ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಾರದತ್ತ ಸುಳಿಯದ ಕಾರ್ಮಿಕರು

ಕಾವೇರುತ್ತಿರುವ ಪ್ರಚಾರ, ದಿನಗೂಲಿ ಕಾರ್ಮಿಕರತ್ತ ಅಭ್ಯರ್ಥಿಗಳ ಚಿತ್ತ
ಅಕ್ಷರ ಗಾತ್ರ

ದಾವಣಗೆರೆ: ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದಿದೆ. ಚುನಾವಣೆ ಪ್ರಚಾರದ ಕಾವು ನಿಧಾನವಾಗಿ ಏರುತ್ತಿದ್ದು, ಕೆಲ ಅಭ್ಯರ್ಥಿಗಳ ಬೆಂಬಲಿಗರು ಈಗಾಗಲೇ ಅವರವರ ನಾಯಕರ ಪರವಾಗಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಅಭ್ಯರ್ಥಿಗಳು ತಮ್ಮ ಬಲ ಪ್ರದರ್ಶಿಸುವುದಕ್ಕಾಗಿಯೇ ಹೆಚ್ಚು ಹೆಚ್ಚು ಜನರನ್ನು ತಮ್ಮ ಪರವಾಗಿ ನಡೆಯುವ ಚುನಾವಣೆ ಪ್ರಚಾರ, ರ‍್ಯಾಲಿ ಹಾಗೂ ರೋಡ್‌ ಷೋಗಳಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿಯೇ ಕೆಲ ಅಭ್ಯರ್ಥಿಗಳು ಎಂದಿನಂತೆ ದಿನಗೂಲಿ ಆಧಾರದ ಮೇಲೆ ನಿತ್ಯ ಪ್ರಚಾರಕ್ಕಾಗಿಯೇ ಕಟ್ಟಡ ಕಾರ್ಮಿಕ, ಪ್ಲಂಬರ್‌, ಬಡಗಿ ಕೆಲಸಗಾರ, ಪೇಂಟರ್‌, ಕೂಲಿ ಕಾರ್ಮಿಕ ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರತ್ತ ಚಿತ್ತ ಹರಿಸಿದ್ದಾರೆ. ಕೆಲ ಕಾರ್ಮಿಕರು ಕೂಡ ಹೆಚ್ಚು ದೈಹಿಕ ಶ್ರಮವಿಲ್ಲದೇ ಪ್ರಚಾರದಲ್ಲಿ ಭಾಗವಹಿಸುವ ಮೂಲಕ ತುಸು ಹಣ ಸಂಪಾದಿಸುವ ಚಿಂತನೆಯಲ್ಲಿಯೂ ಇದ್ದಾರೆ.

ನಿತ್ಯ ₹500 ಕೂಲಿ, ಊಟ, ತಿಂಡಿ ಉಚಿತ: ಚುನಾವಣಾ ಪ್ರಚಾರ, ರೋಡ್‌ ಷೋಗಳಲ್ಲಿ ಭಾಗವಹಿಸುವ ಬಹುತೇಕರು ಕಟ್ಟಡ ಕಾರ್ಮಿಕರು. ಇವರಿಗೆ ಕೆಲ ಅಭ್ಯರ್ಥಿಗಳು ನಿತ್ಯ₹ 500 ದಿನಗೂಲಿ ಹಾಗೂ ಉಚಿತವಾಗಿ ತಿಂಡಿ, ಊಟ ಕೊಟ್ಟು ಪ್ರಚಾರದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುತ್ತಾರೆ. ಆದರೆ, ಇಂತಹ ಪ್ರಚಾರಗಳಲ್ಲಿ ಭಾಗವಹಿಸುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ ಎನ್ನುತ್ತಾರೆ ಕಾರ್ಮಿಕ ಸಂಘಟನೆ ಮುಖಂಡ ಆವರಗೆರೆ ಉಮೇಶ್‌.

ಇಲ್ಲಿನ ಗಾಂಧಿನಗರ, ಚೌಡೇಶ್ವರಿ ನಗರ, ಎಸ್‌ಪಿಎಸ್‌ ನಗರ, ಎಸ್‌.ಎಂ.ಕೃಷ್ಣ ನಗರ, ಜಾಲಿನಗರ, ವಿನೋಬ ನಗರ, ನಿಟುವಳ್ಳಿ, ಕೆಟಿಜೆ ನಗರ, ಲೆನಿನ್‌ ನಗರ, ಸರಸ್ವತಿ ನಗರ, ಶಕ್ತಿನಗರ, ಸೇರಿದಂತೆ ನಗರದಲ್ಲಿ 12 ಸಾವಿರಕ್ಕೂ ಹೆಚ್ಚು ದಿನಗೂಲಿ ಕಾರ್ಮಿಕರು ಇದ್ದಾರೆ. ಇವರಲ್ಲಿ 1 ಸಾವಿರ ಜನರು ಮಾತ್ರ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಬಹುದು ಎನ್ನುತ್ತಾರೆ ಅವರು.

ಚುನಾವಣೆ ಪ್ರಚಾರದ ಭರಾಟೆ ಇನ್ನೂ ಕಾಣುತ್ತಿಲ್ಲ. ಮೇ 2ರ ನಂತರ ಹೆಚ್ಚಾಗಬಹುದು. ಕೆಲ ಅಭ್ಯರ್ಥಿಗಳ ಬೆಂಬಲಿಗರು ತಮ್ಮ ನಾಯಕರ ಪರ ಪ್ರಚಾರ ಮಾಡಲು ಕಟ್ಟಡ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಾರೆ. ಇದು ಪ್ರಜಾಪ್ರಭುತ್ವ ವಿರೋಧಿ ನೀತಿ. ಕಾರ್ಮಿಕರು ತಮಗೆ ಇಷ್ಟ ಬಂದ ಅಭ್ಯರ್ಥಿಗೆ ಮತ ಹಾಕಬೇಕೇ ವಿನಾ, ಯಾರ ಪರ ಪ್ರಚಾರಕ್ಕೆ ಹೋಗಬಾರದು ಎಂದು ಮನವಿ ಮಾಡುತ್ತಾರೆ ಕಾರ್ಮಿಕ ಮುಖಂಡ ಆವರಗೆರೆ ವಾಸು.

ಹಿಂದಿನ ಚುನಾವಣಾ ಪ್ರಚಾರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಭಾಗವಹಿಸುತ್ತಿದ್ದರು. ಆದರೆ, ಆ ಮನಸ್ಥಿತಿ ಈಗಿನ ಕಾರ್ಮಿಕರಲ್ಲಿ ಇಲ್ಲ. ಎಲ್ಲರೂ ಸ್ವಾಭಿಮಾನಿಗಳಾಗಿದ್ದಾರೆ. ನಿತ್ಯ ಮೈ ಮುರಿದು ದುಡಿದು ಊಟ ಮಾಡಲು ಬಯಸುತ್ತಾರೆ ಎನ್ನುತ್ತಾರೆ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಕಾರ್ಯದರ್ಶಿ ಲಿಂಗರಾಜ್‌.

ಕಟ್ಟಡ ನಿರ್ಮಾಣ ಸೇರಿದಂತೆ ದಿನಗೂಲಿ ಕೆಲಸಗಳಿಗೆ ಹೋಗುವುದರಿಂದ ನಿತ್ಯ ₹ 300 ರಿಂದ ₹ 500 ಕೂಲಿ ಸಿಗುತ್ತದೆ. ಆದರೆ, ಅದಕ್ಕೆ ಬೆಳಿಗ್ಗೆಯಿಂದ ಸಂಜೆಯ ತನಕ ದುಡಿಯಬೇಕು. ಆದರೆ, ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದರೆ ಹೆಚ್ಚು ಆಯಾಸವಿರುವುದಿಲ್ಲ. ಜತೆಗೆ ಕೂಲಿಯಷ್ಟೇ ಹಣ ಸಿಗುತ್ತದೆ ಎನ್ನುತ್ತಾರೆ ಕಟ್ಟಡ ಕಾರ್ಮಿಕ ರಮೇಶ್‌.

‘ಸಾವಿರ ಕಾರ್ಮಿಕರು ಭಾಗಿಯಾಗುವ ಸಾಧ್ಯತೆ’

ಜಿಲ್ಲೆಯಲ್ಲಿ 30 ಸಾವಿರ ಜನ ಅಸಂಘಟಿತ ವಲಯದ ಕಾರ್ಮಿಕರಿದ್ದಾರೆ. ಇವರಲ್ಲಿ ಶೇ 10ರಷ್ಟು ಜನ ಮಾತ್ರ ಚುನಾವಣಾ ಪ್ರಚಾರಗಳಲ್ಲಿ ಭಾಗವಹಿಸಬಹುದು. ದಿನಗೂಲಿ ಕಾರ್ಮಿಕರು ಯಾವ ಅಭ್ಯರ್ಥಿಗಳ ಪರ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಬಾರದು ಎಂದು ಮೇ 2ರ ನಂತರ ಕರಪತ್ರದ ಮೂಲಕ ಮನವಿ ಮಾಡಲಾಗುವುದು ಎನ್ನುತ್ತಾರೆ ಎಐಟಿಯುಸಿ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಚ್‌.ಕೆ. ರಾಮಚಂದ್ರಪ್ಪ.

‘ಕರಪತ್ರ ವಿತರಿಸಿ ಜಾಗೃತಿ’

ಅಭ್ಯರ್ಥಿಗಳ ಪರ ಚುನಾವಣೆ ಪ್ರಚಾರದಲ್ಲಿ ಕೆಲ ಕಾರ್ಮಿಕರು ಭಾಗವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಆವರಗೆರೆಯಲ್ಲಿ ಮಂಗಳವಾರ ರಾತ್ರಿ ಕಾರ್ಮಿಕರ ಸಭೆ ಕರೆದು, ಕೆಲಸ ಬಿಟ್ಟು ಯಾರ ಪರವೂ ಪ್ರಚಾರಕ್ಕೆ ಹೋಗಬಾರದು. ಹರುಷದ ಕೂಳಿಗಾಗಿ ವರುಷದ ಕೂಳು ಕಳೆದುಕೊಳ್ಳಬಾರದು ಎಂದು ಸಲಹೆ ನೀಡಲಾಗಿದೆ ಎನ್ನುತ್ತಾರೆ ಆವರಗೆರೆ ಉಮೇಶ್‌.

ನಿತ್ಯದ ಕಾಯಕ ಬಿಟ್ಟು, ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗಬಾರದು ಎಂದು ಕರಪತ್ರವನ್ನು ಮುದ್ರಿಸಿ ಮೇ 2ರ ನಂತರ ಕಾರ್ಮಿಕರಿಗೆ ಹಂಚುವ ಮೂಲಕ ಜಾಗೃತಿ ಮೂಡಿಸಲಾಗುವುದು ಎನ್ನುತ್ತಾರೆ ಅವರು.

**
ಪ್ರಚಾರದ ಬಿಸಿ ಕಟ್ಟಡ ನಿರ್ಮಾಣದ ಕಾರ್ಮಿಕರ ಮೇಲೆ ಇನ್ನೂ ತಾಗಿಲ್ಲ. ಮೇ 1ರ ನಂತರ ಪರಿಣಾಮ ಎದುರಿಸಬಹುದು
– ವಿಜಯ್‌ ಕುಮಾರ್‌, ಸಿವಿಲ್‌ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT