ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಜ್ಯೋತಿಷಿಯೇ? ಎಚ್‌ಡಿಕೆ ಪ್ರಶ್ನೆ

Published 27 ಮಾರ್ಚ್ 2024, 14:52 IST
Last Updated 27 ಮಾರ್ಚ್ 2024, 14:52 IST
ಅಕ್ಷರ ಗಾತ್ರ

ಮೈಸೂರು: ‘ನಾನು ಮಂಡ್ಯದಲ್ಲಿ ಗೆಲ್ಲಲ್ಲ ಎಂದು ಭವಿಷ್ಯ ನುಡಿಯಲಿಕ್ಕೆ ಸಿದ್ದರಾಮಯ್ಯ ಜ್ಯೋತಿಷಿಯೇ? ಅದನ್ನು ಅಲ್ಲಿನ ಮತದಾರರು ತೀರ್ಮಾನ ಮಾಡಲಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಬುಧವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ ನಾನು ಮಂಡ್ಯದ ಹೊರಗಿನವನೋ–ಒಳಗಿನವನೋ ಎಂದು ಅವರು ಏನು ಬೇಕಾದರೂ ಹೇಳಲಿ. ಆದರೆ ನಾನು ಕನ್ನಡಿಗ. ನನಗೆ ರಾಜಕೀಯ ಜನ್ಮ ಕೊಟ್ಟಿದ್ದು ರಾಮನಗರ, ಶಕ್ತಿ ತುಂಬಿರುವುದು ಮಂಡ್ಯ ಹಾಗೂ ಮೈಸೂರು. ಕಳೆದ ಚುನಾವಣೆಯಲ್ಲಿ ಮಂಡ್ಯದಲ್ಲಿ ನನ್ನ ಮಗ ಸ್ಪರ್ಧಿಸಿದ್ದಾಗ ಕಾಂಗ್ರೆಸ್‌ನವರೂ ನಮ್ಮ ಜೊತೆ ಇದ್ದರು. ಹೀಗಾಗಿ ಅವನ ಸೋಲಿನಲ್ಲಿ ಸಿದ್ದರಾಮಯ್ಯ ವೈಫಲ್ಯವೂ ಇದೆ’ ಎಂದರು.

‘ಸಿದ್ದರಾಮಯ್ಯ ರಾಜ್ಯದಲ್ಲಿ ಐದು ವರ್ಷ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿದ ಬಳಿಕ ಮೈಸೂರಿನಲ್ಲೇ ಸೋತವರು. ನಿಮ್ಮ ಕುಹುಕಗಳಿಗೆ ಜನರೇ ಉತ್ತರ ಕೊಡಲಿದ್ದಾರೆ’ ಎಂದರು.

‘ಕೋಲಾರ, ಮಂಡ್ಯ ಸೇರಿದಂತೆ ರಾಜ್ಯದ ಯಾವ ಕ್ಷೇತ್ರದಲ್ಲೂ ಬಿಜೆಪಿ–ಜೆಡಿಎಸ್‌ ಮೈತ್ರಿಗೆ ವಿರೋಧ ಇಲ್ಲ. ಬೆಂಗಳೂರು ಗ್ರಾಮೀಣ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್‌ ಪರ ಒಲವು ಕಂಡು ಹತಾಶವಾಗಿರುವ ಕಾಂಗ್ರೆಸ್ ಸೀರೆ–ಕುಕ್ಕರ್‌ ಹಂಚಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ’ ಎಂದು ದೂರಿದರು.

‘ಕೆಆರ್‌ಎಸ್‌ನಲ್ಲಿ 86 ಅಡಿ ನೀರಿದ್ದರೂ ಮೈಸೂರು–ಮಂಡ್ಯ ಭಾಗದಲ್ಲಿ ದನಕರುಗಳಿಗೆ ನೀರು–ಮೇವು ಇಲ್ಲ. ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ವಿ.ಸಿ. ನಾಲೆಗೆ ನೀರು ಹರಿಸುವುದನ್ನು ಸರ್ಕಾರ ನಿಲ್ಲಿಸಿದೆ. ಇದರಿಂದ ಜನ ಪರಿತಪಿಸುತ್ತಿದ್ದಾರೆ’ ಎಂದು ಕುಮಾರಸ್ವಾಮಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT