ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಮಾರಾಟದ ಮೇಲೆ ಇಲಾಖೆ ನಿಗಾ

ಜಿಲ್ಲೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್, ವೈನ್‌ ಸ್ಟೋರ್‌ಗಳಿಗೆ ಹತ್ತು ಹಲವು ನಿರ್ಬಂಧ
Last Updated 29 ಏಪ್ರಿಲ್ 2018, 13:47 IST
ಅಕ್ಷರ ಗಾತ್ರ

ರಾಮನಗರ: ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಘೋಷಣೆಯಾದ ಬಳಿಕ ಅಕ್ರಮ ಮದ್ಯ ಸಂಗ್ರಹ ಮತ್ತು ಮಾರಾಟಗಾರರ ವಿರುದ್ಧ ಅಬಕಾರಿ ಇಲಾಖೆ ಶೋಧ ತೀವ್ರಗೊಳಿಸಿದೆ. ಅಕ್ರಮವಾಗಿ ಮದ್ಯ ಸಾಗಣೆ ಆಗದಂತೆ ಕಟ್ಟೆಚ್ಚರ ವಹಿಸಿದೆ.

ಮಾರ್ಚ್ 27ರಂದು ರಾಜ್ಯ ಚುನಾವಣಾ ಆಯೋಗವು ವಿಧಾನಸಭೆಗೆ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿತ್ತು. ರಾಜ್ಯದಲ್ಲಿ ಅಂದಿನಿಂದಲೇ ಮಾದರಿ ನೀತಿಸಂಹಿತೆಯು ಜಾರಿಗೆ ಬಂದಿತ್ತು. ಅಲ್ಲಿಂದ ಇಲ್ಲಿಯವರೆಗೆ ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ ₹72 ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ಅಬಕಾರಿ ಇಲಾಖೆಯು ಜಿಲ್ಲೆಯಲ್ಲಿ ವಶಪಡಿಸಿಕೊಂಡಿದೆ.

ಚುನಾವಣೆಯ ಹಿನ್ನೆಲೆಯಲ್ಲಿ ಬಾರ್‌ಗಳು ಹಾಗೂ ವೈನ್‌ ಸ್ಟೋರ್‌ಗಳಲ್ಲಿ ಮದ್ಯ ಮಾರಾಟಕ್ಕೆ ಇಲಾಖೆ ಕೆಲವೊಂದು ನಿರ್ಬಂಧಗಳನ್ನು ಹೇರಿದೆ. ಬಾರ್‌ ಮತ್ತು ರೆಸ್ಟೋರೆಂಟ್‌ಗಳು ತಮ್ಮಲ್ಲಿನ ಗ್ರಾಹಕರಿಗೆ ಮಾತ್ರ ಮದ್ಯ ಸರಬರಾಜು ಮಾಡಬೇಕು. ಹೊರಗೆ ಮದ್ಯ ಕೊಡುವಂತಿಲ್ಲ. ವೈನ್ ಸ್ಟೋರ್‌ಗಳು ಚಿಲ್ಲರೆಯಾಗಿ ಮದ್ಯ ಮಾರುವಂತಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ. ಆಯಾ ದಿನದಂದು ಮಾರಾಟವಾದ ಮದ್ಯದ ಪ್ರಮಾಣ ಮತ್ತು ಸಂಗ್ರಹದಲ್ಲಿ ಉಳಿದಿರುವ ಪ್ರಮಾಣದ ಪಟ್ಟಿಯನ್ನು ವರ್ತಕರು ನಿತ್ಯ ಇಲಾಖೆಯ ಕಚೇರಿಗೆ ತಲುಪಿಸಬೇಕಿದೆ.

ಲೈಸನ್ಸ್ ಅಮಾನತು: ಈ ಎಲ್ಲ ನಿಯಮಗಳನ್ನು ಪಾಲಿಸದ ಮದ್ಯದಂಗಡಿಗಳ ವಿರುದ್ಧ ಇಲಾಖೆಯು ಪರವಾನಗಿ ಅಮಾನತು ಅಸ್ತ್ರವನ್ನು ಪ್ರಯೋಗಿಸತೊಡಗಿದೆ. ಈಗಾಗಲೇ ಜಿಲ್ಲೆಯಲ್ಲಿ ಇಂತಹ 10 ಅಂಗಡಿಗಳ ಪರವಾನಗಿ ತಡೆಹಿಡಿಯಲಾಗಿದ್ದು, ಚುನಾವಣೆ ಮುಗಿಯುವವರೆಗೂ ಬಾಗಿಲು ತೆರೆಯದಂತೆ ಸೂಚಿಸಲಾಗಿದೆ. ಇದು ಮದ್ಯ ಮಾರಾಟಗಾರರನ್ನು ಚಿಂತೆಗೀಡು ಮಾಡಿದೆ.

ಸಂಘಟಿತ ದಾಳಿ: ಅಕ್ರಮ ಮದ್ಯ ಮಾರಾಟದ ವಿರುದ್ಧ ಅಬಕಾರಿ ಇಲಾಖೆಯು ಚುರುಕಾಗಿ ದಾಳಿ ಸಂಘಟಿಸತೊಡಗಿದೆ.
‘ಕಳೆದ ಒಂದು ತಿಂಗಳ ಅವಧಿಯಲ್ಲಿ 493 ರೈಡ್‌ ನಡೆದಿದ್ದು, 33 ಘೋರ, 144 ಸಾಮಾನ್ಯ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಇವುಗಳ ಪೈಕಿ ಘೋರ ಪ್ರಕರಣಗಳಲ್ಲಿ ಬಂಧಿತರಾದ 32 ಆರೋಪಿಗಳು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಸಾಮಾನ್ಯ ಪ್ರಕರಣಗಳಲ್ಲಿ ಬಂಧಿತರಾದ 144 ಆರೋಪಿಗಳು ಜಾಮೀನು ಪಡೆದಿದ್ದಾರೆ. ಒಟ್ಟು 11 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ’ ಎಂದು ಅಬಕಾರಿ ಉಪ ಆಯುಕ್ತ ಮಹೇಶ್‌ಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಚನಾವಣಾ ಆಯೋಗದ ಸೂಚನೆಯಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿಸಿದರು.

ಈ ವರ್ಷ ಕಡಿಮೆ ಗುರಿ

ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಮದ್ಯ ಮಾರಾಟದ ಗುರಿಯನ್ನು ಅಬಕಾರಿ ಇಲಾಖೆ ಹೊಂದಿದೆ. ಮದ್ಯದಂಗಡಿಗಳಿಗೆ ಸರಬರಾಜಾಗುವ ದಾಸ್ತಾನಿನ ಪ್ರಮಾಣಕ್ಕೂ ಮಿತಿ ವಿಧಿಸಲಾಗಿದೆ.

ಬಾರ್‌ ಮತ್ತು ವೈನ್ ಸ್ಟೋರ್‌ಗಳು ಕಳೆದ ವರ್ಷ ಇದೇ ತಿಂಗಳು ಎಷ್ಟು ಸೇಲ್ ಆಗಿದೆಯೋ ಅಷ್ಟು ಮಾತ್ರ ಮಾರಾಟ ಮಾಡಬೇಕು ಎಂಬ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ ಅಂಗಡಿಗಳು ತಮ್ಮಲ್ಲಿನ ಮದ್ಯವನ್ನು ಮುಂಗಡವಾಗಿ ಮಾರಾಟ ಮಾಡಿಕೊಂಡಲ್ಲಿ ಉಳಿದ ದಿನ ಬಾಗಿಲು ಮುಚ್ಚುವುದು ಅನಿವಾರ್ಯವಾಗಲಿದೆ.

**
ಕಳೆದ ಒಂದು ತಿಂಗಳಿನಿಂದ ಅಕ್ರಮ ಮದ್ಯ ಸಾಗಾಟ ಮತ್ತು ಮಾರಾಟದ ಮೇಲೆ ಇಲಾಖೆ ತೀವ್ರ ನಿಗಾ ವಹಿಸಿದೆ. ಈವರೆಗೆ ಜಿಲ್ಲೆಯಲ್ಲಿ 493 ದಾಳಿ ಸಂಘಟಿಸಲಾಗಿದೆ
– ಮಹೇಶ್‌ಕುಮಾರ್, ಅಬಕಾರಿ ಉಪ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT