ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಪ್ರಧಾನಿಯಾಗಲಿ ಎಂದು ಪಾಕಿಸ್ತಾನ ಬಯಸುತ್ತಿದೆ: ಪ್ರಧಾನಿ ಮೋದಿ

Published 4 ಮೇ 2024, 15:57 IST
Last Updated 4 ಮೇ 2024, 15:57 IST
ಅಕ್ಷರ ಗಾತ್ರ

ಪಲಾಮು/ಸಿಸೈ: ಕೇಂದ್ರ ಸರ್ಕಾರದ ‘ಸರ್ಜಿಕಲ್ ಸ್ಟ್ರೈಕ್’ ಮತ್ತು ವಾಯು ದಾಳಿಗಳಿಂದ ಪಾಕಿಸ್ತಾನಕ್ಕೆ ನಡುಕ ಹುಟ್ಟಿದ್ದು, ಅಲ್ಲಿನ ನಾಯಕರು ಕಾಂಗ್ರೆಸ್‌ನ ‘ಶಹಜಾದ’ ಪ್ರಧಾನಿ ಆಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.

ಜಾರ್ಖಂಡ್‌ನ ಪಲಾಮುವಿನಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಹೆಸರು ಉಲ್ಲೇಖಿಸದೇ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ‘ಅವರು (ರಾಹುಲ್) ಪ್ರಧಾನಿ ಆಗಲಿ ಎಂದು ಪಾಕಿಸ್ತಾನ ಬಯಸಬಹುದು. ಆದರೆ, ಬಲಿಷ್ಠ ಭಾರತಕ್ಕೆ ಬಲಿಷ್ಠ ಪ್ರಧಾನಿ ಬೇಕು’ ಎಂದು ಪ್ರತಿಪಾದಿಸಿದರು.

‘ಈ ಹಿಂದೆ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಪ್ರತಿ ಬಾರಿ ದೇಶದ ಮೇಲೆ ಉಗ್ರ ದಾಳಿ ನಡೆದಾಗಲೂ ಅಸಹಾಯಕವಾಗಿರುತ್ತಿದ್ದವು. ಆದರೆ, ಈಗ ಸ್ಥಿತಿ ಹೇಗಿದೆ ಎಂದರೆ, ಪಾಕಿಸ್ತಾನವು ತನ್ನನ್ನು ಉಳಿಸಿಕೊಳ್ಳಲು ಜಗತ್ತಿನ ಸಹಾಯ ಯಾಚಿಸುತ್ತಿದೆ’ ಎಂದು ಹೇಳಿದರು.

‘ಕಾಂಗ್ರೆಸ್ ಎಂದೂ ಜನರ ಅಭಿವೃದ್ಧಿಯ ಬಗ್ಗೆ ತಲೆಕಡಿಸಿಕೊಳ್ಳಲಿಲ್ಲ. ಪಕ್ಷದ ‘ಶಹಜಾದ’ ಬೆಳ್ಳಿ ಚಮಚದೊಂದಿಗೆ ಹುಟ್ಟಿದವರು, ಬಡವರ ಮನೆಗಳಿಗೆ ಹೋದಾಗ ಕ್ಯಾಮೆರಾಗೆ ಪೋಸು ಕೊಡುತ್ತಾರೆ. ಆದರೆ, ಭಾರತವನ್ನು ಬದಲಾಯಿಸುವುದು ನನ್ನ ವಾಗ್ದಾನ’ ಎಂದು ಹೇಳಿದರು.

‘ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ 25 ವರ್ಷ ಆಡಳಿತ ನಡೆಸಿರುವ ನನ್ನ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ನನಗೆ ಒಂದು ಮನೆಯೂ ಇಲ್ಲ. ಕನಿಷ್ಠ ಒಂದು ಬೈಸಿಕಲ್ ಕೂಡ ಇಲ್ಲ. ಆದರೆ, ಭ್ರಷ್ಟ ಜೆಎಂಎಂ ಮತ್ತು ಕಾಂಗ್ರೆಸ್ ಮುಖಂಡರು ತಮ್ಮ ಮಕ್ಕಳಿಗಾಗಿ ಅಗಾಧ ಸಂಪತ್ತನ್ನು ಗಳಿಸಿದ್ದಾರೆ’ ಎಂದು ಆರೋಪಿಸಿದರು.

ನಂತರ ಸಿಸೈನಲ್ಲಿ ಮಾತನಾಡಿದ ಅವರು, ‘ಎನ್‌ಡಿಎ ಸರ್ಕಾರವು ಭ್ರಷ್ಟ ಶಕ್ತಿಗಳನ್ನು ಬಯಲಿಗೆಳೆದಿದ್ದು, ಭ್ರಷ್ಟಾಚಾರದಲ್ಲಿ ತೊಡಗಿರುವ ಎಲ್ಲರೂ ಮುಂದಿನ ಐದು ವರ್ಷಗಳಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.

ಹೇಮಂತ್ ಸೊರೇನ್ ಹೆಸರು ಉಲ್ಲೇಖಿಸದೇ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ‘ಇಂಡಿಯಾ’ ಕೂಟದ ಮುಖಂಡರು ಭ್ರಷ್ಟರ ಪರವಾಗಿ ರ್‍ಯಾಲಿ ನಡೆಸಿದರು ಎಂದು ಟೀಕಿಸಿದರು.

ಆದಿವಾಸಿ ಜಿಲ್ಲೆಗಳ ಹಿಂದುಳಿದಿರುವಿಕೆಗೆ ಕಾಂಗ್ರೆಸ್ ಅನ್ನು ನಿಂದಿಸಿದ ಪ್ರಧಾನಿ ಮೋದಿ, 2004ರಿಂದ 2014ರವರೆಗಿನ ಯುಪಿಎ ಅವಧಿಯಲ್ಲಿ ಆಹಾರ ಧಾನ್ಯ ಗೋದಾಮುಗಳಲ್ಲಿ ಕೊಳೆಯುತ್ತಿದ್ದರೂ ಆದಿವಾಸಿ ಮಕ್ಕಳು ಹಸಿವಿನಿಂದ ಸಾಯುತ್ತಿದ್ದರು ಎಂದು ಆರೋಪಿಸಿದರು.

‘ಇಂದು ಯುವಕರು ಸಾಮಾಜಿಕ ಜಾಲತಾಣದ ಹೀರೋಗಳಾಗಿದ್ದಾರೆ. ಕಾಂಗ್ರೆಸ್ ಅಂತರ್ಜಾಲವನ್ನು ಶ್ರೀಮಂತರ ವಸ್ತು ಎನ್ನುವಂತೆ ಮಾಡಿತ್ತು. ಆದರೆ, ಮೋದಿ ಅದು ಬಡವರಿಗೆ ಸಿಗುವಂತೆ ನೋಡಿಕೊಂಡರು. ಮೊಬೈಲ್ ಡೇಟಾ ಎಲ್ಲರಿಗೂ ಸಿಗುವಂತೆ ನಾವು ಮಾಡಿದೆವು’ ಎಂದು ಹೇಳಿದರು.

‘ಗೋಧ್ರಾ ಆರೋಪಿಗಳನ್ನು ರಕ್ಷಿಸಲು ಯತ್ನಿಸಿದ್ದ ಲಾಲು’

ದರ್ಭಂಗಾ (ಪಿಟಿಐ): ಬಿಹಾರದ ಮುಖ್ಯ ವಿರೋಧ ಪಕ್ಷವಾದ ಆರ್‌ಜೆಡಿಯ ನಾಯಕ ಲಾಲು ಪ್ರಸಾದ್ ಅವರು ಎರಡು ದಶಕಗಳ ಹಿಂದಿನ ಗೋಧ್ರಾ ರೈಲು ದುರಂತದ ಆರೋಪಿಗಳನ್ನು ರಕ್ಷಿಸಲು ಮತ್ತು ಕರಸೇವಕರ ಮೇಲೆ ನಿಂದನೆ ಹೊರಿಸಲು ಪ್ರಯತ್ನಿಸಿದ್ದರು ಎಂದು ಪ್ರಧಾನಿ ಮೋದಿ ಶನಿವಾರ ಆರೋಪಿಸಿದರು.

ಬಿಹಾರದ ದರ್ಭಂಗಾದಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಅವರು ‘ಲಾಲು ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ನ ಅನುಕೂಲಕ್ಕೆ ತಕ್ಕಂತೆ ವರ್ತಿಸಿದ್ದರು. ಅವರ ಪ್ರಭಾವದಿಂದ ಬ್ಯಾನರ್ಜಿ ಸಮಿತಿಯು ಬೋಗಸ್ ವರದಿ ಸಲ್ಲಿಸಿತ್ತು. ಆದರೆ ನ್ಯಾಯಾಲಯವು ವರದಿಯನ್ನು ಕಸದ ಬುಟ್ಟಿಗೆ ಎಸೆಯಿತು. ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಿತು’ ಎಂದು ಹೇಳಿದರು.

‘ಶಹಜಾದ ಅಲ್ಲ ಶಹೀದ್‌ಜಾದ’

ಪಲಾಮು/ಗುಮ್ಲಾ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಬಳಸುತ್ತಿರುವ ಭಾಷೆಯ ಬಗ್ಗೆ ಕಾಂಗ್ರೆಸ್ ಆಕ್ಷೇಪಣೆ ಎತ್ತಿದೆ. ಪ್ರಧಾನಿ ಅವರು ರಾಹುಲ್ ಗಾಂಧಿ ಅವರನ್ನು ‘ಶಹಜಾದ’ ಎಂದಿದ್ದಾರೆ ಆದರೆ ಅವರು ‘ಶಹೀದ್‌ಜಾದ’ (ಹುತಾತ್ಮರ ಮಗ) ಎಂಬುದಾಗಿ ಜನ ತಿಳಿದಿದ್ದಾರೆ ಎಂದು ಜಾರ್ಖಂಡ್ ಕಾಂಗ್ರೆಸ್ ಉಸ್ತುವಾರಿ ಗುಲಾಂ ಅಹ್ಮದ್ ಮಿರ್ ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಅಸಾಂವಿಧಾನಿಕ ಭಾಷೆ ಬಳಸುತ್ತಿದ್ದಾರೆ ಎಂದು ಜೆಎಂಎಂ ಜಾರ್ಖಂಡ್‌ನಲ್ಲಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT