ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುವ ಬೆನ್ನುನೋವು

Last Updated 20 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಸವಿತ, 35 ವರ್ಷದ ತರುಣಿ. ಒಂದು 4 ವರ್ಷದ ಮಗು. ಪ್ರಸವ ಆದ ನಂತರದಲ್ಲಿ ಬೆನ್ನು ನೋವು ಶುರುವಾಗಿದ್ದು 4 ವರ್ಷವಾದರೂ ಕಡಿಮಯಾಗಲೇ ಇಲ್ಲ. ಮನೆಯಲ್ಲಿ ಸಹಾಯಕ್ಕೆ ಯಾರೂ ಇರದೆ ಎಲ್ಲಾ ಕೆಲಸ ಅವಳೇ ಮಾಡಿಕೊಳ್ಳ ಬೇಕಾದ್ದರಿಂದ ಮತ್ತು ಕೆಲಸ ಮಾಡುವ ಸರಿಯಾದ ವಿಧಾನ ತಿಳಿಯದ ಕಾರಣ ಅದು ಶಮನವಾಗಲೇ ಇಲ್ಲ.  ಕೆಲಸ ಮಾಡಲು ಅಸಾಧ್ಯ ಎಂಬ ಪರಿಸ್ಥಿತಿಗೆ ತಲುಪಿದಳು.

ರಾಧಿಕ, 40ರ ಮಹಿಳೆ ಹಲವು ದಿನಗಳಿಂದ ಬೆನ್ನುನೋವು ಕಾಣಿಸಿಕೊಂಡು ಕ್ರಮೇಣವಾಗಿ ಹೆಚ್ಚುತ್ತಾ ಹೋಯಿತು. ತಡೆಯಲು ಕಷ್ಟವಾದಾಗ ವೈದ್ಯರ ಬಳಿ ಹೋದಳು. ಮೂತ್ರ ಪರೀಕ್ಷೆ ಮಾಡಿಸಿದಾಗ ಸೋಂಕು ಇರುವುದು ವೈದ್ಯರಿಗೆ ತಿಳಿದು ಬಂದಿತು.

ಸಂಗೀತ, 20 ವರ್ಷದ ಹುಡುಗಿ. ಒಂದು ದಿನ ಇದ್ದಕ್ಕಿದ್ದ ಹಾಗೆ ಬೆನ್ನು ನೋವು ಶುರುವಾಗಿದ್ದು ಕಡಿಮೆಯಾಗಲೇ ಇಲ್ಲ. ಅದರೊಂದಿಗೆ ವಾಂತಿಯಾಗಲು ಶುರುವಾಯಿತು. ಸ್ಕ್ಯಾನಿಂಗ್‌ ಮಾಡಿಸಿದಾಗ ಮೂತ್ರಕೋಶದಲ್ಲಿ ಕಲ್ಲಿದೆ ಎಂದರು.  ಚಿಕಿತ್ಸೆ ನಂತರ ನೋವು ನಿವಾರಣೆಯಾಯಿತು.

ಲಕ್ಷ್ಮಮ್ಮ, 65 ವರ್ಷದ ಹೆಂಗಸು. ಯಾವುದೇ ತೊಂದರೆ ಇಲ್ಲದೆ ಮಕ್ಕಳು ಮೊಮ್ಮಕ್ಕಳೊಂದಿಗೆ ಕೆಲಸ ಮಾಡಿಕೊಂಡಿದ್ದವಳು. ಅವಳಿಗೆ ನಿಧಾನವಾಗಿ ಬೆನ್ನು ನೋವು ಶುರುವಾಯಿತು. ಕ್ರಮೇಣ ಅದು ಹೆಚ್ಚಿ ಅವಳಿಗೆ ತಡೆಯಲು ಅಸಾಧ್ಯವಾದಾಗ ಮಗನಿಗೆ ತಿಳಿಸಿದಳು. ಅವನು ವೈದ್ಯರ ಬಳಿ ಕರೆಯ್ದೊದಾಗ ಯಾವುದೇ ತೊಂದರೆ ಕಾಣಲಿಲ್ಲ. ರಕ್ತ ಮೂತ್ರ ಎರಡೂ ಪರೀಕ್ಷಿಸಿದರೂ ಏನೂ ತೊಂದರೆ ಕಾಣದು.

ನೋವು ನಿವಾರಕಗಳನ್ನು ಕೊಟ್ಟು ಶಮನ ಮಾಡಿದರೂ ಬಿಟ್ಟ ನಂತರ ಪುನಃ ಬೆನ್ನುನೋವು ಶುರುವಾಯಿತು. ಸ್ಕ್ಯಾನಿಂಗ್‌ ಮಾಡಿಸಿದಾಗ ಅವರ ಗರ್ಭಾಶಯದಲ್ಲಿ ಗಡ್ಡೆ ಇರುವುದು ತಿಳಿಯಿತು.
ಹೀಗೆ ಹೇಳುತ್ತಾ ಹೋದರೆ ಬೆನ್ನುನೋವಿಗೆ ಕಾರಣಗಳು ಹಲವು.

ಬೆನ್ನು ನೋವಿನ ಕಾರಣಗಳು:
ಬೆನ್ನಿನ ಭಾಗದಲ್ಲಿ ಬೆನ್ನು ಹುರಿ, ಬೆನ್ನು ಮೂಳೆ, ಸ್ನಾಯು,  ನರ, ಮಾಂಸಖಂಡ, ಕೆಲವು ಅಂಗಗಳಾದ ಗರ್ಭಾಶಯ, ಅಂಡಾಶಯ, ಮೂತ್ರಕೋಶವಿರುತ್ತದೆ. ಇದರಲ್ಲಿ ಯಾವುದಕ್ಕೆ ತೊಂದರೆಯಾದರೂ ಬೆನ್ನು ನೋವು ಬರುತ್ತದೆ.

*ಜ್ವರ ಬಂದಾಗ, ಶ್ರಮದ ಕೆಲಸ ಮಾಡಿದಾಗ ಇದು ಸಾಮಾನ್ಯ. ಇದಕ್ಕೆ ವಿಶ್ರಾಂತಿಯೇ ಪರಿಹಾರ.

*ಬೆನ್ನು ಹುರಿಗೆ ಪೆಟ್ಟು ,ತಪ್ಪಾದ ಕೂರುವ ಭಂಗಿ, ನಿಲ್ಲುವ ಭಂಗಿ, ಮಲಗುವ ಭಂಗಿ, ಭಾರ ಎತ್ತುವ ಭಂಗಿಯಿಂದ ಕ್ರಮೇಣವಾಗಿ ಬೆನ್ನುಹುರಿಗೆ ಪೆಟ್ಟು ಬಿದ್ದು ನೋವು ಶುರುವಾಗುತ್ತದೆ

*ಬೆನ್ನಿನಲ್ಲಿನ ನರದ ತೊಂದರೆ- ಮೂಳೆ ಜರುಗಿದರಿಂದಲೋ, ಅಲ್ಲಿ ಯಾವುದಾದರೂ ಗಡ್ಡೆ ಇದ್ದಲ್ಲಿ, ಹೊಡೆತ ಬಿದ್ದಿದ್ದರೆ ನರಕ್ಕೆ ಪೆಟ್ಟಾಗುತ್ತದೆ. ಅದರಿಂದ ಬೆನ್ನು ನೋವು ಬಂದು ಅದು ಕಾಲಿಗೆ ಹರಿಯುತ್ತದೆ. ಕಾಲಿನಲ್ಲಿ ಸ್ಪರ್ಶ ಜ್ಞಾನ ಕಡಿಮೆಯಾಗುವುದು, ಮುಂದೆ ಬಗ್ಗಿದರೆ ನೋವು ಹೆಚ್ಚಾಗುವುದು, ಒಂದು ಕಡೆಗೆ ದೇಹ ಬಾಗುವುದು, ಅತಿಯಾದ ನೋವು ಇದರ ಲಕ್ಷಣವಾಗಿರುತ್ತದೆ.

*ಮೂತ್ರಪಿಂಡದ ತೊಂದರೆ, ಗರ್ಭಕೋಶದ ತೊಂದರೆ, ಅಂಡಕೋಶದ ತೊಂದರೆಯಿಂದ ಬೆನ್ನುನೋವು ಕಾಣಿಸಿಕೊಳ್ಳಬಹುದು.

*ಗರ್ಭಿಣಿಯರಲ್ಲಿ ಬೆನ್ನುನೋವು ಸಾಮಾನ್ಯ.

ತಡೆಗಟ್ಟುವ ಉಪಾಯಗಳು ಹೀಗಿವೆ
*ಬೆನ್ನು ಹುರಿಗೆ ಶಕ್ತಿಕೊಡುವ ವ್ಯಾಯಾಮಗಳನ್ನು ಪ್ರತಿದಿನ ಮಾಡುವುದು. ವಾಕಿಂಗ್, ಜಾಗಿಂಗ್‌, ಸೂರ್ಯನಮಸ್ಕಾರ ಕೂಡ ಬೆನ್ನಿಗೆ ಬಲ ಕೊಡುತ್ತದೆ.

*ತೂಕ ಹೆಚ್ಚದಂತೆ ನೋಡಿಕೊಳ್ಳುವುದು.

*ಮಲಗಲು ಗಟ್ಟಿ ಹಾಗು ಸಮತಟ್ಟಿನ ಹಾಸಿಗೆಯನ್ನು ಉಪಯೋಗಿಸುವುದು. ಆದಷ್ಟು ನೇರ, ಬೆನ್ನಿನ ಮೇಲೆ ಅಥವಾ ಎಡಮಗ್ಗಲಲ್ಲಿ ಮಲಗುವುದು. 

*ಕೂರುವಾಗ ನಿಲ್ಲುವಾಗ ನೇರವಾದ ಭಂಗಿಯನ್ನು ಅಳವಡಿಸಿಕೊಳ್ಳುವುದು

*ಕೆಳಗಿಂದ ಭಾರ ಎತ್ತುವಾಗ ಕೂತು ಎತ್ತುವುದು ಸರಿಯಾದ ರೀತಿ. ಎಂದಿಗೂ ಬಗ್ಗಿ ಎತ್ತಬಾರದು.

*ಎತ್ತರ ಹಿಮ್ಮಡಿಯ ಚಪ್ಪಲಿಗಳನ್ನು ಬಳಸಬಾರದು.

*ಬಿಗಿಯಾದ ಉಡುಪುಗಳನ್ನು ಧರಿಸಬಾರದು

*ಭಾರದ ಚೀಲಗಳನ್ನು ಹೊರುವಾಗ ಎರಡೂ ಕಡೆ ಸಮವಾದ ತೂಕವನ್ನು ಹೊರುವುದು ಒಳಿತು.

*ಬೆನ್ನಿಗೆ ಬೆಲ್ಟ್‌ಗಳನ್ನು ಧರಿಸಬಹುದು.ಮೂತ್ರದ ಸೋಂಕು, ಮೂತ್ರಪಿಂಡದಲ್ಲಿ ಕಲ್ಲು, ಗರ್ಭಾಶಯದ ತೊಂದರೆ, ಅಂಡಾಶಯದ ತೊಂದರೆ ಇದ್ದಲ್ಲಿ ಇದರಲ್ಲಿ ಬೆನ್ನು ನೋವಿಗೆ ಕಾರಣವೇನೆಂದು ಕಂಡುಕೊಂಡ ನಂತರ ತೊಂದರೆ ಮೂತ್ರಾಶಯದ್ದಾದರೆ

*ಹೆಚ್ಚು ನೀರುಕುಡಿಯುವುದು,

*ಪ್ರತಿ ದಿನ ಬೆಳಿಗ್ಗೆ ಬಾಳೆದಿಂಡಿನ ರಸ,  ಎಳನೀರು, ನೀರು  ಸೇವಿಸಬೇಕು.

*ಕುಂಬಳಕಾಯಿ ರಸ ಸೇವನೆ ಮಾಡಿದರೆ ಬೆನ್ನುನೋವನ್ನು ಒಂದು ಹಂತದ ವರೆಗೆ ತಡೆಗಟ್ಟಬಹುದು

*ಉಳಿದಂತೆ ತೊಂದರೆಗಳಿಗೆ ಸೂಕ್ತ ಚಿಕಿತ್ಸೆ ಪಡಿಯಬೇಕುಚಿಕಿತ್ಸೆ- ಪಿಚು, ಉತ್ತರ ಬಸ್ತಿ, ಪ್ರಕ್ಷಾಲನ, ಬಸ್ತಿ.ಧನುರಾಸನ, ವೀರಭದ್ರಾಸನ, ಪಾರ್ಶ್ವಕೋಣಾಸನ, ಭಾರದ್ವಜಾಸನ, ಪರಿವೃತ್ತ ತ್ರಿಕೋನಾಸನ, ದಂಡಾಸನ, ಪರಿವೃತ್ತ ಜಾನು ಶೀರ್ಶಾಸನ, ಧನುರಾಸನ, ಸೇತುಭಂದಾಸನ, ಉಶ್ತ್ರಾಸನ, ಮಾರ್ಜಾಲಾಸನ, ಬಿಡಾಲಾಸನ, ಅಧೋಮುಖ ಶ್ವಾನಾಸನ, ಗರುಡಾಸನ ಮುಂತಾದವುಗಳು ಬೆನ್ನುನೋವು ನಿವಾರಣೆಗೆ ಉಪಯುಕ್ತವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT