ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾಚಾರ್ಯಂ ಅವರ ‘ಕರ್ಣಾಟಕ ವ್ಯಾಕರಣಂ’

ಹಳತು ಹೊನ್ನು
Last Updated 21 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ವೈಯಾಕರಣಿ ಗರಣಿ ತಿಮ್ಮಣ್ಣಾಚಾರ್ಯ ಕೃಷ್ಣಾಚಾರ್ಯ್ಯ ಅವರ ‘ಕರ್ಣಾಟಕ ವ್ಯಾಕರಣಂ’ ಕೃತಿ ಮೇ 19, 1897ರಲ್ಲಿ ಬೆಂಗಳೂರಿನ ಗೌರ್ನಮೆಂಟ್ ಪ್ರೆಸ್ಸಿನಲ್ಲಿ ಮುದ್ರಣಗೊಂಡಿತು. 1855ರಿಂದ 1918ರವರೆಗೆ ಜೀವಿಸಿದ್ದ ತುಮಕೂರು ಜಿಲ್ಲೆಯ ಮದ್ದಗಿರಿ (ಮಧುಗಿರಿ) ತಾಲೂಕಿನ ಗರಣಿ ಗ್ರಾಮದ ವೈಯಾಕರಣಿ ತಿಮ್ಮಣ್ಣಾಚಾರ್ಯ ಕೃಷ್ಣಾಚಾರ್ಯರು ಕನ್ನಡ, ಸಂಸ್ಕೃತ ಭಾಷೆಗಳೆರಡರೆಲ್ಲಿಯೂ ಬಹುಶ್ರುತ ವಿದ್ವಾಂಸರು.

ಬಹುಕಾಲ ಮದರಾಸಿನ ಕ್ರಿಸ್ಚಿಯನ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ, ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಶ್ರೀಯುತರ ಮಾತಾಮಹರು ‘ಮಹೀಶೂರ ಪುರವಾಸಿ ಬ್ರಹ್ಮಶ್ರೀ || ವೈಯಾಕರಣ ವ್ಯಾಸಕೃಷ್ಣಾಚಾರ್ಯ’ ಅವರು ಹಾಗೂ ಅವರ ತಂದೆ ಪರಿಗಿಪುರೀ ಸನ್ನಿಹಿತ ಗರಣಿ ಗ್ರಾಮವಾಸ್ತವ್ಯ ವೈಯಾಕರಣಿ ತಿಮ್ಮಣ್ಣಾಚಾರ್ಯರು.

ಗ್ರಂಥಾಂತ್ಯದಲ್ಲಿ ಗ್ರಂಥಕರ್ತರು  ಶ್ರೀಮದ್ಧರಿತಸ ಕುಲತಿಲಕ ಶ್ರೀಜಾನಕೀವೇಂಕಟರಮಣಾಚಾರ್ಯವರ್ಯ(ವೇಂಕಟರಮಣ=ತಿಮ್ಮಣ್ಣ) ತನೂಜ ಸುಕವಿ ಕೃಷ್ಣಾಚಾರ್ಯ ಎಂದು ತಮ್ಮನ್ನು ಕುರಿತು ಸೂಚಿಸಿಕೊಳ್ಳುತ್ತಾರೆ. ಡಿ.ವಿ.ಜಿ. ಅವರು ತಮ್ಮ ಜ್ಞಾಪಕ ಚಿತ್ರಶಾಲೆ-1, ಸಾಹಿತಿ ಸಜ್ಜನ ಸಾರ್ವಜನಿಕರು ಕೃತಿಯಲ್ಲಿ ಶ್ರೀಯುತರನ್ನು ಕುರಿತು ‘‘ಕೃಷ್ಣಾಚಾರ್ಯರ ಪಾಂಡಿತ್ಯ ಬಹಳ ದೊಡ್ಡದು. ಅದಕ್ಕಿಂತ ದೊಡ್ಡದು ಅವರ ಗುಣಶೀಲಸೌಂದರ್ಯ.

ಅವರು ಹೊರಗೂ ಒಳಗೂ ಒಂದೇ ರೀತಿ ಚೊಕ್ಕಟವಾಗಿದ್ದವರು... ಕನ್ನಡ ಸಾಹಿತ್ಯದಲ್ಲಿ ಬೆಂಗಳೂರಿನ ಸಿದ್ಧಾಂತಿ ಸುಬ್ರಹ್ಮಣ್ಯಶಾಸ್ತ್ರಿಗಳು ಅವರ ಗುರುಗಳು. ಈ ಸುಬ್ರಹ್ಮಣ್ಯಶಾಸ್ತ್ರಿಗಳು ಮಹಾವಿದ್ವತ್ಪಂಕ್ತಿಗೆ ಸೇರಿದ್ದವರು... ಅವರ ಮಕ್ಕಳೇ ಮಹಾಮಹೋಪಾಧ್ಯಾಯ ಸಿದ್ಧಾಂತಿ ಶಿವಶಂಕರಶಾಸ್ತ್ರಿಗಳವರು. ಇವರೂ ಕೃಷ್ಣಾಚಾರ್ಯರವರೂ ಆಪ್ತ ಮಿತ್ರರು. ಕೃಷ್ಣಾಚಾರ್ಯರು ಸ್ವಭಾವದಲ್ಲಿ ಪರಮ ಸಾತ್ವಿಕರು, ಮೃದುಹೃದಯರು ಮತ್ತು ಸರಳಜೀವಿಗಳು.

ಒಳ್ಳೆ ಆಜಾನುಬಾಹುವಾದ ಆಕೃತಿ. ಹಾಲುಕೆನೆಯ ಮೈಬಣ್ಣ; ಪ್ರಸನ್ನವಾದ ಮುಖ; ಆಪಾದಮಸ್ತಕವೂ ಶುಭ್ರ ಧವಲ ವರ್ಣದ ಉಡಿಗೆ, ನಿಲುವಂಗಿ, ಉತ್ತರೀಯ ರುಮಾಲುಗಳು; ನೋಡಿದವರ ಮನಸ್ಸಿನಲ್ಲಿ ಕೂಡಲೇ ವಿಶ್ವಾಸವೂ ಗೌರವವೂ ಉದಯಿಸುತ್ತಿದ್ದವು.  ಕೃಷ್ಣಾಚಾರ್ಯರ ವಿಸ್ತಾರವಾದ ಮಿತ್ರಮಂಡಲಿಯಲ್ಲಿ ಛಪ್ಪಲ್ಲಿ ವಿಶ್ವೇಶ್ವರಶಾಸ್ತ್ರಿಗಳು, ಮೋಟಗಾನಹಳ್ಳಿ ಶಂಕರ ಶಾಸ್ತ್ರಿಗಳು, ಕರ್ಪೂರ ಶ್ರೀನಿವಾಸರಾಯರು, ರಾ.ರಘುನಾಥರಾಯುರು, ನಂಗಪುರಂ ವೆಂಕಟೇಶಯ್ಯಂಗಾರ್ಯರು-ಮುಖ್ಯರು.

ಕಾವ್ಯ ಶಾಸ್ತ್ರ ವಿನೋದ ವಿಚಾರಗಳಲ್ಲಿ ಈ ಗೆಳೆಯರು ಗರಣಿ ಕೃಷ್ಣಾಚಾರ್ಯರ ಮಾತಿಗೆ ಮನ್ನಣೆ ನೀಡುತ್ತಿದ್ದರು. ಕೃಷ್ಣಾಚಾರ್ಯರು ಗಂಭೀರ ಸ್ವಭಾವದವರು. ಅತಿ ಮಾತಿನವರಲ್ಲ. ಮೆಚ್ಚಿಕೆ ಸಂಪಾದಿಸುವುದಕ್ಕಾಗಿಯಾಗಲಿ, ಸ್ವಪ್ರತಿಷ್ಠೆಗಾಗಿಯಾಗಲಿ ಹಾರಾಡಿದವರಲ್ಲ... ಅಧಿಕಾರಸ್ಥರಲ್ಲಿಯೂ ಬಲಿಷ್ಠರಲ್ಲಿಯೂ ‘ಉಪಸರ್ಪಣೆ’ ಮಾಡಿಕೊಂಡು ಹೋಗುವುದು ಅವರ ಸ್ವಭಾವದಲ್ಲಿರಲಿಲ್ಲ’’. ಇದು ಆಚಾರ್ಯರನ್ನು ಕುರಿತ ಡಿ.ವಿ.ಜಿ. ಅವರ ಉವಾಚ.

ಕೃಷ್ಣಾಚಾರ್ಯರು ಸುಮಾರು 25 ಕೃತಿಗಳನ್ನು ರಚಿಸಿರುತ್ತಾರೆ. ಅವುಗಳಲ್ಲಿ ಮುಖ್ಯವಾದವುಗಳು– ‘ಕರ್ಣಾಟಕ ಭಾಷಾ ವಿಷಯವು’ (1891), ‘ಕಾದಂಬರೀ ಕಥೆ’ (1899), ‘ದೀರ್ಘಾಯುಸ್ಸೂತ್ರ’ (1909), ‘ನಾಗಾನಂದ ನಾಟಕಂ’ (1887), ‘ಮೃಚ್ಛಕಟಿಕಪ್ರಕರಣಂ’ (1890), ‘ಸತ್ಕಥಾ’ (1912), ‘ಹವ್ಯಪಾಕಪದ್ಧತಿ’ (1911), ‘ಕರ್ಣಾಟಕ ಕಾವ್ಯಾದರ್ಶ’, ‘ಶೃಂಗಾರ ತರಂಗಿಣೀ’, ‘ಸನಾತನಾರ್ಯ ಧರ್ಮಸಾರ’, ‘ಸದ್ವೃತ್ತಾನುಷ್ಠಾನ’, ಮತ್ತು ಸಂಸ್ಕೃತದಲ್ಲಿ ‘ಧಾತುರೂಪಾವಳಿ’ (1886) ಹಾಗೂ ‘ಶಬ್ದರತ್ನಾವಳಿ’ (1878).

‘ಧಾತುರತ್ನಾವಳಿ’ಯನ್ನು  ಸಿದ್ಧಾಂತಿ-ಸುಬ್ರಹ್ಮಣ್ಯಾರ್ಯ- ವಿದುಷಾಂ ಪ್ರೇರಣಾ ಬಲಾತ್ ರಚಿಸಿದಂತೆ ಹೇಳಿದ್ದಾರೆ. ಮೃಚ್ಛಕಟಿಕ ಪ್ರಕರಣವನ್ನು ‘ಶ್ರೀಮತ್‌ಕೃಷ್ಣ ಪದಾರ್ಚಕ | ಭೂಮೀಸುರವರ್ಯ ಕೃಷ್ಣಾಚಾರ್ಯಂ ಶ್ರೀ || ಚಾಮೇಂದ್ರಕೃಪೆಯನೆಳಸುಯ | ಲೀ ಮೃಚ್ಚಕಟಿಕಮನಿಂತು ತಾಂ ಪ್ರಕಟಿಸಿದಂ ||. ಈ ನಾಟಕವು ‘ಪಳೆಗನ್ನಡ ಪೊಸಗನ್ನಡ ನುಡಿಗಳಿಂ ಕಡುಚೆಲ್ವೆನಿಸಿ ಕಂಗೊಳಿಸುವಂತೆ’ ಇರುವುದಾಗಿ ಹೇಳಿದ್ದಾರೆ. 

ಒಳ್ಳೆಯ ಆಹಾರ ಹಾಗೂ ಸದೃಢವಾದ ಆರೋಗ್ಯವನ್ನು ಕುರಿತು ಆಚಾರ್ಯರು ಗ್ರಂಥಗಳನ್ನು ರಚಿಸಿದ್ದಲ್ಲದೆ ತಾವೇ ಪರಿಕಲ್ಪಿಸಿ ರೂಢಿಗೆ ತಂದಿದ್ದ ಆಹಾರದ ರೀತಿ ಹಾಗೂ ಪಾಕ ವಿಧಾನಗಳನ್ನು ನಾಲ್ಕಾರು ಕಡೆ ಸಭೆಗಳಲ್ಲಿ  ಪ್ರತ್ಯಕ್ಷವಾಗಿ ಸಿದ್ಧಪಡಿಸಿ ತೋರಿಸುತ್ತಿದ್ದರು.

ಒಂದೆಡೆ ಅವರು ‘ಸರ್ವೇ ಯಜಮಾನಸ್ಸರ್ವೇ ಋತ್ವಿಜಃ’ ಎಂಬಂತೆ ಬರಹ ಬಂದವರೆಲ್ಲರೂ ಕವಿಗಳೂ, ಓದಲ್ಬಂದವರೆಲ್ಲರೂ ಉಪನ್ಯಾಸಕರೂ, ಯಕ್ಷಗಾನ ಕಾವ್ಯಮಾಲಾದಿಗಳನ್ನೋದುವ (ಕಾವ್ಯಮಾಲೆ, ಸಂಪಾದಕರು-ರೆ.ಕಿಟ್ಟೆಲ್, 1874) ಶಾಲಾವಿದ್ಯಾರ್ಥಿಗಳೆಲ್ಲರೂ ಪಂಡಿತರೂ, ಪಾಠಶಾಲೆಯಂ ಬಿಟ್ಟು ಬಂದವರೆಲ್ಲರೂ ಒಡನೆಯೇ ಪರೀಕ್ಷಕರೂ, ಮತ್ತೆ ಕೆಲವರು ಏತದ್ಭಾಷಾಲೇಶ ಶೂನ್ಯರಾಗಿದ್ದರೂ ಅದಕ್ಕವರು ವಿಚಾರಕರೂ, ಶೋಧಕರೂ, ನಿಯಾಮಕರೂ, ಕೋಶಾಭಿದಾನಲಕ್ಷಣಕಾರರೂ ಆಗಿರಲು–ತತ್ಪ್ರಾಮಾಣ್ಯವುಳ್ಳ ಆ ಜನಗಳ ನಡುವೆ ಜೀವಿಸುವ ನಮಗೆ ‘ಶ್ವಾನಾರೋಹೇ ಕುತಸ್ಸೌಖ್ಯಂ ಪತನೇ ಕಾsವಮಾನಿತಾ’ (ನಾಯಿಯ ಆರೋಹ ಮಾಡಿದರೆ ಆರೋಹದ ಸುಖವೂ ಇಲ್ಲ, ಬಿದ್ದರೆ ಅವಮಾನವೂ ಇಲ್ಲ) ಎಂಬಂತೆ ಅಕಿಂಚಿತ್ಕರವಾದ ಆ ಕೀರ್ತಿಯ ಅರ್ತಿಯೇತಕ್ಕೆ! ಎಂದು ಸುಮ್ಮನಿರುವುದೇ ಉತ್ತಮವು ಎಂದು ಹೇಳಿ ಆ ಕಾಲಘಟ್ಟದಲ್ಲಿಯೇ ವಿದ್ವತ್ಕ್ಷೇತ್ರದಲ್ಲಿ ಗುಣಮಟ್ಟ ಕುಸಿಯುತ್ತಿರುವುದರ ಕಡೆ ವಿಷಾದದಿಂದ ಗಮನ ಸೆಳೆದಿದ್ದಾರೆ.

ಕೃತಿಯ ಆರಂಭದಲ್ಲಿ ಗ್ರಂಥಕರ್ತರು ‘ಈ ವ್ಯಾಕರಣವು ಶ್ರೀಮನ್ಮಹಾರಾಜರವರ ಆಸ್ಥಾನಪಂಡಿತರಾಗಿದ್ದು ಪರಂಧಾಮವನ್ನೈದಿದ ಬ್ರಹ್ಮಶ್ರೀ|| ವೈಯಾಕರಣ ವ್ಯಾಸಕೃಷ್ಣಾಚಾರ್ಯವರ್ಯರ ಜ್ಞಾಪಕಾರ್ಥವಾಗಿ ಅವರ ದೌಹಿತ್ರನಾದ ಗ್ರಂಥಕರ್ತನಿಂದ ಕೃತಜ್ಞತೆಯಿಂದ ಭಕ್ತಿಪೂರ್ವಕವಾಗಿ ಅರ್ಪಿಸಲ್ಪಟ್ಟಿದೆ’ ಎಂದು ತಮ್ಮ ಮಾತಾಮಹರಿಗೆ ಇದನ್ನು ಅರ್ಪಿಸಿರುತ್ತಾರೆ.

106 ಪುಟಗಳ ಈ ಕೃತಿಯಲ್ಲಿ ಸಂಜ್ಞಾಪ್ರಕರಣಂ, ಸಂಧಿಪ್ರಕರಣಂ, ಸುಬನ್ತಪ್ರಕರಣಂ, ಕೃಲ್ಲಿಂಗಪ್ರಕರಣಂ, ತದ್ಧಿತಪ್ರಕರಣಂ, ಸಮಾಸಪ್ರಕರಣಂ, ತದ್ಭವಪ್ರಕರಣಂ, ತಿಙನ್ತಪ್ರಕರಣಂ, ಅವ್ಯಯಪ್ರಕರಣಂ ಹಾಗೂ ದ್ವಿರುಕ್ತ್ಯಾದಿಪ್ರಕರಣಂ ಎನ್ನುವ ಒಟ್ಟು ಹತ್ತು ಪ್ರಕರಣಗಳಿವೆ. ಇಲ್ಲಿ ಕೃಷ್ಣಾಚಾರ್ಯರು ನಾಮಪ್ರಕರಣಕ್ಕೆ ಸುಬನ್ತ (ಸುಪ್+ಅಂತ-ವಿಭಕ್ತಿ ಪ್ರತ್ಯಯಗಳಿಂದ ಅಂತ್ಯಗೊಂಡಿರುವ ಪದಗಳು) ಹಾಗೂ ಕ್ರಿಯಾಪದ ಪ್ರಕರಣಕ್ಕೆ ತಿಙನ್ತ (ತಿಙ+ಅಂತ-ಕ್ರಿಯಾ ಪ್ರತ್ಯಯಗಳಿಂದ ಅಂತ್ಯಗೊಂಡಿರುವ ಪದಗಳು) ಪ್ರಕರಣಗಳೆಂದು ನಾಮನಿರ್ದೇಶನ ಮಾಡಿರುವುದು ಅರ್ಥಪೂರ್ಣವಾಗಿದೆ.

  ಈಗ ಪಾಠಶಾಲೆಗಳಲ್ಲಿ ಮತ್ತು ಕನ್ನಡನಾಡಿನೆಲ್ಲೆಡೆಗಳಲ್ಲಿಯೂ ನೆಲೆಗೊಂಡಿರುವ ಷಟ್ಪದೀಭಾಷೆ ಅಶುದ್ಧವೆಂಬುದು ನ್ಯಾಯವಲ್ಲವೆಂದೆಣಿಸಿ ಮೆಟ್ರಿಕ್ಯುಲೇಷನ್, ಎಫ್.ಎ., ಬಿ.ಎ., ಮೊದಲಾದ ಪರೀಕ್ಷೆಗಳಿಗೆ ಕನ್ನಡಮನೋದುವವರಿಗೆ ವ್ಯಾಕರಣಸಹಾಯವಿಲ್ಲದೆ ಇರುವುದಂ ಸ್ವಾನುಭವದಿಂದ ತಿಳಿದು ಈ ಪುಸ್ತಕಮಂ ಬರೆದಿದ್ದಾರೆ.

ಇಷ್ಟದೈವ, ಮಾತಾಪಿತೃಗಳನ್ನು ವಂದಿಸಿದ ನಂತರ ಸಕಲೇಂದ್ರಿಯ ಕಾರ್ಯಂಗಳ | ನುಕುತಿಯೊಳುಣ್ಮಿಪ ಸುರಾಸುರಾರ್ಚಿತಚರಣೇ || ಸುಖದಾಯಿನಿ ಮತಿವರ್ಧಿನಿ | ಸಕಲ ಜಗನ್ಮಾನ್ಯೆ ವಾಣಿ ಕಾಪಾಡೆಮ್ಮಂ || ಎಂದು ಸರಸ್ವತಿಯನ್ನು ವಂದಿಸುವ ಪದ್ಯ ಕೇಶಿರಾಜನ ‘ಶಬ್ದಮಣಿದರ್ಪಣಂ’ ಕೃತಿಯಲ್ಲಿನ ಶ್ರೀ ವಾಗ್ದೇವಿಗೆ ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದುಳುದ್ಭಾವಿಪ ನಿರ್ಮಳಮೂರ್ತಿಗೆ ಎನ್ನುವ ಸಾಲನ್ನು ನೆನಪಿಗೆ ತರಿಸುತ್ತದೆ. ಪಿರಿದುಂ ಚೌಪದಿನುಡಿಗಂ | ವರಕವಿಷಟ್ಪದಿಯ ಭಾಷೆಗಂ ಲಕ್ಕಣಮಂ || ಹರಿಗುರುಗಳ ಕೃಪೆಯಿಂದಂ | ವಿರಚಿಪೆನೆನೆ ಸಂತರೆಂತು ಸಂತಸಮೊಂದರ್ ಎಂದು ಹರಿ ಗುರುಗಳನ್ನು ಸ್ಮರಿಸಿಕೊಳ್ಳುತ್ತಾರೆ.

‘ಕರ್ಣಾಟಕ ವ್ಯಾಕರಣ’ವು ಕನ್ನಡನುಡಿಯ ಶಬ್ದಾರ್ಥ ಜ್ಞಾನವನ್ನು ಉಂಟುಮಾಡುತ್ತದೆ ಎನ್ನುವ ನೆಲೆಯಿಂದ ಈ ವ್ಯಾಕರಣ ಹೊರಡುತ್ತದೆ. ಈ ವ್ಯಾಕರಣವು ಓದುಗರಿಗೆ ಕನ್ನಡ ವ್ಯಾಕರಣದ 474 ಅಂಶಗಳ ತಿಳಿವಳಿಕೆಯನ್ನು ನೀಡುತ್ತದೆ. ಈ ವ್ಯಾಕರಣ ಗ್ರಂಥದಲ್ಲಿ ಹಿಂದಿನ ಎಲ್ಲ ವ್ಯಾಕರಣ ಗ್ರಂಥಗಳಂತೆ ವಾಕ್ಯಗಳನ್ನು ಕುರಿತ ವಿಶ್ಲೇಷಣೆಗಳಿಲ್ಲ.

ಅಕ್ಷರ ಹಾಗೂ ಪದ- ಈ ಎರಡು ಸ್ತರಗಳನ್ನು ಮಾತ್ರ ಹೇಳಲಾಗಿದೆ. ಯಾವ ವೈಯಾಕರಣಿಯೂ ಸೇರಿಸಿರದ ‘ದ್ವಿರುಕ್ತ್ಯಾದಿಪ್ರಕರಣಂ’ ಎನ್ನುವ ಒಂದು ಪ್ರತ್ಯೇಕ ಪ್ರಕರಣವನ್ನು ಪರಿವಿಡಿಯಲ್ಲಿ ಸೇರಿಸಿರುವುದು ಈ ವ್ಯಾಕರಣದ ವಿಶೇಷ. ದ್ವಿರುಕ್ತಿ ಎಂದೊಡೆ ಎರಡು ವೇಳೆ ಹೇಳುವುದು ಎಂದು ನಿರ್ದೇಶಿಸಿ ದ್ವಿರುಕ್ತಿ ಬರುವ 13 ಸಂದರ್ಭಗಳನ್ನು ಗುರುತಿಸುತ್ತಾರೆ.

ಅವೆಂದರೆ– ಪರಿಮಿತಿ(ಪರಿಮಾಣ)ಯಲ್ಲಿಯುಂ, ತಾರತಮ್ಯದಲ್ಲಿಯುಂ, ಆಧಿಕ್ಯದಲ್ಲಿಯುಂ, ಅಂಗೀಕಾರದಲ್ಲಿಯುಂ, ತ್ವರೆಯಲ್ಲಿಯುಂ, ಆಜ್ಞೆಯಲ್ಲಿಯುಂ, ಪ್ರಾರ್ಥನೆಯಲ್ಲಿಯುಂ, ಅನುಕರಣದಲ್ಲಿಯುಂ, ಸಾಮೀಪ್ಯದಲ್ಲಿಯುಂ, ಭೀತಿಯಲ್ಲಿಯುಂ, ಆಶ್ಚರ್ಯದಲ್ಲಿಯುಂ, ಸಂತೋಷದಲ್ಲಿಯುಂ, ಸಂಬೋಧನೆಯಲ್ಲಿಯುಂ ದ್ವಿರುಕ್ತಿಯಪ್ಪುದು ಎಂದು ಹೇಳಿ ಈ ಎಲ್ಲ ಸಂದರ್ಭಗಳಿಗೂ ನಿದರ್ಶನಗಳನ್ನು ನೀಡಿದ್ದಾರೆ.

ಕೃಷ್ಣಾಚಾರ್ಯರ ವ್ಯಾಕರಣ ನಿರೂಪಣಾಕ್ರಮವು ಸ್ವಾರಸ್ಯಕರವಾಗಿಯೂ ರಳಗ್ರಾಹ್ಯವಾಗಿಯೂ ಇರುತ್ತದೆ. ಹ್ರಸ್ವ, ದೀರ್ಘ, ಪ್ಲುತಗಳನ್ನು ವಿವರಿಸುವಾಗ ‘ಮನುಷ್ಯರು ಬಾಲ್ಯ, ತಾರುಣ್ಯ, ವಾರ್ಧಕಾವಸ್ಥೆಗಳಂವೊಂದಿ, ಬಾಲಕರು, ತರುಣರು, ವೃದ್ಧರು ಎನಿಪಂತೆ ಅಕಾರ ಮೊದಲಾದ ಸ್ವರಗಳು, ಏಕ-1, ದ್ವಿ-2, ತ್ರಿ-3 ಮಾತ್ರಾಕಾಲದಲ್ಲುಚ್ಚರಿಸಲ್ಪಡುವುದರಿಂದೆ ಕ್ರಮವಾಗಿ ಹ್ರಸ್ವ ದೀರ್ಘ ಪ್ಲುತ ಸಂಜ್ಞೆಯಂ ಪಡೆವುವು’ ಎಂದು ಮನನೀಯವಾಗಿ ವಿವರಿಸುತ್ತಾರೆ.

ಹಾಗೆಯೇ ಆಗಮ ಸಂಧಿಯಲ್ಲಿ ಅಕ್ಷರವು ಹೊಸದಾಗಿ ಬಂದು ಸೇರುವುದನ್ನು ‘ಆಗಮವೆಂದರೆ ಸಂಧಿಕಾಲದಲ್ಲಿರ್ಪ ವರ್ಣಕ್ಕೆ ಪಿಂದಾದೊಡಂ ಮುಂದಾದೊಡಂ ಮಿತ್ರನಂತೆ ಹೊಸವರ್ಣವು ಬರುವುದು’ ಎಂದೂ, ಆದೇಶ ಸಂಧಿಯಲ್ಲಿ ಒಂದು ಅಕ್ಷರಕ್ಕೆ ಬದಲು ಇನ್ನೊಂದು ಅಕ್ಷರವು ಬರುವುದನ್ನು ಕುರಿತು ‘ಆದೇಶವೆಂದರೆ ಸಂಧಿಕಾಲದಲ್ಲಿರ್ದ ವರ್ಣದ ಸ್ಥಾನದಲ್ಲಿ ಶತ್ರುವಿನಂತೆ ಹೊಸವರ್ಣವು ಬರ್ಪ್ಪುದು’ ಎಂದೂ ಮಿತ್ರ ಹಾಗೂ ಶತ್ರು ಶಬ್ದಗಳ ಪರಿಕಲ್ಪನೆಯ ಮೂಲಕ ನಿರೂಪಿಸುತ್ತಾರೆ. ತದ್ಭವ ಎನ್ನುವುದನ್ನು ವಿವರಿಸುವಾಗ ‘ಸಂಸ್ಕೃತಶಬ್ದವು ವಿಕೃತಿಯಂ ಪಡೆದು ಪ್ರಯೋಗಿಸಲ್ಪಟ್ಟರೆ ತದ್ಭವವೆನಿಪುದು ’ ಎನ್ನುತ್ತಾರೆ.

ದೇಸೀ ವಿದ್ವಾಂಸರೊಬ್ಬರು 19ನೆಯ ಶತಮಾನದ ಕೊನೆಯಲ್ಲಿ ರಚಿಸಿದ ಈ ವ್ಯಾಕರಣ ಕೃತಿಯು ಅಂದಿನ ಕಾಲಘಟ್ಟದ ಕನ್ನಡ ಭಾಷೆಯ ಸ್ವರೂಪವನ್ನು ಅರಿತುಕೊಳ್ಳಲು ಸಹಾಯ ಮಾಡುವ ಒಂದು ಮಹತ್ಕೃತಿಯಾಗಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT