ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಚಲಾವಣೆ ಹೆಚ್ಚಿಸುವುದೇ ಸವಾಲು

Last Updated 26 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣೆಗೆ ನಿಂತ ಮೇಲೆ ಸೋಲು- ಗೆಲುವು ಇದ್ದಿದ್ದೇ. ಸೋತವರು ಸೋಲು ಅರಗಿಸಿಕೊಳ್ಳಲು ಯತ್ನಿಸಿದರೆ, ಗೆದ್ದವರು ವಿಜಯೋತ್ಸಾಹದಲ್ಲಿ ಮುಳುಗುತ್ತಾರೆ. ಆದರೆ ಈ ಸೋಲು- ಗೆಲುವಿಗೆ ಮುನ್ನ ಇದೀಗ ಮತದಾನ ಪ್ರಮಾಣ ಹೆಚ್ಚಿಸುವುದು ಹೇಗೆ ಎಂಬುದು ನಗರದ ಅಭ್ಯರ್ಥಿಗಳ ಮುಂದಿರುವ ದೊಡ್ಡ ಸವಾಲು.

ಬ್ಯಾನರ್, ಬಂಟಿಂಗ್ಸ್, ಫೋನ್, ಎಸ್‌ಎಂಎಸ್, ಮಾಧ್ಯಮಗಳಲ್ಲಿ ಪ್ರಚಾರ, ಬಹಿರಂಗ ಸಭೆ ಇವೆಲ್ಲದರ ನಡುವೆಯೂ ರಾಜಧಾನಿಯ ಹಲವು ಕ್ಷೇತ್ರಗಳಲ್ಲಿ ಕಳೆದ ಸಲ ಮತ ಚಲಾವಣೆ ಪ್ರಮಾಣ ಶೇ 50ರಷ್ಟನ್ನೂ ದಾಟಿರಲಿಲ್ಲ. ಈಗಂತೂ ದಿನ ಬೆಳಗಾದರೆ ರಾಜಕೀಯ ಪಕ್ಷಗಳ ಹಗರಣ, ಭ್ರಷ್ಟಾಚಾರಗಳೇ ಕಣ್ಣಿಗೆ ರಾಚುತ್ತವೆ.

ಇದರಿಂದ ಭ್ರಮನಿರಸನ ಮೂಡಿರುವಾಗ ಎಷ್ಟು ಜನ ಮತ ಹಾಕಬಹುದು ಎಂಬ ಚಿಂತೆ ಅಭ್ಯರ್ಥಿಗಳನ್ನು ಕಾಡುತ್ತಿದೆ. ಜತೆಗೆ, ಹೊಸ ಪಕ್ಷಗಳು ಹುಟ್ಟಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಚಲಾವಣೆಯಾಗುವ ಮತಗಳಲ್ಲಿ ಅವರೂ ಒಂದಷ್ಟು ಪಾಲನ್ನು ತಮ್ಮದಾಗಿಸಿಕೊಂಡರೆ ಫಲಿತಾಂಶ ಏನಾಗಬಹುದು ಎಂಬ ದಿಗಿಲೂ ಸೇರಿಕೊಂಡಿದೆ.

ತಮ್ಮ ಕ್ಷೇತ್ರ ವ್ಯಾಪ್ತಿಯ ಯಾವ ಬಡಾವಣೆಯಲ್ಲಿ, ಯಾವ್ಯಾವ ರಸ್ತೆಗಳಲ್ಲಿ ತಮಗೆ ಮತಗಳು ಇವೆ ಎಂಬ ಮಾಹಿತಿ ಅಭ್ಯರ್ಥಿಗಳ ಬೆರಳ ತುದಿಯಲ್ಲಿದೆ. ಹಾಗಾಗಿ ಮತಗಳು ತಮಗೆ ಖಾತ್ರಿ ಇರುವ ಕಡೆಗೆ ಪ್ರಚಾರಕ್ಕಾಗಿ ಅವರು ಹೆಚ್ಚು ತಲೆಕೆಡಿಸಿಕೊಂಡೇ ಇಲ್ಲ. ಆದರೆ ಎಲ್ಲೆಲ್ಲಿ ತಾವು ದುರ್ಬಲವೆಂದು ಗೊತ್ತೋ, ಯಾವ ಜಾಗದಲ್ಲಿ ಆಮಿಷಗಳನ್ನು ತೋರಿ ಮತದಾರರ ಒಲವು ತಿರುಗಿಸಿಕೊಳ್ಳಬಹುದೆಂದು ಅಂದಾಜಿಸಿದ್ದಾರೋ ಅಂತಹ ಕಡೆಗಳಿಗೆ ಹೆಚ್ಚು ಗಮನ ಹರಿಸಿದ್ದಾರೆ.

ಗುಪ್ತಗಾಮಿನಿ ಪ್ರಚಾರ: ಇದರ ಮಧ್ಯೆಯೇ, ಯಾವ್ಯಾವ ಸಂದರ್ಭಗಳಲ್ಲಿ ಒಮ್ಮೆಗೇ ನೂರಾರು, ಸಾವಿರಾರು ಜನರ ಸಮೂಹವನ್ನು ತಲುಪಲು ಸಾಧ್ಯವೋ ಅಂತಹ ಸ್ಥಳಗಳಿಗೆ ತಪ್ಪದೇ ಹಾಜರಾಗುತ್ತಾರೆ. ಎಷ್ಟೋ ಕಡೆ, ವಿವಿಧ ಸಂಘ- ಸಂಸ್ಥೆಗಳನ್ನು ತಾವೇ ಸಂಪರ್ಕಿಸಿ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸುವಂತಹ ಕಾರ್ಯಕ್ರಮ ಆಯೋಜಿಸಲು ಕೋರುತ್ತಾರೆ.

ಇಂತಹ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ವಹಿಸಲು ಅಭ್ಯರ್ಥಿಗಳು ಹಿಂದೆ ಮುಂದೆ ನೋಡುವುದಿಲ್ಲ. ಚುನಾವಣೆ ಕಾಲದಲ್ಲಿ ನಡೆಯುವ ಸನ್ಮಾನ, ಪಾರಾಯಣ, ಉತ್ಸವದಂತಹ ಬಹುತೇಕ ಕಾರ್ಯಕ್ರಮಗಳ ಹಿಂದೆ ಈ ಉದ್ದೇಶ ಸದ್ದಿಲ್ಲದೆ ಅಡಗಿರುತ್ತದೆ. ಇದು ಒಂದು ರೀತಿ `ಗುಪ್ತಗಾಮಿನಿ ಪ್ರಚಾರ'.

ಕೆಲವು ಅಭ್ಯರ್ಥಿಗಳು ಬಡಾವಣೆಗಳಲ್ಲಿರುವ ತಮ್ಮ ಪರಿಚಯಸ್ಥರನ್ನು ಸಂಪರ್ಕಿಸಿ, `ನೀವು ಮತ ಹಾಕುವುದು ಮಾತ್ರವಲ್ಲ. ನಿಮ್ಮ ಸುತ್ತಮುತ್ತ ಇರುವವರಿಗೂ ಮತ ಚಲಾವಣೆ ಮಾಡುವಂತೆ ಹೇಳಿ' ಎಂದು ಮನವಿ ಮಾಡುತ್ತಿದ್ದಾರೆ. `ಮೊನ್ನೆ ಅಭ್ಯರ್ಥಿರೊಬ್ಬರು ಸಿಕ್ಕಿದ್ದರು. ಅವರಿಗೆ ಮತ ಚಲಾವಣೆ ಪ್ರಮಾಣದ್ದೇ ಚಿಂತೆಯಾಗಿದೆ. ಕಳೆದ ಸಲ ಇಲ್ಲಿ ಶೇ 50ರಷ್ಟು ಮತದಾರರೂ ವೋಟು ಹಾಕಿರಲಿಲ್ಲ. ಈ ಸಲವೂ ಅಷ್ಟೇ ಆದರೆ ಕಷ್ಟವಾಗುತ್ತದೆ. ಸುತ್ತಮುತ್ತಲಿನವರಿಗೆ, ನಿಮಗೆ ಗೊತ್ತಿರುವವರಿಗೆ ವೋಟು ಹಾಕಲು ಹೇಳಿ ಎಂದು ಕೇಳಿಕೊಂಡರು' ಎನ್ನುತ್ತಾರೆ ಸಂಜಯನಗರದ ನಿವೃತ್ತ ಪ್ರೊಫೆಸರ್ ಶ್ರೀಧರ್.

`ಹೌದು ಸಾರ್, ಇಲ್ಲಿನ ಜನ ಸಾಕಷ್ಟು ತಿಳಿದಿರುವವರೇ. ಆದರೆ ವೋಟು ಹಾಕಲು ಏಕೆ ಹೋಗಲ್ಲ' ಎಂದು ಶ್ರೀಧರ್ ಅವರನ್ನು ಕೇಳಿದರೆ, `ಇವರೆಲ್ಲಾ ಹೀಗೆ ಕಚ್ಚಾಡುತ್ತಿದ್ದರೆ ಯಾರು ವೋಟು ಹಾಕಲು ಹೋಗ್ತಾರೆ ಹೇಳಿ. ಇಂಥವರಿಗೆ ವೋಟು ಹಾಕಿ ಎಂದು ಹೇಳಲು ನಮಗಾದರೂ ಹೇಗೆ ಬಾಯಿ ಬರುತ್ತದೆ ಹೇಳಿ' ಎನ್ನುತ್ತಾರೆ.  ಶ್ರೀಧರ್ ಅವರ ಎದುರು ಮನೆಯ ಗೋವಿಂದರಾಜ್, ನೆರೆಮನೆಯ ಸುಕುಮಾರ್ ಅವರೂ ಇದಕ್ಕೆ ದನಿಗೂಡಿಸುತ್ತಾರೆ.

ಮತ ಚಲಾವಣೆ ಬಗ್ಗೆ ಆಸಕ್ತಿಯನ್ನೇ ಹೊಂದಿರದ ಇಂತಹವರಿಗೆ `ಮತ ಮೌಲ್ಯ' ಎಂದರೆ ಏನೆಂಬುದು ಗೊತ್ತಿಲ್ಲದ ವಿಷಯವೇನೂ ಅಲ್ಲ. ಇವರೆಲ್ಲ ಅಶಿಕ್ಷಿತರೂ ಅಲ್ಲ. ಆದರೆ, ಅಧಿಕಾರ ಪಡೆದವರು ಅದನ್ನು ಸರಿಯಾಗಿ ಬಳಸಿಕೊಳ್ಳುವುದಿಲ್ಲವಲ್ಲಾ ಎಂಬ ವೇದನೆ ಇದೆ.

ಇವರಿಗೆಲ್ಲಾ ಮತ ಹಾಕಲು ಏಕೆ ನಿರುತ್ಸಾಹ? ರಸ್ತೆ, ನೀರು, ದೀಪ, ನೈರ್ಮಲ್ಯ ವ್ಯವಸ್ಥೆ ಇಲ್ಲವೆಂದೇ?- ಹಾಗೇನೂ ಅಲ್ಲ. ರಸ್ತೆ, ನೀರು, ದೀಪ, ನೈರ್ಮಲ್ಯದ ಸಂಗತಿಗಳೆಲ್ಲ ಇವರಿಗೆ ದಿನನಿತ್ಯದ ತೊಂದರೆಯಾಗಿ ಬಾಧಿಸುತ್ತಿಲ್ಲ. ಇಡೀ ಬಡಾವಣೆ ಸುಶಿಕ್ಷಿತರಿಂದ, ಸಾಕಷ್ಟು ಅನುಕೂಲಸ್ಥರಿಂದ ತುಂಬಿರುವಂತೆ ಕಾಣುತ್ತದೆ. ಮನೆ, ಮನೆಯಲ್ಲೂ ಎಂಜಿನಿಯರ್, ಡಾಕ್ಟರ್, ಉದ್ಯಮಿಗಳು, ಎಂಬಿಎ ಪದವೀಧರರು ಇದ್ದಾರೆ.

ಆದರೆ, ಇವರ ನಿರಾಸಕ್ತಿಗೆ ಕಾರಣ ಬೇರೆಯೇ ಕಾರಣ ಇರುವಂತೆ ತೋರುತ್ತದೆ. ಇಲ್ಲಿನ ಬಹುತೇಕರು ದೇಶ, ವಿದೇಶಗಳನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ಕಂಪ್ಯೂಟರ್, ಇಂಟರ್‌ನೆಟ್, ವೈಫೈ ಸಂಪರ್ಕಗಳನ್ನು ಹೊಂದಿದ್ದಾರೆ.

ಇವರೆಲ್ಲಾ ನಮ್ಮ ದೇಶದ ಸ್ಥಿತಿಗತಿಯನ್ನು ತಾವು ಕಂಡಿರುವ, ಕೇಳಿ ತಿಳಿದಿರುವ ವಿದೇಶಗಳೊಂದಿಗೆ ಹೋಲಿಕೆ ಮಾಡುತ್ತಾರೆ. ಇಲ್ಲಿನ ರಾಜಕಾರಣಿಗಳ ನಿರ್ಧಾರವನ್ನು, ಸರ್ಕಾರದ ನೀತಿ ನಿಯಮಗಳನ್ನು ವಿದೇಶಗಳ ನೀತಿಗಳೊಂದಿಗೆ ತೂಗಿ ನೋಡುತ್ತಾರೆ.

ಹೀಗೆ ಹೋಲಿಕೆಗಳನ್ನು ಮುಂದಿಟ್ಟು, ನಮ್ಮ ರಾಷ್ಟ್ರ, ರಾಜಕಾರಣ ಹಿಂದಕ್ಕೆ ಹೋಗುತ್ತದೆ ಎಂಬ ತರ್ಕ ಮಂಡಿಸುತ್ತಾರೆ. ಹೀಗಿರುವಾಗ, ವೋಟು ಹಾಕಲು ಎಲ್ಲಿ ಮನಸ್ಸು ಬರುತ್ತದೆ ಹೇಳಿ ಎಂದು ಕೇಳುತ್ತಾರೆ. ನಮ್ಮಲ್ಲಿ ಮತ ಚಲಾವಣೆ ಎಷ್ಟೇ ಕುಸಿದರೂ ಕೊನೆಗೆ ಯಾರಾದರೂ ಒಬ್ಬರು ಗೆದ್ದೇ ಗೆಲ್ಲುತ್ತಾರೆ. ಆದರೆ ಆ ಕುಸಿತ ಇಡೀ ವ್ಯವಸ್ಥೆಯ ಸೋಲಲ್ಲವೇ ಎಂಬ ಪ್ರಶ್ನೆ ಮಾತ್ರ ಅಣಕಿಸುವಂತೆ ಕೆಣಕುತ್ತದೆ.
.....

ಹೆಬ್ಬಾಳದಲ್ಲಿ ತಿರುವು ಮುರುವಾದರೆ...

ಸ್ವಚ್ಛ ರಾಜಕಾರಣದ ಸಂಕಲ್ಪದೊಂದಿಗೆ ಲೋಕಸತ್ತಾ ಪಕ್ಷದ ಅಭ್ಯರ್ಥಿಯಾಗಿ ಹೆಬ್ಬಾಳ ಕ್ಷೇತ್ರದಿಂದ ಕಣಕ್ಕಿಳಿದಿರುವ ಶ್ರೀಧರ್ ಪಬ್ಬಿಸೆಟ್ಟಿ ಅವರಿಗೂ ಮತದಾನ ಪ್ರಮಾಣ ಕುಸಿದಿರುವ ಬಗ್ಗೆಯೇ ಚಿಂತೆ.

ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿನ (ಐಐಎಂ) ಕೈತುಂಬಾ ಸಂಬಳ ತರುವ ಹುದ್ದೆಗೆ ರಾಜೀನಾಮೆ ನೀಡಿ ಸ್ಪರ್ಧೆಗೆ ಇಳಿದಿರುವ ಅವರಿಗೆ, ಈ ಹಿಂದೆ `ಕರ್ನಾಟಕ ಚುನಾವಣಾ ಕಣ್ಗಾವಲು ಅಧ್ಯಯನ'ದ ಸಂಯೋಜಕರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯದಲ್ಲಿ ಹಿಂದಿನ ಚುನಾವಣೆಗಳಲ್ಲಿ ಯಾವ್ಯಾವ ಭಾಗದಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎಂಬ ಮಾಹಿತಿ ಅವರಿಗೆ ಬಾಯಿಪಾಠ. ಅಷ್ಟೇ ಅಲ್ಲ, ಅವುಗಳ ಬಗ್ಗೆ ವಿಶ್ಲೇಷಣಾತ್ಮಕವಾಗಿಯೂ ಮಾತನಾಡಬಲ್ಲರು.

ಸರ್ಕಾರ ಈಚೆಗೆ ಜಾರಿಗೊಳಿಸಿದ `ಸಕಾಲ' ಯೋಜನೆಯ ಸಲಹೆಗಾರರೂ ಆಗಿರುವ ಪಬ್ಬಿಸೆಟ್ಟಿ ಅವರಿಗೆ ಹೆಬ್ಬಾಳ ಕ್ಷೇತ್ರದಲ್ಲಿ ಕಳೆದ ಬಾರಿ ಕೇವಲ ಶೇ 48ರಷ್ಟು ಮತದಾನವಾಗಿದ್ದು ಆತಂಕ- ಆಶ್ಚರ್ಯ ಮೂಡಿಸಿದೆ. `ಕಳೆದ ಸಲ, ರಾಜ್ಯದಲ್ಲಿ ಸರಾಸರಿ ಮತ ಚಲಾವಣೆ ಶೇ 64ರಷ್ಟು ಇದ್ದಾಗ ಇಲ್ಲಿ ಬರೀ ಶೇ 48ರಷ್ಟು ಮತ ಚಲಾವಣೆ ಆಗಿದೆ. ಮತ ಚಲಾಯಿಸಲು ಜನರಿಗೆ ಸೋಮಾರಿತನವೇನೂ ಇಲ್ಲ.

ಆದರೆ, ಯಾವ ಅಭ್ಯರ್ಥಿಯೂ ಸೂಕ್ತ ಅಲ್ಲ ಎನ್ನಿಸುವುದೇ ಇದಕ್ಕೆ ಕಾರಣ. ಈ ಬಾರಿ ನಾನು ಕಣಕ್ಕೆ ಇಳಿದಿದ್ದೇನೆ. ಆಯ್ಕೆಯಾದರೆ, ನಾನು ಸಹಿ ಹಾಕುವ ಪ್ರತಿಯೊಂದು ದಾಖಲೆಯನ್ನೂ, ಕಾಗದ ಪತ್ರವನ್ನೂ ಸ್ವತಃ ಬಹಿರಂಗಪಡಿಸುತ್ತೇನೆ. ಜನರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಯೇ ಹಾಕುವ ಪ್ರಸಂಗ ಬರದಂತೆ ನೋಡಿಕೊಳ್ಳುತ್ತೇನೆ. ಆದರೆ ಜನ ಹೆಚ್ಚಿನ ಪ್ರಮಾಣದಲ್ಲಿ ಬಂದು ಮತ ಹಾಕಬೇಕು ಅಷ್ಟೆ. ಕಳೆದ ಸಲ ಶೇ 48 ಇದ್ದುದು, ಈ ಸಲ ತಿರುವುಮುರುವಾದರೆ (ಶೇ 84) ಆದರೆ ಎಷ್ಟು ಚೆನ್ನ ಅಲ್ಲವೇ' ಎನ್ನುತ್ತಾರೆ.

ಪಬ್ಬಿಸೆಟ್ಟಿ ಅವರು ಚುನಾವಣೆಗಾಗಿ ಸ್ವಂತ ಹಣ ಖರ್ಚು ಮಾಡುತ್ತಿಲ್ಲ. ಅಪ್ಪ-ಅಮ್ಮ ಆಶೀರ್ವಾದ ರೂಪದಲ್ಲಿ ನೀಡಿದ ರೂ. 10,000  ಬಿಟ್ಟರೆ ಉಳಿದ ಹಣಕ್ಕಾಗಿ ಸಾರ್ವಜನಿಕರ ದೇಣಿಗೆಯನ್ನೇ ನಂಬಿದ್ದಾರೆ. ರೂ.100 ಗಿಂತ ಹೆಚ್ಚು ದೇಣಿಗೆ ಕೊಟ್ಟವರಿಗೆಲ್ಲಾ ರಸೀದಿ ನೀಡುತ್ತಿದ್ದಾರೆ. ಗೆಳೆಯರ ಗುಂಪಿನೊಂದಿಗೆ ಸೈಕಲ್‌ಗಳಲ್ಲಿ, ಬೈಕ್‌ಗಳಲ್ಲಿ ಸುತ್ತುತ್ತಾ ಮನೆ- ಮನ ತಟ್ಟಲು ಯತ್ನಿಸುತ್ತಿರುವ ಅವರು ಹೆಬ್ಬಾಳ ಮಾತ್ರವಲ್ಲ ಎಲ್ಲೆಡೆಯೂ ಮತ ಚಲಾವಣೆ ಹೆಚ್ಚಾಗುವ ವಾತಾವರಣ ನಿರ್ಮಾಣವಾಗಬೇಕು ಎನ್ನುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT