗೆ ರವಾನಿಸುತ್ತಿದ್ದರು.

ಸ್ಪೀಚ್ ಪ್ಲಸ್ ಅಭಿವೃದ್ಧಿಪಡಿಸಿಕೊಟ್ಟಿದ್ದ ಈ ಉಪಕರಣ ಅಮೆರಿಕನ್, ಸ್ಕಾಟಿಷ್ ಸೇರಿ ಹಲವು ಶೈಲಿಯಲ್ಲಿ ಮಾತು ಹೊರಡಿಸುತ್ತಿತ್ತು. ಹಾಕಿಂಗ್ ಅವರ ಸ್ಪರ್ಶ, ಸಂಕೇತಗಳ ಮೂಲಕ ಮೂಡಿದ ಸಾಲುಗಳನ್ನು ಈ ಉಪಕರಣ ಸ್ಪಷ್ಟವಾಗಿ ಓದುತ್ತಿತ್ತು. ಇದರಿಂದಲೇ ಹಾಕಿಂಗ್ ಮಾತನಾಡದೆಯೂ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲಿ ಹಾಗೂ ಅಂತರರಾಷ್ಟ್ರೀಯ ವಿಜ್ಞಾನ ಸಂವಾದಗಳಲ್ಲಿ ತಮ್ಮ ನಿಲುವು ಪ್ರಸ್ತುತ ಪಡಿಸುತ್ತಿದ್ದರು.

ಇದೇ ಕಂಪ್ಯೂಟರ್‌ನಲ್ಲಿ ಮೈಕ್ರೋಸಾಫ್ಟ್ ಔಟ್‍ಲುಕ್ ಮೂಲಕ ಇಮೇಲ್ ನೋಡುವುದು-ಪ್ರತಿಕ್ರಿಯಿಸುವುದು, ಫೈರ್‌ಫಾಕ್ಸ್ ಮೂಲಕ ಅಂತರ್ಜಾಲ ಹುಡುಕಾಟ, ಎಂಎಸ್ ವರ್ಡ್ ಬಳಸಿ ಭಾಷಣೆ/ಸಂಶೋಧನೆ ಬರೆಯುವುದು ಹಾಗೂ ವೆಬ್‍ಕ್ಯಾಮ್‍ನಿಂದ ಸ್ಕೈಪ್ ಮೂಲಕ ಸ್ನೇಹಿತರು, ಆಪ್ತರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರು ಹಾಕಿಂಗ್. ಅಭಿವೃದ್ಧಿಯಾಗುತ್ತಿದ್ದ ಹೊಸ ಸಹಾಯಕ ತಂತ್ರಜ್ಞಾನಗಳನ್ನು ಅವರು ಪ್ರಯತ್ನಿಸುತ್ತಿದ್ದರು.

ಕಣ್ಣಿನ ಚಲನೆ ಮತ್ತು ಮೆದುಳಿನ ಮೂಲಕ ನಿಯಂತ್ರಿಸಬಹುದಾದ ಹಲವು ಸಂವಹನ ವ್ಯವಸ್ಥೆಗಳನ್ನು ಬಳಸಿ ನೋಡಿದ್ದ ಹಾಕಿಂಗ್ ಅವರಿಗೆ ಗಲ್ಲದ ಮೂಲಕ ಗ್ರಹಿಸುವ ತಂತ್ರಜ್ಞಾನವೇ ಸುಲಭ ಮತ್ತು ಸಮರ್ಥವೆನಿಸಿತ್ತು. ದೈಹಿಕ ನ್ಯೂನತೆ ನಡುವೆಯೂ ಅವರ ಸಾಧನೆ ಗಮನಾರ್ಹವಾದುದು. ನರದೌರ್ಬಲ್ಯದಂತಹ ಸಮಸ್ಯೆಯಿಂದ ಮಾತುಕಳೆದುಕೊಂಡ ಅನೇಕರು ಇವರಿಂದ ಸ್ಫೂರ್ತಿ ಪಡೆದು ಸಹಾಯಕ ತಂತ್ರಜ್ಞಾನ ವ್ಯವಸ್ಥೆಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ.

ಸೂಕ್ಷ್ಮ– ಸಮರ್ಥ ತಂತ್ರಜ್ಞಾನ

ಏನನ್ನೂ ಹೇಳಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇರುವವರ ಮೆದುಳಿನಲ್ಲಿ ಯೋಚಿಸುವ ಎಲ್ಲವನ್ನೂ ಪದಗಳಲ್ಲಿ ಪರದೆ ಮೇಲೆ ಮೂಡಿಸುವುದಕ್ಕಾಗಿ ಮತ್ತಷ್ಟು ಪ್ರಯತ್ನ ನಡೆದಿದೆ. ಮೆದುಳಿನ ನರಗಳ ಸಂಕೇತಗಳನ್ನು ಗ್ರಹಿಸಿ ಪದಗಳನ್ನು ನಿಖರವಾಗಿ ಗುರುತಿಸುವ ‘ಮೈಂಡ್ ರೀಡಿಂಗ್’ ವ್ಯವಸ್ಥೆಯನ್ನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸುತ್ತಿದ್ದಾರೆ. ಮೆದುಳಿನಲ್ಲಿ ಮೂಡುವ, ಈವರೆಗೂ ಕೇಳಿರದ ಪದಗಳನ್ನೂ ಇದು ಪುನರ್ ಸ್ಥಾಪಿಸಲಿದ್ದು, ಪ್ರಸ್ತುತ ಶೇ 90ರಷ್ಟು ನಿಖರತೆ ಸಾಧಿಸಿದೆ.

ಫೇಸ್‍ಬುಕ್ ಸಂಶೋಧನೆ

ಕೀಪ್ಯಾಡ್ ಅಥವಾ ಸ್ಮಾರ್ಟ್ ಫೋನ್ ಪರದೆಯಲ್ಲಿ ಅಕ್ಷರ ಕೀ ಬಳಸದೆಯೇ ನೇರವಾಗಿ ಮೆದುಳಿನಲ್ಲಿ ಯೋಚಿಸುವುದನ್ನು ನಿಮಿಷಕ್ಕೆ 100 ಪದ ವೇಗದಲ್ಲಿ ಟೈಪಿಸುವ ವ್ಯವಸ್ಥೆಯನ್ನು ಫೇಸ್‍ಬುಕ್ ರೂಪಿಸುತ್ತಿದೆ. ವರ್ಷಗಳ ಹಿಂದೆಯೇ 60 ಎಂಜಿನಿಯರ್‌ಗಳ ತಂಡ ಮೆದುಳು-ಕಂಪ್ಯೂಟರ್ ವ್ಯವಸ್ಥೆ ಅಭಿವೃದ್ಧಿಯಲ್ಲಿ ತೊಡಗಿದೆ. ಆಪ್ಟಿಕಲ್ ಇಮೇಜಿಂಗ್ ತಂತ್ರಜ್ಞಾನದ ಮೂಲಕ ಮೆದುಳಿನ ಮಾತುಗಳನ್ನು ಪದಗಳಾಗಿಸುವ ನಿಟ್ಟಿನಲ್ಲಿ ‘ಬಿಲ್ಡಿಂಗ್ 8’ ತಂಡ ಕಾರ್ಯನಿರತವಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಬದಲಾದ ಜಿಮೇಲ್ ಸ್ವರೂಪ; ಹೊಸತೇನಿದೆ?

ತಂತ್ರೋಪನಿಷತ್ತು
ಬದಲಾದ ಜಿಮೇಲ್ ಸ್ವರೂಪ; ಹೊಸತೇನಿದೆ?

24 May, 2018
ಫೇಸ್‌ಬುಕ್‌ನಲ್ಲಿ ಈ ವಿಷಯ ಶೇರ್ ಮಾಡಬೇಡಿ

ತಂತ್ರೋಪನಿಷತ್ತು
ಫೇಸ್‌ಬುಕ್‌ನಲ್ಲಿ ಈ ವಿಷಯ ಶೇರ್ ಮಾಡಬೇಡಿ

17 May, 2018
ಮೊಬೈಲ್‌ ಮಾರುವ ಮುನ್ನ

ಮಾರುಕಟ್ಟೆ
ಮೊಬೈಲ್‌ ಮಾರುವ ಮುನ್ನ

16 May, 2018
ವಾಟ್ಸ್ಆ್ಯಪ್ ಬಳಕೆಗೆ ಕನಿಷ್ಠ ವಯಸ್ಸು ನಿಗದಿ

ದತ್ತಾಂಶ ಸಂಗ್ರಹ
ವಾಟ್ಸ್ಆ್ಯಪ್ ಬಳಕೆಗೆ ಕನಿಷ್ಠ ವಯಸ್ಸು ನಿಗದಿ

16 May, 2018
ನವಯುಗದ ಜಾದೂಗಾರ ಮೆಸೆಂಜರ್‌

ತಂತ್ರಜ್ಞಾನ
ನವಯುಗದ ಜಾದೂಗಾರ ಮೆಸೆಂಜರ್‌

11 May, 2018