ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ವಾಹನ ನಿರ್ಮಾಣಕ್ಕೆ ಸರ್ಕಾರದ ಪ್ರಯತ್ನ?!

Last Updated 18 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಇರುವ ವಿದ್ಯುಚ್ಛಾಲಿತ ವಾಹನಗಳಲ್ಲಿ ಬಳಕೆಯಾಗಿರುವ ಮೋಟಾರ್‌ಗಳೆಲ್ಲಾ ಚೈನಾದಲ್ಲಿ ತಯಾರಾದವು. ಈ ಮೋಟಾರುಗಳಾವುವೂ ಭಾರತದ ರಸ್ತೆ ಸ್ಥಿತಿಗತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ತಯಾರಾದವು ಅಲ್ಲ. ಹಾಗಾಗಿ, ಅವುಗಳ ಬಾಳಿಕೆ ಕಡಿಮೆ. ವಿದೇಶದಲ್ಲಿ ತಯಾರಾಗಿರುವ ಕಾರಣ, ಅವುಗಳ ಬೆಲೆ ಹೆಚ್ಚು. ಒಟ್ಟಾರೆಯಾಗಿ ಭಾರತೀಯ ಗ್ರಾಹಕನಿಗೆ ಜೇಬಿನ ಮೇಲೆ ಹೊರೆ.

ಇದನ್ನು ತಪ್ಪಿಸುವ ಸಲುವಾಗಿ ಹಾಗೂ ವಿದ್ಯುಚ್ಛಾಲಿತ ವಾಹನಗಳನ್ನು ಹೆಚ್ಚು ಬಳಸುವಂತೆ ನಾಗರಿಕರನ್ನು ಹುರಿದುಂಬಿಸುವ ಸಲುವಾಗಿ ಕೇಂದ್ರ ಸರ್ಕಾರವೇ ಹೊಸ ಹೆಜ್ಜೆ ಇಡಲು ಹೊರಟಿದೆ. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ಕಾರವೇ ವಿದ್ಯುಚ್ಛಾಲಿತ ವಾಹನಗಳನ್ನು ತಯಾರಿಸುವ ನಿರ್ಧಾರ ತೆಗೆದುಕೊಂಡಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಇನ್ನು ಕೇವಲ 24  ತಿಂಗಳುಗಳಲ್ಲಿ ಗ್ರಾಹಕರ ಮುಂದೆ ಸರ್ಕಾರಿ ನಿರ್ಮಿತ ವಿದ್ಯುಚ್ಛಾಲಿತ ವಾಹನಗಳು ನಿಂತಿರುತ್ತವೆ!

ಬೃಹತ್‌ ಕೈಗಾರಿಕೆ ಇಲಾಖೆಯು ಈ ಹೊಸ ಹೆಜ್ಜೆ ಇಡಲು ಹೊರಟಿದೆ. ಇಲಾಖೆಯ ಜಂಟಿ ಕಾರ್ಯದರ್ಶಿ ಅಂಬುಜ್‌ ಶರ್ಮಾ ಅವರ ಪ್ರಕಾರ, ಕೇಂದ್ರ ಸರ್ಕಾರವು 1,600 ಕೋಟಿ ರೂಪಾಯಿ ವೆಚ್ಚದಲ್ಲಿ ಬಂಡವಾಳ ಹೂಡಿಕೆ ಮಾಡಲಿದ್ದು, ದೇಶದ ಪ್ರಮುಖ ವಾಹನ ಉತ್ಪಾದಕರ ಜತೆ ಒಪ್ಪಂದ ಮಾಡಿಕೊಂಡು ವಿದ್ಯುಚ್ಛಾಲಿತ ವಾಹನಗಳನ್ನು ತಯಾರಿಸುವ ಯೋಜನೆ ಸಿದ್ಧಪಡಿಸಿದೆ. ಕಾನ್ಸೆಪ್ಟ್‌ ವಾಹನಗಳನ್ನು ಕೇವಲ 18 ತಿಂಗಳಲ್ಲಿ ತಯಾರಿಸಿ, 24 ತಿಂಗಳಲ್ಲಿ ವಾಣಿಜ್ಯ ಉತ್ಪಾದನೆ ಹಾಗೂ ಮಾರಾಟ ವ್ಯವಸ್ಥೆಯನ್ನು ಮಾಡಲಾಗುವುದು ಎಂದಿದ್ದಾರೆ.

ಮೂರು ಮುಖ್ಯ ಕ್ಷೇತ್ರಗಳಲ್ಲಿ ವಿದ್ಯುತ್‌ ವಾಹನಗಳ ತಯಾರಿ ಆಗಲಿದೆ. ಬೃಹತ್‌ ವಾಹನಗಳು. ಅಂದರೆ, ಬಸ್‌, ಲಾರಿ, ಟ್ರಕ್‌ ಇತ್ಯಾದಿ. ನಂತರ ನಾಗರಿಕರ ವಾಹನಗಳು. ಅಂದರೆ, ಕಾರ್‌, ಸ್ಕೂಟರ್‌, ಬೈಕ್‌ ಇತ್ಯಾದಿ. ಕೊನೆಯದಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಅಂದರೆ, ರೈಲು, ಬಸ್‌ ಇತ್ಯಾದಿ. ಈ ಮೂರೂ ಕ್ಷೇತ್ರಗಳಲ್ಲಿ ವಿದ್ಯುಚ್ಛಾಲಿತ ವಾಹನಗಳನ್ನು ತಯಾರಿಸುವುದು ಮುಖ್ಯ ಉದ್ದೇಶವಾಗಿದೆ.

ಬೃಹತ್‌ ವಾಹನಗಳ ಉತ್ಪಾದನೆಗೆ ಈಗಾಗಲೇ ಟಾಟಾ, ಅಶೋಕ್‌ ಲೇಲ್ಯಾಂಡ್‌, ಮಹಿಂದ್ರಾ, ಐಷರ್ ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಕಂಪೆನಿಗಳ ತಂತ್ರಜ್ಞಾನ, ಸಂಶೋಧನೆ ಹಾಗೂ ಅಭಿವೃದ್ಧಿ ವಿಭಾಗದ ಬಳಕೆ ಆಗಲಿದೆ. ಈ ಕಂಪೆನಿಗಳು ತಮ್ಮದೇ ಆದ ಕಾನ್ಸೆಪ್ಟ್‌ ವಾಹನಗಳನ್ನು ತಯಾರಿಸಬಹುದು. ಆದರೆ, ಅವೆಲ್ಲಾ ಸರ್ಕಾರವನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ತಯಾರಾಗಬೇಕು ಎಂದು ಸೂಚನೆ ನೀಡಲಾಗಿದೆ. ಈ ವಾಹನಗಳ ತಾಂತ್ರಿಕ ವಿವರ, ಮಾಲಿನ್ಯ ಮಟ್ಟ ಇತ್ಯಾದಿ ಮಾಹಿತಿಗಳು ಏಕರೂಪವಾಗಿರುವಂತೆ ಸೂಚನೆಗಳನ್ನು ನೀಡಲಾಗಿದೆ.

ಭಾರತೀಯ ಮೋಟಾರ್‌
ಈಗಿನ ಬಹುತೇಕ ವಿದ್ಯುಚ್ಛಾಲಿತ ಸ್ಕೂಟರ್‌ಗಳಲ್ಲಿ ಚೈನಾ ಮೋಟಾರ್‌ಗಳನ್ನು ಅಳವಡಿಸಲಾಗಿದೆ. ಭಾರತೀಯ ಮಾಲಿಕತ್ವದ ಕಂಪೆನಿಗಳೂ ಅನಿವಾರ್ಯವಾಗಿ ಚೈನಾದಲ್ಲಿ ತಯಾರಾದ ಮೋಟಾರ್‌ಗಳನ್ನೇ ಅಳವಡಿಸುತ್ತಿವೆ. ಇದರಿಂದ ಸ್ಕೂಟರ್‌ನ ಬೆಲೆ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ಭಾರತದಲ್ಲೇ ಮೋಟಾರ್‌ ತಯಾರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ.

ಭಾರತದಲ್ಲಿ ಮಾರಾಟವಾಗುವ ಒಟ್ಟಾರೆ ವಾಹನಗಳ ಪೈಕಿ ಮೂರನೇ ಒಂದು ಭಾಗವನ್ನು ದ್ವಿಚಕ್ರವಾಹನಗಳೇ ತುಂಬುತ್ತವೆ. ಹಾಗಾಗಿ, ಈ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ನೀಡಿದಲ್ಲಿ, ಬಹು ದೊಡ್ಡ ಪ್ರಮಾಣದಲ್ಲಿ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು. ಜತೆಗೆ ಸಾಂಪ್ರದಾಯಿಕ ಇಂಧನ ಮೂಲಗಳ ಬಳಕೆಯನ್ನೂ ಕಡಿಮೆಗೊಳಿಸಬಹುದು ಎಂಬುದು ವಾದ.

ಜತೆಗೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆಗೂ ಆದ್ಯತೆ ನೀಡಲಾಗಿದೆ. ಈಗಾಗಲೇ ದೇಶದಲ್ಲಿ ಬಹಳಷ್ಟು ವಿದ್ಯುಚ್ಛಾಲಿತ ರೈಲುಗಳು ಇವೆ. ಅವುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಈ ಹೊಸ ಯೋಜನೆಯ ಉದ್ದೇಶ. ಕಾರ್ಯಕ್ಷಮತೆ ಹೆಚ್ಚಳವಾದಲ್ಲಿ ಸಾಕಷ್ಟು ವಿದ್ಯುತ್‌ ಉಳಿತಾಯವಾಗುತ್ತದೆ. ಅಲ್ಲದೇ, ಈಗಿನ ಡೀಸೆಲ್‌ ಚಾಲಿತ ಎಂಜಿನ್‌ ಉಳ್ಳ ರೈಲುಗಳನ್ನು ವಿದ್ಯುಚ್ಛಾಲಿತ ಮೋಟಾರ್‌ ಇರುವ ರೈಲುಗಳಾಗಿ ಪರಿವರ್ತಿಸಿದರೆ, ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ.

ಈ ಯೋಜನೆಯಲ್ಲಿ ವಿದ್ಯುಚ್ಛಾಲಿತ ವಾಹನಗಳಿಗೆ ಚಾರ್ಜಿಂಗ್‌ ಡಾಕ್‌ಗಳನ್ನೂ ನಿರ್ಮಿಸುವ ಚಿಂತನೆ ಇದೆ. ವಾಹನ ಬಳಕೆದಾರರು, ವಿದ್ಯುತ್‌ ಖಾಲಿಯಾದಾಗ ಇಲ್ಲಿ ರೀಚಾರ್ಜ್‌ ಮಾಡಿಕೊಳ್ಳಬಹುದು. ಇದರಿಂದ ದೂರದ ಪ್ರಯಾಣಕ್ಕೆ ವಿದ್ಯುಚ್ಛಾಲಿತ ವಾಹನಗಳು ಯೋಗ್ಯವಲ್ಲ ಎಂಬ ಮಿತಿಯೂ ಇಲ್ಲವಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT