ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಾರಿಪಾಳ್ಯದೊಳಗೆ, ‘ಆನಂದ ನಿಲಯ’ದೊಳಗೆ...

ಉಭಯಕುಶಲೋಪರಿ । ಕಾಮರೂಪಿ ಅವರೊಂದಿಗೆ ಪಟ್ಟಾಂಗ
Last Updated 30 ಜನವರಿ 2016, 19:30 IST
ಅಕ್ಷರ ಗಾತ್ರ

ಪೂರ್ಣಚಂದ್ರ ತೇಜಸ್ವಿ ಸೃಷ್ಟಿಸಿದ ಅಪೂರ್ವ ಪಾತ್ರಗಳಲ್ಲೊಂದಾದ ಕರ್ವಾಲೊ ಅವರ ಮನೆಗೆ ಎಂದಾದರೂ ಹೋಗಿದ್ದೀರಾ? ಇಲ್ಲವಾದರೆ, ಕೋಲಾರದ ಕಠಾರಿಪಾಳ್ಯದಲ್ಲಿರುವ ‘ಆನಂದ ನಿಲಯ’ಕ್ಕೆ ಒಮ್ಮೆ ಹೋಗಿಬರಬೇಕು. ನೂರಾರು ಪುಸ್ತಕಗಳ ನಡುವೆ ಹುದುಗಿಹೋದಂತೆ ಅಥವಾ ಆ ಪುಸ್ತಕರಾಶಿಯೊಳಗಿನಿಂದ ಯಾವುದೋ ಪಾತ್ರ ಎದ್ದುಬಂದು, ಇತರ ಪಾತ್ರಗಳ ಕುಶಲ ವಿಚಾರಿಸುವಂತೆ ಹಿರಿಯರೊಬ್ಬರು ಕಾಣಿಸುತ್ತಾರೆ.

ಕರ್ವಾಲೊ ಅವರಂತೆ ಕಾಣಿಸುವ, ಮಂದಣ್ಣನಂತೆ ತಮ್ಮನ್ನು ತಾವು ಗೇಲಿ ಮಾಡಿಕೊಳ್ಳುವ ‘ಆನಂದ ನಿಲಯ’ದ ಆ ಒಡೆಯ– ಎಂ.ಎಸ್. ಪ್ರಭಾಕರ! ನೂರಾರು ರೇಡಿಯೊ, ಟೀವಿ ಸೆಟ್‌ಗಳನ್ನು ಹರವಿಕೊಂಡು, ಅವುಗಳ ನಡುವೆ ಕಡಿದುಹೋದ ತಂತುಗಳನ್ನು ಕೂಡಿಸುತ್ತಾ ಕುಳಿತ ಧ್ಯಾನಸ್ಥ ಮೆಕಾನಿಕ್ ರೀತಿಯೂ ಅವರು ಕಾಣಿಸುತ್ತಾರೆ. ಆದರೆ ಅಲ್ಲಿ ಟೀವಿ ಇಲ್ಲ! ಅಲ್ಲಿರುವುದು ಪುಸ್ತಕ ಪುಸ್ತಕ ಪುಸ್ತಕ! ಯಾರಿಗೆ ಗೊತ್ತು– ಯಾವುದೋ ಕ್ಷಣದಲ್ಲಿ ಆ ಪುಸ್ತಕದ ಪಾತ್ರಗಳಿಗೆ ಜೀವ ಬಂದು, ಆ ಪಾತ್ರಗಳೆಲ್ಲ ಪ್ರಭಾಕರ ಅವರೊಡನೆ ಏಕಾಂತದಲ್ಲಿ ಮಾತುಕತೆ ಆಡಲೂಬಹುದು! ಹೇಳಿಕೇಳಿ ಅವರು ಕಾಮರೂಪಿ!

ಮೋಡ ಕವಿದ ಶನಿವಾರದ ಒಂದು ಮಧ್ಯಾಹ್ನ ‘ಮುಕ್ತಛಂದ’ದ ಗೆಳೆಯರು ‘ಆನಂದ ನಿಲಯ’ದೊಳಗಿನ ಮೌನದ ಕೊಳಕ್ಕೆ ಕಲ್ಲೆಸೆಯುವಂತೆ ಪ್ರವೇಶಿಸಿದಾಗ ಪುಸ್ತಕಗಳಿಗೇನೂ ಜೀವ ಬರಲಿಲ್ಲ. ಆದರೆ, ಪ್ರಭಾಕರ  ಅವರೊಂದಿಗಿನ ಮಾತುಕತೆಯಲ್ಲಿ ಹಲವಾರು ನೆನಪುಗಳು ಜೀವತಾಳಿದವು. ಹತ್ತಾರು ನಿಘಂಟುಗಳು, ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕೃತಿಗಳು, ಹಲವು ಕ್ಲಾಸಿಕ್‌ಗಳು, ನಿಯತಕಾಲಿಕಗಳು, ಎಂ.ಎಂ. ಕಲ್ಬುರ್ಗಿ ಅವರ ಕೊಲೆಯ ಸುದ್ದಿಯನ್ನು ಹೊತ್ತ ‘ಪ್ರಜಾವಾಣಿ’ ಪತ್ರಿಕೆ– ಇವೆಲ್ಲದರ ನಡುವೆ ಕೂತ ಪ್ರಭಾಕರ, ಅಸ್ಸಾಂ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ತಾವು ಪತ್ರಕರ್ತರಾಗಿ ದುಡಿದ ದಿನಗಳನ್ನು ನೆನಪಿಸಿಕೊಂಡರು. ಕೋಲಾರದಲ್ಲಿನ ಬಾಲ್ಯ, ಹೈಸ್ಕೂಲ್ ದಿನಗಳು ಹಾಗೂ ಬೆಂಗಳೂರಿನಲ್ಲಿನ ಕಾಲೇಜು ದಿನಗಳನ್ನು ಮೆಲುಕು ಹಾಕಿದರು. ತಮ್ಮ ಸಂಪರ್ಕಕ್ಕೆ ಬಂದ ವ್ಯಕ್ತಿ - ವ್ಯಕ್ತಿತ್ವಗಳನ್ನು ನೆನಪಿಸಿಕೊಂಡರು. ಪ್ರಭಾಕರ ಅವರೊಂದಿಗಿನ ಮಾತೆಂದರೆ, ಅದು ಡಿವಿಜಿ ಅವರ ‘ಜ್ಞಾಪಕ ಚಿತ್ರಶಾಲೆ’ಯ ಸಂಪುಟಗಳಲ್ಲಿ ವಿಹರಿಸಿ ಬಂದಂತೆ.

ಹಾಂ, ಡಿ.ವಿ. ಗುಂಡಪ್ಪನವರು ಪ್ರಭಾಕರ ಅವರಿಗೆ ಸಂಬಂಧಿಯೂ ಹೌದು. ಗುಂಡಪ್ಪನವರು ಹಾಗೂ ಪ್ರಭಾಕರ ಅವರ ತಂದೆ ಸೂರಪ್ಪನವರು ಕೋಲಾರದಲ್ಲಿ ಒಟ್ಟಿಗೆ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಕೂತಿದ್ದರು. ಇಬ್ಬರೂ ಪರೀಕ್ಷೆಯಲ್ಲಿ ಒಟ್ಟಿಗೇ ಡುಂಕಿ ಹೊಡೆದಿದ್ದರು. ಇದೆಲ್ಲ ಅಪ್ಪ ಹೇಳಿದ ಡಿವಿಜಿ ಕುರಿತ ಒಡನಾಟದ ಕಥೆ. ಪ್ರಭಾಕರ ಬೆಂಗಳೂರಿನ ಸೆಂಟ್ರಲ್ ಕಾಲೇಜ್‌ನಲ್ಲಿ ಓದುತ್ತಿದ್ದಾಗ ಒಮ್ಮೆ ತಮ್ಮ ಸಹಪಾಠಿ ಸುಮತೀಂದ್ರ ನಾಡಿಗರೊಂದಿಗೆ ಡಿವಿಜಿ ಮನೆಗೆ ಹೋಗಿದ್ದರಂತೆ. ಗುಂಡಪ್ಪನವರು ಮೊದಲಿಗೆ ನಾಡಿಗರನ್ನು ವಿಚಾರಿಸಿದರು. ‘ನಾನು ಹೊನ್ನಾಳಿಯವನು. ಪದ್ಯ ಬರೆಯುತ್ತೇನೆ’ ಎನ್ನುವುದು ನಾಡಿಗರ ಪರಿಚಯ. ಪ್ರಭಾಕರ ಅವರ ಸರತಿ ಬಂದಾಗ, ‘ಕೋಲಾರದವನು’ ಎಂದರು. ಡಿವಿಜಿ ಅವರ ಕಿವಿ ನೆಟ್ಟಗಾಯಿತು. ಕಠಾರಿಪಾಳ್ಯ ಹಾಗೂ ಸೂರಪ್ಪನವರ ಪ್ರಸ್ತಾಪವಾದ ಕೂಡಲೇ ಅವರ ಧ್ವನಿಯಲ್ಲಿ ಆತ್ಮೀಯತೆಯ ಬಿರುಸು ಕಾಣಿಸಿಕೊಂಡಿತು. ಮನೆಯೊಳಗಿನಿಂದ ಯಾರೋ ಹೆಣ್ಣುಮಗಳನ್ನು ಕರೆದ ಅವರು, ‘ನಮ್ಮ ಸೂರಪ್ಪನ ಪಿಳ್ಳೆ’ಯನ್ನು ಒಳಗೆ ಕರೆದುಕೊಂಡು ಹೋಗುವಂತೆ ಹೇಳಿದರಂತೆ.

ಸಂಬಂಧಗಳ ಸಂಕೀರ್ಣತೆಯ ಬಗ್ಗೆ ಪ್ರಭಾಕರ ಅವರಿಗೆ ಒಂದು ಬಗೆಯ ಬೆರಗು. ಅವರು ಹೇಳಿದ ಮಾಸ್ತರರೊಬ್ಬರ ಕಥೆಯನ್ನು ಕೇಳಿ. ಕೋಲಾರಕ್ಕೆ ಬಂದಾಗಲೆಲ್ಲ ಸೂರಪ್ಪನವರ ಮನೆಗೆ ಬರುವುದನ್ನು ಆ ಮಾಸ್ತರರು ತಪ್ಪಿಸುತ್ತಿರಲಿಲ್ಲ. ಸ್ನಾನ, ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಹಾಗೂ ನಂತರದ ಕಿರು ನಿದ್ದೆ ಎಲ್ಲವನ್ನೂ ಸೂರಪ್ಪನವರ ಮನೆಯಲ್ಲಿಯೇ ಮುಗಿಸಿಕೊಂಡು ಸಂಜೆಗೆ ತಮ್ಮೂರಿಗೆ ಮರಳುತ್ತಿದ್ದರು. ಸಂಬಂಧಿಯೂ ಆಗಿದ್ದ ಆ ಮೇಷ್ಟರ ಬಗ್ಗೆ ಪ್ರಭಾಕರ ಅವರ ತಾಯಿಗೆ ವಿಪರೀತ ಅಕ್ಕರಾಸ್ಥೆ. ಒಂದು ದಿನ ಬೆಳಗ್ಗೆ ಆ ವ್ಯಕ್ತಿ ಸೂರಪ್ಪನವರ ಮನೆಗೆ ಎಂದಿನ ಗಡಿಬಿಡಿಯಲ್ಲಿ ಧಾವಿಸಿದರು. ಸ್ನಾನ ಹಾಗೂ ಬಿಸಿ ಬಿಸಿ ಅಕ್ಕಿರೊಟ್ಟಿಯ ಹಂಬಲದಲ್ಲಿ ಅವರು ‘ಆನಂದ ನಿಲಯ’ಕ್ಕೆ ಬಂದಿರಬೇಕು.

ಆದರೆ, ಅಲ್ಲಿ ಅವರಿಗೆ ಎದುರಾದುದು ಪ್ರಭಾಕರ ಅವರ ತಾಯಿಯ ಮೃತದೇಹ. ಸೂತಕದ ಮನೆಯ ವಾತಾವರಣ ಮೇಷ್ಟರನ್ನು ಕಂಗೆಡಿಸಿರಬೇಕು. ಕೋಲಾರದಲ್ಲಿ ತಾವು ಮಾಡಬೇಕಿದ್ದ ಕಾರ್ಯಭಾರ ಹಾಗೂ ಸಾವಿನ ಮನೆಯಲ್ಲಿ ಹೆಚ್ಚು ಹೊತ್ತು ನಿಂತರೆ ಸೂತಕದ ಭಯ ಅವರನ್ನು ಕಾಡಿತೇನೊ– ಏನನ್ನೋ ಬಡಬಡಿಸುತ್ತ ಆ ವ್ಯಕ್ತಿ ಅಲ್ಲಿಂದ ಜಾಗ ಖಾಲಿ ಮಾಡಿಯೇ ಬಿಟ್ಟರು. ‘‘ಪಾಪ, ಆ ಒಂದು ಕ್ಷಣದಲ್ಲಿ ಆ ವ್ಯಕ್ತಿಯ ಕನಸುಗಳೆಲ್ಲ ಒಮ್ಮೆಗೇ ಭಗ್ನಗೊಂಡಿರಬೇಕು” ಎಂದರು ಪ್ರಭಾಕರ. ಕಹಿ ಪ್ರಸಂಗವೊಂದನ್ನು ಇಷ್ಟೊಂದು ಮಾನವೀಯಾಗಿ ನೋಡುವುದು ಸಾಧ್ಯವೇ?

‘‘ಬರೀ ಮಾತಾಯಿತು. ಏನನ್ನಾದರೂ ತೆಗೆದುಕೊಳ್ಳಿ’’ ಎಂದರು ಪ್ರಭಾಕರ. ಅವರು ಬೆಟ್ಟು ಮಾಡಿದ್ದು ವೈನ್ ಬಾಟಲಿಯತ್ತ. ‘‘ರೆಡ್ ವೈನ್ ಅನ್ನು ಫ್ರಿಜ್‌ನಲ್ಲಿ ಇಡಬಾರದು; ವೈಟ್ ವೈನ್ ಆದರೆ ಅಡ್ಡಿಯಿಲ್ಲ’’ ಎಂದರು. ‘ವೈನ್ ಒಲ್ಲೆ’ ಎಂದವರನ್ನು– ‘‘ಇದನ್ನು ತೆಗೆದುಕೊಂಡರೆ ಏನೂ ತೊಂದರೆಯಿಲ್ಲ. ಇದು ಮಧುಪರ್ಕ ಅಷ್ಟೇ” ಎಂದು ತಮಾಷೆ ಮಾಡಿದರು. ‘‘ನಿಮ್ಮ ವೃತ್ತಿಯನ್ನು ಅವಮಾನಿಸಬಾರದು” ಎಂದು ಕಿಚಾಯಿಸಿದರು.
‘‘ವೈನ್ ಬೇಡದಿದ್ದರೆ ಚಹಾ ಮಾಡಿಕೊಳ್ಳಬಹುದು. ನಾನೇ ಮಾಡಿಕೊಡುವೆ. ಈ ಮನೆಯಲ್ಲಿ ನೀವು ಎಲ್ಲಿ ಬೇಕಾದರೂ ಓಡಾಡಬಹುದು. ಯಾವ ವಸ್ತುವನ್ನಾದರೂ ಬಳಸಬಹುದು. ಇಲ್ಲಿ ದೆವ್ವಗಳೇನೂ ಇಲ್ಲ’’ ಎಂದರು. ‘‘ಹಾಂ, ನನಗೆ ದೆವ್ವಗಳ ಭಯವೇನೂ ಇಲ್ಲ. ಆದರೆ, ಮಹಾಭಾರತದ ತಕ್ಷಕ (ಪರೀಕ್ಷಿತ ರಾಜನನ್ನು ಕೊಂದ ಸರ್ಪ) ಒಮ್ಮೊಮ್ಮೆ ನೆನಪಾಗುತ್ತಾನೆ, ಭಯ ಹುಟ್ಟಿಸುತ್ತಾನೆ’ ಎಂದರು. ಆ ತಕ್ಷಕ ಮಹಾಶಯ ಪ್ರಭಾಕರರಿಗೆ ಬಾಲ್ಯದಲ್ಲಿ ಯಾವಾಗ ತಗುಲಿಹಾಕಿಕೊಂಡನೋ?

ಮಾತು ಮತ್ತೊಬ್ಬ ಮೇಷ್ಟರ ಕಥೆಯತ್ತ ಹೊರಳಿತು. ಆ ಮಾಸ್ತರರಿಗೆ ಪ್ರಭಾಕರ ಅವರ ಪುಸ್ತಕಗಳ ಬಗ್ಗೆ ಕಣ್ಣು! ‘‘ಉಹುಂ, ಇವೆಲ್ಲ ನನ್ನ ತಮ್ಮನ ಆಸ್ತಿ’’ ಎಂದು ಪ್ರಭಾಕರ ಅವರ ಅಕ್ಕ ಪುಸ್ತಕಗಳನ್ನು ಕಾಯುತ್ತಿದ್ದರು. ಒಮ್ಮೆ ಪ್ರಭಾಕರ ಕೋಲಾರಕ್ಕೆ ಬಂದಾಗ, ಆ ಮೇಷ್ಟ್ರು ತಮ್ಮ ಪುಸ್ತಕಪ್ರೀತಿಯ ಬಗ್ಗೆ ಹೇಳಿಕೊಂಡರು. ‘‘ಆಯಿತು. ನಿಮಗೆ ಬೇಕಾದ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಓದಿ’’ ಎಂದು ಪ್ರಭಾಕರ ಅಕ್ಕನ ಎದುರೇ ಹೇಳಿದರು. ಆ ಮಾತಿನ ಬಲವನ್ನು ಚಲಾಯಿಸಿ, ಪ್ರಭಾಕರ ಅವರು ಅಸ್ಸಾಂಗೆ ಮರಳಿದ ಮೇಲೆ, ಮೇಷ್ಟ್ರು ಗೋಣಿಚೀಲಗಳಲ್ಲಿ ಪುಸ್ತಕಗಳನ್ನು ತುಂಬಿಕೊಂಡು ಹೋದರಂತೆ. ‘‘ಆತ ನನ್ನ ಪುಸ್ತಕಗಳನ್ನು ದರೋಡೆ ಮಾಡಿಬಿಟ್ಟ’’ ಎಂದು ತಮಾಷೆಯಾಗಿ ಹೇಳಿದ ಪ್ರಭಾಕರ– ‘‘ಆ ಪುಸ್ತಕಗಳನ್ನು ಓದಿದನೋ ಮಾರಿಕೊಂಡನೋ’’ ಎಂದು ನಿಟ್ಟುಸಿರುಬಿಟ್ಟರು.

‘‘ಈ ಕಥೆಗಳನ್ನೆಲ್ಲ ಒಮ್ಮೆ ಬರೆಯಬೇಕು’’ ಎಂದರು ಪ್ರಭಾಕರ. ‘‘ಹೌದು ಸಾರ್, ನೀವು ಇವುಗಳನ್ನೆಲ್ಲ ದಾಖಲಿಸಬೇಕು’’ ಎನ್ನುವ ಒತ್ತಾಯಕ್ಕೆ, ‘‘ಬರೆಯುವುದು ತುಂಬಾ ಕಷ್ಟ’’ ಎಂದರು. ‘‘ನನ್ನ ಕನ್ನಡ ಅಷ್ಟೇನೂ ಚೆನ್ನಾಗಿಲ್ಲ. ಪದಗಳು ಹೊಳೆಯುವುದು ಕಷ್ಟ’’ ಎಂದು ನಮ್ಮ ಕನ್ನಡವನ್ನು ತಮಾಷೆ ಮಾಡುವಂತೆ ಹೇಳಿದರು. ಹೀಗೆ ಕಷ್ಟ ಎನ್ನುತ್ತಲೇ ಅವರು ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’, ‘ಕುದುರೆಮೊಟ್ಟೆ’, ‘ಅಂಜಿಕಿನ್ಯಾತಕಯ್ಯ’ ಕೃತಿಗಳನ್ನು ಬರೆದದ್ದು. ಅಂದಹಾಗೆ, ದಶಕಗಳ ಕಾಲ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ದುಡಿದ ಹಾಗೂ ಕನ್ನಡೇತರ ಪರಿಸರದಲ್ಲಿ ಬದುಕಿದ ಅವರು ಸೃಜನಶೀಲ ಬರವಣಿಗೆಯ ವಿಷಯಕ್ಕೆ ಬಂದಾಗ ಮತ್ತೆ ಮತ್ತೆ ಹೊರಳಿದ್ದು ಕನ್ನಡದತ್ತಲೇ. ಇಂಗ್ಲಿಷ್‌ನಲ್ಲಿ ಯಾಕೆ ಬರೆಯಲಿಲ್ಲ? ಎನ್ನುವ ಪ್ರಶ್ನೆಗೆ– ‘‘ನಾನು ಇಂಗ್ಲಿಷ್‌ನಲ್ಲಿ ಚೆನ್ನಾಗಿ ಬರೆಯುತ್ತೇನೆ, ಹೌದು. ಆದರೆ ಸೃಜನಶೀಲ ಬರವಣಿಗೆಯನ್ನು ಇಂಗ್ಲಿಷ್‌ನಲ್ಲಿ ಮಾಡಬೇಕೆಂದು ನನಗೆ ಎಂದೂ ಅನ್ನಿಸಲಿಲ್ಲ. ಸೃಜನಶೀಲ ಬರವಣಿಗೆಗೆ ನಾವು ಬೆಳೆದ, ನಮ್ಮ ಬಾಲ್ಯವನ್ನು ರೂಪಿಸಿದ, ನಮ್ಮ ಜೀನ್‌ನಲ್ಲಿ ಇರುವ ಭಾಷೆ ಬೇಕು’’ ಎಂದರು.

ಪ್ರಭಾಕರ ಗುವಾಹಟಿ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿದ್ದವರು. ಆ ಸಮಯದಲ್ಲಿನ ಒಂದು ಕಥೆ ಕೇಳಿ. ಇಬ್ಬರು ಗೆಳೆಯರೊಂದಿಗೆ ಕ್ಯಾಂಪಸ್‌ನಲ್ಲಿನ ದೊಡ್ಡ ಮನೆಯೊಂದರಲ್ಲಿ ಅವರು ವಾಸವಾಗಿದ್ದ ದಿನಗಳವು. ಬ್ರಹ್ಮಚಾರಿ ತ್ರಿಮೂರ್ತಿಗಳು ಕೆಲಸದ ವ್ಯಕ್ತಿಯ ಹುಡುಕಾಟದಲ್ಲಿದ್ದರು. ಆ ಸಮಯದಲ್ಲಿ ಒಬ್ಬಾತನನ್ನು ನೂರು ರೂಪಾಯಿ ಸಂಬಳಕ್ಕೆ ಗೊತ್ತುಪಡಿಸಿಕೊಳ್ಳಲಾಯಿತು. ಆತ ಚೆನ್ನಾಗಿ ಕೆಲಸ ಮಾಡುತ್ತಿದ್ದ. ಹೊತ್ತುಹೊತ್ತಿಗೆ ತಿಂಡಿ, ಊಟ, ಚಹಾ ಪೂರೈಸುತ್ತಿದ್ದ. ಮನೆಯ ಮುಂದಿನ ಕೈತೋಟದಲ್ಲೂ ಕೆಲಸ ಮಾಡುತ್ತಿದ್ದ. ಕೆಲಸದವನ ಕಸುಬುದಾರಿಕೆ ಗೆಳೆಯರಿಗೆ ಇಷ್ಟವಾಯಿತು. ಪ್ರಭಾಕರ ಅವರಂತೂ ತಮ್ಮ ಮೋಟರ್ ಸೈಕಲ್ ನಡೆಸುವುದನ್ನು ಅವನಿಗೆ ಹೇಳಿಕೊಟ್ಟರು. ಹಳೆಯ ಸೈಕಲ್ ಅನ್ನು ಅವನಿಗೇ ಕೊಟ್ಟರು.

ಹೀಗೇ ದಿನಗಳು ಕಳೆಯುತ್ತಿದ್ದವು. ಮಳೆ ಸುರಿಯುತ್ತಿದ್ದ ಒಂದು ರಾತ್ರಿ, ಪಕ್ಕದ ಕೋಣೆಗಳಲ್ಲಿನ ಗೆಳೆಯರು ನಿದ್ದೆಗೆ ಜಾರಿದ್ದರೂ ಯಾವುದೋ ಪುಸ್ತಕ ಓದುತ್ತಿದ್ದ ಪ್ರಭಾಕರ ಅವರಿನ್ನೂ ಎಚ್ಚರವಾಗಿದ್ದರು. ಅಷ್ಟರಲ್ಲಿ ಮನೆಯ ಅಂಗಳದಲ್ಲೇನೋ ಗಲಾಟೆ. ಹೊರಗೆ ಬಂದು ನೋಡಿದರೆ ಅಲ್ಲೊಂದು ಗುಂಪು! ಕೆಲಸದವನ ಹೆಸರು ಹೇಳಿ, ‘‘ಅವನು ಇಲ್ಲಿದ್ದಾನಾ?’’ ಎಂದು ಗುಂಪು ಪ್ರಶ್ನಿಸಿತು. ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬನನ್ನು ತೋರಿಸಿ, ‘‘ಈ ಮುದುಕಪ್ಪನ ಹೆಂಡತಿಯನ್ನು ಹಾರಿಸಿಕೊಂಡು ಬಂದಿದ್ದಾನೆ. ಅವನನ್ನು ನಾನು ಸುಮ್ಮನೆ ಬಿಡುವುದಿಲ್ಲ’’ ಎಂದು ಗುಂಪಿನಲ್ಲಿದ್ದವರು ಕೂಗಾಡಿದರು. ಆ ವೇಳೆಗೆ ಪ್ರಭಾಕರ ಅವರ ಗೆಳೆಯರೂ ಎದ್ದುಬಂದಿದ್ದರು. ಕೊನೆಗೆ, ‘‘ಬೆಳಗ್ಗೆ ಬನ್ನಿ, ಮಾತನಾಡೋಣ’’ ಎಂದು ಗುಂಪನ್ನು ಸಾಗಹಾಕಿದ್ದಾಯಿತು.

ಬೆಳಗ್ಗೆಯೂ ಆಯಿತು. ಕಣ್ಣುಜ್ಜಿಕೊಂಡು ಮನೆಯಿಂದ ಹೊರಬಂದ ಪ್ರಭಾಕರ ಅವರಿಗೆ ಕೈತೋಟದಲ್ಲಿ ಕೆಲಸ ಮಾಡುತ್ತಿದ್ದ ಗೆಳೆಯ ಕಾಣಿಸಿದ. ‘‘ನಮ್ಮ ಚಹಾ ನಾವೇ ಮಾಡಿಕೊಳ್ಳಬೇಕು’’ ಎಂದು ಬೇಸರದಿಂದ ಹೇಳಿದ. ಅಷ್ಟರಲ್ಲಿ ಪ್ರಭಾಕರ ಅವರ ಕಣ್ಣಮುಂದೆಯೇ ಕೆಲಸದ ವ್ಯಕ್ತಿ ತಲೆತಗ್ಗಿಸಿಕೊಂಡು ಸರಿದುಹೋದ. ಅವನ ಹಿಂದೆ ಒಬ್ಬ ಹೆಂಗಸು! ಯಾರೂ ಯಾವ ಮಾತನ್ನೂ ಆಡಲಿಲ್ಲ. ಸ್ವಲ್ಪ ಸಮಯದ ನಂತರ ಸಾವರಿಸಿಕೊಂಡ ಗೆಳೆಯರು ಅಡುಗೆಮನೆಗೆ ಹೋಗಿ ನೋಡಿದರೆ– ಹಾಸಿಗೆ, ಹೆಣ್ಣುಮಕ್ಕಳ ವಸ್ತುಗಳು ಸೇರಿದಂತೆ ಒಂದು ಕುಟುಂಬ ವಾಸ ಮಾಡುತ್ತಿದ್ದ ಎಲ್ಲ ಚಹರೆಗಳೂ ಅಲ್ಲಿದ್ದವು. ತಿಂಗಳುಗಳ ಕಾಲ ಈ ಗೆಳೆಯರ ಗಮನಕ್ಕೇ ಬಾರದೆ, ಅವರ ಮನೆಯಲ್ಲೇ ಸಂಸಾರವೊಂದು ನಡೆದಿತ್ತು! –ಹೀಗೆ ಹಳೆಯ ಪ್ರಸಂಗವನ್ನು ನೆನಪಿಸಿಕೊಂಡು ಪ್ರಭಾಕರ ನಕ್ಕರು, ತಮ್ಮನ್ನು ತಾವು ತಮಾಷೆ ಮಾಡಿಕೊಳ್ಳುವಂತೆ.

ಪತ್ರಕರ್ತರಾಗಿ ದೇಶ ಸುತ್ತಿರುವ ಪ್ರಭಾಕರ ಅವರು ಕರ್ನಾಟಕ ಸುತ್ತಿರುವುದು ಮಾತ್ರ ಅಷ್ಟಕ್ಕಷ್ಟೆ. ವೃತ್ತಿಯಿಂದ ನಿವೃತ್ತರಾಗಿ, ಮರಳಿ ಊರಿಗೆ ಬಂದ ಪ್ರಭಾಕರ ಅವರಿಗೆ ‘ನಾಡು ನೋಡುವ’ ಆಸೆಯಿದೆ. ಈ ಬಗ್ಗೆ ಒಮ್ಮೆ ಮಾತನಾಡುವಾಗ, ಅವರ ಸಂಬಂಧಿಯೊಬ್ಬರು ‘ಅದೇನೂ ದೊಡ್ಡ ವಿಷಯವಲ್ಲ’ ಎಂದು ‘ಕೆಎಸ್‌ಡಿಸಿ’ಯ ಪ್ರವಾಸವೊಂದಕ್ಕೆ ಟಿಕೇಟ್ ಮಾಡಿಸಿಕೊಟ್ಟಿದ್ದಾರೆ. ಆಸ್ತಿಕರಲ್ಲದ ಪ್ರಭಾಕರ, ಶ್ರವಣಬೆಳಗೊಳದ ಗೊಮ್ಮಟನ ಎದುರು ಮೂಕವಿಸ್ಮಿತರಾದಂತೆ. ‘‘ಹಂಪಿ ನೋಡಬೇಕು. ಆದರೆ, ನಡೆಯುವುದೇ ಕಷ್ಟ’’ ಎಂದು ತಮ್ಮ ಮಂಡಿಗಳ ಅಸಹಿಷ್ಣುತೆ ಬಗ್ಗೆ ಹೇಳಿಕೊಳ್ಳುವಾಗ ಅವರ ಧ್ವನಿಯಲ್ಲಿ ಎಂಬತ್ತು ವರ್ಷಗಳ ದಣಿವು ಇಣುಕುತ್ತಿತ್ತು.

ಮಾತಿನ ನಡುವೆ ‘ಫೇಸ್‌ಬುಕ್’ ಪ್ರಸ್ತಾಪವಾಯಿತು. ಇತ್ತೀಚೆಗೆ ‘ಫೇಸ್‌ಬುಕ್’ ಗೆಳೆತನವೊಂದು ಯುವತಿಯೊಬ್ಬಳ ಕೊಲೆಗೆ ಕಾರಣವಾದ ಪ್ರಕರಣವೊಂದನ್ನು ನೆನಪಿಸಿಕೊಂಡ ಪ್ರಭಾಕರ, ‘‘ನೀವು ಫೇಸ್‌ಬುಕ್‌ನಲ್ಲಿ ಇದ್ದೀರಾ?’’ ಎಂದರು. ಹೌದೆಂದು ತಲೆಯಾಡಿಸಿದ್ದಕ್ಕೆ ‘‘ಯಾಕಾಗಿ?’’ ಎಂದರು. ‘‘ವೃತ್ತಿಯ ಕಾರಣಕ್ಕಾದರೆ ತೊಂದರೆಯೇನೂ ಇಲ್ಲ.

ಆದರೆ, ಅಲ್ಲಿಂದಾಚೆಗೆ ಫೇಸ್‌ಬುಕ್ ಸಹವಾಸದಿಂದ ಸುಖವೇನೂ ಇಲ್ಲ. ಅದರಿಂದ ಸಮಯ ಹಾಳು. ಲೋಕದೊಂದಿಗೆ ಸಂಪರ್ಕ ಹೊಂದುವ ಭ್ರಮೆಯಲ್ಲಿ ಫೇಸ್‌ಬುಕ್ ಜೊತೆ ಗುರ್ತಿಸಿಕೊಳ್ಳುತ್ತೇವೆ. ಆದರೆ, ಮನೆಯಿಂದ ಹೊರಗೆ ಬಂದರೆ ಮಾತನಾಡಲಿಕ್ಕೆ ಹತ್ತಾರು ಜನ ಸಿಗುತ್ತಾರೆ. ಅವರೊಂದಿಗೆ ಮಾತನಾಡಲು, ಅವರನ್ನು ಅರ್ಥ ಮಾಡಿಕೊಳ್ಳಲು ನಾವು ಪ್ರಯತ್ನಿಸುವುದಿಲ್ಲ. ಮಾತನಾಡಲಿಕ್ಕೆ ಫೋನ್ ಇದೆ. ಇಂದು ಮಾತಿಗೆ ಸಿಗಲಿಲ್ಲ ಎಂದರೆ, ನಾಳೆಯೋ ನಾಡಿದ್ದೋ ಮಾತಿಗೆ ಸಿಕ್ಕೇಸಿಗುತ್ತಾರೆ. ಪತ್ರ ಬರೆಯಲಿಕ್ಕೆ ಇ-ಮೇಲ್ ಇದೆ. ಇಷ್ಟಿದ್ದರೂ ಸಂವಹನದ ಹೆಸರಿನಲ್ಲಿ ಫೇಸ್‌ಬುಕ್‌ಗೆ ಜೋತುಬೀಳುತ್ತೇವೆ’’ ಎನ್ನುವ ಅರ್ಥದ ಮಾತುಗಳನ್ನಾಡಿದ ಪ್ರಭಾಕರ ಅವರಲ್ಲಿ, ಸಾಮಾಜಿಕ ಜಾಲತಾಣಗಳ ಮೂಲಕ ತರುಣ ತರುಣಿಯರು ತಮ್ಮನ್ನು ತಾವು ವಂಚಿಸಿಕೊಳ್ಳುತ್ತಿದ್ದಾರೆ ಎನ್ನುವ ಇಂಗಿತ ಇರುವಂತಿತ್ತು.

ಪ್ರಭಾಕರ ಅವರ ಮಾತುಗಳಿಗೆ ಹೂಂಗುಡುವುದೆಂದರೆ ಅಜ್ಜಿಯ ಮಡಿಲಿನಲ್ಲಿ ತಲೆ ಹುದುಗಿಸಿಕೊಂಡು ಕಥೆಗಳನ್ನು ಕೇಳಿದಂತೆ. ಕಾಲ–ದೇಶಗಳ ಪರಿವೆಯನ್ನು ಮೀರಿದ ಆ ಕಥಾಲೋಕದ ತುದಿಮೊದಲನ್ನು ಗುರ್ತಿಸುವುದು ಕಷ್ಟ. ಮಾತಿನ ನಡುವೆಯೂ ನಾವು ಮರಳಬೇಕಾದ ದೂರದ ಅಂದಾಜು ನೆನಪಿಸಿಕೊಂಡು, ಪ್ರಭಾಕರ ನಮ್ಮನ್ನು ಬೀಳ್ಕೊಡಲು ಸಿದ್ಧರಾದರು. ‘‘ನೀವು ಇಲ್ಲಿಯೇ ಉಳಿದುಕೊಳ್ಳಬಹುದು. ಪ್ರತ್ಯೇಕ ಕೋಣೆಯಿದೆ. ಮಂಚ – ಹಾಸಿಗೆಯೂ ಇದೆ. ಆದರೆ ಹೊದಿಕೆಯಿಲ್ಲ” ಎಂದರು.

ಬೆತ್ತ ಊರಿಕೊಂಡು, ಬಾಗಿಲಿನ ಚೌಕಟ್ಟಿನಲ್ಲಿ ಒಂದು ಕಲಾಕೃತಿಯಂತೆ ನಿಂತ ಪ್ರಭಾಕರ ಹುಷಾರಾಗಿ ಹೋಗಿ ಎಂದು ಅಜ್ಜನ ಕಾಳಜಿಯಲ್ಲಿ ಕೈ ಅಮುಕಿದರು.

ಕಠಾರಿಪಾಳ್ಯದ ಕಿರುರಸ್ತೆಗಳಿಂದ ಬೆಂಗಳೂರಿನ ಮುಖ್ಯರಸ್ತೆಗೆ ಕಾರು ಹೊರಳಿಕೊಂಡಿತು. ಅತ್ತ ತಮಗಿಂತಲೂ ಮೂರು ವರ್ಷ ಕಿರಿಯ ಪ್ರಾಯದ ‘ಆನಂದ ನಿಲಯ’ದಲ್ಲಿ  ಕಾಮರೂಪಿ ಅವರು ಮತ್ತೆ ಪುಸ್ತಕಗಳ ಪುಟ ಮಗುಚುತ್ತಿರಬೇಕು.

(ಕಾಮರೂಪಿ ಅವರನ್ನು ಸಂದರ್ಶಿಸಿದ ‘ಮುಕ್ತಛಂದ’ ತಂಡ: ಚ.ಹ.  ರಘುನಾಥ, ಎನ್‌.ಎ.ಎಂ. ಇಸ್ಮಾಯಿಲ್‌, ಎನ್. ವಿಶಾಖ ಹಾಗೂ ಎನ್. ಜಗನ್ನಾಥ ಪ್ರಕಾಶ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT