ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಂಕಾರೇಶ್ವರ ದೇಗುಲದ ಅಭಿವೃದ್ಧಿಗೆ ಒತ್ತು

ಬ್ರಹ್ಮಕಲಶೋತ್ಸವ ನಡೆಸಲು ನೂತನ ವ್ಯವಸ್ಥಾಪನಾ ಮಂಡಳಿ ನಿರ್ಧಾರ
Last Updated 3 ಜೂನ್ 2018, 13:00 IST
ಅಕ್ಷರ ಗಾತ್ರ

ಮಡಿಕೇರಿ: ‘ಇಲ್ಲಿನ ಪ್ರಸಿದ್ಧ ಓಂಕಾರೇಶ್ವರ ದೇವಾಲಯಕ್ಕೆ ನೂತನ ವ್ಯವಸ್ಥಾಪನಾ ಸಮಿತಿಯು ಅಸ್ತಿತ್ವಕ್ಕೆ ಬಂದಿದ್ದು, ಮುಂದಿನ ಮೂರು ವರ್ಷದ ಆಡಳಿತಾವಧಿಯಲ್ಲಿ ಬ್ರಹ್ಮಕಲಶೋತ್ಸವ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಲಾಗುವುದು’ ಎಂದು ಸಮಿತಿ ಅಧ್ಯಕ್ಷ ಪುಲಿಯಂಡ ಕೆ.ಎ. ಜಗದೀಶ್‌ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಳೆದ 20 ವರ್ಷಗಳಿಂದ ದೇವಸ್ಥಾನ ದಲ್ಲಿ ಬ್ರಹ್ಮಕಲಶೋತ್ಸವ ನಡೆದಿಲ್ಲ. ಪ್ರತಿ 12 ವರ್ಷಕ್ಕೊಮ್ಮೆ ಈ ಉತ್ಸವ ನಡೆಯಬೇಕು. ಕ್ಷೇತ್ರದ ತಂತ್ರಿಗಳಾದ ನೀಲೇಶ್ವರ ಪದ್ಮನಾಭ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಬ್ರಹ್ಮ ಕಲಶೋತ್ಸವ ನಡೆಸಲು ತೀರ್ಮಾನಿಸ ಲಾಗಿದೆ’ ಎಂದು ಹೇಳಿದರು.

‘ದೇವಸ್ಥಾನದಲ್ಲಿನ ಅರ್ಚಕರು ಹಾಗೂ ನೌಕರರಿಗೆ ವಾಸಿಸಲು ಮನೆ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ದೇವಾಲಯಕ್ಕೆ ತೆರಳುವ ದಾರಿಗೆ ವಿದ್ಯುತ್ ದೀಪ ಅಳವಡಿಸುವ ಚಿಂತನೆಯಿದೆ. ಆಂಜನೇಯ ದೇವಸ್ಥಾನದ ಎದುರು ಮುಖ್ಯರಸ್ತೆಗೆ ಹೊಂದಿಕೊಂಡಿರುವಂತೆ ಆಲಂಕಾರಿಕ ಪ್ರವೇಶ ದ್ವಾರವನ್ನು ಅಂದಾಜು ₹30 ಲಕ್ಷದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ದೇವಸ್ಥಾನ ಮುಂಭಾಗದ ಕಲ್ಯಾಣಿಯ ಶುಚಿತ್ವ ಹಾಗೂ ಪಕ್ಕದ ಕಟ್ಟಡದ ದುರಸ್ತಿ ನಡೆಸಲೂ ತೀರ್ಮಾನಿಸಲಾಗಿದೆ. ಇದಕ್ಕಾಗಿ ₹ 25 ಲಕ್ಷದ ಅನುದಾನಕ್ಕಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಜತೆಗೆ ಆಂಜನೇಯ ದೇವಸ್ಥಾನದ ಮೈದಾನದಲ್ಲಿ ನವಗ್ರಹ ವನ ನಿರ್ಮಾಣ ಹಾಗೂ ದೇವಸ್ಥಾನದ ನೀರಿಗಾಗಿ ಕೊಳವೆ ಬಾವಿ, ಗೋವು ಶಾಲೆ ತೆರೆಯುವ ಆಲೋಚನೆ ಯಿದೆ’ ಎಂದು ಜಗದೀಶ್‌ ವಿವರಿಸಿದರು.

‘ದೇವಸ್ಥಾನದ ಹುಂಡಿಯ ಹಣ ದೇವಸ್ಥಾನದ ಅಭಿವೃದ್ಧಿ ಕಾರ್ಯ ಗಳಿಗಷ್ಟೆ ಬಳಕೆಯಾಗುತ್ತಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ. ಈ ಬಗ್ಗೆ ಸಾರ್ವಜನಿಕರಲ್ಲಿ ಯಾವುದೇ ಗೊಂದಲ ಬೇಡ’ ಎಂದು ಸ್ಪಷ್ಟನೆ ನೀಡಿದರು.

‘ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ, ಗಣೇಶ್ ಚತುರ್ಥಿ, ಮಹಾ ಶಿವರಾತ್ರಿ, ಷಷ್ಠಿ, ಹುತ್ತರಿ, ಹನುಮ ಜಯಂತಿ, ನಾಗರ ಪಂಚಮಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಸಭೆಗಳನ್ನು ಆಯಾ ಕಾಲಕ್ಕೆ ಸರಿಯಾಗಿ ನಡೆಸಲು ತೀರ್ಮಾನಿಸ ಲಾಗಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಇಒ ಸಂಪತ್‌ ಕುಮಾರ್‌, ಸಮಿತಿ ಸದಸ್ಯ ರಾದ ಟಿ.ಎಚ್‌. ಉದಯ ಕುಮಾರ್‌, ಎ.ಎಚ್‌. ಪ್ರಕಾಶ್‌ ಆಚಾರ್ಯ, ಕನ್ನಂಡ ಕವಿತಾ ಕಾವೇರಮ್ಮ, ಸುನೀಲ್ ಕುಮಾರ್ ಹಾಜರಿದ್ದರು.

ತುಂಡು ಉಡುಗೆಗೆ ಕಡಿವಾಣ

‘ಜಿಲ್ಲೆಯ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಓಂಕಾರೇಶ್ವರ ದೇವಾಲಯದಲ್ಲಿ ತುಂಡು ಉಡುಗೆಗೆ ಕಡಿವಾಣ ಹಾಕುವ ಉದ್ದೇಶದಿಂದ ವಸ್ತ್ರ ಸಂಹಿತೆ ಕಡ್ಡಾಯ ಮಾಡಲಾಗಿದೆ. ಈಗಾಗಲೇ ನೂರಾರು ಸಂಖ್ಯೆಯಲ್ಲಿ ಭಕ್ತರು ಹೊರ ಜಿಲ್ಲೆಯಿಂದ ಬರುತ್ತಿರುವುದರಿಂದ ಕೆಲವು ನಿಯಮಗಳನ್ನು ಸಮಿತಿ ರಚಿಸುವ ಅನಿವಾರ್ಯತೆ ಎದುರಾಗಿದೆ’ ಎಂದು ಇಒ ಸಂಪತ್‌ ಕುಮಾರ್‌ ತಿಳಿಸಿದರು.

ಪದಾಧಿಕಾರಿಗಳ ವಿವರ

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪುಲಿಯಂಡ ಕೆ. ಜಗದೀಶ್‌ ಅವರು ಅವಿರೋಧವಾಗಿ ಆಯ್ಕೆ ಆಗಿದ್ದು, ಸಮಿತಿ ಸದಸ್ಯರಾಗಿ ಪಿ.ಎಚ್‌.ಸೀತಾ ಚಿಕ್ಕಣ್ಣ, ಕನ್ನಂಡ ಬಾಣೆಯ ಕನ್ನಂಡ ಕವಿತಾ ಕಾವೇರಮ್ಮ, ಗೌಳಿ ಬೀದಿಯ ಯು.ಸಿ. ದಮಯಂತಿ, ಮಹದೇವಪೇಟೆಯ ಟಿ.ಎಚ್‌. ಉದಯಕುಮಾರ್‌, ಎ.ಎಚ್‌. ಪ್ರಕಾಶ್‌ ಆಚಾರ್ಯ, ಕಾವೇರಿ ಬಡಾವಣೆಯ ಕೆ.ಎ. ಆನಂದ, ಗೌಳಿಬೀದಿಯ ಸುನೀಲ್‌ ಕುಮಾರ್‌ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT