ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಕವ್ವ’, ‘ತಾಯಿ’ಯ ಆತ್ಮ ಸಂವಾದ

ಅಕ್ಷರ ಗಾತ್ರ

ಎರಡು ಸಮಾನ ಮನಸ್ಸುಗಳು ಅಲ್ಲಿ ಕಲೆತವು.  ಜೀವನಾನುಭವದ ಕಡಲೊಳಗಿನಿಂದ ಮಥಿಸಿ ಬಂದ ತಮ್ಮ ನವನೀತದ ಕತೆಯನ್ನು ತೆರೆದಿಡುತ್ತಲೇ ಪರಸ್ಪರ ಹೃದ್ಗತವಾಗಿದ್ದ ನೆನಪುಗಳ ಬುತ್ತಿ ಬಿಚ್ಚಿ ಹಗುರಾದವು.

ಮಹಿಳಾ ದಿನಾಚರಣೆ ಅಂಗವಾಗಿ ‘ಪ್ರಜಾವಾಣಿ’ ಸೋಮವಾರ ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರ ನಡುವೆ ಆಯೋಜಿಸಿದ್ದ ಸಂವಾದ, ಅವರಿಬ್ಬರ ನಡುವಿನ ಆಪ್ತ ಅಭಿವ್ಯಕ್ತಿಗೆ ಸಾಕ್ಷಿಯಾಯಿತು. ಸಮಾನತೆಯ ಜಗತ್ತಿಗೆ ತೆರೆದುಕೊಳ್ಳುವ ಹೊರಳುಹಾದಿಯಲ್ಲಿ ಮಹಿಳೆ ನಿಂತಿರುವ ಈ ಕಾಲಘಟ್ಟದಲ್ಲಿ, ಆಕೆ ಕ್ರಮಿಸಬೇಕಾದ ಕಲ್ಲು ಮುಳ್ಳಿನ ಸಾಹಸಮಯ ಯಾನದ ಒಳದನಿಗೆ ವೇದಿಕೆಯಾಯಿತು.

‘ಇವತ್ತು ಅಕ್ಕ ಸಿಕ್ಕಿರೋದೇ ಒಂಥರಾ ಖುಷಿ’ ಎನ್ನುತ್ತಾ ಜಯಶ್ರೀ ಅವರೆಡೆ ಆಪ್ಯಾಯದ ನೋಟ ಹರಿಸುತ್ತಲೇ ಉಮಾಶ್ರೀ ಹುಮ್ಮಸ್ಸಿನಿಂದ ತಮ್ಮ ಅಂತರಂಗವನ್ನು ತೆರೆದಿಟ್ಟರೆ, ಅವರ ಮನದಲ್ಲಿ ಮಡುಗಟ್ಟಿದ ಮಾತುಗಳು ಅಭಿವ್ಯಕ್ತಗೊಳ್ಳಲು ಅನುವು ಮಾಡಿಕೊಡುವವರಂತೆ ಜಯಶ್ರೀ ಅಕ್ಕರೆಯಿಂದ ತಲೆದೂಗುತ್ತಾ ನಡುನಡುವೆ ಅವರ ಮಾತಿಗೆ ದನಿಯಾದರು.

ರಂಗಭೂಮಿ, ಸಿನಿಮಾ, ರಾಜಕೀಯ ಕ್ಷೇತ್ರದಲ್ಲಿನ ಒಡನಾಟ, ಅಲ್ಲಿ ಕಂಡುಂಡ ಸಿಹಿ ಕಹಿ, ಅದರಾಚೆಗೂ ತಾವು ಕಾಪಿಟ್ಟುಕೊಂಡು ಬಂದ ಮಹಿಳಾ ಅಸ್ಮಿತೆಯ ಒಳತೋಟಿ, ಹೊರಜಗತ್ತಿಗೆ ತೆರೆದುಕೊಳ್ಳುವಾಗಿನ ತಮ್ಮೊಳಗಿನ ತಲ್ಲಣಗಳನ್ನು  ಎಳೆಎಳೆಯಾಗಿ ಬಿಡಿಸಿಡುತ್ತಾ, ಇಡೀ ಮಹಿಳಾ ಜಗತ್ತಿನ ಪ್ರತಿನಿಧಿಗಳಂತೆ ಭಾಸವಾದ  ಅವರ ನಡುವಿನ ಸಂವಾದದ ಸಾರಾಂಶ ಇಲ್ಲಿದೆ

* ಸಮಾನತೆಯ ಈ ಕಾಲಘಟ್ಟದಲ್ಲಿ ಮಹಿಳಾ ದಿನಾಚರಣೆಯ ಅಗತ್ಯ ಇದೆಯೇ?
ಜಯಶ್ರೀ: ಯಾವುದೇ ದಿನಾಚರಣೆಯಾಗಲಿ ಮನಸ್ಸಿನಿಂದ ಆಚರಿಸಬೇಕು. ಯಾರೋ ಹೇಳಿದರು ಎಂದು ಫ್ಯಾಷನ್‌ಗಾಗಿ ಆಚರಿಸಬಾರದು.
ಉಮಾಶ್ರೀ: ಮಹಿಳಾ ದಿನಾಚರಣೆಗೆ ಒಂದು ಇತಿಹಾಸವೇ ಇದೆ. ಯಾವುದೇ ಆಚರಣೆ ಅದರ ಹಿಂದಿನ ಉದ್ದೇಶಗಳಿಗೆ ಪೂರಕವಾಗಿ ಇರಬೇಕು. ಸ್ವಾತಂತ್ರ್ಯ, ಹಕ್ಕು, ಅವಕಾಶಗಳಿಗಾಗಿ ಮಹಿಳಾ ಕುಲ ನಿರಂತರವಾಗಿ ಹೋರಾಡುತ್ತಾ ಬಂದಿರುವ ಅನೇಕ ದಶಕಗಳ ಇತಿಹಾಸವೇ ಓದಲು ಸಿಗುತ್ತದೆ. ಹೆಣ್ಣು ಮಕ್ಕಳ ಸ್ಥಿತಿಗತಿಯ ಅರಿವು ಪಡೆದುಕೊಳ್ಳಲು, ಅವಳನ್ನು ಹೊರ ಜಗತ್ತಿಗೆ ಕರೆತರಲು ಇದೊಂದು ಅವಕಾಶ. ಮಹಿಳೆಯರ ಪರವಾಗಿ ಯಾರ್ಯಾರು ಏನೇನು ಮಾಡುತ್ತಿದ್ದಾರೆ ಎನ್ನುವುದೆಲ್ಲ ಸಾಹಿತ್ಯ ರೂಪದಲ್ಲಿ ಹೆಣ್ಣಿಗೆ ಸಿಗುತ್ತಾ ಹೋಗಬೇಕು.
ಇಷ್ಟೆಲ್ಲ ಆದರೂ ನಾವು ಸಂಪೂರ್ಣವಾಗಿ ಎಲ್ಲವನ್ನೂ ಗಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನೂ 9%, 18% ಎಂದು ಪರ್ಸೆಂಟೇಜ್‌ ಲೆಕ್ಕದಲ್ಲೇ ಸಮಾಧಾನ ಪಟ್ಟುಕೊಳ್ಳಬೇಕಾದ ಸ್ಥಿತಿ ಇರುವುದು ವಿಷಾದನೀಯ.

* ಹೆಣ್ಣನ್ನು ಹೇಗೆ ವಿಶ್ಲೇಷಿಸುವಿರಿ?
ಜಯಶ್ರೀ: ನಕಾರಾತ್ಮಕತೆಯಲ್ಲೂ ಸಕಾರಾತ್ಮಕತೆ ಹುಡುಕುವ, ದೌರ್ಬಲ್ಯವನ್ನು ಮೆಟ್ಟಿ ನಿಲ್ಲುವ ನಿಯತ್ತು, ಪ್ರಾಮಾಣಿಕತೆ ಹೆಣ್ಣಿಗೆ ಇರಬೇಕು. ಯಾರದೋ ಖುಷಿಗಾಗಿ ಕೆಲಸ ಮಾಡದೆ ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು.

ಉಮಾಶ್ರೀ: ಹೆಣ್ಣು ತೆರೆದಿಟ್ಟ ಪುಸ್ತಕದಂತಿರಬೇಕು. ಯಾಕಾಗಿ ನಾವು ಮುಚ್ಚಿಡಬೇಕು? ಆದರೆ ಹಾಗೆಂದು ಬೇರೆಯವರಿಗೆ ತೊಂದರೆ ಕೊಡಬೇಕೆಂದಿಲ್ಲ.  ಒಟ್ಟಿನಲ್ಲಿ ಹೆಣ್ಣು ಮಕ್ಕಳು ಸುಮ್ಮನೆ ಇರಬಾರದು. ಏನಾದರೊಂದು ಮಾಡುತ್ತಲೇ ಇರಬೇಕು. ಆದರದು ಒಳ್ಳೆಯ ಮಾರ್ಗದಲ್ಲೇ ಇರಬೇಕು. ಅವಳೇ ಹೆಣ್ಣು.

* ಹೆಣ್ಣಾಗಿ ನಿಮ್ಮಲ್ಲಿ ಸಾರಗಟ್ಟಿದ ಅನುಭವ ಹೇಳಿ.
ಉಮಾಶ್ರೀ: ನಾವು ಹೆಣ್ಣಾಗಿ ಹುಟ್ಟಿರುತ್ತೇವೆ ಅಷ್ಟೆ. ಆದರೆ ಬದುಕಿನಲ್ಲಿ ಗಂಡಸರು ನಿಭಾಯಿಸಬಹುದಾದ ಎಲ್ಲ ಹೊಣೆಗಾರಿಕೆಯನ್ನೂ ನಿರ್ವಹಿಸುತ್ತಲೇ ಇರುತ್ತೇವೆ. ಹೆಣ್ಣಿನ ಹೃದಯ, ಗಂಡಿನ ಸವಾಲು ನಮಗಿರುತ್ತದೆ. ಎಷ್ಟೋ ಬಾರಿ ಅಪಾಯಕ್ಕೆ ದೂಡಿಕೊಂಡಿರುತ್ತೇವೆ, ಎದ್ದು ಬಂದಿರುತ್ತೇವೆ. ಕೆಲವೊಮ್ಮೆ ನಮ್ಮ ಬಗ್ಗೆ ಪ್ರೀತಿ, ಗೌರವ ಇರುವ ಗಂಡಸರೂ ನಮ್ಮ ಬೆಂಬಲಕ್ಕೆ ಬಂದಿರುತ್ತಾರೆ.

* ಮಹಿಳೆಗೆ ಹೆಜ್ಜೆಹೆಜ್ಜೆಗೂ ಸವಾಲುಗಳು ಕಾಡುವಾಗ ಅಧೀರಳಾಗುವುದು ಸಹಜವಲ್ಲವೇ?
ಉಮಾಶ್ರೀ: ನಮ್ಮ ವಿರೋಧಿಗಳು ನಮ್ಮನ್ನು ಹಣಿಯಲು ಯತ್ನಿಸುತ್ತಲೇ ಇರುತ್ತಾರೆ. ಅದಕ್ಕೆಲ್ಲ ಜಗ್ಗದೆ ನುಗ್ಗಿ ಮುಂದೆ ಸಾಗಬೇಕು. ದಾರಿ ಬಿಡದಿದ್ದರೆ ತಳ್ಳಿಕೊಂಡಾದರೂ ಮುಂದೆ ಹೋಗಬೇಕು. ಮಹಿಳೆಯರು ಯಾವ ವಿಷಯಕ್ಕೂ ನಿರಾಶರಾಗಬೇಕಿಲ್ಲ. ದಾರಿ ಹುಡುಕುವ ಪ್ರಯತ್ನ ನಿರಂತರವಾಗಿರಬೇಕು. ಎಲ್ಲೋ ಒಂದು ಕಡೆ ದಾರಿ ತೋಚುತ್ತದೆ. ದಾರಿ ತೋಚುತ್ತಿಲ್ಲ ಎಂದು ಯೋಚಿಸುವುದರಲ್ಲೇ ಒಂದು ದಾರಿಯ ಹೊಳಹು ಕಾಣುತ್ತದೆ. ನಾವು ಯಾವ ಶೌಚಾಲಯಕ್ಕೆ ಹೋದರೂ ನಮ್ಮ ಹೆಸರುಗಳು, ಅಂಗಾಂಗಗಳ ವರ್ಣನೆ ಇರುತ್ತದೆ. ಅವಕ್ಕೆಲ್ಲ ಉದಾಸೀನ, ನಿರ್ಲಕ್ಷ್ಯ ತೋರಬೇಕು.
ಕಾಲೆಳೆಯುವ ಪ್ರವೃತ್ತಿ ಎಲ್ಲ ಕ್ಷೇತ್ರದಲ್ಲೂ ಇರುತ್ತದೆ. ದ್ವೇಷ ಅಸೂಯೆ ಇಲ್ಲದ ಕ್ಷೇತ್ರ ಇಲ್ಲ. ವಿರೋಧಿಗಳು ಟೀಕಿಸುತ್ತಲೇ ಇರುತ್ತಾರೆ. ಮಾನಸಿಕ ಹಿಂಸೆ ಕೊಡುತ್ತಲೇ ಇರುತ್ತಾರೆ. ಖಿನ್ನತೆಗೆ ಒಳಗಾಗುವಷ್ಟು ಒತ್ತಡವನ್ನು ಹೇರುತ್ತಲೇ ಇರುತ್ತಾರೆ. ಆದರೆ ಅದನ್ನೆಲ್ಲ ಮೀರಿ ನಾವು ಬದುಕಬೇಕು.

ಮೂಲತಃ ಮಹಿಳೆ ಅತ್ಯಂತ ಸೂಕ್ಷ್ಮ ಮನೋಭಾವದವಳು. ಜೀವನದಲ್ಲಿ ಗಟ್ಟಿಯಾಗುವ ಮಾರ್ಗದಲ್ಲಿ ಪ್ರಯತ್ನಪೂರ್ವಕವಾಗಿ ಒರಟುತನ ಬೆಳೆಸಿಕೊಂಡಿರುತ್ತಾಳೆ. ಆದರೆ ಅವಳೊಳಗಿನ ಕರುಣೆ, ಮೃದುತ್ವ ಎಂದಿಗೂ ಸಾಯುವುದಿಲ್ಲ. ತನ್ನ ವಿರೋಧಿಗಳನ್ನೂ ಇದೇ ದೃಷ್ಟಿಯಲ್ಲಿ ನೋಡುತ್ತಾಳೆ. ಕುತಂತ್ರ, ತಂತ್ರಗಾರಿಕೆ ಆಕೆಗೆ ತಿಳಿಯದು. ರಾಜಕೀಯ ಹೆಣೆಯಲು ಬಾರದು. ಆದರೆ ಆಕೆ ಸ್ವಾರ್ಥಿ. ಆ ಕಾರಣದಿಂದ ಮತ್ತು ತನ್ನ ಅಸ್ತಿತ್ವದ ಉಳಿವಿಗಾಗಿ ಕೆಲವೊಮ್ಮೆ ಬೇರೆ ರೀತಿ ನಡೆದುಕೊಳ್ಳಬಹುದು. ಆದರೆ ಸ್ವಾಮ್ಯ ಸಾಧಿಸುವ ಗುಣ ಮತ್ತು ಸ್ವಾರ್ಥ ಎರಡೂ ಕೆಲಸ ಮಾಡಲು ಬಿಡುವುದಿಲ್ಲ.
ಈಗ ಕುಟುಂಬಗಳಲ್ಲೂ ಅದೇ ವಾತಾವರಣ ಇದೆ. ಕುಟುಂಬದ ಸದಸ್ಯರು ಹೆಣ್ಣು ಮಕ್ಕಳ ಮೇಲೆ ಅಗಾಧವಾದ ನಂಬಿಕೆ ಇಡಬೇಕು. ಯಾರು ಏನೇ ಹೇಳಿದರೂ ನನ್ನ ಮಗಳು ಹಾಗಲ್ಲ ಎಂದು ಪ್ರತಿಪಾದಿಸಬೇಕು. ಹಾಗೆ ಆಗಲು ಬೇಕಾದ ನೈತಿಕತೆಯನ್ನು ಅವಳಲ್ಲಿ ತುಂಬುವ ಹೊಣೆಗಾರಿಕೆಯೂ ಕುಟುಂಬದ ಹಿರಿಯರದೇ ಆಗಿರುತ್ತದೆ. ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಈಗ ಆಗುತ್ತಿರುವ ಅನಾಹುತಗಳು ನಮ್ಮ ಕಣ್ಣ ಮುಂದಿವೆ.

* ಮಹಿಳೆ ಎಂಬ ಕಾರಣಕ್ಕೆ ರಾಜಕೀಯದಲ್ಲಿ ಗೌಣವಾಗಿ ಕಂಡದ್ದಿದೆಯೇ?
ಉಮಾಶ್ರೀ: ರಾಜಕೀಯದಲ್ಲಿ ಹೆಣ್ಣು ಮಕ್ಕಳೆಂಬ ವಿನಾಯಿತಿ ಇಲ್ಲ. ನಮಗೆ ಅಂತಹ ವಿನಾಯಿತಿಯೂ ಬೇಕಿಲ್ಲ. ಆದರೆ ಯಾವುದೇ ಕ್ಷೇತ್ರವಾದರೂ ಆರಂಭದಲ್ಲಿ ಹೆಚ್ಚು ಸವಾಲುಗಳು ಇದ್ದೇ ಇರುತ್ತವೆ. ಕೆಲಸ ನಮ್ಮ ಹಿಡಿತಕ್ಕೆ ಬರುತ್ತಿದ್ದಂತೆಯೇ ನಿರ್ವಹಣೆ ಸುಲಲಿತವಾಗುತ್ತದೆ.
ಜಯಶ್ರೀ: ಎಲ್ಲೋ ಒಂದು ಕಡೆ ಪುರುಷರ ಅಹಂಕಾರಕ್ಕೆ ಹೊಡೆತ ಬೀಳುತ್ತದೆ.  ಇವಳು ಹೆಣ್ಣು ಎನ್ನುವುದನ್ನು ಬಿಟ್ಟು ಅಧಿಕಾರದ ಹೊಣೆ ಅರಿತು ನಡೆದರೆ ಅಹಂ ತನ್ನಿಂತಾನೇ ದೂರಾಗುತ್ತದೆ.

* ಹೆಣ್ಣು ಮಗಳಾಗಿ ರಂಗಭೂಮಿ, ಸಿನಿಮಾ ಕ್ಷೇತ್ರವನ್ನು ಹೇಗೆ ನಿಭಾಯಿಸಿದಿರಿ?
ಉಮಾಶ್ರೀ: ನಾವು ರಂಗಭೂಮಿಯವರು ಜನರ ಮಧ್ಯೆ ದುಡಿಯುವವರು. ಸಂಘ ಜೀವಿಗಳು. ಆದರೆ ಸಿನಿಮಾ ಹಾಗಲ್ಲ. ನಾಲ್ಕು ಚೌಕಟ್ಟುಗಳ ಮಧ್ಯೆ ಇರಬೇಕು. ಹಾಗೆ ಇರದಿದ್ದರೆ ಇಮೇಜ್‌ ಹಾಳಾಗುತ್ತದೆ ಎಂಬ ಮನೋಭಾವ ಇತ್ತು. ಆದರೆ ನಾವು ಸಿನಿಮಾದಲ್ಲೂ ಹಾಗೆ ಬೆಳೆಯಲಿಲ್ಲ. ರಾತ್ರಿ ನಾಟಕ, ಬೆಳಿಗ್ಗೆ ಶೂಟಿಂಗ್‌ನಲ್ಲೇ ನನ್ನ ಯೌವನ ಕಳೆದುಹೋಯಿತು. ಆದರೆ ಆ ಬಗ್ಗೆ ಪಶ್ಚಾತ್ತಾಪವಿಲ್ಲ. ಕೆಲವರು ದಿಟ್ಟೆ ಎಂದರು, ಇನ್ನು ಕೆಲವರು ಕೆಟ್ಟವಳು ಎಂದರು. ನಾನು ಯಾವುದಕ್ಕೂ ಅಂಜಲಿಲ್ಲ, ಅಳುಕಲಿಲ್ಲ. ಕೊಂಚ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು. ದಾರಿ ತಪ್ಪಲು ಸಾಕಷ್ಟು ಅವಕಾಶಗಳಿದ್ದವು. ಹಾಗಾಗದಂತೆ ಬದುಕುವ ಸವಾಲು ನನ್ನ ಮುಂದಿತ್ತು.

17 ವರ್ಷಕ್ಕೇ ಸಾರ್ವಜನಿಕ ಬದುಕಿಗೆ ಬಂದ ನನಗೆ ಅವಾಚ್ಯ ಮಾತುಗಳೇ ನನ್ನನ್ನು ರಕ್ಷಿಸಿಕೊಳ್ಳುವ ಅಸ್ತ್ರಗಳಾಗಿದ್ದವು. ಹೊರ ಜಗತ್ತಿಗೆ ಬಂದಾಗಿನ ಆತಂಕ, ನಾನಿಲ್ಲಿ ಬಂದಿದ್ದು ಗೌರವದಿಂದ ಬದುಕಲು, ಮಕ್ಕಳನ್ನು ಸಲಹಲು, ಯಾವುದೇ ಕಾರಣಕ್ಕೂ ವೇಶ್ಯಾವೃತ್ತಿಗೆ ಹೋಗಬಾರದು, ಆತ್ಮಹತ್ಯೆ ಮಾಡಿಕೊಳ್ಳಬಾರದು, ದುಷ್ಟ ಚಟಗಳಿಗೆ ಬಲಿಯಾಗಬಾರದು ಎಂಬ ಸುಪ್ತ ಪ್ರಜ್ಞೆ ನನ್ನ ನಾಲಿಗೆಯ ಮೇಲೆ ಅವಾಚ್ಯ ಶಬ್ದಗಳ ರೂಪದಲ್ಲಿ ನನ್ನನ್ನು ಕಾಯಿತು.
ಕಳೆದುಕೊಂಡದ್ದಕ್ಕಿಂತಲೂ ಹೆಚ್ಚಿನದನ್ನು ಗಳಿಸಿಕೊಂಡಿದ್ದೇನೆ. 5 ರೂಪಾಯಿಯ ಸಣ್ಣ ಕೂಲಿಯಿಂದ ವಿಧಾನಸೌಧದಲ್ಲಿ ರಾಜ್ಯಭಾರ ಮಾಡುವವರ ಜೊತೆ ಕುಳಿತುಕೊಳ್ಳುವವರೆಗೆ ನನ್ನ ಬದುಕು ಬಂದು ನಿಂತಿದೆ. ಮಹಿಳೆ ಯಾವುದೋ ಒಂದಕ್ಕೇ ಸೀಮಿತವಾಗದೆ ಸಂಘಜೀವಿಯಾಗಿ ತೊಡಗಿಸಿಕೊಂಡು ಜ್ಞಾನ ವರ್ಧಿಸಿಕೊಳ್ಳಬೇಕು. ಸಮಾಜದ ಜೊತೆ ಸೇರಿಕೊಳ್ಳಬೇಕು. ನಮ್ಮ ಚಿಂತೆಗಳನ್ನು ಬಿಟ್ಟು ಮುಂದೆ ಸಾಗಿದರೆ ವಿಶಾಲವಾದ ಜಗತ್ತು ನಮಗಾಗಿ ಕಾಯುತ್ತಿರುತ್ತದೆ.

* ಸಿನಿಮಾ ನಟಿಯಾಗಿ ಜನರಿಂದ ನಿಮಗಾದ ಅನುಭವ ಹೇಳಿ.
ಜಯಶ್ರೀ: ಕಲಾವಿದರಿಗೆ ವೈಯಕ್ತಿಕ ಬದುಕು ಬಹಳ ಕಷ್ಟವಾಗುತ್ತಿದೆ.  ಮದುವೆ ಮನೆಯ ಲ್ಲಿ ಆತ್ಮೀಯರೊಬ್ಬರ ಜೊತೆ ಮಾತನಾಡುತ್ತಾ ಕುಳಿತಿದ್ದೆ. ವ್ಯಕ್ತಿಯೊಬ್ಬ ಏಕಾಏಕಿ ಪಕ್ಕ ಬಂದು ಕುಳಿತು ಹೆಗಲ ಮೇಲೆ ಕೈ ಹಾಕಿ ‘ಏ ಒಂದು ಫೋಟೊ ತೆಗೀರ್ರೊ’ ಅಂದ. ರೇಗಿಹೋಯಿತು. ‘ಏ ಕೈ ತೆಗಿ, ಡೋಂಟ್‌ ಟಚ್‌ ಮಿ’ ಎಂದು ಕೂಗಾಡಿಬಿಟ್ಟೆ. ಯಾಕ್ಹೀಗೆ ಮಾಡಿದೆ ಅನ್ನಿಸಿತು. ಆದರೂ ಮನಸ್ಸು ನೀನು ಮಾಡಿದ್ದೇ ಸರಿ ಎಂದಿತು. ನಾವೇನೂ ಮೃಗಾಲಯದಲ್ಲಿರುವ ಕೋತಿಗಳಲ್ಲ. ಈಚೀಚೆಗೆ ಸ್ಮಾರ್ಟ್‌ ಫೋನ್‌ ಬಂದ ಮೇಲಂತೂ ಸೆಲ್ಫಿಗಳ ಕಾಟ ಹೆಚ್ಚಾಗಿದೆ.
ಉಮಾಶ್ರೀ: ನಾವೂ ಮನುಷ್ಯರೇ. ನಮಗೂ ಖಾಸಗಿ ಬದುಕಿದೆ. ನಮ್ಮನ್ನು ಬದುಕಲು, ನಮ್ಮಂತೆ ಇರಲು ಬಿಡಬೇಕು. ಅಂಬರೀಷ್‌, ಜಯಮಾಲಾ ಅಂತಹವರೊಡನೆ ಎಲ್ಲೋ ಏನೋ ಆತ್ಮೀಯವಾಗಿ ಮಾತನಾಡುತ್ತಾ ನಿಂತಿರುತ್ತೇವೆ. ಬಂದು ವಿಡಿಯೊ, ಫೋಟೊ ತೆಗೆಯಲು ಶುರು ಮಾಡುತ್ತಾರೆ. ಆಗೆಲ್ಲ ಕಸಿವಿಸಿ ಮುಜುಗರ, ಸಹಿಸಲಸಾಧ್ಯವಾದ ಹಿಂಸೆಯಾಗುತ್ತದೆ.

* ಹೆಣ್ಣಾಗಿ ಹುಟ್ಟಿದ್ದು ಒಳ್ಳೆಯದು ಎನಿಸುತ್ತದೆಯೇ?
ಉಮಾಶ್ರೀ: ಮತ್ತೊಮ್ಮೆ ಹುಟ್ಟಿದರೂ ಹೆಣ್ಣಾಗೇ ಹುಟ್ಟಬೇಕು ನಾನು.
ಜಯಶ್ರೀ: ನನಗೂ ಅಷ್ಟೆ. ನೆಮ್ಮದಿಯಾಗಿ ಉಣ್ಣಲೂ ಬಿಡುವುದಿಲ್ಲ. ಅಲ್ಲೂ ಕ್ಯಾಮೆರಾ ಕಣ್ಣುಗಳಿರುತ್ತವೆ. ಆದರೂ ಜನರಿಂದ ನಾವು ಅನ್ನ ತಿನ್ನುತ್ತಿದ್ದೇವೆ ಎನ್ನುವ ಕಾರಣಕ್ಕಾಗಿ ಅದನ್ನೆಲ್ಲ ಸ್ವಲ್ಪ ಮಟ್ಟಿಗೆ ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ.

* ಸಿನಿಮಾ ನಟಿಯರನ್ನು ಜನ ನೋಡುವ ದೃಷ್ಟಿ ಬದಲಾಗಿದೆಯೇ?
ಉಮಾಶ್ರೀ: ಸಿನಿಮಾ ನಟಿಯರು ಅಭಿಮಾನದಿಂದ, ಗೌರವದಿಂದ ಬದುಕಲು ಜನ ಅವಕಾಶ ಮಾಡಿಕೊಡಬೇಕು. ನಾವು ನಟಿಯರು ಎಂಬ ಸಲುಗೆಯಿಂದ ಕೆಟ್ಟ ದೃಷ್ಟಿಯಲ್ಲಿ ನೋಡಿದರೆ ಸಹಿಸಲಾಗದು. 20– 30 ವರ್ಷದೊಳಗಿನವರು ನಮ್ಮ ಜೊತೆ ಫೋಟೊ ತೆಗೆಸಿಕೊಳ್ಳಲು ಬಯಸಿದರೆ ಅವರನ್ನು ಮಕ್ಕಳಂತೆ ಬಗೆದು ‘ಬಾರಪ್ಪ ತೆಗೆಸಿಕೊಳ್ಳೋಣ’ ಎಂದು ನಾವೇ ಅವರ ಹೆಗಲ ಮೇಲೆ ಕೈಯಿಟ್ಟು ತೆಗೆಸಿಕೊಳ್ಳುವುದು ಬೇರೆ. ದೊಡ್ಡವರು ನಟಿಯರನ್ನು ಕೆಟ್ಟ ದೃಷ್ಟಿಯಿಂದ ನೋಡುವುದೇ ಬೇರೆ. ನಮಗೇ ಹೀಗಾದರೆ ಇನ್ನು ಸಣ್ಣ ಕಲಾವಿದೆಯರ ಪಾಡೇನು? ಬೈಯುವ ಹಾಗಿಲ್ಲ, ಬೈಯದೇ ಇರುವಂತಿಲ್ಲ ಎಂಬ ಸ್ಥಿತಿ ಅವರದು.

* ಕೆಟ್ಟ ಅನುಭವಗಳಾದಾಗ ಸಮಾಜ ನಿಮ್ಮ ಕೈಹಿಡಿದಿದೆಯೇ?
ಉಮಾಶ್ರೀ: ಖಂಡಿತಾ ಸಮಾಜ ನಮ್ಮ ನೆರವಿಗೆ ಬಂದಿದೆ. ಹಿಂದೆ ನನ್ನನ್ನು ಸೆಕ್ಸ್‌ ಬಾಂಬ್‌ ಎಂದು ಕರೆಯುತ್ತಿದ್ದರು. ಒಮ್ಮೆ ಕಂಪನಿ ನಾಟಕಕ್ಕಾಗಿ ಕಾರಿನಿಂದ ಇಳಿದರೆ  ನನಗೇ ಒಂದು ಬಾಂಬ್‌ ಕಾದಿತ್ತು. ಯಾರೋ ಒಬ್ಬ ಮೆಲ್ಲಗೆ ಸೊಂಟಕ್ಕೆ ಕೈ ಹಾಕಿದ. ರಪ್‌ ಎಂದು ಬಾರಿಸಿದೆ. ಅವನು ಆ ಊರಿನ ರೌಡಿ ಅಂತೆ. ಅವನಿಗೆ ಭಾರಿ ಅವಮಾನವಾಯಿತು. ಅವನ ಗುಂಪಿನವರು ಬಡಿಗೆ ಹಿಡಿದು ಬಂದರು. ನಮ್ಮ ಕಂಪನಿ ಕಲಾವಿದರೂ ವೇದಿಕೆ ಕಟ್ಟಲು ಬಳಸಿದ್ದ ರಿಪೀಸ್‌, ಬೊಂಬು ಎಳೆದುಕೊಂಡು ನಿಂತರು. ಪುಣ್ಯಕ್ಕೆ  ಜಗಳ ಆಗಲಿಲ್ಲ, ಪೊಲೀಸಿನವರಿಗೆ ತಿಳಿಸಿದ್ದೆವು. ನಂತರ ರಾಜಿಯಾಯಿತು.
ಹಾಗೇ ಮತ್ತೊಮ್ಮೆ ಊರೊಂದರಲ್ಲಿ ಹುಡುಗನೊಬ್ಬ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ. ಮುಂದಿನ ದೃಶ್ಯಕ್ಕೆ ಬಣ್ಣ ಹಚ್ಚದೆ ಹಟ ಹಿಡಿದು ಕುಳಿತೆ. ನಾವು ಕಲಾವಿದರು ಹೊಟ್ಟೆಪಾಡಿಗಾಗಿ ಬಣ್ಣ ಹಚ್ಚುತ್ತೇವೆ, ಹಾಗೆಂದು ಮರ್ಯಾದೆಗೆಟ್ಟವರಲ್ಲ, ಸೂಳೆಗಾರಿಕೆ ಮಾಡುವವರಲ್ಲ ಎಂಬ ನನ್ನ ಮಾತಿಗೆ ಊರವರೇ ಬೆಂಬಲವಾಗಿ ನಿಂತರು. ಅವನ ಕೈಯಲ್ಲಿ ಎಲೆ ಅಡಿಕೆ ಕೊಡಿಸಿ ನನ್ನ ಕಾಲಿಗೆ ಬೀಳಿಸಿ ಕ್ಷಮೆ ಯಾಚಿಸುವಂತೆ ಮಾಡಿದರು. ಹೀಗೆ ಜನ ನಮ್ಮ ರಕ್ಷಣೆಗೆ ಬಂದೇ ಬರುತ್ತಾರೆ. ಆದರೆ ನಮ್ಮಲ್ಲಿ ತಪ್ಪಿರಬಾರದು.

* ಆತ್ಮಕತೆ ಬರೆಯುವ ಇರಾದೆ ಇದೆಯೇ?
ಉಮಾಶ್ರೀ: ನಾನು ಈಗಾಗಲೇ ಬರೆದಿರುವುದು ಆತ್ಮಕತೆ ಎಂಬ ತಪ್ಪುಕಲ್ಪನೆ ಹಲವರಲ್ಲಿದೆ. ಅದು ಹಲವು ಘಟನೆಗಳ ಕಟ್ಟು ಅಷ್ಟೆ. ನಾನು ಆತ್ಮಕತೆ ಬರೆದರೆ ತುಂಬಾ ಜನರ ಬದುಕು ಬಯಲಾಗುತ್ತದೆ. ಅವರಲ್ಲಿ ಎಷ್ಟೋ ಮಂದಿ ಈಗ ಇಲ್ಲ. ಇರುವವರೂ ನಮಗಿಂತ ಹಿಂದೆ ಉಳಿದಿದ್ದಾರೆ. ಅವರಿಗೆ ಇನ್ನೊಂದು ಜಗತ್ತಿದೆ. ಅವರನ್ನು ಕೆಟ್ಟವರನ್ನಾಗಿ ತೋರಿಸುವ ಅವಶ್ಯಕತೆ ಏನಿದೆ? ಉಪಯೋಗಕ್ಕೆ ಬಾರದ ವ್ಯಕ್ತಿಗಳು, ಸಂಗತಿಗಳನ್ನು ಓದಿ ಇತರರು ತಾನೇ ಏನನ್ನು ಕಲಿಯಲು ಸಾಧ್ಯ?. ಹಾಗೆ ಆತ್ಮಕತೆಯ ಮೂಲಕ ಬೇರೆಯವರ ಬದುಕನ್ನು ಹರಾಜು ಹಾಕುವ ಅಗತ್ಯ ಇಲ್ಲ. ಅದನ್ನೆಲ್ಲ ಎದುರಿಸಿ ಹೊರಬಂದಿದ್ದೇವೆ. ಆ ತರದ ವ್ಯಕ್ತಿಗಳು, ಘಟನೆಗಳು ನಮಗೆ ಪಾಠ ಕಲಿಸದಿದ್ದರೆ ಇವತ್ತಿಗೆ ನಾವಿಷ್ಟು ಬೆಳೆಯುತ್ತಿರಲಿಲ್ಲ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ.

* ರಂಗದ ಮೇಲೆ ಮರೆಯಲಾಗದ ಕ್ಷಣಗಳು
ಜಯಶ್ರೀ: ನಾನು ‘ತಾಯಿ’ ನಾಟಕದಲ್ಲಿ ಪಾತ್ರ ಮಾಡುವಾಗ ಅದರಲ್ಲಿ ಒಂದು ಸೀನ್ ಇದೆ. ತಾಯಿ ಪಾಂಪ್ಲೆಟ್ಟುಗಳನ್ನು ಒಂದು ಕಟ್ಟು ಮಾಡಿ ಮೇಲಕ್ಕೆ ರಪ್ ಅಂತ  ಮೇಲಕ್ಕೆ ಎಸೆಯಬೇಕು. ಅವು ಬಿಚ್ಚಿಕೊಂಡು ಪುಳು ಪುಳೂ ಪುಳು ಅಂತ ರಂಗದ ಮೇಲೆ ಹರಡಬೇಕು. ನಾನು ಮೇಲಕ್ಕೇನೋ ಎಸೆದೆ. ಆ ಕಟ್ಟು ಪೂರ್ತಿ ಮೇಲಕ್ಕೆ ಹೋಯಿತು ಅಂತ ಕಾಣ್ಸುತ್ತೆ. ಪಾಂಪ್ಲೆಟ್ಟುಗಳು ಓಪನ್ ಆಗಲೇ ಇಲ್ಲ. ಅಯ್ಯೋ, ಆ ಕ್ಷಣದಲ್ಲಿ ನಾನು ‘ತಾಯಿ’ಯಿಂದ ಜಯಶ್ರೀ ಆಗಿಬಿಟ್ಟೆ! ಈ ಸೀನ್ ಮುಗಿದ ತಕ್ಷಣ ಇಂಟರ್ವೆಲ್ಲು! ಅಕಸ್ಮಾತ್ ಇದೇನಾದ್ರೂ ತೋಪಾದ್ರೆ ಆಮೇಲೆ ಅವಸ್ಥೆ ಆಗಿಬಿಡುತ್ತೆ ಅಂತ ಹಾಗೇ ಮೇಲೆ ನೋಡ್ತಾ ನಿಂತೆ. ಪಳಕ್, ಪಳಕ್, ಪಳಕ್ ಅಂತ ಒಂದೊಂದೇ ಬೀಳಲು ಶುರು ಮಾಡಿದವು. ಆಮೇಲೆ ಪಾಂಪ್ಲೆಟ್ಟಿನ ಮಳೆಯೇ ಆಯಿತು. ಪ್ರಸನ್ನ ನಿರ್ದೇಸಿಶಿದ ನಾಟಕ ಅದು. ನನಗೆ ರಂಗಭೂಮಿಯಲ್ಲಿ ಮರು ಜೀವ ಕೊಟ್ಟ ನಾಟಕ. ಆ ಕ್ಷಣಗಳನ್ನು ಎಂದೂ ಮರೆಯಲಾರೆ.

ತಾಯಿ ಕ್ಯಾರೆಕ್ಟರ್ ಮಾಡುವಾಗ ಕೆಲವು ಜೆಸ್ಚರ್ಸ್ (ಭಂಗಿಗಳು) ಅನ್ನು ಸಿ ಆರ್ ಸಿಂಹರಿಂದ ಎರವಲು ಪಡೆದೆ. ಅವರ ‘ತುಘಲಕ್’ನ ’ಆಸೆಗಳ ವಯಸ್ಸು...’ ಎನ್ನುವ ಡೈಲಾಗ್ ಹೇಳುವಾಗ ಕೈ ಉಪಯೋಗಿಸುವ ಬಗೆ ನನಗೆ ಬಹಳ ಮೆಚ್ಚಿಗೆಯಾಗಿತ್ತು. ಅದನ್ನ ‘ತಾಯಿ’ಗೆ ಅಳವಡಿಸಿದೆ. ಮತ್ತೆ ನನಗೆ ಎನ್ ಎಸ್ ಡಿ (ರಾಷ್ಟ್ಟ್ರೀಯ ನಾಟಕ ಶಾಲೆ) ಯ ಡೈರೆಕ್ಟರ್ ಆಗಿದ್ದು ನನ್ನ ಮೇಷ್ಟ್ರೂ ಆಗಿದ್ದ ಇಬ್ರಾಹಿಂ ಅಲ್ಕಾಜಿ ಅವರಿಂದ ಪಡೆದೆ. ಹೀಗೆ ಹತ್ತು ಹಲವು ಜನ ಸೇರಿ ನನ್ನ ‘ತಾಯಿ’ ರಂಗದ ಮೇಲೆ ಬಂದಿದ್ದಳು!

ಈಗಲೂ ರಂಗಭೂಮಿ ನನಗೆ ಹೊಸ ಅನುಭವಗಳನ್ನು ಕಟ್ಟಿಕೊಡುತ್ತದೆ. ನಾನು ಉಸಿರಾಡುವುದೇ ರಂಗಭೂಮಿಯ ಅಸ್ತಿತ್ವವನ್ನು. ನನ್ನ ಮಟ್ಟಿಗೆ ಸುಖದ ಸಾವು ಅಂದರೆ ರಂಗಭೂಮಿಯ ಮೇಲೆ ಪ್ರದರ್ಶನ ನೀಡುತ್ತಿರುವಾಗಲೇ ಪ್ರಾಣ ಹೋಗಿಬಿಡಬೇಕು! ಹಾಗಾಗಲಪ್ಪಾ ದೇವರೇ!

ಉಮಾಶ್ರೀ: ‘ಸಾಕವ್ವ’ ಹಾಗೇ ಜೀವ ತಳೆಯಲಿಲ್ಲ. ಮೊದಲಿಗೆ ಆ ಪಾತ್ರ ಇನ್ನೊಬ್ಬರಿಗೆ ಅಂತ ನಿರ್ಧಾರವಾಗಿತ್ತು. ನಾವು ರಂಗಭೂಮಿಯ ಶಿಸ್ತಿನವರಲ್ಲವೇ? ರಿಹರ್ಸಲ್ ಇದ್ದಾಗ ಪಾತ್ರ ಇರಲಿ ಬಿಡಲಿ, ನಮ್ಮ ತಂಡ ನಾಟಕ ಅಭ್ಯಾಸ ಮಾಡುತ್ತಿದ್ದರೆ ನಾವು ಅಲ್ಲಿ ಇದ್ದೇ ಇರುತ್ತಿದ್ದೆವು. ಅದ್ಯಾವ ಕಾರಣಕ್ಕೋ ಇನ್ನೊಬ್ಬ ಕಲಾವಿದೆ ಅಭಿನಯಿಸಲು ಸಾಧ್ಯವಿಲ್ಲ ಅಂತ ಹೇಳಿದರು. ಅಷ್ಟು ಹೊತ್ತಿಗೆ ನಾನು ಕ್ಯಾರೆಕ್ಟರನ್ನು ಗ್ರಹಿಸಿದ್ದೆ. ನನ್ನ ಮುಂದೆ ಕ್ಯಾರೆಕ್ಟರು ಬಂದಾಗ ಮರುಮಾತಿಲ್ಲದೆ ಬಹಳ ಖುಷಿಯಿಂದ ಮಾಡಿದೆ. ಜನರೂ ಅಷ್ಟೇ ಮೆಚ್ಚಿಕೊಂಡರು! ಸಾಕವ್ವ ನನ್ನ ರಂಗ ಪಯಣದ ಮುಖ್ಯ ಆಧ್ಯಾಯವಾದಳು. ಆಕೆಯನ್ನು ರಂಗದ ಮೇಲೆ ತರುವಾಗ ಅನುಭವಿಸಿದ ಪುಳಕ ಅಷ್ಟಿಷ್ಟಲ್ಲ. ಆ ಪಾತ್ರದ ಗಟ್ಟಿತನವನ್ನು ನನ್ನ ಅತ್ತೆಯಿಂದ ಪಡೆದೆ.

ಮತ್ತೆ ನನ್ನ ಮನೆಯ ಹತ್ತಿರ ಸಾಕವ್ವನ ವಯಸ್ಸಿನ ಇನ್ನೊಬ್ಬ ಅಜ್ಜಿ ಇದ್ದರು. ಅವರಿಂದಲೂ ಸಾಕಷ್ಟು ಪ್ರಭಾವಿತಳಾದೆ. ಮುಂದೆ ನನ್ನ ಮಾತುಗಳನ್ನು, ಅಭಿನಯವನ್ನು ಮತ್ತು ಒಟ್ಟಾರೆ ಆ ಪಾತ್ರದ ವಿಸ್ತಾರವನ್ನು ನನ್ನ ನಿರ್ದೇಶಕರಾದ ಸಿ ಜಿ ಕೆ ಕಟ್ಟಿಕೊಟ್ಟರು. ಆಗಿನ ಸಮಯದಲ್ಲಿ ಯಾರ ಹತ್ತಿರವೂ ದುಡ್ಡಿರುತ್ತಿರಲಿಲ್ಲ. ಎಲ್ಲರೂ ಅನುಭವಕ್ಕೆ ಹಸಿದಿದ್ದರು. ಎಲ್ಲರೂ ಒಬ್ಬರ ಬೆಂಬಲಕ್ಕೆ ಒಬ್ಬರು ಬರುತ್ತಿದ್ದರು. ಈವತ್ತು ತಂತ್ರಜ್ಞಾನ ಇದೆ. ಅದು ಮನುಷ್ಯ ಸಂಬಂಧಗಳನ್ನು ಬಹಳ ಪ್ರಭಾವಿಸುತ್ತಿದೆ. ರಂಗಭೂಮಿಗೂ ಇದರ ಬಿಸಿ ತಟ್ಟಿದೆ. ನಾಟಕ ಅಂದ್ರೆ ಹೊಸಬರಿಗೆ ಶ್ರದ್ಧೆಗಿಂತ ಸಿನಿಮಾಕ್ಕೆ, ಸೀರಿಯಲ್ಲಿಗೆ ಅವಕಾಶ ಕಲ್ಪಿಸುವ ಜಾಗ ಅನ್ನುವ ಹಾಗಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT