ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಕಟ್ಟಾಳು ದೇ. ಜವರೇಗೌಡ

Last Updated 30 ಮೇ 2016, 19:59 IST
ಅಕ್ಷರ ಗಾತ್ರ

ಮೈಸೂರು: ದೇಜಗೌ ನಿಧರಾಗಿದ್ದಾರೆ ಎಂಬುವುದನ್ನು ನಂಬುವುದಕ್ಕೆ ಕಷ್ಟವಾಗುತ್ತಿದೆ. ತಮ್ಮ ಗ್ರಾಮ ಜೀವನದಲ್ಲಿ ಶಾಲೆಗೆ ಸೇರುವ ಸಂದರ್ಭದಲ್ಲಿ ನಿರಕ್ಷಿಗಳಾದ ಪೋಷಕರು ನೀಡಿದ ಹುಟ್ಟಿದ ತಾರೀಖಿನಿಂದಾಗಿ ಅವರು ಅಧಿಕೃತವಾಗಿ ಶತಾಯುಗಳಾಗಿಲ್ಲದಿರಬಹುದು; ಆದರೆ ಅವರು ಶತಾಯುಗಳೇ. ಆ ಸಂಭ್ರಮವನ್ನು ಜನ ಒಂದು ವರ್ಷದಿಂದಲೇ ಎಲ್ಲ ಕಡೆ ಆಚರಿಸುತ್ತಾ ಬಂದಿದ್ದರು. ಅಧಿಕೃತವಾಗಿ ಅವರು ಶತಾಯುಗಳಾಗುವರು ಎಂದು ನಾವೆಲ್ಲ ತಿಳಿದಿದ್ದೆವು.

ಓದು, ಬರಹ ಬಾರದ ತಂದೆ ತಾಯಿಗಳ ಉದರದಲ್ಲಿ ಜನಿಸಿದ್ದರೂ ಜನ್ಮ ಜನ್ಮಾಂತರದಿಂದ ವಿದ್ಯೆಯನ್ನು ಹೊತ್ತು ಬಂದಿದ್ದಾರೆ ಎನ್ನುವ ರೀತಿಯಲ್ಲಿ ಸತತ ಅಧ್ಯಯನಶೀಲರಾಗಿದ್ದರು. ಅವರ ಆತ್ಮಚರಿತ್ರೆ ‘ಹೋರಾಟದ ಬದುಕು’ ಓದಿದರೆ ಗೊತ್ತಾಗುತ್ತದೆ. ಅವರು ವಿದ್ಯೆಯನ್ನು ಹೇಗೆ ಗಳಿಸಿಕೊಂಡರು ಎಂಬುವುದು. ಅವರ ಸಾಮರ್ಥ್ಯಕ್ಕೆ ಎಲ್ಲೆಗಳಿರಲಿಲ್ಲ.

ಆ ಶಕ್ತಿ ಪ್ರಾಪ್ತವಾದದ್ದು ಕುವೆಂಪು ಅವರ ಆಶೀರ್ವಾದದ ಬಲದಿಂದ ಎಂದು ಅವರು ಮೇಲಿಂದ ಮೇಲೆ ಹೇಳುತ್ತಿದ್ದರು; ಆ ಸಂಗತಿಯನ್ನು ಅವರು ದಾಖಲೆ ಮಾಡಿದ್ದಾರೆ ಕೂಡ.

ಒಬ್ಬ ಮೇರು ಸಾಹಿತಿಯಾಗಿ ಸುಮಾರು 400 ಗ್ರಂಥಗಳನ್ನು ರಚಿಸಿರುವ ದೇಜಗೌ ತಮ್ಮ ಗ್ರಂಥಗಳ ಪುನರ್ ಮುದ್ರಣದಿಂದ ಲಭ್ಯವಾಗುತ್ತಿದ್ದ  ಧನರಾಶಿಯಿಂದಲೇ ಸುಖದ ಸುಪ್ಪತ್ತಿಗೆಯಲ್ಲಿ ಇರಬಹುದಾಗಿತ್ತು. ಆದರೆ ಸರಳ ಜೀವನದ ಮಹತ್ವವನ್ನು ಕುವೆಂಪು ಅವರಿಂದ ಕಲಿತಿದ್ದರು. ಹಾಗಾಗಿ ‘ವಿಶ್ವಚೇತನ ಕಲಾ ನಿಲಯ’ ಎಂಬ ಪುಟ್ಟ ಕುಟೀರದಲ್ಲಿ ಅವರ ಓದು, ಬರಹ.

ಆ ಪುಟ್ಟ ಕುಟೀರ ನಾಡಿನ ಖ್ಯಾತ ಸಾಹಿತ್ಯಗಳನ್ನಷ್ಟೇ ಅಲ್ಲ, ಜೀವನದ ನಾನಾ ರಂಗಗಳ ಧೀಮಂತರನ್ನು ಕೈ ಬೀಸಿ ಕರೆಯುತ್ತಿತ್ತು. ಅದರಲ್ಲಿ ಅಂತರ್ಗತವಾದ ಪುಟ್ಟ ಜಗುಲಿಯ ಮೇಲೆ ದೇಜಗೌ ಎದುರು ಬದುರಿಗೆ ಕುಳಿತು ಸಾಹಿತ್ಯ, ಸಂಸ್ಕೃತಿ, ಕಲೆ, ರಾಜಕೀಯ, ಕನ್ನಡದ ಆಗುಹೋಗುಗಳ ಬಗ್ಗೆ ಮಾತನಾಡದವರೇ ಇಲ್ಲ.

ಅವರು ಯಾವಾಗಲೂ ಓದುತ್ತಿದ್ದರು, ಬರೆಯುತ್ತಿದ್ದರು. ಅಷ್ಟಾಗಿಯೂ ಬರೆಯುತ್ತಿದ್ದ ಲೇಖನಿ ಮತ್ತು ಹಾಳೆಯನ್ನು ಪಕ್ಕಕ್ಕಿಟ್ಟು ಬಂದವರ ಜತೆ ಮಾತನಾಡುವುದಕ್ಕೆ ಸಮಯ ಮಾಡಿಕೊಳ್ಳುತ್ತಿದ್ದರು. ಅವರ ಏಕಾಗ್ರತೆಗೆ ಭಂಗ ತಂದೆವಲ್ಲ ಎಂದು ನಮಗೆ ಪಾಪಪ್ರಜ್ಞೆ ಶುರುವಾಗುತ್ತಿತ್ತು.

ಅವರು ಕೇವಲ ಸಾಹಿತಿ ಆಗಿದ್ದರೆ  ಸಾವಿರ ಗ್ರಂಥಗಳನ್ನು ರಚಿಸಿ ಒಂದು ವಿಕ್ರಮವನ್ನೇ ಸ್ಥಾಪಿಸುತ್ತಿದ್ದರು. ತಮ್ಮ ಉತ್ಕೃಷ್ಟ ಸಮಯವನ್ನು ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಮೀಸಲಿಟ್ಟರು. ಇಳಿವಯಸ್ಸಿನಲ್ಲಿ ಕ್ಷೀಣಿಸುವ ಆರೋಗ್ಯವನ್ನು ಲೆಕ್ಕಿಸದೇ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ತಂದುಕೊಡಲು ಉಪವಾಸ ಸತ್ಯಾಗ್ರಹ ನಡೆಸಿದರು.

ಕಡಿಮೆ ಅಂಕಗಳನ್ನು ಪಡೆದು ಶಿಕ್ಷಣವನ್ನು ನಾವು ಮುಂದುವರಿಸುವುದಕ್ಕೆ ಆಗುತ್ತಾ ಎಂದು ಕಂಗಾಲಾದ ಬಡ ಹಿನ್ನೆಲೆಯ ಮಕ್ಕಳಿಗಾಗಿ ಶಾಲೆ –ಕಾಲೇಜುಗಳನ್ನು ತೆರೆದರು.

ಕನ್ನಡದ ಹಿರಿಯ ಚೇತನಗಳ ನೆನಪು ಸಾರ್ವಜನಿಕರಿಂದ ಮಾಸದ ರೀತಿ ಮಾಸ್ತಿ, ಪುತಿನ, ಬಿಎಂಶ್ರೀ ಮೊದಲಾದವರ ನೆನಪಿನ ಉಪನ್ಯಾಸಗಳನ್ನು ಏರ್ಪಡಿಸಿದರು.

ದೇಜಗೌ ಕುಲಪತಿಗಳಾಗಿದ್ದ 70ರ ದಶಕದಲ್ಲಿ ನಾನು ದೂರದಿಂದ ಅವರನ್ನು ಕಂಡಿದ್ದೆ. ಈ ಅರ್ಧ ಶತಮಾನದ ಅವಧಿಯಲ್ಲಿ ಅವರು ಇಡೀ ಕರ್ನಾಟಕದಲ್ಲಿ ಒಬ್ಬ ಪ್ರಮುಖ ಸಾಹಿತಿಯಾಗಿ ಕಂಗೊಳಿಸಿದ್ದನ್ನು ಬಲ್ಲವನಾಗಿದ್ದೇನೆ. ಅವರು ವಿಪರೀತ ಬರೆದಿದ್ದಾರೆ. ನವ್ಯರ ರೀತಿ ಬೇರೆ ಆಗಿದ್ದರಿಂದ ದೇಜಗೌ ಬರಹಕ್ಕೆ ಅವರು ಬೆಲೆ ಕಟ್ಟಲಿಲ್ಲ.

ದೇಜಗೌ ಅದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ‘ಪದವಿಟ್ಟಳು ಪದ ರೀತಿ’ ಅವರು ಬರೆಯುತ್ತಿದ್ದರು. ಒಂದು ಮಗ್ಗುಲಲ್ಲಿ ಖಾಲಿ ಇದ್ದರೆ ಆಯಿತು. ಅದು ಕರಪತ್ರ ಇರಲಿ, ಜಾಹೀರಾತಿನ ಕಾಗದ ಇರಲಿ– ಸಣ್ಣಕ್ಕೆ ಎಳ್ಳುಕಾಳಿನ ರೀತಿ ಅವರ ಬರವಣಿಗೆ. ಒಂದು ವಾಕ್ಯ ಶುರು ಮಾಡಿದ ಮೇಲೆ ಮಧ್ಯೆ ಮಧ್ಯೆ ಆಲೋಚನೆ ಏನಾದರು ಬದಲಾದರೆ ಮುಂದಿನ ಸಾಲಿನಲ್ಲಿ ಆ ಪದವನ್ನು ಬರೆದು ಹದವಾದ ಜಾಗಕ್ಕೆ ಬಾಣದ ಮೂಲಕ ತೋರಿಸುತ್ತಿದ್ದರು.

ದೇಜಗೌ ಅವರು ಅಭಿಜಾತ ಕಾವ್ಯಗಳನ್ನು ಎಷ್ಟು ಓದಿಕೊಂಡಿದ್ದರು ಎಂದರೆ ಅವರಿಗೆ ಭಾಷೆ ಕೈಕೊಟ್ಟಿದ್ದೆ ಇಲ್ಲ. ಗಂಗಾಪ್ರವಾಹದಂತೆ ಓತಪ್ರೋತವಾಗಿ ನುಡಿ ನದಿಯಾಗಿ ಹರಿಯುತ್ತಿತ್ತು. ಅವರು ವಯಸ್ಸಿನಲ್ಲಿದ್ದಾಗ ಮಾತು ಅಷ್ಟೆ. ಗಂಗಾಪ್ರವಾಹ! ಎರಡು ಗಂಟೆ, ಮೂರು ಗಂಟೆ ಮಾತನಾಡುತ್ತಿದ್ದುದು ಅಪರೂಪವಲ್ಲ.

ಎಳೆಯ ತಲೆಮಾರಿನವರನ್ನು ಅವರು ಪ್ರೋತ್ಸಾಹಿಸುತ್ತಿದ್ದ ಬಗೆ ಅನನ್ಯ. ಹಾಗಾಗಿ ಅವರು ಬರೆದಿರುವ ಮುನ್ನುಡಿಗಳು ಎಂದೋ ಮುನ್ನೂರನ್ನು ದಾಟಿಯಾಗಿದೆ. ಮುನ್ನುಡಿಗೆ ಮೀಸಲಾದ ಮೂರ್ನಾಲ್ಕು ಪುಸ್ತಕಗಳನ್ನು ಅವರು ಹೊರತಂದಿದ್ದಾರೆ. ದೇಜಗೌ ಅವರ ಪ್ರೋತ್ಸಾಹಕರವಾದ ಮಾತುಗಳಿಂದ ಸ್ಫೂರ್ತಿಗೊಂಡು ಉತ್ತಮ ಲೇಖಕರಾಗಿ ಹೊರ­ಹೊಮ್ಮಿದವರ ಸಂಖ್ಯೆ ಗಣನೀಯ. ಇತ್ತೀಚಿನವರೆಗೂ ಅವರು ಅಂಥ ಉತ್ತೇಜನಕರವಾದ ಮಾತುಗಳನ್ನು ಬರೆದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿ 24 ವಿಭಾಗಗಳು 48 ವಿಭಾಗಗಳಾಗಿ ವಿಕಾಸವಾಗಲು ಶ್ರಮಿಸಿದರು. ಕನ್ನಡ ಅಧ್ಯಯನ ಸಂಸ್ಥೆ ಶಾಖೋಪಶಾಖೆಗಳಾಗಿ ಅರಳುವುದಕ್ಕೆ ಕಾರಣಕರ್ತರಾದರು. ಇಂದು ಆ ಸಂಸ್ಥೆ ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳ ಕನ್ನಡ ಅಧ್ಯಯನ ಸಂಸ್ಥೆಗಳಿಗೆ ಮಾದರಿಯಾಗಿದೆ. ಜಾನಪದ ವಿಭಾಗವನ್ನು ತೆರೆದು ದೇಶದಲ್ಲೇ ಪ್ರಥಮ ಎಂಬ ಹೆಗ್ಗಳಿಕೆಯನ್ನು ತಂದುಕೊಟ್ಟರು.

ದೇಜಗೌ ಅವರದು ನಿರಂತರವಾದ ಅನ್ವೇಷಣೆಯಲ್ಲಿ ತೊಡಗಿದ್ದ ಮನಸ್ಸು. ಸ್ಥಳನಾಮಗಳ ಬಗ್ಗೆ ಎಲ್ಲಿಲ್ಲದ ಕುತೂಹಲ. ಖಂಡಾಂತರಗಳನ್ನು ಬೆಸೆಯುವ ತವಕ. ಆಫ್ರಿಕನ್ ದೇಶಗಳ ಬಗ್ಗೆ, ಅಲ್ಲಿನ ಭಾಷೆಗಳ ಬಗ್ಗೆ ತಿಳಿಯುವ ತುಡಿತ. ಆಫ್ರೊ– ದ್ರವಿಡಿಯನ್ ಸಂಘವನ್ನು ಸ್ಥಾಪಿಸಬೇಕೆಂಬ ಸಂಕಲ್ಪ.

ಭಾಷಾಂತರ ಮತ್ತು ತೌಲನಿಕ ಸಾಹಿತ್ಯದ ಬಗ್ಗೆ ಸದಾ ಧ್ಯಾನಸ್ಥರಾಗಿದ್ದರು. ಕುವೆಂಪು ಸೂಚನೆಯ ಮೇರೆಗೆ ಟಾಲ್‌ಸ್ಟಾಯ್‌ ಅವರ ಮೇರುಕೃತಿಗಳ ಅನುವಾದವನ್ನು ಕೈಗೊಂಡ ದೇಜಗೌ, ಅನುವಾದ ಕ್ಷೇತ್ರಕ್ಕೆ ಸುಮಾರು ಆರು ಸಾವಿರ ಪುಟಗಳ ಕೊಡುಗೆಯನ್ನು ನೀಡಿದ್ದಾರೆ. ಹೇಗೆ ಇದೆಲ್ಲ ಸಾಧ್ಯವಾಯಿತು ಅಂತ ಕೇಳಿದರೆ ‘ಎಲ್ಲಿಗೇ ಹೋಗಲಿ ದಿನಕ್ಕಿಷ್ಟು ಅಂತ ಮಾಡಿಯೇ ತೀರುತ್ತಿದ್ದೆ’ ಎನ್ನುತ್ತಿದ್ದರು.

ಆ ಗ್ರಂಥರಾಶಿಯನ್ನು ನೆನೆಯುವಾಗ ನಮ್ಮ ಹಿರೀಕರು ನಾವು ನೇರ್ಪಾಗಿ ಬಾಳಲಿ ಎಂದು ನಮಗಾಗಿ ಇಟ್ಟ ಬ್ಯಾಂಕ್‌ ಬ್ಯಾಲೆನ್ಸಿನಂತೆ ಅವು ಗೋಚರವಾಗುತ್ತಿವೆ. ಕೃಷ್ಣಾ ಹತೀಸಿಂಗರ ‘ನೆನಪು ಕಹಿಯಲ್ಲ’ದಿಂದ ಪ್ರಾರಂಭಿಸಿ, ಜೇನ್‌ ಆಸ್ಟೀನ್‌ಳ ‘ಹಮ್ಮು ಬಿಮ್ಮು’, ಇತರ ಲೇಖಕರ ಅಕ್ಬರ್, ಗುರುನಾನಕ್, ಟಾಲ್‌ಸ್ಟಾಯ್‌ ಅವರ ‘ಯುದ್ಧ ಮತ್ತು ಶಾಂತಿ’, ‘ಅನ್ನಾ ಕೆರೊನೀನಾ’, ‘ಪುನರುತ್ಥಾನ’ ಮುಂತಾದ ಹಲವು ಹತ್ತು ಗ್ರಂಥಗಳನ್ನು ನಮಗೆ ನೀಡಿದ್ದಾರೆ.

ಕನ್ನಡದ ಪ್ರಾಚೀನ ಕವಿಗಳ ಕಾವ್ಯವನ್ನು ಕರತಲಾಮಲಕ ಮಾಡಿಕೊಳ್ಳಲು ಶ್ರಮಿಸಿದ್ದ ಕತೆಯನ್ನು ಆಗಾಗ ಹೇಳುತ್ತಿದ್ದರು. ತಲೆತಲಾಂತರದಿಂದ ವಿದ್ಯೆಯನ್ನು ದಕ್ಕಿಸಿಕೊಂಡ ಮೇಲ್ವರ್ಗದವರ ಎದುರು ಅಡಿಯಾಳಾಗದ ರೀತಿ ಕಾವ್ಯವನ್ನು ಸಿದ್ಧಿಸಿಕೊಳ್ಳಬೇಕಾದ ಒತ್ತಡವಿದ್ದಿತು.

ಆ ಒತ್ತಡವನ್ನು ಒಳ್ಳೆಯ ರೀತಿಗೆ ತಿರುಗಿಸಿಕೊಂಡು ಬೆಳೆದರು. ‘ಕುವೆಂಪು ಸಾಹಿತ್ಯ ಪ್ರಪಂಚದ ವಿಶೇಷ ಶಬ್ದಗಳ ಅರ್ಥ ತಿಳಿದಿದ್ದೇನೆ; ಆದರೂ ಇನ್ನೂ ನೂರಿನ್ನೂರು ಪದಗಳ ಅರ್ಥ ಸ್ಪಷ್ಟವಾಗಿಲ್ಲ; ಅವರು ಬದುಕಿದ್ದಾಗ ಕೇಳಿ ತಿಳಿದುಕೊಳ್ಳದೆ ತಪ್ಪು ಮಾಡಿದೆ’ ಎಂದು ದೇಜಗೌ ಪರಿತಪಿಸುತ್ತಿದ್ದರು. ‘ಕುವೆಂಪು ಕಾವ್ಯದ ಸಾವಿರಾರು ಸಾಲುಗಳು ಹಾಗೆಯೇ ಬಾಯಿಗೆ ಬರುತ್ತಿದ್ದವು; ಈಗ ಅಷ್ಟು ನೆನಪಿನಲ್ಲಿ ಉಳಿದಿಲ್ಲ’ ಎಂದು ಹೇಳುತ್ತಲೇ ನೂರಾರು ಸಾಲುಗಳನ್ನು ಉದ್ಧರಿಸುತ್ತಿದ್ದರು.

ದೇಜಗೌ ತಮ್ಮ ಸಾಹಿತ್ಯ ಸೇವೆಗಾಗಿ ದೊಡ್ಡ ದೊಡ್ಡ ಪ್ರಶಸ್ತಿಗಳನ್ನೆಲ್ಲ ಪಡೆದಿದ್ದರು. ಆದರೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅವರ ಪಾಲಿಗೆ ಒದಗಲಿಲ್ಲ. ಮನಸ್ಸಿನ ಆಳದಲ್ಲಿ ಆ ಕೊರಗು ಇತ್ತೆಂದು ತೋರುತ್ತದೆ. ಅದನ್ನು ಯಾರಾದರೂ ನೆನಪಿಸಿದರೆ ‘ಅದರ ಗೊಡವೆ ಏಕೆ? ಬಿಟ್ಟುಬಿಡಿ’ ಎನ್ನುತ್ತಿದ್ದರು.

ಒಬ್ಬ ಕುಲಪತಿಯಾಗಿ ಒಂದು ವಿವಿಯ ಸರ್ವಾಂಗೀಣವಾಗಿ ಬೆಳೆಯುವಂತೆ ಪೋಷಿಸಿ ಧನ್ಯರಾಗಿದ್ದ ದೇಜಗೌ ಅವರಿಗೆ ಸಾರ್ವಜನಿಕ ಜೀವನದಲ್ಲಿ ಒಬ್ಬ ಶಾಸಕನಾಗಿ ಭಾಗಿಯಾಗಬೇಕೆಂಬ ಆಸೆಯಿತ್ತು. ಆ ಪದವಿ ಸ್ವಲ್ಪದರಲ್ಲಿ ದಕ್ಕದೇ ಹೋದ ಸಂಗತಿಯನ್ನು ಆಗಾಗ ನೆನಪು ಮಾಡಿಕೊಳ್ಳುತ್ತಿದ್ದರು. ಶಿಕ್ಷಣ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ನೀಡುವ ಬಯಕೆ ಕಾರಣವೇ ಹೊರತು ಈ ಆಸೆಗೆ ಬೇರೆ ನಿಮಿತ್ತವಿರಲಿಲ್ಲ.

ದೇಜಗೌ ಬಳಿ ಕುಳಿತಾಗ ‘ಏನೋದುತ್ತೀದ್ದೀರಿ? ಏನು ಬರೆಯುತ್ತಿದ್ದೀರಿ?’ ಎಂದು ಕೇಳುತ್ತಿದ್ದರೇ ಹೊರತು ಇತರ ಲೌಕಿಕ ವಿಚಾರಗಳು ಸುಳಿಯುತ್ತಿರಲೇ ಇಲ್ಲ. ವ್ಯಕ್ತಿ ಯಾವುದೇ ರಂಗದಲ್ಲಿ ಕೆಲಸ ಮಾಡುತ್ತಿರಲಿ ಆ ಕ್ಷೇತ್ರದ ಅನುಭವವನ್ನು ಗ್ರಂಥ ರೂಪದಲ್ಲಿ ದಾಖಲಿಸಿದಾಗ ನಮ್ಮ ಸಾಹಿತ್ಯ ಶ್ರೀಮಂತವಾಗುತ್ತದೆ ಎಂದು ಮತ್ತೆ ಮತ್ತೆ ಹೇಳುತ್ತಿದ್ದರು. ಯಾವುದೇ ವಿಷಯವನ್ನು ಕರಗತ ಮಾಡಿಕೊಂಡು ಬರೆಯುವ ಶಕ್ತಿ ದೇಜಗೌ ಅವರಿಗಿತ್ತು. ದೇಜಗೌ ಲೇಖನಿಯನ್ನು ಕೆಳಗಿಟ್ಟಿದ್ದೇ ಇಲ್ಲ.

ಸಾಧಾರಣ ಗ್ರಾಮೀಣ ಕುಟುಂಬದಲ್ಲಿ ಜನಿಸಿದ್ದ ದೇಜಗೌ ಅಧ್ಯಯನ, ಪರಿಶ್ರಮ, ದೊಡ್ಡವರ ನಿರಂತರ ಒಡನಾಟ, ದೊಡ್ಡ ಧ್ಯೇಯಗಳ ಸಾಧನೆಯಿಂದಾಗಿ ಒಬ್ಬ ಮೇರು ಸದೃಶ ವ್ಯಕ್ತಿಯಾಗಿ ಬೆಳೆದರು. ಮುಖ್ಯವಾಗಿ ಹಲವಾರು ಸಾಹಿತಿಗಳನ್ನು ಬೆಳೆಸಿದರು. ಒಬ್ಬ ವ್ಯಕ್ತಿಯ ಬದುಕಿನ ಸಾರ್ಥಕತೆ ಇರುವುದು ಈ ಪರೋಪಕಾರದಲ್ಲಿ.

ಕರ್ನಾಟಕವೆಂಬ ಕುಟುಂಬದ ಒಬ್ಬ ದೊಡ್ಡ ಯಜಮಾನ ಕಣ್ಮರೆಯಾದಂತಾಗಿದೆ. ಆದರೆ, ಅವರು ಬಿಟ್ಟುಹೋಗಿರುವ ಗ್ರಂಥರಾಶಿ ಮುಂದಿನ ತಲೆಮಾರಿಗೆ ದಾರಿದೀಪವಾಗಿರುವುದರಲ್ಲಿ ಸಂದೇಹವಿಲ್ಲ. ಅವರ ಚೇತನಕ್ಕೆ ನನ್ನ ನೂರು ನಮನಗಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT