ಯಾವ ಸರ್ವೆ ನಂಬರ್‌ನಲ್ಲಿ ಎಷ್ಟು ಒತ್ತುವರಿ?
ಬಿಆರ್‌ಟಿ ಅರಣ್ಯದ ಸರ್ವೆ ನಂಬರ್ 1 2 ಹಾಗೂ 3ರಲ್ಲಿರುವ ಜಮೀನಿನ ಜಂಟಿ ಸರ್ವೆ ಅ.1 2021ರಲ್ಲಿ ಹಾಗೂ ಸರ್ವೆ ನಂಬರ್ 4ರಲ್ಲಿರುವ ಭೂಮಿಯ ಸರ್ವೇ 6 ತಿಂಗಳ ಹಿಂದೆ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ನಡೆದಿದೆ. ಸರ್ವೆ ನಂಬರ್ 1ರಲ್ಲಿರುವ 5.20 ಎಕರೆ ಜಮೀನು ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಸೇರಿದ್ದು ಅದರಲ್ಲಿ 1.33 ಎಕರೆ ಒತ್ತುವರಿಯಾಗಿದೆ. ಸರ್ವೆ ನಂ 2ರಲ್ಲಿ ಮೀಸಲು ಅರಣ್ಯಕ್ಕೆ ಸೇರಿರುವ 21.36 ಎಕರೆಯ ಪೈಕಿ 4.8 ಎಕರೆ ಒತ್ತುವರಿಯಾಗಿದೆ. ಸರ್ವೆ ನಂಬರ್ 3ರಲ್ಲಿ 13.10 ಎಕರೆ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ 6.25 ಎಕರೆ ಒತ್ತುವರಿಯಾಗಿದೆ. ಸರ್ವೆ ನಂಬರ್ 4ರಲ್ಲಿ ಎಷ್ಟು ಪ್ರಮಾಣದ ಭೂಮಿ ಒತ್ತುವರಿಯಾಗಿದೆ ಎಂಬ ಮಾಹಿತಿ ಜಂಟಿ ಸರ್ವೆಯ ವರದಿಯಲ್ಲಿದೆ. ಇದು ಇನ್ನೂ ಜಿಲ್ಲಾಧಿಕಾರಿಯಿಂದ ಅಂಗೀಕಾರವಾಗಿಲ್ಲ.
ಯಾರ ಮೇಲೆ ಏನು ಆರೋಪ:
ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೊಳಪಡುವ ಸರ್ವೆ ನಂಬರ್ 3ರಲ್ಲಿ ಮೈಸೂರಿನ ರಾಮಕೃಷ್ಣ ಆಶ್ರಮ 1 ಎಕರೆ 28 ಗುಂಟೆ, ಸರ್ವೆ ನಂಬರ್ 3ರಲ್ಲಿ ಸುತ್ತೂರು ಮಠ 16 ಗುಂಟೆ, ಸರ್ವೆ ನಂಬರ್ 3ರಲ್ಲಿ ಬೆಂಗಳೂರಿನ ಉದ್ಯಮಿ ವೆಂಕಟ ಸತ್ಯಸುಬ್ರಹ್ಮಣ್ಯ ಗುಪ್ತ ಹಾಗೂ ಶ್ಯಾಮ್ 3 ಎಕರೆ 28 ಗುಂಟೆ, ಸರವೆ ನಂಬರ್ 3ರಲ್ಲಿ ನೀಲಗಿರಿ ಆದಿವಾಸಿ ವೆಲ್‌ಫೆರ್ ಅಸೋಸಿಯೇಷನ್‌ನ ಡಿ.ವಿ.ಆರ್ಮ್‌ಸ್ಟ್ರಾಂಗ್ 2.4 ಎಕರೆ, ಸರ್ವೆ ನಂಬರ್ 3ರಲ್ಲಿ ಆರ್.ವಿಜಯಲಕ್ಷ್ಮಿ 3 ಎಕರೆ 8 ಗುಂಟೆ, ಸರ್ವೆ ನಂಬರ್ 2ರಲ್ಲಿ ತುಳಸಮ್ಮ ಎಂಬುವರು 2 ಎಕರೆ 24 ಗುಂಟೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ತುಳಸಮ್ಮ 2 ಗುಂಟೆ ಜಾಗವನ್ನು ಅರಣ್ಯ ಇಲಾಖೆಗೆ ಮರಳಿಸಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.
ಮಹಾರಾಜರಿಂದಲೇ ಮೀಸಲು ಅರಣ್ಯ ಘೋಷಣೆ:
ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶವನ್ನು ಮೈಸೂರು ಮಹಾರಾಜರು ಅರಣ್ಯ ಕಾಯ್ದೆ 1900ರ ಅನ್ವಯ ಮೀಸಲು ಅರಣ್ಯ ಎಂದು ಘೋಷಿಸಿದರು. ಬಿಆರ್‌ಟಿ ಅರಣ್ಯದ ಸರ್ವೆ ನಂಬರ್ 1ರಲ್ಲಿ 5 ಎಕರೆ 20 ಗುಂಟೆಯಲ್ಲಿ ಜಾಗಿರ್‌ದಾರ್ ಬಂಗ್ಲೆ ಇದ್ದು, ಸರ್ವೆ ನಂಬರ್ 2ರಲ್ಲಿ 21 ಎಕರೆ 36 ಗುಂಟೆ, ಸರ್ವೆ ನಂಬರ್ 3ರಲ್ಲಿ 13 ಎಕರೆ 10 ಗುಂಟೆ ಹಾಗೂ ಸರ್ವೆ ನಂಬರ್ 4ರಲ್ಲಿ 22,606 ಎಕರೆ ಇದ್ದು ಎಲ್ಲವನ್ನೂ ಮೀಸಲು ಅರಣ್ಯ ವ್ಯಾಪ್ತಿಗೊಳಪಡಿಸಲಾಗಿತ್ತು.
ಬಿಆರ್‌ಟಿ ಅರಣ್ಯದೊಳಗೆ ಈಚೆಗೆ ನಡೆದ ಒತ್ತುವರಿ ತೆರವು ಕಾರ್ಯಾಚರಣೆ
ಬಿಆರ್‌ಟಿ ದಟ್ಟ ಕಾನನದಲ್ಲಿರುವ ದೊಡ್ಡ ಸಂಪಿಗೆ ಮರ. ಇದು ಸೋಲಿಗರ ಶ್ರದ್ಧಾ ಭಕ್ತಿಯ ತಾಣವೂ ಹೌದು
ಬಿಳಿಗಿರಿರಂಗನಬೆಟ್ಟದಿಂದ ಕಂಡ ಬಿಆರ್‌ಟಿ ಅರಣ್ಯದ ನೋಟ.

ಬಿಆರ್‌ಟಿಯ ಸರ್ವೇ ನಂಬರ್ 4ರಲ್ಲಿ ಅರಣ್ಯ–ಕಂದಾಯ ಇಲಾಖೆ ಅಧಿಕಾರಿಗಳು ನಡೆಸಿದ ಜಂಟಿ ಸರ್ವೇ ವರದಿಯನ್ನು ಪರಿಶೀಲಿಸಲಾಗುತ್ತಿದೆ. ಕಾಡಿನೊಳಗಿರುವ ಆದಿವಾಸಿಗಳಿಗೆ ತೊಂದರೆಯಾಗದಂತೆ ಅನುಷ್ಠಾನಗೊಳಿಸಲಾಗುವುದು.
–ಸಿ.ಟಿ.ಶಿಲ್ಪಾನಾಗ್ ಜಿಲ್ಲಾಧಿಕಾರಿನ್ಯಾಯಾಲಯ ನಿರ್ಧರಿಸಲಿದೆ: ರಾಮಕೃಷ್ಣ ಮಠ
‘ನಮಗೆ ಅರಣ್ಯ ಇಲಾಖೆಯ ಭೂಮಿಯೇನೂ ಬೇಕಿಲ್ಲ. ಇಲಾಖೆಯವರು 35 ವರ್ಷದ ಹಿಂದೆ ಮಠಕ್ಕೆ ನೀಡಿದ ಕಂದಾಯ ಭೂಮಿಯದು. ಒತ್ತುವರಿಯೆಂದು ಈಗ ಹಠಾತ್ ನೋಟಿಸ್ ಕಳುಹಿಸಿದ್ದಾರೆ. ಸತ್ಯಾಸತ್ಯತೆಯನ್ನು ನ್ಯಾಯಾಲಯವೇ ನಿರ್ಧರಿಸಲಿದೆ’ ಎಂದು ರಾಮಕೃಷ್ಣ ಆಶ್ರಮದ ಸ್ವಾಮೀಜಿಯೊಬ್ಬರು ಪ್ರತಿಕ್ರಿಯಿಸಿದರು.
ಯಳಂದೂರು ತಾಲ್ಲೂಕಿನ ಬಿಆರ್‌ಟಿ ವನ್ಯಧಾಮದಲ್ಲಿ ಆನೆಗಳ ಕುಟುಂಬ ನೀರಿನಲ್ಲಿ ವಿಹರಿಸುತ್ತಿರುವುದು
ಮತ್ತೊಮ್ಮೆ ಜಂಟಿ ಸರ್ವೆ ನಡೆಯಲಿ: ಸುತ್ತೂರು ಮಠ
‘1995ರಿಂದಲೂ ಜಮೀನು ಮಠದ ಹೆಸರಿನಲ್ಲಿದೆ. 2007ರಲ್ಲಿ ಅಂದಿನ ಜಿಲ್ಲಾಧಿಕಾರಿಯು ಭೂಪರಿವರ್ತನೆ ಆದೇಶ ಮಾಡಿದ್ದಾರೆ. ಅದರಲ್ಲಿ ಎಲ್ಲಿಯೂ ಅರಣ್ಯ ಭೂಮಿಯ ಉಲ್ಲೇಖವಿಲ್ಲ. ಜಂಟಿ ಸರ್ವೆಯಲ್ಲಿ ನಾವು ಪಾಲ್ಗೊಂಡಿರಲಿಲ್ಲ. ಅದರ ಆದೇಶವನ್ನೂ ನಮಗೆ ನೀಡಿಲ್ಲ. ಆದರೆ ಇನ್ನೊಮ್ಮೆ ಸರ್ವೆ ಮಾಡುವಂತೆ ಮನವಿ ಸಲ್ಲಿಸಿದ್ದೇವೆ’ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಸಹಾಯಕ ನಿರ್ದೇಶಕ ಶಿವಕುಮಾರ್ ಪ್ರತಿಕ್ರಿಯಿಸಿದರು.
ಬಿಆರ್‌ಟಿ ಅರಣ್ಯದಲ್ಲಿ ಸಾಂಬಾರ್ ಜಿಂಕೆ
ಚಾಮರಾಜನಗರ ತಾಲ್ಲೂಕಿನ ಹೊಂಡರಬಾಳುವಿನಲ್ಲಿರುವ ಬಿಆರ್‌ಟಿ ಚೆಕ್‌ಪೋಸ್ಟ್
ಹುಲಿಗಳ ಸಂಖ್ಯೆ ಕ್ಷೀಣ
ಹುಲಿಗಳ ಆವಾಸ ಅತಿಕ್ರಮಣ ಅಕ್ರಮ ರೆಸಾರ್ಟ್ ಹೋಂಸ್ಟೇಗಳ ನಿರ್ಮಾಣ ಹೆಚ್ಚಿದ ಮಾನವ ಪ್ರಾಣಿ ಸಂಘರ್ಷದ ಪರಿಣಾಮ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಹುಲಿಗಳ ಸಂಖ್ಯೆ ಕುಸಿಯುತ್ತಿದ್ದು ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಹುಲಿ ಗಣತಿಯ ವರದಿಯು ಆತಂಕ ಹುಟ್ಟಿಸುವಂತಿದೆ. ಎನ್‌ಟಿಸಿಎ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಬಿಆರ್‌ಟಿಯಲ್ಲಿ 2014ರ ಹುಲಿಗಣತಿಯಲ್ಲಿ 52 ಹುಲಿಗಳು ಪತ್ತೆಯಾಗಿದ್ದವು 2022ರ ಹುಲಿ ಗಣತಿಯ ಸಂದರ್ಭ 37 ಹುಲಿಗಳು ಮಾತ್ರ ಪತ್ತೆಯಾಗಿವೆ. ಕಳೆದ 11 ವರ್ಷಗಳಲ್ಲಿ 15 ಹುಲಿಗಳು ಕಡಿಮೆಯಾಗಿವೆ.
ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಸಂಚಾರ
ಆದಿವಾಸಿಗಳ ಭೂಮಿ ಕಿತ್ತುಕೊಂಡರೆ ಹೋರಾಟ
1962–63ರಲ್ಲಿ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ಸರ್ಕಾರದಲ್ಲಿ ಆದಿವಾಸಿಗಳಿಗೆ ಯರಕನಗದ್ದೆ ಕಾಲೋನಿ ಹಾಗೂ ಸೀಗೆಬೆಟ್ಟ ಪೋಡಿನಲ್ಲಿ ಭೂಮಿ ಹಂಚಿಕೆ ಮಾಡಿದ್ದು ಭೂ ಮಂಜೂರಾತಿ ಪತ್ರ ವಿತರಿಸಿಲ್ಲ. 6 ದಶಕಗಳಿಂದ ಅನುಭೋಗದಲ್ಲಿರುವ ಜಾಗಕ್ಕೆ ಆರ್‌ಟಿಸಿ ಹಾಗೂ ಹಕ್ಕುಪತ್ರಗಳಿದ್ದು ಲಭ್ಯ ದಾಖಲಾತಿಗಳ ಆಧಾರದ ಮೇಲೆ ಆದಿವಾಸಿಗಳಿಗೆ ಕಂದಾಯ ಭೂಮಿಯನ್ನೇ ಹಂಚಿಕೆ ಮಾಡಬೇಕು. ಭೂಮಂಜೂರಾತಿ ಪತ್ರ ಇಲ್ಲ ಎಂಬ ಕಾರಣಕ್ಕೆ ನಿರಾಕರಿಸಿದರೆ ಪ್ರತಿಭಟನೆ ಅನಿವಾರ್ಯವಾಗಲಿದೆ ಎನ್ನುತ್ತಾರೆ ಆದಿವಾಸಿ ಸಮುದಾಯಗಳ ಮುಖಂಡ ಸಿ.ಮಾದೇಗೌಡ.
ಸಿ.ಮಾದೇಗೌಡ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ
‘8 ಮಂದಿಗೆ ನೋಟಿಸ್’
ಸರ್ವೆ ನಂ 2 ಹಾಗೂ 3ರಲ್ಲಿರುವ ಅರಣ್ಯ ಭೂಮಿ ಒತ್ತುವರಿ ಸಂಬಂಧ 8 ಮಂದಿಗೆ ನೋಟಿಸ್ ನೀಡಲಾಗಿದ್ದು ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ. ಖಾಸಗಿ ಸಂಸ್ಥೆ ಹಾಗೂ ಉದ್ಯಮಿಯೊಬ್ಬರ ಒತ್ತುವರಿ ತೆರವುಗೊಳಿಸಲಾಗಿದೆ. ಇಬ್ಬರು ಒತ್ತುವರಿದಾರರು ನ್ಯಾಯಾಲಯದ ಮೊರೆ ಹೋಗಿದ್ದು ತಡೆಯಾಜ್ಞೆ ತೆರವಾದ ಕೂಡಲೇ ಕಾರ್ಯಾಚರಣೆ ಆರಂಭಿಸಲಾಗುವುದು. ಸರ್ವೆ ನಂಬರ್ 4ರಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿ 6 ತಿಂಗಳಾಗಿದ್ದು ಅಂತಿಮ ತೀರ್ಮಾನವಾಗಿಲ್ಲ. –ಅಕ್ಷಯ್ ಪ್ರಕಾಶ್‌ಕರ್ ಯಳಂದೂರು ವಲಯ ಎಸಿಎಫ್

ಜಿಲ್ಲಾಡಳಿತಕ್ಕೆ ಸಲ್ಲಿಕೆ: ಸರ್ವೇ ನಂಬರ್ 4ರಲ್ಲಿ ಜಂಟಿ ಸರ್ವೇ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ. 1962ರಲ್ಲಿ ಅರಣ್ಯ ಇಲಾಖೆಯಿಂದ ಬಿಡುಗಡೆಗೊಳಿಸಲಾಗಿದ್ದ 565 ಎಕರೆಗಿಂತಲೂ ಹೆಚ್ಚಿನ ಭೂಮಿ ಒತ್ತುವರಿಯಾಗಿರುವುದು ಕಂಡುಬಂದಿದೆ. ಕಂದಾಯ ಇಲಾಖೆಯ ಹಂತದಲ್ಲಿ ಸಮಸ್ಯೆ ಬಗೆಹರಿಯಬೇಕಿದೆ. ಒತ್ತುವರಿ ಭೂಮಿ ಗುರುತಿಸಿಕೊಟ್ಟರೆ ತೆರವುಗೊಳಿಸಲಾಗುವುದು. ಅರಣ್ಯವಾಸಿಗಳಿಗೆ ಅರಣ್ಯ ಹಕ್ಕುಕಾಯ್ದೆಯಡಿ (ಎಫ್‌ಆರ್‌ಎ) ಭೂಮಿ ಹಂಚಿಕೆ ಮಾಡಲಾಗುವುದು ಅರಣ್ಯವಾಸಿಗಳಲ್ಲದವರು ಭೂಮಿ ಒತ್ತುವರಿ ಮಾಡಿಕೊಂಡಿದ್ದರೆ ತೆರವುಗೊಳಿಸಲಾಗುವುದು.
–ಶ್ರೀಪತಿ ಬಿಆರ್‌ಟಿ ಡಿಸಿಎಫ್