ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕದಾಸರ ತಾತ್ವಿಕತೆಯ ಅನುಸಂಧಾನ: ಹೊಸ ಓದು

Last Updated 30 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಮಧ್ಯಯುಗೀನ ಎಂದು ಸ್ಥೂಲವಾಗಿ ಕರೆಯಲ್ಪಡುವ ಕ್ರಿ.ಶ. ಎರಡನೆಯ ಶತಮಾನದಿಂದ ಹಿಡಿದು ಸುಮಾರು ೧೫ನೇ ಶತಮಾನದವರೆಗಿನ ಕಾಲಮಾನ ಅಖಿಲ ಭಾರತದ ಕ್ಯಾನ್ವಾಸಿನಲ್ಲಿ ಅತ್ಯಂತ ತಲ್ಲಣದ ಕಾಲ.  ರಾಜಕೀಯ, ಧಾರ್ಮಿಕ, ತಾತ್ವಿಕ ಸಂಘರ್ಷಗಳು ತೀವ್ರವಾಗಿ ನಡೆದ ಕಾಲ. ಈ ಕಾಲಮಾನದ ಸಮಾಜೋ ಧಾರ್ಮಿಕ ಚರಿತ್ರೆಯನ್ನು, ಜೀವನ ಮೀಮಾಂಸೆ -– ಕಾವ್ಯ ಮೀಮಾಂಸೆಯನ್ನು, ತಾತ್ವಿಕ ಸಂಘರ್ಷವನ್ನು ನೋಡುವ, ಓದುವ ಅನೇಕ ಕ್ರಮಗಳಿವೆ.

  ಕೃತಿಯ ರಚನೆ ಹೇಗೆ ಒಂದು ಸಾಂಸ್ಕೃತಿಕ ರಾಜಕಾರಣವೋ ಅದನ್ನು ‘ಓದುವುದು’ ಕೂಡ ಒಂದು ಸಾಂಸ್ಕೃತಿಕ ರಾಜಕಾರಣ.  ಸಮಾಜಕ್ಕೆ ಯಾವುದನ್ನು ಓದಿಸಬೇಕು, ಹೇಗೆ ಓದಿಸಬೇಕು, ಯಾವುದನ್ನು ಓದಿಸಬಾರದು, ಯಾವುದನ್ನು ಓದಲು ಸಿಗದಂತೆ ನೋಡಿಕೊಳ್ಳಬೇಕು ಇತ್ಯಾದಿ ಸಂಗತಿಗಳು ಗಂಭೀರ ರಾಜಕಾರಣದ ಭಾಗವೇ ಆಗಿವೆ. 

ಇದು ಅಧಿಕಾರ ಕೇಂದ್ರಗಳನ್ನು ಮತ್ತು ಸಮೂಹವನ್ನು ನಿಯಂತ್ರಿಸುವ ಪರೋಕ್ಷ ರಾಜಕಾರಣವಾಗಿರುವುದರಿಂದ ಇದನ್ನು ಹಿತಾಸಕ್ತ ಗುಂಪುಗಳು ಗಂಭೀರವಾಗಿ ನಿರ್ವಹಿಸುತ್ತವೆ. ಈವರೆಗೆ ನಡೆಸಿರುವ ಕ್ರಮದ ಬಗೆಗೆ ನನಗೆ ಕುತೂಹಲವಿದೆ.  ಯಾವ ಓದಿನ ಮೂಲಕ ಕನಕ ಇಂದು ನಮ್ಮ ಮುಂದೆ ಇದ್ದಾನೆಯೋ ಆ ಓದು ಕನಕನನ್ನು ಬೇರೆ ಓದುಗಳಿಂದ ದೂರ ಇರಿಸಿದೆ.

ಸಾಮಾನ್ಯವಾಗಿ ಉತ್ತರದ ಮೂಲಕವೇ ಭಾರತದ ಸಾಂಸ್ಕೃತಿಕ ಚರಿತ್ರೆಯನ್ನು, ರಾಜಕೀಯ ಚರಿತ್ರೆಯನ್ನು, ಕಾವ್ಯ ಮೀಮಾಂಸೆಯನ್ನು, ಕಾವ್ಯ ಮಾರ್ಗವನ್ನು ನೋಡಿ, ದಕ್ಷಿಣವನ್ನು ಒಂದು ಅನುಬಂಧವಾಗಿ ನೋಡುವ ಕ್ರಮವೇ ದೀರ್ಘಕಾಲದಿಂದ ಚಾಲ್ತಿಯಲ್ಲಿದೆ. 

ರಾಮಾಯಣ ಮಹಾ ಭಾರತಗಳು, ವೈಷ್ಣವ ಭಕ್ತಿಪಂಥ, ದಶಾವ ತಾರಗಳು ಮತ್ತು ಆ ಸಂಬಂಧೀ ಕಾವ್ಯ ರಚನೆಗಳು ಹಾಗೂ ಇಡಿಯಾಗಿ ಭಾರತೀಯ ಕಾವ್ಯಮೀಮಾಂಸೆಯೇ ಉತ್ತರದ ಮೂಲಕ ಭಾರತವನ್ನು ಕಟ್ಟಿಕೊಡುವ ಮತ್ತು ತನ್ಮೂಲಕ ದಕ್ಷಿಣವನ್ನು ಅದರ ‘ಪರಿಶಿಷ್ಟ’ವನ್ನಾಗಿಸುವ ಪ್ರಯತ್ನವಾಗಿದೆ. ಇದು ಕೇವಲ ನಮ್ಮ ಭಾಷೆಯ, ನಮ್ಮ ನೆಲದ ಮೇಲಿನ ಅಭಿಮಾನದ ನಿಲುವಲ್ಲ. ಬದಲಿಗೆ ಅಂತಹ ಒತ್ತಾಯಗಳು ಸ್ಥಳೀಯ ಪ್ರಸ್ಥಾನಗಳು ನೀಡಿದ ತಾತ್ವಿಕತೆಯೊಳಗಿಂದಲೇ ಮೂಡಿವೆ.

ಹಾಗೆಯೇ, ಭಾರತದ ದಾರ್ಶನಿಕ ಚರಿತ್ರೆಯನ್ನು ದ್ವೈತಾದ್ವೈತಗಳ ಮೂಲಕ ಮಾತ್ರವೇ ದಾಖಲಿಸಿ ಅವುಗಳ ಮೂಲಕ ಮಾತ್ರ ನೋಡಲು ಒತ್ತಾಯಿಸುವ ಓದುಗಳು ಕೂಡಾ ಚಾಲ್ತಿಯಲ್ಲಿವೆ.  ಇಲ್ಲೆಲ್ಲ ನಿರಾಕರಣೆ ಗೊಳ್ಳುವ ಅಥವಾ ನಿರ್ಲಕ್ಷ್ಯಕ್ಕೀಡಾಗುವ ‘ಬಹುತ್ವ’ ದೃಷ್ಟಿಕೋನವು ಮಾತ್ರ ನಿಜವಾದ ಭಾರತವನ್ನು ಕಾಣಿಸಿಕೊಡಬಲ್ಲದು.  ಈಗ ನಮ್ಮ ಮುಂದಿರುವ ಸಮಸ್ಯೆಯೆಂದರೆ ನಮ್ಮ ಚರಿತ್ರೆಯನ್ನು ಇಂತಹ ಬಹುತ್ವದ ಮೂಲಕ ಕಟ್ಟಿಕೊಳ್ಳಬೇಕಾಗಿರುವುದು.

  ದ್ವೈತಾದ್ವೈತ ವನ್ನು ನಿರಾಕರಿಸುವ ದೃಷ್ಟಿಕೋನಗಳನ್ನು, ಅಧಿಕಾರ ಕೇಂದ್ರಗಳಿಗೆ ಮಣಿಯದ, ಅವುಗಳ ಪರವಾದ ಅಧಿಕಾರ ನಿರ್ವಚನಕ್ಕೆ ಒದಗಿ ಬಾರದ ತಾತ್ವಿಕತೆಗಳನ್ನು ನಿರಂತರವಾಗಿ ಹೊರಗೆ ನಿಲ್ಲಿಸುವ ಪ್ರವೃತ್ತಿಯು ಭಾರತೀಯ ಸಾಂಸ್ಕೃತಿಕ ರಾಜಕಾರಣದಲ್ಲಿ ಚಾಲ್ತಿಯಲ್ಲಿದೆ.  ಹೀಗೆ ಹೊರಗೆ ನಿಲ್ಲಿಸುವ ನಿಲುವು ಕನಕನನ್ನು ವ್ಯಾಖ್ಯಾನಿಸಿಕೊಟ್ಟಿರುವುದರಿಂದ ಈ ಪೀಠಿಕೆ ಅಗತ್ಯವೆನ್ನಿಸಿದೆ. 

ಮಧ್ಯಯುಗೀನ ಭಾರತದ ನಿಜವಾದ ನಾಡಿಮಿಡಿತವನ್ನು ಆಲಿಸಬೇಕಾದರೆ ನಾವು ಶ್ರಮಣಧಾರೆಗಳಲ್ಲಿಗೇ ಹೋಗಬೇಕು.  ಸ್ಥೂಲ ವಾಗಿ ಬೌದ್ಧ, ಜೈನ, ಸಿದ್ಧ, ನಾಥ, ಶರಣ, ಸೂಫಿ, ಕಾಪಾಲಿಕ, ಆಜೀವಿಕ,  ತತ್ತ್ವಪದ ಕಾರರು ಮತ್ತು ಶಾಕ್ತ ಪಂಥಗಳನ್ನು ಶ್ರಮಣಧಾರೆಗಳೆಂದು ಸೂಚಿಸುತ್ತಾರೆ. ಇವುಗಳಲ್ಲಿ ಒಂದೆರಡು ಧಾರೆಗಳನ್ನು ಬಿಟ್ಟರೆ ಉಳಿದವು ಅಖಿಲ ಭಾರತೀಯ ವ್ಯಾಪ್ತಿ ಉಳ್ಳವು. ಕೆಲವು ಅರ್ಧ ವಿಶ್ವವನ್ನೇ ವ್ಯಾಪಿಸಿದಂಥವು.

  ಇವುಗಳು ರೂಪುಗೊಳ್ಳು ವಲ್ಲಿ ಕರ್ನಾಟಕದ ದೊಡ್ಡ ಪಾಲಿದೆ. ಭಾರತದ ತಾತ್ವಿಕ ನಕಾಶೆಯೊಂದನ್ನು ಬಿಡಿಸಿದರೆ ಅದರಲ್ಲಿ ಕರ್ನಾಟಕ ಆಯಕಟ್ಟಿನ ಭಾಗ. ಅಖಿಲ ಭಾರತೀಯ ದರ್ಶನಗಳಲ್ಲಿ ಹಲವು ಕರ್ನಾಟಕದ ಕೊಡುಗೆ.  ಮಂಗಳೂರಿನ ಕರಾವಳಿಯ  ನೆಲದಿಂದ ಇಡೀ ಭಾರತ ಮತ್ತು ಅದರಾಚೆಗೂ ವ್ಯಾಪಿಸಿರುವ ನಾಥಪಂಥವು ಈ ನೆಲದ ಕೊಡುಗೆ.  ಇಂದಿಗೂ ಭಾರತದ ಬಹಳ ದೊಡ್ಡ ಪಂಥ, ದರ್ಶನವೆಂದರೆ ನಾಥ ಪಂಥವೇ.  ಧರ್ಮಸ್ಥಳದ ಮಂಜುನಾಥನಿಂದ ಹಿಡಿದು ಕಾಶಿವಿಶ್ವನಾಥ, ನೇಪಾಳದ ಪಶುಪತಿನಾಥನವರೆಗೆ ಅದರ ವ್ಯಾಪ್ತಿ ಇದೆ. ಬೌದ್ಧ ಮಹಾಯಾನ ಪ್ರವರ್ತಿತವಾದದ್ದು ಕರ್ನಾಟಕದ ನಾಗಾರ್ಜುನನಿಂದ.

  ಭಾರತೀಯ ಬದುಕಿನ ಮುಖ್ಯ ಚಹರೆಗಳು ಇಲ್ಲಿ ಕಾಣಬರುತ್ತವೆ. ಭಾರತದ ಮೂಲ ನಿವಾಸಿಗಳ ಸ್ವತಂತ್ರ ಚಹರೆಗಳಲ್ಲಿ ಮುಖ್ಯ ವಾದುವುಗಳೆಂದರೆ, ಜಲಸಂಸ್ಕೃತಿ, ನಾಗಸಂಸ್ಕೃತಿ, ಮಾತೃಸಂಸ್ಕೃತಿ, ಶಿವಸಂಸ್ಕೃತಿ, ದಕ್ಷಿಣಾಚರಣೆ ಮುಂತಾದುವು. ಹೊರಗಿನಿಂದ ಬಂದ ಆರ್ಯ ಸಂಸ್ಕೃತಿಯು  ಗುರಿಯಿಟ್ಟು ಈ ನೆಲದ ಸಾಂಸ್ಕೃತಿಕ ಚಹರೆಗಳನ್ನು ವ್ಯವಸ್ಥಿತವಾಗಿ ನಾಶ ಮಾಡುತ್ತಲೇ ಇದೆ.

ಗಂಗೆಯ  ಸಾಕ್ಷಿಯಲ್ಲಿ ನಡೆಯುತ್ತಿದ್ದ ಎಲ್ಲ ಧಾರ್ಮಿಕ ಸಾಂಸ್ಕೃತಿಕ ಆಚರಣೆಗಳನ್ನು ಯಜ್ಞ ಹೋಮಗಳ ಅಗ್ನಿ ಸಂಸ್ಕೃತಿಯ ಆಚರಣೆಗಳಾಗಿಸಿ, ವೈಷ್ಣವ ಶಕ್ತಿಯ ಕೈಲಿ ನಾಗಮರ್ದನ ಮಾಡಿಸಿ, ಎಲ್ಲರ ಅಮ್ಮನ ತಲೆ ತೆಗೆಸಿ, ಎಲ್ಲ ದಶಾವತಾರಗಳಲ್ಲೂ ಶಿವಭಕ್ತರನ್ನು ನಾಶಮಾಡಿ, ದಕ್ಷಿಣವನ್ನು ಕೀಳಾಗಿಸಿ, ಉತ್ತರದ ಪಾರಮ್ಯವನ್ನು ಮೆರೆಸಲು ಈಗಲೂ ಊರೂರಲ್ಲೂ ಕಟ್ಟುತ್ತಿರುವ ದೇವಸ್ಥಾನಗಳು  ಬಹುಪಾಲು ವೈಷ್ಣವ ದೇವ ಸ್ಥಾನಗಳೇ ಆಗಿರುವುದು ಆಕಸ್ಮಿಕವೇನಲ್ಲ.

ನಿಮ್ಮ ನಗರಪಟ್ಟಣಗಳಲ್ಲಿ ಸುಮಾರು ಅರ್ಧಶತಮಾನದಲ್ಲಿ  ಹೊಸದಾಗಿ ಕಟ್ಟಿರುವ ದೇವಸ್ಥಾನಗಳು ಯಾವ ದೇವರವು ಎಂದು ಒಂದು ಸಮೀಕ್ಷೆ ಮಾಡಿನೋಡಿ. ಅದರಲ್ಲಿ ಶೈವ ದೇವಸ್ಥಾನಗಳೇನಾದರೂ ಹೊಸದಾಗಿ ನಿರ್ಮಾಣಗೊಂಡಿವೆಯೆ? ಉತ್ತರದ ಆರ್ಯ ರಿಗೆ ನಾಗಬನಗಳು, ಶೈವ ದೇಗುಲಗಳು ಮೈಲಿ ಗೆಯ ಜಾಗಗಳು! (ಶಂಬಾ ಅವರ ಸಂಶೋಧನೆಗಳನ್ನು ಗಮನಿಸಿ).

ಇದಕ್ಕೆ ಪ್ರತಿಭಟನೆಯ ರೂಪದಲ್ಲಿ ನೀರಿನ ಪ್ರಾತಿನಿಧಿಕ ದೈವಗಳಾದ, ಗಂಗೆ, ಕೆರೆಯಂಗಳದ ಬೀರ (=ನೀರು) ಭದ್ರರು, ಯಜ್ಞ ಹೋಮಗಳನ್ನು ನಾಶಮಾಡಿ, ಹಳ್ಳಿಹಳ್ಳಿಗಳಲ್ಲಿಯೂ ಪ್ರತೀ ವರ್ಷ ತಲೆಯ ಮೇಲೆ ಗಂಗೆಯನ್ನು ಹೊತ್ತು ಅಗ್ನಿಯನ್ನು ಕಾಲಲ್ಲಿ ತುಳಿದು ತಮ್ಮ ಪ್ರತಿಭಟನೆಯನ್ನು ದಾಖಲಿಸುತ್ತಲೇ ಇದ್ದಾರೆ. ಹಾಗಾಗಿ ಈ ಸಂಘರ್ಷದ ಹಿಂದೆ ಉತ್ತರದ ಆರ್ಯರ ಮತ್ತು ದಕ್ಷಿಣದ ದ್ರಾವಿಡ ರಾಜಕಾರಣದ ತಿಕ್ಕಾಟವಿದೆ.

  ಕನಕನನ್ನು ಈವರೆಗೆ ವೈಷ್ಣವ ಪಾಂಥಿಕ ಓದಿನ ಮೂಲಕ ಮಾತ್ರ ಕಾಣಿಸಿಕೊಡಲಾಗಿದೆ.  ಅವನನ್ನು ದಾಸನೆಂದೋ, ಕೀರ್ತನ ಕಾರನೆಂದೋ ನೋಡಲು ಬೇಕಾಗುವಷ್ಟನ್ನು ಮಾತ್ರ ಕಾಣಿಸಿಕೊಡಲಾಗಿದೆ. ಅವನ ‘ನಳ ಚರಿತ್ರೆ’ಯಾಗಲೀ, ‘ರಾಮಧಾನ್ಯ ಚರಿತೆ’ ಯಾಗಲೀ ಮುನ್ನೆಲೆಗೆ ಬರದಂತೆ ನೋಡಿ ಕೊಳ್ಳಲಾಗಿದೆ.   ಕನಕನ ಕೃತಿಗಳನ್ನು ಅವನಿಂದ ಅಪಹರಿಸಿರುವುದಕ್ಕಿಂತ ಹೆಚ್ಚಾಗಿ ಅವನನ್ನು ವೈಷ್ಣವ ಭಕ್ತಿಯ ಓದಿಗೆ ಒಗ್ಗಿಸಲು ಆಗಿರಬಹುದಾದ ಪ್ರಕ್ಷಿಪ್ತಗಳೇ ಹೆಚ್ಚು.

  ಸಮಾ ಜದ ಕೆಳಸ್ತರದ ಒಪ್ಪಿಗೆಯನ್ನು ಉತ್ಪಾದಿಸಿ ಕೊಳ್ಳಲು ಕನಕ ಒಳ್ಳೆಯ ಮಾಧ್ಯಮವಾಗಿ ಅವರಿಗೆ ಒದಗಿ ಬಂದಿದ್ದಾನೆ.  ಹಾಗಾಗಿ ಕನಕನ ಬಗೆಗಿಂತ ಅವನ ಕೃತಿಯ ಬಗೆಗಿನ ಪ್ರಕ್ಷಿಪ್ತಗಳು ಹೆಚ್ಚು.  ಆದರೆ ಕನಕ ಹಾಗೆ ಉಡುಪಿಯಲ್ಲಿ ಕೃಷ್ಣನೆದುರು ನೆಲೆ ನಿಂತವನಲ್ಲ.  ಅವನು ಸದಾ ತಿರುಗುತ್ತಿದ್ದ ಜಂಗಮ ಪ್ರವೃತ್ತಿಯವನು. ತಾತ್ವಿಕವಾಗಿ ಕೂಡ ಎಲ್ಲವನ್ನೂ ಅವನು ದಾಟುತ್ತಲೇ ಇದ್ದವನು.  ಆದರೆ ಪಂಥೀಯ ದೃಷ್ಟಿಕೋನವು ಕೃಷ್ಣನನ್ನೂ ತಿರುಗಲು ಬಿಡುತ್ತಿಲ್ಲ, ಕನಕನನ್ನೂ ತಿರುಗಲು ಬಿಡುತ್ತಿಲ್ಲ. 

ಹಾಗಾಗಿ ಕನಕನನ್ನು ಉಡುಪಿಯವನೆಂದೋ, ವಿಜಯನಗರ ದವನೆಂದೋ ನೋಡದೆ ಬಾಡದವನೆಂದು ನೋಡಿದಾಗ ಕಾಣುವ ನೋಟವೇ ಬೇರೆ.  ಕನಕ ಅತ್ಯಾಶ್ರಮಿ ಅಂದರೆ ವರ್ಣಾಶ್ರಮ ಧರ್ಮಗಳನ್ನು ಮೀರಿದವನು.  ಲೋಕ ಸಮಾನತೆಯನ್ನು ನಿರಾಕರಿಸುವ ಯಾವ ಪ್ರಮಾಣ ಗಳನ್ನೂ (ಪ್ರಶ್ನಿಸಬಾರದು ಎನ್ನುವ ದಾಖಲೆಗಳು) ಮಾನ್ಯ ಮಾಡಿದವನಲ್ಲ ಎಂಬುದು ಗೋಚರಿಸುತ್ತದೆ.

ಕರ್ನಾಟಕ ಸಂಗೀತದ ವಾಗ್ಗೇಯಕಾರರಲ್ಲಿ ಒಬ್ಬರೆಂದು ಕನಕದಾಸರನ್ನು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಇರುವ ಇತರರೆಂದರೆ ಪುರಂದರದಾಸರು, ವಿಜಯದಾಸರು, ಇತ್ಯಾದಿ ಕೃಷ್ಣಮಠದ ಒಳಗೋ ಹೊರಗೋ ನಿಂತವರು ಮತ್ತು ಮೈಸೂರು ಅರಮನೆಯೆಂಬ ಅಧಿಕಾರ ಕೇಂದ್ರದ ಸುತ್ತ ಸುತ್ತುತ್ತಿದ್ದ ಕೆಲವರು. ಮಧುರ ಧ್ವನಿಯ ಕ್ವಾಷ್ಠಿಗರ ಈ ಪಂಥೀಯ ದೃಷ್ಟಿ ಕೋನದಿಂದಾಗಿ ಕರ್ನಾಟಕ ಸಂಗೀತಕ್ಕೆ ಆಗಿರುವ ಊನ ತೀರಾ ಗಂಭೀರವಾದದ್ದು.  ಕನ್ನಡದ ನೂರಾರು ತತ್ವಪದಕಾರರನ್ನು ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಅಸ್ಪೃಶ್ಯರನ್ನಾಗಿಸಿ ಅವರನ್ನು ಆಚೆಗೆ ನಿಲ್ಲಿಸಿದ ಅಪಖ್ಯಾತಿಗೆ ಈ ಪಾಂಥಿಕರು ಹೊಣೆಗಾರರು. 

ತತ್ವಪದಕಾರರು ವೈಷ್ಣವ ಭಕ್ತಿಪಂಥದವರಲ್ಲ ಎಂಬ ಒಂದೇ ಕಾರಣಕ್ಕೆ ಅವರೆಲ್ಲರನ್ನೂ ಹೊರಗಿಡಲಾಗಿದೆ.  ಇನ್ನು ಕನಕದಾಸರಂಥವರ ಬಗೆಗೆ ಕೂಡ ಅವರ ನಿಲುವೇನೂ ಉದಾರವಾದುದಲ್ಲ. ಕನಕ ದಾಸರ ಕೀರ್ತನೆಗಳನ್ನು ಸಂಗೀತ ಕೃತಿಗಳನ್ನು ಒಳಗೆ ಬಿಟ್ಟುಕೊಂಡರೇ ಹೊರತು ಕನಕದಾಸ ರನ್ನು ಒಳಗೆ ಬಿಟ್ಟುಕೊಳ್ಳಲಿಲ್ಲ.

ಶಿಶುನಾಳ ಶರೀಫ, ನಿಜಗುಣ ಶಿವಯೋಗಿ, ಚಿದಾನಂದಾ ವಧೂತ, ನಾಗಲಿಂಗ, ಕೆಸ್ತೂರದೇವ, ಮಹಲಿಂಗರಂಗ, ಕಡಕೋಳ ಮಡಿವಾಳಪ್ಪ, ಖೇಮಣ್ಣ, ಶಂಕರಾನಂದಯೋಗಿ, ಹಾಗಲ ವಾಡಿ ಮುದ್ದುವೀರಸ್ವಾಮಿ, ಕೈವಾರ ನಾರೇಯಣ, ಸರ್ಪಭೂಷಣ ಶಿವಯೋಗಿ, ಹರಿಹರಗುರು, ಘನಮಠ ಶಿವಯೋಗಿ  ಇಂತಹ ನೂರಾರು ತತ್ವಪದಕಾರರಿಲ್ಲದ ಕರ್ನಾಟಕ ಸಂಗೀತ ಕೃಶವಾಯಿತು. ಇವರೆಲ್ಲ ರಾಗ ತಾಳಗಳ ಜತೆಗೆ ತಮ್ಮ ರಚನೆಗಳನ್ನು ಮಾಡಿದ್ದಾರೆ.

ಆದರೆ ಕನಕನನ್ನು ಓದಿಕೊಡುವ ರಾಜಕಾರಣ ತುಂಬಾ ಸಂಕೀರ್ಣವಾದದ್ದು.  ಬಹಳ ದೊಡ್ಡ ಲಾಭ ಇರುವುದಾದರೆ ಮಾತ್ರ ಸಣ್ಣ ಗಾಯ ಮಾಡಿಕೊಳ್ಳುವ ಕುಟಿ ಲೋಪಾಯಗಳೂ ಇರಲು ಸಾಧ್ಯವೆಂಬ ಎಚ್ಚರ ಇಂತಹ ಕಡೆ ಅಗತ್ಯವಿದೆ. ಕನಕನನ್ನು, ಕನಕನ ಕೃತಿಗಳನ್ನು ಮಾತ್ರ ಅಪಹರಿಸಲಾಗಿದೆ ಎಂದು ನಂಬಿಸುವ ಹಿಂದೆ ಅವನು ಆರಾಧಿಸಿದ ದೈವದ ಗತಿಯೂ ಅದೇ ಎಂದು ತಿಳಿದರೆ ಗಾಬರಿಯಾಗುತ್ತದೆ.

ಕುರಿಗಳು ಮೇಯಲು ಹೋದಲ್ಲೆಲ್ಲಾ ಹೊತ್ತೊಯ್ದು, ಬೀಡು ಬಿಟ್ಟಲ್ಲಿ ತಮ್ಮ ದೈವವನ್ನು ಸಿಕ್ಕಿದ ಇಟ್ಟಿಗೆಯ ಮೇಲಿಟ್ಟುಕೊಂಡು ಆರಾಧಿಸಿದ ವಿಠಲ-ಬೀರಪ್ಪನ ಪಾಡೂ ಅದೇ ಆಗಿದೆ. ಹಂಪಿಯ ಬೀರಪ್ಪ ಕೂಡ ಕೈತಪ್ಪಿದ್ದಾನೆ. ಇದು ಕೇವಲ ಕೈತಪ್ಪಿದ ದೈವಗಳ ಪಟ್ಟಿಗೆ ಮಾತ್ರ ಸೀಮಿತವಲ್ಲ, ಸಮೂಹದ ಅಸ್ಮಿತೆಗಳೇ ಕಳೆದುಹೋಗಿ, ಮತ್ತಾರದೋ ಕೈಸಾಲದ ತಾತ್ವಿಕತೆಯಲ್ಲಿ ಜೀವಿಸಬೇಕಾಗಿಬರುವ ಅನಿವಾರ್ಯವನ್ನು ಸೃಷ್ಟಿಸುತ್ತದೆ ಎನ್ನುವುದನ್ನು ಗಮನಿಸಿದಾಗ ಗಾಬರಿಯಾಗುತ್ತದೆ.

  ಕನಕ ಲಕ್ಷ್ಮೀಶನ ಹಾಗೆ, ಕುಮಾರವ್ಯಾಸ, ಪುರಂದರದಾಸನ  ಹಾಗೆ ವೈಷ್ಣವ ಭಕ್ತಿಪಂಥಕ್ಕೆ ಸೀಮಿತನಾದವನಲ್ಲ.  ‘ರಾಮಧಾನ್ಯ ಚರಿತೆ’ ಯಂತಹ ಕೃತಿ ರಚಿಸಿದ ಕನಕನಿಗೆ ಬದುಕೆಂದರೆ ಭಕ್ತಿಯಷ್ಟೇ ಅಲ್ಲ; ಅದರಾಚೆಗಿನ ಸಾಮಾಜಿಕತೆ ಕೂಡ ಅವನಿಗೆ ಅಷ್ಟೇ ಮುಖ್ಯ.  ವರ್ಣಾಶ್ರಮ ಧರ್ಮದ ನಿರಾಕರಣೆ ಕನಕನಿಗೆ ವೈಯಕ್ತಿಕ ಅಗತ್ಯವಾಗಿರಲಿಲ್ಲವೆನ್ನುವುದಕ್ಕೆ ಈ ಕೃತಿಯೇ ಸಾಕ್ಷಿ.  ಇನ್ನು ಲೌಕಿಕ ಪಾರಲೌಕಿಕಗಳನ್ನು ಕನಕ ಸಮಾನ ನೆಲೆಯಲ್ಲಿ ಕಂಡವನು.

  ಅವನ ‘ನಳಚರಿತ್ರೆ’ ಕುಟುಂಬ ಪ್ರೇಮದ ಸಾಮ ರಸ್ಯವನ್ನು ಪೋಷಿಸುವ ಕೃತಿ.  ತೀರಾ ಇತ್ತೀಚಿನ ವರೆಗೆ ಕುಟುಂಬಗಳಲ್ಲಿ ದಾಂಪತ್ಯ ಕಲಹ ಗಳಾದಾಗ ‘ನಳಚರಿತ್ರೆ’ಯನ್ನು ಓದಿಸುವ ಆಚರಣೆ ಚಾಲ್ತಿಯಲ್ಲಿತ್ತು. ಸಾಂಸಾರಿಕ ಬದುಕಿನ ಔನ್ನತ್ಯವನ್ನೂ, ಇಂದ್ರಿಯ ಸಮೇತ ಬಾಳುವ ಮನುಷ್ಯನ ಸಂಕಟಗಳ ಅನೇಕ ಆಯಾಮಗಳನ್ನು ತೆರೆದಿಡುವ ಈ ಕೃತಿಯು ಹಿನ್ನೆಲೆಗೆ ಸರಿಯುವಂತೆ ಮಾಡಲಾಗಿದೆ.

ಕುಟುಂಬ ದೊಡ್ಡದೆನ್ನುವ ಮಹಾಕವಿಯನ್ನು  ತೆರೆಮರೆಗೆ ಸರಿಸಿ, ದ್ವೈತ ಓದಿನ ಮೂಲಕ ಕಟ್ಟಿಕೊಟ್ಟ ಕನಕನನ್ನು ಇನ್ನೊಮ್ಮೆ ಓದಬೇಕಾದ ಅನಿವಾರ್ಯ ಈಗ ಸೃಷ್ಟಿಯಾಗಿದೆ.  ಯಾವ ಗಮಕಿಯೂ, ‘ನಳಚರಿತ್ರೆ’ಯನ್ನಾಗಲೀ, ಚಾಮ ರಸನ ‘ಪ್ರಭುಲಿಂಗಲೀಲೆ’ಯನ್ನಾಗಲೀ, ಹರಿ ಹರನ ‘ಗಿರಿಜಾಕಲ್ಯಾಣ’ವನ್ನಾಗಲೀ ವಾಚಿಸು ವುದಿಲ್ಲ. ಹಾಗೆ ವಾಚಿಸಲೇಬೇಕಾದರೆ ನಂತರ ಮಡಿಯಾಗುತ್ತಾರೆ!

ಕನಕನನ್ನು ಕರ್ನಾಟಕದ ಒಂದು ಸಮೂಹ ತಮ್ಮ ಸಮಾಜೋರಾಜಕೀಯ ಬಲಸಂವ ರ್ಧನೆಗೆ ಒದಗಿಬರುವ ಸಂಕೇತವನ್ನಾಗಿ ಆಯ್ಕೆ ಮಾಡಿಕೊಂಡಿದೆ. ಕುರುಬ ಸಮೂಹವು ಭಾರತದ ಮೂಲಕುಲಗಳಲ್ಲಿ ಒಂದು. ಸುಮಾರು ಮೂರು ಸಾವಿರ ವರುಷಗಳ ಭಾರತೀಯ ತಾತ್ವಿಕ ಸಂಘರ್ಷಗಳಿಗೆ ಸಾಕ್ಷಿ ಯಾಗಿದೆ. ಭಾರತೀಯ ಕಾವ್ಯಮೀ ಮಾಂಸೆಯ ಅನ್ವಯದ ದೃಷ್ಟಿಯಿಂದ ವಿಶ್ವ ಮಟ್ಟದ ಮಹಾ ಕವಿ ಕಾಳಿದಾಸನು ಕೂಡ ಈ ಸಮೂಹದ ಒಳಗಿದ್ದಾನೆ.

ಮೂಲತಃ ಪಾಶುಪತಶೈವ-ಶಾಕ್ತಪರಂಪರೆಯ, ಹಾಲು–ರಸ–ಜಲಸಂಸ್ಕೃ ತಿಯ, ತಾಯಿಪ್ರಧಾನದ, ನಾಗಾರಾಧನೆಯ, ಕುರಿಹಿಕ್ಕೆ-ಬಳ್ಳಗಳನ್ನೂ ಪಶುಪತಿಯೆಂದು ಆರಾಧಿಸಿದ, ಒಟ್ಟಾರೆಯಾಗಿ ದ್ವೈತಾದ್ವೈತ ಗಳನ್ನು ದಾಟಿ ಬದುಕಿನ ಸಮೂಹವು  ಇತ್ತೀಚಿನ ಕನಕನ ತಾತ್ವಿಕತೆ ಯನ್ನು ತನ್ನ ಅಸ್ಮಿತೆಗಳ ಆಕರವನ್ನಾಗಿ ಬಳಸಿ ಕೊಳ್ಳುವಾಗ ಕಾಯ್ದು ಕೊಳ್ಳಬೇಕಾದ ಎಚ್ಚರ ವನ್ನು ಅದು ತನ್ನ ಸಾಂಸ್ಕೃತಿಕ ರಾಜಕಾರಣದಲ್ಲಿ ನಿಭಾಯಿಸ ಬೇಕಾಗುತ್ತದೆ.

ಇಂಥದೇ ಎಚ್ಚರ ವನ್ನು ಅಗಸರು ಮಡಿವಾಳ ಮಾಚಿದೇವನ ಮೂಲಕ, ಬೆಸ್ತರು ಅಂಬಿಗರ ಚೌಡಯ್ಯನ ಮೂಲಕ, ಮಾದಿಗರು ಮಾದಾರ ಚೆನ್ನಯ್ಯನ ಮೂಲಕ, ತಮ್ಮ ಸಾಂಸ್ಕೃತಿಕ ಚಹರೆಗಳನ್ನು ಹುಡುಕಲು ಹೊರಟರೆ, ಸಮಾಜೋ ರಾಜಕೀಯಕ್ಕೆ ಐಕನ್ ಮಾಡಿಕೊಂಡರೆ, ನಿಭಾಯಿಸಬೇಕಾಗುತ್ತದೆ. ಇಲ್ಲೆಲ್ಲ ಮೇಲೊಬ್ಬ ಯಜಮಾನನೋ ಅವನ ಪ್ರತಿನಿಧಿಯ ಕಣ್ಗಾವಲೋ ಇದ್ದೇ ಇರುತ್ತದೆ.  ಕುರುಬರು ವೈಷ್ಣವರಲ್ಲ ಆದ್ದರಿಂದ ಅವರು ಶೈವರು ಎನ್ನುವ ಅಗತ್ಯವಿಲ್ಲ.

ಜುಂಜಪ್ಪನನ್ನು ಕೃಷ್ಣ ನೆಂದು, ಬೀರಪ್ಪನನ್ನು ಶಿವನೆಂದು ಸಮೀಕ ರಿಸುವುದೂ ಅನೇಕ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ. ಬೀರಪ್ಪ ಬೀರಪ್ಪನಾಗಿರಲಿ, ಜುಂಜಪ್ಪ ಜುಂಜಪ್ಪನಾಗಿರಲಿ. ಮಂಟೇಸ್ವಾಮಿ ಲೋಕಕ್ಕೆ ಬಂದು ಶಿವ, ವಿಷ್ಣು, ಬ್ರಹ್ಮಾದಿಗಳನ್ನು ಸೃಷ್ಟಿಸಿ ಅವರಿಗೆ ಕೆಲಸಗಳನ್ನು ವಹಿಸಿಕೊಟ್ಟು ತಾನು ಧರೆಗೆ ದೊಡ್ಡವನಾಗಿ ಓಡಾಡುತ್ತಿದ್ದಾನೆ. ಅವನು ನಮಗೆ ಮಾದರಿಯಾಗಲಿ. ಶಂಕರರನ್ನೋ, ಮಧ್ವರನ್ನೋ, ರಾಮಾನು ಜರನ್ನೋ ಆಯ್ಕೆ ಮಾಡಿಕೊಂಡವರು ಯಾವ ಕಾರಣಕ್ಕೂ ಮತ್ತೊಂದು ತಾತ್ವಿಕತೆಯ ಅಥವಾ ತಾತ್ವಿಕರ ಅಂಕೆಯನ್ನು ಎಂದಿಗೂ ಸಹಿಸುವುದಿಲ್ಲ ಎನ್ನುವ ಮಾದರಿಯನ್ನು ಗಮನಿಸಬೇಕಾಗಿದೆ.

ನಿಮ್ಮ ಅನಿಸಿಕೆ ತಿಳಿಸಿ:   editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT