ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾಕ್ಕೆ ನಾವೇಕೆ ಹೋಗಬೇಕು?

Last Updated 27 ನವೆಂಬರ್ 2013, 19:30 IST
ಅಕ್ಷರ ಗಾತ್ರ

ನಮ್ಮ ಮಂತ್ರಿಗಳು, ಶಾಸಕರು ಕೆಲವು ವರ್ಷಗಳಿಂದ ಚೀನಾ ಪ್ರವಾಸ ಕೈಗೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಇವರು ‘ಅಧ್ಯಯನ’ಕ್ಕೆಂದು ಹೋಗುತ್ತಾರೆಂಬುದು ಮಾಧ್ಯಮಗಳಲ್ಲಿ ಬರುವ ಸುದ್ದಿ.  ಚೀನಾಕ್ಕೆ ಹೋಗಿ ಬಂದ ಮೇಲೆ, ಈ ಶಾಸಕರು, ಮಂತ್ರಿವರ್ಯರು ಯಾವ ವಿಷಯದ ಕುರಿತು ಅಧ್ಯಯನ ಕೈಗೊಂಡರು ಅನ್ನುವ ಬಗ್ಗೆ ಜನರಿಗೆ ಯಾವ ಮಾಹಿತಿಯೂ ಕೊಡುವುದಿಲ್ಲ. ಚೀನಾದಲ್ಲಿ ಮಾಡಿದ ಅಧ್ಯಯನದ ವಿಶೇಷಗಳೇನು, ಅವನ್ನು ನಾವು ಹೇಗೆ ಅನುಷ್ಠಾನಕ್ಕೆ ತರಬಹುದು ಎಂಬುದನ್ನೂ ತಿಳಿಯಪಡಿಸುವುದಿಲ್ಲ.

ಮಂತ್ರಿಗಳ, ಶಾಸಕರ ಚೀನಾ ಪ್ರವಾಸಕ್ಕೆ ನಾಂದಿ ಹಾಡಿದ್ದು, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ನೇತೃತ್ವದ ಸರ್ಕಾರಗಳು. ಈ  ಪ್ರವಾಸಗಳು ಮಂತ್ರಿ ಖಾತೆಯಿಂದ ವಂಚಿತರಾದವರಿಗೆ, ನಿಗಮ–ಮಂಡಳಿಗಳಲ್ಲಿ ಅವಕಾಶ ಸಿಗದವರಿಗೆ,  ಮತ್ತು ಆ ಮಹಾಶಯರನ್ನು ತಮ್ಮ ಪಕ್ಷಗಳಲ್ಲೇ ಉಳಿಸಿಕೊಳ್ಳುವುದಕ್ಕೆ ಕೊಟ್ಟ ಭಕ್ಷೀಸು ಎಂಬುದು ಜನರಿಗೂ ಗೊತ್ತಿದೆ. ಯಡಿಯೂರಪ್ಪನವರ ಸರ್ಕಾರ ಹಲವಾರು ಮಂದಿ ರೈತರನ್ನು ಚೀನಾಕ್ಕೆ ಕಳುಹಿಸಿತು. ಯಾವ ಕಾರಣಕ್ಕಾಗಿ ಚೀನಾಕ್ಕೆ ಕಳುಹಿಸಿತು ಎಂಬುದನ್ನು ಸರ್ಕಾರವಾಗಲೀ, ಅಲ್ಲಿಗೆ ಹೋದ ರೈತರಾಗಲೀ ಜನರ ಮುಂದೆ ಹೇಳಲಿಲ್ಲ.

ತರಕಾರಿ ಹಾಗೂ ಹಣ್ಣು ಬೆಳೆಯುವುದರಲ್ಲಿ ಚೀನಾ ವಿಶ್ವದಲ್ಲೇ ಮೊದಲನೆಯ ಸ್ಥಾನದಲ್ಲಿದೆ. ಭಾರತ ಎರಡನೇ ಸ್ಥಾನದಲ್ಲಿದೆ. ಆದರೆ ನಮ್ಮ ದೇಶದಲ್ಲಿ ಇವು ಎರಡೂ, ಜನರ ಹೊಟ್ಟೆಗೆ ಸೇರದೆ ಹಾಳಾಗುವುದೇ ಹೆಚ್ಚು. ಆದ್ದರಿಂದ ನಮ್ಮ ರೈತರು ಹಣ್ಣು ಹಾಗೂ ತರಕಾರಿಗಳ ಸಂಸ್ಕರಣೆ ಹೇಗೆ ಮಾಡುತ್ತಾರೆಂಬುದನ್ನು ತಿಳಿದುಕೊಂಡು ಬಂದರಾ? ಕೃಷಿ ಸಲಕರಣೆಗಳನ್ನು ಕೊಂಡುಕೊಳ್ಳಲು ಹೋದರಾ?

ನಮ್ಮ ಶಾಸಕರು ಸುಮ್ಮನೆ ಚೀನಾ ಪ್ರವಾಸ ಹೋದರೂ ತಪ್ಪೇನಿಲ್ಲ. ಆದರೆ ಸರ್ಕಾರ ಖರ್ಚು ಭರಿಸಿದ ಮೇಲೆ ಚೀನಾ ಪ್ರವಾಸದ ಕುರಿತು ಒಂದು ವರದಿ ಆದರೂ ಇರಲೇ ಬೇಕಲ್ಲ? ಚೀನಾದಲ್ಲಿ ನೋಡಿ ಕಲಿಯುವುದೂ ಬಹಳಷ್ಟು ಇವೆ. ಉದಾಹರಣೆಗೆ ರೈಲಿನಲ್ಲಿ  ಪ್ರವಾಸ ಮಾಡುವಾಗ ಎರಡನೇ ದರ್ಜೆ ಬೋಗಿಯ  ಪ್ರಯಾಣಿಕರಿಗೂ ಕುಡಿಯಲು ಬಿಸಿ ನೀರಿನ ಫ್ಲಾಸ್ಕ್‌ಗಳನ್ನು ಇಟ್ಟಿರುತ್ತಾರೆ. ಅವನ್ನು ಯಾರೂ ಕದಿಯುವುದಿಲ್ಲ. ಮುಖ ಒರೆಸಿಕೊಳ್ಳಲು ಟವೆಲ್‌ಗಳನ್ನು, ರಾತ್ರಿ ವೇಳೆ ಹೊದ್ದುಕೊಳ್ಳಲು ಶುಚಿಯಾಗಿರುವ ಕ್ವಿಲ್ಟ್‌ ಗಳನ್ನು ಕೊಡುತ್ತಾರೆ. ಶೌಚಾಲಯವನ್ನು ಶುಚಿಯಾಗಿ ಇಟ್ಟಿರುತ್ತಾರೆ. ರೈಲಿನಲ್ಲಿ ಇಲಿ, ಜಿರಳೆಗಳು ಓಡಾಡುವುದಿಲ್ಲ. ಕಂಡಕಂಡಲ್ಲಿ ಉಗುಳುವ ಅಭ್ಯಾಸವಿದ್ದ ಚೀನಿಯರು ಈಚೆಗೆ ಸಾರ್ವಜನಿಕ ಸ್ಥಳಗಳನ್ನು ಶುಚಿಯಾಗಿ ಇಟ್ಟುಕೊಳ್ಳು ವುದನ್ನು ಕಲಿತಿದ್ದಾರೆ.

ನಮ್ಮ ಟಿ.ವಿ.ಯಲ್ಲಿ  ‘ದೂರದರ್ಶನ’ ಚಾನೆಲ್ ಮಾತ್ರ ಇದ್ದ ಕಾಲದಲ್ಲಿ ಸಾರ್ವಜನಿಕರ ಹಿತಕ್ಕಾಗಿ ಕೆಲವೊಂದು ಮಾಹಿತಿಯನ್ನು,  ಮಾರ್ಗದರ್ಶನವನ್ನು ಸರ್ಕಾರಗಳು ಕೊಡುತ್ತಿದ್ದವು. ಖಾಸಗಿ ಚಾನೆಲ್‌ಗಳು ಬಂದ ನಂತರ ಇವೆಲ್ಲ ಮಾಯವಾಗಿವೆ. ಅನಕ್ಷರಸ್ಥರು ಹೆಚ್ಚಿಗೆ ಇರುವ ನಮ್ಮ ದೇಶ ನಿಜಕ್ಕೂ ಅಭಿವೃದ್ಧಿ ಹೊಂದಬೇಕಾದರೆ  ಕೆಲವೊಂದು ಸಾರ್ವಜನಿಕ ಜಾಗೃತಿ (ಪಬ್ಲಿಕ್ ಎಜುಕೇಷನ್) ಜಾಹೀರಾತು ಗಳನ್ನು ಕಡ್ಡಾಯಗೊಳಿಸಬೇಕಾಗುತ್ತದೆ.

ಬೈಜಿಂಗ್ ಒಲಿಂಪಿಕ್ಸ್‌ಗೆ ಇನ್ನೂ ಐದು ವರ್ಷ ಇರುವಾಗಲೇ ಎಲ್ಲೆಡೆಗಳಲ್ಲೂ ಇಂತಹ ಜಾಹೀರಾತುಗಳು ಚೀನಾದಲ್ಲಿ ಕಾಣಿಸಿಕೊಳ್ಳುತ್ತಿದ್ದವು. ರೈಲ್ವೆ ನಿಲ್ದಾಣಗಳಲ್ಲಿ, ರಸ್ತೆದಾಟುವಾಗ, ಸಾರ್ವಜನಿಕ ಸ್ಥಳಗಳಲ್ಲಿ  ‘ನಮ್ಮ ದೇಶಕ್ಕೆ ವಿಶ್ವದ ವಿವಿಧೆಡೆಯಿಂದ  ಜನರು ಬರುತಿದ್ದಾರೆ, ದೇಶದ ಮಾನ ತೆಗೆಯಬೇಡಿ, ಕಂಡ ಕಂಡಲ್ಲಿ ಉಗುಳಬೇಡಿ’ ಎಂದೆಲ್ಲ ಲೌಡ್ ಸ್ಪೀಕರ್‌ಗಳು ಹೇಳುತ್ತಲೇ ಇರುತ್ತಿದ್ದವು. ಇವನ್ನೆಲ್ಲ ನೋಡಿದಾಗ ಪಬ್ಲಿಕ್ ಎಜುಕೇಷನ್ ನಿಟ್ಟಿನಲ್ಲಿ ನಾವು ಇಂದು ಮಾಡುತ್ತಿರುವ ಕೆಲಸಗಳು ಸೊನ್ನೆ ಎಂದೇ ಹೇಳಬೇಕಾಗುತ್ತದೆ.

ಚೀನಾದಿಂದ ನಾವು ಕಲಿಯಬಾರದ ಸಂಗತಿಗಳು ಅದೆಷ್ಟೋ ಇವೆ. ಇವುಗಳ ಅಧ್ಯಯನ ಕೂಡ ನಮಗೆ ಇಂದು ಬೇಕಾಗಿದೆ. ದೇಶದ  ಅಭಿವೃದ್ಧಿಗೆ ಚೀನಾ ಯಾವ ಬೆಲೆ ತೆರುತ್ತಿದೆ ಎಂದೂ ನೋಡಬೇಕು. ಕೂಲಿ ಕಾರ್ಮಿಕರ ಪ್ರತಿಭಟನೆಯ ಹಕ್ಕುಗಳನ್ನು ಹತ್ತಿಕ್ಕಿ ಬಹುರಾಷ್ಟ್ರೀಯ ಕಂಪೆನಿಗಳಿಗೆ, ಕಡಿಮೆ ಕೂಲಿಯಲ್ಲಿ ಕಾರ್ಮಿಕರನ್ನು ಒದಗಿಸುತ್ತ, ಸರ್ಕಾರದ ನೀತಿಯನ್ನು ಪ್ರಶ್ನಿಸಿದವರನ್ನೆಲ್ಲ ದೇಶದ್ರೋಹಿ ಗಳು ಎಂಬಂತೆ ಬಿಂಬಿಸಿ ಜೈಲಿಗೆ ಅಟ್ಟುತ್ತಿದೆ. ಮೊದಲು ಅಭಿವೃದ್ಧಿ ಆಗಲಿ, ಆಮೇಲೆ ಪರಿಸರವನ್ನು ನೋಡಿಕೊಳ್ಳೋಣ ಎನ್ನುವಂತಹದ್ದು ಚೀನಾದ ನೀತಿ.

ಚೀನಾ, ರೈತರ ಕೃಷಿ ಭೂಮಿಯನ್ನು ಅವರ ಒಪ್ಪಿಗೆಯಿಲ್ಲದೇ ದಬ್ಬಾಳಿಕೆಯಿಂದ  ಯಾವಾಗ ಬೇಕೆಂದರೆ ಆಗ ಪಡೆದುಕೊಳ್ಳುತ್ತದೆ. ವಿಶ್ವ ಬ್ಯಾಂಕಿನ ‘ಚೀನಾ 2020 ಆಹಾರ ಭದ್ರತೆ ಆಯ್ಕೆಗಳು’ ವರದಿ ಪ್ರಕಾರ ಚೀನಾದಲ್ಲಿ ಒಂದು ವರ್ಷಕ್ಕೆ ಸುಮಾರು 1,90,000 ಹೆಕ್ಟೇರು ಫಲವತ್ತಾದ, ಎಲ್ಲ ಸೌಲಭ್ಯಗಳನ್ನು ಹೊಂದಿರುವ ಕೃಷಿ ಭೂಮಿ ಕೈಗಾರಿಕೀಕರಣ ಹಾಗೂ ನಗರೀಕರಣದ ಕಾರಣವಾಗಿ ಮಾಯ ವಾಗುತ್ತಿದೆ. ಹಾಗೆಯೇ ಬಂಜರು ಭೂಮಿ, ಪಾಳು  ಭೂಮಿಯನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ, ಫಲವತ್ತಾಗಿ ಮಾಡಲು ಇನ್ನೆಷ್ಟೋ ಹಣ ಖರ್ಚು ಮಾಡುತ್ತಾರೆ. ಆದರೆ, ನಾವು ಇದನ್ನೆಲ್ಲಾ ಅಭಿವೃದ್ಧಿ ಎಂದುಕೊಂಡು ನಾವೂ ಹೀಗೆಯೇ ಮಾಡುವ ಎಂದುಕೊಳ್ಳುವಷ್ಟರಲ್ಲೇ ಚೀನಿಯರು ಬದಲಾವಣೆಯತ್ತ ಹೆಜ್ಜೆ ಹಾಕಿಯೇ ಬಿಡುತ್ತಾರೆ. ಈಗಾಗಲೇ ಪರಿಸರ ರಿಪೇರಿ ಕೆಲಸ ಶುರು ಮಾಡಿಬಿಟ್ಟಿದ್ದಾರೆ. ಇವೆಲ್ಲಾ ಒಂದೇ ಪಕ್ಷದ ಕೇಂದ್ರೀಕೃತ ಆಡಳಿತ ಇರುವ ಚೀನಾಕ್ಕೆ ಸಾಧ್ಯ.

ನಮ್ಮ ನೆರೆ ದೇಶವಾದ ಚೀನಾದ ಬಗ್ಗೆ ನಮಗೆ ಕುತೂಹಲ ಇರಬೇಕಾಗಿರುವುದು ಸಹಜ. ಒಂದು ವೇಳೆ ನಾವು  ಚೀನಾ ನಮ್ಮ ಬದ್ಧ ವೈರಿ ಅಂದುಕೊಂಡರೂ ನಮಗೆ ಆ ದೇಶದಲ್ಲಿ ಆಗುತ್ತಿರುವ ವಿದ್ಯಮಾನಗಳ ಬಗ್ಗೆ ಸರಿಯಾದ ಮಾಹಿತಿ ಇರಬೇಕಾದದ್ದು ಅವಶ್ಯ. ಈ ಗ್ಲೋಬಲೀಕರಣ, ಉದಾರೀಕರಣದ ಯುಗದಲ್ಲಿ ಚೀನಾ ತಮ್ಮ ನೆರೆಹೊರೆ ದೇಶಗಳ ಆರ್ಥಿಕ ವ್ಯವಸ್ಥೆ ಬುಡಮೇಲು ಮಾಡುತ್ತಾ ತನ್ನ ದೇಶದ ಅಭಿವೃದ್ಧಿ ಹೇಗೆ ಸಾಧಿಸುತ್ತದೆ ಎನ್ನುವುದನ್ನು ಕೂಡ ನಾವು ತಿಳಿದುಕೊಳ್ಳಬೇಕು.

ಇಂಡೊನೇಷ್ಯಾ ತನ್ನ ಸಾಂಪ್ರದಾಯಿಕ ಶೈಲಿಯ ಬಾಟಿಕ್ ಬಟ್ಟೆಗಳಿಗೆ ಪ್ರಸಿದ್ಧಿ ಪಡೆದ ದೇಶ. ಎಲ್ಲಾ ಸರ್ಕಾರಿ ನೌಕರರು ವಾರಕ್ಕೆ ಒಂದು ಸಲವಾದರೂ ಬಾಟಿಕ್ ಬಟ್ಟೆ ಧರಿಸು ವುದನ್ನು ಕಡ್ಡಾಯಗೊಳಿಸಿ, ಆ ಉದ್ಯಮವನ್ನು  ಇಂಡೊನೇಷ್ಯಾ ಸಾಕಷ್ಟು ಕಷ್ಟಪಟ್ಟು ಉಳಿಸಿ ಕೊಂಡಿದೆ. ಇವನ್ನು ಕಾಪಿ ಮಾಡಿ, ಅಗ್ಗವಾದ ಪ್ರಿಂಟ್ ಹೊಡೆಸಿ ತಂದು ಕಡಿಮೆ ಬೆಲೆಗೆ ಇಂಡೊನೇಷ್ಯಾಕ್ಕೇ ಮಾರುವ ಕಲೆ ಚೀನಿಯರಿಗೆ ಸಿದ್ಧಿಸಿದೆ.

ಚೀನಾ ಜಾಸ್ತಿ ತಂಬಾಕು ಬೆಳೆದು ವಿಯೆಟ್ನಾಂ ಹಾಗೂ ಉತ್ತರ ಕೊರಿಯಾದಲ್ಲಿ ಡಂಪ್ ಮಾಡುತ್ತದೆ. ಅಗ್ಗದ ಬೆಲೆಯಿರುವುದರಿಂದ ಯುವ ಜನತೆ ತಂಬಾಕು ಸೇವನೆ ಕಡೆ ಆಕರ್ಷಿತರಾಗುತ್ತಾರೆ. ಥಾಯ್ಲೆಂಡ್‌ನ- ಚೀನಾಕ್ಕೆ ಹತ್ತಿರವಿರುವ ಪ್ರದೇಶಗಳಲ್ಲಿ, ಥಾಯ್ ರೈತರು ಮಾರುಕಟ್ಟೆಗೆ ತಾವು ಬೆಳೆದ ತರಕಾರಿ, ಹಣ್ಣುಗಳನ್ನು ತಲುಪಿಸುವ ಮೊದಲೇ ತಮ್ಮ ಸರಕುಗಳನ್ನು ತಂದು ಮಾರುವುದರಲ್ಲಿ ಚೀನಿಯರು ನಿಸ್ಸೀಮರು.

ಮೇಕಾಂಗ್ ನದಿ ಯಲ್ಲಿ  ಡೈನಮೈಟ್ ಬಳಸಿ ನದಿ ಪಾತ್ರವನ್ನು ಹಿಗ್ಗಿಸಿದ್ದಾರೆ ಹಾಗೂ ಆಳಗೊಳಿಸಿದ್ದಾರೆ. ಬೇರೆ ದೇಶಗಳಿಗೆ ತಮ್ಮ ಸರಕನ್ನು ವೇಗದ ದೋಣಿ ಗಳಲ್ಲಿ ಸಾಗಿಸಬೇಕಲ್ಲ? ಈಗಿರುವ ಗ್ಲೋಬಲೀ ಕರಣ ವ್ಯವಸ್ಥೆ ಚೀನಾದ ದುರಾಸೆಗೆ, ಇತರ ರಾಷ್ಟ್ರಗಳೊಂದಿಗಿನ ಪೈಪೋಟಿಗೆ ಪೂರಕವಾಗಿದೆ. ಚೀನಿಯರ ಅತಿಯಾದ ರಾಷ್ಟ್ರ ಪ್ರೇಮ, ಅತಿ ರಾಷ್ಟ್ರೀಯತೆ ಮಿತಿಮೀರಿ ಬೆಳೆದು ಯುವ ಪೀಳಿಗೆಯಲ್ಲಿ ಅಹಂಕಾರವೂ ಹೆಚ್ಚಾಗಿ, ಚೀನಿಯರು ಇಡೀ ವಿಶ್ವವನ್ನು ತಮ್ಮ ಮಾರುಕಟ್ಟೆ ಎಂಬಂತೆ ನೋಡುತ್ತಾರೆ.

ಚೀನಾ ಮತ್ತು ಭಾರತದ ನಡುವಿನ ವ್ಯಾಪಾರದಲ್ಲಿ ಏರುಪೇರಾಗಿ, ನಾವು ಆಮದು ಮಾಡುವುದು ಜಾಸ್ತಿಯಾಗಿದೆ. ಚೀನಾದಲ್ಲಿ ಬೆಳೆದ ಸೇಬು, ಪೇರ್, ಕಿತ್ತಳೆ ಹಣ್ಣುಗಳು ನಮ್ಮ ನಗರಗಳಿಗೆ ದೊಡ್ಡ ಪ್ರಮಾಣದಲ್ಲಿ ಬರುತ್ತವೆ. ಆದರೆ ನಮ್ಮಲ್ಲಿಯ ಹಣ್ಣುಗಳು ಅಲ್ಲಿಗೆ ಹೋಗುತ್ತಿವೆಯಾ ಎನ್ನುವ ಮಾಹಿತಿಗಳು ನಮ್ಮ ಕೃಷಿಕರಿಗೂ ಬೇಕಾಗುತ್ತದೆ. ಜೇನು ಕೃಷಿಯಲ್ಲಿ ಚೀನಾ, ವಿಯೆಟ್ನಾಂ ದೇಶಗಳು ನಮಗಿಂತ ಮುಂದೆ ಇವೆ. ಅವಕ್ಕೆ ಆ ದೇಶದಲ್ಲಿ ಸಿಗುವ ಪ್ರೋತ್ಸಾಹಗಳೇನು? ಜೇನಿಗಿಂತ,  ಜೇನು ಹುಳಗಳು ತಮ್ಮ ಮರಿಗಳಿಗೆ ಉಣಿಸುವ ರಾಯಲ್ ಜೆಲ್ಲಿ ಎನ್ನುವ ವಸ್ತು ಉತ್ಕೃಷ್ಟವಾದ ಆಹಾರವಾಗಿದ್ದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತುಂಬಾ ಬೆಲೆ ಇದೆ.  ನಮ್ಮ ವಿಜ್ಞಾನಿಗಳನ್ನು, ಆಯಾ ವಿಷಯದಲ್ಲಿ ಪರಿಣತಿ ಇರುವ ಅಧಿಕಾರಿಗಳನ್ನು ಅಧ್ಯಯನಕ್ಕೆ ಕಳುಹಿಸಿದರೆ ನಮ್ಮ ರಾಜ್ಯಕ್ಕೆ ಉಪಕಾರವಾಗಬಹುದಲ್ಲ?

ನಮ್ಮ ರಾಜ್ಯದಲ್ಲಿ ಜೇನು ಕೈಗಾರಿಕೆಗೆ ಒಂದು ಪ್ರತ್ಯೇಕ ಇಲಾಖೆ ಕೂಡ ಇಲ್ಲ. ಜೇನು ಕ್ಯೆಗಾರಿಕೆ ಒಂದು ಕಾಲದಲ್ಲಿ ಸಣ್ಣ ಕೈಗಾರಿಕೆ ಇಲಾಖೆ ಅಧೀನದಲ್ಲಿತ್ತು. ಆಮೇಲೆ ಖಾದಿ ಗ್ರಾಮೋದ್ಯೋಗ, ಅದಾದ ನಂತರ ಕೃಷಿ ಇಲಾಖೆ, ಈಗ ತೋಟಗಾರಿಕೆ ಇಲಾಖೆಯ ಕೆಳಗೆ!  ಮೈಸೂರಿನ ರಾಮಕೃಷ್ಣ ಆಶ್ರಮದ ಶಾಂಭವಾನಂದಜಿ, ರೈತರಿಗೆ ಉಪ ಕಸಬು ಆಗಿರಲಿ ಎಂದು ಏಷ್ಯಾದ ಪ್ರಥಮ ಜೇನು ಉತ್ಪಾದಕರ ಸಹಕಾರ ಸಂಘವನ್ನು ಕೊಡಗಿನ ವಿರಾಜಪೇಟೆಯಲ್ಲಿ ಹುಟ್ಟು ಹಾಕಿದ್ದರು. ಅದೂ 1930–-40ರ ದಶಕಗಳಲ್ಲಿ. ಇಂದು ರಾಜ್ಯದಲ್ಲಿ ಜೇನು ಕೈಗಾರಿಕೆ ಯಾವ ಸ್ಥಿತಿಯಲ್ಲಿ ಇದೆ?   

ಕೃಷಿಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಬೇಕಾದ ಆವಿಷ್ಕಾರಗಳು ಇಲ್ಲ. ಹೈನುಗಾರಿಕೆಯಲ್ಲಿ ಶೇ 80ರಷ್ಟು ಮಹಿಳೆಯರು ತೊಡಗಿಸಿಕೊಂಡಿದ್ದು, ಹಾಲು ಕರೆಯಲು ಕೂತುಕೊಳ್ಳಲಿಕ್ಕೆ ಬೇಕಾದ ಸರಿಯಾದ ಸ್ಟೂಲ್‌ಗಳು ಇಲ್ಲದೆ ಮಹಿಳೆಯರು ಸೊಂಟ ನೋವಿನಿಂದ ಬಳಲುತ್ತಾರೆ. ತಲೆಯಲ್ಲಿ ಭಾರವಾದ ವಸ್ತುಗಳನ್ನು ಹೊತ್ತು ನರ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಾರೆ.

ಎಲ್ಲೆಲ್ಲಿ ಪುರುಷರು ಕೆಲಸ ಮಾಡುತ್ತಾರೋ ಅಲ್ಲಲ್ಲಿ ಅವರ ಕೆಲಸ ಸುಲಭ ಮಾಡಲು ಕೃಷಿ ಆವಿಷ್ಕಾರಗಳು ಬಂದಿವೆ. ಆದರೆ ಹೆಂಗಸರು ಮಾಡುವ ಕೃಷಿ ಕೆಲಸಕ್ಕೆ ಸಂಬಂಧಿಸಿ ಇಂತಹ ಆವಿಷ್ಕಾರಗಳ ಬಗ್ಗೆ ಯಾರೂ ತಲೆಕೆಡಿಸಿ ಕೊಂಡಿಲ್ಲ. ಇದನ್ನು ಮನಗಂಡ ರಾಜೀವ್ ಗಾಂಧಿ ಅವರು ಮಹಿಳೆಯರ ಕೃಷಿ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಸಂಶೋಧನೆ ಮಾಡಲೆಂದೇ  ಭುವನೇಶ್ವರದಲ್ಲಿ ‘ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ವಿಮೆನ್ ಇನ್ ಅಗ್ರಿಕಲ್ಚರ್’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ನಾನೂ ಅಲ್ಲಿಗೆ ಒಂದು ಸಲ ಭೇಟಿ ಕೊಟ್ಟಿದ್ದೆ. ಹಾಲು ಕರೆಯಲು ಸೊಂಟ ನೋವಾಗದಂತೆ ರಿವಾಲ್ವಿಂಗ್ ಸ್ಟೂಲ್, ಟೀ ಸೊಪ್ಪು ಕೊಯ್ಲು ಮಾಡುವ ಮಹಿಳೆಯರು ಬೆನ್ನಿನ ಹಿಂದೆ ಇರುವ ಬುಟ್ಟಿಗಳಿಗೆ ಸೊಪ್ಪು ಹಾಕಿ ಹಾಕಿ ಕೈ ನೋವಿಗೊಳಗಾಗುತ್ತಾರೆ. ಅವರಿಗೆಂದು ಮಾಡಿದ ಸೊಂಟಕ್ಕೆ ಕಟ್ಟಿಕೊಳ್ಳುವಂತಹ ಬಟ್ಟೆಯ ಚೀಲ, ಕಡಲೆಕಾಯಿ ಸಿಪ್ಪೆ ಬಿಡಿಸುವ ಯಂತ್ರಗಳೂ ಇದ್ದವು. ಆದರೆ ಅವು ಮಾರಾಟಕ್ಕೆ ಇಲ್ಲ ಅಂದರು. ನಮ್ಮ ದೇಶದಲ್ಲಿ ಸಂಶೋಧನೆಯ ಫಲ ರೈತರಿಗೆ ಈ  ಜನ್ಮದಲ್ಲಿ ಸಿಗುವಂತೆ ಕಾಣುವುದಿಲ್ಲ.

ಥಾಯ್ಲೆಂಡ್‌ನಂತಹ ಸಣ್ಣ ದೇಶ ವಿಶ್ವದ ಶೇ 90 ರಷ್ಟು ಕಂಪ್ಯೂಟರ್ ಹಾರ್ಡ್‌ವೇರ್ ಉತ್ಪಾದಿಸುತ್ತಿದೆ ಎಂದರೆ ನಮಗೆ ಆಶ್ಚರ್ಯ ಆಗಬಹುದು!  ಕೃಷಿ  ಉಪಕರಣಗಳನ್ನು ಥಾಯ್ಲೆಂಡ್‌, ವಿಯೆಟ್ನಾಂ ದೇಶಗಳಿಂದ ನೋಡಿ ಕಲಿಯಬೇಕಾಗಿದೆ ನಾವು. ಅಲ್ಲಿಗೆ ಚೀನಾಕ್ಕೆ ಹೋಗುವ ಅರ್ಧ ಖರ್ಚಿನಲ್ಲಿ ಹೋಗಬಹುದು. ಅದೂ ಅಲ್ಲದೇ, ಈ ದೇಶಗಳಲ್ಲಿ ಭೂ ಸುಧಾರಣೆ ಆಗಿರುವುದರಿಂದ ಎಲ್ಲ ರೈತರೂ ಸಣ್ಣ ಹಿಡುವಳಿದಾರರು. ನಮಗೆ ಸಣ್ಣ ಪ್ರಮಾಣದಲ್ಲಿ ಅಳವಡಿಸಿಕೊಳ್ಳಬಹುದಾದ  ತಂತ್ರಜ್ಞಾನವನ್ನು ಅವರು ಕೃಷಿಯಲ್ಲಿ ಚೆನ್ನಾಗಿ ಅಳವಡಿಸಿಕೊಂಡಿದ್ದಾರೆ.

ವಿಶ್ವದ ದೊಡ್ಡಣ್ಣ ಆಗ ಬೇಕೆಂಬ ಕನಸು ಹೊತ್ತಿರುವ ಚೀನಾದ ಎದುರು ಸಣ್ಣ ರಾಷ್ಟ್ರಗಳು ಅಸಹಾಯಕವಾಗಿವೆ. ಚೀನಾದ ಜೊತೆ ವ್ಯವಹಾರ ಮಾಡಿ ಕೈಸುಟ್ಟು ಕೊಂಡ ಈ ದೇಶಗಳು ಭಾರತದ ಜೊತೆ ಸಂಬಂಧ ಬೆಳೆಸಲು ಉತ್ಸುಕವಾಗಿವೆ. ಜಪಾನಿ ಬಂಡವಾಳಗಾರರಂತೂ ತಮಿಳುನಾಡಿನಲ್ಲಿ ಮಾತ್ರ ಬಂಡವಾಳ ಹೂಡಲು ಸಿದ್ಧ ಅನ್ನುವು ದಕ್ಕೆ ಕಾರಣವೇನು? ನಮ್ಮ ನೆರೆ ರಾಜ್ಯ ತಮಿಳು ನಾಡಿಗೆ ಬರಲು ಯಾಕೆ ಈ ದೇಶಗಳು ಮುಗಿಬೀಳುತ್ತಿವೆ? ಇದರ ಅಧ್ಯಯನ ಬೇಕಾಗಿದೆ ನಮ್ಮ ರಾಜ್ಯಕ್ಕೆ.

ಈಚೆಗೆ  ಚೀನಾದಲ್ಲಿ ಆಗುತ್ತಿರುವ ವಿದ್ಯ ಮಾನಗಳನ್ನು ನೋಡಿದರೆ ನಾವು ಅವರ ಹಾಗೆ ಆಗಬಾರದು ಎಂದೇ ಅನಿಸುತ್ತದೆ. ಒಂದು ಪಕ್ಷದ ಸರ್ವಾಧಿಕಾರ ಇರುವ ಅವರ ಕೇಂದ್ರೀಕೃತ ರಾಜಕೀಯ ವ್ಯವಸ್ಥೆ ನಮ್ಮ ರಾಜಕೀಯ ವ್ಯವಸ್ಥೆಗೆ, ನಮ್ಮ ವೈವಿಧ್ಯಮಯ ಸಮಾಜಕ್ಕೆ ಸರಿ ಹೊಂದುವುದಿಲ್ಲ. ಆದ್ದರಿಂದ ನಾವು ಸಣ್ಣ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ ನಮ್ಮ ಜೊತೆ ಅವರ ಉದ್ಧಾರವೂ ಆಗುವಂತೆ ನೋಡಿ ಕೊಳ್ಳುವುದು ನಮ್ಮ ಜಾಯಮಾನಕ್ಕೆ ಒಗ್ಗು ತ್ತದೆ. ಇಂತಹ ದೇಶಗಳ ಬಂಡವಾಳಗಾರರು ಇಂದು ನಮ್ಮ ಜೊತೆ ಸಂಬಂಧಕ್ಕೆ ಕಾಯುತ್ತಿರುವಾಗ, ನಾವು ನಮ್ಮ ಮುನ್ನೆಚ್ಚರಿಕೆಯನ್ನು ಕೈಬಿಡದೆ, ಈ ದೇಶಗಳ ಅಭ್ಯುದಯ ಹೇಗಾಯಿತು, ನಾವು ಅವರಿಂದ ಏನು ಕಲಿಯಬಹುದು ಎನ್ನುವ ಅಧ್ಯಯನ ಕೈಗೊಳ್ಳುವುದು ಉತ್ತಮ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT