ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷಕ್ಕೆ ಇಲ್ಲಿ ಎಡೆಯಿಲ್ಲ...

ಅಕ್ಷರ ಗಾತ್ರ

ಹುಡುಗನೊಬ್ಬ ಹುಡುಗಿಯರಿಂದ ಆಕರ್ಷಿತನಾಗದೆ ಹೋದರೆ ಅದು ಹುಡುಗನಿಗಿಂತಲೂ ಹೆಚ್ಚು ಅವನ ತಂದೆತಾಯಿಯರನ್ನು ಗಾಸಿಗೊಳಿಸುತ್ತದೆ. ‘ಸಲಿಂಗಕಾಮ ಪಾಪ, ಅಪರಾಧ’ ಎನ್ನುವ ಮನಸ್ಥಿತಿಯಿಂದ ಹೊರಬರಲು ನಮ್ಮ ಸಮಾಜಕ್ಕಿನ್ನೂ ಸಾಧ್ಯವಾಗಿಲ್ಲ. ಇಂಥ ಸಂದರ್ಭದಲ್ಲಿ ತಾಯಿಯೊಬ್ಬಳು ತನ್ನ ಮಗ ‘ಗೇ’ ಎನ್ನುವುದನ್ನು ತಿಳಿದು, ಆರಂಭದಲ್ಲಿ ಅದಕ್ಕೆ ವಿರೋಧ ವ್ಯಕ್ತಪಡಿಸಿದರೂ, ತದನಂತರ ಮಗನ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವ ಅಪರೂಪದ ಕಥನ ಇದು.

ನಡುರಾತ್ರಿಯಲ್ಲಿ ಗರ್ಭದಿಂದ ಮಗು ಜಾರಿ ಬಂದಾಗ ನನಗೆ ಪ್ರಜ್ಞೆ ತಪ್ಪಿತ್ತು. ಎರಡು ಗಂಟೆಗಳ ನಂತರ ನಾನು ಕಣ್ಣು ತೆರೆದಾಗ ಆಯಾ ‘ಗಂಡು ಮಗು’ ಎಂದು ತಿಳಿಸಿದ್ದಳು. ಆನಂತರ ಮತ್ತೊಮ್ಮೆ ನನಗೆ ಪ್ರಜ್ಞೆ ತಪ್ಪಿತ್ತು. ಮರುದಿನ ಬೆಳಿಗ್ಗೆ ನನ್ನ ಪತಿ ಮತ್ತು ಕುಟುಂಬದವರು ನೋಡಲು ಬಂದರು. ನಮ್ಮ ಮಗನನ್ನು ನೋಡಿದರೆ ಅವನು ಸೀನುತ್ತಿದ್ದ. ಆ ಕ್ಷಣದಿಂದಲೇ ನಮ್ಮಿಬ್ಬರಿಗೆ ಅವನ ಮೇಲೆ ಪ್ರೀತಿ ಶುರುವಾಯ್ತು. ಸಾಮಾನ್ಯವಾಗಿ ಎಳೆಯ ಮಕ್ಕಳು ಹೆತ್ತವರನ್ನು ನಿದ್ರಿಸಲು ಬಿಡುವುದಿಲ್ಲವಾದರೂ, ಇವನು ಸಾಕಷ್ಟು ನಿದ್ರೆ ಮಾಡುತ್ತಿದ್ದ. ತನ್ನ ಸಮವಯಸ್ಕರಿಗಿಂತಲೂ ಅವನು ವಿಭಿನ್ನವಾಗಿದ್ದ.

ಶಾಲೆಗೆ ಹೋಗಲು ಶುರು ಮಾಡಿದಾಗ ಅವನಿಗೆ ಅತ್ಯಂತ ಇಷ್ಟವಾಗುತ್ತಿದ್ದ ಏಕೈಕ ಸಂಗತಿಯೆಂದರೆ ಆಟಿಕೆಗಳು– ಸ್ಪೋರ್ಟ್ಸ್ ಕಾರು, ಟ್ರಕ್ಕು ಇತ್ಯಾದಿ. ನನಗಿಂತಲೂ ಅವರಪ್ಪನ ಬಳಿಯೇ ಅಂತಹವನ್ನು ಹೆಚ್ಚಾಗಿ ಕೇಳಿ ಪಡೆಯುತ್ತಿದ್ದ ಮತ್ತು ಅದೊಂದೇ ಅವನ ಕೋರಿಕೆಯಾಗಿರುತ್ತಿತ್ತು. ‘ತಾತೈ’ ಶಾಲೆಗೆ ಹೋಗಲು ಶುರು ಮಾಡಿದ ನಂತರ ನಾವಿಬ್ಬರೂ ನೌಕರಿಗೆ ಹೋಗಲಾರಂಭಿಸಿದೆವು. ಅವನು ಸಾಮಾನ್ಯವಾಗಿ ಏಕಾಂಗಿಯಾಗಿಯೇ ಇರುತ್ತಿದ್ದ, ಕೆಲವೊಮ್ಮೆ ನೆರೆಹೊರೆಯವರೊಡನೆ ಅಥವಾ ಅಜ್ಜಿಯೊಂದಿಗೆ ಸಮಯ ಕಳೆಯುತ್ತಿದ್ದ. ಅವನ ಕಜಿನ್‌ಗಳು ತುಂಬಾ ದೊಡ್ಡವರಾದ್ದರಿಂದ ಅವರೊಡನೆ ಆಡಲು ಸಾಧ್ಯವಿರಲಿಲ್ಲ. ಅವನ ವರ್ತನೆಯ ಬಗ್ಗೆಯೇ ಆಗಲಿ ಅಥವಾ ಅವನ ಬಗ್ಗೆಯೇ ಆಗಲಿ ಯಾವುದೇ ದೂರನ್ನು ನನ್ನ ಅತ್ತೆಯವರಾಗಲಿ ಅಥವಾ ಹೊರೆಹೊರೆಯವರಾಗಲಿ ನೀಡಿದ್ದಿಲ್ಲ. ತನ್ನ ಹೋಂವರ್ಕ್, ಕಾರ್ಟೂನ್ಸ್ ಮತ್ತು ಆಟಿಕೆಗಳೊಡನೆ ಅವನು ಸಂತೋಷದಿಂದಿರುತ್ತಿದ್ದ.

ನಾನು ಮನೆ ಸೇರಿದ ತಕ್ಷಣ ಮಾಡುತ್ತಿದ್ದ ಮೊದಲ ಕೆಲಸವೆಂದರೆ ಅವನ ಕತೆಗಳನ್ನು ಕೇಳುವುದಾಗಿರುತ್ತಿತ್ತು– ಅವನು ಕಾಗೆಗಳನ್ನು ಹೇಗೆ ಬೈಯ್ದು ಓಡಿಸಿದ, ತನ್ನ ಮರಿಗಳಿಗೆ ನಾಯಿ ಹೇಗೆ ಊಟ ಉಣ್ಣಿಸಿತು, ನೊಣಗಳು ಹಸುವನ್ನು ಹೇಗೆ ಪೀಡಿಸಿದವು ಇತ್ಯಾದಿ. ರಾತ್ರಿ ಮಲಗುವಾಗ ನಮ್ಮಿಬ್ಬರ ಮಧ್ಯೆ ಭಯವಿಲ್ಲದೆ ಮಲಗಲು ಹಟ ಮಾಡುತ್ತಿದ್ದ. ಅವನ ಶಾಂತ ಮತ್ತು ಮೃದು ಸ್ವಭಾವದಿಂದಾಗಿ ಅವನನ್ನು ನಾವು ಮತ್ತಷ್ಟು ಪ್ರೀತಿಸುತ್ತಿದ್ದೆವು. ಹುಡುಗಿಯರ ಮತ್ತು ಹೆಂಗಸರ ಮಧ್ಯದಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯಲು ಅವನು ಇಷ್ಟ ಪಡುತ್ತಿದ್ದ. ನನ್ನ ಗಂಡ ಅದಕ್ಕೆ ತಮಾಷೆ ಮಾಡುತ್ತಿದ್ದ. ಆದರೆ ನನಗ್ಯಾಕೋ ಅದು ಅಸಹಜ ಎಂದು ಅನ್ನಿಸುತ್ತಿತ್ತು. ಅವನು ಉಳಿದ ಹುಡುಗರಂತಿರಲಿಲ್ಲ, ಅವನ ಶಾಂತತೆ ನನಗೆ ವಿಪರೀತವೆನ್ನಿಸುತ್ತಿತ್ತು.

ಒಂದು ಸಲ– ಅವನಿಗಾಗ ಎಂಟು ವರ್ಷ ಇರಬೇಕು– ನಾನು ಬಳಸುವ ಲಿಪ್‌ಸ್ಟಿಕ್‌ನ ಪರಿಮಳವನ್ನು ಆಘ್ರಾಣಿಸುವುದಾಗಿ ಆಸೆ ವ್ಯಕ್ತಪಡಿಸಿದ. ಅದನ್ನು ಆಘ್ರಾಣಿಸಿದ ಮೇಲೆ, ಅದನ್ನು ಬಳಸಲಾ ಎಂದು ಕೇಳಿದ. ಇದು ನನಗೆ ಸಿಕ್ಕ ಮೊದಲ ಸುಳಿವಾಗಿತ್ತು ಮತ್ತು ಅವನ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡಿತು. ನಾನು ಒಪ್ಪಿ ತಲೆಯಾಡಿಸಿದ ತಕ್ಷಣ, ಅವನು ಅತ್ಯಂತ ನಾಜೂಕಾಗಿ ತುಟಿಗೆ ಹಚ್ಚಿಕೊಂಡದ್ದು ನನಗೆ ಆಶ್ಚರ್ಯ ಮೂಡಿಸಿತು. ಲಿಪ್‌ಸ್ಟಿಕ್ ಹಚ್ಚಿಕೊಂಡ ನಂತರ ಹುಡುಗಿಯರು ತುಟಿಗಳನ್ನು ಒತ್ತಿಕೊಳ್ಳುವಂತೆ ಅವನೂ ಮಾಡಿದ. ಬಹುದಿನಗಳಿಂದ ನನ್ನನ್ನು ಗಮನಿಸುತ್ತಿರಬೇಕೆಂದು ಅರ್ಥ ಮಾಡಿಕೊಂಡೆ. ಈ ಘಟನೆಯನ್ನು ಮನೆಯವರಿಗೆ ಹೇಳಿದಾಗ, ತನ್ನ ಹೆಂಡತಿಗೆ ಎಂತಹ ಲಿಪ್‌ಸ್ಟಿಕ್ ಕೊಳ್ಳಬೇಕೆಂದು ಈಗಿನಿಂದಲೇ ತಯಾರಿ ನಡೆಸಿದ್ದಾನೆ ಎಂದು ತಮಾಷೆ ಮಾಡಿದರು. ಅವರೊಂದಿಗೆ ನಾನೂ ನಕ್ಕೆನಾದರೂ, ಒಳಗಿಂದಲೇ ಅನುಮಾನವೊಂದು ನನ್ನನ್ನು ಚುಚ್ಚುತ್ತಿತ್ತು. ಅವನು ಬೆಳೆದಂತೆಲ್ಲಾ ಹುಡುಗಿಯರ ಜೊತೆಯಲ್ಲಿಯೇ ಹೆಚ್ಚಿಗೆ ಆಡುತ್ತಿದ್ದುದು ಕಂಡಾಗ ಆ ಅನುಮಾನ ಇನ್ನಷ್ಟು ದಟ್ಟವಾಯ್ತು. ಶಾಲೆಯಲ್ಲಿ ಇತರ ಹುಡುಗರ ಜೊತೆಗೆ ಆಡಲು ಅವನು ಆಸಕ್ತಿ ತೋರುತ್ತಿಲ್ಲ ಎಂಬ ಸಂಗತಿಯನ್ನು ನಾವು ನಿರ್ಲಕ್ಷಿಸಿದೆವು.

ಒಂದು ದಿನ ಊಟವಾದ ಮೇಲೆ ನನಗೆ ಕತೆ ಹೇಳೆಂದು ಕೇಳಿದ. ಸುಂದರ ರಾಜಕುಮಾರಿಯನ್ನು ದೈತ್ಯನ ಮುಷ್ಟಿಯಿಂದ ಕಾಪಾಡಿದ ರಾಜಕುಮಾರನ ಕತೆಯನ್ನು ಹೇಳಿದೆ. ಆಗ ಅವನು ‘ಅಮ್ಮಾ, ನನ್ನನ್ನು ಯಾರು ಕಾಪಾಡ್ತಾರೆ?’ ಎಂದಿದ್ದು ಈಗಲೂ ನನ್ನ ಕಿವಿಯಲ್ಲಿ ಅನುರಣಿಸುತ್ತದೆ. ‘ನಿನ್ನನ್ನು ಯಾರಿಂದ ಪಾರು ಮಾಡಬೇಕು’ ಎಂದು ಕೇಳಿದಾಗ, ಶಾಲೆಯಲ್ಲಿ ಉಳಿದ ಹುಡುಗರು ಅವನನ್ನು ‘ಹೆಣ್ಣಾಡಂಗಿ’ ಎಂದು ಕರೆಯುತ್ತಾರೆ ಎಂದು ಹೇಳಿದ. ಅವನ ವಿಶೇಷ ಶಾಂತತೆ ಮತ್ತು ಒಂದೆರಡು ಲಿಪ್‌ಸ್ಟಿಕ್ ಘಟನೆಯನ್ನು ಬಿಟ್ಟರೆ ನಾನು ಬೇರೇನೂ ದೋಷವನ್ನು ಅವನಲ್ಲಿ ಕಂಡಿರಲಿಲ್ಲ. ಆ ರೀತಿ ಹುಡುಗರು ಯಾಕೆ ಕರೆಯುತ್ತಾರೆ ಎಂದು ಕೇಳಿದಾಗ, ಅವನೊಮ್ಮೆ ಹುಡುಗನೊಬ್ಬನನ್ನು ತನ್ನ ಗಂಡನಾಗೆಂದು ಕೇಳಿಕೊಂಡಿದ್ದನಂತೆ. ನನ್ನ ಜಗತ್ತೇ ಕುಸಿದಂತಾಯ್ತು.

ಅವನಿಗೆ ಹೇಗೆ ಕೆನ್ನೆಗೆ ಬಾರಿಸಿದೆನೆಂದರೆ ಬಾಯಲ್ಲಿ ರಕ್ತ ಒಸರಲಾರಂಭಿಸಿತು! ಅತ್ಯಂತ ಸಿಟ್ಟಿನಿಂದ, ಇನ್ನು ಮುಂದೆ ಓದಿನ ಕಡೆಗೆ ಗಮನ ಕೊಡಬೇಕೆಂದು ಮತ್ತು ಸ್ನೇಹಿತರ ಮಧ್ಯೆ ಹೆಂಡತಿಗಾಗಿ ಆಪೇಕ್ಷೆ ಪಡಬೇಕೇ ಹೊರತು ಗಂಡನಿಗಲ್ಲವೆಂದು ಹೇಳಿದೆ. ಮತ್ತೊಮ್ಮೆ ಅವನು ಅದೇ ರೀತಿ ಮಾಡಿದರೆ ತನ್ನನ್ನು ಅಮ್ಮಾ ಎಂದೂ ಕರೆಯುವ ಹಾಗಿಲ್ಲವೆಂದು ಹೆದರಿಸಿದೆ. ಅದೇ ಕೊನೆ! ಮತ್ತೆಂದೂ ಅವನು ತನ್ನ ಹೆಣ್ತನದ ಬಗ್ಗೆ ನನ್ನೊಡನೆ ಮಾತನಾಡಲಿಲ್ಲ. ಆಗವನಿಗೆ ಒಂಬತ್ತು ವರ್ಷ! ಆ ದಿನ ಅವನು ಏನೆಂದು ಅರ್ಥ ಮಾಡಿಕೊಂಡನೋ ಗೊತ್ತಿಲ್ಲ. ಬಹುಶಃ ಅಮ್ಮನನ್ನು ಕಳೆದುಕೊಳ್ಳುವ ಭಯ ಅವನಿಗಾಗಿರಬೇಕು ಅಥವಾ ಮುಂದೆ ಸಮಾಜದಿಂದ ಇಂತಹ ಹಲವು ಕಪಾಳಮೋಕ್ಷಗಳು ಕಾದಿವೆಯೆಂಬುದು ಅರಿವಾಗಿರಬೇಕು.

ಅಂದಿನಿಂದ ತನ್ನ ಸರೀಕ ಹುಡುಗರೊಡನೆ ಕ್ರಿಕೆಟ್ ಆಡುವುದು, ಈಜುವುದಕ್ಕೆ ಮತ್ತು ಜಿಮ್‌ಗೆ ಸೇರಿಕೊಳ್ಳುವುದು, ಅನಂತರ ಫುಟ್‌ಬಾಲ್ ಆಡುವುದನ್ನು ರೂಢಿಸಿಕೊಂಡ. ಅವನು ಸುಸ್ತಾಗಿ ಮನೆಗೆ ಹಿಂತಿರುಗುವಾಗ ಅವನ ಕಣ್ಣುಗಳನ್ನು ನೋಡಿದರೆ, ಆ ಆಟಗಳಿಂದ ಅವನು ಸಂತೋಷವಾಗಿಲ್ಲವೆಂದು ನನಗೆ ತಿಳಿಯುತ್ತಿತ್ತು. ಆದರೂ ಫುಟ್‌ಬಾಲ್, ಕ್ರಿಕೆಟ್ ಆಡುವ, ಗೊಂಬೆಗಳನ್ನು ಒಲ್ಲದ ಗಂಡು ಮಗ ನನ್ನ ಹುಡುಗನೆಂದು ಹೆಮ್ಮೆಯಾಗುತ್ತಿತ್ತು.

ಹತ್ತನೆಯ ತರಗತಿಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿದ ಅವನು, ಮುಂದಿನ ಓದಿಗೆ ವಿಜ್ಞಾನದ ಬದಲು ಕಲಾ ಪ್ರಕಾರವನ್ನು ತೆಗೆದುಕೊಳ್ಳಬಹುದೇ ಎಂದು ಅವರಪ್ಪನನ್ನು ಕೇಳಿದ. ‘ಆರ್ಟ್ಸ್‌ ಓದುವದಾದರೆ ಇವತ್ತೇ ಮನೆ ಬಿಟ್ಟು ನಡಿ’ ಎಂದು ಅವರಪ್ಪ ನಿರ್ದಾಕ್ಷಿಣ್ಯವಾಗಿ ತಿಳಿಸಿದರು. ನನ್ನ ಕಡೆಗೆ ದೈನ್ಯದಿಂದ ನೋಡಿದ ಅವನು, ಇಂಗ್ಲಿಷ್ ಮೇಜರ್ ಮಾಡಬೇಕೆಂಬ ತನ್ನ ಆಸೆಯನ್ನು ವ್ಯಕ್ತಪಡಿಸಿದ. ಅವನ ಗೆಳೆಯರೆಲ್ಲಾ ವಿಜ್ಞಾನವನ್ನು ತೆಗೆದುಕೊಂಡು ಡಾಕ್ಟರು ಮತ್ತು ಎಂಜಿನಿಯರ್ ಆಗಲು ಸಿದ್ಧರಾಗಿದ್ದರು. ಇಲ್ಲಿಯೂ ಅವನ ವಿಭಿನ್ನತೆ ನನಗೆ ಕಂಡಿತ್ತಾದರೂ ಆರ್ಟ್ಸ್ ತೆಗೆದುಕೊಳ್ಳಲು ನಾವು ಅವನಿಗೆ ಬಿಡಲಿಲ್ಲ. ಮುಂದೆ ಪಿಯುಸಿಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿ ನಾವು ಹೆಮ್ಮೆಯಿಂದ ಬೀಗುವಾಗ, ಅವನ ಸಂತೋಷವನ್ನು ಪರಿಗಣಿಸುವುದನ್ನೇ ನಾವು ಮರೆತಿದ್ದೆವು. ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜು ಅಥವಾ ಸೇಂಟ್ ಗ್ಜೇವಿಯರ್ ಕಾಲೇಜಿನಲ್ಲಿ ಭೌತಶಾಸ್ತ್ರವನ್ನು ಮಾಡಬೇಕೆನ್ನುವ ಆಸೆಯನ್ನು ವ್ಯಕ್ತಪಡಿಸಿದ. ಅವನ ಆಯ್ಕೆಯ ದಡ್ಡತನವನ್ನು ಹೀಯಾಳಿಸಿ ಅವನನ್ನು ಜರಿದೆವು.

ಅತಿ ಶೀಘ್ರದಲ್ಲಿ ಹಣವನ್ನು ಗಳಿಸುವ ಎಂಜಿನಿಯರಾಗೆಂದು ಅವನನ್ನು ಬಲವಂತಪಡಿಸಿದೆವು. ಆದರೆ ಈಗ ನನಗೆ ಅವನು ನಿಜವಾಗಿಯೂ ಒಳ್ಳೆಯ ಆರ್ಟ್ಸ್ ವಿದ್ಯಾರ್ಥಿ ಆಗುತ್ತಿದ್ದ ಎಂಬುದು ಅರಿವಾಗಿದೆ. ಇಂಗ್ಲಿಷ್ ತೆಗೆದುಕೊಳ್ಳಲು ಒಪ್ಪಿದ್ದರೆ ಸಂತೋಷವಾಗಿರುತ್ತಿದ್ದ. ಆ ದಿನಗಳಲ್ಲಿ ಅವನು ದಿನಚರಿಯನ್ನು ಬರೆಯುತ್ತಿದ್ದ; ಈಗಲೂ ಹವ್ಯಾಸ ಉಳಿಸಿಕೊಂಡಿದ್ದಾನೋ ಇಲ್ಲವೋ ಗೊತ್ತಿಲ್ಲ. ಒಮ್ಮೆ ಅದನ್ನು ನಾನು ಓದಿದೆ; ಬೆಂಗಾಳಿ ಭಾಷೆಯಲ್ಲಿ ಬರೆದಿದ್ದ ಕವನಗಳನ್ನು ಓದಿ ಬೆರಗಾದೆ. ಹದಿನೈದು ವರ್ಷದ ಹುಡುಗ ಅಷ್ಟೊಂದು ಪ್ರಬುದ್ಧವಾಗಿ ಬರೆಯಲು ಹೇಗೆ ಸಾಧ್ಯ? ಜಾತ್ಯತೀತತೆ, ಧರ್ಮ, ಸ್ತ್ರೀಶಕ್ತಿ, ಲಿಂಗ ತಾರತಮ್ಯ, ಹಿಜ್ಡಾ ಸಮಸ್ಯೆ, ವೇಶ್ಯೆ ಮತ್ತಿತರ ವಿಷಯಗಳು ಆ ಕವನಗಳಲ್ಲಿ ಆಳವಾಗಿ ಮೂಡಿದ್ದವು. ಮನೆಗೆ ಇಂಟರ್‌ನೆಟ್ ಬಂದ ಮೇಲಂತೂ ನಾಟಕ ಇನ್ನಷ್ಟು ಮುಂದುವರೆಯಿತು. ಅಶ್ಲೀಲ ವಿಡಿಯೋವೊಂದನ್ನು ನೋಡುತ್ತಿರುವಾಗ ನನ್ನ ಕೈಗೆ ಸಿಕ್ಕಿ ಬಿದ್ದ.  

ನಮ್ಮಿಬ್ಬರಿಗೂ ಮುಜುಗರವಾಯಿತಾದರೂ, ಆ ವಿಡಿಯೋದಲ್ಲಿನ ಇಬ್ಬರು ಗಂಡಸರ ನಡುವಿನ ಕಾಮದ ದೃಶ್ಯವನ್ನು ಕಂಡು ನನಗೆ ಆಘಾತವಾಯ್ತು! ನನ್ನನ್ನು ನಾನು ಶಾಂತಗೊಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಪಟ್ಟೆ. ಅವನ ಪಿಯುಸಿ ಎರಡನೆಯ ವರ್ಷದ ಪರೀಕ್ಷಾ ದಿನಗಳವು. ಆದ್ದರಿಂದ ಓದಿನ ಕಡೆಗೆ ಗಮನ ಕೊಡಲು ಹೇಳಿದೆ. ಆದರೆ ನನಗಾಗಲೇ ಅವನು ಬೇರೆ ಎಂದು ಸ್ಪಷ್ಟವಾಗಿತ್ತು. ಅವನಿಗೆ ಏನೋ ನನ್ನೊಡನೆ ಹೇಳುವುದಿದೆ ಎಂಬುದು ನನಗೆ ಅರ್ಥವಾಗಿತ್ತಾದರೂ, ಮನೆಯ ವಾತಾವರಣವನ್ನು ಅದೆಷ್ಟು ಗಂಭೀರ ಮಾಡಿಬಿಟ್ಟೆವೆಂದರೆ, ‘ತಾನು ಗೇ’ ಎಂದು ಹೇಳಿಕೊಂಡು ಹಗುರಾಗುವ ಅವಕಾಶವನ್ನೇ ನಾವವನಿಗೆ ಕೊಡಲಿಲ್ಲ. ನನಗಂತೂ ‘ಗೇ’ ಎನ್ನುವ ಪದವೇ ಭಯ ಮೂಡಿಸುತ್ತಿತ್ತು. ಉಳಿದವರಿಗೆ ಈ ವಿಷಯ ಗೊತ್ತಾದರೆ ಗತಿಯೇನು, ಸಮಾಜ ಅವನಿಗೇನಾದರೂ ಕೆಡುಕನ್ನು ಮಾಡಿದರೆ ಏನು ಮಾಡುವುದು?

ಒಂದು ದಿನ, ಅವನೊಬ್ಬನೇ ರೂಮಿನಲ್ಲಿ ಕುಳಿತು ಅಳುತ್ತಿರುವದನ್ನು ನಾನು ನೋಡಿದೆ, ಆದರೆ ಅವನನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತೆ. ‘ಮಗು ಅಳಬೇಡ, ನಾವಿಬ್ಬರೂ ನಿನ್ನ ಜೊತೆಗಿದ್ದೇವೆ’ ಎಂದು ನಾನಾಗಲೀ, ಅವರಾಗಲಿ ಹೇಳಲಿಲ್ಲ. ಹೆತ್ತವರಾಗಿ ಅದು ನಮ್ಮ ಸೋಲೆಂದು ನಾನು ಪರಿಗಣಿಸುತ್ತೇನೆ.

ಮೊದಲ ವರ್ಷದ ಎಂಜಿನಿಯರಿಂಗ್ ಓದುವಾಗ ಅವನು ಅತ್ಯಂತ ಖುಷಿಯಲ್ಲಿದ್ದಾನೆಂಬುದನ್ನು ಗಮನಿಸಿದೆ. ಅವನ ಕೆನ್ನೆಗೆ ಹೊಡೆದ ನಂತರದ ಹತ್ತು ವರ್ಷಗಳಲ್ಲಿ ಅವನು ಅಷ್ಟೊಂದು ಖುಷಿಯಾಗಿರುವುದನ್ನು ನಾನು ನೋಡಿಯೇ ಇರಲಿಲ್ಲ. ಅವನ ಜೊತೆಯಲ್ಲಿ ಸಾಕಷ್ಟು ಅನ್ಯೋನ್ಯವಾಗಿರುವ ಕಜಿನ್ ಒಬ್ಬನಿಗೆ ಅವನೊಡನೆ ಮಾತನಾಡಲು ಹೇಳಿದೆ. ಈಗವನು ನಮ್ಮಿಬ್ಬರೊಡನೆ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಿದ್ದ. ಬಾಲ್ಯದಲ್ಲಿ ಅವನು ಕೇಳಿದ ಆಟಿಕೆಗಳನ್ನು ಹೊರತುಪಡಿಸಿದರೆ, ಬೇರೆ ಎಲ್ಲ ಬೇಡಿಕೆಗಳನ್ನೂ ನಾವಿಬ್ಬರು ನಿರಾಕರಿಸಿದ್ದೆವು. ಒಂದು ತಿಂಗಳ ನಂತರ ಅವನ ಗೆಳೆಯನೊಬ್ಬ ನನ್ನೊಡನೆ ‘ಆಂಟಿ, ತಾತೈ ಪ್ರೀತಿ ಮಾಡ್ತಾ ಇದಾನೆ’ ಎಂದು ಹೇಳಿದ.

ನಾನು ಅವನು ಚಾಟ್ ಮಾಡುವದನ್ನೂ, ರೂಮಿಗೆ ಹೆಜ್ಜೆ ಇಟ್ಟ ತಕ್ಷಣ ಚಾಟ್ ವಿಂಡೋವನ್ನು ಮಾಯ ಮಾಡುವುದನ್ನೂ ಗಮನಿಸಿದ್ದೆ. ಆನಂತರ ಒಂದು ದಿನ ಅವನ ಮೊಬೈಲ್‌ನ ಮೆಸೇಜ್‌ಗಳನ್ನು ಗಮನಿಸುವಾಗ ಹುಡುಗನೊಬ್ಬ ‘ನಿನ್ನ ಕರೆಗಾಗಿ ಕಾಯುತ್ತಿರುವೆ ಡಾರ್ಲಿಂಗ್’ ಎಂದು ಕಳುಹಿಸಿರುವುದನ್ನು ಗಮನಿಸಿದೆ. ಅವನು ನನಗೆ ಇನ್ನಷ್ಟು ಅರ್ಥವಾಗಲಾರಂಭಿಸಿದ; ಆದರೆ ಏನೂ ಆಗಿಲ್ಲವೆನ್ನುವಂತೆ ಸುಮ್ಮನೆ ಇರಲು ಪ್ರಯತ್ನ ಪಟ್ಟೆ. ‘ಯಾರು ಈ ಹುಡುಗ? ನಿನಗಿಂತ ದೊಡ್ಡೋನೋ ಇಲ್ಲಾ ಚಿಕ್ಕೋನೋ?’ ಎಂದು ಕೇಳಿದೆ. ತಾತೈ ಆಘಾತ ಮತ್ತು ಭಯದಲ್ಲಿ ಅಳಲಾರಂಭಿಸಿದ. ‘ಓದಿನ ಕಡೆ ಧ್ಯಾಸ ಕೊಡು’ ಎಂದು ನಾನು ಮತ್ತದೇ ಹಳೆಯ ನುಡಿಮುತ್ತುಗಳನ್ನು ಉದುರಿಸಿದೆ. ಅವನು ‘ತಾನು ಗೇ’ ಎಂದು ಹೇಳುತ್ತಲೇ ಹೋದ, ನಾನು ಕೇಳಿಲ್ಲವೆಂಬಂತೆ ನಟಿಸುತ್ತಲೇ ಹೋದೆ.

ನನ್ನ ಮಗನ ಬಗ್ಗೆ ನನಗೆ ಯಾವ ತಕರಾರೂ ಇಲ್ಲವಾದರೂ, ಅವನು ತನ್ನ ಅನಿಸಿಕೆಗಳನ್ನು ಮತ್ತು ಸಮಸ್ಯೆಗಳನ್ನು ಧೈರ್ಯದಿಂದ ಹೇಳಲು ಹಿಂಜರಿಯುತ್ತಾನೆಂದು ಬಲ್ಲೆ. ಅತ್ಯಂತ ನಾಚಿಕೆಯ ಅವನ ಸ್ವಭಾವ ಎಲ್ಲದಕ್ಕೂ ಹಿಂಜರಿಯುವಂತೆ ಮಾಡುತ್ತದೆ. ಯಾವುದರ ಬಗ್ಗೆಯೂ ತಕರಾರು ತೆಗೆಯದೆ, ಇದ್ದುದರಲ್ಲಿಯೇ ಹೊಂದಿಕೊಂಡು ಸಂತೋಷವಾಗಿರುವ ಸ್ವಭಾವ ಅವನದು. ಅದರಲ್ಲಿ ಅವನ ತಪ್ಪೇನೂ ಇಲ್ಲ, ಬಹುಶಃ ನಾವೇ ಅವನಿಗೆ ಮಾತನಾಡಲು ಆಸ್ಪದ ಕೊಡದೆ ಹೀಗೆ ಮಾಡಿರಬೇಕು ಅಥವಾ ಅದು ಅವನ ಹಿಂಜರಿಕೆ ಸ್ವಭಾವವೂ ಆಗಿರಬಹುದು.

ಅವನು ನನ್ನೊಡನೆ ಸತ್ಯವನ್ನು ನುಡಿದ ಒಂದು ವರ್ಷದ ನಂತರ, ಅವನ ಕಜಿನ್ ನನಗೊಂದು ಸಿಹಿ ಸುದ್ದಿಯನ್ನು ಕೊಟ್ಟ. ಇವನು ಪ್ರೇಮಿಸಿದ್ದ ಹುಡುಗ ಇವನನ್ನು ಬಿಟ್ಟುಹೋಗಿದ್ದ. ನನಗೆ ಸಂತೋಷವಾಯ್ತು. ನಿಜ, ಸಂತೋಷವಾಯ್ತು! ಬಹುಶಃ ಈ ಘಟನೆ ಅವನನ್ನು ನಾನು ಸಹಜ ಎಂದು ಪರಿಗಣಿಸುವ ಸ್ಥಿತಿಗೆ ತರುವಲ್ಲಿ ಸಹಾಯಕ್ಕೆ ಒದಗಬಹುದೆಂದು ಆಶಿಸಿದೆ. ಈ ಸಹಜ ಬೆಳವಣಿಗೆ ಇನ್ನಷ್ಟು ವೇಗವನ್ನು ಪಡೆದುಕೊಳ್ಳಲೆಂದು ಮನೆಯಲ್ಲಿ ನಾವಿಬ್ಬರೂ ಅವನ ಎದುರಿನಲ್ಲಿಯೇ ಗೇಗಳ ಸ್ವಭಾವವನ್ನು ಅವಾಚ್ಯ ಭಾಷೆಯಲ್ಲಿ ಜರಿಯಲಾರಂಭಿಸಿದೆವು. ಆದರೆ ನಮ್ಮಿಬ್ಬರ ಈ ಒರಟುತನ ಅವನನ್ನು ಅನಾಥನನ್ನಾಗಿಸಿ, ಕುಸಿಯುವಂತೆ ಮಾಡುತ್ತದೆಂದು ನಮಗೆ ತಿಳಿಯಲಿಲ್ಲ.

ಇದೇ ವೇಳೆಯಲ್ಲಿ ಅವನು ತನ್ನ ಗೆಳತಿಯೊಬ್ಬಳೊಂದಿಗೆ ಹೆಚ್ಚು ಹತ್ತಿರವಾಗಿದ್ದ ಮತ್ತು ಆಕೆ ನಮಗೆ ತುಂಬಾ ಇಷ್ಟವಾದಳು. ಅವನ ಮುಂದೆ ಆಕೆಯನ್ನು ವಿಪರೀತವಾಗಿ ಹೊಗಳಿದ್ದೇ ಅಲ್ಲದೆ, ಆದಷ್ಟು ಬೇಗನೆ ಸಂಬಂಧವನ್ನು ಪಕ್ಕಾ ಮಾಡುವಂತೆ ಒತ್ತಾಯ ಮಾಡಿದೆವು! ಆದರೆ ನಂತರ ನಮಗೆ ತಿಳಿದ ಸಂಗತಿಯೇನೆಂದರೆ, ಆಕೆ ತನ್ನ ಪ್ರೇಮದಲ್ಲಿ ವೈಫಲ್ಯವನ್ನು ಕಂಡು ಅತ್ಯಂತ ದುಃಖದಲ್ಲಿ ಇದ್ದಳು ಮತ್ತು ಆಕೆಯನ್ನು ತಾತೈ ಸಮಾಧಾನ ಪಡಿಸಿ ಆರೈಕೆ ಮಾಡುತ್ತಿದ್ದ. ಅವನು ಅಂತಹುದೇ ದುಃಖದಲ್ಲಿ ಇದ್ದಾಗ ನಾವಿಬ್ಬರೂ ಅವನಿಗೆ ಸಮಾಧಾನ ಮತ್ತು ಆರೈಕೆಯನ್ನು ಮಾಡಿರಲಿಲ್ಲ ಎಂಬುದನ್ನು ಪರೋಕ್ಷವಾಗಿ ಅವನು ನಮಗೆ ತಿಳಿಸಿಕೊಟ್ಟಿದ್ದ.

ಯಾವುದೇ ಹೊತ್ತಿನಲ್ಲಿಯೂ ಅಪ್ರಿಯಸತ್ಯ ನಮಗೆ ಎದುರಾಗಬಹುದೆಂದು ತಿಳಿದಿದ್ದರೂ, ಅದರ ನಿರಾಕರಣೆಯಲ್ಲಿಯೇ ನಾವು ಕಾಲ ದೂಡುತ್ತಿದ್ದೆವು. ತೆರೆಮರೆಯಲ್ಲಿ ಅವನು ಮನೆಯಿಂದ ದೂರ ಹೋಗುವ ಯೋಜನೆಗೆ ಸಿದ್ಧನಾಗುತ್ತಿದ್ದ. ಎಂಜಿನಿಯರಿಂಗ್ ಮೂರನೇ ವರ್ಷದಲ್ಲಿ ಅವನು ಪೂನಾಕ್ಕೆ ಇಂಟರ್ನ್‌ಶಿಪ್‌ಗೆಂದು ಹೋಗುವುದರೊಂದಿಗೆ ಅದು ಪ್ರಾರಂಭವಾಯ್ತು. ಕ್ಯಾಂಪಸ್‌ನಲ್ಲಿ ದೊರೆತ ಎಲ್ಲಾ ಉದ್ಯೋಗಗಳನ್ನೂ ನಿರಾಕರಿಸಿ, ಅವನು ಇಂಟರ್ನ್‌ಶಿಪ್ ಮಾಡಿ ಪುಣೆಗೆ ಹೋಗಿ ಸೇರುವುದಕ್ಕೆ ನಿರ್ಧರಿಸಿದ.
2008ರಲ್ಲಿ ಅವನಿಗೆ ಬೆಂಗಳೂರಿನಲ್ಲಿ ಒಂದು ಇಂಟರ್ನ್‌ಶಿಪ್ ದೊರೆತು, ಅದರ ಬಗ್ಗೆ ವಿಪರೀತ ಆಸಕ್ತಿ ವಹಿಸಿದ. ಸಮಯ ನಮ್ಮ ಕೈ ಜಾರುತ್ತಿದೆ ಎಂದು ಒದ್ದಾಡುತ್ತಿದ್ದ ನಾವು, ಅವನನ್ನು ನಮ್ಮಿಂದ ದೂರ ಹೋಗದಂತೆ ತಡೆಯಲು ಸಾಕಷ್ಟು ಪ್ರಯತ್ನಿಸಿದೆವು. ಬೇರೆ ಊರಿಗೆ ಹೋದರೆ ಅವನು ಸಂಪೂರ್ಣ ಗೇ ಬದುಕಿಗೆ ಒಪ್ಪಿಸಿಕೊಂಡು ಬಿಡುತ್ತಾನೆಂಬ ಕಳವಳ ನಮ್ಮದಾಗಿತ್ತು. ಆದರೆ ಈ ವಿಷಯದಲ್ಲಿ ಅವನ ನಿರ್ಧಾರ ದೃಢವಾಗಿತ್ತು. ಕೊನೆಯ ಪರೀಕ್ಷೆ ಮುಗಿದ ಮರುದಿನವೇ ತನ್ನ ಬಟ್ಟೆ ಪ್ಯಾಕ್ ಮಾಡಿಕೊಂಡು ಮನೆ ತೊರೆದ. ಹಾಗೆ ಹೋಗುವಾಗ, ನನಗಾಗಿ ಒಂದು ಸುದೀರ್ಘ ಪತ್ರವನ್ನು ಬರೆದು ತನ್ನ ಹೃದಯವನ್ನು ತೆರೆದಿಟ್ಟಿದ್ದ.

ಪತ್ರ ಓದಿದ ಮೇಲೆ, ನಮ್ಮ ಮಗುವಿನ ಬಯಕೆಗಳೆಲ್ಲವನ್ನೂ ಒಣಗಿಸಿ, ಅವನ ಕನಸುಗಳೆಲ್ಲವನ್ನೂ ಹಿಸುಕಿ ಹಾಕಿದ್ದೆವೆಂದು ನನಗೆ ಅರ್ಥವಾಗಿತ್ತು. ಪತ್ರದಲ್ಲಿದ್ದ ಸಂಗತಿಗಳೆಲ್ಲಾ ಸತ್ಯವಾಗಿದ್ದವು. ಅವನು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದ; ನನ್ನಲ್ಲಿ ಯಾವುದಕ್ಕೂ ಉತ್ತರವಿರಲಿಲ್ಲ. ಆದರೆ ಅಳುವುದರ ಹೊರತಾಗಿ ನನಗೆ ಬೇರೆ ಯಾವ ದಾರಿಯೂ ಇರಲಿಲ್ಲ. ಹುಟ್ಟಿದ ತಕ್ಷಣವೇ ಯಾಕವನನ್ನು ನಾವು ಕೊಲ್ಲಲಿಲ್ಲ, ನಮ್ಮ ಯಾವ ಆಸೆಗಳನ್ನೂ ಈಡೇರಿಸದ ಇಂತಹ ಮಗುವನ್ನು ಬೆಳೆಸುವದರಿಂದ ಯಾವ ಪ್ರಯೋಜನ ಎಂದು ಅನಿಸುತ್ತಿತ್ತು. ನಮ್ಮನ್ನು ಖುಷಿಯಾಗಿಡಲು ತಾನು ಏನೆಲ್ಲಾ ಪ್ರಯತ್ನ ಪಟ್ಟೆ ಎಂದು ನಮೂದಿಸಿದ್ದ ಅವನು, ಯಾವೆಲ್ಲಾ ಹುಡುಗಿಯ ಜೊತೆ ತಾನು ಪ್ರೀತಿ ಮಾಡಲು ಪ್ರಯತ್ನ ಪಟ್ಟು ಸೋತಿದ್ದೆನೆಂದು ತಿಳಿಸಿದ್ದ. ನಾನು ಆ ಎಲ್ಲಾ ಹುಡುಗಿಯರ ಜೊತೆ ಮಾತನಾಡಿದಾಗ ಅವರ ಉತ್ತರ ಈ ರೀತಿಯಾಗಿತ್ತು– ‘ತಾತೈ ತರಹದ ಸ್ನೇಹಿತ ದೊರಕುವುದು ತುಂಬಾ ಕಷ್ಟ. ಅವನು ಗೇ, ಆದರೇನಂತೆ, ಅವನೊಬ್ಬ ಅತ್ಯುತ್ತಮ ವ್ಯಕ್ತಿ. ಅವನನ್ನು ನಾವೆಲ್ಲಾ ಒಪ್ಪಿಕೊಂಡಿದ್ದೆವು’.

ಅಂದಿನಿಂದ ನಾನು ಸಲಿಂಗಸ್ನೇಹದ ಕುರಿತಾಗಿ ಸಾಕಷ್ಟು ಓದಲಾರಂಭಿಸಿದೆ. ಅವನು ತಾನು ಇಷ್ಟಪಟ್ಟ ಹುಡುಗನೊಂದಿಗೆ ಬೆಂಗಳೂರಿಗೆ ಹೋಗಲು ಸಿದ್ಧನಾದಾಗ ಅಪ್ಪನ ಜೊತೆ ಜಗಳವಾಯ್ತು. ಇವರು ಅವನನ್ನು ಹೋಮೋ ಎಂದು ತಿರಸ್ಕಾರದಿಂದ ಕರೆದು, ಅವನ ಪ್ರಿಯಕರನನ್ನು ಅವಾಚ್ಯ ಶಬ್ದಗಳಿಂದ ಜರಿದರು. ಕೇವಲ ಒಂದು ವಾರಕ್ಕಾಗಿ ಮನೆಗೆ ಬಂದವನು, ಊರಿಗೆ ಹೋಗುವ ಹಿಂದಿನ ದಿನ ಪ್ರಪ್ರಥಮವಾಗಿ ಸಿಟ್ಟಾಗಿದ್ದನ್ನು ಕಂಡೆ. ಹುಗಿದಿಟ್ಟ ಅವನ ಎಲ್ಲಾ ಆಕ್ರೋಶಗಳು ಅಂದು ಸಿಡಿದಿದ್ದವು.

ಅವನು ಅಳುತ್ತಾ ಕೂಗಾಡಿದ, ತನ್ನ ವಸ್ತುಗಳನ್ನೆಲ್ಲಾ ಮುರಿದು ಹಾಕಿದ; ಇದೆಲ್ಲಾ ಹಲವು ಗಂಟೆಗಳ ಕಾಲ ನಡೆಯಿತು. ಅವನದು ಒಂದೇ ಪ್ರಶ್ನೆ– ‘ನಾನಿರುವಂತೆಯೇ ನನ್ನನ್ನೇಕೆ ನೀವು ಸ್ವೀಕರಿಸುವದಿಲ್ಲ?’ ಎಂಬುದು. ಅವನ ಸ್ಥಿತಿಯನ್ನು ನೋಡಿದಾಗ, ಹೆತ್ತವರಿಂದ ತಿರಸ್ಕೃತಗೊಳ್ಳುವ ಮಕ್ಕಳ ಸ್ಥಿತಿ ಅದೆಷ್ಟು ಘೋರವಾದದ್ದೆಂದು ನನಗೆ ಅರ್ಥವಾಯ್ತು. ನಾವಿಬ್ಬರೂ ಮದುವೆಗೂ ಮುಂಚೆ ಒಂಬತ್ತು ವರ್ಷಗಳ ಕಾಲ ಪ್ರೀತಿ ಮಾಡಿದ್ದೆವು. ಆ ಮದುವೆಗೆ ಹಿರಿಯರೆಲ್ಲರ ವಿರೋಧವಿದ್ದರೂ, ಎಲ್ಲರನ್ನೂ ಎದುರಿಸಿ ಮದುವೆಯಾಗಿದ್ದೆವು. ಅಂತಹ ಹೊತ್ತಿನಲ್ಲಿ ನಮ್ಮ ಸ್ಥಿತಿಯನ್ನು ನಾವು ಸ್ವೀಕರಿಸದೇ ಹೋಗಿದ್ದರೆ ಬದುಕುಳಿಯುತ್ತಿದ್ದೆವಾ ಎಂದು ಪ್ರಶ್ನಿಸಿಕೊಂಡೆವು. ಖಂಡಿತವಾಗಿಯೂ ಸಾಧ್ಯವಿಲ್ಲ ಎನ್ನಿಸಿತು. ಈ ಅರಿವಿನ ನಂತರ ನಮ್ಮ ಪೂರ್ವಗ್ರಹಗಳನ್ನು ಬಿಟ್ಟು ಆಲೋಚಿಸತೊಡಗಿದೆವು.

ಅವನು ಬೆಂಗಳೂರಿನಿಂದ ಚೆನ್ನೈಗೆ ಹೊರಟು ನಿಂತಾಗ, ಏನೋ ಬೇಸರವಾದದ್ದು ಜರುಗಿರಬೇಕು ಎಂದು ಅರ್ಥ ಮಾಡಿಕೊಂಡೆ. ಇಲ್ಲದಿದ್ದರೆ ಅವನಿಗಿಷ್ಟವಾದ ಬೆಂಗಳೂರನ್ನು ಅವನು ಬಿಡುತ್ತಿರಲಿಲ್ಲ. ಆದರೆ ಈ ಬಾರಿ ನನಗೆ ಸಂತೋಷವಾಗಲಿಲ್ಲ, ಈ ಮೊದಲು ಮಾಡಿದ ತಪ್ಪನ್ನು ಮತ್ತೆ ನಾನು ಮಾಡಲಿಲ್ಲ. ಎರಡೇ ತಿಂಗಳಿನಲ್ಲಿ ಚೆನ್ನೈಗೆ ಹೋಗಿ, ಅವನನ್ನು ಸಮಾಧಾನಪಡಿಸಿದೆ. ಆದರೆ ಅವನ ಆಲೋಚನಾ ಕ್ರಮ ನನಗೆ ಅಚ್ಚರಿಯನ್ನು ತಂದಿತು. ಸಂಬಂಧ ಮುರಿದ ನಂತರ ನನ್ನ ಪ್ರಿಯಕರನ ಜೊತೆಗೆ ಏನೂ ಆಗಿಲ್ಲವೆನ್ನುವಂತೆ ಒಡನಾಡಲು ನನಗಂತೂ ಸಾಧ್ಯವಿಲ್ಲ. ತನ್ನ ಪ್ರಿಯಕರನಿಂದ ದೂರವಾಗುವ ಕಾರಣವೇನೆಂದು ವಿಚಾರಿಸಿದಾಗ, ‘‘ಇಬ್ಬರ ಮಧ್ಯೆ ಹೊಂದಾಣಿಕೆ ಸಾಧ್ಯವಾಗದಿದ್ದರೆ, ಒಬ್ಬರಿಗೊಬ್ಬರು ದೂಷಿಸುವುದನ್ನು ಬಿಟ್ಟು, ತಮ್ಮ ಪ್ರೀತಿ ಮತ್ತು ಸ್ನೇಹವನ್ನು ಹಾಗೇ ಕಾಪಾಡಿಕೊಂಡು ಬದುಕಿನ ಮುಂದಿನ ಹೆಜ್ಜೆಗಳನ್ನು ಇಡುವುದು ಒಳ್ಳೆಯದು. ಈ ಬೇರ್ಪಡುವಿಕೆಗೆ ಯಾವುದೇ ಕಾರಣ ಮತ್ತು ತರ್ಕವನ್ನು ಆರೋಪಿಸುವ ಅಗತ್ಯವಿಲ್ಲ. ಅಮ್ಮ, ನಂಗೊಂದು ಮಾತು ಕೊಡ್ತೀಯ? ಅವನನ್ನ ನೀನು ಯಾವತ್ತಿನಂತೆ ಪ್ರೀತಿಯಿಂದಲೇ ಮಾತಾಡಿಸಬೇಕು. ಅವನು ತುಂಬಾ ಒಳ್ಳೆಯ ಹುಡುಗ’’ ಎಂದು ಹೇಳಿದ.

ಕಾಗೆಗಳನ್ನು ಓಡಿಸುವ, ನಾಯಿಮರಿಗಳೊಡನೆ ಆಡುವ, ತನ್ನ ಊಟದ ತಟ್ಟೆಯಲ್ಲಿನ ಮೀನಿನ ತುಂಡನ್ನು ಬೀದಿ ನಾಯಿಗಾಗಿ ಕಾಪಾಡುವ ನನ್ನ ಪುಟ್ಟ ಕಂದ ಈಗ ಪ್ರಬುದ್ಧನಾಗಿದ್ದಾನೆಂದು ನನಗೆ ಅರ್ಥವಾಯ್ತು. ಅವನ ಬಾಲ್ಯದಲ್ಲಿ ನಾವು ತಪ್ಪು ಮಾಡಿದ್ದರೂ, ತನ್ನ ನಿಸ್ವಾರ್ಥ ಮತ್ತು ನಿರಪೇಕ್ಷ ಪ್ರೀತಿಯಿಂದ ನಮ್ಮನ್ನು ಅರ್ಥ ಮಾಡಿಕೊಂಡ ನಮ್ಮ ಮಗನ ಬಗ್ಗೆ ನಮಗೆ ಹೆಮ್ಮೆಯಿದೆ. ತಾಯಿಯಾಗಿ ತನ್ನ ಮಗನನ್ನು ಅವನಿದ್ದಂತೆಯೇ ಒಪ್ಪಿಕೊಳ್ಳುವುದನ್ನು ನಾನು ಈ ಹಿಂದೆಯೇ ಕಲಿಯಬೇಕಿತ್ತು.

ಸಾಕಷ್ಟು ಓದಿಕೊಂಡು, ಉಳಿದ ಜನರೊಡನೆ ಮಾತನಾಡಿದ ನಂತರ, ಎಂಥ ಹೊತ್ತಿನಲ್ಲೂ ನನ್ನ ಮಗನೊಡನೆ ನಿಲ್ಲಲು ನಾನು ನಿರ್ಧರಿಸಿದ್ದೇನೆ. ಸಲಿಂಗಸ್ನೇಹಿಗಳ ಬಗ್ಗೆ ಯಾರಾದರೂ ಕೀಳಾಗಿ ಮಾತನಾಡಿದರೆ ನಾನು ಅದನ್ನು ವಿರೋಧಿಸುತ್ತೇನೆ. ಅವರ ಬಗ್ಗೆ ಅಗ್ಗದ ಮಾತನಾಡುವುದಕ್ಕಿಂತಲೂ ಮೊದಲು ಸಲಿಂಗಸ್ನೇಹದ ಬಗ್ಗೆ ಓದಿಕೊಳ್ಳಲು ಅವರಿಗೆ ತಿಳಿಸುತ್ತೇನೆ. ತನ್ನ ಒಳ್ಳೆಯತನ, ಶಾಂತ ಮನೋಭಾವ ಮತ್ತು ಖಚಿತ ನಿರ್ಧಾರಗಳಿಂದಾಗಿ ತಾತೈ ನಮಗೆ ಗೇ ಜನರು ಉಳಿದವರಂತೆಯೇ ಸಹಜ ಎನ್ನುವದನ್ನು ತಿಳಿಸಿಕೊಟ್ಟಿದ್ದಾನೆ. ದ್ವೇಷಕ್ಕೆ ಇಲ್ಲಿ ಎಡೆಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT