ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ ಆದೇಶವಿದ್ದರೂ KPSC ಮೀನಮೀಷ; ಜೆಟಿಒ ಪರಿಷ್ಕೃತ ಪಟ್ಟಿಗೆ ಪಟ್ಟು

Published 14 ಏಪ್ರಿಲ್ 2024, 14:57 IST
Last Updated 14 ಏಪ್ರಿಲ್ 2024, 14:57 IST
ಅಕ್ಷರ ಗಾತ್ರ

ಬೆಂಗಳೂರು: ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆ ಅಡಿಯಲ್ಲಿರುವ ಸರ್ಕಾರಿ ಐಟಿಐ ಕಾಲೇಜುಗಳಲ್ಲಿ ಖಾಲಿ ಇರುವ 1,520 ಕಿರಿಯ ತರಬೇತಿ ಅಧಿಕಾರಿಗಳ (ಜೆಟಿಒ) ಹುದ್ದೆಗೆ 2019ರಲ್ಲಿ ಪ್ರಕಟಿಸಿದ್ದ ಅಂತಿಮ ಆಯ್ಕೆ ಪಟ್ಟಿಯನ್ನು ಹೈಕೋರ್ಟ್‌ ನಿರ್ದೇಶನದಂತೆ ಪರಿಷ್ಕರಿಸಿದರೂ, ಪ್ರಕಟಿಸಲು ಕೆಪಿಎಸ್‌ಸಿ ವಿಳಂಬ ಮಾಡುತ್ತಿರುವುದು ಹುದ್ದೆ ಆಕಾಂಕ್ಷಿಗಳನ್ನು ಚಿಂತೆಗೀಡು ಮಾಡಿದೆ.

ಕೆಪಿಎಸ್‌ಸಿ ಪ್ರಕಟಿಸಿದ್ದ ಅಂತಿಮ ಆಯ್ಕೆ ಪಟ್ಟಿಯ ಪ್ರಕಾರ ಈಗಾಗಲೇ ನೇಮಕಾತಿ ಆದೇಶ ಪಡೆದು ಹುದ್ದೆಯಲ್ಲಿರುವ ಸುಮಾರು 150 ಮಂದಿ, ಇದೀಗ ಸಿದ್ಧಪಡಿಸಿರುವ ಪರಿಷ್ಕೃತ ಪಟ್ಟಿಯಿಂದ ಹೊರಗುಳಿಯಲಿದ್ದು, ಉದ್ಯೋಗ ಕಳೆದುಕೊಳ್ಳುವ ಆತಂಕವಿದೆ. ಕೆಲವರು ಆಯ್ಕೆಯಾಗಿರುವ ವೃತ್ತಿ (ಟ್ರೇಡ್‌) ಬದಲಾಗುವ ಸಾಧ್ಯತೆಯಿದೆ.

ಐಟಿಐಗಳಲ್ಲಿ 23 ವಿವಿಧ ವೃಂದಗಳಲ್ಲಿ ಖಾಲಿ ಇರುವ ಜೆಟಿಒಗಳ ನೇಮಕಾತಿಗೆ 2018 ಫೆ. 19ರಂದು ಕೆಪಿಎಸ್‍ಸಿ ಅಧಿಸೂಚನೆ ಹೊರಡಿಸಿತ್ತು. ಅರ್ಜಿ ಸಲ್ಲಿಸಿದ್ದ 50 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ 2018 ಡಿ. 27ರಿಂದ 2019 ಜ. 3ರವರೆಗೆ ಪರೀಕ್ಷೆ ನಡೆದಿತ್ತು. ದಾಖಲೆಗಳ ಪರಿಶೀಲನೆ ಬಳಿಕ ವಿವಿಧ ವೃತ್ತಿಗಳಲ್ಲಿ 1,367 ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಕೆಲವು ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗೆ ಆಯ್ಕೆಯಾಗಿದ್ದರು. ಒಬ್ಬರಿಗೆ ಒಂದು ಹುದ್ದೆ ಎಂದು ಪರಿಗಣಿಸಿದಾಗ ಒಟ್ಟು 945 ಅಭ್ಯರ್ಥಿಗಳು ಆಯ್ಕೆಯಾಗಿದ್ದು, 399 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿತ್ತು. ಇನ್ನೂ 546 ಅಭ್ಯರ್ಥಿಗಳು ನೇಮಕಾತಿ ಆದೇಶಕ್ಕಾಗಿ ಕಾಯುತ್ತಿದ್ದಾರೆ.

ನೇಮಕಾತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದರೂ ಹುದ್ದೆಗೆ ಆಯ್ಕೆಯಾಗದ ಅಭ್ಯರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು, ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಎಲ್ಲವೂ ಸರಿಯಾಗಿವೆ ಎಂದು ಪ್ರಮಾಣೀಕರಿಸಿದ್ದರೂ, ಸೇವಾನುಭವ ಪ್ರಮಾಣಪತ್ರದಲ್ಲಿ ‘ನಿರ್ದಿಷ್ಟ ಕಾರ್ಯಕ್ಷೇತ್ರದ ಕಾರ್ಯಾನುಭವದಲ್ಲಿ ಸ್ಪಷ್ಟತೆ ಇಲ್ಲ’ ಎಂದು ಕಾರಣ ನೀಡಿ ಅರ್ಹರಾಗಿದ್ದ ಹಲವು ಅಭ್ಯರ್ಥಿಗಳನ್ನು ಕೆಪಿಎಸ್‌ಸಿ ತಿರಸ್ಕರಿಸಿತ್ತು.

ಹೈಕೋರ್ಟ್‌ ನಿರ್ದೇಶನದಂತೆ ಸಿದ್ಧಪಡಿಸಿದ ಪರಿಷ್ಕೃತ ತಾತ್ಕಾಲಿಕ ಪಟ್ಟಿಯನ್ನು ಕೆಪಿಎಸ್‌ಸಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದೆ. ವಿಚಾರಣೆ ವೇಳೆ ಈ ಲಕೋಟೆಯನ್ನು ತೆರೆದಿರುವ ನ್ಯಾಯಪೀಠ, ಈ ಪಟ್ಟಿಯನ್ನು ಜಾಲತಾಣದಲ್ಲಿ ಪ್ರಕಟಿಸುವಂತೆ ಮಾರ್ಚ್‌ 20ರಂದು ಕೆಪಿಎಸ್‌ಸಿಗೆ ನಿರ್ದೇಶನ ನೀಡಿದೆ. ಅಲ್ಲದೆ, ತಾತ್ಕಾಲಿಕ ಪಟ್ಟಿ ಪ್ರಕಟಿಸಿದ ಬಳಿಕ, ಒಂದಕ್ಕಿಂತ ಹೆಚ್ಚು ವೃತ್ತಿಗಳಿಗೆ ಆಯ್ಕೆಯಾದವರ ಆದ್ಯತೆಯನ್ನು ಪಡೆದು ಮೂರು ತಿಂಗಳ ಒಳಗೆ (ಜೂನ್‌ 21ರ ಒಳಗೆ) ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಬೇಕು ಎಂದೂ ನಿರ್ದೇಶನ ನೀಡಿದೆ. ಸಿದ್ಧಪಡಿಸಿರುವ ತಾತ್ಕಾಲಿಕ ಪಟ್ಟಿಯನ್ನು ಮೂರು ದಿನಗಳ ಒಳಗೆ ಪ್ರಕಟಿಸಲಾಗುವುದು ಎಂದು ಹೈಕೋರ್ಟ್‌ಗೆ ಮಾತು ನೀಡಿದ್ದ ಕೆಪಿಎಸ್‌ಸಿ, ತಿಂಗಳು ಕಳೆಯುತ್ತಾ ಬಂದರೂ ಪ್ರಕಟಿಸದಿರುವುದು ಅಭ್ಯರ್ಥಿಗಳನ್ನು ನಿರಾಶರನ್ನಾಗಿ ಮಾಡಿದೆ.

‘ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ತಾತ್ಕಾಲಿಕ ಪಟ್ಟಿಯನ್ನು ಜಾಲತಾಣದಲ್ಲಿ ಪ್ರಕಟಿಸುವಂತೆ ಹೈಕೋರ್ಟ್‌ ನಿರ್ದೇಶನ ನೀಡಿ ಒಂದು ತಿಂಗಳಾಗುತ್ತಾ ಬಂದರೂ ಕೆಪಿಎಸ್‌ಸಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಹುದ್ದೆಗಳ ನೇಮಕಾತಿ ಅಧಿಸೂಚನೆಯ ಪ್ರಕ್ರಿಯೆ ಏಳು ವರ್ಷವಾದರೂ ಪೂರ್ಣಗೊಂಡಿಲ್ಲ. ಈ ಬಗ್ಗೆ ಕೆಪಿಎಸ್‌ಸಿ ಕಾರ್ಯದರ್ಶಿಗೆ ಹಲವು ಮನವಿಗಳನ್ನು ಸಲ್ಲಿಸಿದ್ದೇವೆ. ಹೈಕೋರ್ಟ್‌ ಆದೇಶಕ್ಕೂ ಕೆಪಿಎಸ್‌ಸಿ ಯಾವುದೇ ಬೆಲೆ ನೀಡುತ್ತಿಲ್ಲ’ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT