ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಕ್ಕೂ ಸೈ ನೋಟಕ್ಕೂ ಸೈ

Last Updated 2 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ನೀವು ಕೇಳಿರಬಹುದು. ಮಾರುತಿ ಸುಜುಕಿಯ ‘ಜಿಪ್ಸಿ’ ವಾಹನಗಳಲ್ಲಿರುವ ಪೆಟ್ರೋಲ್‌ ಎಂಜಿನ್‌ ಅನ್ನು ತೆಗೆದು, ಅದಕ್ಕೆ ‘ಇಸುಜು’ನ ಡೀಸೆಲ್‌ ಎಂಜಿನ್‌ಗಳನ್ನು ಕೂರಿಸಲಾಗುತ್ತಿತ್ತು. ಆ ಎಂಜಿನ್‌ ಮೈಲೇಜ್‌ಗೂ ಸೈ, ಕಾರ್ಯಕ್ಷಮತೆಗೂ ಸೈ. ಅಷ್ಟು ವಿಶ್ವಾಸಾರ್ಹತೆ ‘ಇಸುಜು’ ಎಂಜಿನ್‌ಗಳಿಗೆ ಇರುತ್ತದೆ. ಡೀಸೆಲ್‌ ಎಂಜಿನ್‌ಗಳಲ್ಲಿ ‘ಇಸುಜು’ ಅನ್ನು ಮೀರಿಸುವವರು ಇನ್ನೊಬ್ಬರಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ.

‘ಇಸುಜು’ ಅನ್ನು ಇನ್ನೂ ಒಂದು ವಿಚಾರದಲ್ಲಿ ನೀವು ಕೇಳಿರುತ್ತೀರಿ. ಅದೇ ‘ಇಸುಜು’ನ ಪ್ರಯಾಣಿಕರ ವ್ಯಾನ್‌ ಹಾಗೂ ಲಾರಿಗಳ ಮೂಲಕ. ಶಾಲಾ- ಕಾಲೇಜುಗಳು, ಸಣ್ಣ ಪುಟ್ಟ ಸಂಘ ಸಂಸ್ಥೆಗಳು ವ್ಯಾನ್‌ಗಳನ್ನು ಇಟ್ಟುಕೊಳ್ಳಲೇಬೇಕು. ಅವುಗಳಲ್ಲಿ ನೂರಕ್ಕೆ ಎಂಬತ್ತು ಭಾಗ ‘ಇಸುಜು’ ವಾಹನಗಳೇ. ಲಾರಿಗಳಲ್ಲೂ ‘ಇಸುಜು’ ತಾನೇನು ಕಡಿಮೆಯಿಲ್ಲ ಎಂಬಂತೆ ಬೆಳೆದಿದೆ.

ಇಂಥ ‘ಇಸುಜು’, ಪ್ರಯಾಣಿಕರ ವಾಹನಗಳನ್ನು ಭಾರತದಲ್ಲಿ ಹೊರಬಿಟ್ಟೇ ಇರಲಿಲ್ಲ. ಈಗಲೂ ‘ಇಸುಜು’ನ ಪ್ರಯಾಣಿಕರ ವಾಹನಗಳು ಇಲ್ಲವೇ ಇಲ್ಲ. ಇದಕ್ಕೆ ಒಂದು ಸೇರ್ಪಡೆಯಾಗಿ ‘ಇಸುಜು’ನ ‘ಡಿ-ಮ್ಯಾಕ್ಸ್‌ ವಿ– ಕ್ರಾಸ್‌’ ಎನ್ನುವ ವಾಹನ ಪರಿಚಿತಗೊಂಡಿದೆ. ಇದರ ವಿಶೇಷವೆಂದರೆ, ಇದು ಆಟಕ್ಕೂ ಸೈ, ನೋಟಕ್ಕೂ ಸೈ.

ಏನಿದು ‘ವಿ– ಕ್ರಾಸ್‌’?
ಇದು ‘ಪಿಕ್‌ ಅಪ್‌’ ವಾಹನಗಳ ಸಾಲಿಗೆ ಸೇರುವ ಇಸುಜು ಅವರದೇ ಆದ, ‘ಡಿ– ಮ್ಯಾಕ್ಸ್‌’ ವಾಹನದ ಮೇಲ್ದರ್ಜೆಗೇರಿರುವ ವಾಹನ. ಇದನ್ನು, ‘ಬಕ್ಕಿ’ ಎಂದು ಕರೆಯುತ್ತಾರೆ. ಅಂದರೆ, ಪ್ರಯಾಣಿಕರ ಕ್ಯಾಬಿನ್‌ ಹಿಂದೆ, ಸರಕು ಸರಂಜಾಮು ಸಾಗಿಸಲು ಬೇಕಾದ ಜಾಗ ಇರುತ್ತದೆ. ಇದನ್ನು ‘ಲಗ್ಗೇಜ್‌ ಏರಿಯಾ’ ಎನ್ನುತ್ತಾರೆ. ಈ ‘ಲಗ್ಗೇಜ್‌ ಏರಿಯಾ’ ತೀರಾ ದೊಡ್ಡದಲ್ಲ. ಸಣ್ಣಪುಟ್ಟ ಸರಂಜಾಮನ್ನು ಸಾಗಿಸಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಸಾಹಸ ಕ್ರೀಡೆಗಳಲ್ಲಿ ಆಸಕ್ತಿ ಇರುವವರು ವಾಹನದ ಹಿಂದೆ ಸೈಕಲ್, ಫೈಬರ್‌ ದೋಣಿಗಳನ್ನು ಇಟ್ಟುಕೊಳ್ಳುತ್ತಾರೆ. ಇಂಥ ಸಾಹಸ ಪ್ರಿಯರಿಗೆ ‘ವಿ– ಕ್ರಾಸ್‌’ ಹೇಳಿ ಮಾಡಿಸಿದ ವಾಹನ.

ಜತೆಗೆ, ಇದರ ಶಕ್ತಿ ಸಾಮರ್ಥ್ಯ ಬೆರಗು ಮೂಡಿಸುವಂತೆ ಇದೆ. ಕೊಡಗು, ಚಿಕ್ಕಮಗಳೂರಿನಂತಹ ಘಟ್ಟ ಪ್ರದೇಶಗಳಲ್ಲಿ, ಎಸ್ಟೇಟ್‌ಗಳನ್ನು ಹೊಂದಿರುವವರಿಗೆ ಇವು ತುಂಬಾ ಕೆಲಸಕ್ಕೆ ಬರುತ್ತವೆ. ದೊಡ್ಡ ಕೃಷಿಕರಾದ ಬಯಲು ಸೀಮೆಯವರೂ ಇದನ್ನು ಬಳಸಿಕೊಳ್ಳಬಹುದು. ತಮ್ಮ ಕೃಷಿ ಉತ್ಪನ್ನಗಳನ್ನು ತಾವೇ ಮಾರುಕಟ್ಟೆಗೆ ಸಾಗಿಸಲು ಇವು ಅನುಕೂಲಕಾರಿ. ಜತೆಗೆ, ಇವನ್ನು ಸಾಧಾರಣ ಪ್ರಯಾಣಿಕರ ವಾಹನಗಳಂತೆಯೂ ಬಳಸಬಹುದು. ಕೊಂಚ ಗಡುಸಾದ ಪ್ರಯಾಣಿಕರ ವಾಹನ ಬೇಕು, ನೋಟವೂ ಅತ್ಯುತ್ತಮವಾಗಿ ಇರಬೇಕು ಎಂದು ಬಯಸುವವರಿಗೆ ಇವು ಹೇಳಿ ಮಾಡಿಸಿದ ವಾಹನಗಳು.

‘ಎಸ್‌ಯುವಿ’ ಬದಲಿಗೆ ಬಳಕೆ
ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ) ಹೊಂದಬೇಕು ಎಂದು ಬಯಸುವವರಿಗೆ ಈ ರೀತಿಯ ವಾಹನಗಳು ಪರ್ಯಾಯ ಆಯ್ಕೆಯಾಗುತ್ತವೆ. ಇದೇ ‘ಡಿ- ಮ್ಯಾಕ್ಸ್‌ ವಿ– ಕ್ರಾಸ್‌’ ವಾಹನದಲ್ಲಿ 5 ಮಂದಿ ಆರಾಮಾಗಿ ಕೂರಬಹುದಾಗಿದೆ.  ಅತಿ ದೊಡ್ಡ ಚಕ್ರಗಳನ್ನು ಹೊಂದಿದ್ದು, ಗ್ರೌಂಡ್‌ ಕ್ಲಿಯರೆನ್ಸ್ ಹೆಚ್ಚಿರುವ ಕಾರಣ, ‘ಎಸ್‌ಯುವಿ’ಯನ್ನು ಮೀರಿಸುವ ಕಾರ್ಯಕ್ಷಮತೆಯನ್ನು ಇದು ತೋರುತ್ತದೆ.

ಎಂಜಿನ್‌ ವಿಶೇಷ
2499 ಸಿಸಿ ಸಿಆರ್‌ಡಿಐ ಡೀಸೆಲ್‌ ಎಂಜಿನ್‌ ಇದರಲ್ಲಿದೆ. ಭರ್ಜರಿ 320 ಎನ್‌ಎಂ ಹಾಗೂ 134 ಎಚ್‌ಪಿ ಶಕ್ತಿಯಿದ್ದು, ಅತಿ ಗಡುಸಾದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಆರಂಭದ ಪಿಕ್‌ ಅಪ್‌, ವೇಗದ ಚಾಲನೆಗಳೆರಡಕ್ಕೂ ಇದು ಪೂರಕವಾಗಿದೆ. ಲೀಟರ್‌ ಪೆಟ್ರೋಲ್‌ಗೆ ಕನಿಷ್ಠ 10 ಕಿಲೋಮೀಟರ್‌ ಮೈಲೇಜ್‌ ನೀಡುತ್ತದೆ. ಹಾಗಾಗಿ, ಸಾಹಸ ಪ್ರಿಯರಿಗೆ ಇದು ವರದಾನವಾಗಲಿದೆ.

ಇದರ ಸುತ್ತಳತೆಯ ಮಾಹಿತಿ ನೋಡಿ- ಬರೋಬ್ಬರಿ 5,070 ಎಂಎಂ ಉದ್ದ ಈ ವಾಹನವಿದೆ. ಅಗಲ 1720 ಎಂಎಂ. 1635 ಎಂಎಂ ಎತ್ತರವಿದೆ. ಅಂದರೆ, ಇದು ದೊಡ್ಡ ವಾಹನವೇ. ‘ಎಸ್‌ಯುವಿ’ಗಳು ಇಷ್ಟು ದೊಡ್ಡದಾಗಿ ಇರುವುದೇ ಇಲ್ಲ. ಈ ವಾಹನವನ್ನು ಕೊಂಡು, ಇದಕ್ಕೆ ತಲೆಯ ಮೇಲೊಂದು ಲಗ್ಗೇಜ್‌ ಕ್ಯಾರಿಯರ್‌, ಮುಂದೆ ಎಂಜಿನ್ ಗಾರ್ಡ್‌ ಹಾಕಿಸಿಕೊಂಡರೆ, ಅತ್ಯದ್ಭುತ ನೋಟ ಸಿಗುತ್ತದೆ.

ಇದು ‘ಡಿ- ಮ್ಯಾಕ್ಸ್‌’ ಛಾಸಿಸ್‌ ಆಧಾರದಲ್ಲೇ ನಿರ್ಮಿತಗೊಂಡಿದ್ದು, ಅತ್ಯುತ್ತಮ ಐಷಾರಾಮಿ ಸೌಕರ್ಯಗಳನ್ನು ನೀಡಲಾಗಿದೆ. ಅತ್ಯುತ್ತಮ ಸೀಟುಗಳು,
ಶ್ರೇಷ್ಠ ಗುಣಮಟ್ಟದ ಡ್ಯಾಷ್‌ ಬೋರ್ಡ್‌ ಇರುತ್ತವೆ. 5 ಮಂದಿ ಆರಾಮಾಗಿ ಕೂರಬಹುದು. ಇದಕ್ಕೆ ಸ್ಪರ್ಧಿಯಾಗಿ, ಟಾಟಾ ಮೋಟಾರ್ಸ್‌್ನ  ‘ಕ್ಸೆನಾನ್ ಎಕ್ಸ್‌ಟಿ’ ಎಂಬ ಐಷಾರಾಮಿ ವಾಹನವೂ ಇದೆ. ಇವೆರಡೂ ಕಂಪೆನಿಗಳ ವಾಹನಗಳೂ ಉತ್ತಮವಾಗೇ ಇವೆ.

ಇಸುಜು ‘ಡಿ- ಮ್ಯಾಕ್ಸ್‌ ವಿ– ಕ್ರಾಸ್‌’ ವಾಹನದ ಎಕ್ಸ್‌ ಶೋರೂಂ ಬೆಲೆ ₹ 15 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ. ಇದು ಕಾಸಿದ್ದವರ ಕಜ್ಜಾಯ. ಗಡುಸಾದ, ವಿಭಿನ್ನವಾದ ವಾಹನ ಹೊಂದಬೇಕು ಎನ್ನುವವರಿಗೆ ಇದು ಹೇಳಿ ಮಾಡಿಸಿದ ವಾಹನವಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT