ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಂಡಲ್! ಕಿಸೆಯಲ್ಲಿ ಪುಸ್ತಕಗಳ ಬಂಡಲ್!

Last Updated 24 ಜನವರಿ 2015, 19:30 IST
ಅಕ್ಷರ ಗಾತ್ರ

ಜೈಪುರ: ಸಾವಿರಾರು ಪುಸ್ತಕಗಳನ್ನು ನಾನು ಹೋದ ಕಡೆಯಲ್ಲೆಲ್ಲ ತೆಗೆದು­ಕೊಂಡು ಹೋಗುವ ಪರಿಕಲ್ಪನೆಯೇ ಖುಷಿ ಕೊಡುವಂತಿದೆ!
‘ನೀವು ಕಿಂಡಲ್‌ ಖರೀದಿಸಿದ್ದು ಏಕೆ?’ ಎನ್ನುವ ಪ್ರಶ್ನೆಗೆ ಜೈಪುರದ ಹಿರಿಯ ನಾಗರಿಕರೊಬ್ಬರು ಪ್ರತಿಕ್ರಿಯಿಸಿದ್ದು ಹೀಗೆ.

ಕಿಂಡಲ್‌ನ ಉಪಯೋಗಗಳು ಮತ್ತು ಅದನ್ನು ಬಳಸುವ ಬಗ್ಗೆ ‘ಅಮೆ­ಜಾನ್‌.ಇನ್‌’ ಮಳಿಗೆಯ ಸಿಬ್ಬಂದಿ­ಯೊಂದಿಗೆ ಸಾಕಷ್ಟು ಕಾಲ ಚರ್ಚಿಸಿದ ನಂತರ ಅವರು ಕಿಂಡಲ್‌ ಕೊಂಡರು. ಮಗು­ವೊಂದು ಆಟಿಕೆಯೊಂದನ್ನು ಮುಟ್ಟಿ ಮುಟ್ಟಿ ಸುಖಿಸಿದಂತೆ ಕಿಂಡಲ್‌ ಪರದೆಯನ್ನು ಅವರು ಸ್ಪರ್ಶಿಸಿದರು. ಕಿಂಡಲ್‌ ಖರೀದಿಸಿದ ಮತ್ತೊಬ್ಬ ಮಹಿಳೆ­ಯೊಬ್ಬರಿಗೆ, ಮಕ್ಕಳಿಗೆ ಓದಿನ ರುಚಿ ಹತ್ತಿಸಲು ಈ ವಿದ್ಯುನ್ಮಾನ ಉಪಕರಣ­ವನ್ನು ಆಟಿಕೆಯ ರೀತಿ ಬಳಸಬಹುದು ಎನ್ನಿಸಿದೆ.

ಯುವಜನರ ನಡುವೆ ಜನಪ್ರಿಯ­ವಾ­ಗುತ್ತಿರುವ ‘ಇ–ಪುಸ್ತಕಗಳ ಲೈಬ್ರರಿ’ ಕಿಂಡಲ್‌ಗಳತ್ತ ಹಿರಿಯರೂ ಕುತೂಹಲ ವ್ಯಕ್ತಪಡಿಸುತ್ತಿರುವ ವಿದ್ಯಮಾನಕ್ಕೆ ‘ಜೈಪುರ ಸಾಹಿತ್ಯ ಉತ್ಸವ’ ಸಾಕ್ಷಿ­ಯಾ­ಗಿದೆ. ‘ಸಾಂಪ್ರದಾಯಿಕ ಪುಸ್ತಕಗಳ ಸ್ಥಾನ­ವನ್ನು ಇ–ಪುಸ್ತಕಗಳು ಆಕ್ರಮಿಸಿ­ಕೊಳ್ಳುತ್ತಿವೆಯೇ?’ ಎನ್ನುವ ಪುಸ್ತಕ­ಲೋಕ­ವನ್ನು ಕಾಡುತ್ತಿರುವ ಜಿಜ್ಞಾಸೆ ಉತ್ಸವದಲ್ಲೂ ಕಾಣಿಸಿಕೊಂಡಿದೆ. ಪುಸ್ತಕ­­ಗಳ ಮಾರಾಟದ ಭರಾಟೆಯ ಜೊತೆಗೇ ‘ಕಿಂಡಲ್‌’ಗಳ ಮಾರಾಟವೂ ನಡೆಯುತ್ತಿರುವುದು ಈ ಜಿಜ್ಞಾಸೆಯ ಅಭಿವ್ಯಕ್ತರೂಪದಂತಿತ್ತು.

ಕಿಸೆಯಲ್ಲಿ ಗ್ರಂಥಾಲಯ: ಕಿಂಡಲ್‌ಗಳತ್ತ ಯುವಜನತೆ ಹೆಚ್ಚು ಆಸಕ್ತರಾಗುತ್ತಿ­ರುವ ಬಗ್ಗೆ ಪ್ರತಿಕ್ರಿಯಿಸಿದ ‘ಅಮೆ­­ಜಾನ್‌.­ಇನ್‌’ನ ಅಧಿಕಾರಿ ರಾಜೀವ್‌ ಮೆಹ್ತಾ, ‘ವಿಶ್ವದ ಯಾವುದೇ ಭಾಷೆಯ ಪುಸ್ತಕ ಕಿಂಡಲ್‌ಗಳಲ್ಲಿ ದೊರೆಯುವ ದಿನ ದೂರವಿಲ್ಲ’ ಎನ್ನುವ ಆಶಾಭಾವ ವ್ಯಕ್ತಪಡಿಸಿದರು. ಸಾಂಪ್ರ­ದಾ­ಯಿಕ ಪುಸ್ತಕಗಳಿಗೆ ಹೋಲಿಸಿದರೆ ಇ–ಪುಸ್ತಕಗಳ ತಯಾರಿ ಹಾಗೂ ವಿತರಣೆ ಅತ್ಯಂತ ಸುಲಭ ಹಾಗೂ ಕಡಿಮೆ ಖರ್ಚಿನದು. ಹೆಚ್ಚು ಅನುಕೂಲ­ಗಳುಳ್ಳ ಹಾಗೂ ಸರಳವಾದ ಓದಿನ ಸಾಮಗ್ರಿಗಳನ್ನು ಓದುಗರು ಬಯಸು­ತ್ತಾರೆ. ಈ ಗುಣ ಕಿಂಡಲ್‌ಗಳಲ್ಲಿದೆ ಎನ್ನುವುದು ಅವರ ಅನಿಸಿಕೆ.

‘ಭಾರತ ಇಂಗ್ಲಿಷ್‌ ಪುಸ್ತಕಗಳ ಮಾರಾಟದಲ್ಲಿ ವಿಶ್ವದ ಮೂರನೇ ದೊಡ್ಡ ಮಾರುಕಟ್ಟೆ. ಮಧ್ಯಮ ವರ್ಗದ ಆದಾಯದ ಜೊತೆಗೆ ಇಂಟರ್ನೆಟ್‌ ಬಳಕೆದಾರರೂ ಹೆಚ್ಚುತ್ತಿರುವುದರಿಂದ ಭಾರತದಲ್ಲಿ ಇ–ಪುಸ್ತಕಗಳ ಮಾರು­ಕಟ್ಟೆ ತ್ವರಿತಗತಿಯಲ್ಲಿ ಬೆಳವಣಿಗೆ ಕಾಣಲಿದೆ’ ಎನ್ನುವ ಲೆಕ್ಕಾಚಾರ ಮೆಹ್ತಾ ಅವರದು.

ವರ್ಚುಯಲ್‌ ಸೆಕ್ಸ್‌ ಅನುಭವ: ಇ–ಪುಸ್ತಕಗಳಲ್ಲಿ ಓದುವುದು ವಿಭಿನ್ನ ಸುಖ ನೀಡು­ತ್ತದೆ. ಅದೊಂದು ರೀತಿ ವರ್ಚು­ಯಲ್‌ ಸೆಕ್ಸ್‌ ಇದ್ದಂತೆ ಎನ್ನುವುದು ‘ಜೆಎಲ್‌­ಎಫ್‌’ನಲ್ಲಿ ಪಾಲ್ಗೊಂಡಿರುವ ಅರ್ಜೆಂಟೀನಾದ ಪ್ರಸಿದ್ಧ ಕಾದಂಬರಿ­ಕಾರ ಆಲ್ಬರ್ಟೊ ಮ್ಯಾನುಯಲ್‌ ಅನಿಸಿಕೆ,
ಲೇಖಕ ಏನು ಬರೆಯುವನೋ ಅದು ಸಾಹಿತ್ಯ ಎನ್ನುವುದು ಒಂದು ಪರಿಕಲ್ಪನೆ. ಆದರೆ, ಓದುಗ ತನಗೆ ಬೇಕಾದ ಸಾಹಿತ್ಯ ಯಾವುದೆನ್ನುವುದನ್ನು ಪ್ರಸ್ತುತ ನಿರ್ಧರಿ­ಸುತ್ತಿದ್ದಾನೆ. ಹಾಗಾಗಿ ಸಾಹಿತ್ಯ ಚರಿತ್ರೆ ಎನ್ನುವುದು ಬರಹಗಾರರಿಗೆ ಸಂಬಂಧಿಸಿ­ದ್ದಷ್ಟೇ ಅಲ್ಲ, ಅದು ಓದುಗರ ಚರಿತ್ರೆಯೂ ಹೌದು. ಈ ಬದಲಾ­ವ­ಣೆಯ ಸಂದರ್ಭದಲ್ಲಿ, ಸಾಂಪ್ರದಾ­ಯಿಕ ಗ್ರಂಥಾಲಯಗಳ ಸ್ಥಳಗಳನ್ನು ‘ಮಲ್ಟಿ­ಮೀಡಿಯ ಲೈಬ್ರರಿ’ಗಳು ಆಕ್ರಮಿಸಿ­ಕೊಳ್ಳು­ತ್ತಿವೆ. ಹಳೆಯ ಕಾಲದ ಗ್ರಂಥಾಲ­ಯ­ಗಳು ಈಗ ಪವಿತ್ರ ಸ್ಥಳಗಳಂತೆ ಕಾಣಿ­ಸುತ್ತಿವೆ ಎನ್ನುವುದು ಅವರ ವಿಶ್ಲೇಷಣೆ.

ಸಾವಿನ ಚಿತ್ರಕಥೆ ಬರೆದ ಮಹಾತ್ಮ!: ‘ಒಬ್ಬ ವ್ಯಕ್ತಿಯಿಂದ ಅಥವಾ ಒಂದು ಸಮುದಾಯದ ಚಿಂತನೆಯಿಂದ ಗಾಂಧೀಜಿ ಅವರ ಕೊಲೆ ನಡೆಯಿತು ಎನ್ನುವುದು ತೀರಾ ಸರಳ ಗ್ರಹಿಕೆ. ಭಾರತ–ಪಾಕಿಸ್ತಾನ ವಿಭಜನೆಯಿಂದ ಭುಗಿಲೆದ್ದ ಹಿಂಸಾಚಾರದಿಂದ ನೊಂದಿದ್ದ ಗಾಂಧೀಜಿ ತಮ್ಮ ಸಾವಿನ ಚಿತ್ರಕಥೆ­ಯನ್ನು ತಾವೇ ರಚಿಸಿಕೊಂಡಿದ್ದರು. ತಮ್ಮ ಕೊನೆಯ 133 ದಿನಗಳಲ್ಲಿ ಸಾವಿನ ಬಗ್ಗೆ ಅವರು ಅನೇಕ ಸಲ ಮಾತನಾಡಿದ್ದರು. ಗಾಂಧೀಜಿ ಸಾವಿನಲ್ಲಿ ನಾವೆಲ್ಲರೂ ಒಂದಲ್ಲಾ ಒಂದು ರೀತಿ ಭಾಗಿಯಾಗಿದ್ದೇವೆ’. ಇದು ಲೇಖಕ ಮಕರಂದ ಪರಾಂಜಪೆ ವಿಶ್ಲೇಷಣೆ.

‘ದಿ ಮ್ಯಾನ್‌ ಅಂಡ್‌ ದಿ ಮಹಾತ್ಮ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬದುಕಿದ್ದ ಕಾಲಕ್ಕಿಂತಲೂ ಮರಣಾನಂತ­ರದ ಗಾಂಧೀಜಿ ಬದುಕೇ ಹೆಚ್ಚು ಮಹತ್ವ­ದ್ದಾಗಿದೆ. ಈ ಪ್ರಸ್ತುತತೆಯೇ ಅವರನ್ನು ಮಹಾತ್ಮರನ್ನಾಗಿಸಿದೆ ಎಂದರು.
* * *
ಡಿ.ಆರ್‌.ನೆನಪು
‘ಜೆಎಲ್‌ಎಫ್‌’ನ ಕಳೆದ ಮೂರು ದಿನಗಳ ಒಂದಲ್ಲಾ ಒಂದು ಗೋಷ್ಠಿಯಲ್ಲಿ ಕನ್ನಡ ವಿಮರ್ಶಕ ಡಿ.ಆರ್‌. ನಾಗರಾಜ್‌ ಹೆಸರು ಪ್ರಸ್ತಾಪವಾಗಿದೆ. ಶನಿವಾರ ಕೂಡ ‘ದಿ ಮ್ಯಾನ್‌ ಅಂಡ್‌ ದಿ ಮಹಾತ್ಮ’ ಗೋಷ್ಠಿಯಲ್ಲಿ, ಗಾಂಧಿ ಮತ್ತು ಅಂಬೇಡ್ಕರ್‌ ಅವರನ್ನು ಅರ್ಥೈಸಲಿಕ್ಕೆ ಡಿ.ಆರ್‌. ಅವರ ಮಾತುಗಳು ಉಲ್ಲೇಖಗೊಂಡವು.

ಗೋಷ್ಠಿಗಳಲ್ಲಿ ಕನ್ನಡಿಗರು!
ಗಿರೀಶ ಕಾರ್ನಾಡ್‌, ರಘು ಕಾರ್ನಾಡ್‌ ಹಾಗೂ ಸುಧಾ ಮೂರ್ತಿ ಅವರು ಶನಿವಾರ  ‘ಜೆಎಲ್‌ಎಫ್‌’ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿದ್ದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT