ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಅಸ್ವಸ್ಥರ ಕೇಂದ್ರಕ್ಕೆ ‘ಅನಾರೋಗ್ಯ’

Last Updated 26 ಏಪ್ರಿಲ್ 2018, 20:02 IST
ಅಕ್ಷರ ಗಾತ್ರ

ಬೆಂಗಳೂರು: ಗೋದಾಮಿನ ಆಕಾರದ ಕಟ್ಟಡ. ಅದರ ಒಂದು ಬದಿಯಲ್ಲಿ ಗಿಡಗಂಟಿಗಳು ಬೆಳೆದಿವೆ. ಮತ್ತೊಂದು ಬದಿಯಲ್ಲಿ ಗಲ್ಲಿಯಂತ ದಾರಿ ಇದೆ. ಆ ಕಟ್ಟಡದ ಗೋಡೆಗಳಿಗೆ ದಶಕಗಳ ಹಿಂದೆ ಮೆತ್ತಿದ ಸಿಮೆಂಟ್‌ ಮಳೆ, ಗಾಳಿ, ಬಿಸಿಲಿಗೆ ಪಕಳೆಗಳಾಗಿ ಉದುರುತ್ತಿದೆ.

ಇಂದಿರಾನಗರದಲ್ಲಿನ ಟಿ.ಬಿ.ಆಸ್ಪತ್ರೆ ಆವರಣದಲ್ಲಿ ಇರುವ ಮಾನಸ ಕೇಂದ್ರದ (ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ) ದುಸ್ಥಿತಿ ಇದು. ಇಂತಹ ವಾತಾವರಣದಲ್ಲಿಯೇ ಅಸ್ವಸ್ಥರನ್ನು ಸ್ವಸ್ಥರಾಗಿಸುವ ಪ್ರಯತ್ನವನ್ನು ರಾಜ್ಯ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮಾಡುತ್ತಿದೆ.

ಹಳೆ ಮದ್ರಾಸ್‌ ರಸ್ತೆ ಬದಿಯ ಈ ಕೇಂದ್ರದಲ್ಲಿ ಸೌಲಭ್ಯಗಳ ಕೊರತೆಗಳಿಂದಾಗಿ ಅಸ್ವಸ್ಥರು ಮತ್ತು ಅವರನ್ನು ಉಪಚರಿಸುವ ಸಿಬ್ಬಂದಿಯೂ ಹೈರಾಣಾಗುತ್ತಿದ್ದಾರೆ.

ಜಮೀನು ಹೋದ ಬಳಿಕ ಸಮಸ್ಯೆಗಳು ಉದ್ಭವ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ 7 ಎಕರೆ ಜಮೀನಿನಲ್ಲಿ 2007ರಿಂದ ಈ ಮಾನಸ ಕೇಂದ್ರ ನಡೆಸಲಾಗುತ್ತಿತ್ತು. ಈ ಕೇಂದ್ರದ ಸುಪರ್ದಿಯಲ್ಲಿದ್ದ 6 ಎಕರೆ 11 ಗುಂಟೆ ಜಮೀನು ಪಡೆದು ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್‌ ಎಂಡೋಕ್ರೈನಾಲಜಿ ಆ್ಯಂಡ್‌ ರಿಸರ್ಚ್‌ನವರು(ಕೆಐಇಆರ್‌) ‘ಮಧುಮೇಹ ಸಂಶೋಧನಾ ಸಂಸ್ಥೆ’ಯ ಕಟ್ಟಡ ಕಟ್ಟಲು ಕಾಮಗಾರಿ ಆರಂಭಿಸಿದ್ದಾರೆ. ಕೆಲಸ ನಡೆಯುತ್ತಿರುವ ಜಾಗದ ಸುತ್ತಲೂ  ತಡೆಗೋಡೆ ನಿರ್ಮಿಸಿಕೊಂಡಿದ್ದಾರೆ. ಇದರಿಂದ ಮಾನಸ ಕೇಂದ್ರದ ಕಚೇರಿ ನೆಲಸಮ ಆಗಿದೆ. ಅಸ್ವಸ್ಥರಿಗೆ ಮಾನಸಿಕ ಬಲ ತುಂಬುವ ಚಟುವಟಿಕೆಗಳನ್ನು ನಡೆಸಲು ಸ್ಥಳಾವಕಾಶ ಇಲ್ಲದಂತಾಗಿದೆ. ಜೈಲಿನಂತೆ ಇರುವ ಕಟ್ಟಡದಲ್ಲಿಯೇ ಅವರನ್ನು ಕೂಡಿ ಹಾಕುವಂತಾಗಿದೆ.


ಮಾನಸ ಕೇಂದ್ರ ಇರುವ ಕಟ್ಟಡ

ಮೂಲಸೌಕರ್ಯಗಳ ಕೊರತೆ: ಈ ಕೇಂದ್ರಕ್ಕೆ ನೀರು ಒದಗಿಸುವ ಬೋರ್‌ವೆಲ್‌ ಈಗ ಕೆಐಇಆರ್‌ ಜಾಗದಲ್ಲಿದೆ. ಅದರಿಂದ ಬೇಕೆಂದಾಗ ನೀರು ಪಡೆಯಲು ಕೇಂದ್ರದ ಸಿಬ್ಬಂದಿಗೆ ಆಗುತ್ತಿಲ್ಲ. ಇರುವ 500 ಲೀ. ಸಾಮರ್ಥ್ಯದ ಒಂದು ಓವರ್‌ ಹೆಡ್‌ ಟ್ಯಾಂಕ್‌ನಲ್ಲಿ ನೀರು ತುಂಬಿಸಿಕೊಂಡು 20 ಅಸ್ವಸ್ಥರು ಮತ್ತು 13 ಸಿಬ್ಬಂದಿ ದಿನಪೂರ್ತಿ ಬಳಸುತ್ತಿದ್ದಾರೆ. ಅಡುಗೆ ಮತ್ತು ಬಟ್ಟೆ ಒಗೆಯಲು ಆ ನೀರಿನಲ್ಲೇ ಒಂದಷ್ಟು ಮೀಸಲಿಡುತ್ತಾರೆ.

ಗೋದಾಮು ಕಟ್ಟಡವನ್ನೇ ಸಮಭಾಗವಾಗಿ ವಿಭಜಿಸಿ, ಪುರುಷ ಮತ್ತು ಮಹಿಳಾ ಅಸ್ವಸ್ಥರ ವಿಭಾಗಗಳನ್ನು ರೂಪಿಸಿದ್ದಾರೆ. ಅದರ ನಡುವಿನ ಕಾರಿಡಾರ್‌ನಲ್ಲಿಯೇ ಟೇಬಲ್‌, ಕುರ್ಚಿಗಳನ್ನು ಹಾಕಿ ಕಚೇರಿ ಎಂದು ಕರೆಯುತ್ತಿದ್ದಾರೆ. ಆ ಕಾರಿಡಾರ್‌ನ ಒಂದು ಭಾಗವನ್ನು ಅಡುಗೆ ಕೋಣೆಯಾಗಿಸಿದ್ದಾರೆ.

ಬಳಸದ ಕುರ್ಚಿ, ಟೇಬಲ್‌, ಮಂಚ ಮತ್ತು ಬೆಡ್‌ಗಳನ್ನು ಪುರುಷರ ವಿಭಾಗದ ಒಂದು ಮೂಲೆಯಲ್ಲಿ ಗುಡ್ಡೆ ಹಾಕಿದ್ದಾರೆ. ನಾಲ್ಕು ಟಿ.ವಿಗಳಿವೆ. ಅದರಲ್ಲಿ 2 ದೂಳು ಹಿಡಿದು ಮೂಲೆ ಸೇರಿವೆ. ಗೋಡೆಗೆ ಜೋಡಿಸಿರುವ ಇನ್ನೆರಡಕ್ಕೆ ಡಿಟಿಎಚ್‌ ಅಥವಾ ಕೇಬಲ್‌ ಕನೆಕ್ಷನ್ನೇ ಇಲ್ಲ. ಬದಿಯಲ್ಲಿನ ಗಿಡಗಂಟಿಯಿಂದಾಗಿ ಈ ಕೇಂದ್ರದಲ್ಲಿ ಹುಳು–ಹುಪ್ಪಟೆಗಳು ಕಾಣಿಸುತ್ತಿವೆ. ಸ್ನಾನದ ಕೋಣೆ, ಶೌಚಾಲಯ ಸ್ಥಿತಿಯೂ ಶೋಚನೀಯವಾಗಿದೆ.

ಕೇಂದ್ರದ ತಡೆಗೋಡೆ ಹೆಚ್ಚು ಎತ್ತರವಿಲ್ಲ. ಹಾಗಾಗಿ ಇಲ್ಲಿನ ವಾಸಿಗಳು ಆಗಾಗ ಹೊರಹೋದ ಪ್ರಸಂಗಗಳು ನಡೆದಿವೆ. ಅವರಿಗೆ ಸಮವಸ್ತ್ರ ಮತ್ತು ಗುರುತಿನ ಚೀಟಿ ನೀಡಿಲ್ಲ. ಇಳಿವಯಸ್ಸಿನ ಒಬ್ಬರೇ ಭದ್ರತಾ ಸಿಬ್ಬಂದಿ ಅಸ್ವಸ್ಥರ ಮೇಲೆ 24 ಗಂಟೆ ಕಣ್ಣಿಟ್ಟು ಕಾಯುತ್ತಿದ್ದಾರೆ.

ಅಸ್ವಸ್ಥರ ಸ್ಥಿತಿಗತಿ: ‘ಕೆಐಇಆರ್‌ ಕಾಮಗಾರಿಯಿಂದ ಅಸ್ವಸ್ಥರಿಗೆ ಅಂಗಳವಿಲ್ಲದಂತಾಗಿದೆ. ‘ನಮಗೇಕೆ ಹೊರಗೆ ಬಿಡುತ್ತಿಲ್ಲ. ನಮ್ಮನ್ನು ಮನೆಗೆ ಕಳಿಸಿ’ ಎಂದು ಅಸ್ವಸ್ಥರು ಹಟ ಹಿಡಿಯುತ್ತಿದ್ದಾರೆ’ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

‘ಕೆಐಇಆರ್‌ ವಿಶಾಲವಾದ ಜಾಗ ಪಡೆಯುವ ಮೊದಲು, ಅದರಲ್ಲಿ ಹೂ–ಹಣ್ಣು– ತರಕಾರಿಗಳ ಸಸಿಗಳನ್ನು ಬೆಳೆಸುತ್ತಿದ್ದೆವು. ‘ಅವನ್ನೆಲ್ಲಾ ಜೆಸಿಬಿಯಿಂದ ಯಾಕೆ ಮುರಿದರು’ ಎಂದು ಅಸ್ವಸ್ಥರು ಕೇಳುವ ಪ್ರಶ್ನೆಗಳಿಗೆ ಅರ್ಥವಾಗುವಂತೆ ಉತ್ತರಿಸಲು ನಮಗಾಗುತ್ತಿಲ್ಲ. ಇಲ್ಲಿನ ಸಮಸ್ಯೆಗಳಿಂದಾಗಿ ಹೊಸ ಅಸ್ವಸ್ಥರನ್ನು ನಾವಿಲ್ಲಿ ದಾಖಲು ಮಾಡಿಕೊಳ್ಳುತ್ತಿಲ್ಲ’ ಎಂದು ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದರು.

ಸಿಬ್ಬಂದಿಯ ಅಳಲು:  ಈ ಕೇಂದ್ರದಲ್ಲಿ ಹಿಂದೂಸ್ತಾನ್‌ ಏಜೆನ್ಸಿಯ 13 ಸಿಬ್ಬಂದಿ ಮೂರು ಪಾಳಿಯಲ್ಲಿ 24 ಗಂಟೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ವಸತಿಗೃಹಗಳಿಲ್ಲ. ಡಿ ಗ್ರೂಫ್‌ ಸಿಬ್ಬಂದಿಗೆ ₹ 5,000, ಸ್ಟಾಫ್‌ ನರ್ಸ್‌ಗೆ ₹ 8,900, ಸೋಷಿಯಲ್‌ ವರ್ಕರ್‌ಗೆ ₹ 9,990 ಸಂಬಳವಿದೆ. ಪಿಎಫ್‌ ಸೌಲಭ್ಯವಿಲ್ಲ. ‘ಅಸ್ವಸ್ಥರು ಬೈದರು, ಹೊಡೆದರೂ ಉಪಚರಿಸುತ್ತೇವೆ, ಚಿಕಿತ್ಸೆ ನೀಡುತ್ತೇವೆ. ಸೇವೆಗೆ ತಕ್ಕ ಸಂಬಳ, ಉದ್ಯೋಗ ಭದ್ರತೆ ಇಲ್ಲದ ಕಾರಣ ನಾವು ಮಾನಸಿಕವಾಗಿ ಕುಗ್ಗುತ್ತಿದ್ದೇವೆ’ ಎಂದು ಸಿಬ್ಬಂದಿ ಅಳಲು ತೋಡಿಕೊಂಡರು. ಈ ಕೇಂದ್ರದ ಪರಿಶೀಲನೆಗೆಂದು ಇಲಾಖೆಯ ನಿರ್ದೇಶಕರು ಎರಡು ವರ್ಷಗಳ ಹಿಂದೆ ಬಂದಿದ್ದರು ಎಂದು ನೆನಪಿಸಿಕೊಂಡರು.

‘ಒಪ್ಪಂದವಿಲ್ಲದೆ ಸುಧಾರಣೆ ಅಸಾಧ್ಯ’
‘ಆರೋಗ್ಯ ಇಲಾಖೆಯೊಂದಿಗೆ ಜಮೀನಿಗಾಗಿ ಈ ಹಿಂದೆ ಮಾಡಿಕೊಂಡ ಒಪ್ಪಂದದಂತೆ ಕೇಂದ್ರ ನಡೆಸುತ್ತಿದ್ದೇವೆ. ಇಲ್ಲಿನ ಕಟ್ಟಡ ನವೀಕರಣ, ಅಸ್ವಸ್ಥರು ಮತ್ತು ಸಿಬ್ಬಂದಿಗೆ ಬೇಕಾದ ಸೌಲಭ್ಯಗಳನ್ನು ವಿಸ್ತರಿಸಲು ಹೊಸ ಒಪ್ಪಂದ ಮಾಡಿಕೊಳ್ಳಬೇಕಿದೆ. ಕೆಲವು ಕೊರತೆಗಳು ಇಲ್ಲಿವೆ’ ಎಂದು ಮಾನಸ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುವ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸುಮಂಗಲಾ ಹೇಳಿದರು.

‘ಅಸ್ವಸ್ಥರ ಆರೋಗ್ಯ ತಪಾಸಣಾ ಕೊಠಡಿ ನಿರ್ಮಿಸಲು, ಸಿಬ್ಬಂದಿಗೆ ಕ್ವಾಟ್ರಸ್ ಸೌಲಭ್ಯ ಕಲ್ಪಿಸಲು ಕೆಐಇಆರ್‌ ಸಂಸ್ಥೆಯೊಂದಿಗೆ ಮಾತುಕತೆ ನಡೆದಿದೆ. ಚುನಾವಣಾ ಕಾರ್ಯವನ್ನು ನಿಭಾಯಿಸಬೇಕಾಗಿರುವುದರಿಂದ ಕೇಂದ್ರದ ಕಡೆ ಹೆಚ್ಚು ಗಮನ ಹರಿಸಲಾಗುತ್ತಿಲ್ಲ. ಇಲ್ಲಿನ ಮೂಲಸೌಕರ್ಯ ಮತ್ತು ಸಿಬ್ಬಂದಿ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದು ಅವರು ಭರವಸೆ ನೀಡಿದರು.

**
ಈ ಕೇಂದ್ರವನ್ನು ಮುಚ್ಚಿ, ಅಸ್ವಸ್ಥರನ್ನು ನಿಮಾನ್ಸ್‌ ಆವರಣದಲ್ಲಿನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದರೆ ಎಲ್ಲ ಸಮಸ್ಯೆಗಳು ನಿವಾರಣೆ ಆಗಲಿವೆ.
– ಮಾನಸ ಕೇಂದ್ರದ ಸಿಬ್ಬಂದಿ

ಮಾನಸ ಕೇಂದ್ರಕ್ಕೆ ತೆರಳಲು ಇರುವ ಇಕ್ಕಟ್ಟಾದ ದಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT