ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ಭಾರತ ಪ್ರೇಮಿ ಜಿ ಶಿಯೇನ್ ಲಿನ್

Last Updated 19 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಚೀ  ನಾದ ಜಿ ಶಿಯೇನ್ ಲಿನ್ (1911 –  2009) ಎಂಬ ಸಂಶೋಧಕ, ಇತಿ­ಹಾಸ­­ಕಾರ ಮತ್ತು ಭಾಷಾತಜ್ಞ ಪ್ರಾಚೀನ ಭಾರತದ ಅಧ್ಯಯನದಲ್ಲಿ ಸಂಪೂರ್ಣ ತೊಡಗಿಸಿ­ಕೊಂಡಿದ್ದವರು. ಆ ಸಂಶೋಧನಾಸಕ್ತಿ­ಯನ್ನು ಉಳಿಸಿಕೊಳ್ಳಲು ಜೈಲುವಾಸವನ್ನೂ ಅನುಭ­ವಿ­ಸಿದ್ದರು ಎಂದರೆ ನಮಗೆ ಆಶ್ಚರ್ಯ­ವಾಗಬಹುದು. ಅವರ ಭಾರತ ಪ್ರೇಮವನ್ನು, ಭಾರತದ ಬಗ್ಗೆ ಚೀನಿಯರಲ್ಲಿ ತಿಳಿವಳಿಕೆ ಮೂಡಿ­ಸಲು ಮಾಡಿದ ಪ್ರಯತ್ನವನ್ನು ಗುರುತಿಸಿಯೇ ಭಾರತ ಸರ್ಕಾರ ಅವರಿಗೆ 2008ರಲ್ಲಿ ಪದ್ಮ­ಭೂಷಣ ಕೊಟ್ಟು ಗೌರವಿಸಿತು.  ಈ ಉನ್ನತ ಪ್ರಶಸ್ತಿ­­­ಯನ್ನು ಭಾರತ ಒಬ್ಬ ಚೀನಿ ಪ್ರಜೆಗೆ ಕೊಟ್ಟು ಗೌರವಿಸಿರುವುದು ಇದೇ ಮೊದ­ಲನೆಯದು.

ಜಿ ಅವರು ಸಂಸ್ಕೃತ, ಪಾಲಿ, ಹಾಗೂ ಏಷ್ಯಾ ಖಂಡದ ಇತರ ಪ್ರಾಚೀನ ಭಾಷಾತಜ್ಞರು. ಅವರು 1911ರಲ್ಲಿ  ಚೀನಾದ ಶಾನ್ದುಂಗ್ ನಲ್ಲಿ ಜನಿಸಿ­­ದರು. ಅವರು ಆರಂಭಿಕ ಶಿಕ್ಷಣ ಮತ್ತು ಕಾಲೇಜು ಶಿಕ್ಷಣವನ್ನು ಚೀನಾದಲ್ಲೇ ಮುಗಿಸಿ ಉನ್ನತ ಶಿಕ್ಷಣಕ್ಕಾಗಿ 1935 ರಲ್ಲಿ ಜರ್ಮನಿಯ ಗೋಟ್ಟಿಂ­ಗನ್ ವಿಶ್ವವಿದ್ಯಾಲಯಕ್ಕೆ ತೆರಳಿದರು. ಅಲ್ಲಿಗೆ ಹೋದ ಮೇಲೆ ಅವರಿಗೆ ಸಂಸ್ಕೃತ, ಪಾಲಿ ಮತ್ತು ಭಾರತದ ಪ್ರಾಚೀನ ಭಾಷೆಗಳಲ್ಲಿ ಆಸಕ್ತಿ ಮೂಡಿ ಅದರಲ್ಲಿಯೇ 1941 ರಲ್ಲಿ ಪಿಎಚ್.ಡಿ. ಪದವಿ ಗಳಿಸಿಕೊಂಡರು.

ಚೀನಾಕ್ಕೆ 1946ರಲ್ಲಿ ಮರಳಿದ ಮೇಲೆ ಆಗಿನ ಪೀಕಿಂಗ್ ವಿಶ್ವವಿದ್ಯಾಲಯದಲ್ಲಿ Department of Eastern languages ವಿಭಾಗವನ್ನು ತೆರೆಯುವುದಕ್ಕೆ ಕಾರಣರಾದರು. ಜಿ ಅವರು ಭಾರತ ಮತ್ತು ಚೀನಾದ ಪ್ರಾಚೀನ ಕಾಲದ ಸಂಬಂಧಗಳ ಬಗ್ಗೆ ನೂರಾರು ಸಂಶೋ­ಧನಾ ಪ್ರಬಂಧಗಳನ್ನು ಬರೆದಿದ್ದಾರೆ. ಇದರಲ್ಲಿ ಭಾರ­ತದ ಪ್ರಾಚೀನ ಗ್ರಂಥಗಳ ಅಧ್ಯಯನ, ಭಾಷೆ­ಗಳ ಅಧ್ಯಯನ, ಭಾರತದ ಜಾನಪದ ಸಂಸ್ಕೃತಿಯ ಅಧ್ಯಯನ, ಅಭಿಜ್ಞಾನ ಶಾಕುಂತಲ­ದಂತಹ ಗ್ರಂಥಗಳ ಅನುವಾದವೂ ಸೇರಿವೆ. ಜಿ ಅವರು ಭಾರತದ ಬಗ್ಗೆ ಹನ್ನೊಂದು ಪುಸ್ತಕ­ಗಳನ್ನು ಬರೆದಿದ್ದಾರೆ. ಅವರ ಇತರ ಬರಹಗಳು 24 ಸಂಪುಟಗಳಲ್ಲಿ ಚೀನಿ ಭಾಷೆಯಲ್ಲಿ ಈಗ ಲಭ್ಯ ಇವೆ. ಚೀನಾದ ಸಾಂಸ್ಕೃತಿಕ ಕ್ರಾಂತಿಯ ಸಮಯ­ದಲ್ಲಿ  (1966 – 76) ತಮ್ಮ ಐದು ವರ್ಷ­ಗಳ ಪರಿಶ್ರಮದಿಂದ ರಾಮಾಯಣವನ್ನು 80,000 ಸಾಲುಗಳಲ್ಲಿ ಪದ್ಯರೂಪದಲ್ಲಿ ಚೀನಿ ಭಾಷೆಗೆ ತರ್ಜುಮೆ ಮಾಡಿದ್ದಾರೆ.

ಶಿ ಯೋ ಜಿ ಅಥವಾ ಆಂಗ್ಲ ಭಾಷೆಯಲ್ಲಿ ‘ಜರ್ನಿ ಟು ದಿ ವೆಸ್ಟ್’ ಎಂಬ ಜನಪ್ರಿಯ ಕಾದಂ­ಬರಿ 16ನೇ ಶತಮಾನದ ಚೀನಾದ ಮಿಂಗ್ ಸಾಮ್ರಾ­ಜ್ಯ­ದ ಕಾಲದಲ್ಲಿ ವು ಚಂಗ್ ಅನ್ ಎಂಬಾತ ಬರೆದಿದ್ದು ಇದು ಚೀನಾದ ಮಹತ್ವದ ಪುಸ್ತಕಗಳಲ್ಲೊಂದಾಗಿದೆ. ಬೌದ್ಧ ಸನ್ಯಾಸಿ, ಸಂಶೋಧಕ ಸ್ವಾನ್ ಜಾಂಗ್ ನ (ಹುಯನ್ ತ್ಸಾಂಗ್) ದೇಶ ಪರ್ಯಟನದ ಅನುಭವಗಳೇ ಈ ಕಾದಂಬರಿಗೆ ಪ್ರೇರಣೆ. ಸ್ವಾನ್ ಜಾಂಗ್ ಭಾರತಕ್ಕೆ ಬರಲು ನೂರಾರು ಕಷ್ಟ  ಕೋಟಲೆ­ಗಳನ್ನು ಎದುರಿಸಿ, ದುಷ್ಟಶಕ್ತಿಗಳನ್ನು ಗೆದ್ದು ಬೌದ್ಧ ಸೂತ್ರಗಳನ್ನು, ಜ್ಞಾನವನ್ನು ಸಂಪಾದಿಸಿ ಹೇಗೆ ಚೀನಾಕ್ಕೆ ಮರಳುತ್ತಾನೆ ಎನ್ನುವುದೇ ಇದರ ಕಥಾವಸ್ತು.

ವು ಚಂಗ್ ಈ ಕೃತಿಯಲ್ಲಿ ಚೀನಿ ಜಾನ­-ಪದೀಯ ಕಥೆಗಳನ್ನು ಯಥೇಚ್ಛವಾಗಿ ಬಳಸಿ­ಕೊಂಡಿ­­ರುವುದರಿಂದಲೂ ಶಿ ಯೋ ಜಿ ಜನ­ಪ್ರಿಯ­ವಾಗಲು ಕಾರಣವಾಯಿತು. ಕಥೆಯಲ್ಲಿ ಬೌದ್ಧ ಬಿಕ್ಕುವಿನ ಜ್ಞಾನ ಸಂಪಾದನೆಗೆ ಮೂರು ಭಕ್ತರು ನೆರವಾಗುತ್ತಾರೆ. ಅದರಲ್ಲಿ ಒಂದು ಬಿಳಿ ಬಣ್ಣದ ಮಹಾವಾನರ ಸುನ್ ವು ಕುಂಗ್. ನಮ್ಮ ಹನುಮಂತನ ಹಾಗೆ ಈ ವಾನರ ಅಸಾಧಾರಣ ವ್ಯಕ್ತಿತ್ವದವನು. ಜಿ ಶಿಯೇನ್ ಲಿನ್ ಅವರು ಈ ವಾನರನ ಪಾತ್ರಕ್ಕೆ ರಾಮಾ­ಯಣದ ಹನು­ಮಂತನೇ ಪ್ರೇರಣೆ ಇದ್ದಿರ­ಬಹುದು, ಚೀನಾದ ಸಂಸ್ಕೃತಿ ಮೇಲೆ ಭಾರತದ ಕೊಡುಗೆ ಅಪಾರ­ವಾದದ್ದು ಎಂದು ವಾದಿಸಿ­ದ್ದರು. ಸುಮಾರು ಎರಡು ದಶಕಗಳ ಹಿಂದೆ ಜಿ ಅವರ ಒಂದು ಪ್ರಬಂಧ­ವನ್ನು ಅದು ಹೇಗೋ ನಾನು ಓದಿ­ಕೊಳ್ಳುವ ಅವಕಾಶ ಬಂದಿತ್ತು. ಜಿ ಅವರ ಪ್ರಕಾರ ಪ್ರಾಣಿಗಳಲ್ಲಿ ದೈವೀಶಕ್ತಿ ಇದೆ ಎಂಬುದು ಯಾವತ್ತೂ ಚೀನಿ­ಯರ ಗ್ರಹಿಕೆಗೆ ಬಂದಂತಹ ವಿಷಯವೇ ಅಲ್ಲ. ಇಂತಹ ದೈವೀಶಕ್ತಿಯನ್ನು ಪ್ರಾಣಿ­ಗಳ ಮೇಲೆ ‘ಹೊರಿಸುವ’ ತಿಳಿವಳಿಕೆ ಪ್ರಾಣಿ­ಗಳನ್ನು ಆಹಾರ­ಕ್ಕಾಗಿ ಬಳಸಿಕೊಳ್ಳುವ ಚೀನಿ­ಯ­ರಿಗೆ ಹೇಗಾದರೂ ಬರಬೇಕು ಎಂದು ತಮಾಷೆಯಾಗಿ ಆದರೆ ಸ್ವಲ್ಪ ನಿಷ್ಠುರವಾಗಿಯೇ ವಾದ ಮಾಡುತ್ತಾರೆ. ಈ ಪ್ರಬಂಧ­ದಲ್ಲಿ ರಾಮಾ­ಯಣದ ಕಥೆ ಚೀನಾದಲ್ಲಿ ಜನಜನಿತವಾಗಿದ್ದಿ­ರಲೇ ಬೇಕು ಎಂದು ತಮ್ಮ ಅಧ್ಯಯನದ ಆಧಾರದಿಂದ ಜಿ ಅವರು ತೋರಿಸಿ­ಕೊಡುತ್ತಾರೆ.

ಸಾಂಸ್ಕೃತಿಕ ಕ್ರಾಂತಿಯ ಕಾಲದಲ್ಲಿ ಚೀನಾದಲ್ಲಿ­ರುವ ಎಲ್ಲಾ ಜ್ಞಾನವೂ ಸ್ಥಳೀಯವಾಗಿಯೇ ಹುಟ್ಟಿದ್ದು, ಬೇರೆ ದೇಶಗಳಿಂದ ಚೀನಾ ಯಾವುದನ್ನೂ ಎರವಲು ಪಡೆಯಲಿಲ್ಲ ಎನ್ನುವ ವಾದವನ್ನು ಮಾವೊ ಉಗ್ರವಾದಿಗಳು ಹುಟ್ಟು ಹಾಕಿದ್ದರು. ಭಾರತದಿಂದ ಬೌದ್ಧ ಮತದ ಜ್ಞಾನ ಹರಿದು ಬಂದಿತ್ತು ಎಂದು ಚೀನಾ ಯಾವತ್ತೋ ಒಪ್ಪಿಕೊಂಡಿತ್ತು. ಆದರೆ ಬೌದ್ಧ ಪೂರ್ವಕಾಲ­ದಿಂದಲೂ ವೈಜ್ಞಾನಿಕ ಜ್ಞಾನವೂ ಹರಿದು ಬಂದಿತ್ತು ಎಂಬುದನ್ನು ಒಪ್ಪಿಕೊಳ್ಳಲು ಮಾವೊ ಉಗ್ರವಾದಿಗಳು ತಯಾರಿರಲಿಲ್ಲ. ಅಷ್ಟೇ ಅಲ್ಲ, ಚೀನಾದಲ್ಲಿ ಕೆಲವೊಂದು ಹಳೆಯ ದೇವಸ್ಥಾನ­ಗಳ ಉತ್ಖನನ ಆಗಿದ್ದು ಅವು ‘ಹಿಂದೂ’ ಕಾಲದವು ಎಂದು ಒಪ್ಪಿಕೊಳ್ಳಲೂ ಚೀನಾ ತಯಾರಿ­ರಲಿಲ್ಲ. ಚೀನಿಯರಿಗೆ ತಮ್ಮ ವೈಜ್ಞಾನಿಕ ಪರಂಪರೆಯ ಬಗ್ಗೆ ಅಪಾರ ಅಭಿಮಾನವಿದ್ದು ಇದಕ್ಕೆ ಕಾರಣವಿರದೆ ಇರಲಿಲ್ಲ.

ಚೀನಾ 17ನೇ ಶತಮಾನದವರೆಗೆ ವಿಜ್ಞಾನದಲ್ಲಿ ವಿಶ್ವದಲ್ಲೇ ಬಹಳ ಮುಂದುವರಿದ ದೇಶವಾಗಿತ್ತು. ಜೋಸೆಫ್ ನೀಡ್ ಹ್ಯಾಮ್ ಎಂಬ ಸಂಶೋಧ­ಕರು ಚೀನಾ ಸಾಧಿಸಿದ ವೈಜ್ಞಾನಿಕ ಪ್ರಗತಿಯ ಬಗ್ಗೆ ಹಲವಾರು ಸಂಪುಟಗಳನ್ನೇ ಬರೆದಿದ್ದು ಚೀನಾ ಹೇಗೆ ವೈಜ್ಞಾನಿಕವಾಗಿ ಮುಂದುವರಿದ ದೇಶ­ವಾಗಿತ್ತು ಎಂದು ತೋರಿಸಿಕೊಟ್ಟಿದ್ದಾರೆ. ಜೀ ಶಿಯೇನ್ ಲಿನ್ ಅವರು ಚೀನಿಯರಲ್ಲಿ ವೈಜ್ಞಾನಿಕ ಜ್ಞಾನ ಇರಲಿಲ್ಲವೆಂದೋ ಅಥವಾ ಅವೆಲ್ಲವೂ ಭಾರತದಿಂದ ಬಂದದ್ದು ಎಂದೋ ಹೇಳಿರಲಿಲ್ಲ. ಪ್ರಾಚೀನ ಗ್ರಂಥಗಳ ಅಧ್ಯಯನದ ಆಧಾರದ ಮೇಲೆ ಚೀನಾಕ್ಕೆ ಭಾರತದಿಂದಲೂ ಸಾಕಷ್ಟು ಜ್ಞಾನ ಹರಿದು ಬಂದಿತ್ತು ಎಂದಷ್ಟೇ ಹೇಳಿದ್ದರು. ಚೀನಾದಿಂದ ಭಾರತಕ್ಕೆ ರೇಷ್ಮೆ ಹಾಗೂ ಪೇಪರ್ ಮಾಡುವ ಜ್ಞಾನ ಹೇಗೆ ಬಂತು ಎಂದೂ ತೋರಿಸಿಕೊಟ್ಟಿದ್ದಾರೆ. ಅಲ್ಲದೆ ಆ ಸಮಯಕ್ಕೆ ಸರಿಯಾಗಿ 1962 ರಲ್ಲಿ ಚೀನಾ-, ಭಾರತ ನಡುವೆ ನಡೆದ ಯುದ್ಧದಿಂದಾಗಿ ಎರಡೂ ದೇಶಗಳ ಸಂಬಂಧಗಳು ಮುರಿದು ಬಿದ್ದಿದ್ದವು. ಜಿ ಹಾಗೂ ಮತ್ತಿತರ ಬುದ್ಧಿಜೀವಿಗಳ ಮೇಲೆ ದೇಶದ್ರೋಹಿಗಳೆಂಬ ಆಪಾದನೆ ಹೊರಿಸಲಾಗಿ, ನೂರಾರು ಬುದ್ಧಿಜೀವಿಗಳನ್ನು ದೇಶದ ಈಶಾನ್ಯ ಪ್ರಾಂತ್ಯಗಳಿಗೆ ರೈತರ ಹೊಲದಲ್ಲಿ ದುಡಿಯಲೆಂದು ಕಳುಹಿಸಿದ್ದರು. ಆದರೆ ಜಿ ಅವರನ್ನು ಬೈಜಿಂಗ್ ವಿಶ್ವವಿದ್ಯಾ­ಲಯದ ಆವರಣದಲ್ಲಿಯೇ  ‘ದನದ ಕೊಟ್ಟಿಗೆ’ ಎಂದು ಕರೆಯಲಾಗುತ್ತಿದ್ದ ಸೆರೆಮನೆಗೆ ಅಟ್ಟ­ಲಾಯಿತು. ಇಲ್ಲಿ ಇವರಿಗೆ ಒದೆತ, ಹೊಡೆತ ಮಾತ್ರ­ವಲ್ಲದೆ ಎಲ್ಲಾ ತರದ ಅವಮಾನ ಮಾಡಲಾಯಿತು.

ಈ ಸಾಂಸ್ಕೃತಿಕ ಕ್ರಾಂತಿ ಎನ್ನುವುದು ಮುಗಿದ ಮೇಲೆ ಜಿ ಅವರ ಮತ್ತು ಇತರ ಬುದ್ಧಿಜೀವಿಗಳ ಬಿಡುಗಡೆಯಾಯಿತು. ಅಷ್ಟೇ ಅಲ್ಲ, ಬೈಜಿಂಗ್ ವಿಶ್ವವಿದ್ಯಾಲಯದಲ್ಲಿ ಜಿ ಅವರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ ಚೀನಿ ಸರ್ಕಾರ ಅವರ ಸಂಶೋಧನೆಗೆ ಅನುವು ಮಾಡಿಕೊಟ್ಟಿದ್ದೇ ಅಲ್ಲದೆ ಅವರನ್ನು ಅತ್ಯಂತ ಗೌರವದಿಂದ ನಡೆಸಿ­ಕೊಂಡಿತು. ಸೆರೆಮನೆಯಿಂದ ಬಿಡುಗಡೆಯಾದ ಮೇಲೆ ಜಿ ಅವರು ತಮ್ಮ ಸೆರೆಮನೆ ವಾಸದ ಅನುಭವವನ್ನು ‘ಮೆಮೊರೀಸ್ ಆಫ್ ದಿ ಕೌ ಶೆಡ್’ ಎಂಬ ಪುಸ್ತಕದಲ್ಲಿ ಬರೆದಿದ್ದು ಅದು ಒಂದು ಉತ್ತಮ ಕೃತಿ ಎನಿಸಿಕೊಂಡಿದೆ.

ನಮ್ಮ ದೇಶದ ಮೇಲೆ ದಂಡೆತ್ತಿ ಬಂದ ಆಕ್ರಮಣ­ಕಾರರು ನಳಂದಾ ವಿಶ್ವವಿದ್ಯಾಲಯ­ವನ್ನು ಧ್ವಂಸ ಮಾಡಿ ಗ್ರಂಥಾಲಯವನ್ನು ಸುಟ್ಟು ಹಾಕಿದ ಮೇಲೆ, ನಮ್ಮ ಬೌದ್ಧ ಕಾಲದ ಮತ್ತು ಬೌದ್ಧಪೂರ್ವದ ಚರಿತ್ರೆಯ ಸರಿಯಾದ ಅಧ್ಯ­ಯನ ಇಂದಿಗೂ ಸಾಧ್ಯವಾಗಿಲ್ಲ. ಚೀನಿ, ಟಿಬೆ­ಟನ್, ಕೊರಿಯನ್ ಭಾಷೆಯ ಗ್ರಂಥಗಳ ಅಧ್ಯ­ಯನ ಮಾಡಿದರೆ ಮಾತ್ರ ಇದು ಸಾಧ್ಯವಾಗು­ತ್ತದೆ ಎನ್ನುವುದು ನಮ್ಮ ಇತಿಹಾಸಕಾರರಿಗೆ ಗೊತ್ತಿ­ರುವ ವಿಷಯವೇ. ಭಾರತದಲ್ಲಿ ಚೀನಿ ಭಾಷೆಯಲ್ಲಿ ಪರಿಣತಿ ಇರುವವರು ಇದ್ದಾರೆ. ಆದರೆ ಅವರಲ್ಲಿ ಪ್ರಾಚೀನ ಇತಿಹಾಸದ ಅಧ್ಯ­ಯನ­ಕಾರರೂ, ಚೀನಿ ಭಾಷಾತಜ್ಞರೂ ಇರು­ವುದು ಕಡಿಮೆ. ಹಳೆಯ ತಲೆಮಾರಿನ ಡಾ. ಲತಿಕ ಲಹಿರಿಯಂತಹ ವಿದ್ವಾಂಸರು ತೀರಿಕೊಂಡ ಮೇಲೆ ಈಗ ಅಂತಹ ಸಂಶೋಧನಾ ಪ್ರವೃತ್ತಿ ಬೆಳಸಿಕೊಂಡವರು ಇಲ್ಲ ಎಂದೇ ಹೇಳಬಹುದು. ಇಂದಿನ ಚೀನಿ ಭಾಷೆಗೂ ಆ ಕಾಲದಲ್ಲಿ ಬಳಸು­ತ್ತಿದ್ದ ಚೀನಿ ಭಾಷೆಗೂ ವ್ಯತ್ಯಾಸವಿದ್ದು ಪ್ರಾಚೀನ ಕಾಲದ ಗ್ರಂಥಗಳನ್ನು ಅಭ್ಯಾಸ ಮಾಡಲು ವಿಶೇಷ ತರಬೇತಿ ಬೇಕಾಗುತ್ತದೆ.

ಈ ವರ್ಷ ಬಿಹಾರದಲ್ಲಿ ಹಳೆಯ ನಳಂದಾ ವಿಶ್ವವಿದ್ಯಾಲಯ ಇದ್ದ ಸ್ಥಳದಲ್ಲೇ ಅದೇ ಹೆಸರಿನ  ಹೊಸ ವಿಶ್ವವಿದ್ಯಾಲಯ ಆರಂಭವಾಗುತ್ತಿದೆ. ಪಾಠ, ಪ್ರವಚನಗಳು ಕೂಡಾ ಸದ್ಯದಲ್ಲೇ ಆರಂಭ­ವಾಗಬಹುದು ಎಂಬ ನಿರೀಕ್ಷೆಯೂ ಇದೆ. ಭಾರತ, ಚೀನಾ, ಕೊರಿಯಾ ಮತ್ತು ಸಿಂಗಪುರ ಸರ್ಕಾರಗಳ ನೆರವಿನಿಂದ ಈ  ವಿಶ್ವವಿದ್ಯಾಲಯ ತಲೆ ಎತ್ತುತ್ತಿದೆ. ಕೆಲಸ ಕಾರ್ಯಗಳು ಈಗಾಗಲೇ ಆರಂಭವಾಗಿವೆ. ಭಾರತದಲ್ಲಿ ಇದರ ರೂವಾರಿ ನೊಬೆಲ್ ಪುರಸ್ಕಾರ ವಿಜೇತ ಅರ್ಥಶಾಸ್ತ್ರಜ್ಞ ಡಾ.ಅಮರ್ತ್ಯ ಸೆನ್ ಅವರು. ಅವರು ಈ ಯೋಜನೆ­ಯನ್ನು ಚೀನಿ ಸರ್ಕಾರದೊಂದಿಗೆ ಬಹಳ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ.  ಅವರ ಪುಸ್ತಕ The Argumentative Indian ನಲ್ಲಿ ಜಿ ಅವರು ಹೇಳಿದ್ದನ್ನೇ ಸೆನ್ ರವರು ಸುತ್ತಿ ಬಳಸಿ ಚೀನಿಯರಿಗೆ ಅಪ್ರಿಯವೆನಿಸದ ಹಾಗೆ ಅದೆಷ್ಟು ನಯವಾಗಿ ಹೇಳಿದ್ದಾರೆ ಎಂಬುದನ್ನು ಓದಿದರೆ ನಳಂದಾ ವಿಶ್ವವಿದ್ಯಾಲಯದ ಕೆಲಸವನ್ನು ಸಮ­ರ್ಪಕ­ವಾಗಿ ನಿರ್ವಹಿಸಲು ಅಮರ್ತ್ಯ ಸೆನ್ ರಂತಹ ಸೂಕ್ಷ್ಮಮತಿಗಳಿಗೆ ಸಾಧ್ಯ ಎನ್ನುವುದು ಗೊತ್ತಾಗುತ್ತದೆ. ಜಿ ಮತ್ತಿತರ ಚೀನಿ ವಿದ್ವಾಂಸರ ಪುಸ್ತಕಗಳು ನಮ್ಮ ದೇಶದ ಚರಿತ್ರೆಯ ಅಧ್ಯಯನದ ಮೇಲೆ ಎಷ್ಟು ಬೆಳಕು ಚೆಲ್ಲುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ. ಚೀನಾದ ಬುದ್ಧಿಜೀವಿಗಳು ನಮ್ಮ ದೇಶದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡ ಭಾರತದ ಕಟ್ಟಾ ಅಭಿಮಾನಿಗಳೂ ಆಗಿದ್ದಾರೆ ಎನ್ನುವು­ದನ್ನು ನಾವು ಮನಗಾಣುವ ಸಮಯವೂ ಹತ್ತಿರವಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT