ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷಯ ತೃತೀಯ: ‘ಹಳದಿ ಲೋಹ’ ಮೇಲೆ ಗ್ರಾಹಕರ ಮೋಹ, ಬಂಗಾರಕ್ಕೂ ಬೆಲೆ ಏರಿಕೆ ಬಿಸಿ

Published 10 ಮೇ 2024, 4:52 IST
Last Updated 10 ಮೇ 2024, 4:52 IST
ಅಕ್ಷರ ಗಾತ್ರ

ಮೈಸೂರು: ಶುಕ್ರವಾರ (ಮೇ 10) ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಬಂಗಾರ ಖರೀದಿಯತ್ತ ಸ್ತ್ರೀಯರ ಚಿತ್ತ ಹರಿದಿದೆ. ಆದರೆ, ಹಳದಿ ಲೋಹದ ಬೆಲೆ ವಿಪರೀತ ಏರಿದ್ದು, ಆಭರಣ ಪ್ರಿಯರು ಹಿಂದೇಟು ಹಾಕುವಂತೆ ಮಾಡಿದೆ.

ಅಕ್ಷಯ ತೃತೀಯದಂದು ಬಂಗಾರ ಖರೀದಿಸಿದರೆ ಶ್ರೇಯಸ್ಸು ಎಂಬುದು ಹಲವರ ನಂಬಿಕೆ. ಈ ಕಾರಣಕ್ಕೆ ನಗರದ ಆಭರಣ ಅಂಗಡಿಗಳ ತುಂಬೆಲ್ಲ ಅಂದು ಗ್ರಾಹಕರು ಕಿಕ್ಕಿರಿದು ನೆರೆದಿರುತ್ತಾರೆ. ಆಭರಣ ವರ್ತಕರು ಹಲವು ರಿಯಾಯಿತಿಗಳ ಮೂಲಕ ಗ್ರಾಹಕರನ್ನು ಸೆಳೆಯಲು ಸಿದ್ಧತೆ ನಡೆಸಿದ್ದಾರೆ. ಆದರೆ, ಬಂಗಾರದ ಬೆಲೆ ಗಗನಕ್ಕೆ ಏರಿರುವುದೇ ಕೊಳ್ಳುವವರಿಗೆ ಸವಾಲಾಗಿದೆ.

ಎಷ್ಟು ಏರಿಕೆ?: 2023ರ ಮೇ ತಿಂಗಳಿನಲ್ಲಿ ಮಾರುಕಟ್ಟೆಯಲ್ಲಿ ಆಭರಣ ಚಿನ್ನದ ಬೆಲೆ (22 ಕ್ಯಾರೆಟ್) ಪ್ರತಿ ಗ್ರಾಂಗೆ ₹5,751 ಇತ್ತು. ಬುಧವಾರ ಮೈಸೂರಿನಲ್ಲಿ ಇದೇ ಚಿನ್ನದ ಬೆಲೆ ಗ್ರಾಂಗೆ ₹6,615 ಇದ್ದು, ಕಳೆದೊಂದು ವರ್ಷದಲ್ಲಿ ಒಂದು ಗ್ರಾಂಗೆ ₹900ರಷ್ಟು ಏರಿಕೆ ಕಂಡಿದೆ. 2022ರ ಮೇನಲ್ಲಿ ಚಿನ್ನದ ಬೆಲೆ ಗ್ರಾಂಗೆ ₹5,360 ಇತ್ತು.

ಸದ್ಯ ಚಿನ್ನದ ಮಾರುಕಟ್ಟೆಯಲ್ಲಿ ನಿತ್ಯವೂ ದರದಲ್ಲಿ ವ್ಯತ್ಯಾಸ ಆಗುತ್ತಿದೆ. ಕಳೆದ ಒಂದು ವಾರದಲ್ಲಿ ಬೆಲೆಯು ₹60ರಷ್ಟು ಹೆಚ್ಚಾಗಿದೆ.

ಆಭರಣ ಇನ್ನಷ್ಟು ದುಬಾರಿ: ಚಿನ್ನದ ಬೆಲೆ ಹೆಚ್ಚಿದಷ್ಟು ಅದಕ್ಕೆ ತಕ್ಕಂತೆ ತಯಾರಿಕೆ ಶುಲ್ಕ (ಮೇಕಿಂಗ್‌) ಹಾಗೂ ವೇಸ್ಟೆಜ್‌ ದರದಲ್ಲೂ ಏರಿಕೆ ಆಗುತ್ತದೆ. ಪ್ರಸ್ತುತ ವಿವಿಧ ಆಭರಣ ಕಂಪನಿಗಳು ಆಭರಣ ತಯಾರಿಕೆಗೆ ಶೇ 5ರಿಂದ ಶೇ 20ರವರೆಗೂ ತಯಾರಿಕೆ ಶುಲ್ಕ ವಿಧಿಸುತ್ತಿವೆ. ಇದರ ಜೊತೆಗೆ ಪ್ರತಿ 10 ಗ್ರಾಂಗೆ 1 ಗ್ರಾಂನಷ್ಟು ವೆಸ್ಟೇಜ್‌ ಕಳೆಯಲಾಗುತ್ತದೆ. ಇದೆಲ್ಲದರ ಜೊತೆಗೆ ಜಿಎಸ್‌ಟಿಯನ್ನೂ ಸೇರಿಸಿದರೆ ಪ್ರತಿ ಗ್ರಾಂ ಆಭರಣಕ್ಕೆ ₹7,500ರಿಂದ ₹8 ಸಾವಿರ ವೆಚ್ಚ ಆಗಲಿದೆ ಎನ್ನುತ್ತಾರೆ ಆಭರಣ ಮಳಿಗೆಯೊಂದರ ಸಿಬ್ಬಂದಿ.

ಬೆಳ್ಳಿ ಬೆಲೆಯೂ ಗಗನಕ್ಕೆ

ಚಿನ್ನದ ಜೊತೆಜೊತೆಗೆ ಬೆಳ್ಳಿ ಬೆಲೆಯೂ ಗಗನಮುಖಿ ಆಗುತ್ತಿದೆ. ನಗರದ ಮಾರುಕಟ್ಟೆಯಲ್ಲಿ ಬುಧವಾರ ಪ್ರತಿ ಕೆ.ಜಿ. ಬೆಳ್ಳಿ ₹85200ರ ದರದಲ್ಲಿ ಮಾರಾಟ ನಡೆಯಿತು. ಕಳೆದ ಎಂಟು ದಿನದಲ್ಲೇ ಬೆಳ್ಳಿ ಪ್ರತಿ ಕೆ.ಜಿ.ಗೆ ₹2200ರಷ್ಟು ಬೆಲೆ ಏರಿಸಿಕೊಂಡಿದೆ. 2023ರ ನ.1ರಂದು ಬೆಳ್ಳಿ ಪ್ರತಿ ಕೆ.ಜಿ.ಗೆ ₹74 ಸಾವಿರ ಇತ್ತು. ಕಳೆದ ಆರು ತಿಂಗಳ ಅವಧಿಯಲ್ಲಿ ಕೆ.ಜಿ.ಗೆ ₹11 ಸಾವಿರದಷ್ಟು ಹೆಚ್ಚಳವಾಗಿದೆ.

ಪ್ರತಿ ವರ್ಷ ಅಕ್ಷಯ ತೃತೀಯದಂದು ಕನಿಷ್ಠ ಒಂದೆರಡು ಗ್ರಾಂ ಚಿನ್ನ ಖರೀದಿಸುವ ಹವ್ಯಾಸವಿದೆ. ಆದರೆ ಈ ವರ್ಷ ಬೆಲೆ ಕೇಳಿದರೆ ಚಿನ್ನ ಕೊಳ್ಳಲು ಮನಸ್ಸೇ ಬರುತ್ತಿಲ್ಲ.
-ರಶ್ಮಿ ವಿಜಯನಗರ
ವಿವಿಧ ಕಾರಣಗಳಿಗೆ ಚಿನ್ನದ ದರದಲ್ಲಿ ಏರಿಕೆ ಆಗುತ್ತಲೇ ಇದೆ. ಹಾಗೆಂದು ಖರೀದಿಯಲ್ಲಿ ತುಂಬಾ ವ್ಯತ್ಯಾಸ ಆಗಿಲ್ಲ. ಶುಭ ಸಮಾರಂಭಗಳಿಗೆ ಆಭರಣ ಕೊಳ್ಳುವವರ ಸಂಖ್ಯೆ ಕಡಿಮೆ ಆಗಿಲ್ಲ.
-ಸಂತೋಷ್‌, ಆಭರಣ ಮಳಿಗೆ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT