ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷಯ ತೃತೀಯಾ: ಸಂಪತ್ತು ದಾನಗಳ ಹಬ್ಬ

ನವೀನ ಭಟ್ಟ ಗಂಗೋತ್ರಿ
Published 9 ಮೇ 2024, 23:49 IST
Last Updated 9 ಮೇ 2024, 23:49 IST
ಅಕ್ಷರ ಗಾತ್ರ

ಚಾಂದ್ರಮಾನ ಪಂಚಾಂಗದಲ್ಲಿ ವೈಶಾಖಮಾಸದ ಶುಕ್ಲಪಕ್ಷದ ಮೂರನೆಯ ದಿನವನ್ನು ‘ಅಕ್ಷಯತೃತೀಯಾ’ ಎಂದು ಗುರುತಿಸಲಾಗುತ್ತದೆ. ಇದೊಂದು ವಿಶೇಷವಾದ ದಿನ ಮತ್ತು ಎಲ್ಲ ಶುಭಕಾರ್ಯಗಳಿಗೆ ಬಲು ಪ್ರಶಸ್ತವಾದ ಮುಹೂರ್ತದ ದಿನವೂ ಹೌದು. ಅಕ್ಷಯತೃತೀಯಾ ಎಂಬ ಸಂಸ್ಕೃತ ಪದವೇ ಕನ್ನಡದಲ್ಲಿ ‘ಅಕ್ಷಯತದಿಗೆ‘ ಎಂತಲೂ, ‘ಆಖಾ ತೀಜ್’, ‘ಅಖ್ತಿ’ ಎಂಬುದಾಗಿ ಉತ್ತರದ ಭಾಷೆಗಳಲ್ಲೂ ಪ್ರಚಲಿತವಿದೆ. ಪದಗಳು ಬೇರೆಬೇರೆಯಾದರೂ ಇಲ್ಲಿರುವ ಭಾವ ಮಾತ್ರ ಕೊನೆಯಿಲ್ಲದ, ಕ್ಷಯವಿಲ್ಲದ, ಕಳೆಗುಂದದ ಮಂಗಲವನ್ನು ಕೊಡುವಂಥದು ಎಂಬುದೇ ಆಗಿದೆ. ಹೀಗಾಗಿ ಅಕ್ಷಯತೃತೀಯೆಯ ದಿನವೇ ಮಂಗಳಕಾರ್ಯಗಳನ್ನು ಕೈಗೊಳ್ಳುವುದು ಸಂಪ್ರದಾಯದಲ್ಲಿ ಬಂದಿದೆ. ಈ ದಿನ ಮಾಡುವ ಮಂಗಳಕಾರ್ಯಗಳಿಗೆ ದಿನದ ಯಾವುದೋ ಒಂದು ಸಮಯದಲ್ಲಿ ಮಾತ್ರ ಒಳ್ಳೆಯ ಮುಹೂರ್ತವನ್ನು ಹುಡುಕುವ ಅನಿವಾರ್ಯತೆ ಇರುವುದಿಲ್ಲ, ಬದಲಾಗಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಇಡೀ ದಿನವೂ ಮಂಗಳಕಾರ್ಯಗಳನ್ನು ನೆರವೇರಿಸಬಹುದಾಗಿದೆ. ಹಾಗಾಗಿಯೇ ಸಾಮೂಹಿಕ ಉಪನಯನ, ಮದುವೆ ಮುಂತಾದ ಮಂಗಳಕಾರ್ಯಗಳು ಈ ದಿನ ಹೆಚ್ಚಾಗಿ ನಡೆಯುತ್ತವೆ. ಈ ದಿನ ಹಿಂದೂ ಸಂಪ್ರದಾಯಗಳಲ್ಲಿ ಮಾತ್ರವಲ್ಲದೆ ಜೈನರಲ್ಲಿಯೂ ಆಚರಣೆಯಲ್ಲಿದೆ.

ಈ ದಿನವೇ ಪರಶುರಾಮಜಯಂತಿಯೂ ಹೌದು. ಇತಿಹಾಸ ಮತ್ತು ಪುರಾಣ ಪ್ರಸಿದ್ಧವಾದ ಕೆಲವು ಮಹತ್ಕಾರ್ಯಗಳು ಅಕ್ಷಯತೃತೀಯೆಯಂದೇ ನಡೆದುವು ಎಂಬುದು ಪ್ರತೀತಿ. ಆಚಾರ್ಯ ಶಂಕರರಿಗೆ ಕನಕಧಾರಾಸ್ತ್ರೋತ್ರದ ಮೂಲಕ ಲಕ್ಷ್ಮೀಕಟಾಕ್ಷ ಸಿದ್ಧಿಸಿದ್ದು, ತಲೆಮಾರುಗಳವರೆಗೆ ನೆನೆಗುದಿಯಲ್ಲಿದ್ದ ಗಂಗಾಽನಯನ ಯೋಜನೆಯನ್ನು ರಾಜಾ ಭಗೀರಥನು ತನ್ನ ತಪಸ್ಸಿನ ಮೂಲಕ ಪೂರ್ಣಗೊಳಿಸಿದ್ದು, ವನವಾಸದಲ್ಲಿದ್ದ ಪಾಂಡವರಿಗೆ ಸೂರ್ಯದೇವನು ಅಕ್ಷಯಪಾತ್ರೆಯನ್ನು ಕರುಣಿಸಿದ್ದು, ಬಡವನಾದ ಕುಚೇಲನಿಗೆ ಭಗವಾನ್ ಶ್ರೀಕೃಷ್ಣನ ಅನುಗ್ರಹವಾಗಿ ಕುಚೇಲನ ಕಷ್ಟಗಳು ನೀಗಿದ್ದು, ಕುಬೇರನಿಗೆ ಲಕ್ಷ್ಮೀ ಕೃಪೆಯಾಗಿ ಆತ ಸಂಪತ್ತಿಗೆ ಅಧಿಪತಿಯಾದ್ದು ಸಹ ಇದೇ ದಿನವೆಂದು ಹೇಳಲಾಗುತ್ತದೆ. ಈ ಎಲ್ಲ ಇತಿಹಾಸಪುರಾಣ ಪ್ರಸಿದ್ಧ ಘಟನೆಗಳನ್ನು ನೋಡುವಾಗ ಅಕ್ಷಯತೃತೀಯೆಗೆ ಸಂಪತ್ತಿನ ಜೊತೆಗೆ ಅನಾದಿಕಾಲದ ನಂಟು ಇದೆಯೆಂದು ತೋರುತ್ತದೆ. ನಮ್ಮ ಕಾಲದಲ್ಲಿಯಾದರೂ ಇದು ಮುಂದುವರಿದುಕೊಂಡು ಬಂದಿದೆ ಎನ್ನಬಹುದು. ಈ ಎಲ್ಲ ಪ್ರಾಕ್ಕಾಲದ ಐತಿಹ್ಯಗಳ ಆಧಾರದಲ್ಲಿಯೇ ಇವತ್ತಿಗೂ ಅಕ್ಷಯತೃತೀಯೆಯ ದಿನದಂದು ಜನರು ಬಂಗಾರ, ಬೆಳ್ಳಿ ಮತ್ತಿತರ ಮೌಲ್ಯಭರಿತ ವಸ್ತುಗಳನ್ನು ಕೊಳ್ಳುವುದು ಚಾಲ್ತಿಗೆ ಬಂದಿದೆ. ನಮ್ಮ ಕಾಲದಲ್ಲಿಯಂತೂ ಬಂಗಾರದ ಮಳಿಗೆಗಳು ಈ ದಿನವನ್ನು ತಮ್ಮ ವ್ಯವಹಾರದ ಅತಿ ಮುಖ್ಯ ದಿನವನ್ನಾಗಿ ನೋಡುತ್ತವೆ. ಅದರಲ್ಲಿಯೂ ಈ ಬಾರಿ ಅಕ್ಷಯತೃತೀಯಾ ಶುಕ್ರವಾರದಂದು ಬಂದಿರುವುದರಿಂದ ಇನ್ನಷ್ಟು ಹೆಚ್ಚಿನ ಮಹತ್ವದ್ದೆನಿಸಿದೆ.

ಆದರೆ ಶಾಸ್ತ್ರಗಳನ್ನು ನೋಡುವಾಗ ನಮಗೆ ಅಕ್ಷಯತೃತೀಯೆ ದಾನಕ್ಕೆ ಪ್ರಶಸ್ತವಾದ ದಿನವಾಗಿ ಕಾಣುತ್ತದೆಯೇ ಹೊರತು ಸಂಪತ್ತನ್ನು ಕೂಡಿಡುವುದಕ್ಕಲ್ಲ. ‘ಕೊಟ್ಟಿದ್ದು ತನಗೆ, ಬಚ್ಚಿಟಿದ್ದು ಪರರಿಗೆ’ ಎಂಬ ತಿಳಿನುಡಿಯು ಶಾಸ್ತ್ರಗಳ ಈ ನಿಲುವನ್ನೇ ಸಮರ್ಥಿಸುವಂತಿದೆ. ಅಂದರೆ ದಾನವೆಂಬ ಮೌಲ್ಯದ ಆಚರಣೆಗೆ ಇರುವಷ್ಟು ಮಹತ್ತು ನಮ್ಮಲ್ಲಿ ಸಂಪತ್ತನ್ನು ಕೂಡಿಡುವುದಕ್ಕೆ ಇರಲಿಲ್ಲ. ಇದರರ್ಥ ಸಂಪತ್ತನ್ನು ಗಳಿಸಬಾರದೆಂದಲ್ಲ; ಗಳಿಸಬೇಕು, ತನಗಾಗಿ ಕೊಂಚ ಉಳಿಸಬೇಕು ಮತ್ತು ಕೈದೆರೆದು ದಾನ ಮಾಡಬೇಕು ಎನ್ನುವುದು. ಆದರೆ ಸದ್ಯಕ್ಕೆ ನಮ್ಮ ಸಮಾಜದ ಬದುಕೆಲ್ಲವೂ ಧನಕನಕಗಳನ್ನು ಕೇಂದ್ರದಲ್ಲಿ ಇರಿಸಿಕೊಂಡಿರುವುದರಿಂದ ದಾನಕ್ಕೆ ಹೆಚ್ಚಿನ ಒತ್ತು ಸಿಗುತ್ತಿಲ್ಲ. ಅಕ್ಷಯತೃತೀಯ ದಿನದಂದು ಗಂಗೆಯಲ್ಲಿ ಮಿಂದು ದಾನಧರ್ಮಾದಿಗಳನ್ನು ಮಾಡಬೇಕು ಅನ್ನುವುದು ಪರಂಪರೆಯ ಆದರ್ಶ. ದಾನವು ಇಹದಲ್ಲಿಯೂ ಪರದಲ್ಲಿಯೂ ಶ್ರೇಯಸ್ಸನ್ನು ಕೊಡುವ ಕರ್ಮವಾದ್ದರಿಂದ, ಈ ದಿನದಂದು ಕೊಡುವ ದಾನವು ಕುಂದಿಲ್ಲದ ಒಳಿತನ್ನು ತರುವುದು ಎಂಬುದು ಶಾಸ್ತ್ರದ ನಿಲ್ಮೆ. ದಾನವೇ ಯಜ್ಞಗಳಲ್ಲಿ ಶ್ರೇಷ್ಠತಮ ಹಾಗೂ ದಾನ ಕೊಡುವವರನ್ನು ನೆಚ್ಚಿಯೇ ಜೀವಲೋಕ ಬದುಕಿದೆ ಎಂಬುದು ವೇದದ ಕಾಣ್ಕೆ.
ಹಣ, ಬಂಗಾರ ಮತ್ತಿತರ ಸಂಪತ್ತುಗಳ ಸಂಗತಿಯನ್ನು ಹೊರತುಪಡಿಸಿ ಅಕ್ಷಯತೃತೀಯೆಯಂದು ನೆನೆದುಕೊಳ್ಳಬೇಕಾದ ಅವತಾರ ಪುರುಷ ಪರಶುರಾಮ. ಆತ ಮನುಕುಲದಲ್ಲಿ ಆಗಿ ಹೋದ ಬ್ರಾಹ್ಮ ಮತ್ತು ಕ್ಷಾತ್ರಗಳ ಸಮ್ಮಿಲನದ ಮಹಾನ್ ಉದಾಹರಣೆ. ಹಾಗಾಗಿ ಈ ಅಕ್ಷಯತೃತಿಯೆಯಂದು ಸಂಪತ್ತಿನ ಜೊತೆಯಲ್ಲಿ ದಾನ ಹಾಗೂ ಪರಶುರಾಮನ ಚಿಂತನೆಯೂ ನಮಗೆಲ್ಲ ಬರಲಿ. ನಾಡಿನ ಒಳಿತು ಅಕ್ಷಯವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT