ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವ್ಯಕ ಅಡುಗೆ ಮನೆ

ಬ್ಲಾಗಿಲನು ತೆರೆದು...
Last Updated 4 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಳ್ಗಾಮಂಚಿ ತೆಳ್ಳವ್ ದೋಸೆ - ಬೆಲ್ಲಾ ತುಪ್ಪಾ ತಿಂದು,
ಮಧ್ಯಾಹ್ನಕ್ಕೆ ಅಪ್ಪೇಹುಳಿ ಗಂಟ್ಲಮಟಾ ಕುಡ್ದು,
ಹೇಡ್ಗೆ ಕಟ್ಟೆ ಮೇಲೆ ಕುಂತು ಹತ್ತು ಕವ್ಳಾ ಜಡ್ದು,
ರಾತ್ರೆಪ್ಪಾಗ ಹಲ್ಸಿನಣ್ಣಿನ ಕಡಬು - ಜೇನ್ತುಪ್ಪಾ ಮೆದ್ರೆ,
ಸ್ವರ್ಗಕ್ಕೆ ಮೂರೇ ಗೇಣೆಂದ ಸರ್ವಜ್ಞ....!

ಮೇಲಿನ ಪದ್ಯರೂಪಿ ರಚನೆಯಲ್ಲಿನ- ತೆಳ್ಳನೆ ದೋಸೆ, ಬೆಲ್ಲ ತುಪ್ಪ, ಅಪ್ಪೇಹುಳಿ, ಕವಳ, ಹಲಸಿನ ಹಣ್ಣು, ಜೇನು ತುಪ್ಪ- ಪದಾರ್ಥಗಳ ಹೆಸರೇ ಬಾಯಲ್ಲಿ ನೀರೂರಿಸುತ್ತದೆ. ಈ ಚೋದಕ ಪದಾರ್ಥಗಳೇ ನಿತ್ಯದ ಆಹಾರ ಪದ್ಧತಿಯಾದರೆ ಎಷ್ಟು ಸೊಗಸಲ್ಲವೇ? ಈ ಸೊಗಸನ್ನು ಹವ್ಯಕರ ಆಹಾರ ಪದ್ಧತಿಯಲ್ಲಿ ಕಾಣಬಹುದು. ಅಂದಹಾಗೆ, ಇದು ಊಟದ ಕುರಿತ ಮಾತು.

ಪ್ರತಿ ಸಮುದಾಯದ ಆಹಾರ ಪದ್ಧತಿ ಭಿನ್ನವಷ್ಟೆ. ಈ ಆಹಾರ ಪದ್ಧತಿಗಳನ್ನೆಲ್ಲ ಒಂದೆಡೆ ಕಲೆಹಾಕಿ ಅಧ್ಯಯನ ಮಾಡುವುದಾದರೆ, ಅದೊಂದು ಬಗೆಯ ಸ್ವಾರಸ್ಯಕರ ಸಾಂಸ್ಕೃತಿಕ ಅಧ್ಯಯನವಾಗುತ್ತದೆ. ಪ್ರಸಕ್ತ `ಹವ್ಯಕ ಪಾಕ' ಬ್ಲಾಗ್(havyakapaaka.blogspot.in) ಕೂಡ ಇಂಥದೊಂದು ಸಾಂಸ್ಕೃತಿಕ ಲಕ್ಷಣದ ಜಾಲತಾಣ. ಇದು ಹವ್ಯಕ ಸಮುದಾಯದ ಅಡುಗೆಗಳಿಗೆ ಮೀಸಲಾದುದು.

ಈ `ಇ-ಅಡುಗೆಮನೆ' ರೂಪುಗೊಂಡಿದ್ದಾದರೂ ಹೇಗೆ? ಅದರ ಹುಟ್ಟಿನ ಬಗ್ಗೆ ಬ್ಲಾಗಿಗರು ಬರೆದುಕೊಂಡಿರುವುದು ಹೀಗೆ: “ಹವ್ಯಕರ ಅಡುಗೆ ಪದ್ಧತಿಯ ಬಗ್ಗೆ ಅಂತರ್ಜಾಲದಲ್ಲಿ ಹುಡುಕುತ್ತಿದ್ದೆ. ಸರಿಯಾದ ಮಾಹಿತಿಯುಕ್ತವಾದ ತಾಣ ಸಿಗದೇಹೋದ ಕಾರಣ ಈ ಬ್ಲಾಗ್ ಶುರು ಮಾಡಬೇಕಾದ ಪ್ರಸಂಗ ಬಂತು”.

ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದ ಅಡುಗೆಯ ವಿವರಗಳನ್ನು, ಮುಖ್ಯವಾಗಿ ಹವ್ಯಕರ ದಿನನಿತ್ಯದ ಅಡುಗೆ ಪದಾರ್ಥಗಳನ್ನು ತಯಾರಿಸುವ ವಿಧಾನವನ್ನು ವಿವರಿಸುವುದು ಈ ಬ್ಲಾಗ್‌ನ ಪ್ರಮುಖ ಉದ್ದೇಶ. ಸ್ವಾರಸ್ಯಕರ ಸಂಗತಿಯೆಂದರೆ, ಹವ್ಯಕರ ಅಡುಗೆ ಬಗ್ಗೆ ಇಷ್ಟೆಲ್ಲ ಪ್ರೀತಿಯುಳ್ಳ ಬ್ಲಾಗಿಗರಿಗೆ ಸ್ವತಃ ಅಡುಗೆ ಮಾಡಲು ಬರುವುದಿಲ್ಲ.

ಸೌಟು ಹಿಡಿಯಲು ಬಾರದಿದ್ದರೇನು, ಮೌಸು ಹಿಡಿಯಲು ಬರುತ್ತದಲ್ಲ. ಅಡುಗೆಯನ್ನು ಬಲ್ಲವರಿಂದ ಬರಹಗಳನ್ನು ಆಹ್ವಾನಿಸಿ, ಅವರು ಬರೆದು ಕಳಿಸಿದುದನ್ನು ಇವರು ಬ್ಲಾಗ್‌ನಲ್ಲಿ ಕಲೆಹಾಕುತ್ತಿದ್ದಾರೆ. ಇದೊಂದು ಬಗೆಯ ಪಾಕ ಸೇವೆ!

`ಹವ್ಯಕ ಪಾಕ'ದ ಅಡುಗೆ ಮನೆಯಲ್ಲಿ ಬ್ಲಾಗಿಗರ ಹೆಸರು ಮೇಲ್ನೋಟಕ್ಕೆ ಕಾಣುವಂತಿಲ್ಲ. ಊಟ ಮುಖ್ಯ, ತಯಾರಿಸುವವರು ಅಥವಾ ಬಡಿಸುವವರಲ್ಲ ಎನ್ನುವುದು ಅವರ ನಿಲುವು ಇರಬಹುದೇನೊ? ಇರಲಿ, ನೇರವಾಗಿ ಅಡುಗೆಮನೆ ಪ್ರವೇಶಿಸೋಣ.
ಈ ಬ್ಲಾಗ್‌ನ ಓದುಗರು ಹವ್ಯಕ ಶೈಲಿಯ ಅಡುಗೆಗಳನ್ನು ಇಲ್ಲಿ ದಾಖಲಿಸಿದ್ದಾರೆ.

ಲ್ಲಿನ ಮೆನು ನೋಡಿ: ಬಾಳೆಹಣ್ಣು ಬನ್ಸ್, ಬಾಳೆ ಹಣ್ಣಿನ ರೊಟ್ಟಿ, ಅತ್ರಸ, ರಾಗಿ ತಂಪು, ಮಾವಿನ ಹಣ್ಣಿನ ಸಾಸ್ಮೆ, ಗೋಧಿ ಹಿಟ್ಟಿನ ಶಿರಾ, ನೆಲನೆಲ್ಲಿ ಸೊಪ್ಪಿನ ತಂಬುಳಿ, ಬಕ್ಕೆ ಹಣ್ಣಿನ ಮುಳ್ಕ, ಹೀರೇಕಾಯಿ ಪಾಯಸ, ಸಾಂಬಾರ್ ಸೊಪ್ಪಿನ ಗೊಜ್ಜು... ಹೀಗೆ ರಸಕವಳದ ಪಟ್ಟಿ ಮುಂದುವರಿಯುತ್ತದೆ. ಐದಾರು ಬಗೆಯ ತಂಬುಳಿಗಳೂ ಈ ಪಟ್ಟಿಯಲ್ಲಿವೆ.

ಅಡುಗೆ ತಯಾರಿಕೆಯ ನಿರೂಪಣೆ ಸರಳವಾಗಿದೆ. ಅಡುಗೆಗೆ ಬಳಸುವ ಸಾಮಗ್ರಿಗಳು, ಮಾಡುವ ವಿಧಾನವನ್ನು ಗೊಂದಲಕ್ಕೆ ಕಾರಣವಾಗದಂತೆ ನೇರವಾಗಿ ಹೇಳಲಾಗಿದೆ. ಅಡುಗೆಯ ಕೊನೆಯಲ್ಲಿ `ಉಪಯುಕ್ತ ಮಾಹಿತಿ' ಹೆಸರಿನಲ್ಲಿ ಸಣ್ಣ ಟಿಪ್ಪಣಿಗಳಿವೆ. 

ಉದಾಹರಣೆಗೆ `ಶುಂಠಿ ತಂಬುಳಿ'ಯನ್ನು ನೋಡಿ: `ಮಾಡಲು ಬೇಕಾದ ಸಮಯ- 10 ನಿಮಿಷ. ಫ್ರಿಡ್ಜ್‌ನಲ್ಲಿ ಇಟ್ಟು ಮರುದಿನ ಬಳಸಬಹುದು' ಎನ್ನುವ ಮಾಹಿತಿಯಿದೆ. ಅಪ್ಪೇಹುಳಿಗೆ ಸಂಬಂಧಿಸಿದಂತೆ- `ಅನ್ನದ ಜೊತೆ ಕಲಸಿ ತಿನ್ನಬಹುದು, ಊಟದ ಜೊತೆ ಅಥವಾ ಊಟದ ನಂತರ ಪಾನೀಯದಂತೆ ಬಳಸಬಹುದು, ಪ್ರಸ್ತುತ ಅಪ್ಪೇಹುಳಿಯ ಬಾಟಲಿ ಶಿರಸಿಯ ಸೂಪರ್ ಮಾರ್ಕೆಟ್‌ನಲ್ಲಿ ಲಭ್ಯ', ಎನ್ನುವ ಮಾಹಿತಿಗಳಿವೆ. `ಅಪ್ಪೇಹುಳಿ ಸೇವನೆ ನಂತರ ಸುಖನಿದ್ರೆಗೆ ಜಾರುವುದು ಸಾಮಾನ್ಯ' ಎನ್ನುವ ಹಿತವಾದ ಎಚ್ಚರಿಕೆಯ ಮಾತೂ ಇದೆ.

ಹವ್ಯಕರ ಅಡುಗೆಗೆ ಸಂಬಂಧಿಸಿದ ಇತರ ಬ್ಲಾಗುಗಳ ಕೊಂಡಿಗಳೂ ಇಲ್ಲಿವೆ. ಅಡುಗೆಗೆ ಬಳಸುವ ಕೆಲವು ಪದಾರ್ಥಗಳ ಇಂಗ್ಲಿಷ್ ಹೆಸರುಗಳನ್ನೂ ಪಟ್ಟಿ ಮಾಡಲಾಗಿದೆ.

ಹವ್ಯಕರ ಅಡುಗೆ ಸಂಕಲನವಾದ ಈ ಬ್ಲಾಗು ಪರೋಕ್ಷವಾಗಿ ಜಾತಿಯನ್ನು ಪ್ರತಿನಿಧಿಸುತ್ತಿದೆಯೇ? ಈ ಪ್ರಶ್ನೆಯೂ ಬ್ಲಾಗಿಗರಿಗೆ ಬಂದಿದೆ. ಇದಕ್ಕೆ ಅವರು ಹೇಳುವುದು- `ಹವ್ಯಕರ ಅಡುಗೆ'ಯನ್ನು ಪರಿಚಯಿಸುವುದಷ್ಟೇ ನಮ್ಮ ಉದ್ದೇಶ.

ಬ್ಲಾಗಿಗರ ಉದ್ದೇಶವನ್ನು ಅನುಮಾನಿಸಬೇಕಲ್ಲ. ಜಾತಿಯ ವಾಸನೆ ಯಾವ ತಿನಿಸಿಗೂ ಇರುವುದಿಲ್ಲ. ಹವ್ಯಕರ ಅಡುಗೆಗಳನ್ನು ಎಲ್ಲರದಾಗಿಸಿಕೊಳ್ಳಲು ಯಾರ ಅಡ್ಡಿಯಿದೆ. `ಅಡುಗೆ ಮಾಡಿ, ಸಂಭ್ರಮಿಸಿ' ಎನ್ನುವ ಬ್ಲಾಗ್‌ನ ಅಡಿ ಟಿಪ್ಪಣಿಯಲ್ಲೇ ಅಡುಗೆ ಮನೆಯ ಚೌಕಟ್ಟನ್ನು ಸಡಿಲಿಸುವ ಇಂಗಿತವಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT