ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | DC vs GT: ಗುಜರಾತ್ ಎದುರು ಡೆಲ್ಲಿಗೆ 4 ರನ್ ಅಂತರದ ರೋಚಕ ಜಯ

Published 24 ಏಪ್ರಿಲ್ 2024, 17:47 IST
Last Updated 24 ಏಪ್ರಿಲ್ 2024, 17:47 IST
ಅಕ್ಷರ ಗಾತ್ರ

ನವದೆಹಲಿ: ಆಕ್ರಮಣಕಾರಿ ಅರ್ಧ ಶತಕದ ಆಟದೊಡನೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅವರು ಭಾರತ ಟಿ20 ತಂಡದ ವಿಕೆಟ್ ಕೀಪರ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡರು. ಬುಧವಾರ ರೋಚಕ ಹೋರಾಟ ಕಂಡ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ತಂಡ, ಗುಜರಾತ್ ಟೈಟನ್ಸ್‌ ತಂಡದ ತೀವ್ರ ಹೋರಾಟವನ್ನು ಮೆಟ್ಟಿನಿಂತು ನಾಲ್ಕು ರನ್‌ಗಳ ಗೆಲುವು ಪಡೆಯುವಲ್ಲಿ ಯಶಸ್ವಿಯಾಯಿತು.

ಡೆಲ್ಲಿಗೆ ಮಹತ್ವದ್ದಾದ ಈ ಪಂದ್ಯದಲ್ಲಿ ನಾಯಕ ಪಂತ್ (88, 43 ಎ, 4x5, 6x8) ಮತ್ತು ಅಕ್ಷರ್ ಪಟೇಲ್ (66, 43 ಎಸೆತ) ಕೇವಲ 68 ಎಸೆತಗಳಲ್ಲಿ 113 ರನ್‌ ಜೊತೆಯಾಟವಾಡಿ ಡೆಲ್ಲಿ ತಂಡ 4 ವಿಕೆಟ್‌ಗೆ 224 ರನ್‌ಗಳ ದೊಡ್ಡ ಮೊತ್ತ ಗಳಿಸಲು ಕಾರಣರಾದರು. ಕೊನೆಯ ಐದು ಓವರ್‌ಗಳಲ್ಲಿ ಡೆಲ್ಲಿ  95 ರನ್‌ಗಳನ್ನು ಬಾಚಿಕೊಂಡಿತು. ಇದಕ್ಕೆ ಟ್ರಿಸ್ಟನ್‌ ಸ್ಟಬ್ಸ್‌ (26, 7ಎಸೆತ) ಅವರ ಕೊಡುಗೆಯೂ ಇತ್ತು.

ಇದಕ್ಕೆ ಉತ್ತರವಾಗಿ ಗುಜರಾತ್‌ ಟೈಟನ್ಸ್‌, ಸಾಯಿ ಸುದರ್ಶನ್‌ (65, 29ಎ) ಮತ್ತು ಡೇವಿಡ್‌ ಮಿಲ್ಲರ್‌ (55, 23) ಅವರ ಮಿಂಚಿನ ಅರ್ಧ ಶತಕಗಳ ನೆರವಿನಿಂದ ಹೋರಾಟ ತೋರಿತು. ಕೊನೆಯಲ್ಲಿ ರಶೀದ್ ಖಾನ್‌ (ಔಟಾಗದೇ 21, 11ಎ) ಅವರು ದಡ ಸೇರಿಸುವಂತೆ ಕಂಡರೂ, ವೇಗದ ಬೌಲರ್‌ ಮುಕೇಶ್ ಕುಮಾರ್ ಅದಕ್ಕೆ ಅವಕಾಶ ನೀಡಲಿಲ್ಲ. ಅಂತಿಮ ಓವರಿನಲ್ಲಿ 19 ರನ್ ಬೇಕಿದ್ದಾಗ ಅವರು 14 ರನ್‌ಗಳನ್ನಷ್ಟೇ (ಎರಡು ಬೌಂಡರಿ, ಒಂದು ಸಿಕ್ಸರ್‌ ) ನೀಡಿದರು. ತಂಡ 8 ವಿಕೆಟ್‌ಗೆ 220 ರನ್‌ ಗಳಿಸಿ ನಿರಾಸೆ ಅನುಭವಿಸಿತು.

ನೂರನೇ ಪಂದ್ಯ ಆಡಿದ ಟೈಟನ್ಸ್ ನಾಯಕ ಶುಭಮನ್ ಗಿಲ್‌ (6) ಅದನ್ನು ಸ್ಮರಣೀಯವಾಗಿಸಲಿಲ್ಲ. ವೃದ್ಧಿಮಾನ್ ಸಹಾ (39) ಮತ್ತು ಸಾಯಿ ಸುದರ್ಶನ್‌ 82 ರನ್ ಜೊತೆಯಾಟವಾಡಿ ಮೊತ್ತ ಬೆಳೆಸಿದರು. ನಂತರ ಡೆಲ್ಲಿ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳತೊಡಗಿತು. ಮಧ್ಯಮ ಹಂತದಲ್ಲಿ ಆರು ಬೌಂಡರಿ, ಮೂರು ಸಿಕ್ಸರ್‌ಗಳನ್ನು ಬಾರಿಸಿದ ಮಿಲ್ಲರ್‌ ಏಳನೆಯವರಾಗಿ ನಿರ್ಗಮಿಸಿದರು.

ಪಂತ್‌ ಅಬ್ಬರ: ಇದಕ್ಕೆ ಮೊದಲು ಪಂತ್‌ ಅವರ ಅಬ್ಬರ ಆಟ ಗಮನ ಸೆಳೆಯಿತು. ತಮ್ಮ ಲಯದ ಬಗ್ಗೆ ಇದ್ದ ಸಂದೇಹಗಳನ್ನು ನಿವಾರಿಸಿದಂತೆ ಅವರು ಪ್ರಬುದ್ಧ ಇನಿಂಗ್ಸ್ ಪ್ರದರ್ಶಿಸಿದರು. ಎರಡು ಒಳ್ಳೆಯ ಕ್ಯಾಚ್‌ಗಳನ್ನೂ ಹಿಡಿದರು.

ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಡೆಲ್ಲಿ ತಂಡಕ್ಕೆ ಜೇಕ್‌ ಫ್ರೇಸರ್ ಮೆಕ್‌ಗುರ್ಕ್ (23, 14ಎ) ಮತ್ತು ಪಾರ್ಥಿವ್‌ ಪಟೇಲ್ (11) ಬಿರುಸಿನ ಆರಂಭ ನೀಡಿ 3 ಓವರುಗಳಲ್ಲಿ 34 ರನ್‌ ಸೇರಿಸಿದ್ದರು. ಆದರೆ ಸಂದೀಪ್‌ ವಾರಿಯರ್‌ ಎರಡು ಓವರುಗಳ ಅಂತರದಲ್ಲಿ ಮೆಕ್‌ಗುರ್ಕ್, ಪಾರ್ಥಿವ್ ಮತ್ತು ಶಾಯಿ ಹೋಪ್ ಅವರ ವಿಕೆಟ್‌ಗಳನ್ನು ಪಡೆದರು.

ಪಂತ್ ಮತ್ತು ಅಕ್ಷರ್ ಮೊದಲು ವಿವೇಚನೆಯಿಂದ ಆಡಿ ಇನಿಂಗ್ಸ್‌ ಕಟ್ಟಿದರು. ಬೇರೂರಿದ ಮೇಲೆ ಆಕ್ರಮಣಕಾರಿಯಾದರು.

ಫ್ಲಿಕ್‌, ಕಟ್‌, ಪುಲ್‌ ಹೊಡೆತಗಳ ಮೂಲಕ ಪಂತ್‌ ಗುಜರಾತ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.

ನೂರ್‌ ಅಹ್ಮದ್‌ ಮಾಡಿದ 17ನೇ ಓವರ್‌ನಲ್ಲಿ ಬೆನ್ನುಬೆನ್ನಿಗೆ ಎರಡು ಸಿಕ್ಸರ್ ಎತ್ತಿದ ಅಕ್ಷರ್‌, ಮತ್ತೊಂದಕ್ಕೆ ಯತ್ನಿಸಿ ಲಾಂಗ್‌ಆನ್‌ನಲ್ಲಿ ನಂದಕಿಶೋರ್ ಅವರಿಗೆ ಕ್ಯಾಚಿತ್ತರು.

ಮೋಹಿತ್‌ ಶರ್ಮಾ ಅವರ ಕೊನೆಯ ಓವರ್‌ನಲ್ಲಿ ಪಂತ್‌ ನಾಲ್ಕು ಸಿಕ್ಸರ್‌, ಒಂದು ಬೌಂಡರಿ ಸಹಿತ 31 ರನ್‌ ಹೊಡೆದರು. ಮೋಹಿತ್‌ ನಾಲ್ಕು ಓವರ್‌ಗಳಲ್ಲಿ 73 ರನ್ ನೀಡಿ ದುಬಾರಿಯಾದರು.

ಸಂಕ್ಷಿಪ್ತ ಸ್ಕೋರ್‌

ಡೆಲ್ಲಿ ಕ್ಯಾಪಿಟಲ್ಸ್‌: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 224 (ಜೇಕ್ ಫ್ರೆಸರ್ ಮೆಕ್‌ಗುರ್ಕ್ 23, ಅಕ್ಷರ್‌ ಪಟೇಲ್ 66, ರಿಷಭ್‌ ಪಂತ್‌ ಔಟಾಗದೇ 88, ಟ್ರಿಸ್ಟನ್‌ ಸ್ಟಬ್ಸ್‌ ಔಟಾಗದೇ 26; ಸಂದೀಪ್ ವಾರಿಯರ್ 15ಕ್ಕೆ 3, ನೂರ್ ಅಹ್ಮದ್ 36ಕ್ಕೆ 1)

ಗುಜರಾತ್‌ ಟೈಟನ್ಸ್‌: 8 ವಿಕೆಟ್‌ಗೆ 220 (ವೃದ್ಧಿಮಾನ್‌ ಸಹಾ 39, ಸಾಯಿ ಸುದರ್ಶನ್‌ 65, ಡೇವಿಡ್ ಮಿಲ್ಲರ್‌ 55, ರಶೀದ್‌ ಖಾನ್‌ ಔಟಾಗದೇ 21; ರಾಸಿಖ್ ಸಲಾಂ 44ಕ್ಕೆ3, ಕುಲದೀಪ್‌ ಯಾದವ್‌ 29ಕ್ಕೆ2).

ಪಂದ್ಯದ ಆಟಗಾರ: ರಿಷಭ್ ಪಂತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT