ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಟೆನ್‌ಕೆ ಓಟಕ್ಕೆ 30 ಸಾವಿರ ಸ್ಪರ್ಧಿಗಳು

ಉದ್ಯಾನಗರಿಯಲ್ಲಿ ಸ್ಪರ್ಧೆ: ಅಂತರರಾಷ್ಟ್ರೀಯ ಅಥ್ಲೀಟ್‌ಗಳು ಭಾಗಿ
Published 18 ಏಪ್ರಿಲ್ 2024, 16:03 IST
Last Updated 18 ಏಪ್ರಿಲ್ 2024, 16:03 IST
ಅಕ್ಷರ ಗಾತ್ರ

ಬೆಂಗಳೂರು: ‘ಟಿಸಿಎಸ್‌ ವಿಶ್ವ 10ಕೆ ಬೆಂಗಳೂರು-2024’ ಓಟ ಇದೇ ತಿಂಗಳ 28 (ಭಾನುವಾರ) ರಂದು ಉದ್ಯಾನಗರಿಯಲ್ಲಿ ನಡೆಯಲಿದ್ದು, ಒಟ್ಟು 30 ಸಾವಿರ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ‌

ಮೊದಲ ಬಾರಿಗೆ ಗ್ರೌಂಡ್ ಮತ್ತು ವರ್ಚುವಲ್ (ಹೈಬ್ರೀಡ್‌) ವಿಭಾಗದಲ್ಲಿ ಕೆನ್ಯಾ, ಇಥಿಯೋಪಿಯಾ, ಭಾರತ ಸೇರಿದಂತೆ ವಿವಿಧ ದೇಶಗಳ ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಇದರಲ್ಲಿ 1500 ಓಟಗಾರರು ವರ್ಚುವಲ್ ಭಾಗಿ ಪಾಲ್ಗೊಳ್ಳುತ್ತಿರುವುದು 16ನೇ ಆವೃತ್ತಿಯ ವಿಶೇಷ. 

ವಿಶ್ವದ ಎರಡನೇ ಅತಿ ವೇಗದ ಟೆನ್‌ಕೆ ಓಟಗಾರ್ತಿ ಕೆನ್ಯಾದ ಇಮಾಕ್ಯುಲೆಟ್ ಅನ್ಯಾಂಗೊ ಅಕೋಲ್, ಬೆಂಗಳೂರು ಓಟದ ಪ್ರಚಾರ ರಾಯಭಾರಿಯಾಗಿರುವ ಶಾಟ್‌ಪಟ್‌ ಥ್ರೊ ಸ್ಪರ್ಧಿ ವೆಲೇರಿ ಆ್ಯಡಮ್ಸ್‌, ಭಾರತದ ತಂಶಿ ಸಿಂಗ್‌, ಸಂಜೀವಿನಿ ಜಾಧವ್‌ ಅವರು ಓಟಕ್ಕೆ ಮೆರಗು ನೀಡಲಿದ್ದಾರೆ ಎಂದು ಪ್ರೊಕ್ಯಾಮ್ ಇಂಟರ್‌ನ್ಯಾಷನಲ್ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಸಿಂಗ್ ಗುರುವಾರ ಸುದ್ಧಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. 

ಮಾಣಿಕ್ ಷಾ ಪರೇಡ್‌ ಮೈದಾನದಿಂದ ಆರಂಭವಾಗುವ ರೇಸ್ ಪ್ರಮುಖ ರಸ್ತೆಗಳಲ್ಲಿ ಸಾಗಿ ಅದೇ ಸ್ಥಳದಲ್ಲಿ ಕೊನೆಗೊಳ್ಳಲಿದೆ. ಫೀಚರ್‌ ರೇಸ್‌ ಓಪನ್ 10ಕೆ, ಅಂಗವಿಕಲರು, ಹಿರಿಯ ನಾಗರಿಕರು ಮತ್ತು ಮಜಾ ರನ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವೃತಿಪರ ಮತ್ತು ಹವ್ಯಾಸಿ ಓಟಗಾರರು ಭಾಗವಹಿಸುವರು. 

ಹಾಲಿ ಚಾಂಪಿಯನ್ ತಂಶಿ ಸಿಂಗ್ ಮತ್ತು ಎರಡು ಬಾರಿಯ ಚಾಂಪಿಯನ್ ಸಂಜೀವನಿ ಜಾಧವ್‌ ಅವರನ್ನೊಳಗೊಂಡ ಭಾರತ ಎಲೀಟ್‌ ಮಹಿಳಾ ತಂಡ ಕಣಕ್ಕಿಳಿಯಲಿದೆ. ಪುರುಷರ ವಿಭಾಗದಲ್ಲಿ ಕಳೆದ ವರ್ಷದ ರನ್ನರ್ ಅಪ್ ಹರ್ಮನ್‌ಜೋತ್ ಸಿಂಗ್‌ ಮತ್ತೆ ಸ್ಪರ್ಧಿಸುತ್ತಿದ್ದಾರೆ.

ಓಟವು ಒಟ್ಟು ₹ 1,75,41,405 ಬಹುಮಾನ ಮೊತ್ತ ಹೊಂದಿದ್ದು, ಭಾರತದ ಪುರುಷರ ಮತ್ತು ಮಹಿಳಾ ವಿಭಾಗಗಳ ವಿಜೇತರಿಗೆ ತಲಾ ₹ 2.75 ಲಕ್ಷ ನಗದು ನೀಡಲಾಗುವುದು. ಅಲ್ಲದೇ ಕೂಟ ದಾಖಲೆಗೆ ಬೋನಸ್‌ ಆಗಿ ಹೆಚ್ಚುವರಿ ₹ 2 ಲಕ್ಷ ನಗದು ದೊರೆಯಲಿದೆ. ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಓಟ ಪೂರ್ಣಗೊಳಿಸುವ ಸಾವಿರ ಸ್ಪರ್ಧಿಗಳಿಗೆ ಎಸಿಕ್ಸ್ ವತಿಯಿಂದ ಟಿ ಶರ್ಟ್‌ ನೀಡಲಾಗುತ್ತದೆ. 

ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಸರಿಗಮ ಕಲಾವಿದರಾದ ಅವಿನಾಶ್ ಗುಪ್ತಾ, ಅಭಿಷೇಕ್ ಸೋನಿ ಅವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.  

ಇದೇ ವೇಳೆ ಟೆನ್‌ಕೆ ಓಟದ ಪೋಷಾಕು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಟಿಸಿಎಸ್‌ ಬೆಂಗಳೂರು ಪ್ರಾದೇಶಿಕ ಮುಖ್ಯಸ್ಥ ಸುನಿಲ್ ದೇಶಪಾಂಡೆ, ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್ ಮುಖ್ಯ ಮಾರುಕಟ್ಟೆ ಅಧಿಕಾರಿ ನಾರಾಯಣ್, ಹೀರೊ ಮೊಟೊಕಾರ್ಪ್ ಚೀಫ್ ಬಿಸಿನೆಸ್‌ ಆಫೀಸರ್ ಡಾ.ಸ್ವದೇಶ್‌ ಶ್ರೀವಾಸ್ತವ್, ಅಂತರರಾಷ್ಟ್ರೀಯ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT