ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬರಿಗೆ ವೋಟು, ಮತ್ತೊಬ್ಬರಿಂದ ನೋಟು

Last Updated 27 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಪ್ರೀತಿ ಮತ್ತು ಯುದ್ಧದಲ್ಲಿ ಯಾವುದೂ ತಪ್ಪಲ್ಲ' ಎನ್ನುವುದು ಪ್ರಸಿದ್ಧ ಉಲ್ಲೇಖ. ಅದೇ ರೀತಿ, `ಚುನಾವಣೆ ವೇಳೆ ಹೇಗೆ ಗಂಟು ಮಾಡಿಕೊಂಡರೂ ತಪ್ಪಲ್ಲ' ಎಂಬುದು ಈಗಿನ ರಾಜಕೀಯ ಕಾವಿನ ಸಂದರ್ಭದಲ್ಲಿ ಕೆಲವರ ನಿಲುವು.

ಸ್ನಾತಕೋತ್ತರ ಪದವಿ ಕಲಿತು ಸಣ್ಣ ವ್ಯಾಪಾರ ನಡೆಸುತ್ತಿರುವ ಮನೋಜ್ 30ರ ಯುವಕ. ರಾಜಕಾರಣದ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿರುವ ಅವರಿಗೆ ಇಲ್ಲಿನ ಪಟ್ಟು, ಪ್ರತಿಪಟ್ಟುಗಳ ಪರಿಚಯ ಚೆನ್ನಾಗಿಯೇ ಇದೆ. ಇದರ ನಡುವೆಯೇ, ಲಂಚಕ್ಕೆ ಆಸೆ ಬೀಳದೆ, ಕುಲದ ಮೋಹಕ್ಕೆ ಸಿಲುಕದೆ, ಸ್ವಚ್ಛ ವ್ಯಕ್ತಿಯನ್ನು ಜನ ಆರಿಸಬೇಕು ಎಂಬುದು ಅವರ ಬಯಕೆ.

“ನೋಡಿ ಸಾರ್, ನನ್ನ ಜಾತಿ `ಇದು'. ಆದರೆ, ಆ ಪಕ್ಷದ ಅಭ್ಯರ್ಥಿ ನನ್ನ ಜಾತಿಯವರು ಎಂಬುದನ್ನೇ ಕಾರಣ ಮಾಡಿಕೊಂಡು ನಾನು ಅವರಿಗೆ ಮತ ಹಾಕುವುದಿಲ್ಲ. ಈ ಸಲ ಸ್ವಚ್ಛ ಆಡಳಿತದ ಹೆಸರಿನಲ್ಲಿ ಕಣಕ್ಕಿಳಿದಿರುವ ಪಕ್ಷದ ಅಭ್ಯರ್ಥಿಗೇ ಮತಮುದ್ರೆ ಒತ್ತುತ್ತೇನೆ” ಎಂದು ಸ್ಪಷ್ಟಪಡಿಸುತ್ತಾರೆ.

`ನಾನು ಮತ ಕೊಡಬೇಕೆಂದು ನಿರ್ಧರಿಸಿರುವ ಅಭ್ಯರ್ಥಿ ಯಾವ ಜಾತಿಗೆ ಸೇರಿದವರು ಎಂಬುದನ್ನೂ ನಾನು ತಿಳಿದುಕೊಳ್ಳಲು ಹೋಗಿಲ್ಲ. ಅದೆಲ್ಲಾ, ಏಕೆ ಬೇಕು ಬಿಡಿ. ಅವರು ಗೆಲ್ಲಲಿ, ಬಿಡಲಿ; ನನ್ನ ವೋಟು ಅವರಿಗೇ ಗ್ಯಾರಂಟಿ. ನಾನು ಮಾತ್ರ ಅಲ್ಲ. ನಮ್ಮ ಗುಂಪಿನಲ್ಲಿ ಸುಮಾರು 700 ಜನ ಇದ್ದೇವೆ. ನಮ್ಮೆಲ್ಲರ ವೋಟುಗಳೂ ಈ ಸಲ ಅವರಿಗೇ ಮೀಸಲು. ಈಗಾಗಲೇ ಈ ಅಭ್ಯರ್ಥಿಯ ಹತ್ತಿರ ಹೋಗಿ ಮಾತಾಡಿದ್ದೇವೆ. ಅವರಿಗೆ ನಮ್ಮ ಬೆಂಬಲವನ್ನು ಖಚಿತಪಡಿಸಿ ಬಂದಿದ್ದೇವೆ' ಎಂದೂ ತಿಳಿಸುತ್ತಾರೆ.

`ನೀವೂ ಅಷ್ಟೆ, ಅವರಿಗೇ ಮತ ಹಾಕಿ. ಜತೆಗೆ, ನಿಮ್ಮ ಕೈಲಾದಷ್ಟು ಜನರಿಗೆ ಅವರಿಗೇ ಮತ ಹಾಕುವಂತೆ ಕೇಳಿಕೊಳ್ಳಿ' ಎಂದು ಪರೋಕ್ಷವಾಗಿ ಪ್ರಚಾರವನ್ನೂ ಮಾಡುತ್ತಾರೆ. ಕಆದರೆ ವಿಪರ್ಯಾಸದ ಸಂಗತಿಯೆಂದರೆ, ಸ್ವಚ್ಛ ಆಡಳಿತದ ಬಗ್ಗೆ ಏನೆಲ್ಲಾ ಕನಸು ಕಂಡಿರುವ ಮನೋಜ್ ಕೂಡ ಚುನಾವಣೆ ಸಮಯದಲ್ಲಿ ಹಣ ಮಾಡಿಕೊಳ್ಳಲು ಮುಂದಾಗಿದ್ದಾರೆ.

`ನೋಡಿ, ಕಳೆದ ಎರಡು ಚುನಾವಣೆಗಳಲ್ಲಿ ಯಾವುದೇ ಅಪೇಕ್ಷೆ ಇಲ್ಲದೆ ಅಭ್ಯರ್ಥಿಗಳ ಪರ ಓಡಾಡಿದ್ದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಒಳ್ಳೆಯವರು ಎನ್ನುವ ಕಾರಣಕ್ಕೆ, ನನ್ನ ಜೇಬಿನಿಂದ ಹತ್ತು ಸಾವಿರ ರೂಪಾಯಿಯವರೆಗೂ ಖರ್ಚು ಮಾಡಿದ್ದೆ. ಆದರೆ ಈ ಸಲ ದುಡ್ಡು ಮಾಡಬೇಕು ಎನ್ನುವುದನ್ನು ಕಳೆದ ಚುನಾವಣೆಗಳ ಅನುಭವದಿಂದ ಕಲಿತಿದ್ದೇನೆ' ಎನ್ನುತ್ತಾರೆ.

`ಅಲ್ಲಾ, ನಿಮ್ಮ ಬೆಂಬಲ ಸ್ವಚ್ಛ ಆಡಳಿತಕ್ಕೆ ಅಂತೀರಿ, ದುಡ್ಡನ್ನೂ ಮಾಡಬೇಕು ಅಂತೀರಿ. ಏನಿದು?' ಎಂದು ಕೇಳಿದರೆ ಅವರ ವಿವರಣೆ ಹೀಗೆ ಮುಂದುವರಿಯುತ್ತದೆ. `ನಾವು ಯಾವ ಅಭ್ಯರ್ಥಿ ಪರ ಇದ್ದೀವಿ ಅಂತ ಹೊರಗಿನವರಿಗೆ ಯಾರಿಗೂ ಗೊತ್ತಿಲ್ಲ. ನಾವೂ ಅದನ್ನು ಬಹಿರಂಗವಾಗಿ ಘೋಷಿಸಿಕೊಂಡಿಲ್ಲ.

ಇದು ಗೊತ್ತಿಲ್ಲದ, ಬೇರೊಂದು ಪಕ್ಷದ ಅಭ್ಯರ್ಥಿ ತಮ್ಮ ಪರ ಓಡಾಡಲು ನಮಗೆ ದುಂಬಾಲು ಬಿದ್ದಿದ್ದಾರೆ. ನಮ್ಮದೊಂದಿಷ್ಟು ಗೆಳೆಯರ ಗುಂಪು  ಇದೆ. ಪ್ರಚಾರಕ್ಕಾಗಿ 40 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದೇವೆ. ಒಪ್ಪಂದ ಕುದುರಿದರೆ, ಅವರ ಪರ ಸುಮ್ಮನೆ ಓಡಾಡಿದ ಹಾಗೆ ಮಾಡಿ, ಒಂದು ಹದಿನೈದು ಲಕ್ಷ ರೂಪಾಯಿ ಖರ್ಚು ಮಾಡಿ ಉಳಿದದ್ದನ್ನು ಗೆಳೆಯರು ಹಂಚಿಕೊಳ್ಳುತ್ತೇವೆ' ಎನ್ನುತ್ತಾರೆ.

ಹಾಗೆಲ್ಲಾ ಹಣ ತೆಗೆದುಕೊಳ್ಳುವುದು ತಪ್ಪಲ್ಲವೇ ಎಂದು ಕೇಳುವ ಮುಂಚೆ ಅವರೇ ಹೇಳಿಬಿಡುತ್ತಾರೆ- `ಅವರ ಹತ್ತಿರ ಇರೋದೂ ಬ್ಲ್ಯಾಕ್ ಮನೀನೆ. ಅವರ ಹತ್ತಿರ ಹೋಗಿ ಸೇರಿರೋದು ನನ್ನಂಥವರ ಹಣಾನೇ ತಾನೆ. ಈಗ ನೋಡಿ. ನನ್ನಂತೆ ಎಂಸಿಎ, ಇನ್ನೂ ಬೇರೆ ಬೇರೆ ಓದಿದವರು ಬೇಕಾದಷ್ಟು ಯುವಕರು ಇದ್ದೀವಿ. ನಮಗೆಲ್ಲಾ ನಮ್ಮ ವ್ಯಾಪಾರ ಶುರು ಮಾಡೋಕ್ಕೆ, ಮತ್ತೊಂದಕ್ಕೆ ಬೇಕಾಗಿರೋದು ಹೆಚ್ಚೆಂದರೆ 1ರಿಂದ 10 ಲಕ್ಷ ರೂಪಾಯಿ. ಈಗ ಹಣ ಮಾಡಿಕೊಂಡು ನಮ್ಮ ಉದ್ದೇಶಕ್ಕೆ ಬಳಸಿಕೊಂಡರೆ ತಪ್ಪೇನು. ಇಂತಹ ಅವಕಾಶ ಸಿಕ್ಕಾಗ ಹಣ ಮಾಡದೇ ಇರುವುದು ದಡ್ಡತನ'.

ಪದವಿ, ಸ್ನಾತಕ ಪದವಿವರೆಗಿನ 20 ವರ್ಷಗಳ ಶಿಕ್ಷಣ ಮನೋಜ್‌ಗೆ ಏನು ಕಲಿಸಿತೋ ಗೊತ್ತಿಲ್ಲ. ಆದರೆ, ಕಳೆದ ಎರಡು ಚುನಾವಣೆಗಳಂತೂ `ಡೀಲಿಂಗ್' ಕಲೆ  ಕರಗತಗೊಳಿಸಿವೆ ಎಂಬುದು ನಿಸ್ಸಂಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT