ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಕಾರ ಕೆರಳೋಣು...

Last Updated 4 ಜುಲೈ 2015, 19:30 IST
ಅಕ್ಷರ ಗಾತ್ರ

ದೂರ್ವಾಸ, ವಿಶ್ವಾಮಿತ್ರ, ಪರಶುರಾಮ– ಇವರುಗಳಲ್ಲಿರುವ ಒಂದು ಸಾಮಾನ್ಯ ಗುಣವೆಂದರೆ, ವಿಪರೀತ ಕೋಪ! ಅವರ ಕೋಪ, ಪ್ರಕೋಪಕ್ಕೆ ತಿರುಗಿ, ಸಾಕಷ್ಟು ಜೀವಗಳು ಅದರ ಪ್ರಖರವಾದ ಕಾವಿಗೆ ಬಲಿಯಾದದ್ದುಂಟು. ನಿಜ, ‘ಕೋಪವೆಂಬುದನರ್ಥಕಾರಿಯು, ಕೋಪವೇ ನರಜನ್ಮನಾಶಿಯು!’.

ಇವರಂತೂ ಪುರಾಣ ಪುರುಷರಾದರು. ಆದರೆ, ನಾವು? ನಮ್ಮಲ್ಲಿಯೂ, ಈ ನೇತ್ಯಾತ್ಮಕ ಗುಣ, ನಮ್ಮ ಬುದ್ಧಿಯನ್ನು ನಿರ್ವೀರ್ಯಗೊಳಿಸಿ, ನಾವು ಕೊನೆಗೆ ಕೈ ಕೈ ಹಿಸುಕಿಕೊಳ್ಳುವಂತೆ ಮಾಡುತ್ತದೆ. ಊಟದಲ್ಲಿ ಉಪ್ಪು ಹೆಚ್ಚೋ ಕಡಿಮೆಯೋ ಆಗಿದ್ದಾಗ, ಕೋಪದಿಂದ ಊಟದ ತಟ್ಟೆಯನ್ನೇ ದೂರಕ್ಕೆಸೆಯುತ್ತಾರೆ. ಕೋಪದ ಭರದಲ್ಲಿ ಮಕ್ಕಳನ್ನು ಜಜ್ಜಿದ್ದೇವೆ, ಹೆಂಡತಿಯರನ್ನು ನಲುಗಿಸಿದ್ದೇವೆ, ಕೆಲವೊಮ್ಮೆ ಕೊಂದೂ ಇದ್ದೇವೆ. ಆಜೀವಪರ್ಯಂತ ಇವುಗಳ ಪರಿಣಾಮಗಳನ್ನೂ ಅನುಭವಿಸಿದ್ದೇವೆ. ರಸ್ತೆಯಲ್ಲಿ ಗಾಡಿ ಚಲಾಯಿಸುವಾಗ ಹೊಮ್ಮಿಬರುವ ‘ರಸ್ತೆ ರೋಷ’ದ ಉದಾಹರಣೆಗಳು ನಮ್ಮ ಮುಂದೆ ಇವೆಯಲ್ಲವೆ? ಗೀತೆ ಹೇಳಿರುವಂತೆ, ‘ಕ್ರೋಧದಿಂದ ಕಾರ್‍ಯಾ ಕಾರ್‍ಯವಿವೇಚನೆ, ವಿವೇಕಗಳು ನಷ್ಟವಾಗುತ್ತವೆ. ನಮ್ಮ ಅವಿವೇಕದ ಕಾರಣ, ನಾವು ಹಿರಿಯರಿಂದ ಪಡೆದ ಮಾರ್ಗದರ್ಶನದ ನೆನಪು ಮರೆಯಾಗುತ್ತದೆ, ಬುದ್ಧಿ ಕೆಟ್ಟುಹೋಗುತ್ತದೆ’.

ಹೌದು, ಕೋಪ ನಮ್ಮನ್ನು ನಿಯಂತ್ರಿಸುವ ಮುನ್ನ ನಾವು ಕೋಪವನ್ನು ನಿಯಂತ್ರಿಸಿಕೊಳ್ಳಬೇಕು. ಹಾಗಾದರೆ, ಕೋಪ ಬರಲೇಬಾರದೆ? ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಿಕೊಂಡಾಗ, ಕಷ್ಟಪಟ್ಟು ರಿಸರ್ವ್ ಮಾಡಿಸಿದ್ದ ರೈಲು/ ಬಸ್‌ ತಪ್ಪಿಹೋದಾಗ, ಏನೇನೋ ಸಮಸ್ಯೆಗಳು ಎದುರಾದಾಗ ಕೋಪತರುವ ಹಳೇ ವಿದ್ಯಮಾನಗಳು ನೆನಪಿಗೆ ಬಂದಾಗ– ಆಗೆಲ್ಲಾ ಕೋಪ ಧುತ್ತೆಂದು ಏಳುತ್ತದೆ. ಹಾಗೆ ಏಳುವುದು ಮಾತ್ರವಲ್ಲ, ನಮ್ಮ ಹೃದಯದ ಬಡಿತ ಜೋರಾಗುತ್ತೆ, ರಕ್ತದೊತ್ತಡ ಏರುತ್ತೆ, ಅಡ್ರಿನಲಿನ್‌, ನಾರ್‌ ಅಡ್ರಿನಲಿನ್‌ ಸ್ರವಿಕೆಗಳ ಪ್ರಮಾಣ ಹೆಚ್ಚುತ್ತೆ. ಹೀಗೇ ಪದೇ ಪದೇ ಜರುಗುತ್ತಿದ್ದರೆ, ದೇಹದಲ್ಲಿ ಸರಿಪಡಿಸಲಾಗದ ಬದಲಾವಣೆಗಳಾಗುವುದರಲ್ಲಿ ಸಂದೇಹವಿಲ್ಲ. ಕೋಪ, ಕ್ರೋಧಕ್ಕೆ ತಿರುಗುತ್ತದೆ, ಅದು ಛಲವಾಗಿ, ನಮ್ಮಲ್ಲಿ ಪ್ರತೀಕಾರ ಭಾವನೆ ಮೂಡಿಸಿ, ಅನರ್ಥ ಪರಂಪರೆಗಳಿಗೆ ದಾರಿ ಮಾಡಿಕೊಡುತ್ತದೆ.

ಕೆಲವೊಮ್ಮೆ, ಮಕ್ಕಳಲ್ಲೂ ಸಹ ಕೋಪದ ಮನೋವಿಕಾರ ಹೆಚ್ಚಾಗಿ ಕಾಣಿಸಿಕೊಳ್ಳುವುದನ್ನು ಗಮನಿಸುತ್ತೇವೆ. ಅಂಥಾ ಸಂದರ್ಭಗಳಲ್ಲಿ ಅವರ ಕುಟುಂಬಗಳು ಸದಾ ಜಗಳ, ಹೊಡೆತ, ಬಡಿತಗಳನ್ನು ವ್ಯಕ್ತಪಡಿಸುತ್ತಿರುತ್ತವೆ. ಮಕ್ಕಳು ಕೋಪದ ಹಿಡಿತದಿಂದ ಬಿಡಿಸಿಕೊಳ್ಳಬೇಕಾದರೆ ಅವರಿರುವ ಕುಟುಂಬಗಳಲ್ಲಿ ಹೊಂದಾಣಿಕೆ, ಶಾಂತಿ, ಸಮಾಧಾನಗಳು ನೆಲಸಿರಲೇಬೇಕು.
ಇದೆಲ್ಲಾ ಸರಿ. ನಾವು ಕೋಪದಿಂದ ಮುಕ್ತರಾಗುವುದು ಹೇಗೆ? ಕೇಳಿ, ಕೋಪದಿಂದ ಸಂಪೂರ್ಣವಾಗಿ ಮುಕ್ತರಾಗುವ ಅಗತ್ಯವಿಲ್ಲ. ಬದಲಾಗಿ, ತತ್ತ್ವಜ್ಞಾನಿ ಅರಿಸ್ಟಾಟಲ್‌ ಹೇಳಿರುವಂತೆ– ಸರಿಯಾದ ಕಾರಣಕ್ಕೆ, ಸರಿಯಾದವರೊಡನೆ, ಸರಿಯಾದ ಸಮಯದಲ್ಲಿ, ಸೂಕ್ತ ಪ್ರಮಾಣದಲ್ಲಿ, ಸರಿಯಾದ ಉದ್ದೇಶಕ್ಕಾಗಿ ಕೋಪಬಂದರೆ ಚಿಂತೆಯಿಲ್ಲ, ಈ ವಿವೇಚನೆ ನಮ್ಮಲ್ಲಿರಬೇಕು.

ಹಾಗಾದರೆ ನಾವು ಕೋಪವನ್ನು ಹೇಗೆ ನಿಯಂತ್ರಿಸಿಕೊಳ್ಳಬೇಕು? ಇಲ್ಲಿ ನೋಡಿ.
* ಕೋಪ ಬಂದಾಗ ಅದಕ್ಕೆ ಕೂಡಲೇ ಪ್ರತಿಕ್ರಿಯಿಸಬೇಡಿ. ಆ ಅವಧಿಯಲ್ಲಿ ನಮ್ಮ ವಿವೇಚನಾ ಶಕ್ತಿ ಚುರುಕಾಗುತ್ತೆ.
* ಕೋಪವನ್ನು ಹೊರಗೆಡಹುವಾಗ, ಇತರರಿಗೇನಾದರೂ ಹಾನಿಯಾಗುತ್ತದೇನು ಎಂದು ಮೊದಲು ನಾವು ಗಮನಿಸಬೇಕು. ಆಗ ಆಡುವ ಮಾತೂ ಸಹ, ಒಂದು ಮಿತಿಯನ್ನು ದಾಟಿ, ನಂತರ ನಾವು ಪರದಾಡುವಂತಾಗಬಾರದು.

* ಕೋಪಿಷ್ಠರಲ್ಲಿ ಸಾಮಾನ್ಯವಾಗಿ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಯಾವ ಕಾರಣಕ್ಕೋ ಅವರಿಗೆ ಹಿಂದೆ ಒದಗಿದ್ದ ನಿರಾಶೆ, ಹತಾಶೆಗಳನ್ನು ಅಮಾಯಕರ ಮೇಲೆ ಬೇರೆ ರೂಪದಲ್ಲಿ ಎಸೆಯುತ್ತಾರೆ. ಅಂಥವರು, ತಮ್ಮ ಸ್ವಂತ ಪ್ಲಸ್‌ ಪಾಯಿಂಟ್‌ಗಳನ್ನು ಕಂಡುಕೊಂಡು, ತಮ್ಮೊಳಗಿನ ಕೀಳರಿಮೆಯನ್ನು ನಿವಾರಿಸಿಕೊಳ್ಳಬೇಕು.

* ಯಾವುದನ್ನು ನಾವು ಪರಿಹರಿಸಲು ಸಾಧ್ಯವಿಲ್ಲವೋ, ಅದನ್ನು ಸಹನೆಯಿಂದ ತಾಳಿಕೊಳ್ಳಲು ಕಲಿಯಬೇಕು. ಅದಕ್ಕೆ ಒಗ್ಗಿಕೊಳ್ಳಬೇಕು. ‘What Cannot be used must be endured’ ಅಲ್ಲವಾ? ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದರಲ್ಲಿ ಉಪಯೋಗವಿಲ್ಲ. ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಿಕೊಂಡಿದ್ದೇವೋ ಶಾಂತರಾಗಿ ಕಾದಿರೋಣ, ಇಲ್ಲವೇ ಬದಲಿ ದಾರಿಯನ್ನು ಹುಡುಕೋಣ. ರೈಲು/ಬಸ್‌ ತಪ್ಪಿತೆ? ಅದು ಹೊರಡಲು ಇನ್ನೂ ಅರ್ಧ ಗಂಟೆ ಇರುವಾಗಲೇ ನಾವು ಯಾಕೆ ಅಲ್ಲಿಗೆ ತಲುಪಿರಬಾರದು? ನಮ್ಮ ಸಮಸ್ಯೆಗಳು ಯಾಕೆ ಬಂದವು? ಅವುಗಳಿಗೆ ಪರಿಹಾರವೇನು? ಎಂದು ಚಿಂತಿಸುವ ಬದಲು ಅವುಗಳನ್ನು ಮನಸ್ಸಿನಲ್ಲೇ ಪದೇ ಪದೇ ಚರ್ವಿತ ಚರ್ವಣ, ಪಿಷ್ಠಪೇಷಣ ಮಾಡುವುದು ನಮಗೆ ಅಪಾಯಕರ. ನಾವು ಭಸ್ಮಾಸುರರೇ ಆಗುತ್ತೇವೆ!

ನಮ್ಮನ್ನು ನೋಯಿಸುವ – ನಮಗೆ ಕೋಪಬರಿಸುವ ಮಾತುಗಳು, ಸಂಗತಿಗಳು ಎದುರಿಗೆ ಬಂದಾಗ, ಅವುಗಳನ್ನು ಅಲಕ್ಷಿಸುವ ಅಭ್ಯಾಸವನ್ನೂ ಬೆಳೆಸಿಕೊಳ್ಳೋಣ. ಶ್ರೀ ರಾಮಕೃಷ್ಣರು ಹೇಳಿರುವಂತೆ ‘ನಮಗೆ ಬೇಡದ ಮನಿ ಆರ್ಡರ್ ಅನ್ನು ನಾವು ಅದನ್ನು ಕಳುಹಿಸಿದವರಿಗೇ ಹೇಗೆ ವಾಪಸು ಮಾಡುತ್ತೇವೋ’ ಹಾಗೆ ಮಾಡಿದರೆ, ನಮ್ಮ ಕೋಪವೂ ತಣಿಯುತ್ತದೆ.
* ಕೋಪವನ್ನು ಅದುಮಿಟ್ಟುಕೊಳ್ಳುವುದೂ ನಮಗೆ ಹಾನಿಕರವೇ. ಇದರಿಂದ ನಮ್ಮ ಮನಶಾಂತಿ, ಆರೋಗ್ಯ ಹದಗೆಡುತ್ತವೆ. ಕೋಪ ಬರಿಸಿದವರನ್ನು ಚುಚ್ಚು ಮಾತುಗಳಿಂದಲೋ ವ್ಯಂಗ್ಯ ನುಡಿಗಳಿಂದಲೋ ನೋಯಿಸಬೇಕೆಂದು ಅನ್ನಿಸುತ್ತದೆ (‘ಪ್ಯಾಸಿವ್‌ ಕೋಪ’). ಹಾಗಾಗಿ ನಮ್ಮ ಕೋಪವನ್ನು ಸಮಾಜ ಒಪ್ಪುವ ರೀತಿಯಲ್ಲಿ ಹೊರಹಾಕಬೇಕು.

*ಧ್ಯಾನ, ಯೋಗ, ಪ್ರಾಣಾಯಾಮ, ಆಧ್ಯಾತ್ಮಿಕ ಚಿಂತನೆಗಳು– ಇವೆಲ್ಲಾ ನಮ್ಮ ಕೋಪವನ್ನು ತಣಿಸಲು ಸಹಾಯಕ, ತಂಗಾಳಿಯ ತಂಪು ಮೈಯನ್ನು ಆವರಿಸುವಂತೆ, ಪಾರ್ಕು, ತೋಟಗಳಂಥಾ ಸುಂದರ ಪ್ರಕೃತಿ ತಾಣಗಳಲ್ಲಿ ನಡೆಯುವುದು ನಮಗೆ ಸಮಾಧಾನ ತರುತ್ತದೆ, ಕೋಪ ಮಾಯವಾಗುತ್ತದೆ. ಯಾವುದೇ ದೈಹಿಕ ದುಡಿತ ನಮ್ಮಲ್ಲಿ ಉಲ್ಲಾಸವನ್ನು ಉಂಟು ಮಾಡುತ್ತದೆ. ಕನಿಷ್ಠ ನಮ್ಮ ಪುಸ್ತಕದ ಷೆಲ್ಫು ಜೋಡಿಸಿಕೊಂಡರೂ ಸಾಕು, ಪ್ರಕ್ಷುಬ್ಧ ಮನಸ್ಸು ಹತೋಟಿಗೆ ಬರುತ್ತದೆ!

* ಕೋಪ ತಂದ ಪ್ರಸಂಗವನ್ನು ಮುಕ್ತವಾಗಿ ಆಪ್ತರೊಡನೆ ಹಂಚಿಕೊಂಡರೂ ಮನಸ್ಸು ಹಗುರವಾಗುತ್ತೆ.
* ‘ನನ್ನ ಮಾತೇ ನಡೆಯಬೇಕು, ಎಲ್ಲರೂ ನನಗೆ ತಲೆಬಾಗಬೇಕು, ನನ್ನನ್ನು ಯಾರೂ ಪ್ರಶ್ನಿಸಲಾಗದು’ ಎಂಬ ಅಪಾಯಕರ ‘ಅಹಂ’ ಧೋರಣೆಯಿಂದ ನಾವು ಮೊದಲು ಮುಕ್ತರಾಗಬೇಕು. ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.

* ಇನ್ನೊಬ್ಬರನ್ನು ಟೀಕಿಸುವ, ಅವರನ್ನು ಕೆದಕುವ ಬದಲು ನಮ್ಮನ್ನು ನಾವೇ ಮೊದಲು ಪರೀಕ್ಷಿಸಿಕೊಳ್ಳೋಣ. ನಮ್ಮ ಭಾವನಾತ್ಮಕ ಬುದ್ಧಿಮತ್ತೆಯನ್ನು (Emotional Intelligence) ಉತ್ತಮಗೊಳಿಸಿಕೊಳ್ಳೋಣ.
* ಸಂಗೀತ, ದುಡಿಮೆಯ ನಡುನಡುವೆ ವಿಶ್ರಾಂತಿ, ಪ್ರವಾಸಗಳು, ಏಕತಾನತೆಯನ್ನು ನೀಗಿಸಿ ಒತ್ತಡವನ್ನು ನಿವಾರಿಸಿ, ಮನಸ್ಸನ್ನು ತಾಜಾಗೊಳಿಸಿ, ಅದಕ್ಕೆ ಮುದ ನೀಡುತ್ತವೆ.
*ಸದಾ ಸಂತೋಷದಿಂದಿರುವ ಇತ್ಯಾತ್ಮಕ ಅಭ್ಯಾಸವು ನಮ್ಮದಾಗಿರಲಿ.

ಬೇಂದ್ರೆಯವರು ಎಷ್ಟು ಚೆನ್ನಾಗಿ ಹೇಳಿದ್ದಾರೆ–
ಬಡ ನೂರು ವರುಷಾವ
ಹರುಷಾದಿ ಕಳೆಯೋಣ
ಯಾಕಾರ ಕೆರಳೋಣ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT