ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲು ಸಂಕೇತವೇ...

Last Updated 17 ಮೇ 2014, 19:30 IST
ಅಕ್ಷರ ಗಾತ್ರ

ಕಂದಾ,
ಗುಡ್‌ ಮಾರ್ನಿಂಗ್‌ ಹೇಳು’.
ಅಮ್ಮ ಹೇಳಿದ್ದೇ ತಡ, ಮಗು ತನ್ನ ಬಲಗೈಯನ್ನು ಹಣೆಗೆ ಸೋಕಿಸಿತು, ಎದುರಲ್ಲಿ ಇದ್ದವರಿಗೆ ಶುಭಾಶಯ ದಾಟಿಸಿತು. ಮಗು ಮಾತನಾಡಲಿಲ್ಲ. ಬದಲಿಗೆ ತನ್ನ ಗೌರವವನ್ನು ಸಂಕೇತ ಸಂವಹನದ ಮೂಲಕ ಸಲ್ಲಿಸಿತು. ಅದೇ ಮಗು ಮೊಬೈಲ್‌ ಪರದೆಯ ಮೇಲೆ ಆಟಗಳಿರುವ ಆಯ್ಕೆಯ ಸಂಕೇತದ ಮೇಲೆ ಸಲೀಸಾಗಿ ಬೆರಳಿಡುತ್ತದೆ. ಆಟಗಳನ್ನು ಆಡಬೇಕಾದರೆ ಇಂಥ ಗುಂಡಿಯನ್ನೇ ಒತ್ತಬೇಕು ಎನ್ನುವುದನ್ನು ಅದು ನೋಡಿ ನೋಡಿ ಕಲಿತಿದೆ.
ಸಿಗ್ನಲ್‌ನಲ್ಲಿ ಕೆಂಪು ದೀಪ ಹತ್ತಿದರೆ ನಿಲ್ಲಬೇಕು, ಹಸಿರು ದೀಪ ಬೆಳಗಿದರೆ ಸಾಗಬೇಕು ಎನ್ನುವುದು ಕೂಡ ಶಾಲೆಗೆ ದಾಖಲಾಗುವ ಮೊದಲೇ ಮಗುವಿಗೆ ಸ್ಪಷ್ಟ.

ಬಸ್‌ಗಳಲ್ಲಿನ ಜನರನ್ನು ಗಮನವಿಟ್ಟು ನೋಡಿ: ‘ನಾಮದವರು, ವಿಭೂತಿಯವರು, ಮುದ್ರೆಯವರು’ ಎನ್ನುತ್ತಲೇ ಅಲ್ಲೊಂದು ಧಾರ್ಮಿಕ ಚರ್ಚೆ ನಡೆಯುತ್ತಿರಬಹುದು; ಜಾತಿ ಆಧಾರಿತ ರಾಜಕಾರಣದ ಬಗ್ಗೆ ಚರ್ಚೆ ಕಾವೇರಿರಬಹುದು. ಹೋಟೆಲ್‌ನ ಹರಟೆಕಟ್ಟೆಯಲ್ಲೋ ಉದ್ಯಾನದಲ್ಲೋ ಜಾತಿ ಉಪಜಾತಿಗಳ ಟೀಕೆ, ವಿಮರ್ಶೆ, ವಿಶ್ಲೇಷಣೆ ನಡೆಯುತ್ತದೆ. ಅಂದಹಾಗೆ, ಈ ವಿಶ್ಲೇಷಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ: ಅಲ್ಲಿ ಸಂವಹನದ ರೂಪದಲ್ಲಿ ಅನೇಕ ‘ಸಂಕೇತಗಳು’ ಬಳಕೆ ಆಗುತ್ತಿರುತ್ತವೆ. ‘ಅವನು ಯಾವ ಜನ’ ಎಂದು ಯಾರೋ ಕೇಳಿದರೆ, ಸಂಕೇತದ ಮೂಲಕವೇ ಉತ್ತರ ದೊರೆಯುತ್ತದೆ.

ಮಾಲ್‌ಗಳಲ್ಲಿ ಕಣ್ಣಾಡಿಸಿ ನೋಡಿದರೆ, ಎಲ್ಲೆಲ್ಲೂ ಸಂಕೇತಗಳೇ! ವೃದ್ಧರೊಬ್ಬರು ‘ಶೌಚಾಲಯ ಎಲ್ಲಿದೆ’ ಎಂದು ಬೆಂಗಳೂರಿನ ಮಾಲ್‌ ಒಂದರಲ್ಲಿ ನಡೆಸಿದ ಹುಡುಕಾಟ, ಪಡಿಪಾಟಲು ಸ್ನೇಹಿತರ ಮಾತಿಗೆ ಚರ್ಚೆಯಾಗಿತ್ತು. ‘ರೆಸ್ಟ್‌ ರೂಮ್‌’ ಎನ್ನುವುದರ ಸಂಕೇತವನ್ನು ಗ್ರಹಿಸುವುದು ಅವರಿಗೆ ಕಷ್ಟವಾಗಿತ್ತು. ಸಾಮಾನ್ಯವಾಗಿ ಸಾರ್ವಜನಿಕ ಶೌಚಾಲಯಗಳು ಇರುವ ಕಡೆ ಗಂಡು ಅಥವಾ ಹೆಣ್ಣಿನ ಚಿತ್ರಗಳನ್ನು ಹಾಕಿಯೋ ಅಥವಾ ‘ಪುರುಷರಿಗೆ’, ‘ಸ್ತ್ರೀಯರಿಗೆ’ ಎಂದು ಬರೆದೋ ಶೌಚಾಲಯ ಇರುವ ಸೂಚನೆಯನ್ನು ನೀಡಲಾಗಿರುತ್ತದೆ. ಆದರೆ ಮಾಲ್‌ ಸಂಸ್ಕೃತಿ ಅಂತರರಾಷ್ಟ್ರೀಯ ಮಟ್ಟದ ಸಂಕೇತಗಳನ್ನು, ಅದೂ ಕಿರಿದಾದ ಸಂಕೇತಗಳನ್ನು ಬಳಸುತ್ತದೆ.

ಮಾಲ್‌ಗಳಲ್ಲಿ ಬರೀ ಶೌಚಾಲಯ ಪತ್ತೆ ಮಾಡುವುದಷ್ಟೇ ಕಷ್ಟವಲ್ಲ, ವಿಶಾಲವಾದ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ ತಮ್ಮ ವಾಹನವನ್ನು ಹುಡುಕುವುದೂ ಮೊದಲ ಸಲ ಅಲ್ಲಿಗೆ ಹೋದವರಿಗೆ ಕಷ್ಟದ ಕೆಲಸವೇ. ಅಲ್ಲಿನ ಕಂಬ ಕಂಬಗಳ ಮೇಲೆ ಅಂಕೆ ಸಂಖ್ಯೆಯನ್ನೋ ಅಥವಾ ಇಂಗ್ಲಿಷ್‌ ವರ್ಣಮಾಲೆಯನ್ನೋ ಬರೆದಿರುತ್ತಾರೆ. ಅದನ್ನು ಗಮನಿಸಿದರೆ, ವಾಹನವನ್ನು ಯಾವ ಭಾಗದಲ್ಲಿ ಪಾರ್ಕ್‌ ಮಾಡಿದ್ದೇವೆ ಎನ್ನುವುದು ಗೊತ್ತಾಗುತ್ತದೆ. ಮಾಲ್‌ನಲ್ಲಿ ಸುತ್ತಾಡಿ, ಅಲ್ಲಿಗೆ ಮರಳಿದಾಗ ಒಂದು ವೇಳೆ ಆ ಸಂಖ್ಯೆ/ವರ್ಣಮಾಲೆ ನೆನಪಿನಲ್ಲಿ ಇದ್ದರೆ (ಉದಾಹರಣೆಗೆ ಡಿ 2) ವಾಹನ ನಿಲ್ಲಿಸಿದ ಜಾಗ ತಲುಪುವುದು ಕಷ್ಟವಾಗಲಾರದು.

ಮಗುವಿನ ಸಂವಹನ, ಸಾರ್ವಜನಿಕ ಸ್ಥಳಗಳಲ್ಲಿನ ಚರ್ಚೆ ಹಾಗೂ ಮಾಲ್‌ಗಳಲ್ಲಿನ ಫಜೀತಿ– ಈ ಉದಾಹರಣೆಗಳು ಸೂಚಿಸುವುದು ಇಷ್ಟನ್ನೇ: ಆಧುನಿಕ ಜಗತ್ತಿನಲ್ಲಿ ಹೊಸತೊಂದು ಸಂಕೇತ ಭಾಷೆ ಸದ್ದಿಲ್ಲದೆ ಅನಾವರಣಗೊಂಡಿದೆ ಹಾಗೂ ನಮಗೆ ಅರಿವಿಲ್ಲದೆಯೇ ಅದನ್ನು ಬಳಸುತ್ತಿದ್ದೇವೆ.

ಅಂತರರಾಷ್ಟ್ರೀಯ ಭಾಷೆ
ಲಿಪಿ, ಭಾಷಾಶಾಸ್ತ್ರ ಎಷ್ಟೇ ಬೆಳೆದರೂ ಸಂಕೇತಗಳ ಬಳಕೆಯ ದೃಷ್ಟಿಯಿಂದ ನಾವು ಪ್ರಾಚೀನರೇ ಹೌದು. ಶಿಲಾಯುಗದ ಜನ ಗುಹೆಗಳಲ್ಲಿ ಮೂಡಿಸುತ್ತಿದ್ದ ಕೆತ್ತನೆಗಳು, ಮ್ಯಾಂಗನಿಸ್‌, ಕಬ್ಬಿಣದ ಆಕ್ಸೈಡ್‌ನಿಂದ ಬಿಡಿಸುತ್ತಿದ್ದ ಚಿತ್ರಗಳು ಸಂವಹನಕ್ಕೆ ಮೊದಲು ಬಳಕೆಯಾದ ಸಂಕೇತಗಳು. ಆ ಪರಂಪರೆ ಇವತ್ತು ಬೇರೆ ಬೇರೆ ರೂಪಗಳಲ್ಲಿ ವಿಶ್ವವ್ಯಾಪಿಯಾಗಿದೆ. ‘ಐ ಲವ್ ಯೂ’ ಎನ್ನುವ ಸರಳ ಪ್ರೇಮನಿವೇದನೆಯನ್ನೇ ಉದಾಹರಣೆಯಾಗಿ ನೋಡಿ. ಅದೀಗ ‘143’ ಎಂದು ಮತ್ತಷ್ಟು ಸರಳವಾಗಿದೆ. ಹೃದಯದ ಮೇಲೊಂದು ಬಾಣ ಮೂಡಿದರೆ, ವ್ಯಕ್ತಿ ಪ್ರೀತಿಯಲ್ಲಿ ಸಿಲುಕಿದ್ದಾನೆ ಎಂದೇ ಅರ್ಥ. ನರಿಗೆ ಆಡಿನ ಉಡುಗೆ ಹಾಕಿದ ಚಿತ್ರ ‘ಮೋಸಗಾರರಿದ್ದಾರೆ’ ಎಂಬ ಎಚ್ಚರಿಕೆಯನ್ನು ದಾಟಿಸುತ್ತದೆ. ‘ಜೇಬುಗಳ್ಳರಿದ್ದಾರೆ, ಎಚ್ಚರಿಕೆ’ ಎನ್ನುವ ಬರಹಗಳ ಜಾಗದಲ್ಲಿ ಮುಂದೆ ಈ ಅಂತರರಾಷ್ಟ್ರೀಯ ಸಂಕೇತ ಮೂಡಿದರೆ ಆಶ್ಚರ್ಯವಿಲ್ಲ.

ಆಡಲು, ಬರೆಯಲು, ಅರಿಯಲು ಇಷ್ಟೊಂದು ಭಾಷೆಗಳಿರುವಾಗ ಸಂಕೇತಗಳನ್ನು ಯಾಕೆ ಇಷ್ಟು ವ್ಯಾಪಕವಾಗಿ ಬಳಸಬೇಕು ಎನ್ನುವ ಪ್ರಶ್ನೆ ಕೆಲವರಿಗೆ ಆಗಾಗ ಮೂಡುತ್ತಲೇ ಇರುತ್ತದೆ. ಇಂಥ ಪ್ರಶ್ನೆಗಳು ಸ್ಥಳೀಯರಲ್ಲಿ ಮೂಡುವುದು ಹೆಚ್ಚು. ಯಾಕೆಂದರೆ, ಅವರಿಗೆ ಸಂವಹನಕ್ಕೆ ನೆಲದ ಭಾಷೆ, ನೆಲದ ಭಾವವೇ ಮುಖ್ಯವಾಗಿರುತ್ತದೆ. ‘ಗುಡ್‌ ಮಾರ್ನಿಂಗ್‌’ ಎನ್ನುವುದು ಕರ್ನಾಟಕದ ಈಡಿಯಂ ಅಲ್ಲ. ಅದು ಅಂತರರಾಷ್ಟ್ರೀಯ ಈಡಿಯಂ. ‘ಥ್ಯಾಂಕ್ಸ್‌ ಫಾರ್‌ ಚೂಸಿಂಗ್‌... ’, ‘ಥ್ಯಾಂಕ್ಸ್‌ ಫಾರ್‌ ಲಿಸನಿಂಗ್‌’, ‘ಹ್ಯಾಪಿ ಟೈಮ್‌’ ಇತ್ಯಾದಿ ಆಶಯಗಳು ಕೂಡ ಜಾಗತಿಕ ಪರಿಭಾಷೆಯಿಂದ ಬಂದಂಥವೇ.

ಧನ್ಯವಾದ ಸಲ್ಲಿಕೆಗೆ ಇಂಗ್ಲಿಷ್‌ನಲ್ಲಿ ಬಳಸುವ ‘ಥ್ಯಾಂಕ್ಸ್‌’ ಪದಪ್ರಯೋಗ ಈಗ ಕನ್ನಡವೇ ಆಗಿಹೋಗಿದೆ. ಈ ‘ಥ್ಯಾಂಕ್ಸ್‌’ ವಿಷಯದಲ್ಲಿ ಬದಲಾವಣೆಗಳು ಕೂಡ ಕುತೂಹಲ ಹುಟ್ಟಿಸುವಂತಿವೆ. ಮೊದಲು ಯಾರಾದರೂ ‘ಥ್ಯಾಂಕ್ಸ್‌’ ಹೇಳಿದರೆ ಅದಕ್ಕೆ ಪ್ರತಿಯಾಗಿ ‘ನೋ ಮೆನ್ಷನ್‌’ ಎನ್ನುತ್ತಿದ್ದರು. ಕೆಲವರು ‘ಮೆನ್ಷನ್‌ ನಾಟ್’ ಎಂದು ಔಪಚಾರಿಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದುದೂ ಉಂಟು. ‘ಧನ್ಯವಾದ’ಕ್ಕೆ ಪ್ರತಿಯಾಗಿ ‘ಪರವಾಗಿಲ್ಲ’ ಎಂದು ಹೇಳುವ ಈ ಜಾಗತಿಕ ಪರಿಭಾಷೆ ಕಾಲಕ್ಕೆ ತಕ್ಕಂತೆ ಬೇರೆಯ ಅರ್ಥದ ಮೂಲಕವೇ ಬದಲಾಗಿಬಿಟ್ಟಿತು. ಈಗ ‘ಥ್ಯಾಂಕ್ಸ್‌’ ಎಂದರೆ, ‘ಯೂ ಆರ್‌ ವೆಲ್‌ಕಂ’ ಎನ್ನುತ್ತಾರೆ.

ಇಂಥ ಚುಟುಕು ಭಾಷಾ ಪ್ರಯೋಗಗಳಿಗೂ ಜಾಗತೀಕರಣಕ್ಕೂ ಸಾವಯವ ಸಂಬಂಧವಿದೆ. ಅಂತೆಯೇ ಸಂಕೇತಗಳ ಬಳಕೆಗೂ ವಿಶ್ವಮಟ್ಟದ ಏಕರೂಪತೆ ಇದೆ. ಮಾಲ್‌ಗಳಲ್ಲಿ, ಪ್ರವಾಸಿ ತಾಣಗಳಲ್ಲಿ, ಹೆದ್ದಾರಿಗಳಲ್ಲಿ ಬಳಸುವ ಸಂಕೇತಗಳು; ಅಂಥ ಸಂಕೇತಗಳನ್ನು ಬರೆಯಲು ಬಳಸುವ ಬೋರ್ಡಿನ ಬಣ್ಣ ಎಲ್ಲಕ್ಕೂ ದಿನದಿಂದ ದಿನಕ್ಕೆ ವಿಶ್ವಮಟ್ಟದ ಏಕರೂಪತೆ ಬರುತ್ತಿದೆ. ಬೇರೆ ಬೇರೆ ರಾಜ್ಯಗಳ, ದೇಶಗಳ ಜನರಿಗೆ ಭಾಷೆಗಿಂತ, ಪದಗಳಿಗಿಂತ, ವಾಕ್ಯಗಳಿಗಿಂತ, ಇಂಗ್ಲಿಷ್‌ಗಿಂತ ಲಗುಬಗೆಯಲ್ಲಿ ಸಮರ್ಥವಾಗಿ ಸಂವಹನ ಮಾಡುವುದು ಈ ಸಂಕೇತಗಳು. ಹಾಗಾಗಿಯೇ ಎಲ್ಲಾ ಕಡೆ ಅವುಗಳ ಬಳಕೆ ವ್ಯಾಪಕ ಆಗುತ್ತಿರುವುದು.

ವಾಹನ ಓಡಿಸಲು ಪರವಾನಗಿ ಪಡೆಯುವ ಪರೀಕ್ಷೆ ಬರೆದವರಿಗೆ ಸಂಕೇತಗಳ ಮಹತ್ವ ಚೆನ್ನಾಗಿ ಗೊತ್ತಿರುತ್ತದೆ. ವೇಗದ ಮಿತಿ, ರಸ್ತೆ ಉಬ್ಬು ಇದೆ, ತಿರುವು ಇದೆ, ಓವರ್‌ಟೇಕ್‌ ಮಾಡಬೇಡಿ, ಕಂದಕವಿದೆ, ಸೇತುವೆ ಇದೆ, ವನ್ಯಪ್ರಾಣಿಗಳ ಸಂಚಾರ ಇರುವ ಪ್ರದೇಶ, ಹಾರ್ನ್‌ ಮಾಡಬೇಡಿ, ಶಾಲೆ ಇದೆ– ಮೊದಲಾದ ಎಲ್ಲಾ ವಿಷಯಗಳನ್ನೂ ಸಂಕೇತಗಳು ದಶಕಗಳಿಂದ ಸಮರ್ಥವಾಗಿ ತಿಳಿಸುತ್ತಲೇ ಬಂದಿವೆ.

ಸಂಕೇತ ಪ್ರಜ್ಞೆ
ಒಮ್ಮೆಗೇ ಎರಡು ಮೂರು ಕ್ರಿಯೆಗಳಲ್ಲಿ ನಿರತವಾಗಿರುವಾಗ ಮನಸ್ಸು ಜಾಗರೂಕತೆ ವಹಿಸುವಂತೆ ಸೂಚಿಸಲು ಅಥವಾ ಗಮನ ಸೆಳೆಯಲು ಸಂಕೇತಗಳಿಂದ ಮಾತ್ರ ಸಾಧ್ಯ ಎನ್ನುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಮಕ್ಕಳು ಮಾತನಾಡುವುದನ್ನು ಕಲಿಯುವ ಮೊದಲೇ ಬಣ್ಣಗಳ ಗ್ರಹಿಕೆ, ಸಂಕೇತಗಳ ಸೂಕ್ಷ್ಮಜ್ಞಾನವನ್ನು ದಕ್ಕಿಸಿಕೊಳ್ಳುವುದೇ ಇದಕ್ಕೆ ಸಾಕ್ಷಿ.

ಬಹುಕ್ರಿಯೆಗಳಿಗೆ ಉದಾಹರಣೆ ವಾಹನ ಚಾಲನೆ. ವಾಹನಗಳನ್ನು  ಓಡಿಸುವಾಗ ಸಾಗಬೇಕಾದ ದಿಕ್ಕು, ರಸ್ತೆ ಮೇಲಿನ ಅಡಚಣೆಗಳು, ರಸ್ತೆ ನಿಯಮಗಳ ಪಾಲನೆ, ವಾಹನದಲ್ಲಿ ಕುಳಿತವರ ಜೊತೆ ಹರಟೆ– ಹೀಗೆ ಹಲವು ಕ್ರಿಯೆಗಳಲ್ಲಿ ನಿರತರಾಗುವುದು ಅನಿವಾರ್ಯ. ಆಗ ಸಂಕೇತಗಳಿಂದಷ್ಟೇ ಅಗತ್ಯವೂ ಅರ್ಥಪೂರ್ಣವೂ ಆದ ಮಾಹಿತಿ ದಾಟಿಸುವುದು ಸಾಧ್ಯ. ಕಿ.ಮೀ. ಕಲ್ಲಿನಿಂದ ಹಿಡಿದು ರಸ್ತೆ ನಿಯಮಗಳ ಸಂಕೇತಗಳವರೆಗೆ ಎಲ್ಲವೂ ಮಾಡುವುದು ಇದನ್ನೇ.

ಇದು ಹಳೆಯ ವಿಷಯ
ಸಂಕೇತಗಳ ಜಾಗತಿಕ ಮಟ್ಟದ ಬಳಕೆ ಹೊಸ ವಿಷಯವೇನೂ ಅಲ್ಲ. ರಸವಿದ್ಯೆ, ವಂಶಲಾಂಛನ, ಖಗೋಳ ವಿಜ್ಞಾನ ಇವುಗಳಲ್ಲಿ ಹಲವು ಸಂಕೇತಗಳು ಬಳಕೆಯಲ್ಲಿ ಇದ್ದವು. ಯಾವುದೋ ಸಂಗತಿಯನ್ನು ಗುಟ್ಟಾಗಿಡುವುದು, ಕೆಲವರಿಗೆ ಮಾತ್ರ ಅದನ್ನು ತಿಳಿಸುವುದು, ಪರಂಪರೆಯ ರಕ್ಷಣೆ ಸೇರಿದಂತೆ ಹಲವು ಉದ್ದೇಶಗಳು ಈ ರೀತಿ ಸಂಕೇತಗಳ ಬಳಕೆಗೆ ಇದ್ದವು.

ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಬಳಕೆಯಲ್ಲಿರುವ ಸಂಕೇತ ಎರಡು ತಲೆಗಳ ಹದ್ದು. ನಿನ್ನೆ ಹಾಗೂ ನಾಳೆಗಳನ್ನು ಇದು ಸೂಚಿಸುತ್ತದೆ. ಈಜಿಪ್ಟ್‌ನಲ್ಲಿ ಪೂರ್ವ ಹಾಗೂ ಪಶ್ಚಿಮಕ್ಕೆ ಎರಡು ಮುಖಗಳನ್ನು ಚಾಚಿಕೊಂಡ ಸಿಂಹವನ್ನು ಇದನ್ನೇ ಸಂಕೇತಿಸಲು ಬಳಸಿದರು. ಹಳತರ ಸ್ಮರಣೆ, ಹೊಸ ಹಸಿವಿನ ಸಂಕೇತಗಳಿವು ಎಂದು ಇವನ್ನು ಅರ್ಥೈಸಿದವರೂ ಇದ್ದಾರೆ.

ಲೋಗೊ ಬಗೆ
ಸಂವಹನಕ್ಕೆ ಸಂಕೇತಗಳು ಬಳಕೆಯಾದ ಮೇಲೆ ಅವು ಮಾರುಕಟ್ಟೆ ಅಭಿವೃದ್ಧಿಯ ದಾರಿಗಳಾಗದೇ ಇರಲು ಸಾಧ್ಯವೇ? ಅಂತರರಾಷ್ಟ್ರೀಯ ಉತ್ಪನ್ನಗಳಿಗೆ ವಿವಿಧ ದೇಶಗಳಲ್ಲಿ ನೆಲೆ ಸಿಕ್ಕಮೇಲೆ ಆದ ಬೆಳವಣಿಗೆ ‘ಲೋಗೊ’ ವ್ಯಾಪಕತೆ. ನೈಕಿ, ಪ್ಯೂಮಾ, ಅಡಿಡಾಸ್‌, ಆ್ಯಪಲ್‌, ಮೆಕ್‌ಡೊನಾಲ್ಡ್ಸ್‌ ಇವೆಲ್ಲ ಜನಪ್ರಿಯ ‘ಲೋಗೊ’ಗಳಿಗೆ ಕೆಲವು ಉದಾಹರಣೆಗಳು. ನೇತುಹಾಕಿಕೊಂಡ ಬ್ಯಾಗು ‘ಫಾಸ್ಟ್‌ಟ್ರ್ಯಾಕ್‌’ ಅಥವಾ ‘ಹೈಡಿಸೈನ್‌’ನದ್ದು ಎನ್ನುವುದನ್ನು ಅವುಗಳ ಲೋಗೊ ಸಾರುತ್ತವೆ.

ಆ ಮೂಲಕ ಬ್ರಾಂಡ್‌ ಪ್ರಚಾರದ ಜೊತೆಗೆ ಅದು ಗ್ರಾಹಕರ ಪ್ರತಿಷ್ಠೆಯ ಸಂಕೇತವೂ ಆಗುತ್ತದೆ. ‘ನೈಕಿ’ಯ ತುಸು ಬಾಗಿದ ಗೆರೆ, ‘ಆ್ಯಪಲ್‌’ನ ಕಚ್ಚಿದ ಸೇಬು ಅವು ಏನೆಂದು ಸ್ವಯಂ ತಿಳಿಸುವ ಸಂಕೇತಗಳಾದ ಮೇಲೆ ತಂತ್ರಜ್ಞಾನದ ಸೂಚನೆಗಳಿಗೆ ‘ಐಕಾನ್‌’ಗಳೇ ದಾರಿದೀವಿಗೆಗಳಾದವು. ಮೊಬೈಲ್‌, ಐ–ಪಾಡ್‌, ಎಂಪಿಥ್ರೀ ಮೊದಲಾದ ಎಲೆಕ್ಟ್ರಾನಿಕ್‌ ಸಾಧನಗಳ ಮೇಲೆ ಮೂಡುವ ಐಕಾನ್‌ಗಳದ್ದೇ ಒಂದು ದೊಡ್ಡ ಜಗತ್ತು. ಅವುಗಳನ್ನು ಕೂಡ ಕಂಪೆನಿಗಳು ತಮ್ಮ ಜರೂರತ್ತಿಗೆ ತಕ್ಕಂತೆ ಮಾರ್ಪಡಿಸುತ್ತಾ ಇರುತ್ತವೆ. ಇಂಥ ಲೋಗೊ, ಐಕಾನ್‌ಗಳನ್ನು ರೂಪಿಸುವವರಿಗೆ ದೊಡ್ಡ ಮೊತ್ತದ ಸಂಬಳ ಸಂದಾಯವಾಗುತ್ತಿರುತ್ತದೆ.

ಸಾಮಾಜಿಕ ಜಾಲತಾಣಗಳು, ವೆಬ್‌ಸೈಟ್‌ಗಳಲ್ಲಂತೂ ಸಂಕೇತಗಳ ಪಾತ್ರ ದೊಡ್ಡದು. ‘ಫೇಸ್‌ಬುಕ್‌’ ಎನ್ನುವುದನ್ನು ಅದರ ಸಂಕೇತವೇ ನೆಟ್ಟಿಗರಿಗೆ ತಿಳಿಹೇಳಿಬಿಡುತ್ತದೆ. ವಿಕಿಪೀಡಿಯಾ ಪುಟ ತೆರೆದುಕೊಂಡೊಡನೆ ಅದರ ಸಂಕೇತವೇ ಅದರ ಸಾಚಾತನಕ್ಕೆ ಕನ್ನಡಿ ಹಿಡಿಯುತ್ತದೆ.

ಈ ದಿನಮಾನದಲ್ಲಿ ನವಜಾತ ಶಿಶುವಿನ ಚಟುವಟಿಕೆಯನ್ನು ಗಮನಿಸಿದವರು ‘ಈ ಜನರೇಷನ್‌ ಚುರುಕು’ ಎನ್ನುತ್ತಾರೆ. ಅದಕ್ಕೆ ಪುಷ್ಟಿ ಎನ್ನುವಂತೆ ಹಸುಗೂಸುಗಳು ಅಡಿಗಡಿಗೂ ಸಂಕೇತಗಳ ಜೊತೆಗೆ ಬೆಳೆಯುತ್ತವೆ. ಶಿಶುಗಳ ಪಾಲಿಗವು ಆಧುನಿಕ ಜಗತ್ತಿನ ಕಿಟಕಿಗಳು. ಅವು ಬರೀ ಸಂವಹನವನ್ನಷ್ಟೇ ಮಾಡುವುದಿಲ್ಲ; ಬ್ರಾಂಡ್‌ ಪ್ರಜ್ಞೆ ರೂಢಿಸುತ್ತವೆ, ಪ್ರತಿಷ್ಠೆಯ ಭಾವನೆ ತುಂಬುತ್ತವೆ, ಪುಟ್ಟ ಮಗುವನ್ನೂ ಗಿರಾಕಿ ಮಾಡಿಬಿಡುತ್ತವೆ. ‘ಆಧುನಿಕ ಸಂಕೇತ ವ್ಯವಸ್ಥೆ’ ಹೀಗೆ ‘ಆಧುನಿಕ ಸಂಕೇತ ಮಾರಾಟ ವ್ಯವಸ್ಥೆ’ಯಾಗಿ ಬದಲಾಗಿ ಪ್ರತಿ ನಾಗರಿಕನನ್ನೂ ಆವರಿಸಿಕೊಂಡಿವೆ. ಆದ್ದರಿಂದ ಇವು ವ್ಯಕ್ತಿಯ ಬದುಕಿನ ಸಂಕೇತಗಳಾಗಿಯೂ ರೂಪಾಂತರ ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT