ಅಧಿಕಾರಕ್ಕಾಗಿ ಬೇರೆ ಬೇರೆ ಪಕ್ಷಗಳ ಜೊತೆ ಪದೇಪದೇ ಹೊಂದಾಣಿಕೆ ಮಾಡಿಕೊಳ್ಳುವ ಜೆಡಿಯು ಅಧ್ಯಕ್ಷ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಈಗ ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ಕೈ ಹಿಡಿದಿದ್ದಾರೆ. ಹಾಗೆ ನೋಡಿದರೆ, ಈ ಬೆಳವಣಿಗೆಯಿಂದ ಪ್ರಸಕ್ತ ಚುನಾವಣಾ ಸಮಯದಲ್ಲಿ ಹಾಗೂ ರಾಜಕೀಯ ಚದುರಂಗದಾಟದಲ್ಲಿ ಬಿಜೆಪಿಗೇ ಹೆಚ್ಚು ಅನುಕೂಲ. ಇಂಗ್ಲಿಷ್‌ನಲ್ಲಿ ವಿನ್–ವಿನ್ ಸಿಚುಯೇಷನ್ ಎನ್ನುತ್ತಾರಲ್ಲ, ಹಾಗೆ.

ಮುಖ್ಯಮಂತ್ರಿಯಾಗಿ ಜ. 28ರಂದು ಒಂಬತ್ತನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ನಿತೀಶ್, ಹಿಂದಿನ 10 ವರ್ಷಗಳಲ್ಲಿ 5 ಬಾರಿ ತಮ್ಮ ಮಿತ್ರಪಕ್ಷಗಳನ್ನು ಬದಲಿಸಿದ್ದಾರೆ. ಇದಕ್ಕಾಗಿಯೇ ಅವರನ್ನು ‘ಪಲ್ಟು ಕುಮಾರ್’ (ಮತ್ತೆ ಮತ್ತೆ ಪಕ್ಷಾಂತರ ಮಾಡುವವನು) ಎಂದು ಹಿಂದಿಯಲ್ಲಿ ಮೂದಲಿಸಲಾಗುತ್ತದೆ. ಆದರೆ ತಾನು ಬೇರೆ ಪಕ್ಷಗಳಂತಲ್ಲ (ಪಾರ್ಟಿ ವಿಥ್ ಎ ಡಿಫರೆನ್ಸ್) ಎಂದು ಕರೆದುಕೊಳ್ಳುವ ಬಿಜೆಪಿ, ಈಗಿನದೂ ಸೇರಿದಂತೆ ಎರಡು ಬಾರಿ ಜೆಡಿಯು ಸಖ್ಯ ಬೆಳೆಸಿದೆ. ಲಾಲೂ ಪ್ರಸಾದ್ ಅವರ ಆರ್‌ಜೆಡಿ ಕೂಡ ನಿತೀಶ್ ಅವರ ಜೊತೆ ಎರಡು ಬಾರಿ ಕೈ ಜೋಡಿಸಿದೆ.

ನಿತೀಶ್ ಜೊತೆಗಿನ ಮೈತ್ರಿಯಿಂದ ಬಿಜೆಪಿಗೆ ಹೇಗೆ ಅನುಕೂಲವಾಗುತ್ತದೆ? ಒಂದು, ಲೋಕಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ, ಉತ್ತರ ಭಾರತದ ಹಿಂದಿ ಮಾತನಾಡುವ ಪ್ರಮುಖ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರದಲ್ಲಿ ಪಾಲು ಸಿಕ್ಕಿದೆ. ಎರಡು, ಈ ಬೆಳವಣಿಗೆಯಿಂದ ಬಿಹಾರದಲ್ಲಿ ಬಿಜೆಪಿ- ಜೆಡಿಯು ಮೈತ್ರಿಕೂಟಕ್ಕೆ ಲೋಕಸಭೆ ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ದೊರೆಯುವ ಸಾಧ್ಯತೆಯಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಒಟ್ಟು 40 ಸ್ಥಾನಗಳ ಪೈಕಿ 39ರಲ್ಲಿ ಈ ಕೂಟ ಜಯಭೇರಿ ಬಾರಿಸಿತ್ತು. ತಾನು ಸ್ಪರ್ಧಿಸಿದ್ದ ಎಲ್ಲಾ 17 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದರೆ, ಜೆಡಿಯು ಸ್ಪರ್ಧಿಸಿದ್ದ 17ರಲ್ಲಿ 16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಮೈತ್ರಿಕೂಟವನ್ನು ನಿತೀಶ್ 2020ರಲ್ಲಿ ತೊರೆದಾದ ನಂತರ ಬಿಹಾರದಲ್ಲಿ ಬಿಜೆಪಿಯ ಸ್ಥಿತಿ ಅಷ್ಟೇನೂ ಆಶಾದಾಯಕವಾಗಿ ಇರಲಿಲ್ಲ ಎಂದೇ ಹೇಳಲಾಗುತ್ತಿತ್ತು. ಆದರೆ ಈಗ ನಿತೀಶ್ ಅವರ ‘ಸ್ವಿಚ್ ಶಾಟ್’ನಿಂದ ಪರಿಸ್ಥಿತಿ ಬದಲಾಗಲಿದೆ ಎನ್ನಲಾಗಿದೆ.

ಮೂರನೆಯದು, ಜೆಡಿಯುವನ್ನು ತನ್ನೆಡೆಗೆ ಸೆಳೆದ ಎನ್‌ಡಿಎ, ಪ್ರತಿಸ್ಪರ್ಧಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಭಾರಿ ಹೊಡೆತ ಕೊಡುವುದರಲ್ಲಿ ಯಶಸ್ವಿ ಆಗಿದೆ. ಈ ಏಟಿನಿಂದ ಚೇತರಿಸಿಕೊಳ್ಳಲು ಮಿತ್ರಕೂಟಕ್ಕೆ ಖಂಡಿತ ಕಷ್ಟವಾಗಲಿದೆ. ಅಷ್ಟೇಅಲ್ಲ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಪೂರ್ವದಿಂದ ಪಶ್ಚಿಮಕ್ಕೆ’ ಯಾತ್ರೆಗೂ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಬೆಳವಣಿಗೆಯು ಇಂಡಿಯಾ ಬಣದ ಸದಸ್ಯರ ಸಂಖ್ಯೆಯನ್ನು ತಗ್ಗಿಸಿರುವುದಷ್ಟೇ ಅಲ್ಲ ವಿರೋಧಿ ನಾಯಕರ ಮನಃಸ್ಥೈರ್ಯವನ್ನೂ ಕುಗ್ಗಿಸಿದೆ.

ಕೊನೆಯದಾಗಿ, ಈ ಹೊಸ ಅಧ್ಯಾಯದಿಂದ, ವಿಭಿನ್ನ ಪ್ರಾದೇಶಿಕ ಪಕ್ಷಗಳು ಒಟ್ಟಿಗೇ ಇರಲು ಸಾಧ್ಯವಿಲ್ಲ ಹಾಗೂ ಕಾಂಗ್ರೆಸ್‌ಗೆ ಮೈತ್ರಿಕೂಟವನ್ನು ಮುನ್ನಡೆಸುವ ಸಾಮರ್ಥ್ಯ ಇಲ್ಲ ಎಂದು ಬಿಜೆಪಿ ಪ್ರಚಾರದಲ್ಲಿ ತೊಡಗುವುದು ನಿಶ್ಚಿತ. ಹಾಗೆಂದು, ಈ ಪಲ್ಟಿಯ ಲಾಭಕಾರ ಬರೇ ಬಿಜೆಪಿಯಲ್ಲ, ನಿತೀಶ್ ಕೂಡ ಹೌದು. 72 ವರ್ಷ ವಯಸ್ಸಿನ ನಿತೀಶ್ 2014ರಲ್ಲಿ ಕೆಲವು ತಿಂಗಳು ಹೊರತುಪಡಿಸಿದರೆ, 2005ರಿಂದಲೂ ಬಿಹಾರದ ಮುಖ್ಯಮಂತ್ರಿಯಾಗಿದ್ದಾರೆ. ಈಗಲೂ ಮುಖ್ಯಮಂತ್ರಿಯಾಗಿ ಮುಂದುವರಿಯುವುದರ ಜೊತೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಒಳ್ಳೆಯ ಫಲಿತಾಂಶವನ್ನು ಅವರು ಎದುರು ನೋಡಬಹುದು.

ಆದರೆ ಇಲ್ಲಿ ಒಂದು ಪ್ರಶ್ನೆಯಿದೆ. ಒಂದು ವೇಳೆ ಮುಂಬರುವ ಲೋಕಸಭಾ ಚುನಾವಣಾ ಅಖಾಡದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದೇ ಆದರೆ, ಚುನಾವಣೆ ನಂತರವೂ ನಿತೀಶ್ ಮುಖ್ಯಮಂತ್ರಿಯಾಗಿ ಮುಂದುವರಿಯುವರೇ? ಈ ಬಗ್ಗೆ ಸ್ಪಷ್ಟತೆ ಇಲ್ಲ. ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯುವ ನಿರೀಕ್ಷೆಯಲ್ಲಿರುವ ಬಿಜೆಪಿ, ಆಗ ‘ಕೇಂದ್ರ ಸಚಿವರಾಗಿ ಬನ್ನಿ’ ಎಂದು ನಿತೀಶ್ ಅವರ ಮೇಲೆ ಒತ್ತಡ ಹೇರಬಹುದು. ಇದು, ಬಿಹಾರದಲ್ಲಿ ಪ್ರಥಮ ಬಾರಿಗೆ ಬಿಜೆಪಿ ನಾಯಕರೊಬ್ಬರು ಮುಖ್ಯಮಂತ್ರಿ ಆಗುವುದಕ್ಕೆ ದಾರಿಯನ್ನು ಸುಗಮವಾಗಿಸುತ್ತದೆ. ಬಿಹಾರ ವಿಧಾನಸಭೆಯ 243 ಸದಸ್ಯ ಬಲದಲ್ಲಿ ಬಿಜೆಪಿ 78 ಹಾಗೂ ಜೆಡಿಯು 45 ಸದಸ್ಯರನ್ನು ಹೊಂದಿವೆ.

ಬಿಹಾರ ರಾಜಕಾರಣದಲ್ಲಿ ನಿತೀಶ್ ಕುಮಾರ್ ಯಾಕಿಷ್ಟು ಪ್ರಮುಖರಾಗುತ್ತಾರೆ? ಯಾಕೆಂದರೆ, 1974- 75ರ ಜೆ.ಪಿ. ಚಳವಳಿಯಿಂದ ಹೊರಹೊಮ್ಮಿದ ಈ ನಾಯಕನಿಲ್ಲದೇ ಬಿಜೆಪಿ ಅಥವಾ ಆರ್‌ಜೆಡಿಗೆ ಅಧಿಕಾರದ ಗದ್ದುಗೆ ಏರಲು 2000ದಿಂದ ಈಚೆಗೆ ಈವರೆಗೂ ಸಾಧ್ಯವಾಗಿಲ್ಲ. ಮುಖ್ಯಮಂತ್ರಿಯಾಗಿ 2005ರಿಂದಲೂ ಬಿಜೆಪಿ ಸಖ್ಯದಲ್ಲಿದ್ದ ನಿತೀಶ್, 2013ರಲ್ಲಿ ಕೇಸರಿ ಪಕ್ಷವನ್ನು ಬದಿಗೊತ್ತಿ 2014ರ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರು. ಅವರ ಜೆಡಿಯು ಉತ್ತಮ ಎನ್ನಬಹುದಾದ ಶೇ 15.8ರಷ್ಟು ಮತ ಗಳಿಸಿ, ತನಗೂ ಅಸ್ತಿತ್ವವಿದೆ ಎಂಬುದನ್ನು ಸಾಬೀತು ಮಾಡಿತು. ಅಷ್ಟೇಅಲ್ಲ, ತನ್ನ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಜೆಡಿಯು ಪಾಲಿನ ಮತಗಳು ಮಿತ್ರಪಕ್ಷಕ್ಕೂ ಬರುವಂತೆ ಮಾಡುವುದಾಗಿ ನಿತೀಶ್ ತೋರಿಸಿಕೊಟ್ಟರು. ಇದರಿಂದ, ಇತರ ಎರಡು ಪಕ್ಷಗಳಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ತಾನು ಅತ್ಯಗತ್ಯ ಎಂದು ಮನವರಿಕೆ ಮಾಡಿದರು. 2019ರ ಲೋಕಸಭೆ ಹಾಗೂ 2020ರ ವಿಧಾನಸಭೆ ಚುನಾವಣೆಗಳು ಇದನ್ನು ಸಾಬೀತು ಮಾಡಿವೆ.

ಬಿಹಾರದಲ್ಲಿ ನಿತೀಶ್ ಅವರನ್ನು ‘ಸುಶಾಸನ್ ಬಾಬು’ (ಒಳ್ಳೆಯ ಆಡಳಿತಗಾರ) ಎಂದೂ ಈ ಹಿಂದೆ ಕರೆದಿದ್ದುಂಟು. ತಮ್ಮ 2005- 10ರ ಅಧಿಕಾರದ ಅವಧಿಯಲ್ಲಿ ಈ ಸಮಾಜವಾದಿ ನಾಯಕ ಒಳ್ಳೆಯ ಆಡಳಿತವನ್ನು ಕೊಟ್ಟಿದ್ದರು. ಹಿಂದುಳಿದ ಕುರ್ಮಿ ಸಮುದಾಯದ ಈ ನಾಯಕ, ಯಾದವರನ್ನು ಹೊರತುಪಡಿಸಿದ ಹಿಂದುಳಿದ ವರ್ಗಗಳು, ಆರ್ಥಿಕವಾಗಿ ಹಿಂದುಳಿದವರು ಹಾಗೂ ಅತಿ ಹಿಂದುಳಿದ ಪರಿಶಿಷ್ಟ ಜಾತಿಗಳ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಜೊತೆಗಿನ ಹೊಂದಾಣಿಕೆ ಈ ಬಣಕ್ಕೆ ಮೇಲ್ವರ್ಗದ ಮತ್ತು ಕೆಲವು ಬೇರೆ ಸಮುದಾಯಗಳ ಮತಗಳನ್ನು ತರುತ್ತದೆ. ಜೆಡಿಯು ಏನಾದರೂ
ಆರ್‌ಜೆಡಿ ಜೊತೆ ಹೋದರೆ, ಆ ಗುಂಪಿಗೆ ಮುಸ್ಲಿಂ- ಯಾದವ ಸಮುದಾಯದ ಮತಗಳು (ಶೇ 30) ಸೇರ್ಪಡೆ
ಯಾಗುತ್ತವೆ. ಹೀಗಾಗಿ, ನಿತೀಶ್ ಅವರನ್ನು ಈ ಎರಡೂ ಪಕ್ಷಗಳು ನಿರ್ಲಕ್ಷಿಸುವುದಿಲ್ಲ.

2000ನೇ ಇಸವಿಯಲ್ಲಿ ಬಿಹಾರವನ್ನು ವಿಭಜಿಸಿ ಜಾರ್ಖಂಡ್ ರಾಜ್ಯವನ್ನು ಸ್ಥಾಪಿಸಿದ ನಂತರ ಬಿಹಾರದಲ್ಲಿ ಎಂದೂ ಬಹುಮತದ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ. ಇಲ್ಲಿ ಯಾವಾಗಲೂ ಅಧಿಕಾರಕ್ಕಾಗಿ ಮೂರು ಕುದುರೆಗಳ ಓಟ ನಡೆದೇ ಇರುತ್ತದೆ. ತಮ್ಮ ದೀರ್ಘ ಅಧಿಕಾರದ ಅವಧಿಯಲ್ಲಿ ಈ ಬತ್ತಳಿಕೆ ಅಥವಾ ದೌರ್ಬಲ್ಯವನ್ನು ಈ ನಾಯಕ ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಅಲ್ಲದೆ, ತಮ್ಮ ಸುದೀರ್ಘ ಅಧಿಕಾರದ ಅವಧಿಯ ಹಾಗೂ ತಮ್ಮ ಪಕ್ಷದ ಕುಸಿಯುತ್ತಿರುವ ಬಲದ ಹೊರತಾಗಿಯೂ, ಜೆಡಿಯುವನ್ನು ಒಟ್ಟಿಗೇ ನಡೆಸುವಲ್ಲಿ ನಿತೀಶ್ ಯಶಸ್ವಿಯಾಗಿದ್ದಾರೆ.

ಮುಖ್ಯಮಂತ್ರಿಯಾಗುವ ಮುನ್ನ, ಎ.ಬಿ.ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದ ಈ ನಾಯಕ, ಹೋದ ವರ್ಷ ಇಂಡಿಯಾ ಗುಂಪು ಅಸ್ತಿತ್ವಕ್ಕೆ ಬರುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಾವು ಈ ಕೂಟದ ಅಧ್ಯಕ್ಷ ಅಥವಾ ಸಂಚಾಲಕ ಆಗಬಹುದು ಎಂದುಕೊಂಡಿದ್ದರು. ಅವರಿಗೆ ಪ್ರಧಾನಿ ಪದವಿಯ ಮೇಲೆ ಕಣ್ಣಿದ್ದಿರಲೂಬಹುದು. ಆದರೆ ಅವರ ಭಾನುವಾರದ ನಡೆ ಈ ಆಕಾಂಕ್ಷೆಗೆ ತೆರೆ ಎಳೆದಿದೆ.

ನಿತೀಶ್ ಪ್ರಥಮ ಬಾರಿಗೆ ಮುಖ್ಯಮಂತ್ರಿಯಾದದ್ದು 2000ನೇ ಇಸವಿಯಲ್ಲಿ. ಆದರೆ 7 ದಿನಗಳಲ್ಲೇ ಅವರು ಪದವಿ ತ್ಯಜಿಸಬೇಕಾಯಿತು. ನಂತರ 2005ರಲ್ಲಿ ಬಿಜೆಪಿ ಜೊತೆಗೆ ಸಂಬಂಧ ಬೆಳೆಸಿಮುಖ್ಯಮಂತ್ರಿಯಾದರು. 2013ರಲ್ಲಿ ಲಾಲೂ ಸಖ್ಯ ಬೆಳೆಸಿದರು. 2014ರಲ್ಲಿ ಏಕಾಂಗಿಯಾಗೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರಾದರೂ 2015ರಲ್ಲಿ ಲಾಲೂ ಜೊತೆಗೆ ವಿಧಾನಸಭೆ ಚುನಾವಣೆ ಎದುರಿಸಿದರು. 2017ರಲ್ಲಿ ಮತ್ತೆ ಎನ್‌ಡಿಎ ತೆಕ್ಕೆಗೆ ಬಂದ ಅವರು, ಲಾಲೂ ಪ್ರಸಾದ್ ಅವರ ಪುತ್ರ ತೇಜಸ್ವಿ
ಅವರ ವಿರುದ್ಧ ಭ್ರಷ್ಟಾಚಾರದ ಪ್ರಕರಣ ದಾಖಲಿಸಿದರು. 2019ರ ಲೋಕಸಭೆ ಹಾಗೂ 2020ರ ವಿಧಾನಸಭೆ ಚುನಾವಣೆಗಳನ್ನು ಕೇಸರಿ ಪಕ್ಷದ ಜೊತೆಗೂಡಿ ಎದುರಿಸಿದರು. ಆದರೆ ಬಳಿಕ ಬಿಜೆಪಿ ಸಖ್ಯ ತೊರೆದು ಆರ್‌ಜೆಡಿ ಜೊತೆ ಸೇರಿ ಅಧಿಕಾರಕ್ಕೆ ಬಂದರು. ಈಗ 2024ರಲ್ಲಿ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ, ಇಂಡಿಯಾ ಗುಂಪಿನಿಂದ ನೇರವಾಗಿ ಎನ್‌ಡಿಎ ಅಂಗಳಕ್ಕೆ ಜಿಗಿದಿದ್ದಾರೆ.

ಬಿಹಾರದಲ್ಲಿ ಮುಂದಿನ ವಿಧಾನಸಭೆ ಚುನಾವಣೆ 2025ರ ಕೊನೆಯಲ್ಲಿ ನಡೆಯಲಿದೆ. ಆಗ ‘ಪಲ್ಟು ಕುಮಾರ್’ ಮತ್ತೆ ಎನ್‌ಡಿಎ ತೊರೆದು ಆರ್‌ಜೆಡಿ ಜೊತೆಗೂಡುವರೇ? ಅವರು ನಡೆದುಬಂದಿರುವ ರಾಜಕೀಯ ಹಾದಿಯನ್ನು ನೋಡಿದರೆ ಅಂತಹ ಸಾಧ್ಯತೆಯೂ ಇಲ್ಲದಿಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.