ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನಿನ ‘ಅಗ್ನಿಪರೀಕ್ಷೆ’ಯ ಪ್ರಸ್ತುತತೆ

Last Updated 27 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನನ್ನ ತಾಯಿಯ ಕಡೆಯಿಂದ ಹಾಗೂ ನನ್ನ ಪತಿಯ ತಾಯಿಯ ಕಡೆಯಿಂದ ನನ್ನ ಪೂರ್ವ­ಜರು ಶ್ರೀರಾಮ­ಚಂದ್ರಾಪುರ ಮಠದ ಶಿಷ್ಯರು.  ಮಠದ ಬಹುತೇಕ ಯತಿಗಳು ತಪೋ­ನಿಷ್ಠರು ಮತ್ತು ಮಹಾನ್ ಸಾಧಕರು. ಅಂಥ ಸಾಧಕ ತಪಸ್ವಿಗಳು ಕುಳಿತ ಪೀಠಕ್ಕೆ ಕೋಟಿ ಕೋಟಿ ನಮನಗಳು.

ಶ್ರೀಮಠವು ತನ್ನ ಇತಿಹಾಸದಲ್ಲಿಯೇ ಹಿಂದೆ ಇಂಥ ವಿವಾದಕ್ಕೆ ಒಳಗಾಗಿರಲಿಲ್ಲ. ಈಗಿನ ವಿವಾದ ನನ್ನಂತಹ ಯಾವುದೇ ಸ್ವಹಿತಾಸಕ್ತಿ ಇಲ್ಲದ, ಕೇವಲ ಶ್ರದ್ಧೆಯೊಂದನ್ನೇ ಹೊಂದಿರುವ ಲಕ್ಷಾಂತರ ಭಕ್ತರ ಮನಸ್ಸಿಗೆ ಗಾಸಿ ಉಂಟು­ಮಾಡಿದೆ. ಈಗಿನ ಪೀಠಾಧಿಪತಿಗಳ ಮೇಲೆ ಅತ್ಯಾಚಾರದ ಹೀನ ಆರೋಪ ಬಂದಿದೆ. ಈ ಆರೋಪ ಸತ್ಯವೋ, ಸುಳ್ಳೋ ಎನ್ನುವುದು ನ್ಯಾಯಾಲಯದಲ್ಲಿ ಸಾಬೀತಾಗಲಿ. ಆದರೆ ಈ ವಿವಾದದ ಹಿನ್ನೆಲೆಯಲ್ಲಿ ಸಾವಿರಾರು ಜನರಲ್ಲಿ ಎದ್ದಿರುವ ಪ್ರಶ್ನೆಗಳಿಗೆ ಶ್ರೀ ಮಠವು ಉತ್ತರಿಸ­ಬೇಕಾದ ಬಾಧ್ಯತೆ ಹೊಂದಿದೆ ಎನ್ನುವುದು ನನ್ನ ಅನಿಸಿಕೆ.

ಶ್ರೀರಾಮಚಂದ್ರಾಪುರ ಮಠವು ಶ್ರೀರಾಮ­ಚಂದ್ರನನ್ನು ಅಧಿದೇವತೆಯಾಗಿ ಹೊಂದಿರುವ ಮಠ. ಈಗಿನ ಪೀಠಾಧಿಪತಿಗಳು ತಮ್ಮ ಸಹಿ­ಯನ್ನು ‘ಶ್ರೀರಾಮ’ ಎಂದೇ ಹಾಕುತ್ತಾರೆಂದು ಕೇಳಿ­ದ್ದೇನೆ. ಜೊತೆಗೆ ತಮ್ಮ ಅದ್ಭುತ ವಾಗ್ಝರಿಯ ‘ರಾಮಕಥಾ’ ಮೂಲಕ ರಾಮಾಯಣವನ್ನು ಲಕ್ಷಾಂತರ ಪಾಮರರಿಗೆ ಮುಟ್ಟಿಸುವ ಕಾರ್ಯ­ದಲ್ಲಿ ನಿರತರಾದವರು. ಆದ್ದರಿಂದ ಶ್ರೀರಾಮ­ಚಂದ್ರನ ಹಾಗೂ ರಾಮಾಯಣದಲ್ಲಿ ಬರುವ ಎಲ್ಲ ಆದರ್ಶಗಳನ್ನು ತಾವೇ ಸ್ವತಃ ಅನುಸರಿಸುವ ಮೂಲಕ ಭಕ್ತಾದಿಗಳಿಗೆ ಹಾಗೂ ಸಾಮಾನ್ಯ ಜನರಿಗೆ ಪ್ರೇರಣೆ ನೀಡುವಂತಹ ಹೊಣೆಗಾರಿಕೆ­ಯನ್ನು ಅವರು ಹೊರಬೇಕು ಎಂದು ಜನ ಅಪೇಕ್ಷಿಸುತ್ತಾರೆ. 

‘ರಾಮಕಥೆ’ಯ ಪ್ರವಚನಕಾರರಾಗಿರುವ ಶ್ರೀಗಳು ಅದರೊಳಗಿನ ಆದರ್ಶಗಳಿಗೆ ವಿರುದ್ಧ­ವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬುದು
ಅನೇ­ಕರ ಅನಿಸಿಕೆ. ಬಾಯಿಬಿಟ್ಟು ಹೇಳಲು ಹೆದ­ರಿಕೆ ಇದೆಯಾದರೂ ತುಂಬಾ ಜನರ ಮನಸ್ಸಿನಲ್ಲಿ ಇಂತಹ ಪ್ರಶ್ನೆಗಳು ಎದ್ದಿರುವುದು ಸುಳ್ಳಲ್ಲ.

ರಾಮಾಯಣದ ಕಠಿಣ ಸನ್ನಿವೇಶ­ಗಳ­ಲ್ಲೊಂದು ಸೀತೆಯ ಅಗ್ನಿಪರೀಕ್ಷೆ. ರಾವಣನ ವಶ­ದಲ್ಲಿದ್ದ ಸೀತೆಯ ಪಾವಿತ್ರ್ಯ ಜನರ ಬಾಯಿಯಲ್ಲಿ ಚರ್ಚೆಯ ವಸ್ತುವಾಗಬಾರದೆಂದು ಆಕೆಯನ್ನು ಶ್ರೀರಾಮ ಅಗ್ನಿಪರೀಕ್ಷೆಗೆ ಒಡ್ಡಿದ. ಅದು ಆ ಕಾಲದ ನಿಯಮವಾಗಿತ್ತು. ಸೀತೆ ಅಗ್ನಿಪರೀಕ್ಷೆ­ಯಲ್ಲಿ ತೇರ್ಗಡೆಯಾದಳು. ಇಂದು ಅಗ್ನಿಪರೀಕ್ಷೆ­ಇಲ್ಲ. ಅದರ ಸ್ಥಾನದಲ್ಲಿ ಸಂವಿಧಾನ, ಕಾನೂನು, ನ್ಯಾಯಾಲಯಗಳಿವೆ. ಸೀತೆಯ ಪಾವಿತ್ರ್ಯದ ಬಗ್ಗೆ ಯಾವ ಆಪಾದನೆ ಇರದಿದ್ದರೂ ಸೀತೆ ತನ್ನನ್ನು ತಾನು ಅಗ್ನಿಪರೀಕ್ಷೆಗೆ ಒಡ್ಡಿ­ಕೊಳ್ಳಲು ಹಿಂಜರಿಯಲಿಲ್ಲ. ಈಗ ಶ್ರೀರಾಮನ, ಸೀತೆಯ ಆದರ್ಶವನ್ನು ಬೋಧಿಸುವವರ ಮೇಲೇ ಅತ್ಯಾಚಾರದಂಥ ಆರೋಪ ಬಂದಿದೆ. ಅವರು ಅಗ್ನಿಪರೀಕ್ಷೆ ಅಲ್ಲದಿದ್ದರೂ ಕಾನೂನಿನ ಪರೀಕ್ಷೆಗೆ ತಮ್ಮನ್ನು ತಾವು ಒಡ್ಡಿಕೊಳ್ಳ­ಬೇಕಾ­ಗಿತ್ತು. ಸ್ವಾಮಿಗಳು ತಮ್ಮ ಚಾತುರ್ಮಾಸದ ಕೊನೆ­ಯಲ್ಲಿ ಶಿಷ್ಯ ಸಮೂಹವನ್ನು ಉದ್ದೇಶಿಸಿ ಮಾಡಿದ ಆಶೀರ್ವಚನ ‘ಪ್ರಜಾವಾಣಿ’ಯಲ್ಲಿ ವಿಸ್ತೃತವಾಗಿ ವರದಿಯಾಗಿತ್ತು. ಅದನ್ನು ಓದಿ ನಾವೆಲ್ಲ ರೋಮಾಂಚನಗೊಂಡಿದ್ದೆವು. ‘ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ’ ಎಂಬ ಅವರ ಘೋಷಣೆ ನನ್ನಂತಹವರನ್ನು ಹುರಿದುಂಬಿಸಿತ್ತು.  ಆದರೆ ಅವರು ನ್ಯಾಯಾಲಯದ ಸಮರದಲ್ಲಿ ತಡೆಯಾಜ್ಞೆಯೆಂಬ ಗುರಾಣಿ ಬಳಸಿ, ಎದುರಿ­ನಿಂದ ಬರುವ ಬಾಣಗಳಿಂದ ತಪ್ಪಿಸಿಕೊಳ್ಳಲು ಯತ್ನಿ­ಸುತ್ತಿರುವುದನ್ನು ನೋಡಿ ನಿಜಕ್ಕೂ ನಿರಾಶೆ­ಯಾಗಿದೆ.

ಹಾಗಾದರೆ ಅಂದು ಸಮರದ ಘೋಷಣೆ ಮಾಡಿ ಇಂದು ತಡೆಯಾಜ್ಞೆಗಳ ಗುರಾಣಿ ಹಿಡಿಯುತ್ತಿರುವುದು ಏನನ್ನು ಸೂಚಿಸು­ತ್ತದೆ? ಶ್ರೀರಾಮನ ಮೂಲಗುಣವಾದ ಧೀರತ್ವಕ್ಕೆ, ಧೀಮಂತಿಕೆಗೆ ವಿರುದ್ಧವಾದ ನಡೆ ಅಲ್ಲವೇ ಇದು? ಇನ್ನು ಮುಂದಿನ ‘ರಾಮಕಥೆ’ಗಳಲ್ಲಿ ಸ್ವಾಮಿಗಳು ರಾಮನ ಶೌರ್ಯ, ಸೀತೆಯ ಆದರ್ಶ ಮುಂತಾದ ಮೌಲ್ಯಗಳ ಬಗ್ಗೆ ಮಾತನಾ­ಡುವುದಾದರೂ ಹೇಗೆ? ನಮ್ಮ ಪ್ರೀತಿಯ ಶ್ರೀರಾಮಚಂದ್ರಾಪುರ ಮಠದ ಪೀಠಕ್ಕೆ ಅಂಟಿರುವ ಕೊಳೆ ತೊಳೆದು­ಹೋಗಲಿ. ಅಪಕೀರ್ತಿಯಿಂದ  ಮುಕ್ತರಾಗಲು ಪೀಠಾಧಿಪತಿಗಳು ತಮ್ಮನ್ನು ತಾವು ಕಾನೂನಿನ ಅಗ್ನಿಪರೀಕ್ಷೆಗೆ ಒಡ್ಡಿಕೊಳ್ಳಲಿ. ಅವರು ಶುದ್ಧರಾಗಿ­ರುವುದೇ ನಿಜವಾದರೆ ಯಾವ ಕಾನೂನು ಸಹ ಅವರಿಗೆ ಏನೂ ಮಾಡಲಾಗದು.

ಒಂದು ವೇಳೆ ತಡೆಯಾಜ್ಞೆಗಳ ಮೂಲಕ­ವಾಗಲೀ, ಕಾನೂನಿನ ದೌರ್ಬಲ್ಯಗಳನ್ನಾಗಲೀ ಬಳಸಿಕೊಂಡು ‘ಅನು­ಮಾನದ ಪ್ರಯೋಜನ’ ಪಡೆದುಕೊಂಡು ಆರೋಪಮುಕ್ತರಾದರೆ ಕಾನೂ­­ನಿನ ದೃಷ್ಟಿಯಿಂದ ಅವರು ಗೆಲ್ಲಬಹುದು; ಆದರೆ ಜನರ ಮನಸ್ಸಿ­ನಲ್ಲಿ ಉಂಟಾಗಿರುವ ಸಂಶ­ಯ­ಗಳನ್ನು ನಿವಾರಣೆ ಮಾಡುವಲ್ಲಿ ಅವರು ಸೋತಂತೆಯೇ! ಅಂಥ ಸನ್ನಿವೇಶ ಖಂಡಿತಾ ಬರ­ದಿರಲೆಂದು ಆ ಪೀಠದ ಅಧಿದೇವತೆ­ಯಾಗಿ­­­ರುವ ಸೀತಾರಾಮಚಂದ್ರರಲ್ಲಿ ನನ್ನ ಪ್ರಾರ್ಥನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT