ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೇ ತಿರುಗುಬಾಣವಾದ ಕಾರ್ಯತಂತ್ರ

Last Updated 20 ಮೇ 2018, 19:30 IST
ಅಕ್ಷರ ಗಾತ್ರ

ಅತಂತ್ರ ವಿಧಾನಸಭೆಯ ಹಿನ್ನೆಲೆಯಲ್ಲಿ ಅನಾವರಣಗೊಂಡ ಕರ್ನಾಟಕದ ರಾಜಕೀಯ ನಾಟಕವನ್ನು ದೇಶವೇ ಎದ್ದು ಕುಳಿತು ನೋಡಿತು. ಕರ್ನಾಟಕದ ರಾಜಕಾರಣ ಹೀಗೆ ಮತ್ತೊಮ್ಮೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗಮನವನ್ನು ತನ್ನತ್ತ ಸೆಳೆದು ತುದಿಗಾಲಲ್ಲಿ ನಿಲ್ಲಿಸಿ ಬಹುಕಾಲವೇ ಆಗಿತ್ತು.

ರಾಷ್ಟ್ರ ರಾಜಕಾರಣದ ಶಕ್ತಿ ಕೇಂದ್ರ ನವದೆಹಲಿ ಕೇವಲ ರಾಷ್ಟ್ರ ರಾಜಧಾನಿಯಲ್ಲ, ಸಮೂಹ ಮಾಧ್ಯಮಗಳ ರಾಜಧಾನಿಯೂ ಹೌದು. ಕಳೆದ ಒಂದು ವಾರ ದೆಹಲಿಯ ಮಾಧ್ಯಮ ಸಮೂಹ ಹಿಂಡು ಹಿಂಡಾಗಿ ಬೆಂಗಳೂರಿನಲ್ಲಿ ಬೀಡು ಬಿಟ್ಟು ಅಧಿಕಾರ ಕಬಳಿಸಲು ನಡೆದ ನಾಟಕೀಯ ತಿರುವುಗಳನ್ನು ದೇಶಕ್ಕೆ ಬಿತ್ತರಿಸಿತು.

ದಕ್ಷಿಣ ಭಾರತದಲ್ಲಿ ಇರುವವರೆಲ್ಲ ಮದ್ರಾಸಿಗಳು ಎಂದು ಭಾವಿಸುವ ಉತ್ತರ ಭಾರತದ ಜನಸಾಮಾನ್ಯರಿಗೆ ತನ್ನದೇ ಭಿನ್ನ ಸಂಸ್ಕೃತಿ- ಭಾಷೆ- ಅಸ್ಮಿತೆ ಉಳ್ಳ ಕರ್ನಾಟಕವೆಂಬ ರಾಜ್ಯ ಉಂಟು ಎಂದು ಮತ್ತೊಮ್ಮೆ ನೆನಪು ಮಾಡಿಕೊಟ್ಟ ಚುನಾವಣೆ ಇದು.

ಸಂಖ್ಯಾಬಲ ಕೈಗೂಡದಿದ್ದಾಗ ಗಂಭೀರವಾಗಿ ಹಿಂದೆ ಸರಿದಿದ್ದರೆ ಬಿಜೆಪಿಯ ಮಾನ ಉಳಿಯುತ್ತಿತ್ತು. ತಾನು ನಿಜ ಅರ್ಥದಲ್ಲಿಯೂ ‘ಪಾರ್ಟಿ ವಿಥ್‌ ಎ ಡಿಫರೆನ್ಸ್’ ಎಂದು ಅಪರೂಪಕ್ಕಾದರೂ ಭುಜ ತಟ್ಟಿಕೊಳ್ಳಬಹುದಿತ್ತು.

ಆದರೆ ಅಶ್ವಮೇಧ ಯಾಗದ ಕುದುರೆಯನ್ನು ದೇಶದಾದ್ಯಂತ ಬಿಟ್ಟು, ಕಟ್ಟಿ ಹಾಕುವವರು ಯಾರಿದ್ದಾರೆ ನೋಡುತ್ತೇವೆ ಎಂದು ಎದೆ ಸೆಟೆಸಿ ಕಣ್ಣು ಕೆಕ್ಕರಿಸಿದೆ ನರೇಂದ್ರ ಮೋದಿ-ಅಮಿತ್ ಶಾ ಅವರ ‘ಅಜೇಯ’ ಜೋಡಿ. ಸರಳ ಬಹುಮತ ಬಂದರೂ ತಮ್ಮದೇ ಸರ್ಕಾರ, ಬಾರದಿದ್ದರೂ ತಮ್ಮದೇ ಸರ್ಕಾರ ಎಂಬ ಧೋರಣೆ ಈ ಜೋಡಿಯದು.ಗೋವಾ, ಮಣಿಪುರ, ಮೇಘಾಲಯದಲ್ಲಿ ಈ ತತ್ವವನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದ ಆತ್ಮವಿಶ್ವಾಸ ಕರ್ನಾಟಕದಲ್ಲಿ ಕೈ ಕೊಟ್ಟೀತೆಂದು ನಿರೀಕ್ಷಿಸಿರಲಿಲ್ಲ.

ಬಹುಮತ ಇಲ್ಲದಿದ್ದರೇನಂತೆ, ‘ಅಂಗಡಿ ತೆರೆದರೆ ಗಿರಾಕಿಗಳು ಸರಕಿನ ಆಸೆಯಿಂದ’ ಬಂದೇ ಬರುತ್ತಾರೆಂದು ಭಾವಿಸಿತ್ತು ಬಿಜೆಪಿ. ಯಡಿಯೂರಪ್ಪ ಅವರನ್ನು ‘ಗಲ್ಲಾ ಪೆಟ್ಟಿಗೆಯಲ್ಲಿ ಕುಳ್ಳಿರಿಸಿ ಹೊಂಚು ಹಾಕಿದರೂ’ ಲಾಭ ಸಿಗಲಿಲ್ಲ. ರಾಜ್ಯಪಾಲ ವಜುಭಾಯಿ ವಾಲಾ ಅವರು ನೀಡಿದ್ದ 15 ದಿನಗಳ ಕಾಲಾವಕಾಶದ ಉದಾರ ವರವನ್ನು ಸುಪ್ರೀಂ ಕೋರ್ಟ್‌ 24 ತಾಸುಗಳಿಗೆ ಮೊಟಕು ಮಾಡಿದ್ದೇ ಬಿಜೆಪಿಯ ಪಾಲಿಗೆ ಮುಳುವಾಯಿತು.

ಚುನಾವಣೆಗಳು ನಡೆದಾಗಲೆಲ್ಲ ಆಲಸ್ಯದಿಂದ ಮೈಮರೆತು ಬಿಜೆಪಿಯಿಂದ ಬಡಿಸಿಕೊಳ್ಳುತ್ತಿದ್ದ ಕಾಂಗ್ರೆಸ್ ಪಕ್ಷ ಈ ಸಲ ಅಚ್ಚರಿಯ ರೀತಿಯಲ್ಲಿ ಜಡತೆಯನ್ನು ಕೊಡವಿತ್ತು. ಕಾಂಗ್ರೆಸ್‌ಮುಕ್ತ ಭಾರತವನ್ನು ಕಟ್ಟಲು ಹೊರಟಿರುವ ಬಿಜೆಪಿ ಮೊದಲು ಖುದ್ದು ‘ಕಾಂಗ್ರೆಸ್‌ಮುಕ್ತ’ ಆಗಬೇಕಿದೆ. ಹಗಲಿರುಳು ಕಾಂಗ್ರೆಸ್ಸಿನದೇ ಜಪ. ಕಾಂಗ್ರೆಸ್ ಶುದ್ಧಾಂಗ ಪಕ್ಷವೆಂದು ಯಾರೂ ಹೇಳುವುದಿಲ್ಲ. ಹಲವು ಐತಿಹಾಸಿಕ ತಪ್ಪು ಹೆಜ್ಜೆಗಳನ್ನು ಇರಿಸಿರುವುದು ನಿಜ.

ಆದರೆ ನಡೆವವರು ಎಡವದೆ ಕುಳಿತವರು ಎಡವುವುದಿಲ್ಲ. ಮೋದಿಯವರ ನೋಟು ರದ್ದತಿ ಮತ್ತು ಜಿ.ಎಸ್.ಟಿ. ಕ್ರಮಗಳು ಜನಪೀಡಕವಾಗಿ ಪರಿಣಮಿಸಿದ ಕುರಿತು ಅವರ ಬೆಂಬಲಿಗರು ಇದೇ ಮಾತನ್ನು ಹೇಳಿ ಸಮರ್ಥಿಸಿಕೊಂಡಿದ್ದಾರೆ. ತಪ್ಪುಮಾಡಿದರೂ ಮೋದಿಯವರಿಗೆ ಇನ್ನೊಂದು ಅವಕಾಶ ನೀಡಲೇಬೇಕು ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ನಿಜವಾಗಿಯೂ ಮಾಡಿರುವ ಮತ್ತು ಮಾಡಿಲ್ಲದೆ ಇರುವ ಕಪೋಲಕಲ್ಪಿತ ತಪ್ಪು ನಡೆಗಳೇ ಮೋದಿ-ಶಾ ಮಾತುಗಾರಿಕೆಯ ಮೂಲ ಸರಕು. ಈ ಬಂಡವಾಳವೇ ತೀರಿ ಹೋದರೆ ಬೇರೆ ಯಾರನ್ನು ಬೈಯ್ಯಲು ಬಂದೀತು? ಎಲ್ಲೆಲ್ಲಿ ಕಾಂಗ್ರೆಸ್ ನೇರ ಎದುರಾಳಿಯೋ ಅಲ್ಲೆಲ್ಲ ಬಿಜೆಪಿ ಪಾಲಿಗೆ ವಿಜಯದ ನಡೆಮುಡಿ ಕಟ್ಟಿಟ್ಟ ಬುತ್ತಿ. ಚುನಾವಣೆ ಎದುರಿಸುವ ನಿರ್ದಿಷ್ಟ ರಾಜ್ಯದಲ್ಲಿ ರಾಹುಲ್ ಗಾಂಧಿ ಪ್ರವಾಸ ಮಾಡಿದರೆ ಸಾಕು, ತಮ್ಮ ಪಕ್ಷಕ್ಕೆ ಗೆಲುವು ನಿಶ್ಚಿತ ಎಂದು ಬಿಜೆಪಿಯ ನಾಯಕರು ಮೂದಲಿಸಿರುವುದು ಉಂಟು.

ಇಂತಹ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯಿಂದ ಭಾರತವನ್ನು ಮುಕ್ತಗೊಳಿಸಿದರೆ ನಷ್ಟವಾಗುವುದು ಯಾರಿಗೆ ಎಂಬ ನಿಜ ಮೋದಿ- ಶಾ ಜೋಡಿಗೆ ಚೆನ್ನಾಗಿ ಗೊತ್ತು. ಮೋದಿ-ಶಾ ತಮ್ಮ ರಾಜಕೀಯ ವಿರೋಧಿಗಳಿಗೆ ಉಣಿಸುತ್ತ ಬಂದಿರುವ ಅದೇ ಔಷಧಿಯನ್ನು ಕಾಂಗ್ರೆಸ್ ಈ ಬಾರಿ ತಿರುಗಿ ನಿಂತು ಕರ್ನಾಟಕದಲ್ಲಿ ಬಿಜೆಪಿಗೆ ಉಣಬಡಿಸಿದೆ. ಮುಂಬಾಗಿಲಲ್ಲಿ ಕಳೆದುಕೊಂಡದ್ದನ್ನು ಹಿತ್ತಿಲ ಬಾಗಿಲಲ್ಲಿ ಹುಡುಕಿ ಹಿಡಿದಿದೆ.

ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರ ಇರಿಸಲು ಬಿಜೆಪಿ ಏನು ಬೇಕಾದರೂ ಮಾಡಬಲ್ಲುದಾದರೆ, ಬಿಜೆಪಿಯನ್ನು ತಡೆಯಲು ತಾನು ಕೂಡ ಏನು ಬೇಕಾದರೂ ಮಾಡಬಲ್ಲೆ ಎಂದು ಮುಖ್ಯಮಂತ್ರಿ ಸ್ಥಾನವನ್ನು ಜಾತ್ಯತೀತ ಜನತಾದಳಕ್ಕೆ ಬಿಟ್ಟುಕೊಡುವ ಮೂಲಕ ಕಾಂಗ್ರೆಸ್ ಸಾಬೀತು ಮಾಡಿದೆ.

ಒಂದು ರೀತಿಯಲ್ಲಿ ಕರ್ನಾಟಕವು ಕಾಂಗ್ರೆಸ್ ಪಕ್ಷದ ‘ಕಟ್ಟಕಡೆಯ ಕಿಲ್ಲೆ’. ಈಗಿನ ಬಿಜೆಪಿಯಂತೆ ಒಂದೊಮ್ಮೆ ದೇಶದ ಉದ್ದಗಲವನ್ನು ಅಬ್ಬರಿಸಿ ಆಳುತ್ತಿದ್ದ ಈ ದೈತ್ಯ ಪಕ್ಷದ ಪಾಲಿಗೆ ಇದೀಗ ಕರ್ನಾಟಕವನ್ನು ಕಳೆದುಕೊಂಡರೆ ಉಳಿಯುತ್ತಿದ್ದುದು ಪುಟ್ಟ ರಾಜ್ಯ ಪಂಜಾಬ್ ಮತ್ತು ಅರೆರಾಜ್ಯ ಪುದುಚೇರಿ ಅಷ್ಟೇ. ಹಳೆಯ ಹಗೆಯನ್ನು ಸದೆಬಡಿದು ಈ ಕಿಲ್ಲೆಯನ್ನು ವಶಕ್ಕೆ ತೆಗೆದುಕೊಂಡು ಸಾಮ್ರಾಜ್ಯ ವಿಸ್ತರಿಸುವುದು ಬಿಜೆಪಿಯ ಗುರಿಯಾಗಿತ್ತು.

2019ರ ಲೋಕಸಭಾ ಚುನಾವಣೆಗಳ ಮಹಾಸಮರಕ್ಕೆ ದಕ್ಷಿಣದ ಹೆಬ್ಬಾಗಿಲನ್ನು ತೆರೆದು ಹಾರು ಹೊಡೆಯುವ ಕೇಸರಿ ಪರಿವಾರದ ಬಯಕೆಯಲ್ಲಿ ಅಸಹಜವಾದದ್ದೇನೂ ಇರಲಿಲ್ಲ. ತನ್ನ ಬೇರುಗಳು ಶಿಥಿಲವಾಗಿ ಸೋಲು ಎದುರಿಸಬಹುದಾದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಸಮರ್ಥ ಪ್ರತಿಪಕ್ಷವೇ ಇಲ್ಲದೆ ಅನುಕೂಲ ಪರಿಸ್ಥಿತಿಯಲ್ಲಿರುವ ಛತ್ತೀಸಗಡ ವಿಧಾನಸಭಾ ಚುನಾವಣೆಗಳೂ ವರ್ಷಾಂತ್ಯದಲ್ಲಿ ಕದ ಬಡಿಯಲಿವೆ. ಕರ್ನಾಟಕದ ಗೆಲುವು, ಈ ಚುನಾವಣೆಗಳನ್ನು ಎದುರಿಸಲು ಹೆಚ್ಚಿನ ನೈತಿಕ ಶಕ್ತಿಯನ್ನು ಒದಗಿಸುವಂತಹದಾಗಿತ್ತು. ಈ ಕಾರಣಗಳಿಗಾಗಿ ಕರ್ನಾಟಕವನ್ನು ಬಿಜೆಪಿ ತನ್ನ ಉಡಿಗೆ ಹಾಕಿಕೊಳ್ಳಲೇಬೇಕಿತ್ತು.

ಆದರೆ ಕಾಂಗ್ರೆಸ್ ಪಾಲಿಗೆ ಕರ್ನಾಟಕದ ಚುನಾವಣೆ ಕದನ ಅಳಿವು ಉಳಿವಿನ ಹೋರಾಟ ಆಗಿತ್ತು. ಸಾಮ- ದಾನ- ಭೇದ- ದಂಡ ಪ್ರಯೋಗಿಸಿ ಅಧಿಕಾರ ವಶಪಡಿಸಿಕೊಳ್ಳುವ ಬಿಜೆಪಿಯ ಯಶಸ್ವೀ ಸೂತ್ರ, ನ್ಯಾಯಾಲಯದ ಮಧ್ಯಪ್ರವೇಶದ ಕಾರಣ ಕೈ ಕೊಟ್ಟಿದೆ. ‘ಚುನಾವಣೆಗಳಲ್ಲಿ ಬಿಜೆಪಿ ಅಜೇಯ ಎಂಬ ಭಾವನೆಗೆ ದೊಡ್ಡ ಹೊಡೆತವೇನೂ ಬಿದ್ದಿಲ್ಲ. ಆದರೆ ಬಹುಮತ ಬಂದರೂ ಬಾರದಿದ್ದರೂ ಬಿಜೆಪಿಯದೇ ಸರ್ಕಾರ ಎಂಬ ಧೋರಣೆಗೆ ಹಿನ್ನಡೆಯಾಗಿರುವುದು ಖಚಿತ’ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಸಂಜಯಕುಮಾರ್.

ಯಡಿಯೂರಪ್ಪ ಅವರ ವಿಶ್ವಾಸಮತ ಯಾಚನೆಗಾಗಿ ಶನಿವಾರ ಸಮಾವೇಶಗೊಂಡಿದ್ದ ವಿಧಾನಸಭೆಯಲ್ಲಿ ಮುಂಜಾನೆಯೇ ಈ ಸೂಚನೆಗಳು ನಿಚ್ಚಳವಾಗಿ ಪ್ರಕಟ ಆದವು. ಬಿಜೆಪಿ ತಲೆಯಾಳುಗಳ ಸೋತ ಹಾವಭಾವ, ಸಪ್ಪೆ ಮುಖಚರ್ಯೆಗಳು ಮುಂಜಾನೆಯಿಂದಲೇ ಈ ಇಂಗಿತ ನೀಡಿದ್ದವು. ಬಿಜೆಪಿಯ ‘ಆಧುನಿಕ ಚಾಣಕ್ಯ’ ಎಂದೇ ಬಣ್ಣಿಸಲಾಗುವ ಅಮಿತ್ ಶಾ ಮಾಡಬಲ್ಲರೆಂದು ಕಾಯಲಾಗಿದ್ದ ಪವಾಡ ಕಡೆಗೂ ನಡೆಯಲಿಲ್ಲ. ಬಿಜೆಪಿಯ ತಾಯಿಬೇರಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಾಮಾನ್ಯವಾಗಿ ತನ್ನ ಕೈಗಳನ್ನು ದಿನನಿತ್ಯದ ರಾಜಕೀಯ ರಾಡಿಯಿಂದ ದೂರ ಇರಿಸಿಕೊಳ್ಳುತ್ತದೆ.

ಆದರೆ ಎರವಲು ಸೇವೆಯ ಮೇರೆಗೆ ಸಂಘದಿಂದ ಬಿಜೆಪಿಗೆ ಬಂದಿರುವ ಪ್ರತಿಷ್ಠಿತ ರಾಮಮಾಧವ ಇಂತಹ ನಿರೀಕ್ಷೆಯನ್ನು ಹುಸಿ ಮಾಡಿದರು. ಬಹುಮತ ಸಾಬೀತು ಮಾಡಲು ಅಗತ್ಯವಿರುವ ಹೆಚ್ಚುವರಿ ಸಂಖ್ಯಾಬಲವನ್ನು ಹೇಗೆ ರೂಢಿಸಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಸುದ್ದಿ ವಾಹಿನಿಯೊಂದರಲ್ಲಿ ಅವರು ದೇಶಾವರಿಯಾಗಿ ಗಹಗಹಿಸಿ ನೀಡಿದ ಚುಟುಕಿನ ಅರ್ಥಗರ್ಭಿತ ಉತ್ತರ- ‘ಅಮಿತ್ ಶಾ’!

ಕಾಂಗ್ರೆಸ್ ಶಾಸಕರಿಗೆ ಕೋಟ್ಯಂತರ ರೂಪಾಯಿ ರುಷುವತ್ತು ಮತ್ತು ಮಂತ್ರಿಸ್ಥಾನದ ಪ್ರಲೋಭನೆ ಒಡ್ಡಿರುವ ದೂರವಾಣಿ ಕರೆಗಳ ಸಿ.ಡಿ.ಗಳು ಒಂದರ ಹಿಂದೆ ಮತ್ತೊಂದರಂತೆ ಹೊರಬಿದ್ದಿವೆ.

ಸ್ನಾನದ ಮನೆಯಲ್ಲಿ ಎಲ್ಲರೂ ಬೆತ್ತಲೆ (ಹಮಾಮ್ ಮೇಂ ಸಬ್ ನಂಗಾ) ಎಂಬ ನಾಣ್ನುಡಿಯು ತನ್ನ ಚಾರಿತ್ರ್ಯ ಧವಳಶ್ವೇತ ಎಂದು ಬಣ್ಣಿಸಿಕೊಳ್ಳುವ ಕೇಸರಿ ಪರಿವಾರದ ಬೆನ್ನು ಹತ್ತಿದೆ.

ಮೈಸೂರಿನ ಪರಿವರ್ತನಾ ರ‍್ಯಾಲಿಯಲ್ಲಿ 53 ವರ್ಷದ ಅಮಿತ್ ಶಾ ಅವರ ಮುಂದೆ ಸೊಂಟ ಮಂಡಿ ಬಗ್ಗಿಸಿ ಕಾಲು ಮುಟ್ಟಿ ನಮಸ್ಕರಿಸಲು ಮುಂದಾಗಿದ್ದರು 75 ವರ್ಷದ ಯಡಿಯೂರಪ್ಪ. ರಾಜಕಾರಣದಲ್ಲಿ ಮತ್ತು ವಯಸ್ಸಿನಲ್ಲಿ ತಮಗಿಂತ ಹಿರಿಯರಾದ ಯಡಿಯೂರಪ್ಪ ತಮ್ಮ ಕಾಲಿಗೆ ಬೀಳದಂತೆ ತಡೆಯದೆ ತಟಸ್ಥರಾಗಿ ನಿಂತಿದ್ದರು ಅಮಿತ್ ಶಾ. ಯಶಸ್ಸಿಗಿಂತ ಯಶಸ್ವಿಯಾದದ್ದು ಮತ್ತೊಂದಿಲ್ಲ (ನಥಿಂಗ್ ಸಕ್ಸೀಡ್ಸ್ ಲೈಕ್ ಸಕ್ಸೆಸ್) ಎಂಬ ಇಂಗ್ಲಿಷ್ ನುಡಿಗಟ್ಟೊಂದಿದೆ. ಯಶಸ್ಸಿನ ಸವಾರಿಯಲ್ಲಿ ಮೈಮರೆತವರಿಗೆ ಸೂಕ್ಷ್ಮಗಳು ತಿಳಿಯುವುದಿಲ್ಲ.

‘ಬಿಸಿಲುಗುದುರೆ’ಯನ್ನು ಕಟ್ಟಕಡೆಯವರೆಗೂ ಬೆನ್ನಟ್ಟುವಂತೆ ಯಡಿಯೂರಪ್ಪ ಅವರನ್ನು ಹಿನ್ನೆಲೆಯಲ್ಲಿ ನಿಂತು ಹುರಿದುಂಬಿಸಿದವರ ಹೆಸರು ಮುಕ್ಕಾಗಲಿಲ್ಲ. ಯಡಿಯೂರಪ್ಪ ಹರಕೆಯ ಕುರಿ ಆದರು. ಜಾತ್ಯತೀತ ಜನತಾದಳ- ಕಾಂಗ್ರೆಸ್ ಮೈತ್ರಿ ಸರ್ಕಾರ, ಭಿನ್ನಾಭಿಪ್ರಾಯಗಳ ಕಾರಣ ಅವಧಿಗೆ ಮುನ್ನವೇ ಉರುಳಿ ಬಿದ್ದರೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶ ಯಡಿಯೂರಪ್ಪ ಅವರಿಗೆ ಉಂಟು. ಇಲ್ಲವಾದರೆ ಮುಖ್ಯಮಂತ್ರಿ ಹುದ್ದೆಯ ಮರೀಚಿಕೆ ಅವರನ್ನು ಇನ್ನೆಷ್ಟು ಕಾಲ ಕಾಡುವುದೋ ಹೇಳಲು ಬಾರದು.

ಹಗಲಿರುಳೂ ಶ್ರಮಿಸಿ 2019ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡುವುದಾಗಿ ಅವರು ಪಣ ತೊಟ್ಟಿದ್ದಾರೆ. ಆದರೆ ಇಂದಿನ ಯಡಿಯೂರಪ್ಪ 2004 ಅಥವಾ 2008ರ ಕೆಚ್ಚಿನ ಯಡಿಯೂರಪ್ಪ ಅಲ್ಲ. ಈ ಸಂಗತಿಯನ್ನು ಅಮಿತ್ ಶಾ ಬಲ್ಲರು. ಕರೆಯುವ ಹಸುವನ್ನು ಮಾತ್ರವೇ ಕಟ್ಟಿಕೊಳ್ಳಲಾಗುತ್ತದೆ ಎಂಬ ನಿಷ್ಠುರ ಸತ್ಯಕ್ಕೆ ಲಾಲ್‌ಕೃಷ್ಣ ಅಡ್ವಾಣಿ ಅವರಿಗೆ ಒದಗಿರುವ ಸ್ಥಿತಿಯೇ ಜ್ವಲಂತ ನಿದರ್ಶನ. ಯಡಿಯೂರಪ್ಪ ಇಂದಲ್ಲ ನಾಳೆ ಮತ್ತೊಂದು ಮಾರ್ಗದರ್ಶಕ ಮಂಡಲ ಸೇರಲಿದ್ದಾರೆಯೇ, ಶಾ ಅವರು ಹೊಸ ವರ್ಚಸ್ವೀ ಲಿಂಗಾಯತ ನಾಯಕನ ಹುಡುಕಾಟದಲ್ಲಿದ್ದಾರೆಯೇ ಎಂಬುದನ್ನು ಮುಂಬರುವ ದಿನಗಳು ತಿಳಿಸಲಿವೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ‘ಕತ್ತು ಕತ್ತರಿಸುವ ಪೈಪೋಟಿ’ಯ ಲಾಭ ಪ್ರಾದೇಶಿಕ ಪಕ್ಷಗಳದು. ಪ್ರಾದೇಶಿಕ ಪಕ್ಷಗಳ ಜೊತೆ ವ್ಯವಹಾರ ಮಾಡದೆ ಹೋದರೆ ತನಗೆ ಉಳಿಗಾಲವಿಲ್ಲ ಎಂಬ ನಿಜ ಕಾಂಗ್ರೆಸ್‌ಗೆ ಕಡೆಗೂ ಅರ್ಥವಾದಂತೆ ತೋರುತ್ತಿದೆ. ಈ ನಿಜ ಕಾಂಗ್ರೆಸ್‌ಗೆ ಅರ್ಥವಾಗತೊಡಗಿದೆ ಎಂಬುದು ಪ್ರಾದೇಶಿಕ ಪಕ್ಷಗಳ ಅರಿವಿಗೂ ಬರತೊಡಗಿದೆ. ಒಂದಾಗಿ ಎದುರಿಸಿ ನಿಲ್ಲದೆ ಹೋದರೆ ಮೋದಿ-ಶಾ ಜೋಡಿ ತಮ್ಮನ್ನೆಲ್ಲ ನುಂಗುವುದು ನಿಶ್ಚಿತ ಎಂಬ ಪ್ರಾದೇಶಿಕ ಪಕ್ಷಗಳ ಆತಂಕ ಆಧಾರರಹಿತ ಅಲ್ಲ.

ಈ ಹೊತ್ತಿನಲ್ಲಿ ಬಿಜೆಪಿಗೆ ಕರ್ನಾಟಕ ಕೊಡಮಾಡಿರುವ ಈ ಹಿನ್ನಡೆಯ ಸಾಧಕ ಬಾಧಕಗಳು ಸರಳವಲ್ಲ. ಪ್ರಾದೇಶಿಕ ಮಿತ್ರಪಕ್ಷಗಳಿಲ್ಲದೆ ಮೋದಿ ವರ್ಚಸ್ಸು ಮಾತ್ರವೇ 2019ರಲ್ಲಿ ಎರಡನೆಯ ಬಾರಿಗೆ ಬಿಜೆಪಿಯನ್ನು ದಡ ಸೇರಿಸುವುದು ದುಸ್ತರ. ಏನಕೇನ ಪ್ರಕಾರೇಣ ಕರ್ನಾಟಕವನ್ನು ತಮ್ಮ ಮುಷ್ಟಿಗೆ ತೆಗೆದುಕೊಳ್ಳುವ ಭರದಲ್ಲಿ ಮೋದಿ-ಶಾ ಜೋಡಿ ಪ್ರತಿಪಕ್ಷಗಳನ್ನು ಹತ್ತಿರ ತರತೊಡಗಿದೆ.

ಒಮ್ಮೆ ಭಗ್ನಗೊಂಡು ದೂರವಾಗಿದ್ದ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳದ ಮೈತ್ರಿ ಮತ್ತೆ ಕುದುರಿದ ಕಾರಣ, ಮೋದಿ-ಶಾ ಕುರಿತ ಆತಂಕವಲ್ಲದೆ ಇನ್ನೇನೂ ಅಲ್ಲ. ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ನಡೆಯಲಿರುವ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಪ್ರಮಾಣವಚನ ಸಮಾರಂಭವು ಮೋದಿ-ಶಾ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟಿನ ಶಕ್ತಿಪ್ರದರ್ಶನವಾಗಿ ಮಾರ್ಪಡಲಿದೆ.

ತೃಣಮೂಲ ಕಾಂಗ್ರೆಸ್ ಪಕ್ಷದ ಮಮತಾ ಬ್ಯಾನರ್ಜಿ, ಬಹುಜನ ಸಮಾಜ ಪಾರ್ಟಿಯ ಮಾಯಾವತಿ, ಸಮಾಜವಾದಿ ಪಾರ್ಟಿಯ ಅಖಿಲೇಶ್ ಯಾದವ್, ಎನ್‌ಸಿಪಿಯ ಶರದ್ ಪವಾರ್, ಸಿಪಿಎಂನ ಸೀತಾರಾಮ ಯೆಚೂರಿ, ತೆಲುಗುದೇಶಂ ಪಾರ್ಟಿಯ ಚಂದ್ರಬಾಬು ನಾಯ್ಡು, ತೆಲಂಗಾಣ ರಾಷ್ಟ್ರ ಸಮಿತಿಯ ಚಂದ್ರಶೇಖರ ರಾವ್ ಮುಂತಾದವರು ಭಾಗವಹಿಸುವ ನಿರೀಕ್ಷೆ ಇದೆ.

ರಾಜಕಾರಣದಲ್ಲಿ ಯಾವುದೂ ಅಸಾಧ್ಯವಲ್ಲ ಎಂಬ ಮಾತೊಂದಿದೆ. ಜಾತ್ಯತೀತ ಜನತಾದಳ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿ ಸರ್ಕಾರ ಅವಧಿ ಪೂರೈಸಬಹುದು ಅಥವಾ ಅರ್ಧ ದಾರಿಯಲ್ಲೇ ಉರುಳಬಹುದು. ಆದರೆ ಈ ಮೈತ್ರಿ ಸರ್ಕಾರ ಮುನ್ನಡೆಯಲು ರಾಷ್ಟ್ರ ಪ್ರತಿಪಕ್ಷಗಳ ರಾಜಕಾರಣ ಒತ್ತಾಸೆಯಾಗಿ ನಿಲ್ಲುವುದು ನಿಶ್ಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT