ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ಹೊಸ ತಂಡಗಳ ಸವಾಲು

Last Updated 7 ಜೂನ್ 2018, 5:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಯುವ ಪ್ರತಿಭೆಗಳ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆಯಾಗಿರುವ ಜೂನಿಯರ್‌ ಹುಬ್ಬಳ್ಳಿ ಪ್ರೀಮಿಯರ್‌ ಲೀಗ್‌ (ಎಚ್‌ಪಿಎಲ್‌) ಕ್ರಿಕೆಟ್‌ ಟೂರ್ನಿ ಜೂನ್‌ 12ರಿಂದ 17ರ ವರೆಗೆ ನಗರದಲ್ಲಿ ನಡೆಯಲಿದ್ದು, ಈ ಬಾರಿ ಐದು ಹೊಸ ತಂಡಗಳು ಪೈಪೋಟಿ ನಡೆಸಲಿವೆ.

ಹುಬ್ಬಳ್ಳಿಯ ಬಿ.ಡಿ.ಕೆ. ಸ್ಪೋರ್ಟ್ಸ್‌ ಫೌಂಡೇಷನ್‌ ಕಳೆದ ವರ್ಷ ಟೂರ್ನಿ ಆರಂಭಿಸಿತ್ತು. ಆಗ ಹುಬ್ಬಳ್ಳಿ ಟರ್ಮಿನೇಟರ್‌, ರೈಸಿಂಗ್‌ ಸ್ಟಾರ್‌ ಹುಬ್ಬಳ್ಳಿ, ಹುಬ್ಬಳ್ಳಿ ವಾರಿಯರ್ಸ್‌ ಮತ್ತು ಟ್ವಿನ್‌ ಸಿಟಿ ಚಾಲೆಂಜರ್ಸ್‌ ತಂಡಗಳು ಭಾಗವಹಿಸಿದ್ದವು. ಈ ಬಾರಿ ಧಾರವಾಡದ ಡ್ರಾಪಿನ್‌ ವಾರಿಯರ್ಸ್‌, ಹುಬ್ಬಳ್ಳಿಯ ಎನ್‌.ಕೆ. ವಾರಿಯರ್ಸ್‌, ಗದುಗಿನ ವಾಲ್ಮೀಕಿ ಸ್ಟ್ರೈಕರ್ಸ್‌, ಬೆಳಗಾವಿಯ ಬಿಎಸ್‌ಸಿ ಸ್ಮಾರ್ಟ್‌ ವಿಷನ್‌ ಮತ್ತು ಬಿಜಾಪುರ ಬುಲ್ಸ್‌ ಸಿಸಿಐ ತಂಡಗಳು ಆಡಲಿವೆ. ಈ ಐದೂ ತಂಡಗಳಿಗೆ ಇದು ಚೊಚ್ಚಲ ಟೂರ್ನಿ ಎಂಬುದು ವಿಶೇಷ. ಮೊದಲ ಆವೃತ್ತಿಯಲ್ಲಿ ಆಡಿದ್ದ ಯಾವ ತಂಡಗಳೂ ಈ ಬಾರಿ ಪಾಲ್ಗೊಳ್ಳುತ್ತಿಲ್ಲ.

ಕೆಎಸ್‌ಸಿಎ ಧಾರವಾಡ ವಲಯದ ವ್ಯಾಪ್ತಿಯಲ್ಲಿ ಬರುವ ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಗಳ ಆಟಗಾರರು ಟೂರ್ನಿ
ಯಲ್ಲಿ ಭಾಗವಹಿಸಲಿದ್ದಾರೆ. ಟೂರ್ನಿಯ ಪಂದ್ಯಗಳು ಕೆ.ಎಸ್‌.ಸಿ.ಎ ಕ್ರೀಡಾಂಗಣದಲ್ಲಿ ಜರುಗಲಿವೆ. ಪ್ರತಿ ಪಂದ್ಯ ತಲಾ 30 ಓವರ್‌ಗಳದ್ದಾಗಿರುತ್ತದೆ.

ಕಳೆದ ವರ್ಷ 14 ವರ್ಷದೊಳಗಿನ ಆಟಗಾರರಿಗೆ ಮಾತ್ರ ಟೂರ್ನಿ ನಡೆದಿತ್ತು. ಆದರೆ, ಸಂಘಟಕರು ಈ ಬಾರಿ ನಿಯಮಗಳಲ್ಲಿ ಬದಲಾವಣೆ ಮಾಡಿದ್ದಾರೆ. ಪ್ರತಿ ತಂಡ 16 ಆಟಗಾರರನ್ನು ಹೊಂದಿರಬೇಕು. ಅದರಲ್ಲಿ 14 ವರ್ಷದ ಒಳಗಿನ ಕನಿಷ್ಠ ಐವರು ತಂಡದಲ್ಲಿರಲೇಬೇಕು. ಜತೆಗೆ ಆಡುವ ಅಂತಿಮ ಹನ್ನೊಂದರ ತಂಡದಲ್ಲಿ 14 ವರ್ಷದ ಒಳಗಿನ ಕನಿಷ್ಠ ನಾಲ್ವರು ಆಟಗಾರರು ಇರಬೇಕು.

‘14 ವರ್ಷದ ಒಳಗಿನ ಆಟಗಾರರು ಮುಂದೆ ದೊಡ್ಡ, ದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಅವರು 16 ವರ್ಷದ ಒಳಗಿನ ಆಟಗಾರರ ಜೊತೆ ಜೂನಿಯರ್‌ ಎಚ್‌ಪಿಎಲ್‌ನಲ್ಲಿ ಆಡುತ್ತಾರೆ. ಇದರಿಂದ ಅವರ ಕೌಶಲ ಸುಧಾರಿಸುತ್ತದೆ. ಮುಂದೆ ಬೆಂಗಳೂರಿನ ಆಟಗಾರರಿಗೆ ಕಠಿಣ ಪೈಪೋಟಿ ಒಡ್ಡಲು ಸಾಧ್ಯವಾಗುತ್ತದೆ. ಆದ್ದರಿಂದ, ಈ ಟೂರ್ನಿ ಎರಡೂ ವಯೋಮಾನದವರರಿಗೆ ಅತ್ಯಂತ ಮಹತ್ವದ್ದಾಗಿದೆ’ ಎಂದು ಟೂರ್ನಿ ಸಂಘಟನಾ ಸಮಿತಿಯ ಸದಸ್ಯ ಅಮಿತ್ ಭೂಸದ್‌ ‘ಪ್ರಜಾವಾಣಿ’ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT