ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ­ದಲ್ಲಿ ಮಾವೊಗೆ ‘ನಮೋ ನಮಃ’

Last Updated 22 ಜನವರಿ 2014, 19:30 IST
ಅಕ್ಷರ ಗಾತ್ರ

ನರೇಂದ್ರ ಮೋದಿಗೂ ಚೀನಾದ ಅಧ್ಯಕ್ಷ ಶಿ ಜಿನ್ ಪಿಂಗ್ ಅವರಿಗೂ ಏನೋ ಹೋಲಿಕೆ ಇದೆ ಅನ್ನಿಸುತ್ತದೆ. ಇಲ್ಲಿ ಸರ್ದಾರ್ ಪಟೇಲ್‌ಗೆ ‘ನಮೋ ನಮೋ’ ಎನ್ನುತ್ತಿದ್ದಾರೆ ಮೋದಿ. ಚೀನಾ­ದಲ್ಲಿ ಮಾವೊ ಝೆಡಾಂಗ್‌ಗೆ ‘ನಮೋ ನಮಃ’ ಎನ್ನುತ್ತಿದ್ದಾರೆ ಶಿ ಜಿನ್ ಪಿಂಗ್. ಮೊನ್ನೆ ಡಿಸೆಂಬರ್ 26 ರಂದು ಮಾವೊನ 120ನೇ ಹುಟ್ಟಿದ ಹಬ್ಬ ಆಚರಣೆ ಮಾಡಿದ ಚೀನಾದಲ್ಲಿ ಮಾವೊ ಅವರ ರತ್ನ­ಖಚಿತ­­ವಾದ ಚಿನ್ನದ ಪ್ರತಿಮೆಯನ್ನು  ಸ್ಥಾಪನೆ ಮಾಡ­­ಲಾಗಿದೆ.  ಗುಜರಾತಿನಲ್ಲಿ ಸರ್ದಾರ್ ವಲ್ಲಭ­ಭಾಯಿ ಪಟೇಲರಿಗೆ ಕಂಚಿನ ಪ್ರತಿಮೆ.  ಸರ್ದಾರ್ ಪ್ರತಿಮೆ ನಿಂತ ಭಂಗಿಯಲ್ಲಿ ಇದ್ದು ವಿಶ್ವ­ದಲ್ಲೇ ಅತೀ ಎತ್ತರದ ಪ್ರತಿಮೆ ಎನ್ನಿಸಿ­ಕೊಳ್ಳ­ಲಿದೆ. ಮಾವೊನ ಪುತ್ಥಳಿ ಇಪ್ಪತ್ತು ಶಿಲ್ಪಿಗಳ ಎಂಟು ತಿಂಗಳ ಶ್ರಮ.

ಮಾವೊ ಪ್ರತಿಮೆ ಕುಳಿತುಕೊಂಡು ಇರುವ ಭಂಗಿ­ಯಲ್ಲಿ ಇದ್ದು, ದೃಢ ಕಾಯದ ಮಾವೊ ಸಣ­ಕಲಾಗಿ ಕಾಣಿಸುತ್ತಾರಂತೆ. ಎಷ್ಟಾದರೂ ಅಪ್ಪಟ ಚಿನ್ನದ ಪ್ರತಿಮೆಯಲ್ಲವೇ? ದೊಡ್ಡ­ದಾದಷ್ಟೂ ಖರ್ಚು ಜಾಸ್ತಿ. ಅಂತಹ ಲೆಕ್ಕಾ­ಚಾರವೂ ಇರಬೇಕು ಶಿ ಅವರ ಮನದಲ್ಲಿ! ಚೀನಿ­ಯರಲ್ಲಿ ವ್ಯಾಪಾರೀ ಮನೋಭಾವ ಜಾಸ್ತಿ­ಯಾಗು­ತ್ತಿದ್ದು, ಈಗಾಗಲೇ ಮಾವೊನ ಹುಟ್ಟೂರಿಗೆ ಬರುವ ಪ್ರವಾಸಿಗಳಿಂದ ವರ್ಷಕ್ಕೆ ಸುಮಾರು 40 ಲಕ್ಷ ಡಾಲರ್ (ಸುಮಾರು ₨ 25 ಕೋಟಿ) ವರಮಾನ ಇದೆ­ಯಂತೆ.

ಇನ್ನು ಮಾವೊನ ರತ್ನಖಚಿತ ಚಿನ್ನದ ಪ್ರತಿಮೆ ನೋಡಲು ಬರುವವರೆಷ್ಟೋ? ಬೀಜಿಂಗ್‌ನ ಮಾವೊ ಮುಸ್ಸೋಲಿಯಂನಲ್ಲಿ ಮಾವೊನ ದೇಹ ಚಿರನಿದ್ರೆಯಲ್ಲಿದೆ. ಅಲ್ಲಿಗೆ ವಿದೇ­ಶದ ಪ್ರವಾಸಿಗಳಲ್ಲದೆ ಚೀನಿ ಪ್ರವಾಸಿಗಳ ದಂಡೇ ಹರಿದುಬರುತ್ತದೆ. ಅದೇಕೋ ಏನೋ ಕಮ್ಯು­ನಿಸ್ಟ್ ದೇಶಗಳಿಗೆ ತಮ್ಮ ನಾಯಕರ ಅಂತ್ಯ­ಕ್ರಿಯೆ ಮಾಡದೆ ಪ್ರದರ್ಶನಕ್ಕೆ ಇಡುವುದೇ ಇಷ್ಟ. ಮಾವೊ, ಲೆನಿನ್, ಹೋ ಚಿ ಮಿನ್ಹ್ ಅವರ ಉತ್ತರ ಕ್ರಿಯೆಗಳು ನಡೆಯುವುದಿಲ್ಲ. ಪಾಪದ ಕ್ಯಾಸ್ಟ್ರೋ ಅವರಿಗೆ ಏನು ಕಾದಿದೆಯೋ!

ಚೀನಾ-, ಭಾರತದ ನಡುವೆ ಹೋಲಿಕೆ ಬೇಡ ಅಂದರೂ ಏನೇನೋ ಹೋಲಿಕೆಗಳು ಜ್ಞಾಪಕಕ್ಕೆ ಬರು­ತ್ತವೆ. ಮೋದಿ, ಸರ್ದಾರ್ ಪಟೇಲರ ಪ್ರತಿಮೆ ಸ್ಥಾಪಿಸಲು ಒಂದಿಷ್ಟು ಕಬ್ಬಿಣ ಕೊಡಿ ಎಂಬ ಬೇಡಿಕೆಯನ್ನು  ದೇಶದ ಜನರ ಮುಂದೆ ಇಟ್ಟಿ­ದ್ದಾರೆ. ಇಂತಹ ಕಬ್ಬಿಣ ಚಂದಾ ಬೇಡುವ ಒಂದು ಕರೆಯನ್ನು ಚೀನಾದ ನಾಯಕರೂ  ಒಮ್ಮೆ ಕೊಟ್ಟಿದ್ದರು. ಉಪಯೋಗಕ್ಕೆ ಬಾರದ ಹಳೆಯ ಕಬ್ಬಿಣದ ಹಂಡೆಗಳು, ಅಡುಗೆ ಪಾತ್ರೆ­ಗಳು ಬೆಂಕಿಗೆ ಆಹುತಿಯಾದವು. ಹಳ್ಳಿ ಹಳ್ಳಿಗೂ ಸಂಪರ್ಕ ಕಲ್ಪಿಸಲು ಈ ಕರಗಿಸಿದ ಕಬ್ಬಿಣದಿಂದ ರೈಲು ರಸ್ತೆ ಮಾಡಲು ಶ್ರಮಿಸಿದ ದೇಶ­ಪ್ರೇಮಿಗಳು ಚೀನಾದ ಕಮ್ಯುನಿಸ್ಟರು.

ಕ್ರಾಂತಿಕಾರಿ ಘೋಷ­ಣೆಗಳಿಂದ  ಪ್ರೇರಿತಗೊಂಡ ಮಾವೊನ ರೆಡ್ ಗಾರ್ಡ್ಸ್ ಎಂಬ ‘ಯುವ ಶಕ್ತಿ’ ಬೌದ್ಧಾ­ಲಯ­ಗಳನ್ನು ಒಡೆದುಹಾಕಿ ಅಲ್ಲಿದ್ದ ‘ಉಪ­ಯೋಗಕ್ಕೆ ಬಾರದ’ ಬುದ್ಧನ ಪ್ರತಿಮೆಗಳನ್ನು ಕರ­ಗಿಸಿ ರೈಲು ಹಳಿಗಳನ್ನು ಮಾಡಲೆಂದು ಕಬ್ಬಿಣ ಒದ­ಗಿಸಿದ್ದು ಈಗ ಇತಿಹಾಸ. ಕೃಷಿ ಕೆಲಸಕ್ಕೆ ಬೇಕಾದ ಪರಿಕರಗಳನ್ನು ತಮ್ಮ ಹಿತ್ತಲಿನಲ್ಲಿಯೇ  ಮಾಡಿ­ಕೊಳ್ಳಬೇಕು ಎಂಬ ಕನಸು ಕಮ್ಯುನಿಸ್ಟ್ ದೇಶ­ಭಕ್ತರಿಗೆ. ಇದಕ್ಕೆ ಬಲಿಯಾದ ಪ್ರಾಚೀನ ಕಾಲದ ಸಾಮಾನುಗಳು ಎಷ್ಟೋ! ಇವುಗಳ ಜೊತೆ ಕಳೆದುಹೋದ ಇತಿಹಾಸ ಎಷ್ಟೋ! ಇವಕ್ಕೆ ಬೆಲೆ ಕಟ್ಟುವ  ಮನಸ್ಸಂತೂ ಯಾರಿಗೂ ಇರ­ಲಿಲ್ಲ ಎಂಬುದು ಮಾತ್ರ ನಿಜ.  ವಿಷಾದದ ಸಂಗತಿ ಎಂದರೆ ದೇಶ ಕಟ್ಟುವ ಹುಮ್ಮಸ್ಸು ಮಾವೊನನ್ನು ಎಲ್ಲೆಲ್ಲೋ ಕೊಂಡುಹೋಗಿ,  ಲಿಯೋ ಶಾವೋ ಚಿ, ಮಾರ್ಷಲ್ ಝು ಡೆರಂತಹ ದೇಶಭಕ್ತರ ವಿರೋಧ ಕಟ್ಟಿಕೊಂಡು, ವಿರೋಧಿಗಳನ್ನು  ಸದೆ­ಬಡಿಯಲು ಹೆಂಡತಿಯ ಗುಲಾಮನಾಗಿ ಆದ ಅನಾ­ಹುತಗಳು ಇನ್ನೆಷ್ಟೋ.

1966 ರಿಂದ 76ರ ತನಕ  ಹದಿ ಹರೆಯದವರನ್ನು ಹುರಿದುಂಬಿಸಿ ದೇಶ­ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಹೋಗಿ ಆದ ಅತಿರೇಕಗಳನ್ನು ನಿಯಂತ್ರಣ ಮಾಡಲು ಆಗದೆ ತನ್ನ ಹೆಂಡತಿ ಜ್ಯಾಂಗ್ ಚಿಂಗ್ ಮತ್ತು ಸಹಚರರಿಗೆ ‘ಆ’ ಕೆಲಸ ವಹಿಸಿ ನುಣು­ಚಿ­ಕೊಂಡ ಮಾವೊ ನೆನಪಾಗುತ್ತಾರೆ.

ತಂದೆ ತಾಯಿ, ಬಂಧು, ಬಳಗ ಎಲ್ಲವೂ ಕಮ್ಯು­ನಿಸ್ಟ್ ಪಕ್ಷವೇ ಎಂದು ನಂಬಿಸಿ, ಸ್ವಂತ ತಂದೆ ತಾಯಿ­ಗಳ  ಮೇಲೆಯೇ ಸುಳ್ಳು ದೂರುಗಳು ಕೊಡು­ವಂತೆ ಈ ಹದಿಹರೆಯದವರಿಗೆ ಪ್ರೋತ್ಸಾಹ ಕೊಟ್ಟು ಪೋಷಕರನ್ನು ಚಿತ್ರಹಿಂಸೆಗೆ ಗುರಿ­ಮಾಡಿದ ಮಕ್ಕಳು ಎಷ್ಟೋ? ಆ ಸಾಂಸ್ಕೃತಿಕ ಕ್ರಾಂತಿ  ಎಂಬ ಹುಚ್ಚು ಮುಗಿದ ಮೇಲೆ ತಾವು ಮಾಡಿದ ಕೆಲಸಗಳನ್ನು ಅರಗಿಸಿಕೊಳ್ಳಲಾಗದೆ ಮತಿ­ಭ್ರಮಣೆ ಗೊಂಡವರನ್ನು ಚೀನಾದ ಈಶಾನ್ಯ  ಪ್ರಾಂತದ ಜೀಲಿನ್ ನಗರದ ಮನೋರೋಗಿಗಳ ಆಸ್ಪತ್ರೆಯಲ್ಲಿ ಕಂಡಿದ್ದೇನೆ.  ರಾಜಧಾನಿ ಬೀಜಿಂಗ್‌­­ನಿಂದ ಬಹುದೂರ ಇರುವ ಹಾಗೂ ಭೀಕರ ಚಳಿಯಿಂದ  ಕೊರೆಯುವ, ಕಲ್ಲಿದ್ದಲ ದೂಳಿ­ನಿಂದ ತುಂಬಿದ ಈಶಾನ್ಯ ರಾಜ್ಯಗಳಿಗೆ ಪಕ್ಷದ ನೀತಿಯನ್ನು ವಿರೋಧಿಸಿದ ಬುದ್ಧಿ­ಜೀವಿ­ಗಳನ್ನು ರೈತರ ಹೊಲಗಳಲ್ಲಿ ಕೆಲಸಮಾಡಿ ಎಂದು ಕಳಿಸುತಿದ್ದರಂತೆ. ನನಗೆ ಪರಿಚಯವಿದ್ದ ಒಬ್ಬ ಪ್ರೊಫೆಸರ್‌ಗೆ  ಅದು  ಹೇಗೋ ಅಗಾಥ ಕ್ರಿಸ್ಟಿಯ ಒಂದು ಪುಸ್ತಕವನ್ನು ಬಚ್ಚಿಟ್ಟುಕೊಳ್ಳಲು ಸಾಧ್ಯ­ವಾಗಿತ್ತಂತೆ.

ಓದಲು ಬರೆಯಲು ಏನೂ ಸಿಗ­ದಿದ್ದ ಅವರು ‘ಈ ಪುಸ್ತಕವನ್ನು ಕದ್ದು ಮುಚ್ಚಿ ಚೀನಿ ಭಾಷೆಗೆ ತರ್ಜುಮೆ ಮಾಡಿದೆ’ ಎಂದು ಹೇಳುತ್ತಿದ್ದರು. ನನಗೆ ಚೀನಿ ಭಾಷೆ ಕಲಿಸುವ ಮೂಲಕ ಆತ್ಮೀಯರಾಗಿದ್ದ ಒಬ್ಬ ಟೀಚರ್ ಹೀಗೆಯೇ ಜೀಲಿನ್‌ಗೆ ಬರಿಗಾಲಿನ ವೈದ್ಯೆಯಾಗಿ ಬಂದೆ ಎಂದು ಹೇಳುತ್ತಿದ್ದರು. ಲಾವೋ ಷ ನಂ­ತಹ ಬರಹಗಾರ ಮಾವೊನ ರೆಡ್ ಗಾರ್ಡ್ ಉಪ­ಟಳ ತಾಳಲಾರದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿ­ಕೊಂಡಿದ್ದರು. ಈಗ ಅದೇ ಕಮ್ಯುನಿಸ್ಟ್ ಪಕ್ಷ ಅವರ ಮನೆಯನ್ನು ವಸ್ತು ಸಂಗ್ರಹಾ­ಲಯ­ವಾಗಿ  ಇಟ್ಟಿದೆ. ಆದ್ದರಿಂದ ಯಾವ ದೇಶವೇ ಆಗಲಿ, ಪಕ್ಷವೇ ಆಗಲಿ ಹದಿಹರೆಯದವರ ಭಾವನೆ­ಗಳನ್ನು ಕೆರಳಿಸಿ ಅವರನ್ನು ಬಳಸಿಕೊಂಡು ದೇಶ ಕಟ್ಟುತ್ತೇವೆ ಎಂದರೆ ಅನಾಹುತಗಳು ಕಾದಿಟ್ಟ ಬುತ್ತಿ ಎಂದು ನಮ್ಮ ಚರಿತ್ರೆ ಸಾರಿ ಹೇಳು­ತ್ತದೆ.

ಇದನ್ನೇ ಕಾಂಬೋಡಿಯದ ಮಾವೊವಾದಿ ಪೋಲ್‌ ಪಾಟ್‌ ಮಾಡಿದ್ದು. 'ಹಿಟ್ಲರ್ ಯೂತ್’ ಮಾಡಿದ್ದು. ಕ್ರಾಂತಿಕಾರಿಗಳಿಗೆ ಅದೇಕೋ ಅನುಭವ ಇರುವವರಲ್ಲಿ ಅಪ­ನಂಬಿಕೆ, ಹದಿ­ಹರೆ­ಯ­­ದವರನ್ನು ಅವರ ಉದ್ದೇ­ಶಕ್ಕೆ ಬಳಸಿಕೊಳ್ಳುವ ಬಯಕೆ. ಹದಿ­ಹರೆಯ­ದವರಿಗೋ ವಯಸ್ಕರನ್ನು  ಕಂಡರೆ ಈ ಮುದಿ ಗೂಬೆಗಳಿಂದಲೇ ವ್ಯವಸ್ಥೆ ಹೀಗಿದೆ ಎನ್ನುವ ತಾತ್ಸಾರದ ಮನೋಭಾವ. ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಯುವ ಜನತೆಯನ್ನು ನೋಡಿದರೆ ನಮ್ಮ ದೇಶಕ್ಕೆ ಏನು ಕಾದಿದೆಯೋ  ಅನ್ನಿಸುತ್ತದೆ.

ಕಳೆದ ಡಿಸೆಂಬರ್ 26 ರಂದು ಮಾವೊನ 120ನೇ ಹುಟ್ಟಿದ ಹಬ್ಬವನ್ನು ಚೀನಾದ ಕಮ್ಯು­ನಿಸ್ಟ್ ಪಕ್ಷ  ವಿಜೃಂಭಣೆಯಿಂದ ಆಚರಿಸಲು ನಿರ್ಧ­ರಿಸಿ ಕೆಲವು ತಿಂಗಳುಗಳಿಂದಲೇ ತಯಾರಿ ನಡೆ­­ಸಿತ್ತು. ದೇಶದಾದ್ಯಂತ  1949ರ ಕ್ರಾಂತಿ ಗೀತೆ­­ಗಳನ್ನು ಹಾಡುವುದು, ಪುಸ್ತಕಗಳ ಪ್ರಕ­ಟ­ಣೆ, ಅಂಚೆ ಚೀಟಿ  ಪ್ರಕಟಣೆ ಮುಂತಾದ ಕಾರ್ಯ­­ಕ್ರಮಗಳನ್ನು ಹಮ್ಮಿಕೊಂಡಿತ್ತು. ಕೆಲ ಉದ್ಯಮಿ­ಗಳು ವಯಸ್ಕರಿಗೆ ಊಟ ಹಂಚು­ವುದರ ಮೂಲಕ ಹಾಗೂ ಲಾಂಗ್ ಲೈಫ್ ನೂಡಲ್ಸ್  ತಿನ್ನುವ ಮೂಲಕವೂ ಇದನ್ನು  ಆಚರಿಸಿದ್ದರು.

ನೂಡಲ್ಸ್ ಎಂದರೆ ಜ್ಞ್ನಾಪಕವಾಗುವ ವಿಷಯ. ಚೀನಾದಲ್ಲಿ ಕ್ರಾಂತಿಕಾರಿ  ಸರ್ಕಾರ 1949­ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಮಾಡಿದ ಒಂದು ಒಳ್ಳೆಯ ಕೆಲಸ ಅಂದರೆ ಪಾಕಶಾಸ್ತ್ರದ ಪುಸ್ತಕ­ವನ್ನು  ಅಚ್ಚುಹಾಕಿಸಿದ್ದು. ಕೆಲವೊಂದು ಅಡು­ಗೆಗಳು ಅಲ್ಲಿಯ ಅರಸರಿಗೆ ಸೀಮಿತ­ವಾ­ಗಿದ್ದು ಸಾಮಾನ್ಯ ಜನರು ಅಂತಹ ಅಡುಗೆ­ಗಳನ್ನು ಮಾಡುವುದಕ್ಕೆ ನಿಷೇಧವಿತ್ತು. ಹೊಸ ಸರ್ಕಾರ ಅರಮನೆಯಲ್ಲಿ ಅಡುಗೆ ಮಾಡುತ್ತಿದ್ದ ಬಾಣ­ಸಿ­ಗರನ್ನು ಕರೆಸಿ ಪಾಕಗಳನ್ನು ಸಂಗ್ರಹಿಸಿ ಅಡುಗೆ ಪುಸ್ತಕ ಅಚ್ಚು  ಹಾಕಿಸಿತ್ತು. ಅಂದರೆ ಕ್ರಾಂತಿಯ ಮೊದಲ ದಿನಗಳಲ್ಲಿ ಸಾಮಾನ್ಯ ಜನರ ಸುಖವೇ ಕಮ್ಯುನಿಸ್ಟ್  ಪಕ್ಷದ ಆಶಯವಾಗಿತ್ತು.

1949ರ ಕ್ರಾಂತಿಗೆ ಮೊದಲು ಅಲ್ಪಸಂಖ್ಯಾತ ಬುಡ­ಕಟ್ಟಿನವರನ್ನು ತುಂಬಾ ಕೀಳಾಗಿ  ನಡೆ­ಸಿ­ಕೊಳ್ಳಲಾಗುತ್ತಿತ್ತು. ಅವರ ಹೆಸರಿನ ಮುಂದೆ ಚೀನಿ ಭಾಷೆಯಲ್ಲಿ ಪ್ರಾಣಿಗಳ ಸಂಕೇತ­ವಿರು­ತ್ತಿತ್ತು. ಪ್ರಾಣಿಗಳಿಗಿಂತ ಕಡೆ ಎಂಬುದನ್ನು ಗುರು­ತಿಸಲು ಸಹಕಾರಿಯಾಗಿದ್ದ ಈ ಸಂಕೇತವನ್ನು ತೆಗೆದು ಹಾಕಲಾಯಿತು.  ಹೆಂಗಸರ ಪಾದ­ಗಳನ್ನು  ಕಟ್ಟಿ ಹಾಕಿ ಕೀಳಾಗಿ ನಡೆಸಿಕೊಳ್ಳುತ್ತಿದ್ದ  ಅನಿಷ್ಟ ಪದ್ಧತಿಯನ್ನು ರದ್ದು ಮಾಡಲಾಯಿತು. ಯಾವ ಸರ್ಕಾರ ಎಲ್ಲಿಯೂ ಮಾಡಲಾಗದೆ ಇದ್ದಿ­ದ್ದನ್ನು ಮಾಡಿ ತೋರಿಸಿದ್ದು ಮಾವೊ ಕಾಲದ ಚೀನಾದ ಸಾಧನೆ. ಚೀನಿಯರೇ ಹೇಳು­ವಂತೆ ಮಾವೊ ಮಾಡಿದ ತಪ್ಪುಗಳು ಶೇ 30, ಮಾಡಿದ ಸಾಧನೆ, ಒಳ್ಳೆಯ ಕೆಲಸಗಳು ಶೇ 70 ಎಂದು. ಮಾವೊನ ನೀತಿ ಹಾಗೂ ಸುಧಾ­ರಣೆ­ಗ­ಳಿಂದ ಸುಮಾರು ಮೂರು ಕೋಟಿ ಜನ ಹಸಿ­ವೆ­ಯಿಂದ ಸಾವನ್ನಪ್ಪಿದ್ದು ಅದನ್ನು ಈಗ ಪಕ್ಷ ಒಪ್ಪಿ­ಕೊಳ್ಳುತ್ತದೆ.

ಮಾವೊ ನಂತರ ಅಧಿ­ಕಾರಕ್ಕೆ ಬಂದ ಡೆಂಗ್ ಶ್ಯಾವೋ ಪಿಂಗ್, ಮಾವೊನ ಸಿದ್ಧಾಂತವನ್ನು ಕಡೆಗಣಿಸಿ ಆರ್ಥಿಕ ಬದ­ಲಾವಣೆಗೆ  ಒತ್ತುಕೊಟ್ಟು ‘ಒಂದು ದೇಶ ಇಬ್ಬ­ಗೆಯ ನೀತಿ’ ಎಂಬ ಸೂತ್ರವನ್ನು ಹುಟ್ಟು ಹಾಕಿ­ದರು. ಈ ಇಬ್ಬಗೆಯ ನೀತಿಯ ಪ್ರಕಾರ ದೇಶದ ಕೆಲವೆಡೆಯಲ್ಲಿ ಕಮ್ಯುನಿಸ್ಟ್ ವ್ಯವಸ್ಥೆ, ಕೆಲ­ವೆಡೆ ಬಂಡವಾಳಶಾಹಿ  ವ್ಯವಸ್ಥೆ ಇರು­ವಂತಾ­ಯಿತು. ಪಕ್ಷದ ಮೂಲ ಧ್ಯೇಯಗಳನ್ನು ಇಟ್ಟು­ಕೊಂಡು ಕಾಲ ಕ್ರಮೇಣ ಆರ್ಥಿಕ  ವ್ಯವಸ್ಥೆಯನ್ನೇ ಬದ­ಲಾಯಿಸಿದ ವಾಸ್ತವವಾದಿ ಡೆಂಗ್ ಯಾವ ಸಿದ್ಧಾಂ­ತಕ್ಕೂ ಬದ್ಧರಾಗಿರದೆ ‘ಬೆಕ್ಕು   ಕಪ್ಪಾ­ದ­ರೇನು, ಬಿಳಿಯಾದರೇನು, ಇಲಿ ಹಿಡಿದರೆ ಸಾಕು’ ಎಂದ­ವರು. ಎಂಬತ್ತರ ದಶಕದಲ್ಲಿ  ಮಾವೊ  ಸಿದ್ಧಾಂತ­ವನ್ನು ನಿರ್ಮೂಲನೆ ಹೇಗೆ ಮಾಡು­ವುದು ಎನ್ನುವುದೇ ಡೆಂಗ್ ಮುಂದೆ ಇದ್ದ ದೊಡ್ಡ ಸವಾಲು.  ಚೀನಿ ಭಾಷೆಯಲ್ಲಿ ಮಾವೊ ಅಂದರೆ ಕೂದಲು ಎನ್ನುವ ಅರ್ಥವೂ ಇದೆ. ಹಾಗಾಗಿ ದ್ವಂದ್ವ ಅರ್ಥ ಕೊಡುವ  ಹೇರ್ ರಿಮೂವರ್ ಕ್ರೀಮು­­ಗಳ ಪೋಸ್ಟರುಗಳು ಕೂಡ ಕಾಣಿಸಿ­ಕೊಳ್ಳುತ್ತಿದ್ದವಂತೆ.

ಮಾವೊನ ಅವಧಿಯಲ್ಲಿ ಆದ ಆಡಳಿತದ ದುರು­ಪಯೋಗ ಭಾರೀ ದುರಂತಗಳಿಗೆ   ಎಡೆ­ಮಾಡಿಕೊಟ್ಟಿತ್ತು. ಆದರೆ ಇಂದು ಕಮ್ಯುನಿಸ್ಟ್ ಪಕ್ಷ ಅದನ್ನು ಒಪ್ಪಿಕೊಂಡು ಇನ್ನು ಯಾವತ್ತೂ ಇಂತಹ ದುರಂತ ಸಾಧ್ಯವೇ ಇಲ್ಲ ಎಂದು ಹೇಳಿ­ಕೊಳ್ಳುತ್ತದೆ. ಆದರೆ ಹೇಳಿದ್ದನ್ನು ಮಾಡಿ ತೋರಿಸ­ಲಾಗು­­ತ್ತಿಲ್ಲ. ಭ್ರಷ್ಟಾಚಾರದಲ್ಲಿ ಚೀನಾ ಭಾರತ­ಕ್ಕಿಂತ ಏನೂ ಕಡಿಮೆಯಿಲ್ಲ. ಹಗರಣಗಳ ಬೀಡಾದ ನಮ್ಮ ದೇಶದಲ್ಲಿ  ರಾಜಕಾರಣಿಗಳ, ಅಧಿ­ಕಾರಿಗಳ ಭ್ರಷ್ಟಚಾರ ನೋಡಿದರೆ ಇವರನ್ನೂ ರೈತರ ಹೊಲಕ್ಕೆ ಕೆಲಸ ಮಾಡಲು ಕಳಿಸಿದರೆ  ಚೆನ್ನಾ­ಗಿ­ರುತ್ತದೆ ಅನ್ನಿಸುತ್ತದೆ. ಆದರೆ ಅಂತಹ ವಿಪ­ರೀತಕ್ಕೆ ಎಡೆಮಾಡಿಕೊಡುವ ಅನ್ನಿಸಿಕೆಗಳನ್ನು  ನಮ್ಮ­ಲ್ಲಿಯೇ ಅದುಮಿಡಬೇಕಾಗಿ ಬರುತ್ತದೆ.

ಕಾನೂ­ನಿನ ಚೌಕಟ್ಟಿನಲ್ಲಿಯೇ ಕಾಲ ಕ್ರಮೇಣ ಬದಲಾವಣೆಗಳನ್ನು ಮಾಡಿ­ಕೊಳ್ಳ­ಬೇಕಾ­ಗು­ತ್ತದೆ. ಈಗ ನಾವು ಲೋಕಪಾಲ ಮಸೂ­ದೆಯನ್ನು ಜಾರಿಗೆ ತಂದಂತೆ. ಆದರೆ ಪ್ರಜಾ­ಪ್ರಭುತ್ವ ಎಂದರೆ ಚೀನಿ ನಾಯಕರಿಗೆ ಏಕೋ ಅಲರ್ಜಿ. ಡೆಂಗ್ ಶ್ಯಾವೋ ಪಿಂಗ್ ಅವರ  ಪ್ರಕಾರ ಇದರಿಂದ ಸಮಯ ವ್ಯರ್ಥ. ಮಾವೊ­ನನ್ನು ಕಡೆಗಣಿಸಿದ್ದ ಕಮ್ಯುನಿಸ್ಟ್ ಪಕ್ಷ ಅದೇಕೆ ಈಗ ಮಾವೊನ ಜಯಂತಿಯನ್ನು ಅದ್ದೂರಿಯಿಂದ ಆಚರಣೆ ಮಾಡಿ ವ್ಯಕ್ತಿ ಪೂಜೆಗೆ ಅವಕಾಶ ಮಾಡಿಕೊಡುತ್ತಿದೆಯೋ ಅನ್ನುವುದೇ ಪ್ರಶ್ನೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT