ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಹಸಿವು ಮಣಿಸಲು ಹುಟ್ಟಿದವಳು

Published 26 ಮಾರ್ಚ್ 2024, 21:20 IST
Last Updated 26 ಮಾರ್ಚ್ 2024, 21:20 IST
ಅಕ್ಷರ ಗಾತ್ರ

ಮಿತ್ರನ ಅಕ್ಕ ಆಕೆಯ ತಮ್ಮನಷ್ಟೇ ನನ್ನನ್ನೂ ನೋಡಿಕೊಂಡಳು. ಅವಳ ಮಕ್ಕಳನ್ನು ನಾವು ಎತ್ತಾಡಿಸಿದೆವು. ಅವೂ ಅಷ್ಟೇ ನಮ್ಮನ್ನು ಬಳ್ಳಿಯಂತೆ ಸುತ್ತಿಕೊಂಡವು. ಒಂದೇ ತಾಯ ಕರುಳು ಕಿತ್ತು ಹಂಚಿಕೊಂಡಂತೆ ಬಾಂಧವ್ಯ ಬೆಳೆದಿತ್ತು. ಹೊಟ್ಟೆ ಹಸಿವಾದರೆ ಸಾಕು ಅವಳ ಮುಖ ನೆನಪಾಗಿ ಓಡುತ್ತಿದ್ದೆವು. ಯಾರೇ ಮನೆಗೆ ಬಂದರೂ ಆಕೆಗದು ಸಡಗರ. ಜೀವವಿರುವ ಎಲ್ಲವನ್ನೂ ಆತುಕೊಂಡು ಮಮತೆ ಎರೆವ ಸ್ವಭಾವ. ಬಂದವರಿಗೆ ರುಚಿರುಚಿ ಅಡಿಗೆ ಮಾಡಿ ಬಡಿಸುವುದು ಅವಳಿಗೆ ದೇವನೊಲುಮೆ ಇದ್ದಂತೆ. ಯಾರಾದರೂ ಉಣ್ಣದೆ ಹಾಗೆ ಹೊರಟರೆ ಮಗುವಿನಂತೆ ಅತ್ತು ಅಡ್ಡ ಹಾಕುತ್ತಿದ್ದಳು. ಮೊಗೆದಷ್ಟೂ ಜಲದಂತೆ ಉಕ್ಕುತ್ತಿದ್ದ ಈ ಬಗೆಯ ವಾತ್ಸಲ್ಯದ, ಕರುಣೆಯ ಹೆಣ್ಣು ಜೀವವ ನಾ ನೋಡೇ ಇರಲಿಲ್ಲ.

ಚೆನ್ನಾಗಿದ್ದ ಅವಳು ಜ್ವರವೆಂದು ಆಸ್ಪತ್ರೆ ಸೇರಿದ್ದೊಂದು ನೆವ. ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಗಂಡನೇ
ನೋಡಿಕೊಂಡಿದ್ದು, ಆರೈಕೆ ಮಾಡಿದ್ದು. ಗುಂಡು ಕಲ್ಲಿನಂತಿದ್ದ ಹಳ್ಳಿ ಹೆಣ್ಮಗಳು ಹೊಲ ಉತ್ತವಳು, ಬೀಜ ಬಿತ್ತಿ, ನಟ್ಟಿ ಮಾಡಿ,
ಗೊಬ್ಬರ ಹೊತ್ತು ಕಳೆ ತೆಗೆದವಳು. ರಾತ್ರಿ ಸರೋತ್ತಿನಲ್ಲಿ ನೀರು ಕಟ್ಟಲು ಹೊಲಕ್ಕೆ ಹೋದವಳು. ಮನೆಯಲ್ಲಿ ಆಳು ಕಾಳಿಗೆಲ್ಲಾ ರಾಶಿ
ರೊಟ್ಟಿ ಬಡಿದವಳು. ಈ ಗಟ್ಟಿಗಿತ್ತಿಗೆ ಅದೇನು ವ್ಯತ್ಯಾಸವಾಯಿತೋ ಅನೇಕ ರೋಗಗಳು ಆಕೆಯಲ್ಲಿ ಪ್ರತ್ಯಕ್ಷವಾದವು. ಹಲವು ಶಸ್ತ್ರ
ಚಿಕಿತ್ಸೆ, ವಿಪರೀತ ಔಷಧಿ, ಗುಳಿಗೆ, ಪಥ್ಯ ಹೀಗೆ ಅವಳ ಪಯಣ ಸಾಗಿತ್ತು. ಆದರೆ ಮೊಗದ ತಿಳಿ ನಗು ಕರಗಿರಲಿಲ್ಲ.

ನೋಡಬಂದವರು ವ್ಯಥೆ, ಸಂಕಟ, ಅನುಕಂಪ ಸೂಚಿಸಿದರೂ ಈಕೆ ಎಂದೂ ಕೊರಗಲಿಲ್ಲ. ಅದೇ ಮಂದಹಾಸ. ಎಂದಿನ ಉಪಚಾರ,
ಪ್ರೀತಿಯ ಮಾತುಕತೆ. ನಾನು ನನ್ನ ಪತ್ನಿ ಆಕೆಯ ನೋಡಲು ಆಸ್ಪತ್ರೆಗೆ ಹೋದೆವು. ಅದು ರಾತ್ರಿ ಊಟದ ಹೊತ್ತು. ಆಕೆ ಮೊದಲು
ಕೇಳಿದ್ದೇ ‘ನಿನ್ನ ಊಟವಾಯಿತಾ’ ಎಂದು. ನಾನು ಆಯಿತೆಂದು ಸುಳ್ಳು ಹೇಳಿದೆ. ಒಮ್ಮೆ ನಕ್ಕು ಹಸಿದ ಮುಖ ನಾನು ಓದುತ್ತೇನೆ
ತಮ್ಮಯ್ಯ. ನಮ್ಮ ಮನೆಗೋಗಿ ಮೊದಲು ಊಟ ಮಾಡಿ ಬನ್ನಿ. ಆಮೇಲೆ ಮಾತುಕಥೆ ಎಂದಳು. ಆಗ ಆಕೆ ಗಂಜಿಯನ್ನು ಕಷ್ಟಬಿದ್ದು
ಕುಡಿಯುತ್ತಿದ್ದಳು.

ಸಾಕವ್ವ ಮೊದಲು ನೀ ವೈನಾಗು. ಆಮೇಲೆ ನಿನ್ನ ಕೈ ಬಿಸಿ ರೊಟ್ಟಿ, ಪಲ್ಯ ತಿನ್ನೋಣ ಎಂದೆ. ಅವೆಲ್ಲಾ ಮರೆಸೋ ಮಾತು ಬೇಡ.
ಮನೇಲಿ ಮಗಳಿಗೆ ತಾಕೀತು ಮಾಡಿದ್ದೀನಿ. ಇಲ್ಲಿ ನನ್ನ ಕಾಣಲು ಯಾರೇ ಬಂದರೂ ಊಟ, ತಿಂಡಿ ವಿಚಾರಿಸದೆ ಕಳಸಬಾರದು ಅಂತ.
ನನ್ನ ಕಣ್ಣಿಗೆ ಬಿದ್ದ ಮೇಲೆ ಮುಗೀತು. ಯಾರೂ ಉಪವಾಸ ಹೋಗಬಾರದು ಎಂದಳು. ‘ಇದು ಮನೆಯಲ್ಲ ಆಸ್ಪತ್ರೆ’ ಎಂದೆ.
‘ಆದರೇನಂತೆ ಉಣ್ಣದೆ, ಉಪಾಸ ಇರಕ್ಕಾಗುತ್ತಾ? ಹೋಗು’ ಎಂದು ಬಲವಂತ ಮಾಡಿದಳು.

ಅದು ಕೊನೆಯ ಭೇಟಿ. ಇಡೀ ಬದುಕು ಹೀಗೆ ಅನ್ನದಾತೆಯಾಗಿದ್ದಳು. ಹಸಿದವರಿಗೆ ಉಣಿಸುವುದು ಅವಳಿಗೆ ಹಿಡಿದ ಹುಚ್ಚು. ಆಕೆಯ ತಾಯ್ತನ, ಅಂತಃಕರಣದಿಂದ ಹುಟ್ಟುತ್ತಿದ್ದ ನೈಜ ಪ್ರೀತಿ ಅಳತೆ ಮೀರಿದ್ದು. ಜಾತಿ, ಧರ್ಮ ಮೀರಿ ಅಸಾಮಾನ್ಯ ಬದುಕು ನಡೆಸುವ ಇಂತಹ ಸಾವಿರಾರು ಮಾತೃ ಸ್ವರೂಪಿಗಳು ಇನ್ನೂ ನಮ್ಮೊಳಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT