ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಶವೃಕ್ಷ: ಒಂದು ಪ್ರತಿಕ್ರಿಯೆ

Last Updated 1 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ಎಸ್.ಎಲ್. ಭೈರಪ್ಪ ಅವರ ‘ವಂಶವೃಕ್ಷ’ ಕಾದಂಬರಿ ಪ್ರಕಟವಾಗಿ 50 ವರ್ಷಗಳಾಯಿತು. ಈ ಕೃತಿಯ ಚಿನ್ನದ ಹಬ್ಬದ ಸಂದರ್ಭದಲ್ಲಿ ಭೈರಪ್ಪನವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಹಾಗೂ ಕಾದಂಬರಿಯ ಮಹತ್ವವನ್ನು ಕುರಿತು ಲೇಖಕ ಪ್ರಧಾನ ಗುರುದತ್ತ ಅವರು ನೀಡಿರುವ ಪ್ರತಿಕ್ರಿಯೆ ಇಲ್ಲಿದೆ.

1965ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಎಸ್‌.ಎಲ್‌. ಭೈರಪ್ಪ ಅವರ ‘ವಂಶವೃಕ್ಷ’ ಕಾದಂಬರಿ 50 ವರ್ಷಗಳ ಬಳಿಕವೂ ಕನ್ನಡ ಓದುಗರ ಮನಸ್ಸನ್ನು ಸೆಳೆಯುತ್ತಿದೆ ಎಂಬುವುದಕ್ಕೆ ಸಹೃದಯ ಓದುಗರು ಈಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಪ್ರಕಟಣೆಯ 50ನೇ ವರ್ಷದ ಸಮಾರಂಭವೇ ಸಾಕ್ಷಿಯಾಗಿದೆ.

ರಜತ ಪರದೆ ಮೇಲೂ ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಅದು ವಿಜೃಂಭಿಸಿರುವುದು, ನಾಟಕ ರೂಪದಲ್ಲಿ ಈಗಲೂ ಅದು ವಿವಿಧೆಡೆಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿರುವುದು ಅದರ ಜನಪ್ರಿಯತೆಯ ಇತರ ನಿದರ್ಶನಗಳೇ ಆಗಿವೆ. ಕಾದಂಬರಿಯೊಂದು ಹೀಗೆ ಚಿನ್ನದ ಹಬ್ಬದ ಅದೃಷ್ಟಕ್ಕೆ ಪಾತ್ರವಾಗುತ್ತಿರುವುದು ನನಗೆ ತಿಳಿದಿರುವಂತೆ ಇದೇ ಮೊದಲು. 2014ರ ಹೊತ್ತಿಗೆ ಅದರ 18 ಆವೃತ್ತಿಗಳು ಪ್ರಕಟವಾಗಿರುವುದು ವಿಶೇಷ ಸಂಗತಿಯೇ ಆಗಿದೆ. 

ದೇಶ ಕುಲಕರ್ಣಿ ಹೇಳಿರುವಂತೆ ಅನಕೃ ಬಳಿಕ ಈ ಮಟ್ಟಿನ ಜನಪ್ರಿಯತೆಯನ್ನು ಗಳಿಸಿರುವ ಹಾಗೂ ತೇಜಸ್ವಿ ಹೇಳಿರುವಂತೆ ಕನ್ನಡ ಓದುಗರನ್ನು ಸೆರೆ ಹಿಡಿದು ನಿಲ್ಲಿಸಿರುವ ಅಪರೂಪದ ಲೇಖಕರು ಭೈರಪ್ಪನವರೇ ಆಗಿದ್ದಾರೆ, ಒಂದು ಪಂಥದ ವಿಮರ್ಶಕರ ಅವಗಣನೆಯ ಬಳಿಕವೂ. ಇದರ ಈ ಬಗೆಯ ಪರಿಣಾಮಕ್ಕೆ ಕಾರಣವಾಗಿರುವ ಸಂಗತಿಗಳು ಮೂರು.

ಒಂದು; ಅವರ ಅಧ್ಯಯನಪೂರ್ವಕವಾದ, ಅನುಭವ ಸಂಪನ್ನವಾಗಿರುವ ಹೊಸ ವಿಷಯಾನ್ವೇಷಣೆಯ ಪ್ರವೃತ್ತಿಯ ಓದುಗರ ಬಗೆಗಿನ ರಸಜ್ಞತೆ ಕಾಳಜಿಯ ಅವರ ಬರಹ.

ಎರಡು; ವಿಷಯದ ಆಳವಾದ ವಿಶ್ಲೇಷಣೆಯನ್ನು ಅದರ ವಿವಿಧ ಮುಖಗಳನ್ನು ಕಂಡುಕೊಳ್ಳುವ ಹಾಗೂ ಕಾಣಿಸುವ ಅವರ ಶ್ರದ್ಧೆ. ‘ವಂಶವೃಕ್ಷ’ದಲ್ಲಿ ರಹಸ್ಯೋದ್ಘಾಟನೆ ಮಾಡಿರುವ ವಂಶ ಸಂಬಂಧವಾದ ಹಿರಿಮೆ ಮತ್ತು ಅದರ ಕೊಳ್ಳುತನದ ವಿಚಾರ, ಅದು ತಲೆಮಾರುಗಳಲ್ಲಿ ಮುಂದುವರಿದುಕೊಂಡು ಬರುವ ಬಗೆ ‘ನೆಲೆ’ ಕಾದಂಬರಿಯಲ್ಲಿ ಒಂದು ರೀತಿಯಲ್ಲಿ ಕಾಣಿಸಿಕೊಂಡರೆ (ಆತ್ಮಹತ್ಯೆಗೆ ಮುಂದಾಗಿರುವ ವ್ಯಕ್ತಿ ಕಾಳಪ್ಪನಿಗೆ ಉತ್ತರಿಸುವಲ್ಲಿ ತಿಣುಕಾಡುವಲ್ಲಿ) ‘ಪರ್ವ’ ಕಾದಂಬರಿಯಲ್ಲಿನ ನಿಯೋಗದ ಬಗೆಗಿನ ವಿಶ್ಲೇಷಣೆಯಲ್ಲಿ ಇನ್ನೊಂದು ಬಗೆಯಲ್ಲಿ ಕಾಣಿಸಿಕೊಂಡರೆ, ‘ಯಾನ’ದಲ್ಲಿ ಕೃತಕ ಗರ್ಭಧಾರಣೆಯ ವಿಚಾರ ಮೂಡಿಸುವ ಸಮಸ್ಯೆ ರೂಪದಲ್ಲಿ ಮತ್ತೊಂದು ಬಗೆಯಲ್ಲಿ ಕಾಣಿಸಿಕೊಳ್ಳುತ್ತದೆ. ಓದುಗರನ್ನು ಚಿಂತನಶೀಲತೆಗೆ ಒಡ್ಡುವ ಈ ಪರಿಯು ಓದುಗರ ಅನುಭವ ವಲಯವನ್ನು ವಿಶ್ಲೇಷಿಸುವ ವಿಧಾನವೇ ಆಗಿದೆ. ಇದನ್ನು ಕೃತಿಕಾರನ ಮೇಲೆಯೇ ವಸ್ತು ಬೀರುವ ಪರಿಣಾಮ ಎಂದು ಪರಿಗಣಿಸಬಹುದು.

ಮೂರನೆಯದು; ಕೌಟುಂಬಿಕವಾಗಿ ಉಂಟಾಗುವ ಸಮಸ್ಯೆಗಳಿಗೆ ಡಿಎನ್‌ಎ ಪರೀಕ್ಷೆ ಮೂಲಕ ಮಗುವಿನ ವಂಶತ್ವವನ್ನು ನಿರ್ಧರಿಸಬಹುದು ಎಂಬುವುದು ‘ಕವಲು’ ಕಾದಂಬರಿಯಲ್ಲಿ ಸೂಚ್ಯವಾಗಿ ಕಾಣಿಸಿಕೊಂಡಿರುವಂತೆ, ‘ವಂಶವೃಕ್ಷ’ದಲ್ಲಿ ಎತ್ತಿರುವ ಈ ಸಮಸ್ಯೆಯ ಸಾರ್ವತ್ರಿಕತೆ ‘ವಂಶವೃಕ್ಷ’ ಅನುವಾದಿತವಾಗಿರುವ ಎಲ್ಲಾ ಭಾಷೆಗಳಲ್ಲಿಯೂ ‘ಬೀಜ’ ಮತ್ತು ‘ಕ್ಷೇತ್ರ’ದ ಬಗೆಗಿನ ಈ ಜಿಜ್ಞಾಸೆ ಒಂದೇ ಬಗೆಯದಾಗಿ ಓದುಗರನ್ನು ಕಾಡಿದೆ. ಈ ಕಾರಣಗಳಿಂದಾಗಿ ದೇಶ ಕುಲಕರ್ಣಿ ಅವರು ಎಂದಿರುವಂತೆ, ಏರುಹುಬ್ಬಿನ ವಿಮರ್ಶಕರ ಅವಗಣನೆಯ ಅನುಲೇಖದ ನಡುವೆಯೂ ಕಾದಂಬರಿಯ ಒಡಲಲ್ಲೇ ವೈಚಾರಿಕ ಸಮಸ್ಯೆಗಳನ್ನು ಬಿಂಬಿಸುವ ಗ್ರಹಿಕೆಯಲ್ಲಿ ಹೊಸದೊಂದು ಆವಿಷ್ಕಾರ ಆಗುವಂತೆ ಮಾಡುವ ಭೈರಪ್ಪ ಅಪರೂಪದ ವ್ಯಕ್ತಿಯಾಗಿ, ಅಪರೂಪದ ಲೇಖಕರಾಗಿ ನಮ್ಮ ನಡುವೆ ಉಳಿದೇ ಇರುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT