ಬೆಂಗಳೂರು: ಮತ ಕಳವು ಆರೋಪಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಸುದ್ದಿಯಲ್ಲಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರಕ್ಕೆ ಕಾಲಿಟ್ಟರೆ ಮತದಾರರ ಪಟ್ಟಿಯ ನಿಗೂಢ ಲೋಕವೊಂದು ತೆರೆದುಕೊಳ್ಳುತ್ತಾ, ಅಚ್ಚರಿಯ ಸಂಗತಿಗಳು ಎದುರುಗೊಳ್ಳುತ್ತವೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮುಂದಿಟ್ಟ ದಾಖಲೆ, ಚುನಾವಣಾ ಆಯೋಗದ ಜಾಲತಾಣದಲ್ಲಿರುವ ಮತದಾರರ ಗುರುತಿನ ಚೀಟಿಗಳಲ್ಲಿರುವ (ಎಪಿಕ್ ಕಾರ್ಡ್) ವಿಳಾಸಗಳ ಬೆನ್ನುಹತ್ತಿ ಹೊರಟ ‘ಪ್ರಜಾವಾಣಿ’ಗೆ, ಹಲವು ‘ಪವಾಡ’ಗಳು ಕ್ಷೇತ್ರದಲ್ಲಿ ನಡೆದಿರುವುದು ಕಾಣಿಸಿತು. ಅದರ ಜತೆಗೆ, ಈ ಪ್ರದೇಶದ ಮತಗಟ್ಟೆ ಅಧಿಕಾರಿ (ಬಿಎಲ್ಒ) ನೀಡಿದ ಮಾಹಿತಿಗಳು ಆ ‘ಪವಾಡ’ಗಳಿಗೆ ಪೂರಕ ಸಾಕ್ಷ್ಯ ಒದಗಿಸುತ್ತಲೇ ಹೋದವು.

ಇಬ್ಬರು ವಯಸ್ಕರು ಕಾಲುಚಾಚಿ ಮಲಗಲಷ್ಟೇ ಸಾಧ್ಯವಿರುವ ಮನೆಯ ವಿಳಾಸದಲ್ಲಿ 80 ಮತದಾರರ ಚೀಟಿಗಳು, ಆಯೋಗದ ಜಾಲತಾಣದಲ್ಲಿ ಲಭ್ಯ ಇವೆ. ‘ಪ್ರಜಾವಾಣಿ’ ಪ್ರತಿನಿಧಿ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದಾಗ, 80ರಲ್ಲಿ ಯಾರೊಬ್ಬರೂ ಆ ವಿಳಾಸದಲ್ಲಿ ಇರಲಿಲ್ಲ. ಆದರೆ, ಅವರಲ್ಲಿ ಬಹುತೇಕರು ಚುನಾವಣೆ ಸಂದರ್ಭದಲ್ಲಿ ಬಂದು ಮತಹಾಕಿ ಹೋಗುತ್ತಾರೆ ಎಂಬುದು ಗೊತ್ತಾಯಿತು.

ಮಹದೇವಪುರ ಕ್ಷೇತ್ರದ ವ್ಯಾಪ್ತಿಯ ಮುನಿರೆಡ್ಡಿ ಗಾರ್ಡನ್ (ಪಾರ್ಟ್ ಸಂಖ್ಯೆ: 173) 35ನೇ ನಂಬರ್ನ ಮನೆಯೊಂದರಿಂದ 80 ಮತದಾರರು ನೋಂದಣಿಯಾಗಿದ್ದಾರೆ ಎಂದು ದಾಖಲೆ ಬಿಡುಗಡೆ ಮಾಡಿದ್ದ ರಾಹುಲ್ ಗಾಂಧಿ ಪ್ರತಿಪಾದಿಸಿದ್ದರು. ಆ ದಾಖಲೆಯಲ್ಲಿ 80 ಮತದಾರರ ಎಪಿಕ್ ಸಂಖ್ಯೆಯೂ ಇದ್ದವು. ಅವುಗಳನ್ನು ಭಾರತೀಯ ಚುನಾವಣಾ ಆಯೋಗದ ‘ಮತದಾರರ ಸೇವಾ ಪೋರ್ಟಲ್’ನಲ್ಲಿ ಪರಿಶೀಲಿಸಿದಾಗ, 80 ಎಪಿಕ್ ಸಂಖ್ಯೆಗಳೂ ಈಗಲೂ ಅಸ್ತಿತ್ವದಲ್ಲೇ ಇವೆ.

ಆ 80ರಲ್ಲಿ ಎಷ್ಟು ಮತದಾರರು ಸಿಗಬಹುದು ಎಂದು ಎದುರು ನೋಡುತ್ತಾ ಮುನಿರೆಡ್ಡಿ ಗಾರ್ಡನ್ನ 35ನೇ ನಂಬರ್ನ ಮನೆಗೆ ಭೇಟಿ ನೀಡಿದಾಗ, ಮನೆ ಬಾಗಿಲಿಗೆ ಬೀಗ ಹಾಕಲಾಗಿತ್ತು. ‘35’ ಎಂಬ ನಂಬರ್ ಕಾಣದೇ ಇರುವ ಹಾಗೆ ಪರದೆ ಹಾಕಲಾಗಿತ್ತು. ಅಲ್ಲೇ ನಲ್ಲಿ ನೀರಿನಲ್ಲಿ ಕೊಡ ತುಂಬಿಸಿಕೊಳ್ಳುತ್ತಿದ್ದ ಕಮಲಮ್ಮ ಅವರು, ‘ಈ ಮನೆಯಲ್ಲಿ 80 ಮಂದಿ ಇರಲು ಸಾಧ್ಯವೇ’ ಎಂದು ಮರುಪ್ರಶ್ನೆ ಹಾಕಿದರು.

35ನೇ ನಂಬರ್ನ ಮನೆಗೆ ಅಂಟಿಕೊಂಡೇ ಇರುವ ಮನೆಯ ನಿಯಾಮಿ ಸೂತ್ರದಾರ್ ಅವರಿಗೆ ಮತದಾರರ ಪಟ್ಟಿಯನ್ನು ತೋರಿಸಿದಾಗ, ‘ನಾನು ಇಲ್ಲಿ 5 ವರ್ಷದಿಂದ ಇದ್ದೇನೆ. ಈ 80ರಲ್ಲಿ ಒಬ್ಬರನ್ನೂ ನಾನು ನೋಡಿಲ್ಲ’ ಎಂದರು. ಅಲ್ಲೇ ಪಕ್ಕದ ಅಪಾರ್ಟ್ಮೆಂಟ್ನ ಫ್ಲ್ಯಾಟ್ನ ನಿವಾಸಿ ಮಲ್ಲಿಕಾರ್ಜುನ, ‘ನಾವು 8 ವರ್ಷದಿಂದ ಇಲ್ಲಿದ್ದೇವೆ. ಇವರಲ್ಲಿ ಯಾರೊಬ್ಬರನ್ನು ನೋಡಿದ ನೆನಪು ನನಗೆ ಇಲ್ಲ’ ಎಂದರು.

ಪಾರ್ಟ್ ನಂಬರ್ 173ರ ಮತಗಟ್ಟೆ ಅಧಿಕಾರಿ (ಬಿಎಲ್ಒ) ಮುನಿರತ್ನಮ್ಮ ಅವರನ್ನು ಮಾತನಾಡಿಸಿದಾಗ, ‘80 ಮಂದಿ ಮತದಾರರಲ್ಲಿ ಯಾರೂ ಆ ಮನೆಯಲ್ಲಿ ಈಗ ಇಲ್ಲ. ಅವರು ಬೇರೆ ಕಡೆ ಹೋಗಿದ್ದಾರೆ. 80ರಲ್ಲಿ ಕನ್ನಡದವರು ಐದಾರು ಮಂದಿ ಹೊರತುಪಡಿಸಿ, ಉಳಿದವರೆಲ್ಲರೂ ಉತ್ತರ ಭಾರತದ ರಾಜ್ಯಗಳವರು. 80 ಮತದಾರರ ಪೈಕಿ ಬಹುತೇಕ ಮಂದಿ ಚುನಾವಣೆ ಸಂದರ್ಭದಲ್ಲಿ ಬಂದು ಮತಹಾಕಿ ಹೋಗುತ್ತಾರೆ’ ಎಂದರು.

ಈ ಬಗ್ಗೆ ಮತ್ತಷ್ಟು ಪ್ರಶ್ನಿಸಿದಾಗ, ‘80ಕ್ಕೆ 80 ಮಂದಿಯೂ ಬಂದು ಮತಹಾಕಿದ್ದಾರೆ ಎಂದು ನಾನು ಹೇಳುವುದಿಲ್ಲ. ಆದರೆ ಅವರಲ್ಲಿ ಬಹುತೇಕ ಮಂದಿ ಮತಹಾಕಿದ್ದಾರೆ. ಇದಕ್ಕೆ ದಾಖಲೆ ಬೇಕಿದ್ದರೆ ಸಂಬಂಧಿತ ಚುನಾವಣಾ ಅಧಿಕಾರಿಗಳನ್ನೇ ಕೇಳಬೇಕು’ ಎಂದರು.

‘ಈ ಸುದ್ದಿ ಬಹಿರಂಗವಾದ ನಂತರ ನಾನು ಸ್ಥಳ ಪರಿಶೀಲನೆ ನಡೆಸಿದ್ದೇನೆ. 80ರಲ್ಲಿ ಐದು ಮಂದಿ ಕನ್ನಡಿಗರ ಸಂಪರ್ಕ ಸಂಖ್ಯೆ ಸಿಕ್ಕಿದೆ. ಉಳಿದವರು ಉತ್ತರ ಭಾರತೀಯರಾಗಿದ್ದು, ಅವರ ಸಂಪರ್ಕ ಸಂಖ್ಯೆ ಅಥವಾ ಈಗಿನ ವಿಳಾಸ ಸಿಕ್ಕಿಲ್ಲ. ಈ ಬಗ್ಗೆ ಸಾಕ್ಷ್ಯ ಸಮೇತ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇನೆ’ ಎಂದರು.

‘ಶಿಫ್ಟೆಡ್ ಎಂದು ವರದಿ ನೀಡಿದ್ದೆ’

‘ಮುನಿರೆಡ್ಡಿ ಗಾರ್ಡನ್ನ 35ನೇ ಮನೆ ನಂಬರ್ನಲ್ಲಿ 80ಕ್ಕೂ ಹೆಚ್ಚು ಮತದಾರರ ಹೆಸರು ಇತ್ತು. ಅವರು ಯಾರೂ ಆ ಮನೆಯಲ್ಲಿ ಇಲ್ಲ, ಬೇರೆಡೆಗೆ ಹೋಗಿದ್ದಾರೆ ಎಂದು ವರದಿ ನೀಡಿದ್ದೆ. ಅದಕ್ಕೆ ಸಂಬಂಧಿಸಿದ ‘ಫಾರಂ ನಂಬರ್ 7’ ಮತ್ತು ‘ಫಾರಂ ನಂಬರ್ 8ಎಂ’ ಅನ್ನು ಮೇಲಧಿಕಾರಿಗಳಿಗೆ ಸಲ್ಲಿಸಿದ್ದೆ’ ಎನ್ನುತ್ತಾರೆ ಮುನಿರೆಡ್ಡಿ ಗಾರ್ಡನ್ನ ಮತಗಟ್ಟೆ ಸಂಖ್ಯೆ 173ರ ಮತಗಟ್ಟೆ ಅಧಿಕಾರಿ (ಬಿಎಲ್ಒ) ಮುನಿರತ್ನಮ್ಮ.

‘ನಾನು 80ಕ್ಕೂ ಹೆಚ್ಚು ಮಂದಿಗೆ ಸಂಬಂಧಿಸಿದಂತೆ ಫಾರಂ ನಂಬರ್ 7 ಮತ್ತು ಫಾರಂ ನಂಬರ್ 8ಎಂ ಸಲ್ಲಿಸಿದ್ದರೂ, ಕೆಲವರ ಹೆಸರಷ್ಟೇ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದೆ. ಉಳಿದವರ ಹೆಸರು ಉಳಿದಿದೆ’ ಎನ್ನುತ್ತಾರೆ.

ಬಿಎಲ್ಒ ಸಲ್ಲಿಸುವ ಫಾರಂ ನಂಬರ್ 7 ಮತ್ತು ಫಾರಂ ನಂಬರ್ 8ಎಂ ಅನ್ನು ಪರಿಶೀಲಿಸುವ ಹೊಣೆಗಾರಿಕೆ ಮೇಲ್ವಿಚಾರಕರದು.

ಹಿಂದಿನ ಬಿಬಿಎಂಪಿ ವ್ಯಾಪ್ತಿಯಲ್ಲಿ, ಬಿಬಿಎಂಪಿಯ ಕಂದಾಯ ವಿಭಾಗದ ಟಿಐ ಮತ್ತು ಆರ್ಐಗಳು ಮೇಲ್ವಿಚಾರಕರು ಆಗಿದ್ದರು. ಅವರು ಈ ಅರ್ಜಿಗಳನ್ನು ಎಡಿಎಒ (ಹೆಚ್ಚುವರಿ ಚುನಾವಣಾಧಿಕಾರಿ) ವಿಲೇವಾರಿ ಮಾಡಬೇಕಾಗುತ್ತದೆ.

‘ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವ ಅಥವಾ ಉಳಿಸುವ ಅಧಿಕಾರ ಎಡಿಎಒಗಳಿಗೆ ಮಾತ್ರವೇ ಇರುತ್ತದೆ. ಬಿಎಲ್ಒ ಶಿಫ್ಟೆಡ್ ಎಂದು ಅರ್ಜಿ ನೀಡಿದ್ದರೆ, ಎಡಿಎಒ ಅದನ್ನು ಡಿಲೀಟ್ ಮಾಡಬೇಕು ಅಥವಾ
ತಿರಸ್ಕರಿಸಬೇಕು. ಎಡಿಎಒ ಅರ್ಜಿಗಳನ್ನು ವಿಲೇವಾರಿ ಮಾಡದೆ, ತಮ್ಮ ಬಳಿ
ಇರಿಸಿಕೊಂಡಿರುವ ಕಾರಣಕ್ಕೇ 80 ಮಂದಿಯ ಹೆಸರೂ ಅದೇ ವಿಳಾಸದಲ್ಲಿ ಉಳಿದರುವ ಸಾಧ್ಯತೆ ಇದೆ. ಇದರ ಹೊಣೆ ಎಡಿಎಒ ಅವರೇ
ಹೊರಬೇಕಾಗುತ್ತದೆ’ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಎಡಿಎಒ ಒಬ್ಬರು ಅಭಿಪ್ರಾಯಪಡುತ್ತಾರೆ.

‘ಇವರ್ಯಾರೂ ಇಲ್ಲಿರಲಿಲ್ಲ’

35ನೇ ನಂಬರ್ನ ಮನೆ ಇರುವ ವಠಾರದಲ್ಲಿ ಒಟ್ಟು 37 ಮನೆಗಳಿದ್ದು, ಜಯರಾಮ ರೆಡ್ಡಿ ಅವುಗಳ ಮಾಲೀಕ. ಆದರೆ ಮನೆಗಳ ಬಾಡಿಗೆ, ಬಾಡಿಗೆದಾರರ ಪಟ್ಟಿ ಮತ್ತಿತರ ವ್ಯವಹಾರ ನೋಡಿಕೊಳ್ಳುವುದು ಸುರೇಶ್ ಎಂಬ ಸ್ಥಳೀಯ ನಿವಾಸಿ. ಸುರೇಶ್ ಅವರಿಗೆ ಮತದಾರರ ಪಟ್ಟಿ ನೀಡಿದಾಗ, ‘ನಾನು 25 ವರ್ಷಗಳಿಂದ ಇಲ್ಲೇ ಇದ್ದೇನೆ. ಮೊಗವೀರ ಎಂಬುವವರು ಇದ್ದ ನೆನಪು. ಅವರ ಹೆಸರು ನೆನಪಿದೆಯಷ್ಟೇ, ಅವರ ಮುಖ ನೆನಪಿಲ್ಲ. ಈ ಪಟ್ಟಿಯಲ್ಲಿ ಇರುವ ಮತ್ಯಾರೂ ಇಲ್ಲಿ ಇರಲಿಲ್ಲ’ ಎಂದರು.

ಪ್ರತಿಕ್ರಿಯೆ ಪಡೆಯಲು ಮನೆ ಮಾಲೀಕ ಜಯರಾಮ ರೆಡ್ಡಿ ಅವರಿಗೆ ಹಲವು ಬಾರಿ ಕರೆ ಮಾಡಿದರೂ, ಅವರು ಕರೆ ಸ್ವೀಕರಿಸಲಿಲ್ಲ.

‘ಒಂದೇ ಮನೆಯಲ್ಲಿ ಜೋಶಿ, ಮೊಗವೀರ, ಶೆಟ್ಟಿ, ಹುಸೇನ್’

ಗರಿಷ್ಠ ಇಬ್ಬರು ವಾಸಿಸುವಂತಹ ಗೂಡಿನಂತಹ ಒಂದು ಮನೆಯಲ್ಲಿ ಎಷ್ಟೆಲ್ಲಾ ಜಾತಿ ಮತ್ತ ಧರ್ಮದ ಮತದಾರರು ಇರಲು ಸಾಧ್ಯ? ಅಂತರ್ಜಾತಿ ಮತ್ತು ಅಂತರ್ಧರ್ಮೀಯ ವಿವಾಹವಾಗಿದ್ದರೆ ಎರಡು ಜಾತಿ/ಧರ್ಮದ ಜನರು ಒಂದು ಮನೆಯಲ್ಲಿರಬಹುದು.

ಆದರೆ ಮುನಿರೆಡ್ಡಿ ಗಾರ್ಡನ್ನ 35ನೇ ನಂಬರ್ನ ಮನೆಯಲ್ಲಿ ಹಿಂದೂ–ಮುಸ್ಲಿಮರು ಮತ್ತು ಬೇರೆ–ಬೇರೆ ಹತ್ತಾರು ಜಾತಿಯ ಜನರು ವಾಸಿಸುತ್ತಿದ್ದಾರೆ ಎನ್ನುತ್ತದೆ ಚುನಾವಣಾ ಆಯೋಗದ ಮತದಾರರ ಪಟ್ಟಿ.

ಈ ಮನೆಯಲ್ಲಿ ಉತ್ತರ ಭಾರತದ ಬಲರಾಮ್ ಮಂಡಲ್, ಕರ್ನಾಟಕದ ಶ್ರೀನಿವಾಸ ಶೆಟ್ಟಿ ಮತ್ತು ಮಂದಾರ ಶೆಟ್ಟಿ, ಭೀಮ್ ಮಹದ್ದೂರ್ ಚಾಂದ್, ಗಣೇಶ್ ಮೊಗವೀರ, ಸುಲೇಖಾ ಬಚ್ಚ ಮೊಗವೀರ, ಅಬೀದ್ ಹುಸೇನ್, ಮಂಜುನಾಥ್ ನಾಯಕ್, ರಾಘವೇಂದ್ರ ಪೂಜಾರಿ, ಬಂಗಾರೇಶ್ವರ ಹೆಗ್ಡೆ, ದಯಾನಂದ ಜೋಶಿ ಇದ್ದಾರೆ ಎನ್ನುತ್ತದೆ ಮತದಾರರ ಪಟ್ಟಿ.

‘ಕೆಲಸಗಾರರಲ್ಲಿ ಒಬ್ಬರಿಗೂ ಮತದಾರರ ಚೀಟಿ ಇಲ್ಲ’

ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ವೈಟ್ಫೀಲ್ಡ್ನ ‘153 ದಿ ಬಿಯರ್ ಸ್ಟ್ರೀಟ್’ ಪಬ್ನ ವಿಳಾಸದಲ್ಲಿ ಒಟ್ಟು 53 ಮತದಾರರ ಹೆಸರು ನೋಂದಣಿಯಾಗಿದೆ. ಮತದಾರರ ಸೇವಾ ಪೋರ್ಟಲ್ನಲ್ಲಿ ಅಷ್ಟೂ ಮಂದಿಯ ಎಪಿಕ್ ಚಾಲ್ತಿಯಲ್ಲಿವೆ.

ಈ ಬಗ್ಗೆ ‘153 ದಿ ಬಿಯರ್ ಸ್ಟ್ರೀಟ್’ನ ವ್ಯವಸ್ಥಾಪಕ ಶಿವರಾಜ್ ಅವರನ್ನು ಪ್ರಶ್ನಿಸಿದಾಗ, ‘ಈ ಹಿಂದೆ ಪಬ್ನ ಮಾಲೀಕರು ಬೇರೆ ಇದ್ದರು. ಜನವರಿಯಿಂದ ನಾವು ನಡೆಸುತ್ತಿದ್ದೇವೆ. ಮತದಾರರ ಪಟ್ಟಿಯಲ್ಲಿ ಇರುವ 53 ಜನರ ಚಿತ್ರವನ್ನೂ ನಾನು ನೋಡಿದ್ದೇನೆ. ಅವರಲ್ಲಿ ಒಬ್ಬರೂ ನನಗೆ ಗೊತ್ತಿಲ್ಲ ಮತ್ತು ಯಾರೊಬ್ಬರೂ ಈಗ ನಮ್ಮ ಪಬ್ನಲ್ಲಿ ಕೆಲಸ ಮಾಡುತ್ತಿಲ್ಲ ಬಿಎಲ್ಒಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ’ ಎಂದರು.

‘ಈಗ ನಮ್ಮ ಬಹುತೇಕ ಕೆಲಸಗಾರರು ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂನವರು. ಅವರಲ್ಲಿ ಒಬ್ಬರ ಬಳಿಯೂ ಬೆಂಗಳೂರಿನ ಮತದಾರರ ಚೀಟಿ ಇಲ್ಲ. ಆ ಎಲ್ಲರ ಮತದಾರರ ಚೀಟಿ ಅವರವರ ರಾಜ್ಯದಲ್ಲೇ ಇದೆ. ಇದನ್ನು ನಾನೇ ಖುದ್ದಾಗಿ ಪರಿಶೀಲಿಸಿದ್ದೇನೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.